ಪುನರ್ವಸತಿ ಎಂಬ ಅರ್ಥವಿಲ್ಲದ ವ್ಯರ್ಥ ಕಸರತ್ತು
ವಸ್ತುಸ್ಥಿತಿ
ಡಾ.ಗಾಯತ್ರಿ ಜೈಪ್ರಕಾಶ್
ಸ್ಥಳಾಂತರಕ್ಕೂ ಮೊದಲು ಅವಿಭಕ್ತ ಕುಟುಂಬಗಳಲ್ಲಿ ವಾಸ ಮಾಡುತ್ತಿದ್ದ ಕುಣಬಿಗಳು ತಮ್ಮ ಕುಟುಂಬ ಮತ್ತು ಜಮೀನಿ ನೊಂದಿಗೆ ಹೊಂದಿದ್ದ ಭಾವನಾತ್ಮಕ ಸಂಬಂಧದ ಕಾರಣದಿಂದಾಗಿ, ತಂತಮ್ಮ ಹೆಸರಲ್ಲಿ ಆಸ್ತಿ ಪಾಲು ಮಾಡಿಸಿ ಕೊಳ್ಳಬೇಕು, ಅದಕ್ಕೆ ಸೂಕ್ತ ದಾಖಲೆಪತ್ರಗಳನ್ನು ಹೊಂದಿರಬೇಕು ಎಂಬ ಕಲ್ಪನೆಯೂ ಅವರಿಗಿರಲಿಲ್ಲ.
ಉತ್ತರಕನ್ನಡ ಜಿಲ್ಲೆಯ ಸೂಪಾ ಜಲಾಶಯದ ಬಳಿ ‘ಎಷ್ಟು ಎತ್ತರವಾಗಿದ್ದರೇನು, ಹತ್ತಿರವಾಗದಿದ್ದರೆ?’ ಎಂಬ ಅರ್ಥವತ್ತಾದ ಫಲಕವಿದೆ. ಯಾವುದೇ ಯೋಜನೆ ಎಷ್ಟು ದೊಡ್ಡದಿದೆ ಎನ್ನುವುದಕ್ಕಿಂತ, ಅದಕ್ಕಾಗಿ ತ್ಯಾಗ ಮಾಡಿದವರಿಗೆ ಮತ್ತು ಸಮಾಜಕ್ಕೆ ಅದು ಎಷ್ಟರಮಟ್ಟಿಗೆ ಪ್ರಯೋಜನಕಾರಿಯಾಗಿದೆ ಎಂಬುದು ಮಹತ್ವದ ವಿಚಾರವಾಗುತ್ತದೆ. ಇದೇ ರೀತಿಯಲ್ಲಿ, ‘ಬೃಹತ್ ವಿಜ್ಞಾನ, ತಂತ್ರಜ್ಞಾನ, ಬಂಡವಾಳ ಯೋಜನೆಗಳು ರೈತರ ಬದುಕನ್ನು ಕಿತ್ತುಕೊಳ್ಳುವ ಕೆಲಸ ಮಾಡಿದರೆ, ಅಂಥ ಯೋಜನೆಗಳು ಸೈತಾನನ ಕಾರ್ಯಾಗಾರವಾಗುತ್ತವೆ’ ಎಂದಿದ್ದಾರೆ ಮಹಾತ್ಮ ಗಾಂಧೀಜಿ.
ನಮಗೆಲ್ಲ ತಿಳಿದಿರುವಂತೆ, ಭಾರಿ ಯೋಜನೆಯೊಂದು ಸಾಕಾರಗೊಳ್ಳುತ್ತಿದ್ದಂತೆ ಅಲ್ಲಿ ಸಾಕಷ್ಟು ಮಟ್ಟದಲ್ಲಿ ಪರಿಸರಕ್ಕೆ ಹಾನಿ ಯಾಗುತ್ತದೆ ಮತ್ತು ಅಲ್ಲಿನ ಜನರು ತಮ್ಮ ಮೂಲನೆಲೆಯನ್ನು ಕಳೆದುಕೊಳ್ಳುತ್ತಾರೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದನ್ನು ಸಹಿಸಿಕೊಳ್ಳೋಣ ಎಂದು ಸಮಾಧಾನ ಮಾಡಿಕೊಂಡರೂ, ಒಕ್ಕಲೆಬ್ಬಿಸಿದ ಜನರಿಗೆ ಪುನರ್ವಸತಿ ದೊರೆಯದಿದ್ದರೆ ಹೇಗೆ ತತ್ತರಿಸಿ ಹೋಗುತ್ತಾರೆ ಎಂಬುದಕ್ಕೆ ಕಾಳಿ ಜಲ ವಿದ್ಯುತ್ ಯೋಜನೆಯ ಮುಖ್ಯ ನೀರು ಸಂಗ್ರಹಣಾ ವ್ಯವಸ್ಥೆಯಾದ ಸೂಪಾ ಜಲಾಶಯದ ಸಂತ್ರಸ್ತರೇ ಸಾಕ್ಷಿ.
ಇದು ಕೇವಲ ಒಂದು ಯೋಜನೆಗೆ ಸಂಬಂಧಿಸಿದ ಚಿತ್ರಣವಲ್ಲ; ಅಭಿವೃದ್ಧಿಯ ಹೆಸರಲ್ಲಿ ಕೈಗೊಂಡ ಬಹುತೇಕ ಎಲ್ಲ ಯೋಜನೆಗಳ ಸಂತ್ರಸ್ತರದ್ದೂ ಇದೇ ಹಣೆಬರಹ, ಇದೇ ನೋವು. ಜಿಲ್ಲೆಯ ಜೋಯಿಡಾ ತಾಲೂಕಿನ ವೀರ್ ಖೋಲ್ ಎಂಬಲ್ಲಿ1981ರಲ್ಲಿ ನಿರ್ಮಿಸಲಾದ ಈ ಅಣೆಕಟ್ಟಿನಿಂದಾಗಿ ಸೂಪಾ ಎಂಬ ಸಾಂಸ್ಕೃತಿಕ ಪಟ್ಟಣ ಹಾಗೂ ಸುತ್ತಲಿನ ೪೬ ಗ್ರಾಮಗಳು,ಪಶ್ಚಿಮಘಟ್ಟದ 26565 ಎಕರೆ ಸಮೃದ್ಧ ಅರಣ್ಯಭೂಮಿ, 5809 ಎಕರೆ ಕೃಷಿಭೂಮಿ, ೧,೦೨೬ ಎಕರೆ ಖರಾಬು ಭೂಮಿ ಸೇರಿದಂತೆ ಒಟ್ಟು 33200 ಎಕರೆಗೂ ಹೆಚ್ಚಿನ ಭೂಮಿ ಮುಳುಗಡೆಯಾಯಿತು.
1551ಕುಟುಂಬಗಳು ಸ್ಥಳಾಂತರಗೊಂಡವು. ಇವರಿಗಾಗಿ ತಾಲೂಕಿನ ರಾಮನಗರ, ಜೋಯಿಡಾ ಹಾಗೂ ಕ್ಯಾಸೆಲ್‌ರಾಕ್ಎಂಬಲ್ಲಿ ೩ ಪುನರ್ವಸತಿ ಕೇಂದ್ರಗಳನ್ನು ಗುರುತಿಸಲಾಗಿತ್ತು. ಆದರೆ ಈ ಪುನರ್ವಸತಿ ಕಾರ್ಯ ಅದೆಷ್ಟು ಅವೈಜ್ಞಾನಿಕವಾಗಿದ್ದು ಕೆಲ ಸಮುದಾಯಗಳ ವಿಶಿಷ್ಟ ಬದುಕನ್ನು ಹೇಗೆ ಸರ್ವನಾಶ ಮಾಡಿಬಿಟ್ಟಿದೆ ಎಂಬುದನ್ನು ಇಲ್ಲಿ ವಿವರಿಸಲು ಯತ್ನಿಸಲಾಗಿದೆ.
ಸುಮಾರು ೩೫೦ ವರ್ಷಗಳ ಹಿಂದಿನಿಂದಲೂ ಸೂಪಾ ಪಟ್ಟಣ, ನಿನ್ನೂರು, ದಿಗಲಾಂಬ, ಕರಂ ಜೋಯಿಡಾ, ಕುಕ್ರೆ-ಕುರುವಾಡೆ, ಕಾರಸಿಂಗಳ್, ಪಾಟೆ, ಕೇವರ್ಲೆ, ಬಾಂದೋಡ ದಂಥ ಪ್ರಕೃತಿಸಮೃದ್ಧ ಕಾಡಿನಲ್ಲಿ, ಕಾಳಿ, ನಾಗಿನಾಲಾ, ಪಾಂಡೇರಿ, ಕಾನೇರಿ ಯಂಥ ನದಿಪಾತ್ರಗಳಲ್ಲಿ ಕುಣಬಿ, ದೇಸಾಯಿ, ದೇವುಳಿ, ಭಂಡಾರಿ, ಗೌಳಿ, ಗೌಡ ಸಾರಸ್ವತ ಬ್ರಾಹ್ಮಣ ಮುಂತಾದ ಸಮುದಾಯ ಗಳು ವಿಶಿಷ್ಟ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದವು.
ಕಾಡಿನೊಂದಿಗೆ ಹೊಂದಿಕೊಂಡಿದ್ದ ಇವರ ಸಾಮಾಜಿಕ-ಆರ್ಥಿಕ ಜೀವನ ಇತರರಿಗಿಂತ ಭಿನ್ನವಾಗಿತ್ತು. ಆದರೆ ಜಲಾಶಯ ನಿರ್ಮಾಣದಿಂದಾಗಿ ಇವರೆಲ್ಲ ಮೂಲನೆಲೆಯಿಂದ ಸ್ಥಳಾಂತರಗೊಳ್ಳಬೇಕಾಗಿ ಬಂದಾಗ, ಪುನರ್ವಸತಿ ಉಪ ಸಮಿತಿಯೊಂದಿಗೆ ನಡೆದ ಸಮಾಲೋಚನೆಯಲ್ಲಿ ಸಂತ್ರಸ್ತರಪ್ರತಿನಿಽಗಳು ಸೂಪಾ ಅಣೆಕಟ್ಟಿನ ಕೆಳಪಾತ್ರದಲ್ಲಿ ಬರುವ ಭರ್ಚಿ ಪ್ರದೇಶದಲ್ಲಿಪುನರ್ವಸತಿ ಕಲ್ಪಿಸುವಂತೆ ಕೇಳಿಕೊಂಡರು. ಇದು ಸಮಂಜಸವೂ ಆಗಿತ್ತು. ಏಕೆಂದರೆ, ವರ್ಷದ ೮ ತಿಂಗಳಲ್ಲಿ ಹರಿಯುವ ಭರ್ಚಿ ನಾಲೆ, ಕೃಷಿ-ಪಶುಸಂಗೋಪನೆಗೆ ಯೋಗ್ಯಭೂಮಿ ಅಲ್ಲಿತ್ತು.
ದಾಂಡೇಲಿ ಪಟ್ಟಣ ಸನಿಹದಲ್ಲಿದ್ದುದರಿಂದ ಹೆಚ್ಚಿನ ಉದ್ಯೋಗಾವಕಾಶ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಒದಗುವು ದಿತ್ತು. ಆದರೆ, ಸಂತ್ರಸ್ತರ ಪುನರ್ವಸತಿಗಾಗಿ ಆಯ್ಕೆಯಾಗಿದ್ದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಲೋಂಡಾ ಕ್ರಾಸ್ ಬಳಿಯ ಚಾಪೋಲಿ ಬ್ಲಾಕ್. ಜಲಾಶಯದ ನೀರಿನ ಪ್ರಯೋಜನದಡಿ ಪುನರ್ವಸತಿ ಕಲ್ಪಿಸದಿದ್ದುದು ಮೊದಲನೆಯ ತಪ್ಪು. ಸಂತ್ರಸ್ತರ ಭಾಷೆ ಮತ್ತು ಸಂಸ್ಕೃತಿಗೆ ವಿರುದ್ಧವಾಗಿ ಅವರ ಒಪ್ಪಿಗೆಯಿಲ್ಲದೆಯೇ ಬೆಳಗಾವಿ ಜಿಲ್ಲೆಗೆ ಸ್ಥಳಾಂತರಿಸಿದ್ದು ೨ನೇ ತಪ್ಪು. ಪ್ರತಿ ಜಿಲ್ಲೆಗೂ ಅದರದ್ದೇ ಆದ ಭೂಗುಣ- ವಾಯುಗುಣಗಳಿರುತ್ತವೆ, ಆಹಾರ-ಭಾಷೆ-ಸಂಸ್ಕೃತಿಯಲ್ಲಿ ವಿಭಿನ್ನತೆಯಿರುತ್ತದೆ ಅಲ್ಲವೇ?ಆದರೆ ಕಾಡಿನ ಮಧ್ಯೆ ವಾಸವಿದ್ದವರಿಗೆ ಲೋಂಡಾ ಕ್ರಾಸ್ ಬಳಿ ಕಾಡು ಕಡಿದು ಅವೈಜ್ಞಾನಿಕವಾಗಿ ನಿವೇಶನ ಮತ್ತು ಕೃಷಿ ಜಮೀನು ಹಂಚಲಾಯಿತು.
ನಿವೇಶನಗಳನ್ನು ಒಂದು ಕಡೆ ನೀಡಿದರೆ, ಅಲ್ಲಿಂದ ಬರೋಬ್ಬರಿ ೯ ಕಿ.ಮೀ. ದೂರದಲ್ಲಿ ಗೋವಾ ರಸ್ತೆಯ ಹಾರ್ಲಿಯಲ್ಲಿಕೃಷಿಜಮೀನು ನೀಡಲಾಯಿತು. ಕಾಡಿನಲ್ಲಿದ್ದಾಗ ತಂತಮ್ಮ ಹೊಲ- ಕುಟುಂಬದ ಜತೆಗಿದ್ದ ಸಂತ್ರಸ್ತರು ಹೀಗೆ ಮನೆಯೊಂದು ಕಡೆ ಜಮೀನೊಂದು ಕಡೆಯಾಗಿ ಬಳಲುವಂತಾಯಿತು. ಈ ನಿವೇಶನ, ಜಮೀನುಗಳನ್ನು ಸಂತ್ರಸ್ತರಿಗೆ ಲಾಟರಿ ವಿಧಾನದಲ್ಲಿ ಹಂಚಿದ್ದು ಮತ್ತೊಂದು ಮಹಾನ್ ಎಡವಟ್ಟು.
ಹೀಗೆ ತಮಗೆ ದಕ್ಕಿದಂಥವುಗಳನ್ನೇ ಸಂತ್ರಸ್ತರು ಸ್ವೀಕರಿಸುವಂತಾಗಿ ‘ಪುನರ್ವಸತಿ’ ಎಂಬ ಪರಿಕಲ್ಪನೆಗೆ ಅರ್ಥವಿಲ್ಲ ದಂತಾಯಿತು. ಕಾಡಿನ ಗರ್ಭದಲ್ಲಿ ತಮ್ಮದೇ ಆದ ವಿಶಿಷ್ಟ ಆಚರಣೆಗಳೊಂದಿಗೆ ಪ್ರತ್ಯೇಕವಾಗಿ ಬದುಕಿದ್ದ ಕುಣುಬಿ ಸಮುದಾಯಕ್ಕಂತೂ ಈ ಹಂಚಿಕೆ ಶಾಪವಾಗಿ ಪರಿಣಮಿಸಿತು. ಏಕೆಂದರೆ ಇವರಿಗೆ ಬೇರೆ ಜನರು ಗೊತ್ತಿರಲಿಲ್ಲ, ಅವರ ಮನೆಗೆ ಹೋಗಿ ಬರುವ ಅಭ್ಯಾಸ ವಿರಲಿಲ್ಲ. ಹೀಗಾಗಿ ಕುಣಬಿಗಳು ಹರಿದು ಹಂಚಿಹೋಗು ವಂತಾಯಿತು. ಇದು ಅವರ ಭಾವನಾತ್ಮಕತೆ, ಉಡುಪಿನ ಸ್ವಾತಂತ್ರ್ಯ,ಸಾಂಸ್ಕೃತಿಕ ಆಚರಣೆಗಳಿಗೆ ಅಡ್ಡಿತಂದಿತು.
ಅತ್ಯಂತ ಮುಗ್ಧರೂ, ಸಂಕೋಚ ಸ್ವಭಾವದವರೂ ಆದ ಕುಣಬಿಗಳಲ್ಲಿ ಹೆಂಗಸರು ರವಿಕೆಯಿಲ್ಲದೆ ಸೀರೆಯುಡುವುದು ಮತ್ತು ಗಂಡಸರು ಲಂಗೋಟಿ ಧರಿಸುವುದು ವಾಡಿಕೆ. ಹೀಗಾಗಿ ಈಗ ವಯಸ್ಸಾಗಿರುವ ಕುಣಬಿಗಳು ಯಾರೊಂದಿಗೂ ಬೆರೆಯಲಾಗ ದವರಾಗಿದ್ದಾರೆ ಮತ್ತು ಪಾರಂಪರಿಕ ಉಡುಪು ಧರಿಸಲು ಇರಿಸು-ಮುರಿಸು ಅನುಭವಿಸುತ್ತಿದ್ದಾರೆ. ಹೋಳಿ ಸಿಗ್ಮಾ, ಪುಗಡಿಯಾಟ, ಕೋಲಾಟ, ಕುಣಬಿ ಯಕ್ಷಗಾನ, ರಾಮಾಯಣ ಕೇಳ್, ಮಹಾಭಾರತ ಕೇಳ್, ರಾಧಾಕೃಷ್ಣ ನಾಟಕಗಳಂಥ ಇವರ ಅನನ್ಯಸಾಂಸ್ಕೃತಿಕ ಆಚರಣೆಗಳು ಸಂಪೂರ್ಣ ಮೂಲೆಗುಂಪಾಗಿವೆ. ಒಟ್ಟಾರೆಯಾಗಿ ಪುನರ್ವಸತಿ ಕೇಂದ್ರಗಳಲ್ಲಿ ಎಲ್ಲೆಂದರಲ್ಲಿ ಹಂಚಿಹೋಗಿರುವ ಕಾರಣ ಕುಣಬಿಗಳ ಸಾಮಾಜಿಕ ಚಟುವಟಿಕೆಗಳು ನಿಂತು ಅವರು ಏಕಾಂಗಿ ಬದುಕು ಸಾಗಿಸುವಂತಾಗಿದೆ.
ಸಂತ್ರಸ್ತರ ಪೂರ್ವಬದುಕಿನ ಸಾಮಾಜಿಕ ಆಯಾಮಗಳನ್ನು ಅಧ್ಯಯನ ಮಾಡದೆ, ಅದಕ್ಕೆ ಗೌರವ ನೀಡದೆ ಅವರನ್ನು ಹೀಗೆಹರಿದು ಹಂಚಿದ್ದಕ್ಕೆ ಒಂದು ಅದ್ಭುತ ಸಾಂಸ್ಕೃತಿಕ ವೈಭವದಿಂದ ಅವರು ವಂಚಿತರಾಗುವಂತಾಗಿದೆ. ಕುಣಬಿಗಳ ಪಾರಂಪರಿಕ ಬದುಕನ್ನು ಪರಿಗಣಿಸದೆ ಅವೈಜ್ಞಾನಿಕವಾಗಿ ಪರಿಹಾರ ನೀಡಿದ್ದು ಇನ್ನೊಂದು ತಪ್ಪು. ಸ್ಥಳಾಂತರಕ್ಕೂ ಮೊದಲು ಅವಿಭಕ್ತ ಕುಟುಂಬಗಳಲ್ಲಿ ವಾಸ ಮಾಡುತ್ತಿದ್ದ ಕುಣಬಿಗಳು ತಮ್ಮ ಕುಟುಂಬ ಮತ್ತು ಜಮೀನಿನೊಂದಿಗೆ ಹೊಂದಿದ್ದ ಭಾವನಾತ್ಮಕಸಂಬಂಧದ ಕಾರಣದಿಂದಾಗಿ, ತಂತಮ್ಮ ಹೆಸರಲ್ಲಿ ಆಸ್ತಿ ಪಾಲುಮಾಡಿಸಿಕೊಳ್ಳಬೇಕು, ಅದಕ್ಕೆ ಸೂಕ್ತ ದಾಖಲೆಪತ್ರಗಳನ್ನು ಹೊಂದಿರಬೇಕು ಎಂಬ ಕಲ್ಪನೆಯೂ ಅವರಿಗಿರಲಿಲ್ಲ.
ಕುಟುಂಬದ ಯಜಮಾನನ ಹೆಸರಲ್ಲಿ ಸ್ವಲ್ಪ ಆಸ್ತಿ ಇರುತ್ತಿತ್ತು. ನೆಲೆ ಮುಳುಗಡೆಯಾಗಿ ಸ್ಥಳಾಂತರಗೊಳ್ಳುವ ಮತ್ತು ಪುನರ್ವಸತಿ-ಪರಿಹಾರ ಪಡೆಯುವ ಸಂದರ್ಭದಲ್ಲಿ ಇದು ಅವರಿಗೆ ತೊಡಕಾಗಿ ಕಾಡಿತು. ಯಾರದೇ ಆಸ್ತಿಗೆ ಪರಿಹಾರ ನೀಡುವಾಗ ಅವರ ಆಸ್ತಿಯ ದಾಖಲೆಗಳನ್ನು ನವೀಕರಿಸಬೇಕು. ಆದರೆ ಸರಕಾರ ಈ ಕೆಲಸ ಮಾಡದೆ ಆಸ್ತಿ ಇದ್ದವರ ಹೆಸರಿಗೆ ನಿಗದಿತ ಪರಿಹಾರ ನೀಡಿತು. ಕುಟುಂಬ ದಲ್ಲಿ ವಾಸಿಸುತ್ತಿದ್ದ ಒಟ್ಟು ಜನರನ್ನು ಈ ವೇಳೆ ಪರಿಗಣಿಸದ ಕಾರಣ, ಈಗ ಪುನರ್ವಸತಿ ಕೇಂದ್ರದಲ್ಲಿ ೪-೫ ತಲೆಮಾರಿನ ಏಳೆಂಟು ಕುಟುಂಬಗಳ ಸುಮಾರು ಮೂವತ್ತಕ್ಕೂ ಹೆಚ್ಚಿನ ಸದಸ್ಯರು ಒಂದೇ ಮನೆ ನಿವೇಶನದಲ್ಲಿ ಉಸಿರುಗಟ್ಟು ವಂತೆ ಬದುಕುವಂತಾಗಿದೆ.
ತಮ್ಮ ಪಾರಂಪರಿಕತೆಗೆ ತಕ್ಕಂತೆ ಕುಣಬಿಗಳು ಮಾಡಿಕೊಂಡಿದ್ದ ಭತ್ತದ ಹುಲ್ಲಿನ ಮನೆಯನ್ನು ಗುಡಿಸಲು ಎಂದು ಪರಿಗಣಿಸಿದ ಸರಕಾರ ಅವರಿಗೆ ಅತ್ಯಂತ ಕಡಿಮೆ ಪರಿಹಾರ ನೀಡಿದ ನಿದರ್ಶನಗಳು ಸಾಕಷ್ಟಿವೆ. ಇನ್ನು ತಾಲೂಕು ಕೇಂದ್ರವನ್ನು ಗುರುತಿಸಿರುವಪರಿಯೂ ಅವೈಜ್ಞಾನಿಕವಾಗಿದೆ. ಮೊದಲಿನ ತಾಲೂಕು ಕೇಂದ್ರ ಸೂಪಾ ಮುಳುಗಡೆಯಾಗಿದ್ದರಿಂದ, ತಾಲೂಕು ನಕಾಶೆಯನ್ನು ಮಧ್ಯಕ್ಕೆ ಮಡಚಿದಾಗ ಗೋಚರಿಸಿದ ಜೋಯಿಡಾವನ್ನು ತಾಲೂಕು ಕೇಂದ್ರವಾಗಿಸಲಾಯಿತಂತೆ. ತಾಲೂಕು ಕಚೇರಿಗಳು ಪುನರ್ವಸತಿ ಕೇಂದ್ರದಿಂದ ತುಂಬ ದೂರದಲ್ಲಿರುವುದರಿಂದ ತೊಂದರೆಗೊಳಗಾಗಿರುವ ಸಂತ್ರಸ್ತರು, ಜಗಲಪೇಟೆಯನ್ನು ತಾಲೂಕು ಕೇಂದ್ರವಾಗಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ಅಭಿಪ್ರಾಯ ಪಡುತ್ತಾರೆ.
ಪುನರ್ವಸತಿ ಕೇಂದ್ರದಲ್ಲಿ ಕಾಡಿನ ಮರಗಳನ್ನು ಕಡಿದು ನಿವೇಶನ ಮತ್ತು ಕೃಷಿಜಮೀನು ನೀಡಿದ್ದರಿಂದಾಗಿ, ಮರದ ಬೊಡ್ಡೆ ಗಳನ್ನು ಕಿತ್ತು ತೆಗೆಯುವುದೇ ಹರಸಾಹಸವಾಗಿತ್ತು. ಇಳಿಜಾರು, ಕಲ್ಲುಭೂಮಿ, ಜೌಗುಭೂಮಿ, ಮರಳುಭೂಮಿ ನೀಡಿದ್ದರಿಂದಾಗಿ ಸಾಗುವಳಿಯೂ ಕಷ್ಟವಾಯಿತು. ಕಾಡಿನಲ್ಲಿ ಪ್ರಾಣಿ-ಪಕ್ಷಿಗಳ ಬೇಟೆ, ಮೀನು-ಏಡಿ ಹಿಡಿಯುವಿಕೆ, ಅಣಬೆ-ಜೇನು ಕೀಳುವಿಕೆಯಲ್ಲಿತೊಡಗಿ, ಆಹಾರದ ಬಳ್ಳಿ-ಸೊಪ್ಪುಗಳು, ಗೆಡ್ಡೆ ಗೆಣಸುಗಳನ್ನು ಸಂಗ್ರಹಿಸಿ ತಂದು ಆಹಾರವಾಗಿ ಉಂಡು ಸಂತೃಪ್ತ ಜೀವನ ನಡೆಸುತ್ತಿದ್ದ ಸಂತ್ರಸ್ತರಿಗೆ ಕಡೇಪಕ್ಷ ಸಾಮಾಜಿಕ ಅರಣ್ಯವೂ ಇಲ್ಲದಿರುವುದು ತೊಂದರೆಯಾಗಿದೆ.
ಜಲಾಶಯದ ನಿರ್ಮಾಣದಿಂದಾಗಿ ಇವರ ಊರೆಲ್ಲ ಮುಳುಗಡೆಯಾದರೂ ಇವರಿಗೆ ಅದರಿಂದ ಒಂದು ಹನಿನೀರೂ ಸರಬ ರಾಜಾಗುವುದಿಲ್ಲ, ಆಶ್ವಾಸನೆಯಿತ್ತಂತೆ ಯಾವ ಕುಟುಂಬಕ್ಕೂ ಈ ಯೋಜನೆಯಿಂದ ನೌಕರಿ ಭಾಗ್ಯ ಸಿಗಲಿಲ್ಲ. ಇನ್ನು ೨ನೇ ಮತ್ತು ೩ನೇ ಹಂತದಲ್ಲಿ ಸ್ಥಳಾಂತರ ಗೊಂಡವರಿಗೆ ಕ್ರಮವಾಗಿ ಜೋಯಿಡಾ ಟೌನ್‌ಶಿಪ್ ಹಾಗೂ ಕ್ಯಾಸೆಲ್ ರಾಕ್ ಟೌನ್‌ಶಿಪ್ ಎಂಬ ೨ ಪುನರ್ವಸತಿ ಕೇಂದ್ರಗಳನ್ನು ಗುರುತಿಸಲಾಯಿತು. ವಿಪರ್ಯಾಸವೆಂದರೆ, ಕರ್ನಾಟಕ ವಿದ್ಯುತ್ ನಿಗಮವಾಗಲೀ, ಕಾರವಾರ ಜಿಲ್ಲಾ ಪಂಚಾಯತ್ ಆಗಲೀ ಅಲ್ಲಿ ಟೌನ್‌ಶಿಪ್ ನಿರ್ಮಿಸಲಿಲ್ಲ, ಸಂತ್ರಸ್ತರು ಅಲ್ಲಿಗೆ ಬಂದು ವಾಸಿಸಲಿಲ್ಲ. ಆದರೆ ಕಾಗದಪತ್ರ ಗಳಲ್ಲಿ ಅವೆಲ್ಲವೂ ನಡೆದಿದೆ.
ಯಾವುದೇ ಮೂಲಸೌಕರ್ಯಗಳಿಲ್ಲದೆ ಈ ಕೇಂದ್ರಗಳು ಮತ್ತೆ ಕಾಡಾಗಿವೆ. ಯೋಜನೆಯಿಂದಾಗಿ ಸ್ಥಳಾಂತರಗೊಂಡವರಿಗೆ ತಮಗೆ ದೊರೆತ ನಿವೇಶನ ಎಲ್ಲಿದೆಯೆಂಬುದೇ ಗೊತ್ತಿಲ್ಲ. ಹೀಗಾಗಿ ಸಂತ್ರಸ್ತರೆಲ್ಲ ಕೆಲಸ ಅರಸಿ ಗೋವಾ, ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದಾರೆ. ಅವಿಭಕ್ತವಾಗಿದ್ದವರ ಬದುಕೀಗ ದಿಕ್ಕಾಪಾಲಾಗಿದೆ. ಒಟ್ಟಿನಲ್ಲಿ, ಅಭಿವೃದ್ಧಿ ಹೆಸರಲ್ಲಿ ಕೈಗೊಂಡ ಈ ಯೋಜನೆ ತನಗಾಗಿ ತ್ಯಾಗ ಮಾಡಿದವರನ್ನು ಇನ್ನಿಲ್ಲದಂತೆ ನಲುಗಿಸಿದೆ. ಸರಕಾರ ಇನ್ನಾದರೂ ಎಚ್ಚೆತ್ತು ಎಲ್ಲೆಲ್ಲಿ ನಿವೇಶನ ಹಂಚಲಾಗಿದೆಎಂಬುದನ್ನು ಸಂತ್ರಸ್ತರಿಗೆ ತಿಳಿಯಪಡಿಸ ಬೇಕಾಗಿದೆ. ಜೋಯಿಡಾ-ಕ್ಯಾಸೆಲ್‌ರಾಕ್ ಟೌನ್‌ಶಿಪ್ ಗಳನ್ನು ನಿರ್ಮಿಸಿ, ಸಂತ್ರಸ್ತರು ಅಲ್ಲಿ ಬದುಕು ಕಟ್ಟಿಕೊಳ್ಳುವಂತೆ ಪ್ರೇರೇಪಿಸಬೇಕಿದೆ. ಅತಿಕ್ರಮಣ ಕಾರರನ್ನು ಒಕ್ಕಲೆಬ್ಬಿಸಿ ನೈಜ ಫಲಾನುಭವಿಗಳಿಗೆ ನಿವೇಶನ ಗಳನ್ನು ದೊರಕಿಸಿಕೊಡಬೇಕಿದೆ.