ಪ್ರೀತಿ ಮತ್ತು ಯುದ್ದದಲ್ಲಿ ಎಲ್ಲವೂ ನ್ಯಾಯೋಚಿತವೇ ?
ಸಂಗತ
ವಿಜಯ್‌ ದರಡಾ
ಬಿಜೆಪಿಯ ನಿಷ್ಠ ಬೆಂಬಲಿಗರು ದೊಡ್ಡ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಲೇ ಬಂದಿದ್ದರೂ ಕೂಡ ಗುಜರಾತಿನಲ್ಲಿ ಇಂತಹ ದೊಂದು ದೊಡ್ಡ ಪ್ರಮಾಣದ ಗೆಲುವಿನ ನಿರೀಕ್ಷೆ ಯಾರಿಗೂ ಇರಲಿಲ್ಲ. ರಾಜಕೀಯ ಅನುಭವಿಗಳು ಬಿಜೆಪಿಗೆ 120 ಸೀಟುಗಳುಬರಬಹುದೆಂದು ಅಂದಾಜು ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಂತಹ ದೊಂದು ಅಭೂತಪೂರ್ವ ಗೆಲುವಿನ ನಿರೀಕ್ಷೆ ಇತ್ತು.
ಏಕೆಂದರೆ ಅವರು ಅದಕ್ಕೆ ತಕ್ಕಂತೆ ತಂತ್ರಗಾರಿಕೆಯನ್ನು ಹೆಣೆದಿದ್ದರು. ದೂರದೃಷ್ಟಿಯ ಆಲೋಚನೆಗಳು ಮತ್ತು  ದೋಷಾತೀತ ವಾದ ತಂತ್ರಗಾರಿಕೆಗಳು ರಾಜಕೀಯದ ಕ್ಷೇತ್ರ ದಲ್ಲಿ ಇರಲೇ ಬೇಕು. ಅದೊಂಥರ ಚದುರಂಗದಾಟವಿದ್ದಂತೆ. ಅಧಿಕಾರದಲ್ಲಿ ಎರಡೂ ವರೆ ದಶಕಗಳಿಂದ ಇರುವಾಗ ಅಲ್ಲಿ ಆಡಳಿತ ವಿರೋಧಿ ಅಲೆ ಇರಬಹುದೆಂಬ ಅಂದಾಜು ಕೂಡ ರಾಜಕೀಯ ವಿಶ್ಲೇಷಕರ ಮನದಲ್ಲಿತ್ತು. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ವಿಜಯ ರೂಪಾನಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತೆಸೆದಾಗ 2022ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಯಾವುದೇ ರಿ ತೆಗೆದುಕೊಳ್ಳುವ ಮನಃಸ್ಥಿತಿಯಲ್ಲಿಲ್ಲ ಎಂದು ಅಂದಾಜು ಮಾಡಲಾಗಿತ್ತು.
ಪಟೇಲ ಸಮುದಾಯ ದವರು ಗುಜರಾತಿನಲ್ಲಿ ಪ್ರಭಾವಶಾಲಿಯಾಗಿದ್ದು ಅವರನ್ನು ರಾಜಕೀಯವಾಗಿ ಕಡೆಗಣಿಸುವುದು ಸಾಧ್ಯವಿಲ್ಲದ ಮಾತು. ಹಾಗಾಗಿ ಭೂಪೇಂದ್ರ ಪಟೇಲರನ್ನು ಮುಖ್ಯಮಂತ್ರಿಯನ್ನಾಗಿ ಮಾಡ ಲಾಯಿತು. ಕಾಂಗ್ರೆಸ್ಸಿನಲ್ಲಿ ಪಟೇಲರ ಪ್ರತಿನಿಧಿಯಂತಿದ್ದ ಹಾರ್ದಿಕ್ ಪಟೇಲರ ಮನವೊಲಿಸಲಾಯಿತು. ಅವರು ಈ ವರ್ಷದ ಜೂನ್ ತಿಂಗಳಲ್ಲಿ ಬಿಜೆಪಿ ಸೇರಿದರು. ಜತೆಗೆ ಬುಡಕಟ್ಟು ಮತ್ತು ದಲಿತ ಸಮುದಾಯಗಳನ್ನು ಒಲಿಸಿಕೊಳ್ಳುವ ಎಲ್ಲ ಪ್ರಯತ್ನ ಗಳನ್ನೂ ಮಾಡಲಾಯಿತು. ಈ ಹಂತದಲ್ಲಿ ಅದೆಷ್ಟು ಮಂದಿ ಬಿಜೆಪಿ ಸೇರಿದರು, ಮತ್ತೆಷ್ಟು ಮಂದಿ ಕಾಂಗ್ರೆಸ್ಸಿನಲ್ಲಿ ಉಳಿದು ಕೊಂಡರು, ಇಲ್ಲವೇ ಆಮ್ ಆದ್ಮಿ ಪಾರ್ಟಿಯತ್ತ ಹೆಜ್ಜೆ ಹಾಕಿದರು ಎಂಬ ಲೆಕ್ಕ ಹೇಳುವುದು ಕಷ್ಟಕರ.
ಆದರೆ ಈ ತಂತ್ರಗಾರಿಕೆಯಿಂದ ಬಿಜೆಪಿ ದೊಡ್ಡ ಲಾಭವಾಗಿತ್ತು ಮಾತ್ರ ನಿಜ. ಈ ನಡುವೆ ತರಾತುರಿಯಲ್ಲಿ ಕೆಲವು ಮಹತ್ವದ ಯೋಜನೆಗಳ ಘೋಷಣೆಯೂ ಆಯಿತು. ಇದೆಲ್ಲವೂ ಚುನಾವಣಾ ರಾಜಕೀಯದ ತಂತ್ರಗಾರಿಕೆಯ ಒಂದು ಭಾಗ. ಇದೆಲ್ಲದರ ಜತೆಗೆ ಬಿಜೆಪಿ, ಮತದಾರರನ್ನು ತನ್ನೆಡೆ ಒಲಿಸಿಕೊಳ್ಳಲು ಇನ್ನೂ ಅನೇಕ ತಂತ್ರಗಳನ್ನು ಮಾಡಿತು. ಅದಕ್ಕೇ ಹೇಳಿದ್ದು ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೆ ಅಂತ.
ಹೀಗೆ ಮಾಡಿದ ತಂತ್ರಗಾರಿಕೆಯ ಪರಿಣಾಮ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸುವಂತೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಐವರು ಮಂತ್ರಿಗಳಿಗೆ ಮತ್ತು ೩೮ ಹಾಲಿ ಶಾಸಕರಿಗೆ ಅಸೆಂಬ್ಲಿ ಟಿಕೆಟ್ ಕೊಡಲಿಲ್ಲ. ಹೊಸಮುಖಗಳ ಮೇಲೆ ಜನರಿಗೆ ಭರವಸೆ ಹೆಚ್ಚುವುದು ಇದರಿಂದ ಸಾಧ್ಯವಾಯಿತು. ಮುಖ್ಯಮಂತ್ರಿ, ಸಚಿವರು, ಲೋಕಸಭಾ ಸದಸ್ಯರು, ರಾಷ್ಟ್ರೀಯ ನಾಯಕರು, ಅನ್ಯ ರಾಜ್ಯಗಳ ಅನುಭವಿಗಳು ಸೇರಿದಂತೆ ಎಲ್ಲ ಪ್ರಭಾವಶಾಲಿ ನಾಯಕರು ಚುನಾವಣಾ ಪ್ರಚಾರ ಭಾಷಣಗಳನ್ನು ಮಾಡುವಂತೆ ಆಯೋಜನೆ ಮಾಡಲಾಯಿತು.
ಇಲ್ಲಿ ಗಮನಿಸಬೇಕಾದ ವಿಶೇಷ ಸಂಗತಿಯೆಂದರೆ ಚುನಾವಣೆ ಸಣ್ಣದಿರಲಿ, ದೊಡ್ಡದಿರಲಿ, ಬಿಜೆಪಿ ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ನಾಯಕರುಗಳು ತಮ್ಮ ಔನ್ನತ್ಯ ಮತ್ತು ಚುನಾವಣೆಯ ಸ್ಥಾನಮಾನವನ್ನು ಎಂದೂ ನೋಡುವುದಿಲ್ಲ. ಸಮಯ ವ್ಯರ್ಥವಾಗದಂತೆ ಎಡೆ  ಓಡಾಡಿ ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ತಮಗೆ ವಹಿಸಲಾದ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ 50 ಕಿಮೀ ಉದ್ದದ ರೋಡ್ ಶೋ ನಲ್ಲಿ ಭಾಗವಹಿಸಿ ಮತದಾರರ ಉತ್ಸಾಹ ಹೆಚ್ಚಿಸಿದ್ದರು.
ಇದೆಲ್ಲದರ ಪರಿಣಾಮವಾಗಿ ಬಿಜೆಪಿಗೆ ೧೫೬ ಸೀಟುಗಳ ಬೃಹತ್ ಗೆಲುವು ಲಭ್ಯವಾಗುವುದು ಸಾಧ್ಯವಾಯಿತು. ಆಡಳಿತ ವಿರೋಧಿ ಅಲೆ ಇಲ್ಲವೇ ಇಲ್ಲ ಎಂಬುದೂ ಸಾಬೀತಾಯಿತು. ಈ ಹಿಂದೆ ಕಾಂಗ್ರೆಸ್ಸಿನ ಮಾಧವಸಿಂಗ್ ಸೋಲಂಕಿ ನೇತೃತ್ವದಲ್ಲಿ ಗಳಿಸಿದ್ದ ೧೪೦ ಸೀಟುಗಳ ದಾಖಲೆಯೂ ಧೂಳೀಪಟವಾಯಿತು. ಇನ್ನು ಆಮ್ ಆದ್ಮಿ ಪಾರ್ಟಿಯ ವಿಚಾರಕ್ಕೆ ಬರುವುದಾದರೆಅದು ಗುಜರಾತಿನಲ್ಲಿ ಐದು ಸೀಟುಗಳನ್ನು ಗೆದ್ದಿದೆ, ಸಣ್ಣ ಮಾತಲ್ಲ, ಇದು ಕೂಡ ದೊಡ್ಡ ಗೆಲುವೇ ಆಗಿದೆ.
ಗುಜರಾತಿನಲ್ಲಿ ಶೇ.೧೩ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಆ ಪಕ್ಷ ರಾಷ್ಟ್ರೀಯ ಪಕ್ಷದ ಸ್ಥಾನಮಾನಪಡೆದಿರುವುದು ಕೂಡ ದೊಡ್ಡ ಸಂಗತಿ. ಗುಜರಾತಿನ ಮೇಲೆ ರಾಜಕೀಯವಾಗಿ ಗಟ್ಟಿಹಿಡಿತ ವಿರುವ ನರೇಂದ್ರ ಮೋದಿಯವರನ್ನು ಎದುರಿಸುವುದು ಮಕ್ಕಳಾಟವಲ್ಲ. ಮೊದಲಿಗೆ ದೆಹಲಿಯಲ್ಲಿ, ನಂತರ ಪಂಜಾಬಿನಲ್ಲಿ ಮತ್ತು ಇದೀಗ ಗುಜರಾತಿನಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಮೂಲಕ ಅರವಿಂದ ಕೇಜ್ರಿವಾಲ್ ತಮ್ಮ ದೂರದೃಷ್ಟಿಯ ಸಂಕೇತವನ್ನು ಕೊಟ್ಟಿದ್ದಾರೆ.
ಕೇಜ್ರಿವಾಲರಿಗೆ ಹಿಮಾಚಲಕ್ಕಿಂತ ಗುಜರಾತೇ ಮುಖ್ಯವಾಗಿತ್ತು. ಇಂದು ಗುಜರಾತಿನ ಜನ ಆಪ್ ಬಗ್ಗೆ ಮಾತನಾಡತೊಡಗಿದ್ದಾರೆ. ಭ್ರಷ್ಟಾಚಾರದ ಆರೋಪ ಮತ್ತು ಉಪಮುಖ್ಯಮಂತ್ರಿಯ ಮೇಲೆಯೇ ಹಯಾಗಿರುವ ವಿವಾದಗಳ ನಡುವೆಯೂ ಆಮ್ ಆದ್ಮಿ ಪಾರ್ಟಿ ಜನರ ಗಮನ ಸೆಳೆಯುವುದು ದೆಹಲಿ ಮುನಿಸಿಪಲ್ ಕಾರ್ಪೊರೇಶನ್ ನಲ್ಲಿ ಗೆಲುವು ದಾಖಲಿಸಿರುವುದು ಸಣ್ಣ ಮಾತಲ್ಲ.ಇನ್ನೊಂದು ಕಡೆ ಕಾಂಗ್ರೆಸ್ ಉತ್ತಮ ಅವಕಾಶವೊಂದನ್ನು ತಪ್ಪಿಸಿಕೊಂಡಿದೆ.
ಕಳೆದ ಬಾರಿ ಗುಜರಾತಿನಲ್ಲಿ ೭೭ ಸೀಟುಗಳನ್ನು ಹೊಂದಿದ್ದ ಕಾಂಗ್ರೆಸ್ ಈ ಬಾರಿ ೧೭ಕ್ಕೆ ಇಳಿದಿದೆ. ಕಾಂಗ್ರೆಸ್ಸಿನೊಳಗಿನ ಒಳಜಗಳವೇ ಇದಕ್ಕೆ ಮುಖ್ಯ ಕಾರಣ. ನಾಯಕರುಗಳು ಪರಸ್ಪರ ಕಚ್ಚಾಡುತ್ತಲೇ ಇದ್ದರು, ಜನರ ದೃಷ್ಟಿಯಿಂದ ಹೇಳುವುದಾದರೆ, ಗಟ್ಟಿ ವಿರೋಧ ಪಕ್ಷವಾಗಿ ತಳವೂರಲಾಗದ ಬಿಜೆಪಿಯನ್ನು ನಂಬುವುದಾದರೂ ಹೇಗೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಚುನಾವಣೆ ಯನ್ನ ತುಂಬಾ ಹಗುರವಾಗಿ ಪರಿಗಣಿಸಿತು, ರಾಹುಲ್ ಗಾಂಧಿ ಪ್ರಚಾರಕ್ಕೆ ಹೋಗಿದ್ದ ಕ್ಷೇತ್ರದಲ್ಲೂ ಅದಕ್ಕೆ ಸೋಲಾಗಿದೆ.
ಇನ್ನು ಹಿಮಾಚಲದ ವಿಚಾರಕ್ಕೆ ಬರುವುದಾದರೆ, ಅಲ್ಲಿ ಕಾಂಗ್ರೆಸ್ಸಿಗೆ ಗಟ್ಟಿ ನಾಯಕತ್ವದ ಕೊರತೆ ಇತ್ತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ವೀರಭದ್ರ ಸಿಂಗರ ಪತ್ನಿ. ಅವರ ಮಗ ವಿಕ್ರಮಾದಿತ್ಯ ಸಿಂಗ್, ಸುಖ್ವಿಂದರ್ ಸಿಂಗ್ ಸುಖು ಮತ್ತು ಮುಕೇಶ್ ಅಗ್ನಿಹೋತ್ರಿ ನಡುವೆ ಮುಖ್ಯಮಂತ್ರಿ ಗಾದಿಗಾಗಿ ಚುನಾವಣೆಗೂ ಮುನ್ನವೇ ಪರಸ್ಪರ ತಿಕ್ಕಾಟವಿತ್ತು. ಇಷ್ಟೆಲ್ಲದರ ನಡುವೆಯೂ ಕಾಂಗ್ರೆಸ್ ಪಕ್ಷ ಗೆದ್ದಿದೆ. ತಾವಿನ್ನೂ ಪಕ್ಷದ ಮೇಲಿನ ಭರವಸೆ ಕಳೆದುಕೊಂಡಿಲ್ಲ ಎಂಬ ಸಂದೇಶವನ್ನು ಮತದಾರ ಅಲ್ಲಿಕೊಟ್ಟಿದ್ದಾನೆ.
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಆ ರಾಜ್ಯದಲ್ಲಿ ಶೇ.೧೯.೫ರಷ್ಟು ವೋಟುಗಳು ಬಿದ್ದಿದ್ದವು. ಹಿಮಾಚಲದಲ್ಲಿ ಕಾಂಗ್ರೆಸ್ ಗೆದ್ದಿರುವುದು ನಿಜಕ್ಕೂ ಬಿಜೆಪಿಗೆ ಆತಂಕದ ಸಂಗತಿ. ಬಿಜೆಪಿ ರಾಷ್ಟಿಥಯ ಅಧ್ಯಕ್ಷ ಜೆ.ಪಿ.ನಡ್ಡಾ ತಮ್ಮ ತವರು ರಾಜ್ಯ ದಲ್ಲಿ ಗೆಲುವು ಸಾಧಿಸುವುದು ಸಾಧ್ಯವಾಗಿಲ್ಲ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಪ್ರಾಂತ್ಯದಲ್ಲಿಯೇ ಬಿಜೆಪಿ ಎಲ್ಲಾ ಐದು ಸೀಟುಗಳನ್ನು ಕಳೆದುಕೊಂಡಿದೆ. ಬಿಜೆಪಿಯ ಆಂತರಿಕ ಕಿತ್ತಾಟದಿಂದ ಅಲ್ಲಿ ಹಿನ್ನಡೆ ದಾಖಲಾಗಿದೆ. ಅನುರಾಗ್ ಠಾಕೂರರ ತಂದೆ ಪ್ರೇಮಕುಮಾರ್ ಧುಮಾಲ್‌ಗೂ ಬಿಜೆಪಿ ಅಲ್ಲಿ ಟಿಕೆಟ್ ಕೊಟ್ಟಿರಲಿಲ್ಲ.
ಉತ್ತರ ಪ್ರದೇಶದಲ್ಲಿ ನಡೆದ ಉಪಚುನಾವಣೆಯ -ಲಿತಾಂಶವನ್ನು ಗಮನಿಸುವುದಾದರೆ ಖಟೌಲಿಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಆದರೆ ಮೊದಲಬಾರಿಗೆ ಮುಸ್ಲಿಂ ಪ್ರಾಬಲ್ಯವಿರುವ ರಾಂಪುರದಲ್ಲಿ ಗೆಲುವು ಸಿಕ್ಕಿದೆ. ಬಿಜೆಪಿಯ ವಿಶೇಷತೆಯೆಂದರೆ ಅದು ಗೆಲುವು ಮತ್ತು ಸೋಲುಗಳ ವಿಶ್ಲೇಷಣೆಯನ್ನು ಮಾಡಿ ನಂತರ ಕರ್ಯಯೋಜನೆಯನ್ನು ರೂಪಿಸುತ್ತದೆ. ೨೦೨೩ರಲ್ಲಿ ಮಧ್ಯಪ್ರದೇಶ,ಚತ್ತೀಸಘಡ, ರಾಜಾಸ್ತಾನ, ತೆಲಂಗಾಣ, ಕರ್ನಾಟಕ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ಮತ್ತು ತ್ರಿಪುರಾಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
೨೦೨೪ರಲ್ಲಿ ಲೋಕಸಭಾ ಚುನಾವಣೆಯೂ ನಡೆಯಲಿದೆ. ಈಗಾಗಲೇ ಬಿಜೆಪಿ ತಂತ್ರಗಾರಿಕೆಯನ್ನು ಬಹಳ ಚೆನ್ನಾಗಿ ಹೆಣೆದಿದೆ ಯಾದ್ದರಿಂದ ಎಲ್ಲ ವಿರೋಧಪಕ್ಷಗಳೂ ಒಂದಾದರೂ (ಸದ್ಯೋಭವಿಷ್ಯದಲ್ಲಿ ಅದು ಅಸಾಧ್ಯವೆನಿಸುತ್ತದೆ) ಬಿಜೆಪಿಯನ್ನು ಮಣಿಸುವುದು ಕಷ್ಟಸಾಧ್ಯವೆನಿಸಿದೆ. ಪ್ರಜಾ ಪ್ರಭುತ್ವದಲ್ಲಿ ಬಲವಾದ ವಿರೋಧ ಪಕ್ಷ ಇರಬೇಕು, ಅದೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಒಳ್ಳೆಯದಲ್ಲ