ಪುಸ್ತಕ ಬರೆದು ನೋಡು, ಬರೆದು ಪ್ರಕಟಿಸಿ ನೋಡು !
ಅನುಭವ
ಡಾ.ದಯಾನಂದ ಲಿಂಗೇಗೌಡ
ನಿಮಗೆ ಎಂದಾದರೂ ಒಂದು ಪುಸ್ತಕ ಪ್ರಕಟಿಸಬೇಕು ಎಂದು ಅನಿಸಿದೆಯಾ?. ಹಾಗೇನಾದರೂ ಅನ್ನಿಸಿದ್ದರೆ ಮತ್ತು ನಿಮ್ಮ ಬರವಣಿಗೆ ಮುಗಿಸಿದ್ದರೆ ಎಂದರೆ ನಿಮ್ಮ ಶೇಕಡ30ರಷ್ಟು ಕೆಲಸವಾಗಿದೆ ಎಂದರ್ಥ. ಬರೆದ ವಿಚಾರಗಳನ್ನು ಟಂಕಿಸಿ , ಮುದ್ರಣ ದೋಷಗಳನ್ನು ತಿದ್ದಿ, ಮುದ್ರಣಕ್ಕೆ ಪೂರಕವಾದ ತಂತ್ರಾಂಶದಲ್ಲಿ ಅಳವಡಿಸಿದರೆ ಶೇಕಡ50ರಷ್ಟು ಕೆಲಸ ಮುಗಿದಿದೆಯಂತೆಯೇ ಸರಿ.
ನೀವು ಟಂಕಿಸಿದ ತಂತ್ರಾಂಶ, ಮುದ್ರಣಕ್ಕೆ ಪೂರಕವಾಗಿ ಇಲ್ಲದಿದ್ದರೆ ನೀವು ಮತ್ತೆ ಟಂಕಿಸಬೇಕಾದ ಅವಶ್ಯಕತೆ ಬರಬಹುದು. ಇಷ್ಟೆಲ್ಲ ಮಾಡಿದ ಮೇಲೆ ನಿಮಗೆ ಬೇರೊಂದು ಪ್ರಪಂಚದ ಅನುಭವ ತೆರೆದುಕೊಳ್ಳುತ್ತದೆ. ’ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು’ ಎಂಬ ದೊಡ್ಡ ಮಟ್ಟದ ಅನುಭವ ಮಾಡಲು ಸಾಧ್ಯವಿಲ್ಲದವರು, ಸಣ್ಣ ಮಟ್ಟದಲ್ಲಿ ’ಪುಸ್ತಕ ಬರೆದು ನೋಡುಪುಸ್ತಕ ಬರೆದು ಪ್ರಕಟಿಸಿ ನೋಡು’ ಎಂಬ ಸಣ್ಣ ಮಟ್ಟದ ಅನುಭವಗಳನ್ನು ಪಡೆದುಕೊಳ್ಳಬಹುದು.
ಪುಸ್ತಕ ಬರೆದ ಮೇಲೆ, ಎಲ್ಲರಿಗೂ ದೊಡ್ಡ ಪ್ರಕಾಶಕರ ಬ್ಯಾನರ್ ನಡಿಯಲ್ಲಿ ಪುಸ್ತಕ ಪ್ರಕಟಣೆಗೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ದೊಡ್ಡ ಪ್ರಕಾಶಕರನ್ನು ಸಂಪರ್ಕಿಸುವುದೇ ಒಂದು ದೊಡ್ಡ ಕೆಲಸ. ತಮ್ಮದೇ ಜಾಲತಾಣ ಹೊಂದಿರುವ ದೊಡ್ಡ ಪ್ರಕಾಶಕರು, ತಮ್ಮ ಜಾಲತಾಣದಲ್ಲಿ ಬರಹಗಾರರು ಕಳಿಸಬೇಕಾದ ವಿಳಾಸವನ್ನು ಕೊಟ್ಟಿರುತ್ತಾರೆ. ಅದರ ಕೆಳಗಡೆ ’ನಮ್ಮಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಆರು ತಿಂಗಳು ಒಳಗೆ ಬಾರದೇ ಇದ್ದರೆ, ಪುಸ್ತಕ ತಿರಸ್ಕೃತ ವಾಗಿದೆ ಎಂದುಅಂದುಕೊಳ್ಳಿ ’ ಎಂಬ ಹಿತ ನುಡಿಯು ಇರುತ್ತದೆ.
ಅಂದರೆ ನೂರಾರು ಪುಟಗಳನ್ನು ಬರೆದ ಲೇಖಕರಿಗೆ , ಒಂದು ಸಾಲು ಉತ್ತರಿಸಲು ಕೂಡ ವ್ಯವಧಾನ ಇರುವುದಿಲ್ಲ. ಹೀಗೆ ಒಂದೆರಡು ದೊಡ್ಡ ಪ್ರಕಾಶರಿಗೆ ಕಳುಹಿಸಿದ ಹಸ್ತಪ್ರತಿಯ ಉತ್ತರವನ್ನು ನಿರೀಕ್ಷಿಸುವುದರಲ್ಲಿ, ನಿಮಗೆ ಒಂದು ವರ್ಷ ಆರಾಮ ವಾಗಿ ಕಳೆದು ಹೋಗಿರುತ್ತದೆ ಈ ರೀತಿಯ ಅನುಭವದ ನಂತರ, ಎರಡನೇ ಹಂತದಲ್ಲಿ ನೀವು ಸಣ್ಣ ಪುಟ್ಟ ಪ್ರಕಾಶಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತೀರಿ.
ನಿಮ್ಮ ಬರಹ ಕವನ ವಾಗಿದ್ದರೆ ಮೂಸಿ ನೋಡದವರೇ ಹೆಚ್ಚು(ಕವಿಗಳ ಕ್ಷಮೆಯಿರಲಿ). ’ಕವನ ಸಂಕಲನ ಪ್ರಕಟಿಸುವಖುದ್ದು ಖುಶಿ ಕವಿಗೆ , ’ಖುದ್ ಕುಶಿ’ ಪ್ರಕಾಶಕರಿಗೆ’ ಎಂದು ಮೂಗು ಮುರಿಯುವ ಪ್ರಕಾಶಕರೆ ಹೆಚ್ಚು. ಆಗೇನಾದರೂ ಕವನ ಪ್ರಕಟಿಸುವ ಪ್ರಕಾಶರು ನಿಮಗೆ ಸಿಕ್ಕಿದ್ದರೆ, ನಿಮ್ಮ ಪೂರ್ವಜನ್ಮದ ಪುಣ್ಯದಫಲಎಂದು ತಿಳಿದುಕೊಳ್ಳಲು ಅಡ್ಡಿಯೇನು ಇಲ್ಲ. ಆದರೆ ಅದನ್ನು ಕೊಂಡು ಓದುವ ಓದುಗರ ಸಿಕ್ಕರೆ, ನಿಮ್ಮ ತಂದೆ ತಾಯಿಯ ಅಥವಾ ನಿಮ್ಮ ಸಂಗಾತಿಗಳು ಮಾಡಿದ ಪೂಜೆಯ -ಲ ಅಷ್ಟೇ.
ಇನ್ನು ಬೇರೆ ಪ್ರಕಾರಗಳ ಪುಸ್ತಕಗಳಾದರೆ, ಕವನ ಪ್ರಕಟಿಸುವ ಪ್ರಕಾಶಕರನ್ನು ಹುಡುಕುವಷ್ಟು ಕಷ್ಟವಾಗಲಿಕ್ಕಿಲ್ಲ. ಬಹಳಷ್ಟುಪ್ರಕಾಶಕರು ತಾವು ಪ್ರಕಟಿಸುವ ಪುಸ್ತಕಗಳನ್ನು ಓದುವುದೇ ಇಲ್ಲ ಎಂದರೆ ನೀವು ನಂಬಲೇಬೇಕು. ಪ್ರಕಾಶಕರಿಗೆ ಹೊಸ ಲೇಖಕರ ಪುಸ್ತಕ ಗಳನ್ನು ಪ್ರಕಟಿಸುವ ಇಚ್ಛೆ ಇರುತ್ತದೆ. ಇದಕ್ಕೆ ಕಾರಣ ಹೊಸ ಲೇಖಕರ ಪುಸ್ತಕಗಳನ್ನು ಸರ್ಕಾರವು ಕೊಂಡುಕೊಳ್ಳುವ ಒಂದು ನೀತಿ ಕಾರಣ. ಬಹಳಷ್ಟು ಪ್ರಕಾಶಕರು ಸರ್ಕಾರದ ಗ್ರಂಥಾಲಯಕ್ಕೆ ಮಾರುವುದಕ್ಕೆ ಎಂದೇ ಪ್ರಕಟಿಸಲು ಒಪ್ಪುತ್ತಾರೆ.
ತಿಂಗಳು ಗಟ್ಟಲೆ, ವರ್ಷಗಟ್ಟಲೆ ಲೇಖಕರನ್ನು ಕಾಯಿಸಿ- ಬೇಯಿಸಿ, ಪುಸ್ತಕ ಪ್ರಕಟಿಸಿದ ಬಹಳಷ್ಟು ಪ್ರಕಾಶಕರಿಗೆ, ಪ್ರಕಟಿಸಿದ ಪುಸ್ತಕಗನ್ನು ಮಳಿಗೆಗಳಿಗೆ ತಲುಪಿಸುವ ಶಕ್ತಿ ಇರುವುದಿಲ್ಲ. ಹಾಗಾಗಿ ನೀವು ಪ್ರಕಟಿಸಿದ ಪುಸ್ತಕ, ಮಳಿಗೆಗಳನ್ನು ತಲುಪುತ್ತದೆ ಎಂಬ ಯಾವುದೇ ಗ್ಯಾರಂಟಿ ಇಲ್ಲ. ಕೆಲವೊಂದು ಪುಸ್ತಕ ಮಳಿಗೆಗಳು, ತಮ್ಮ ವಿರುದ್ಧ ಸಿದ್ದಂತಾದ ಪುಸ್ತಕಗಳನ್ನು ಮಾರು ವುದಿಲ್ಲ. ಹಿಂದೂ ಧಾರ್ಮಿಕ ಪುಸ್ತಕಗಳಿಗೆ ಎಷ್ಟೇ ಬೇಡಿಕೆ ಇದ್ದರೂ, ಮಾರದ ಮಳಿಗೆಗಳಿವೆ.
ಹಾಗೂ ಹೀಗೂ ಬಹಳ ಒತ್ತಾಯದ ಮೇರೆಗೆ, ಪ್ರಕಾಶಕರು ಪುಸ್ತಕಗಳನ್ನು ತಲುಪಿಸದರೂ ಪ್ರದರ್ಶನವಾಗದೆ, ಗೋದಾಮಿ ನಲ್ಲಿ ಇರುವ ಸಾಧ್ಯತೆ ಹೆಚ್ಚು. ಹಾಗೆ ಪುಸ್ತಕಗಳನ್ನು ಮಳಿಗೆಯವರು ಪಡೆಯಲು ಒಪ್ಪಿದರೂ, ಗರಿಷ್ಠ ಮೂರು ಪುಸ್ತಕಗಳನ್ನು ಪುಕ್ಸಟ್ಟೆಯಾಗಿ ತೆಗೆದುಕೊಂಡು ತಮ್ಮ ಗೋಧಾಮಿನಲ್ಲಿ ಇಟ್ಟಿರುತ್ತಾರೆ. ಪುಕ್ಸಟ್ಟೆ ಪಡೆದ ಪುಸ್ತಕಗಳನ್ನು, ಮಳಿಗೆಗಳಲ್ಲಿ ಎಲ್ಲರಿಗೂ ಕಾಣುವಂತೆ ಇಡುವುದು ಅಪರೂಪ. ಹಾಗೇನಾದರೂ ನಿಮ್ಮ ಪುಸ್ತಕ ಮಳಿಗೆಗಳಲ್ಲಿ ಎಲ್ಲರಿಗೂ ಕಾಣುವಂತೆ ಇಟ್ಟರಂತೂ ಅದು ನಿಮ್ಮ ಜನ್ಮ ಜನ್ಮಾತರದ ಪುಣ್ಯದ ಫಲ ಎಂದು ತಿಳಿದುಕೊಳ್ಳಬಹುದು.
ಮೊದಲಾದರೆ ಕನಿಷ್ಠ500ಅಥವಾ ಸಾವಿರ ಪ್ರತಿಗಳನ್ನು ಮುದ್ರಿಸುವ ಪರಿಪಾಠಗಳಿತ್ತು. ಆದರೆ ಅಭಿವೃದ್ಧಿ ಹೊಂದಿ ದತಂತ್ರಜ್ಞಾನದಿಂದ ಕನಿಷ್ಠ ಒಂದು ಪುಸ್ತಕವನ್ನೂ ಮುದ್ರಿ ಸಲು ಸಾಧ್ಯ. ಹಾಗಾಗಿ ಮೊದಲ ಬಾರಿಗೆ ಪ್ರಕಾಶಕರು ಮೊದಲಪುಟದಲ್ಲಿ ಒಂದು ಸಾವಿರ ಪ್ರತಿಗಳು, ಎರಡು ಸಾವಿರ ಪ್ರತಿಗಳು ಎಂದು ಮುದ್ರಿಸಿದ್ದರೂ, ಅವುಗಳಲ್ಲಿ ಬಹಳಷ್ಟು ಸೊನ್ನೆಗಳುಇಲ್ಲದಿರುವ ಸಾಧ್ಯತೆ ಹೆಚ್ಚು.
ಇನ್ನು ಸಂಭಾವನೆಯ ಬಗ್ಗೆ ಹೇಳುವುದಾದರೆ ಪುಸ್ತಕ ಪ್ರಕಟಣೆ ಮಾತ್ರದಿಂದಲೇ ತಮ್ಮ ಜೀವನವನ್ನು ರೂಪಿಸಿಕೊಂಡಲೇಖಕರು ಬಹಳ ಅಪರೂಪ. ಬೈರಪ್ಪನಂತ ದೊಡ್ಡ ದೊಡ್ಡ ಲೇಖಕರೇ, ಪುಸ್ತಕದ ರಾಯಧನದಲ್ಲಿ ಜೀವಿಸುವಂತಹ ಪರಿಸ್ಥಿತಿಸದ್ಯಕ್ಕೆ ಕನ್ನಡದಲ್ಲಿ ಇಲ್ಲ ಎನ್ನುತ್ತಾರೆ. ಆಯುಷ್ಯ ಮುಗಿಸಿದ ಪ್ರಸಿದ್ಧ ಲೇಖಕರೂ ಕೂಡ, ತಮ್ಮ ಪುಸ್ತಕ ಎಷ್ಟು ವ್ಯಾಪಾರ ವಾಯಿತು ಎಂದು ಪ್ರತಿದಿನ ಅಂಗಡಿಯಲ್ಲಿ ಬಂದು  ವಿಚಾರದಷ್ಟು ಭ್ರಮ ನಿರಶನ ಗೊಂಡಿದ್ದರು, ಎಂದರೆ ಪುಸ್ತಕವ್ಯಾಪಾರದ ವ್ಯಾಪ್ತಿ ನಿಮಗೆ ನಿಮ್ಮ ಊಹೆಗೆ ನಿಲುಕಬಹುದು.
ಇನ್ನು ಸಂಭಾವನೆಯ ವಿಷಯ ಮಾತನಾಡಬೇಕಾದರೆ ಹಣದ ರೂಪದಲ್ಲಿ ರಾಯದನವನ್ನು ಕೊಡುವ ಪರಿಪಾಠ ಬಹುತೇಕ ಪ್ರಕಾಶಕರಿಗೆ ಇಲ್ಲ. ನಿಮ್ಮಿಂದ ಹಣ ಪಡೆಯದಿದ್ದರೆ ಅದೇ ನಿಮ್ಮ ಪುಣ್ಯ! (ಆಗೇ ಮಾಡುವವರೂ ಇದ್ದಾರೆ ). ಬಹಳಷ್ಟು ಪ್ರಕಾಶಕರು, ತಮ್ಮ ಶಕ್ತಿಗೆ ತಕ್ಕಂತೆ ಐವತ್ತೋ, ನೂರೋ ಪುಸ್ತಕಗಳನ್ನು ನಿಮಗೆ ರಾಯಧನ ರೂಪದಲ್ಲಿ ಕೊಟ್ಟು ಕೈ ತೊಳೆದು ಕೊಳ್ಳುತ್ತಾರೆ.
ಇನ್ನು ಪುಸ್ತಕ ಪ್ರಚಾರಕ್ಕೆ ಪ್ರಕಾಶಕರು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಸರ್ವ ಕಾಲಿಕ ಸತ್ಯ. ನಿಮ್ಮ ಹೆತ್ತ ಪುಸ್ತಕದ ಪ್ರಚಾರ ನೀವೇ ಮಾಡಿಕೊಳ್ಳಬೇಕು. ಈಗ ಜಾಲತಾಣ ಇರುವುದರಿಂದ, ಇದನ್ನು ಹೇಗೋ ನಿಭಾಯಿಸಬಹುದು. ಆದರೆ ನಮ್ಮ ಹಿಂದಿನ ತಲಮಾರಿನ ಲೇಖಕರು ಇದಕ್ಕೆ ಯಾವ ದಾರಿ ಕಂಡುಕೊಂಡಿದ್ದರೋ ಗೊತ್ತಿಲ್ಲ. ಪದೇ ಪದೇ ಜಾಲತಾಣ ದಲ್ಲೂ ನಮ್ಮ ಪುಸ್ತಕದ ಬಗ್ಗೆ ನಾವೇ ಹೇಳಿಕೊಳ್ಳಬೇಕು. ಹಾಗೆ ಕೇಳಿಕೊಳ್ಳುವ ಮನಸ್ಥಿತಿಯಲ್ಲಿ ನೀವಿಲ್ಲದಿದ್ದರೆ ನೀವು ಪುಸ್ತಕ ದ ಮಾರಾಟದ ಆಸೆಯನ್ನು ಬಿಟ್ಟುಬಿಡಿ.
ನಿಮ್ಮ ಡಂಗೂರವನ್ನು ನೀವೇ ಸಾರಿಕೊಳ್ಳುವ ಮನಸ್ಥಿತಿ ಇದ್ದರೆ ಮಾತ್ರ ನಿಮ್ಮ ಪುಸ್ತಕಕ್ಕೆ ಸ್ವಲ್ಪ ಪ್ರಚಾರ ಸಿಗಬಹುದು. ನಿಮ್ಮ ಡಂಗೂರವನ್ನು ನೀವೇ ಸಾರಿ ಕೊಂಡರೂ, ಫೇಸ್ ಬುಕ್ ನಲ್ಲಿ ಬರುವ ಹೆಚ್ಚು ಹೆಚ್ಚು ಲೈಕ್‌ಗಳಿಂದ ನಿಮ್ಮ ಪುಸ್ತಕವನ್ನು ಹೆಚ್ಚು ಕೊಂಡುಕೊಳ್ಳುತ್ತಾರೆ ಎನ್ನುವ ಆಸೆಯನ್ನು ಬಿಟ್ಟುಬಿಡಿ. ಫೇಸ್ಬುಕ್‌ನಲ್ಲಿ ಬರುವ ಲೈಕುಗಳಿಗೂ ನಿಮ್ಮ ಪುಸ್ತಕ ವ್ಯಾಪಾರಗಳಿಗೆ ಯಾವುದೇ ಸಂಬಂಧವಿಲ್ಲ. ಫೇಸ್ಬುಕ್ಕಿನಲ್ಲಿ ಲೇಖನ ದೊಡ್ಡದಾದರೆಓದದ ಜನರು, ನಿಮ್ಮ ಹಲವಾರು ಪುಟಗಳ ಪುಸ್ತಕಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನೀವು ನಂಬಿಕೊಂಡರೆ ಅದು ನಿಮ್ಮ ತಪ್ಪು ಅಷ್ಟೇ. ಪುಸ್ತಕಗಳನ್ನು ಓದುವ ವರ್ಗ ಎಲ್ಲಿದೆ?ಆ ವರ್ಗಕ್ಕೆ ನಿಮ್ಮ ಪುಸ್ತಕಗಳು ಹೇಗೆ ಪುಸ್ತಕ ಬಿಡುಗಡೆ ಬಗ್ಗೆ ಹೇಗೆ ಮಾಹಿತಿ ಕೊಡಬೇಕು? ಎಂಬುದು ಇನ್ನು ನಿಗೂಢವೆ.
ಫ್ಲಿಪ್‌ಕಾರ್ಟ್/ ಅಮೆಜಾನ್‌ನಂತ ಜಾಲತಾಣಗಳು ಬಂದಿರುವುದರಿಂದ ಸದ್ಯಕ್ಕಂತೂ ಪುಸ್ತಕ ಅಂಗಡಿಗಳ ಮರ್ಜಿಗೆ ಬಿಡುವ ಅವಶ್ಯಕತೆ ಕಡಿಮೆಯಾಗಿದೆ. ಕನ್ನಡದಲ್ಲಿ ವರ್ಷಕ್ಕೆ10000ಪುಸ್ತಕಗಳು ಪ್ರಕಟವಾಗುತ್ತದೆ ಎಂದು ಯಾರೋ ಹೇಳಿದ ನೆನಪು. ಅಷ್ಟೆಲ್ಲ ಪುಸ್ತಕಗಳನ್ನು ಅಂಗಡಿಗಳ ಮಳಿಗೆಯವರು ಪ್ರದರ್ಶನಕ್ಕೆ ಇಡುವುದು ಅಸಾಧ್ಯವೇ ಸರಿ. ಇದಕ್ಕೆ ಅವರನ್ನು ದೂಷಿಸಿ ಏನು ಪ್ರಯೋಜನವಿಲ್ಲ. ಇನ್ನು ಅಂತರ್ಜಾಲದಲ್ಲಿ ಪುಸ್ತಕ ಬಿಡುಗಡೆ ಮಾಡಿದರೆ ಸಾಲದು. ಅದು ಓದುವರನ್ನು ತಲುಪಬೇಕಾದರೆ ಅಲ್ಲಿ ಯೂ ಕೂಡ ಜಾಹಿರಾತು ಕೊಡಬೇಕು. ಇಲ್ಲಿ ಪ್ರತಿ ಯೊಂದು ‘ಕ್ಲಿಕ್’ ಕೊಡ ಒಂದು ಬೆಲೆ ಇದೆ. ನಿಮ್ಮ ಪುಸ್ತಕ ವನ್ನು ಯಾರಾದರೂ ವೀಕ್ಷಿಸಿದರೆ ಪ್ರತ್ಯೇಕ ಬೆಲೆ ಕೊಡ ಬೇಕು.
ಪುಸ್ತಕ ಪ್ರೇಮಿಗಳು ಅಂತರ್ಜಾಲದಲ್ಲಿ ಹುಡು ಕಾಡಿದರೆ, ನಿಮ್ಮ ಪುಸ್ತಕ ಎದ್ದು ಕಾಣುವ ಹಾಗೆ ಮಾಡಲು ಕೂಡ ಹಣ ಕೊಡ ಬೇಕು. ಇವೆಲ್ಲ ಮಾಡಿಯೂ ನಿಮ್ಮ ಪುಸ್ತಕ ವ್ಯಾಪಾರವಾಗದೆ ಇದ್ದರೆ, ಪುಸ್ತಕವನ್ನು ಉಚಿತ ವಾಗಿ ಅದೇ ಜಾಲತಾಣಗಳಿಗೆ ನೀಡಬಹುದು !.
ಬರಹಗಾರರಎಲ್ಲಾಕಷ್ಟಗಳನ್ನು ನೋಡಿ, ಅದಕ್ಕೆ ಪೂರಕವಾಗಿ ಅದಕ್ಕೊಂದು ಉದ್ಯಮ ಹುಟ್ಟಿಕೊಂಡಿದೆ. ಇದು ಸ್ವಯಂ ಪ್ರಕಾಶನವನ್ನು ಉತ್ತೇಜಿಸುವ ಉದ್ಯಮ. ಇಲ್ಲಿ ನೀವು ಬರೆದ ಪುಸ್ತಕವನ್ನು ಕೇವಲ ಒಂದೇ ದಿನದಲ್ಲಿ ಪ್ರಕಟಿಸ ಬಹುದು ಅದಕ್ಕೆ ಬೇಕಾದ ಅವಶ್ಯಕತೆ ಎ ಏರ್ಪಾಡುಗಳನ್ನು ಉದ್ಯಮಗಳು ಮಾಡಿಕೊಡುತ್ತವೆ. ಆದರೆ ಇದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ನೀವೇ ಭರಿಸಬೇಕು. ಮುದ್ರಣಕ್ಕೆ ಹಣ, ಪುಸ್ತಕದ ಅಂಗಡಿಗಳಲ್ಲಿ ಇಡುವುದಕ್ಕೆ ಪ್ರತ್ಯೇಕ ಹಣ, ಪ್ರಚಾರಕ್ಕೆ ಪ್ರತ್ಯೇಕ ಹಣ, ಬಿಡುಗಡೆಗೆ ಪ್ರತ್ಯೇಕ ಹಣ ಹೀಗೆ ಪಟ್ಟಿ ಸಾಗುತ್ತದೆ.
ನಿಮಗೆ ಪ್ರತಿಷ್ಠಿತರ ಕೈಯಿಂದ ಪುಸ್ತಕವನ್ನು ಬಿಡುಗಡೆ ಮಾಡಬೇಕಾ ದರೆ ಕೂಡ ಅದಕ್ಕೆ ಪ್ರತ್ಯೇಕ ಹಣ ಪಾವತಿ ಮಾಡಿದರೆ, ವ್ಯವಸ್ಥೆ ಮಾಡುತ್ತಾರೆ. ಹೀಗೆ ಬಿಡುಗಡೆಯಾಗುವ ಪುಸ್ತಕ, ಅತಿ ಹೆಚ್ಚು ಮಾರಾಟವಾದ ‘ಟಾಪ್ ಟೆನ್’ ಪುಸ್ತಕಗಳ ಸಾಲಿಗೆ ಸೇರಿಸಬೇಕೆಂದರೂ ಕೂಡ ಇವರು ತಾವೇ ಪುಸ್ತ ಕನ್ನು ಕೊಂಡುಕೊಂಡು ಸಹಾಯ ಮಾಡುತ್ತಾರೆ!. ರಾಜ್ಯ ಮಟ್ಟದಲ್ಲಿ,ರಾಷ್ಟ್ರೀಯ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆ ಇದೆ. ಆದರೆ ಇದಕ್ಕೆ ಲಕ್ಷಾಂತರ ಖರ್ಚಾಗುತ್ತದೆ. ಇಷ್ಟೊಂದೆ ಖರ್ಚು ಮಾಡಿ ಪುಸ್ತಕ ಪ್ರಕಟ ಮಾಡುವ ಜನರುಇದ್ದಾರೆಎಂದರೆ ನೀವು ನಂಬಲೇಬೇಕು.
ಇವೆಲ್ಲ ನಕಾರತ್ಮಕ ಪರಿಸ್ಥಿಯಲ್ಲೂ ಪುಸ್ತಕ ಪ್ರಕಟಿಸಿ ಯಶಸ್ಸಾಗಿರುವ ಲೇಖಕರು ಇದ್ದಾರೆ. ಆದರೆ ಅಂತವರು ಸಂಖ್ಯೆ ಕಡಿಮೆ.ಅಂತವರಿಗೆ ಈ ಲೇಖನ ಅನ್ವಯವಾಗು ದಿಲ್ಲ. ಈ ಲೇಖನ ಶೇಕಡಾ ತೊಂಬತ್ತು ಪುಸ್ತಕಗಳಿಗೆ ಅನ್ವಯ ಎಂದರೆ ತಪ್ಪಾಗ ಲಿಕ್ಕಿಲ್ಲ. ಪುಸ್ತಕಗಳು ವಿಳಾಸವಿಲ್ಲದ ಪತ್ರಗಳು ಅಂತ ಓಶೋ ಹೇಳುತ್ತಿದ್ದರಂತೆ . ಆದರೆ ಇಂದು ವಿಳಾಸ ಮಾತ್ರವಲ್ಲ , ಯಾರೂ ಓದಿರದ ಪತ್ರಗಳಾಗುತ್ತೀವೇ. ಕೊಂಡು ಕೊಂಡ ವರೂ ಓದುತ್ತಾರೆ ಎಂಬ ಗ್ಯಾರಂಟಿ ಇಲ್ಲ.
ಓದುವ ಅಭ್ಯಾಸ ಮೊಬೈಲ್ ಯುಗದಲ್ಲಿ ಕಡಿಮೆಯಾಗುತ್ತಿದೆ. ಪುಸ್ತಕ ಓದುವಷ್ಟು ತಾಳ್ಮೆ ಉಳಿದುಕೊಂಡಿಲ್ಲ. ಪುಸ್ತಕದ ಸಾರಾಂಶವನ್ನು ಓದಿ ಹೇಳುವ ಜಾಲತಾಣಗಳಿಗೆ, ಪುಸ್ತಕಕ್ಕಿಂತ ಹೆಚ್ಚು ಬೇಡಿಕೆ. ವಿಪರ್ಯಾಸ ವೆಂದರೆ ಆಡಿಯೋ ಬುಕ್ ಮಾಡುವವನೂ ಕೂಡ ಪುಸ್ತಕ ಓದಿರುವುದಿಲ್ಲ. ಹರಿಬಿರಿಯಲ್ಲಿ ಯಾರೋ ತಯಾರು ಮಾಡಿಕೊಟ್ಟ ಸಾರಾಂಶವನ್ನು ಚಂದ ವಾಗಿ ರೆಕಾರ್ಡ್ ಮಾಡಿರು ತ್ತಾನೆ. ಇನ್ನು ಕೃತಕ ಬುದ್ದಿಮಾತ್ತೆ ಯನ್ನು ಉಪಯೋಗಿಸಿ ಓದುವ ತಂತ್ರಜ್ಞಾನ ಬೆಳವಣಿಗೆ ಯಾದರೆ , ಪುಸ್ತಕವನ್ನು ಕಂಪ್ಯೂಟರ್ಗಳು ಮಾತ್ರ ಓದುತ್ತವೆಯೇನೋ !! ಒಟ್ಟಿನಲ್ಲಿ ಮೊಬೈಲ್ ಯುಗದಲ್ಲಿ ಓದುಗರ ಸಂಖ್ಯೆ ಕಡಿಮೆಯಾಗಿಗುವುದಂತೂ ಸತ್ಯ.
ಕೊನೆಮಾತು:ಪತ್ರಿಕೆಗಳಲ್ಲಿ ಪ್ರಕಟವಾದ ವೈದ್ಯಕೀಯ ಲೇಖನಗಳ ಸಂಗ್ರಹದ ’ಕಂಡದ್ದು ಕಂಡಂಗೆ’ ಬಿಡುಗಡೆಯ ಸಂದರ್ಭ ದಲ್ಲಿ ಪ್ರಕಟಣೆಯ ಮುಳ್ಳಿನ ಹಾದಿಯ ಬಗ್ಗೆ ಬರೆಯಬೇಕೆನಿಸಿತು.