ಟೀಕೆಗಳಿರಲಿ, ಆದರೆ ಅವು ರಚನಾತ್ಮಕವಾಗಿರಲಿ…
ವಸ್ತು ಸ್ಥಿತಿ
ಗಣೇಶ್ ಭಟ್, ವಾರಣಾಸಿ
‘ಟೀಕೆಯಲ್ಲಿ ಸಿಗುವ ಆನಂದವು, ಉತ್ತಮ ವಿಷಯಗಳಿಂದ ಸಿಗುವ ಆನಂದದಿಂದ ನಮ್ಮನ್ನು ದೂರಮಾಡುತ್ತದೆ’ ಎಂದಿದ್ದಾನೆ ಫ್ರೆಂಚ್ತತ್ತ್ವಜ್ಞಾನಿ ಹಾಗೂ ನೈತಿಕವಾದಿ ಜೀನ್ ಡೆ ಲಾ ಬ್ರೂಯೇರ್. ಈಚೀಚೆಗೆ ಭಾರತದಲ್ಲಿ ಕಾಣಬರುತ್ತಿರುವ ಟೀಕೆ-ಟಿಪ್ಪಣಿಗಳು, ಎಲ್ಲದರಲ್ಲೂ ತಪ್ಪನ್ನೇ ಹುಡುಕುವ ಪ್ರವೃತ್ತಿಗಳನ್ನು ನೋಡಿದಾಗ ಈ ಮಾತು ನೆನಪಾಗುತ್ತದೆ.
ತಪ್ಪು ಸಂಭವಿಸಿದ್ದಲ್ಲಿ ಅದನ್ನು ಎತ್ತಿ ತೋರಿಸುವುದು ಸರಿಯೇ; ಆದರೆ ಬದಲಾವಣೆಗೆ ಒಗ್ಗದ ಮತ್ತು ಪೂರ್ವಗ್ರಹ ಪೀಡಿತ ಮನಸ್ಸುಗಳು ಮೊಸರಲ್ಲೂ ಕಲ್ಲನ್ನು ಹುಡುಕುವ ಪ್ರವೃತ್ತಿಯೇ ಸಮಸ್ಯೆಗೆ ಕಾರಣವಾ ಗುತ್ತದೆ. ಗಂಟೆಗೆ ೧೮೦ ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ, ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸಲಾಗಿರುವ ‘ವಂದೇ ಭಾರತ್’ ಸೆಮಿ ಹೈಸ್ಪೀಡ್ ರೈಲುಗಳನ್ನು ದೆಹಲಿ-ವಾರಾಣಸಿ, ದೆಹಲಿ-ವೈಷ್ಣೋದೇವಿ, ದೆಹಲಿ-ಉನಾ ಮತ್ತು ಅಹಮದಾಬಾದ್-ಮುಂಬೈ ನಡುವೆ ಓಡಿಸ ಲಾಗುತ್ತಿದೆ.
ಈ ರೈಲುಗಳಿಗೆ ಜಾನುವಾರುಗಳು ಡಿಕ್ಕಿಹೊಡೆದ ೩ ಪ್ರಕರಣಗಳು ನಡೆದಿವೆ. ಇದರಿಂದಾಗಿ ರೈಲಿನ ಮುಂಭಾಗದ ಫೈಬರ್ನಿರ್ಮಿತ ಹೊದಿಕೆಗೆ ಕೊಂಚ ಹಾನಿಯಾಗಿದೆಯೇ ವಿನಾ, ಎಂಜಿನ್‌ಗಾಗಲೀ  ಪ್ರಯಾಣಿಕರಿಗಾಗಲೀ ಹಾನಿಯಾಗಿಲ್ಲ. ಆದರೆ ಈ ಪ್ರಕರಣಗಳನ್ನು ಉಲ್ಲೇಖಿಸಿ ಈ ಯೋಜನೆಯನ್ನೇ ಅಪಹಾಸ್ಯ ಮಾಡುತ್ತಿರುವ ಕುಹಕಿಗಳೂ ಸಾಕಷ್ಟಿದ್ದಾರೆ. ರೈಲಿನ ತೂಕವನ್ನು ತಗ್ಗಿಸುವ ದೃಷ್ಟಿಯಿಂದ ಹೊರಕವಚವನ್ನು ಫೈಬರ್‌ನಿಂದ ರೂಪಿಸಲಾಗಿದೆ.
ಸ್ವಯಂಚಾಲಿತ ವ್ಯವಸ್ಥೆಯಿರುವ ಬೋಗಿಗಳನ್ನು ಹೊಂದಿರುವ ‘ವಂದೇ ಭಾರತ್’ ರೈಲು ೫೨ ಸೆಕೆಂಡುಗಳಲ್ಲಿ ಸೊನ್ನೆಯಿಂದ ೧೦೦ ಕಿ.ಮೀ. ವೇಗವನ್ನು ತಲುಪಬಲ್ಲದು. ಜಗತ್ಪ್ರಸಿದ್ಧ ಬುಲೆಟ್ ಟ್ರೇನುಗಳು ಕೂಡ ೧೦೦ ಕಿ.ಮೀ. ವೇಗವನ್ನು ತಲುಪಲು ೫೪ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತವೆ. ವಂದೇ ಭಾರತ್ ರೈಲುಗಳು ಸಮಯದ ಪರಿಪಾಲನೆಗೆ ಹೆಸರಾಗಿದ್ದು, ಇನ್ನೊಂದುವರ್ಷದೊಳಗಾಗಿ ದೇಶಾದ್ಯಂತದ ವಿವಿಧ ಪಟ್ಟಣ/ನಗರಗಳ ನಡುವೆ ಇಂಥ ೭೫ ರೈಲುಗಳ ಸೇವೆ ಆರಂಭವಾಗಲಿದೆ.
ಬೆಂಗಳೂರು-ಚೆನ್ನೈ ನಡುವಿನ ಸಂಚಾರ ನವೆಂಬರ್ ೧೧ರಂದು ಶುರುವಾಗಲಿದೆ.೨೦೧೯ರಿಂದಲೇ ದೆಹಲಿ-ವಾರಾಣಸಿ ನಡುವೆ ‘ವಂದೇ ಭಾರತ್’ ಸಂಚರಿಸುತ್ತಿದ್ದರೂ ಒಂದು ಅಪಘಾತಕ್ಕೂ ಅದು ಒಳಗಾಗಿಲ್ಲ; ಆದರೆ ಜಾನುವಾರು ಡಿಕ್ಕಿ ಹೊಡೆದು ದನ್ನೇ ನೆಪವಾಗಿಟ್ಟುಕೊಂಡು ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನೇ ಹೀಯಾಳಿಸುವವರನ್ನು ಏನನ್ನುವುದು? ಯುರೋಪಿನ ಸರಕಾರೇತರ ಸಂಘಟನೆಯೊಂದು ಜಾಗತಿಕ ಹಸಿವಿನ ಸೂಚ್ಯಂಕದ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ೧೨೧ ರಾಷ್ಟ್ರಗಳ ಈ ಪಟ್ಟಿಯಲ್ಲಿ ಭಾರತ ೧೦೭ನೇ ಸ್ಥಾನಕ್ಕಿಳಿದಿದೆ ಎಂದು ಅದು ಹೇಳಿದೆ.
ಇದನ್ನಾಧರಿಸಿ ವಿಪಕ್ಷಗಳು ಕೇಂದ್ರ ಸರಕಾರದ ಮೇಲೆ ಮುಗಿಬಿದ್ದಿದ್ದು, ‘ಬಿಜೆಪಿ-ಆರೆಸ್ಸೆಸ್‌ಗಳು ದೇಶವನ್ನು ದುರ್ಬಲ ಗೊಳಿಸಿವೆ’ ಎಂದು ರಾಹುಲ್ಗಾಂಧಿಹೇಳಿಕೆ ಕೊಟ್ಟಿದ್ದಾರೆ. ಆಮ್ ಆದ್ಮಿ, ತೃಣಮೂಲ ಕಾಂಗ್ರೆಸ್ ಹೀಗೆ ಯಾವ ಪಕ್ಷವೂ ಹಸಿವಿನ ಸೂಚ್ಯಂಕದ ವಿಚಾರವಾಗಿ ಕೇಂದ್ರ ಸರಕಾರವನ್ನು ಹೀಯಾಳಿಸದೆ ಬಿಟ್ಟಿಲ್ಲ. ಹಸಿವಿನ ಸೂಚ್ಯಂಕದ ಪಟ್ಟಿಮಾಡುವ ವಿಧಾನವೇ ಅವೈಜ್ಞಾನಿಕ ಎಂದು ಕೇಂದ್ರ ಸರಕಾರ ಹೇಳಿದೆ.
ಏಕೆಂದರೆ, ೨೦೧೩ರಲ್ಲಿ ೪೩ನೇ ಸ್ಥಾನದಲ್ಲಿದ್ದ ಭಾರತವು ೨೦೨೨ರಲ್ಲಿ ೧೦೭ನೇ ಸ್ಥಾನಕ್ಕೆ ಜರ್ರನೆ ಕುಸಿಯುವುದಾದರೂ ಹೇಗೆ? ವರದಿಯ ಪ್ರಕಾರ ಆರ್ಥಿಕವಾಗಿ ಭಾರತಕ್ಕಿಂತ ಕೆಳಮಟ್ಟದಲ್ಲಿರುವ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾ ದೇಶ, ಉತ್ತರ ಕೊರಿಯಾಗಳಿಗಿಂತಲೂ ಭಾರತವು ಹಸಿವಿನ ಸೂಚ್ಯಂಕದ ಪಟ್ಟಿಯಲ್ಲಿ ಕೆಳಗಿದೆಯೆಂದರೆ, ಇದು ಭಾರತವನ್ನು ಕೆಟ್ಟದಾಗಿ ಬಿಂಬಿಸಲು ಮಾಡಲಾಗಿರುವ ಒಂದು ಅಂತಾರಾಷ್ಟ್ರೀಯ ಹುನ್ನಾರವಲ್ಲದೆ ಬೇರೇನಲ್ಲ ಎನ್ನದೆವಿಧಿಯಿಲ್ಲ.
ಭಾರತೀಯ ಕುಟುಂಬ ಆರೋಗ್ಯ ಸರ್ವೇಕ್ಷಣೆಯ ಪ್ರಕಾರ, ೫ ವರ್ಷದೊಳಗಿನ ಮಕ್ಕಳಲ್ಲಿನ ದೈಹಿಕ ಬೆಳವಣಿಗೆಯ ಕುಂಠಿತತೆಯ ಪ್ರಮಾಣವು ೨೦೧೫-೧೬ರಲ್ಲಿ ಶೇ. ೩೮.೪ರಷ್ಟಿದ್ದು, ೨೦೨೦-೨೧ರಲ್ಲಿ ಈ ಪ್ರಮಾಣ ಶೇ. ೩೫.೫ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿಮಕ್ಕಳ ದೈಹಿಕ ಕ್ಷೀಣತೆಯ ಪ್ರಮಾಣವು ಶೇ. ೨೧ರಿಂದ ಶೇ. ೧೯.೩ಕ್ಕೆ ಇಳಿದಿದೆ. ಮಕ್ಕಳ ಕಡಿಮೆ ತೂಕದ ಸಮಸ್ಯೆಯ ಪ್ರಮಾಣವು ಶೇ. ೩೫.೮ರಿಂದ ಶೇ. ೩೨.೧ಕ್ಕೆ ಇಳಿದಿದೆ.
ಕೇಂದ್ರ ಸರಕಾರದ ‘ಪೋಷಣ್’ ಅಭಿಯಾನವು ೨೦೧೮ರಿಂದ ಜಾರಿಯಲ್ಲಿದ್ದು ೦-೬ ವರ್ಷದೊಳಗಿನ ಮಕ್ಕಳಲ್ಲಿ ಕಡಿಮೆ ತೂಕದ ಸಮಸ್ಯೆಯ ನಿವಾರಣೆ, ಗರ್ಭಿಣಿಯರ ಪೋಷಕಾಂಶ ಮಟ್ಟ, ಮಗುವಿನ ತೂಕದ ಮಟ್ಟವನ್ನು ಕಾಯ್ದುಕೊಳ್ಳುವಿಕೆ ಮತ್ತು ಹಾಲೂಡಿಸುವ ತಾಯಂದಿರ ಪೋಷಣಾ ಮಟ್ಟವನ್ನು ಉತ್ತಮಗೊಳಿಸುವಿಕೆಯಂಥ ಕಾರ್ಯಗಳು ನಡೆಯುತ್ತಿವೆ. ಕಬ್ಬಿಣದ ಅಂಶ,-ಲಿಕ್ಆಸಿಡ್, ವಿಟಮಿನ್ ಬಿ-೧೨ಗಳನ್ನು ಹೊಂದಿರುವ ಸಾರವಧಿತಅಕ್ಕಿಯನ್ನು ಶಾಲೆಗಳ ಬಿಸಿಯೂಟದಲ್ಲಿ ಅನ್ನಕ್ಕಾಗಿ ಬಳಸಲಾಗುತ್ತಿದೆ.
ಭಾರತದಲ್ಲಿ ಪ್ರತಿ ಸಾವಿರ ನವಜಾತ ಶಿಶುಗಳಲ್ಲಿ ಮರಣಿಸುತ್ತಿದ್ದ ಶಿಶುಗಳ ಸಂಖ್ಯೆ ೨೦೧೦ರಲ್ಲಿ ೪೫.೧ರಷ್ಟು ಇದ್ದುದು, ೨೦೨೦ರಲ್ಲಿ ೨೭ಕ್ಕೆ ಇಳಿದಿದೆ. ಈ ನಡುವೆ ಭಾರತವು ಕಳೆದ ೧೫ ವರ್ಷಗಳಲ್ಲಿ ೪೧ ಕೋಟಿ ಭಾರತೀಯರನ್ನು ಬಡತನದ ಬಿಗಿಮುಷ್ಟಿಯಿಂದ ಹೊರತಂದಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯು ಹೊಗಳಿದೆ. ಆದರೆ ಹಸಿವಿನ ಸೂಚ್ಯಂಕ ವನ್ನು ತಯಾರಿಸಿದ ಸಂಸ್ಥೆಯು ಮೇಲಿನ ಯಾವ ಅಂಶಗಳನ್ನೂ ಪರಿಗಣಿಸಿಲ್ಲ.
ದೇಶದ ಗ್ರಾಮೀಣ ಭಾಗದ ಶೇ. ೭೫ರಷ್ಟು ಹಾಗೂ ನಗರಗಳ ಶೇ. ೫೦ರಷ್ಟು ಕುಟುಂಬಗಳಿಗೆ ಪ್ರತಿತಿಂಗಳು ಕಿಲೋ ಒಂದಕ್ಕೆ ೨-೩ ರುಪಾಯಿಗಳಂತೆ ೩೫ ಕಿಲೋ ಆಹಾರಧಾನ್ಯಗಳನ್ನು ಸರಕಾರವು ವಿತರಿಸುತ್ತಿರುವಾಗ, ಜಾಗತಿಕ ಹಸಿವಿನಸೂಚ್ಯಂಕದಲ್ಲಿ ಭಾರತಕ್ಕೆ ೧೦೭ನೇ ಸ್ಥಾನವನ್ನು ಕೊಟ್ಟಿರುವುದು ಕಳಪೆಕಾರ್ಯದ ದ್ಯೋತಕವಾಗಿದೆ ಎಂದು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ಅಂಕಣಕಾರ ಸ್ವಾಮಿನಾಥನ್ ಅಯ್ಯರ್ ಹೇಳಿದ್ದಾರೆ.
ಇವರು ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್ ಅವರ ಸೋದರ ಎಂಬುದು ವಿಶೇಷ. ಭಾರತದ ರುಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಕುಸಿಯುತ್ತಿದೆ ಎಂಬುದು ಇನ್ನೊಂದು ಕೂಗು. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರುಈ ವಿಚಾರವಾಗಿ ಇತ್ತೀಚೆಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ, ‘ರುಪಾಯಿ ಮೌಲ್ಯವು ಡಾಲರ್ ಎದುರು ಕುಸಿಯುತ್ತಿಲ್ಲ, ಬದಲಾಗಿ ಡಾಲರ್ ಬಲಿಷ್ಠವಾಗುತ್ತಿದೆ’ ಎಂದಿದ್ದರು.
ರುಪಾಯಿಯ ಮೌಲ್ಯಕುಸಿತ ಮತ್ತು ವಿತ್ತಸಚಿವೆಯ ಹೇಳಿಕೆಯ ವಿರುದ್ಧ ಟೀಕೆ-ವ್ಯಂಗ್ಯಗಳ ಮಹಾಪೂರವೇ ಹರಿಯುತ್ತಿದೆ. ಸಚಿವೆಯ ಹೇಳಿಕೆ ಸತ್ಯವೇ ಆಗಿದೆ. ಅಮೆರಿಕ ತನ್ನ ಹಣದುಬ್ಬರವನ್ನು ನಿಯಂತ್ರಿಸಲು ಉಳಿತಾಯದ ಬಡ್ಡಿದರವನ್ನುಗಣನೀಯವಾಗಿ ಏರಿಸಿದ್ದು ಡಾಲರ್‌ನ ಹೊರಹರಿವನ್ನು ಕಡಿಮೆಗೊಳಿಸಿತು. ಇದರ ಪರಿಣಾಮವಾಗಿ ಉಳಿದೆಲ್ಲ ದೇಶಗಳ ಕರೆನ್ಸಿಗಳ ವಿರುದ್ಧ ಡಾಲರ್ ಬಲಿಷ್ಠವಾಯಿತು.
ಆದರೆ ಉಳಿದೆಲ್ಲ ದೇಶಗಳ ಕರೆನ್ಸಿಗಳಿಗೆ ಹೋಲಿಸಿದರೆ ರುಪಾಯಿಯ ಕುಸಿತ ಬಹಳ ಕಡಿಮೆಯೇ ಇದೆ. ಅಂದರೆ, ಕಳೆದೊಂದು ವರ್ಷದಲ್ಲಿ ಅಮೆರಿಕನ್ ಡಾಲರ್ ಎದುರು ಜಪಾನಿ ಯೆನ್ ಶೇ. ೨೮.೩೯ರಷ್ಟು, ಬ್ರಿಟನ್‌ನ ಸ್ಟರ್ಲಿಂಗ್ ಪೌಂಡ್ ಶೇ. ೧೭.೮೦ರಷ್ಟು, ಯೂರೋ ಶೇ. ೧೬.೨೭ರಷ್ಟು, ದಕ್ಷಿಣ ಕೊರಿಯಾದ ವೋನ್ ಶೇ. ೨೦.೯೪ರಷ್ಟು, ಆಸ್ಟ್ರೇಲಿಯಾ ಡಾಲರ್ ಶೇ. ೧೫.೭೮ರಷ್ಟು, ಪಾಕಿಸ್ತಾನ್ ರುಪಾಯಿ ಶೇ. ೨೫.೪೬ರಷ್ಟು ಮತ್ತು ನ್ಯೂಜಿಲೆಂಡ್ ಡಾಲರ್ ಶೇ. ೨೨.೨೭ರಷ್ಟು ಕುಸಿತ ಕಂಡಿದ್ದರೆ ಭಾರತದ ರುಪಾಯಿ ಶೇ. ೯.೬೪ರ ಕುಸಿತವನ್ನಷ್ಟೇ ದಾಖಲಿಸಿದೆ.
ಉಳಿದೆಲ್ಲ ದೇಶಗಳ ಕರೆನ್ಸಿಗಳ ಎದುರು ರುಪಾಯಿಯು ಕುಸಿದಿದ್ದರೆ ಸರಕಾರವನ್ನು ಟೀಕಿಸುವುದರಲ್ಲಿ ಅರ್ಥವಿತ್ತು; ಆದರೆಡಾಲರ್ ಹೊರತುಪಡಿಸಿ ಉಳಿದೆಲ್ಲ ಕರೆನ್ಸಿಗಳ ಮುಂದೆ ರುಪಾಯಿ ಬಲಿಷ್ಠವಾಗುತ್ತ ಸಾಗುತ್ತಿರುವುದರಿಂದ, ಈ ಹೆಚ್ಚುಗಾರಿಕೆ ಯನ್ನು ಹೊಗಳಬೇಕೇ ವಿನಾ ಹೀಯಾಳಿಸಬಾರದು. ಕೇಂದ್ರ ಸರಕಾರವು ನಿರ್ದಿಷ್ಟ ಉದ್ಯಮಿಗಳ ಸಾಲವನ್ನು ಮನ್ನಾ ಮಾಡುತ್ತಿದೆ ಎಂಬುದು ವಿಪಕ್ಷಗಳಿಂದ ಹೊಮ್ಮಿದ ಮತ್ತೊಂದು ಆರೋಪ; ಆದರೆ, ರಾಹುಲ್ಗಾಂಧಿ, ಅರವಿಂದ ಕೇಜ್ರೀವಾಲ್ ಹಾಗೂ ಎಡಪಕ್ಷಗಳು ಮಾಡಿದ್ದು ‘ಲೋನ್ ರೈಟ್ಆಫ್’ ಅನ್ನು ‘ಸಾಲಮನ್ನಾ’ ಎಂದು ತಪ್ಪಾಗಿ ಬಿಂಬಿಸುವ ಕೆಲಸವನ್ನಷ್ಟೇ!
ದೇಶವನ್ನು ಕೋವಿಡ್ ಮಹಾಮಾರಿ ಅಪ್ಪಳಿಸಿದಾಗಲೂ ವಿಪಕ್ಷಗಳು ಮತ್ತು ಪೂರ್ವಗ್ರಹಪೀಡಿತ ಮಾಧ್ಯಮಗಳು ಕೇಂದ್ರಸರಕಾರವನ್ನು ಇನ್ನಿಲ್ಲದಂತೆ ಟೀಕಿಸಿದ್ದವು; ಆದರೆ ೧೪ರ ವಯಸ್ಸಿನ ಮೇಲ್ಪಟ್ಟ ಎಲ್ಲ ಪ್ರಜೆಗಳಿಗೆ ಕೋವಿಡ್ ವ್ಯಾಕ್ಸಿನ್ಅನ್ನು ವ್ಯವಸ್ಥಿತ ರೀತಿಯಲ್ಲಿ ಒದಗಿಸಿ ಭಾರತವು ಈ ಪಿಡುಗನ್ನು ನಿಯಂತ್ರಿಸಿದ ಬಗ್ಗೆ ಇಂಥ ಮಾಧ್ಯಮಗಳು/ ವಿಪಕ್ಷಗಳಿಂದ ಯಾವುದೇ ಪ್ರಶಂಸೆ ಹೊಮ್ಮಲಿಲ್ಲ!
ಸ್ಥಳೀಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಬೆಂಗಳೂರು-ಮೈಸೂರು ನಡುವೆ ಹೊಸದಾಗಿ ನಿರ್ಮಿಸಲಾದ ದಶಪಥದಲ್ಲಿ ವಾಹನ ಚಾಲಕರು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನಗಳನ್ನು ಚಲಾಯಿಸಿ ಅಪಘಾತಗಳು ಸಂಭವಿಸಿ ದಾಗ, ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಛಲ ಬಿಡದೆ ನಿಗದಿತ ಕಾಲಮಿತಿಯಲ್ಲಿ ಈ ದಶಪಥದ ನಿರ್ಮಾಣದಲ್ಲಿಪ್ರಮುಖಪಾತ್ರ ವಹಿಸಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹರನ್ನು ಈ ಅಪಘಾತಗಳಿಗೆ ನೇರ ಹೊಣೆ ಎಂಬಂತೆ ಬಿಂಬಿಸುವ ಯತ್ನಗಳಾಗುತ್ತಿವೆ.
ರಾಜಕೀಯ ನಾಯಕರು ಅಥವಾ ಸರಕಾರಗಳು ಟೀಕೆಗೆ ಅತೀತರೇ ನಲ್ಲ. ಆದರೆ ಟೀಕೆಗಳು ರಚನಾತ್ಮಕವಾಗಿರಲಿ ಎಂಬುದಷ್ಟೇ ಸಹೃದಯಿಗಳ ಕೋರಿಕೆ.