ಶಿಕ್ಷಣದಲ್ಲಿ ಭಾರತೀಯತೆಯ ಆವಾಹನೆಯಾಗಲಿ
ವಿದ್ಯಾಗಮ
ಡಾ.ಮಹಾಬಲೇಶ್ವರ ಎಸ್.ಭಟ್
‘ಗುರುಕುಲಶಿಕ್ಷಾ ವಿಶ್ವಸುದೀಕ್ಷಾ’ ಎಂಬುದು ರಾಷ್ಟ್ರೀಯ ಗುರುಕುಲ ಸಂಗೋಷ್ಠಿಯ ಧ್ಯೇಯಮಂತ್ರ. ಬೆಂಗಳೂರು-ಮಾಗಡಿರಸ್ತೆಯಲ್ಲಿ ಬರುವ ಚನ್ನೇನಹಳ್ಳಿಯಲ್ಲಿನ ‘ವೇದ ವಿಜ್ಞಾನ ಗುರುಕುಲಂ’ ಸಂಸ್ಥೆಯಲ್ಲಿ ನವೆಂಬರ್ ೪ರಿಂದ ೬ ರವರೆಗೆಬಹುದೊಡ್ಡ ಗುರುಕುಲ ಹಬ್ಬ ಆಯೋಜನೆಯಾಗಿದೆ. ಇದು ಗುರುಕುಲ ಜ್ಞಾನಸತ್ರದಲ್ಲಿ ನಡೆಯುವ ಅಂತಾರಾಷ್ಟ್ರೀಯಗುರುಕುಲ ಸಾಧಕರ ಜಾತ್ರೆ.
ಆಶಾವಾದದ ಅರುಣೋದಯ:ಭಾರತಕ್ಕೆ ಸ್ವಾತಂತ್ರ್ಯ ಬಂದು ೭ ದಶಕಗಳಾದರೂ, ಪರಕೀ ಯರ  ದಾಸ್ಯದ ಶೃಂಖಲೆಯಿಂದ ಇನ್ನೂ ಬಿಡಿಸಿಕೊಳ್ಳಲಾಗದೆ ಚಡಪಡಿಸುತ್ತಿದೆ ನಮ್ಮ ಶಿಕ್ಷಣಲೋಕ. ಯಾವಾಗ ಯಾದವರ ದ್ವಾರಕೆ ಮುಳುಗಿತೋ, ಅಲ್ಲಿಂದ ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋಗಲಿಕ್ಕಾಗಿ ಯವನರ ಆಕ್ರಮಣವಾಯಿತು. ಅವರಲ್ಲಿ ಮೊದಲನೆಯವನೇ ಕಾಲಯವನ. ಹೀಗೆ ಶುರುವಾದ ಪರಕೀಯರ ಆಕ್ರಮಣ ಅಲೆಕ್ಸಾಂಡರ್ ನಿಂದ ಮೊದಲ್ಗೊಂಡು ಹೂಣರು, ಕುಷಾಣರವರೆಗೆ ಮುಂದುವರಿ ಯಿತು.
ಆದರೆ ಹಿಂದೂ ಸಮಾಜ ತನ್ನ ಋಷಿ ಪರಂಪರೆಯ, ಭಾರತೀಯ ಜ್ಞಾನ ಪರಂಪರೆಯ ಶಕ್ತಿಯಿಂದ, ಹಳ್ಳಿ ಹಳ್ಳಿಗಳಲ್ಲೂ ಇದ್ದ ಗುರುಕುಲಗಳ ಯುವಶಕ್ತಿಯ ಕಾರಣದಿಂದ ಇಂಥ ಎಲ್ಲ ಆಕ್ರಮಣಗಳನ್ನೂ ಹಿಮ್ಮೆಟ್ಟಿಸುವಲ್ಲಿ ಯಶಕಂಡಿತು. ಗುರುಕುಲಗಳಲ್ಲಿ ಬೋಧ-ಶೋಧಗಳ ಸಾಧನೆ ನಡೆಸಿದಂಥ ಯುವಕ-ಯುವತಿಯರು ಬ್ರಾಹ್ಮ ಶಕ್ತಿಯ ಪ್ರತಿನಿಧಿಗಳಾಗಿ ನಿಂತು, ಭಾರತೀಯ ವಿಚಾರದ ಮೇಲೆ ಪರದಾಸ್ಯದ ವೈಚಾರಿಕ ಆಕ್ರಮಣವಾಗಲಿಕ್ಕೆ ಬಿಡಲಿಲ್ಲ.
ಕ್ಷಾತ್ರಬಲವು ಅಂಥ ಎಲ್ಲ ಆಕ್ರಮಣಗಳನ್ನೂ ಹಿಮ್ಮೆಟಿಸಲು ಶಕ್ಯವಾಯಿತು. ಕೃಷಿ, ಗೋರಕ್ಷೆ, ವಾಣಿಜ್ಯ, ಪರಿಸರ ಪರಿಚರ್ಯೆ ಮುಂತಾದ ಸಮಾಜಧರ್ಮದ ಬಲದಿಂದ ಮತ್ತು ಆಶ್ರಮಧರ್ಮದ ನಿತ್ಯಯೋಗ ಯಾಗಾದಿಗಳಿಂದ ರಾಷ್ಟ್ರವು ಶಕ್ತವಾಗಿತ್ತು. ಅದೇ ‘ಅಭ್ಯುತ್ಥಾನ ಕಾಲ’. ಇಂಥ ಸಂದರ್ಭ ಸೃಷ್ಟಿಯಾಗಿದ್ದು ಚಾಣಕ್ಯ, ಚಂದ್ರಗುಪ್ತ ಮುಂತಾದವರಿಂದ. ಅಲ್ಲಿಂದ ಮುಂದೆ ಬ್ರಾಹ್ಮಬಲದ ಪುನರುತ್ಥಾನದ ಶಕ್ತಿ ಪ್ರಾದು ರ್ಭಾವಗೊಂಡಿತು. ಅದರಲ್ಲಿ ಆದಿ ಶಂಕರಾಚಾರ್ಯರು, ಕುಮಾರಿಲ ಭಟ್ಟ ಮುಂತಾದವರಿಂದ ವೇದ ಪುನರುತ್ಥಾನದ ಮಹಾಜಾಗೃತಿ ಉಂಟಾಯಿತು.
ಕಾಲಾನಂತರದಲ್ಲಿ, ಗೌತಮಬುದ್ಧ, ನಾಗಾರ್ಜುನ, ಗೋರಖನಾಥರು, ಸ್ವಾತ್ಮಾರಾಮ, ಗುರುನಾನಕ್, ವಿದ್ಯಾರಣ್ಯ, ಚೈತನ್ಯ ಮಹಾಪ್ರಭು ಮೊದಲಾದ ಸಾಧಕರು-ಜ್ಞಾನಿಗಳು, ದ್ವೈತ-ಅದ್ವೈತ-ವಿಶಿಷ್ಟಾದ್ವೈ ತ-ಶಕ್ತಿವಿಶಿಷ್ಟಾದ್ವೈತಗಳ ವೈಚಾರಿಕ ಅಧಿಷ್ಠಾ ನದಲ್ಲಿ ರೂಪತಾಳಿದ ಅನೇಕ ಆಚಾರ್ಯರು, ದಾಸರು-ಶರಣರು ಭಾರತೀಯ ಸಮಾಜಶಕ್ತಿಯು ನಂದಿಹೋಗದ ಹಾಗೆ ಉಳಿಸು ವಲ್ಲಿ ಮಹತ್ತರ ಕೊಡುಗೆ ನೀಡಿದರು. ಆದರೆ ಭಾರತದ ಮೇಲೆ ಮೊಘಲರ ಆಕ್ರಮಣ ಆಗಿದ್ದೇ ಆಗಿದ್ದು, ಅಲ್ಲಿಂದ ಮುಂದೆಪೋರ್ಚುಗೀಸರು, ಫ್ರೆಂಚರು, ಡಚ್ಚರು, ಬ್ರಿಟಿಷರು ಎರಗಿದಾಗ ದೇಶವನ್ನು ಮಾನಸಿಕ ದಾಸ್ಯ ಆವರಿಸಿತು.
‘ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮನೆ’ ಎಂಬ ರೀತಿಯಲ್ಲಿ ಪಾಶ್ಚಾತ್ಯರ ಕಡೆ ನಮ್ಮವರು ಮುಖಮಾಡಿದರು. ಅಲ್ಲಿಂದ ನಮ್ಮ ಸಾಹಿತ್ಯ ಮತ್ತುಶಾಸ್ತ್ರಗಳ ಮೇಲೆ, ಶಿಕ್ಷಣ ವ್ಯವಸ್ಥೆಯ ಮೇಲೆ ದುಷ್ಪ್ರಭಾವಗಳು ಉಂಟಾಗಿದ್ದು, ಅನುಕರಣ ಪ್ರವೃತ್ತಿ ಬೆಳೆದುಬಂದಿದ್ದು ನಿಜ. ಶಿಕ್ಷಣಕ್ಕೆ ಭಾರತೀಕರಣದ ದಿವ್ಯಮಂತ್ರ: ಒಳಗಿರುವ ಆಧ್ಯಾತ್ಮಿಕತೆಯ ಚೈತನ್ಯ, ಚಿದ್ರೂಪ, ತನ್ಮಾತ್ರ ಗಳನ್ನು ಪ್ರಾದುರ್ಭಾವಗೊಳಿಸುವ ಮಾನವನನ್ನು, ಅನ್ನಮಯ-ಪ್ರಾಣಮಯ-ಮನೋಮಯ-ವಿಜ್ಞಾನಮಯ-ಆನಂದಮಯ ಸ್ತರಗಳಲ್ಲಿ ವಿಕಾಸಗೊಳಿಸಲಿಕ್ಕೆ ಪೂರಕವಾದ ಶಿಕ್ಷಣವೇ ನಿಜವಾದ ಭಾರತೀಯ ಶಿಕ್ಷಣ.
ಶಾರೀರಿಕವಾಗಿ ಸ್ವಸ್ಥ, ಮಾನಸಿಕವಾಗಿ  ಸಂತುಲಿತ, ಬೌದ್ಧಿಕವಾಗಿ ಸೃಜನಶೀಲ ಹಾಗೂ ಆನಂದಭರಿತ ನೂತನ ವೈಜ್ಞಾನಿಕ ಆವಿಷ್ಕಾರದ ಸ್ವಭಾವದ ಪೂರ್ಣವಿಕಸಿತ ಮನುಷ್ಯನ ನಿರ್ಮಾಣ ಶಿಕ್ಷಣದಿಂದಾಗಬೇಕು. ಇದು ಭಾರತದ ಮಾದರಿ. ನಮ್ಮ ಋಷಿ ಗಳು ಇದ್ದುದೇ ಹೀಗೆ. ಮಾತ್ರವಲ್ಲ, ಧ್ರುವ-ಪ್ರಹ್ಲಾದರಂಥ ಬಾಲಕರು, ಸೀತೆ-ದ್ರೌಪದಿಯರಂಥ ಮಹಿಳೆಯರು, ಗಾರ್ಗಿ -ಮೈತ್ರೇಯಿ-ಅರುಂಧತಿ-ವಿಶ್ವವಾರಾ-ಸಾವಿತ್ರೀ-ಮಹಾಶ್ವೆತಾ ಮುಂತಾದ ಬ್ರಹ್ಮವಾದಿನಿಯರೂ ಹೀಗೇ ಇದ್ದರು.
ಅಂಥ ಭಾರತ ಇಂದಿಗೂ ಜ್ಞಾನಪ್ರಧಾನವಾದ ಜಾಗತಿಕ ಕೇಂದ್ರ. ಗಂಡಸರು ಮಾತ್ರವಲ್ಲದೆ ನಾರಿಯರೂ ವಿದ್ವತ್ ಗೋಷ್ಠಿ ಗಳಲ್ಲಿ, ಮಹಾವಿದ್ವಾಂಸರ ಸಮ್ಮುಖದಲ್ಲಿ, ವಿಚಾರಮಂಡನೆಯ ಜ್ಞಾನಸತ್ರಗಳಲ್ಲಿ ತಮ್ಮ ವಿಚಾರ ಮಂಡಿಸುವಂಥ ಸ್ವಸ್ಥ ಸಮಾಜವಿದು. ಎಲ್ಲ ವರ್ಣದವರು, ಎಲ್ಲ ಆಶ್ರಮದವರು ಸಮನ್ವಯದಿಂದ ಬದುಕುವ ತಾಣವಿದು. ಇಂಥಲ್ಲಿಗೆ ಎಲ್ಲಿಂದಲೋ ಬಂದು ತಮ್ಮ ಗೂಡು ಕಟ್ಟಿದ ಕಾಗೆ-ಗೂಬೆಗಳು ಇಲ್ಲಿನ ನಿವಾಸಿಗಳನ್ನೇ ಪರದೇಶಿಗಳನ್ನಾಗಿಸಿದರಲ್ಲಾ! ಇಂಥ ಘನಘೋರ ಐತಿಹಾಸಿಕ ತಪ್ಪುಗಳು ನಡೆದುಹೋಗಿವೆ. ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇದನ್ನು ಸರಿಪಡಿಸ ಬೇಕಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ‘ಗುರುಕುಲಶಿಕ್ಷಾ ವಿಶ್ವ ಸುದೀಕ್ಷಾ’ ಎಂಬ ಮಂತ್ರದ ಬೆಳಕಿನಲ್ಲಿ ಆಧುನಿಕ ಯುಗಾನುಕೂಲವಾಗಿ ಜ್ಞಾನ,ವಿಜ್ಞಾನ, ತತ್ತ್ವಜ್ಞಾನ, ತಂತ್ರಜ್ಞಾನಗಳೆಲ್ಲವನ್ನೂ ಜೀವನಕ್ಕೆ ಪ್ರಯೋಜನವಾಗುವಂತೆ, ಸ್ವಸ್ಥ ಸಮಾಜದ ಸೃಷ್ಟಿಗೆ ಅನುಕೂಲ ವಾಗುವಂತೆ ರೂಪಿಸುವ ಶಿಕ್ಷಣ ಪದ್ಧತಿಯೇ ಗುರುಕುಲ ಪದ್ಧತಿ. ಶಾಲಾ ಶಿಕ್ಷಣವು ಪರದಾಸ್ಯದ ಪ್ರಕವಾಗಿ ಇಲ್ಲಿಯವರೆಗೆ ದೇಶವನ್ನಾಳಿದೆ. ಹೊಸ ಶಿಕ್ಷಣವೆಂದರೆ ಗುರುಕುಲ ಶಿಕ್ಷಣ, ಅರ್ಥಾತ್ ಸಾಮರಸ್ಯದ ಶಿಕ್ಷಣ.
ಮಾನಸಿಕ ದಾಸ್ಯದಿಂದ ತೊಳಲಾಡುತ್ತಿರುವ ನಮ್ಮ ಸಮಾಜ ದಲ್ಲಿ ಭಾರತೀಯತೆ ಎಂಬುದು ಹೊಸಮಂತ್ರವಾಗಬೇಕು.ಭೌತ ವಿಜ್ಞಾನ, ಸಮಾಜ ವಿಜ್ಞಾನದಂಥ ಎಲ್ಲ ಕ್ಷೇತ್ರಗಳಲ್ಲೂ ಆವಿಷ್ಕಾರ, ಪರಿಷ್ಕಾರ, ಸ್ವೀಕಾರ, ಸಂಸ್ಕಾರ, ಸಾಕ್ಷಾತ್ಕಾರ ಇಷ್ಟೂಆಗಬೇಕಾಗಿದೆ. ಇದು ನಮ್ಮ ಶಿಕ್ಷಣದ ಸೂತ್ರ. ಶಿಕ್ಷಣದ ಭಾರತೀಯತೆ ಎನ್ನುವುದರ ಪಂಚಸೂತ್ರೀ.
ಗುರು ಕುಲೀಕರಣ, ಭಾರತೀಕರಣ ಇವೆಲ್ಲದರ ಭಾವ ಒಂದೇ. ಗುರುಕುಲದ ಪರಿಕಲ್ಪನೆ ಮತ್ತು ಸ್ವರೂಪವೇ ವಿಶಿಷ್ಟ. ಮೊದಲ ಐದು ವರ್ಷಗಳಲ್ಲಿ ‘ಮಾತೆಯೇ ಗುರು, ಮನೆಯೇ ಮೊದಲ ಪಾಠಶಾಲೆ’ ಎಂಬಂಥ ರೀತಿಯ ಸರಳತೆ, ಸಹಜತೆ, ಆನಂದ, ನಂದನವನದ ಭಾವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆವಾಹನೆಗೊಳ್ಳಬೇಕು. ನಲಿಯಬೇಕು, ಕಲಿಯಬೇಕು. ಅಲ್ಲಿಂದ ಸರಸ್ವತಿ ಯನ್ನು ಒಲಿಸಿಕೊಳ್ಳಬೇಕು. ಇದು ಭಾರತೀಯತೆ. ಎಂಟು ನೂರು ನಾನಾ ವಿಧದ ವಿಶ್ವವಿದ್ಯಾಲಯಗಳಲ್ಲಿ, ಅಗಣಿತ ಶಾಲಾ-ಕಾಲೇಜುಗಳಲ್ಲಿ ಅರ್ಥಾತ್ ಮುಖ್ಯವಾಹಿನಿಯ ಶಿಕ್ಷಣ ಸಂಸ್ಥೆಗಳಲ್ಲೂ ಭಾರತೀಕರಣವನ್ನು ಆ  ವಾಹನೆ ಮಾಡಬೇಕು. ಶಾಲೆ ಗಳೆಲ್ಲ ಕುಲಗಳಾಗಬೇಕು. ಅದರಲ್ಲಿ ಮೊದಲಪಾತ್ರ ಮಾತೆಯರದು. ತಂದೆ ಎನಿಸಿಕೊಂಡವನೂ ‘ಪ್ರಜಾನಾಂ ವಿನಯಾಧಾನಾತ್ ರಕ್ಷಣಾತ್ ಭರಣಾದಪಿ|
ಸ ಪಿತಾ…’ ಎಂಬ ಕಾಳಿದಾಸನ ಉಕ್ತಿಯಂತೆ, ಮಕ್ಕಳಿಗೆ ರಕ್ಷಣೆ ಕೊಡುವುದು ಮತ್ತು ಅವರಲ್ಲಿ ಪ್ರಕೃತಿಯ ಜತೆ ಪ್ರೇಮಭಾವ, ವಾತ್ಸಲ್ಯಭಾವ, ಆದರಭಾವ, ಶ್ರದ್ಧಾಭಾವ, ಗೌರವಭಾವ ಇವುಗಳನ್ನೆಲ್ಲ ಆಹಾವನೆ ಮಾಡುತ್ತ ಅಧಿಶೀಲ ಶಿಕ್ಷಣವನ್ನು ನೀಡ ಬೇಕು. ಇದು ತಂದೆ, ತಾಯಿ, ಅಜ್ಜ, ಅಜ್ಜಿ ಈ ರೀತಿಯ ಕುಲಪರಂಪರೆಯಿಂದ ಆಗುವಂಥ ಕಾರ್ಯ. ಆದ್ದರಿಂದ, ಗುರುಕುಲ ವೆಂದರೆ ಗುರುಗಳು ಇರುವಂಥ ಕುಲ ಎಂದೇ ಅರ್ಥ.
ಗುರುಗಳೆಂದರೆ ಯಾವುದೇ ಒಂದು ವೇಷವಲ್ಲ, ಅದೊಂದು ಕಾರ್ಯನಿರ್ವಹಣೆ. ಗುರು ತನ್ನ ಕರ್ತವ್ಯವನ್ನು ನಿರ್ವಹಿಸಿಶೀಲವನ್ನು ಅಭಿವೃದ್ಧಿಗೊಳಿಸಬೇಕು. ಇಂಥ ಕರ್ತವ್ಯದಲ್ಲಿ ಮಾತೆಯರ ಸ್ಥಾನ ಪ್ರಥಮವಾಗಿರುತ್ತದೆ. ಅಲ್ಲಿಂದ ಅಧಿಚಿತ್ತದಲ್ಲಿ ತಂದೆ ಮತ್ತು ಗುರುವಿನ ಕೆಲಸವು  ಹೆಚ್ಚಾಗುತ್ತದೆ ಹಾಗೂ ಸಮಾಜವು ಸ್ವಸ್ಥವಾಗಿದ್ದು ಈ ಕೆಲಸವನ್ನು ನಿರ್ವಹಿಸಬೇಕು. ಮಕ್ಕಳ ಮನೋಭಾವದಲ್ಲಿ ಉದಾತ್ತತೆ ಬೆಳೆಯಬೇಕು. ನಕಾರಾತ್ಮಕತೆ, ಅಶ್ಲೀಲ ಮನೋಭಾವವನ್ನು ದೂರಮಾಡಬೇಕು. ಚಿತ್ತವನ್ನು ಶುದ್ಧಗೊಳಿಸುವುದರ ಮೂಲಕವಷ್ಟೇ ಈ ಕಾರ್ಯ ಸಾಧ್ಯ. ತದನಂತರ ಬರುವುದು ಅಧಿಪ್ರಜ್ಞದ ಸ್ತರ. ಪ್ರಜ್ಞಾ ಎಂಬುದುಅತ್ಯದ್ಭುತವಾದ ಶೈಕ್ಷಣಿಕ ಮೌಲ್ಯ.  ಮತ್ತು  ಎಂಬ ಎರಡು ಪದಗಳನ್ನು ಮಹರ್ಷಿ ಅರವಿಂದರು ಶೈಕ್ಷಣಿಕ ಸೂತ್ರವನ್ನಾಗಿ ನೀಡಿದ್ದಾರೆ. ಇಲ್ಲಿ
ವೈಚಾರಿಕತೆಯ ಜತೆಗೆ ಭಾವುಕತೆಯೂ ಇರಬೇಕು. ವೈಚಾರಿಕತೆ ಇಲ್ಲದ ಭಾವುಕತೆ ಮನುಷ್ಯನನ್ನು ದುರ್ಬಲಗೊಳಿಸುತ್ತದೆ, ಭಾವುಕತೆ ಇಲ್ಲದ ವೈಚಾರಿಕತೆ ಶುಷ್ಕ ತರ್ಕಪ್ರವೃತ್ತಿಯನ್ನು ಉಂಟುಮಾಡುತ್ತದೆ. ಹಾಗಾಗಿ ಈ ಎರಡರ ಸಮಾಗಮವನ್ನು ಅಧಿಚಿತ್ತದಲ್ಲಿ ಮತ್ತು ಅಧಿಪ್ರಜ್ಞ ಸ್ತರದಲ್ಲಿ ವಿಕಾಸಗೊಳಿಸಬೇಕು. ಪ್ರಜ್ಞಾವಂತರಾಗಿ ರುವವರಲ್ಲಿ ಗಣಿತಾತ್ಮಕ ಶಕ್ತಿ, ವೈಜ್ಞಾನಿಕ ಶಕ್ತಿ, ಅಲ್ಲಿಂದ ಪ್ರಯೋಗಾತ್ಮಕತೆ ಮತ್ತು ಸಾಮಾಜಿಕೀಕರಣ ಈ ಎಲ್ಲ ಚಟುವಟಿಕೆಗಳು ಅಧಿಪ್ರಜ್ಞ ಸ್ತರದಲ್ಲಿ ಪ್ರಧಾನವಾಗಿರುತ್ತವೆ.ಅಧಿಪ್ರತಿಭ ಸ್ತರದಲ್ಲಿ ಈ ಪ್ರಕ್ರಿಯೆಯು  ಕೊನೆ, ಕೆನೆ ಮತ್ತು ತೆನೆಯಾಗಿ ವ್ಯಕ್ತಿಯನ್ನು ಶಕ್ತನನ್ನಾಗಿಸುತ್ತದೆ.
9, 10, 11 ಮತ್ತು 12 ಈ ನಾಲ್ಕು ವರ್ಷಗಳಲ್ಲಿ ಅವರು ಸ್ವಯಂಸೃಷ್ಟಿಗಳನ್ನು ಮಾಡಬೇಕು. ಸ್ವತಃ ಒಂದು ಪ್ರಕಲ್ಪ ಪ್ರಯೋಗ ವನ್ನು ಮಾಡುವಂತಾಗಬೇಕು. ಹಾಗಾಗಿ, ಅಧಿಪ್ರತಿಭ ಸ್ತರದಲ್ಲಿ ಕ್ರಿಯಾಶೀಲತೆ ಬಹಳ ಮುಖ್ಯ. ‘ನವನವೋನ್ಮೇಷಶಾಲಿನೀ ಪ್ರಜ್ಞಾ ಪ್ರತಿಭಾ’ ಎಂದು ಲಾಕ್ಷಣಿಕರು ವ್ಯಾಖ್ಯಾನಿಸುತ್ತಾರೆ. ಅಲ್ಲಿಂದ ಮುಂದಿನ ಶಿಕ್ಷಣ ಉನ್ನತ ಶಿಕ್ಷಣ.
ಅದನ್ನು ನಾವು ಅಧಿವಿಭ, ಅಧಿಪ್ರಭ ಎಂದು ಕರೆಯುತ್ತೇವೆ. ಈ ರೀತಿಯಲ್ಲಿ, ಭಾರತೀಕರಣದ ನಾವೀನ್ಯದ ಆವಾಹನೆಗಾಗಿ ಈ ಗುರುಕುಲ ಸಂಗೋಷ್ಠೀ. ಬನ್ನಿ, ಪರೀಕ್ಷಿಸಿ, ಸಮೀಕ್ಷಿಸಿ, ನಿಸ್ಸಂಕೋಚದಿಂದ ಸಲಹೆ ನೀಡಿ. ಜನಶಕ್ತಿಯ ಸಂಘಟನೆಯೇ ಜನಸೇವೆಯ ಮಂತ್ರ. ಸೇವೆಯಿಂದ ಸ್ವಾಸ್ಥ್ಯ, ಸ್ವಾಸ್ಥ್ಯದಿಂದ ಸಮೃದ್ಧಿ, ಸಮೃದ್ಧಿಯಿಂದ ಶೈಕ್ಷಣಿಕ ಸಂಕ್ರಾಂತಿ, ಸಂಕ್ರಾಂತಿಯಿಂದ ನವಯುಗದ ನವಾವತಾರ….