ಹೀಗೊಂದು ಅವಲಕ್ಕಿಯ ಅವಲೋಕನ
ಶಶಾಂಕಣ
.@.
ಅವಲಕ್ಕಿ ಎಷ್ಟು ಪ್ರಾಚೀನ? ಶ್ರೀಕೃಷ್ಣ ಮತ್ತು ಕುಚೇಲನಷ್ಟೇ ಅಥವಾ ಅದಕ್ಕಿಂತಲೂ ಪುರಾತನ ಈ ಅವಲಕ್ಕಿ! ಬಡವನಾದ ಕುಚೇಲನು ಶ್ರೀಕೃಷ್ಣನನ್ನು ಮಾತನಾಡಿಲು ಹೋದಾಗ, ಎರಡು ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ಹೋಗಿದ್ದನಂತೆ.ಆ ಅವಲಕ್ಕಿಯನ್ನು ಕೃಷ್ಣನು ಬಹಳ ಇಷ್ಟಪಟ್ಟು ಸ್ವೀಕರಿಸಿ, ಸೇವಿಸಿದ್ದನಂತೆ. ಅವಲಕ್ಕಿಯ ಜತೆ ನಂಟು ಹೊಂದಿರುವ ಈಕಥೆಯು ಬಹಳ ಅರ್ಥಪೂರ್ಣ.
ಒಬೊಬ್ಬರಿಗೆ ಒಂದೊಂದು ಅರ್ಥವನ್ನು ಸುರಿಸಬಲ್ಲ ಕುಚೇಲನ ಅವಲಕ್ಕಿಯ ಕಥೆ, ಆ ಸರಳ ತಿನಿಸಿಗೆ ಅಮರತ್ವವನ್ನು ಕಲ್ಪಿಸಿಕೊಟ್ಟಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಕುಚೇಲನು ಪಾಣಿಪಂಚೆಯಲ್ಲಿ ಕಟ್ಟಿಕೊಂಡು ಹೋಗಿದ್ದ ಅವಲಕ್ಕಿಯನ್ನು ಆತ ತನ್ನ ಮನೆಯಲ್ಲೇ ತಯಾರಿಸಿರಲೇಬೇಕು. ಆಗಿನ ಕಾಲದಲ್ಲಿ ಅವಲಕ್ಕಿ ಮಿಲ್‌ಗಳು ಎಲ್ಲಿದ್ದವು? ಹೋಗಲಿ, ಅವಲಕ್ಕಿ ಮಾಡುವ ಗುಡಿಕೈಗಾರಿಕೆಯಂತಹ ಸಾಧನಗಳು ಸಹ ಆಗಿನ ಕಾಲದಲ್ಲಿ ಇರಲಿಕ್ಕಿಲ್ಲ.
ಕಳೆದ ಶತಮಾನದ ಮೊದಲರ್ಧದಲ್ಲಿ ಅವಲಕ್ಕಿ ಕುಟ್ಟುವ, ಕಾರದ ಪುಡಿ ಕುಟ್ಟುವ ಸಾಧನಗಳು ಬೆಂಗಳೂರಿನಂತಹ ನಗರಗಳಲ್ಲಿ ವಾಣಿಜ್ಯಕವಾಗಿ ಅಲ್ಲಲ್ಲಿ ಉಪಯೋಗದಲ್ಲಿದ್ದವಂತೆ. ನಗರಗಳ ಜನರು ಒಂದೆರಡು ಕಾಸು ನೀಡಿ, ಅವಲಕ್ಕಿ ಯನ್ನೋ, ಕಾರದ ಪುಡಿಯನ್ನೋ ಮಾಡಿಸಿಕೊಂಡು ಹೋಗುತ್ತಿದ್ದರು. ಆದರೆ ನಮ್ಮ ಹಳ್ಳಿಯಲ್ಲಿ ಅವಲಕ್ಕಿಯನ್ನು ಮನೆಯಲ್ಲೇ ಮಾಡುವ ಪದ್ಧತಿ ಇತ್ತು.
ಸುಮಾರು 1972ರ ತನಕ, ನಮ್ಮೂರಿನ ಸರಹದ್ದಿನಲ್ಲಿ ಅವಲಕ್ಕಿ ಮಿಲ್ ಇರಲಿಲ್ಲ. ಮನೆಯಲ್ಲೇ ಅವಲಕ್ಕಿ ತಯಾರಿಸುವುಕ್ಕೆ ಒಂದು ಶಿಸ್ತುಬದ್ಧ ಕ್ರಮ, ಸಂಸ್ಕಾರ ಉಂಟು! ದೀಪಾವಳಿಯ ಸಮಯದಲ್ಲೋ ಅಥವಾ ಬೇರಾವುದೋ ಕಾಲದಲ್ಲೋ ಅವಲಕ್ಕಿಮಾಡುವುದು ಎಂದರೆ ನಮ್ಮ ಅಮ್ಮಮ್ಮನಿಗೆ (ಅಜ್ಜಿ) ಬಹಳ ಸಡಗರ. ಆಗಿನ ದಿನಗಳಲ್ಲಿ ಸರಳ ಮತ್ತು ಶ್ರಮಬೇಡುವ ಅವಲಕ್ಕಿ ತಯಾರಿಯ ಕೆಲಸವನ್ನು ಸಹ, ಸಂಭ್ರಮದಿಂದ, ಸಡಗರದಿಂದ, ಸ್ವಲ್ಪ ನಾಟಕೀಯತೆಯನ್ನು ಬೆರೆಸಿ ಮಾಡುವುದುಅಮ್ಮಮ್ಮನ ಹವ್ಯಾಸ.
ಹಾಗೆ ನೋಡಿದರೆ, ಅಂತಹ ಯಾವುದೇ ಕೆಲಸವನ್ನು ಮಾಡುವಾಗಲೂ ಸಹ, ಅದಕ್ಕೆ ಸಂಭ್ರಮದ ಒಗ್ಗರಣೆಯನ್ನು, ಗೌಜಿಯಘಾಟನ್ನು ಬೆರೆಸುವುದರಲ್ಲಿ ಅವರು ಎತ್ತಿದ ಕೈ. ಸಾಕಷ್ಟು ದೈಹಿಕ ಶ್ರಮ ಬೇಡುವ ಅವಲಕ್ಕಿ ತಯಾರಿಸುವ ‘ಬೋರ್’ ಕೆಲಸ ವನ್ನು, ನಗು ನಗುತ್ತಾ ಎಲ್ಲರನ್ನೂ ಹುರಿದುಂಬಿಸಿ ಮಾಡಿಸುವುದು ಸಹ ಅವರ ಕಲೆ. ನಮ್ಮ ಮನೆಯಲ್ಲೇ ಒಂದು ಕಳಸಿಗೆ ಅವಲಕ್ಕಿಯನ್ನು ಸುಲಲಿತವಾಗಿ ಮಾಡಿಸುತ್ತಿದ್ದ ಅವರ ಕೌಶಲವು, ಈಗಿನ ಕಾಲದ ಮ್ಯಾನೇಜ್‌ಮೆಂಟ್ ಪಾಠಗಳಲ್ಲಿ ಸೇರಿಸು ವಷ್ಟು ಕ್ರಮಬದ್ಧ ಎನ್ನಬಹುದು.
ಯಾವ ಬತ್ತದ ಅವಲಕ್ಕಿ?:ಇಂಥಾ ದಿನ ಸಂಜೆ ಅವಲಕ್ಕಿ ತಯಾರಿಸುವುದು ಎಂದು ನಿಶ್ಚಯವಾದ ಕೂಡಲೆ, ಮೊದಲ ಕೆಲಸ ಎಂದರೆ ಒಳ್ಳೆಯ ಬತ್ತದ ಆಯ್ಕೆ. ಇಂತಿಂತಹ ಜಾತಿಯ ಬತ್ತದಿಂದ ಮಾಡಿದ ಅವಲಕ್ಕಿಯು ತಿನ್ನಲು ರುಚಿಕರ ಎಂಬ ಪಟ್ಟಿಯೇನಮ್ಮ ಅಮ್ಮಮ್ಮನ ಬಾಯಲ್ಲಿರುತ್ತಿತ್ತು. ಕರದಡಿ, ಜೀರ್‌ಸಾಲೆ ಮತ್ಯಾವುದೋ ಬತ್ತದಿಂದಲೇ ಅವಲಕ್ಕಿಯನ್ನು ಯಾಕೆ ತಯಾರಿಸಬೇಕು ಅಥವಾ ಆ ಬತ್ತವನ್ನೇಕೆ ಆಯ್ಕೆ ಮಾಡಬಾರದು ಎಂಬುದಕ್ಕೆ ಅವರ ಬಳಿ ಇಷ್ಟುದ್ದದ ವಾದಸರಣಿಯೇಇರುತ್ತಿತ್ತು. ಅವರು ನೀಡುತ್ತಿದ್ದ ಕಾರಣಗಳೆಲ್ಲವೂ ಅನುಭವಜನ್ಯ.
ಸೂಕ್ತ ಬತ್ತದ ಆಯ್ಕೆಯಾದ ಕೂಡಲೆ, ಎಷ್ಟು ಅವಲಕ್ಕಿ ಮಾಡುವುದು ಎಂಬ ಪ್ರಶ್ನೆ. ದೀಪಾಳಿಗಾದರೆ ಒಂದು ಕಳಸಿಗೆ (14 ಸೇರು) ಬತ್ತದ ಅವಲಕ್ಕಿ ಆಗಬೇಕು. ಬೆಳಿಗ್ಗೆನೇ ಬತ್ತವನ್ನು ಬಿಸಿನೀರಿನಲ್ಲಿ ನೆನೆಸುತ್ತಾರೆ. ಚಳಿಯ ದಿನಗಳಲ್ಲಾದರೆ, ಬತ್ತಕ್ಕೆನೀರು ಹಾಕಿ, ಹಂಡೆಗೆ ತುಂಬಿಸಿ, ಉಗುರು ಬೆಚ್ಚಗಾಗುವಷ್ಟು ಬಿಸಿಮಾಡುವುದೂ ಉಂಟು. ಸಂಜೆಯ ಹೊತ್ತಿಗೆ ನೀರನ್ನು ಬಸಿಯುವರು.
‘ಅವಲಕ್ಕಿ ಕುಟ್ಟುವುದಕ್ಕೆ ಬನ್ನಿ ಮಕ್ಕಳೇ’ ಎಂದು ಮುಸ್ಸಂಜೆಯ ಹೊತ್ತಿನಲ್ಲಿ ಅಮ್ಮಮ್ಮ ದೊಡ್ಡದನಿಯಲ್ಲಿ ಕರೆದರೆಂದರೆ, ಮನೆಯವರೆಲ್ಲ ಸಿದ್ಧವಾಗಬೇಕು ಎಂದೇ ಅರ್ಥ. ದೀಪ ಹಚ್ಚುವ ಹೊತ್ತು. ಅಡುಗೆ ಮನೆಯಲ್ಲಿದ್ದ ಅಮ್ಮನೂ, ತನ್ನ ಕೆಲಸ ಮುಗಿಸಿ, ಅವಲಕ್ಕಿ ತಯಾರಿಸುವ ಕೆಲಸಕ್ಕೆ ಹಾಜರಾಗುತ್ತಾಳೆ. ಮನೆ ಎದುರಿನ ಕೊಟ್ಟಿಗೆಯಲ್ಲಿ, ಇಂತಹ ಉದ್ದೇಶಗಳಿಗಾಗಿ ಹೂಡಿದ್ದ ಒಲೆಗೆ ಸೌದೆಯ ಬೆಂಕಿ ಒಟ್ಟಿ, ಅದರ ಮೇಲೊಂದು ಅಗಲ ಬಾಯಿಯ ಮಡಕೆ ಇಡುತ್ತಾರೆ.
ಅವಲಕ್ಕಿ ಮತ್ತು ಅರಳು ತಯಾರಿಸುವಾಗ ಬತ್ತ ಹುರಿಯಲೆಂದೇ ಅಗಲ ಬಾಯಿಯ, ಮಧ್ಯಮ ಗಾತ್ರದ ಮಡಕೆಯನ್ನುಹಿಂದಿನ ಮನೆಯ ಕೊಂಬನು ಮಾಡಿಕೊಡುವುದುಂಟು. ಬತ್ತವನ್ನು ಹುರಿಯುವಾಗ, ಹದವಾಗಿ ಮಗುಚಲು ಒಂದು ತೆಂಗಿನ ಕಡ್ಡಿಗಳ ಕಟ್ಟು ಸಿದ್ಧವಾಗಿರುತ್ತದೆ. ಸಣ್ಣ ಹಿಡಿಸೂಡಿಯ ರೀತಿ ಕಂಡರೂ, ಅದು ಹಿಡಿಸೂಡಿ ಅಲ್ಲ, ಇದೇ ಉದ್ದೇಶಕ್ಕೆ ಅಮ್ಮಮ್ಮನೇ ಕೈಯಾರ ತೆಂಗಿನ ಗರಿಯ ಎಲೆ ಸವರಿ, ಮಾಡಿದ ಕಡ್ಡಿಗಳ ಕಟ್ಟು ಅದು.
ಬಹು ಶ್ರಮದ ಕೆಲಸ:‘ಹಾಂ ಅವಲಕ್ಕಿ ಕುಟ್ಟುವುದು ಯಾರೀಗ? ವನಕೆ ಹಿಡಿದು ನಿಲ್ಲಿ’ ಎಂದವರೇ, ಅಮ್ಮಮ್ಮ ಎರಡು ಮುಷ್ಟಿ ನೆನೆಸಿದ ಬತ್ತವನ್ನು ಬಿಸಿಯಾಗಿ ಕಾದ ಮಡಕೆಗೆ ಹಾಕುತ್ತಾರೆ. ಎಡಗೈಯಲ್ಲಿ ತೆಂಗಿನ ಕಡ್ಡಿಗಳ ಕಟ್ಟನ್ನು ಹಿಡಿದು ಹದವಾಗಿ ಹುರಿಯುತ್ತಾರೆ. ಹುರಿನ ನಂತರ, ಬಿಸಿ ಬಿಸಿ ಬತ್ತವನ್ನು ಪಕ್ಕದ್ಲಲೇ ಇರುವ ಒರಳು ಕಲ್ಲಿಗೆ ಸುರಿಯುತ್ತಾರೆ. ಬಿಸಿ ಬಿಸಿ ಬತ್ತವನ್ನು ವನಕೆಯಿಂದ ಕುಟ್ಟುವ ಕೆಲಸ ಮನೆಯ ಇತರರಿಗೆ.
ನಮ್ಮಮ್ಮ ಅವಲಕ್ಕಿ ಕುಟ್ಟುವುದು, ನಂತರ ಗೇರುವ ಕೆಲಸ ಮಾಡುತ್ತಿದ್ದರು. ನಾನೂ ಒಮ್ಮೊಮ್ಮೆ ಅವಲಕ್ಕಿ ಕುಟ್ಟಿದ್ದುಂಟು. ಬಹಳ ಶ್ರಮದ ಕೆಲಸ. ದಬ ದಬ ಎಂದು ಕೆಲವು ನಿಮಿಷ ಕುಟ್ಟಿದ ನಂತರ, ಅದನ್ನು ಒರಳಿನಿಂದ ತೆಗೆದು ಈಚೆ ಹಾಕಬೇಕು. ಅಷ್ಟರಲ್ಲಿ ಇನ್ನೊಂದು ಹದ ಹುರಿದ ಬತ್ತ ಸಿದ್ಧವಾಗಿರುತ್ತದೆ. ಪುನಃ ದಬ ದಬ ಕುಟ್ಟುವಿಕೆ. ಹೀಗೆ ಕುಟ್ಟಿ ತೆಗೆದು ಹಾಕಿದ ಬಿಸಿ ಬಿಸಿ ಅವಲಕ್ಕಿ ಪಕ್ಕದಲ್ಲಿ ರಾಶಿಯಾಗುತ್ತಾ ಹೋಗುತ್ತದೆ.
ಕುಟ್ಟಿದ ಬತ್ತದಿಂದ ಅವಲಕ್ಕಿಯನ್ನು ಬೇರ್ಪಡಿಸಿ, ಚೊಕ್ಕಟಗೊಳಿಸಲು ಇನ್ನೊಬ್ಬರು ಮೊರ ಹಿಡಿದು ಪಕ್ಕದಲ್ಲೇ ಕೂರಬೇಕು. ತೌಡು, ಉಮಿಯನ್ನು ಕೇರಿ ತೆಗೆದಾಗ, ಶುದ್ಧ ಅವಲಕ್ಕಿ ಸಿದ್ಧ. ಈ ರೀತಿ ಒಂದು ಕಳಸಿಗೆ ಬತ್ತವನ್ನು ಎರಡೆರಡೇ ಮುಷ್ಟಿಯಂತೆ ಹುರಿದು, ಅವಲಕ್ಕಿ ಕುಟ್ಟಿ ಮುಗಿಸುವಷ್ಟರಲ್ಲಿ ರಾತ್ರಿ ಒಂಬತ್ತು ಗಂಟೆ!
ಇಷ್ಟಾಗುವ ಹೊತ್ತಿಗೆ, ದಬದಬ ಸದ್ದು ಕೇಳಿ ಮನೆಯ ಮಕ್ಕಳಿಗೆ ವಿಪರೀತ ಬೋರ್! ಅವರ ಬಾಯಿಯ ರುಚಿಗಾಗಿ, ಶುದ್ಧಪಡಿಸಿದ ನಾಲ್ಕಾರು ಮುಷ್ಟಿ ಅವಲಕ್ಕಿಯನ್ನು ಮತ್ತೊಮ್ಮೆ ಕೆಂಪಗೆ ಹುರಿದು, ಅದಕ್ಕೊಂದಿಷ್ಟು ಬೆಲ್ಲ ಬೆರೆಸಿ ಕಲಸಿಕೊಡುವುದೂ ಉಂಟು. ‘ಮಕ್ಕಳೇ ಬಿಸಿ ಬಿಸಿ ಅವಲಕ್ಕಿ ತಿನ್ನಿ’.
ದೀಪಾವಳಿ ಪೂಜೆಗೆ ಅವಲಕ್ಕಿ:ದೀಪಾವಳಿಯ ಸಮಯದಲ್ಲಿ ಹೊಸಬತ್ತದಿಂದ ಈ ರೀತಿ ಕುಟ್ಟಿ ತಯಾರಿಸಿದ ಅವಲಕ್ಕಿ ಅವಶ್ಯ ಬೇಕು. ಗದ್ದೆಗೆ ದೀಪ ಇಡುವ ರಾತ್ರಿ, ದೀಪ ಹಚ್ಚಿದ ನಂತರ ಗದ್ದೆಯಲ್ಲೊಂದು ಅರಶಿನದ ಎಲೆ ಹಾಸಿ, ಅದರ ಮೇಲೆ ಒಂದು ಮುಷ್ಟಿ ಹೊಸ ಅವಲಕ್ಕಿಯನ್ನು ಇಟ್ಟು, ಹೂ ಹಾಕಿ ಗದ್ದೆ ದೇವರಿಗೊಂದು ಹಾಡು ಹೇಳಿ ನಮಿಸುವ ಸಂಪ್ರದಾಯ. ನಂತರ, ಕಾಯಿ ಬೆಲ್ಲ ಬೆರೆಸಿದ ಅವಲಕ್ಕಿಯನ್ನು ಮನೆಯಲ್ಲಿನ ಹೊಲಿರಾಶಿಗೆ (ಬತ್ತದ ರಾಶಿ) ನೈವೇದ್ಯ ಮಾಡಿ, ಬಂದವರಿಗೆಲ್ಲ ನೀಡಿ, ಮನೆಯವರೂ ಭಕ್ತಿಯಿಂದ ಸೇವಿಸುವ ಪದ್ಧತಿ.
ಈ ರೀತಿ ಮನೆಯಲ್ಲೇ ಕುಟ್ಟಿ ತಯಾರಿಸಿದ ಅವಲಕ್ಕಿಯನ್ನು ಎಷ್ಟು ದಿನ ಬೇಕಾದರೂ ಇಡಬಹುದು, ಕೆಡುವುದಿಲ್ಲ. ಜತೆಗೆ ಸೇವನೆಗೆ, ದೇವರ ಪೂಜೆಗೆ ಶ್ರೇಷ್ಟ. ಅದಕ್ಕೇ ಕುಚೇಲನು ತನ್ನ ಹಳ್ಳಿಯಿಂದ ಬರುವಾಗ, ಅವಲಕ್ಕಿಯನ್ನು ತಂದು ಕೃಷ್ಣನಿಗೆ ಉಡುಗೊರೆ ನೀಡಿದ್ದು ಇರಬೇಕು!
ಒಗ್ಗರಣೆ ಅವಲಕ್ಕಿ:ಮನೆಯಲ್ಲೇ ತಯಾರಿಸಿದ ಅವಲಕ್ಕಿಯನ್ನು ರುಚಿಕರವಾಗಿ ಸೇವಿಸಲು ನಮ್ಮೂರಿನವರು ಕಂಡುಕೊಂಡ ಉತ್ತಮ ಮಾರ್ಗವೆಂದರೆ ಒಗ್ಗರಣೆ ಅವಲಕ್ಕಿ. ಕಾಯಿ ತುರಿದು, ಅರೆದು, ಹದವಾದ ಖಾರ ಮತ್ತು ಉಪ್ಪು ಬೆರೆಸಿ, ಕರಿಬೇವಿನ ಸೊಪ್ಪಿನ ಒಗ್ಗರಣೆ ನೀಡಿ, ಬಾಣಲೆಯಲ್ಲಿ ತಿರುವಿಹಾಕಿದ, ನೆನೆಸಿದ ಅವಲಕ್ಕಿಯ ರುಚಿ ಅದ್ಭುತ. ಮಾತ್ರವಲ್ಲ ಅದು ಪೌಷ್ಟಿಕ ಆಹಾರವೂ ಹೌದು.
ಬೆಳಗಿನ ಉಪಹಾರಕ್ಕೆ ಈ ರೀತಿ ಕಾಯಿಸಾಸುವೆ ಹಾಕಿದ ಒಗ್ಗರಣೆ ಅವಲಕ್ಕಿ ಅಥವಾ ಸರಳ ಒಗ್ಗರಣೆಯ ಅವಲಕ್ಕಿ ನಮ್ಮೂರಲ್ಲಿ ಸಾಮಾನ್ಯ ಎನಿಸಿದ ಕಾಲವೊಂದಿತ್ತು. ಕೃಷ್ಣ ಜನ್ಮಾಷ್ಟಮಿ, ಶಿವರಾತ್ರಿ, ಏಕಾದಶಿಯಂತಹ ಉಪವಾಸದ ದಿನಗಳಂದು, ಲಘು ಉಪಾಹಾರವಾಗಿ ಒಗ್ಗರಣೆ ಅವಲಕ್ಕಿ, ಜತೆಗೆ ಹೆಸರುಬೇಳೆ ಬೇಯಿಸಿದ ನೀರನ್ನು ಸೇವಿಸುವ ಪರಿಪಾಠ. ಹಲವು ದಿನ ಕೆಡದೇ ಉಳಿಯುವ ಅವಲಕ್ಕಿಯನ್ನು ಹಿಂದಿನ ಕಾಲದ ಜನರು ಯಾತ್ರೆಗೆ ಹೋಗುವಾಗ ಕಟ್ಟಿಕೊಂಡು ಹೋಗು ತ್ತಿದ್ದರಂತೆ.
ಕಾಶಿ, ತಿರುಪತಿ, ರಾಮೇಶ್ವರ, ಕಾವೇರಿ ಯಾತ್ರೆಗೆ ಹೋಗುವವರ ಪ್ರಮುಖ ಆಹಾರ ಮೂಲವೇ ಅವಲಕ್ಕಿ. ದಾರಿಯಲ್ಲಿ ಊಟ, ತಿಂಡಿ ಸಿಗದೇ ಇದ್ದ ಸಮಯದಲ್ಲಿ, ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ, ಬೆಲ್ಲದೊಂದಿಗೆ ಅಥವಾ ಹಾಗೆಯೇ ಸೇವಿಸಿ ದರೆ, ಅಷ್ಟರ ಮಟ್ಟಿಗೆ ಆ ಹೊತ್ತಿನಲ್ಲಿ ಬಡಬಾಗ್ನಿಯನ್ನು ಶಮನಗೊಳಿಸಿದಂತಾಗುತ್ತಿತ್ತು.
ತೆಳು ಅವಲಕ್ಕಿ ಎಂಬ ವಿಸ್ಮಯ:ನಮ್ಮೂರಿನ ಮನೆಮನೆಗಳಲ್ಲೇ ಕುಟ್ಟಿ ತಯಾರಿಸುವ ಶುದ್ಧ, ರುಚಿಕರ ಅವಲಕ್ಕಿಯ ಶ್ರೇಷ್ಟ ಸ್ಥಾನಕ್ಕೆ ಚ್ಯುತಿ ಬರುವ ವಿದ್ಯಮಾನ ನಡೆದದ್ದು 1970ರ ದಶಕದಲ್ಲಿ. ಒರಳಿಗೆ ಹಾಕಿ, ವನಕೆಯಿಂದ ಕುಟ್ಟು ಮಾಡಿದಅವಲಕ್ಕಿಯು ಸಹಜವಾಗಿ ದಪ್ಪಗಿರುತ್ತಿತ್ತು. 1970ರ ದಶಕದಲ್ಲಿ ‘ತೆಳು ಅವಲಕ್ಕಿ’ ಎಂಬ ವಿಸ್ಮಯವು ನಮ್ಮೂರಿನ ಅಂಗಡಿ ಗಳಲ್ಲಿ ದೊರಕಲು ಆರಂಭವಾಯಿತು.
ತೆಳು ಅವಲಕ್ಕಿಯನ್ನು ನೀರಿನಲ್ಲಿ ನೆನೆಸದೇ, ದಿಢೀರ್ ಎಂದು ತಿನ್ನಲು ಹದಗೊಳಿಸುವ ಪದ್ಧತಿಯೂ ಜಾರಿಗೆ ಬಂತು. ಆದರೂ, ಮನೆಯಲ್ಲಿ ಕುಟ್ಟಿ ಅವಲಕ್ಕಿ ತಯಾರಿಸುವ ಸಂಪ್ರದಾಯ ಪೂರ್ಣ ನಿಲ್ಲಲಿಲ್ಲ. ಹಬ್ಬ ಹರಿದಿನಗಳಲ್ಲಿ ಒಗ್ಗರಣೆ ಅವಲಕ್ಕಿ ಮಾಡಲು ದಪ್ಪ ಅವಲಕ್ಕಿಯೇ ಬೇಕಿತ್ತಲ್ಲ!
ಯಾವಾಗ ನಮ್ಮ ಮನೆಯಿಂದ ೫ ಕಿಮೀ ದೂರದಲ್ಲಿದ್ದ ಶಂಕರನಾರಾಯಣದಲ್ಲಿ ಅವಲಕ್ಕಿ ಮಿಲ್ ಸ್ಥಾಪನೆಯಾಯಿತೋ, ಆಗ ನಮ್ಮ ಮನೆಯಲ್ಲಿ ಅವಲಕ್ಕಿ ಕುಟ್ಟುವ ಪುರಾತನ ಪದ್ಧತಿಗೆ ಕಲ್ಲುಬಿತ್ತು ಎಂದೇ ಹೇಳಬಹುದು. ಸಂಜೆ ಆರು ಗಂಟೆಯಿಂದ ರಾತ್ರಿ ಒಂಬತ್ತರ ತನಕ ಮೂರು ನಾಲ್ಕು ಜನ ಶ್ರಮವಹಿಸಿ ತಯಾರಿಸುವ ಮನೆ ಅವಲಕ್ಕಿ, ನಿಧಾನವಾಗಿ ನೇಪಥ್ಯ ಸೇರಿತು. ಒಂದುಕಳಸಿಗೆ ಬತ್ತವನ್ನು ನೆನೆಸಿ, ಮೂಟೆ ಕಟ್ಟಿ ಶಂಕರನಾರಾಯಣದಲ್ಲಿದ್ದ ಅವಲಕ್ಕಿ ಮಿಲ್‌ಗೆ ಕೊಟ್ಟರೆ, ಅರ್ಧ ಗಂಟೆಯಲ್ಲಿ ಅವಲಕ್ಕಿ ತಯಾರಿಸಿ ಕೊಡುತ್ತಿದ್ದರು.
ಹುರಿಯುವುದು, ಕುಟ್ಟುವುದು, ತೌಡು ಬೇರ್ಪಡಿಸುವುದು ಎಲ್ಲಾ ಕೆಲಸವನ್ನು ಆ ಮಿಲ್ ಬಹುಬೇಗನೆ ಮಾಡಿ ಮುಗಿಸುತ್ತಿತ್ತು.ಮನೆಯ ಹೆಂಗಸರ ಶ್ರಮ ಉಳಿಯಿತು. ಗಂಡಸರು ಬತ್ತವನ್ನು ಮೂಟೆ ಕಟ್ಟಿಕೊಂಡು, ಮಿಲ್‌ಗೆ ಸಾಗಿಸಿ, ಅವಲಕ್ಕಿ ಮಾಡಿಸುವ ಪದ್ಧತಿ ಚಾಲ್ತಿಗೆ ಬಂತು. ಹೊಸ ಅವಲಕ್ಕಿ ಮಿಲ್‌ನಿಂದಾಗಿ, ಹೆಂಗಸರ ಕೆಲಸ ಕಡಿಮೆಯಾದರೆ, ಗಂಡಸರಿಗೊಂದು ಪ್ರತ್ಯೇಕ ಕೆಲಸ ಹುಟ್ಟಿಕೊಂಡಿತು!
ಮಿಲ್‌ನಲ್ಲಿ ಅನುಭವ:ಈಗಿನಂತೆ ಆಗ ಮನೆಗೊಂದು ಬೈಕ್ ಎಲ್ಲಿತ್ತು? ನಮ್ಮ ಮನೆಯಿಂದ ಬಸ್ ರಸ್ತೆಗೆ ಮೂರು ಕಿಮೀ ದೂರ. ಅವಲಕ್ಕಿ ಮಾಡಿಸುವ ಕೆಲಸವು ನನ್ನ ತಲೆಯ ಮೇಲೆ ಬಿತ್ತು. ನಮ್ಮ ಮನೆಯಲ್ಲಿ ಗಂಡಸೆಂದರೆ ನಾನೇ! ಆದರೆಆಗಿನ್ನೂ ನಾನು ವಿದ್ಯಾರ್ಥಿ. ನೆನೆಸಿದ ಬತ್ತದ ಮೂಟೆಯನ್ನು ೩ ಕಿಮೀ ಹೊತ್ತು ತಂದು, ಬಸ್ ರಸ್ತೆಯಲ್ಲಿ ಕಾದು, ಬಸ್ ಏರಿ, ಎರಡು ಕಿಮೀ ದೂರದ ಶಂಕರನಾರಾಯಣಕ್ಕೆ ಹೋಗಿ, ಅಲ್ಲಿ ಮಿಲ್ ಮಾಡಿಸಿ, ಪುನಃ ಎರಡು ಕಿಮೀ ಬಸ್ ಪಯಾಣ ಮಾಡಿ, ಮೂರು ಕಿಮೀ ಕಾಲ್ನಡಿಗೆ ದಾರಿ ಸವೆಸುವ ಕೆಲಸ ನನ್ನ ಪಾಲಿನದಾಯಿತು.
ಇಷ್ಟನ್ನು ಮಾಡಿ ಮುಗಿಸುವಷ್ಟರಲ್ಲಿ ನಾನು ಸುಸ್ತೋಸುಸ್ತು! ಅವಲಕ್ಕಿ ಹೊತ್ತು ಮನೆಗೆ ತರುವಾಗಂತೂ, ಯಾಕಾದರೂ ಈ ಅವಲಕ್ಕಿ ಮಾಡುವ ಕೆಲಸವನ್ನು ನಮ್ಮ ಅಮ್ಮಮ್ಮ ನನ್ನ ತಲೆಗೆ ಕಟ್ಟಿದರೋ ಎಂದು ಬಹಳ ಬೇಸರ ಎನಿಸುತ್ತಿತ್ತು. ಆದರೆ ಆ ತೆಳು ಅವಲಕ್ಕಿ ತಿನ್ನಲು ಇನ್ನೂ ರುಚಿಕರ. ತೆಳುಅವಲಕ್ಕಿಯನ್ನು ನೆನೆಹಾಕುವಂತಿಲ್ಲ. ನೀರಿನಲ್ಲಿ ನೆನ್ತೈಟ್ಟರೆ ಮುದ್ದೆ ಆಗುತ್ತದೆ. ಆದ್ದರಿಂದ ರುಚಿಕರ ಒಗ್ಗರಣೆ ಅವಲಕ್ಕಿಯನ್ನು ತಯಾರಿಸಲು, ದಪ್ಪ ಅವಲಕ್ಕಿಯೇ ಬೇಕು. ಆದ್ದರಿಂದ ಮಿಲ್‌ನವರಿಗೆ ಹೇಳಿ, ಐದು ಕಿಲೋ ಬತ್ತವನ್ನು ದಪ್ಪ ಅವಲಕ್ಕಿ ಮಾಡಿಸುವ ಜವಾಬ್ದಾರಿಯೂ ನನ್ನದೇ.
ಮನೆಯಲ್ಲಿದ್ದ ಅವಲಕ್ಕಿ ಕುಟ್ಟುವ ವನಕೆಗಳು ಅಟ್ಟ ಸೇರಿದವು. ನೆನೆಸಿದ ಬತ್ತವನ್ನು ಮನೆಯಲ್ಲೇ ಹುರಿದು, ಅವಲಕ್ಕಿ ತಯಾರಿಸುವ ಆ ಹಳೆಯ ಪದ್ಧತಿಯು ನಮ್ಮೆಲ್ಲರ ನೆನಪಿನ ಗಣಿಗಳಲ್ಲಿಬಂಧಿಯಾಯಿತು. ಅವಲಕ್ಕಿಯು ಕುಚೇಲನ ಪ್ರಿಯ ತಿಂಡಿ ಎನಿಸಿ, ಬಡವರ ಪೌಷ್ಟಿಕ ಆಹಾರ ಎನಿಸಿದರೂ, ಈಚಿನ ದಶಕಗಳಲ್ಲಿ ಮತ್ತೆ ಅದು ಮುನ್ನೆಲೆಗೆ ಬಂದಿದ್ದು ಒಂದು ಚೋದ್ಯ. ಮೈಸೂರು ಮೊದಲಾದ ಕಡೆ ಇರುವ ಅಂತಾರಾಷ್ಟ್ರೀಯ ಯೋಗ ಕಲಿಕಾ ಕೇಂದ್ರಗಳಲ್ಲಿ, ಅವಲಕ್ಕಿಯನ್ನು ಪ್ರಚುರ ಗೊಳಿಸುತ್ತಿದ್ದಾರೆ.
ದೇಹಾರೋಗ್ಯ ಕಾಪಾಡಲು, ಅಂಗಸೌಷ್ಟವ ಬೆಳೆಸಲು ಅವಲಕ್ಕಿಯು ಒಳ್ಳೆಯದಂತೆ! ಅದೊಂದು ಸಮತೋಲಿತ ಆಹಾರ ವಂತೆ! ಕುಚೇಲನ ಪ್ರೀತಿಯ ಅವಲಕ್ಕಿಗೆ ಆಧುನಿಕ ಯುಗದಲ್ಲಿ ದೊರಕಿದ ಈ ವಿಶೇಷಣ ನಿಜಕ್ಕೂ ಹೆಮ್ಮೆ ಮೂಡಿಸುತ್ತಿದೆ. ಸಾವಿರಾರು ವರ್ಷಗಳ ಹಿಂದೆ ಕುಚೇಲನು ಕೃಷ್ಣನಿಗೆ ಉಡುಗೊರೆಯಾಗಿ ನೀಡಿದ ಅವಲಕ್ಕಿಯು, ಇಂದಿಗೂ ಒಂದು ಉತ್ತಮ ಆಹಾರ ಎನಿಸಿದರೆ, ಅದಕ್ಕಿಂತ ಬೇರೆ ಗರಿ ಬೇಕೆ ಆ ಸರಳ ತಿನಿಸಿಗೆ!