ಭೂರಾಜಕೀಯ: ರಾಜತಾಂತ್ರಿಕ ಕ್ರಮಗಳಿಗೆ ಇದು ಸಕಾಲ
ಕದನ ಕುತೂಹಲ
ರಾಜ್‌ಗುರು ಕೆ.ಆರ್‌.
ಜಾಗತಿಕವಾಗಿ ಪ್ರತಿಬಾರಿ ಮುಖಭಂಗ ಅನುಭವಿಸಿದಾಗಲೆಲ್ಲ ಚೀನಾ ತನ್ನ ನೆರೆರಾಷ್ಟ್ರಗಳೊಂದಿಗೆ ಕಾಲುಕೆರೆದು ಜಗಳಕ್ಕೆನಿಲ್ಲುವುದು ಸಾಮಾನ್ಯವಾಗಿಬಿಟ್ಟಿದೆ. ಅರುಣಾಚಲ ಪ್ರದೇಶದ ತವಾಂಗ್ ವಲಯದ ಯಾಂಗ್ಸ್‌ಟೆ ಪ್ರದೇಶದ ವಾಸ್ತವಿಕನಿಯಂತ್ರಣ ರೇಖೆಯ ಬಳಿ ಭಾರತೀಯ ಸೈನಿಕರೊಂದಿಗೆ ಅನವಶ್ಯಕ ಸೆಣಸಾಟಕ್ಕಿಳಿ ದಿದ್ದು ಅದರ ಹತಾಶೆಯ ಪ್ರತೀಕ.
2023ರಲ್ಲಿ ಭಾರತವು ಜಿ-20 ಒಕ್ಕೂಟದ ನೇತೃತ್ವ ವಹಿಸಿರುವುದು ಮತ್ತು ಪ್ರಬಲ ಕ್ವಾಡ್-4 ರಾಷ್ಟ್ರಗಳ ನಿರ್ಣಯಗಳಲ್ಲಿ ಮಹತ್ತರ ಪಾತ್ರ ಮೆರೆದಿರುವುದು ಚೀನಾದ ಕಣ್ಣನ್ನು ಕೆಂಪಾಗಿಸಿದ್ದಿರಬೇಕು! ದಕ್ಷಿಣ ಏಷ್ಯಾದಲ್ಲಿನ ತನ್ನ ಪ್ರಭಾವದ ವಿಸ್ತರಣೆಗೆಅಮೆರಿಕವು ಭಾರತವನ್ನು ನೆಚ್ಚಿದ್ದು, ಇದನ್ನು ರಾಜತಾಂತ್ರಿಕ ಜಾಣ್ಮೆಯ ಮೂಲಕ ಲಾಭದಾಯಕವಾಗಿ ಪರಿವರ್ತಿಸುವ ಅವಶ್ಯಕತೆ ಭಾರತಕ್ಕಿದೆ.
ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇಂಥ ಕೂಟನೀತಿಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಜಾಗತಿಕ ನೀತಿ-ನಿರೂಪಣೆಯಲ್ಲಿ ಭಾರತದ ಪಾತ್ರವನ್ನು ಪರಿಗಣಿಸಲೇಬೇಕಾದ ಅನಿವಾರ್ಯವನ್ನು ಸೃಷ್ಟಿಸಿದ್ದಾರೆ. ಇದನ್ನು ಅರಗಿಸಿ ಕೊಳ್ಳಲಾ ಗದ ಚೀನಾ ಆಗಾಗ ಇಂಥ ಮೊಂಡುತನಕ್ಕೆ ಮುಂದಾಗುತ್ತದೆ.
ಭಾರತ ಮತ್ತು ಅಮೆರಿಕ ಇತ್ತೀಚೆಗಷ್ಟೇ ಉತ್ತರಾಖಂಡದ ತಪೋವನದಲ್ಲಿ ಜಂಟಿಯಾಗಿ ಯುದ್ಧ ಸೇನಾಭ್ಯಾಸ ನಡೆಸಿದ್ದನ್ನು ಕಂಡ ಚೀನಾ ಸಹಜವಾಗಿಯೇ ಎರಡೂ ದೇಶಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿ ಸಿದೆ; ಭಾರತದ ಗಡಿಭಾಗದಲ್ಲಿ ಚೀನಾ ಸೃಷ್ಟಿಸುತ್ತಿರುವ ಅಹಿತಕರ ವಿದ್ಯಮಾನಗಳಿಗೆ, ‘ಅಮೆರಿಕಕ್ಕೆ ಭಾರತವು ಹತ್ತಿರವಾಗುತ್ತಿದೆ ಯಲ್ಲ’ ಎಂಬ ಹೊಟ್ಟೆಯುರಿಯೂ ಕಾರಣವೆನ್ನಬಹುದು.
ಆದ್ದರಿಂದ, ಅಮೆರಿಕ-ಚೀನಾ ನಡುವಿನ ಹಿತಾಸಕ್ತಿಯ ಸಂಘರ್ಷದಲ್ಲಿ ಜಾಣ್ಮೆಯಿಂದ ವ್ಯವಹರಿಸಿ ತನ್ನ ಪ್ರಾಮುಖ್ಯ ಮೆರೆಯುವದರ್ದು ಭಾರತಕ್ಕಿದೆ. ಈ ಎರಡೂ ದೇಶಗಳು ಭಾರತದ ಹಿತಾಸಕ್ತಿಗೆ ಪೂರಕವಾಗುವಂಥ, ನೆಚ್ಚಿಕೊಳ್ಳುವಂಥ ಸ್ನೇಹಿತರಲ್ಲದೇ ಹೋದರೂ, ಭಾರತ ಕೈಗೊಳ್ಳುವ ರಾಜತಾಂತ್ರಿಕ ಕ್ರಮಗಳು ಇಂಥ ಸಮಯದಲ್ಲಿ ಅತ್ಯಂತ ನಿರ್ಣಾಯಕವಾಗಲಿವೆ.
ಕಳೆದ 7-8 ತಿಂಗಳ ಜಾಗತಿಕ ಬೆಳವಣಿಗೆಗಳಲ್ಲಿ, ಕಾಬೂಲ್‌ನಲ್ಲಿ ಅಮೆರಿಕದ ಡ್ರೋನ್‌ನಿಂದ ಅಲ್‌ಖೈದಾದ ಅಲ್ ಜವಾಹಿರಿ ಹತ್ಯೆಯಾಗಿದ್ದು ಮತ್ತು ಚೀನಾದ ಯುದ್ಧೋನ್ಮಾದದ ಬೆದರಿಕೆಗಳ ನಡುವೆಯೂ ತೈವಾನ್‌ಗೆ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ನೀಡಿದ್ದು ಅತ್ಯಂತ ಮಹತ್ವದವು ಎನ್ನಬೇಕು. ಅಮೆರಿಕ-ಚೀನಾಗಳ ನಡುವಿನ ವ್ಯಾಪಾರ ಅಥವಾ ಸಂಘರ್ಷದ ಘಟನೆಗಳು ಭಾರತಕ್ಕೆ ನೇರವಾಗಿ ಸಂಬಂಧಿಸಿಲ್ಲವಾದರೂ, ಅಂತಾರಾಷ್ಟ್ರೀಯ ಭೂರಾಜಕೀಯ ತಂತ್ರಗಾರಿಕೆಯಲ್ಲಿ ಭಾರತ ಮೂಕಪ್ರೇಕ್ಷಕನಾಗಿ ಕೂರದೆ, ರಾಜತಾಂತ್ರಿಕವಾಗಿ ಅದರ ಪ್ರಯೋಜನ ಪಡೆಯುವುದಕ್ಕೆ ಮುಂದಾಗಬೇಕಾದ ತುರ್ತು ಅವಶ್ಯಕತೆಯಿದೆ.
ಉಕ್ರೇನ್ ವಿಷಯದಲ್ಲಾಗಿರುವ ಜಾಗತಿಕ ಮುಖಭಂಗವನ್ನು ಮರೆಮಾಚಲೆಂದೇ ಹಾಗೂ ವಿಶ್ವದ ಪ್ರಮುಖ ನಿರ್ಧಾರಗಳಲ್ಲಿ ಅಮೆರಿಕದ ಮಹತ್ವ ಯಾವತ್ತೂ ಕಡೆಗಣನೆಗೆ ಅರ್ಹವಲ್ಲ ಎಂಬ ಸಂದೇಶ ನೀಡಲೆಂದೇ ಕಾಬೂಲ್‌ನಲ್ಲಿನ ಅಲ್ ಜವಾಹಿರಿ ಹತ್ಯೆ ಮತ್ತು ತೈವಾನ್‌ಗೆ ನ್ಯಾನ್ಸಿ ಪೆಲೋಸಿ ನೀಡಿದ ಭೇಟಿಯ ಮೂಲಕ ಅಮೆರಿಕವು ತನ್ನ ಪ್ರಸ್ತುತತೆ ಹಾಗೂ ಜಾಗತಿಕ ಮಹತ್ವ ವನ್ನು ಪ್ರಚುರಪಡಿಸಿತೆನ್ನಬೇಕು.
ವಿಶ್ವದ 2 ಪ್ರಮುಖ ರಾಷ್ಟ್ರಗಳು ನೇರವಾಗಿಯೇ ರಣಾಂಗಣಕ್ಕೆ ಧುಮುಕದಿದ್ದರೂ ಶೀತಲ ಸಮರವು ಇನ್ನೂ ಕೆಲ ದಶಕ ಗಳವರೆಗೆ ನಿಲ್ಲಲಾರದು ಎಂಬ ಆತಂಕವಿದೆ. ಇದರ ಪರಿಣಾಮ ಜಾಗತಿಕವಾಗಿದ್ದರೂ, ಪ್ರತಿ ರಾಷ್ಟ್ರವೂ ತನ್ನ ಲಾಭ, ಪ್ರಾದೇಶಿಕ ಹಿತಾಸಕ್ತಿಗೆಪೂರಕವಾಗಬಲ್ಲ ನಿರ್ಣಯಗಳನ್ನೇ ನೆಚ್ಚಿಕೊಂಡಿರುತ್ತದೆ ಎಂಬುದು ವೇದ್ಯ ಸಂಗತಿ.
ತೈವಾನ್, ದಕ್ಷಿಣ ಕೊರಿಯಾ, ಜಪಾನ್, ಆಸ್ಟ್ರೇಲಿಯಾದಂಥ ರಾಷ್ಟ್ರಗಳನ್ನು ಚೀನಾದೆದುರು ಎತ್ತಿಕಟ್ಟಿ ದಕ್ಷಿಣ ಏಷ್ಯಾದಾದ್ಯಂತ ತನ್ನ ಪ್ರಭಾವ ವಿಸ್ತರಿಸುವುದು ಅಮೆರಿಕದ ನೀತಿಯಾದರೆ, ವಿಶ್ವಾದ್ಯಂತ ತನ್ನ ವಿಸ್ತರಣಾ ನೀತಿಯನ್ನು ಪಸರಿಸಲು ಅಡ್ಡಿ ಯಾಗುತ್ತಿರುವ ಅಮೆರಿಕವನ್ನು ಬಗ್ಗುಬಡಿಯುವುದು ಚೀನಾದ ನೀತಿ. ಯುದ್ಧೋನ್ಮಾದ, ಪ್ರಬಲ ಮಿಲಿಟರಿ ಶಕ್ತಿ, ಜಾಗತಿಕಪ್ರಾಮುಖ್ಯ, ವಿಸ್ತರಣೆಯ ನೀತಿಗಳನ್ನು ಹೊಂದಿರುವ ಎರಡು ಪ್ರಬಲ ದೇಶಗಳ ನಡುವಿನ ನೇರ ಅಥವಾ ಶೀತಲ ಸಮರವು ಜಾಗತಿಕವಾಗಿ ಅನೇಕ ತಲ್ಲಣಗಳಿಗೆ ಕಾರಣವಾಗಲಿದ್ದು, ಪ್ರಸ್ತುತ ಕೇಂದ್ರದಲ್ಲಿರುವ ಸರಕಾರವು ಕೈಗೊಳ್ಳುವ ನಿರ್ಣಯಗಳು ಭಾರತದ ಹಿತಾಸಕ್ತಿಗೆ ಪೂರಕವಾಗುವ ಲಕ್ಷಣಗಳಿವೆ.
ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ತೈವಾನ್-ಚೀನಾ ಸಂಘರ್ಷದ ಬೆಂಕಿಗೆ ಕಾಲಕಾಲಕ್ಕೆ ತುಪ್ಪ ಸುರಿದು ಅಮೆರಿಕ ತನ್ನ ಸ್ವಹಿತಾಸಕ್ತಿಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಅದು ಸೋವಿಯತ್ ಒಕ್ಕೂಟವನ್ನು ತನ್ನ ಕೂಟನೀತಿಗಳಿಂದ ವಿಭಜಿಸಿ ರಷ್ಯಾವನ್ನು ಮೂಲೆಗುಂಪು ಮಾಡಿದ್ದೂ ಇಂಥ ನೀತಿಗಳ ಬಳಕೆಯಿಂದಲೇ. ತೈವಾನ್, ದಕ್ಷಿಣ ಕೊರಿಯಾ, ಜಪಾನ್,ಫಿಲಿಪೀನ್ಸ್, ಮಲೇಷ್ಯಾ, ಹಾಂಗ್‌ಕಾಂಗ್‌ನಂಥ ದೇಶಗಳಿಗೆ ತಂತ್ರಜ್ಞಾನ, ಯುದ್ಧೋಪಕರಣ ಒದಗಿಸುವುದರ ಜತೆಗೆ ಚೀನಾವನ್ನು ಕೆಣಕಲು ಬೇಕಾದ ನೈತಿಕ ಬೆಂಬಲವನ್ನೂ ಒದಗಿಸಿಕೊಂಡು ಬಂದ ಅಮೆರಿಕಕ್ಕೆ, ೬೦-೯೦ರ ದಶಕದ ಅವಧಿಯಲ್ಲಿ ತನ್ನ ಜಾಗತಿಕ ಸಾರ್ವಭೌಮತ್ವಕ್ಕೆ ಅಡ್ಡಿಯಾಗಬಲ್ಲ ದೇಶಗಳನ್ನು ತನ್ನ ವಿಭಜನಾ ತಂತ್ರದಿಂದ ಮೂಲೆಗುಂಪು ಮಾಡಿದ ಕುಖ್ಯಾತಿ ಯಿದೆ.
ಆದರೆ ಕಾಲಕಾಲಕ್ಕೆ ಬದಲಾಗುವ ಜಾಗತಿಕ ಸನ್ನಿವೇಶಗಳು, ಪ್ರಾಮುಖ್ಯಗಳು ಪ್ರಬಲ ಎನಿಸಿಕೊಂಡ ದೇಶಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿಬಿಡುತ್ತವೆ. ಅಮೆರಿಕಕ್ಕೆ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ನಂಬಿಕಸ್ಥ ಹಾಗೂ ಪ್ರಬಲ ರಾಷ್ಟ್ರ ಭಾರತವೊಂದೇ. ಹಲವು ವಿಚಾರಗಳಲ್ಲಿ ಕಾಲುಕೆರೆದು ಜಗಳಕ್ಕೆ ನಿಲ್ಲುವ ಚೀನಾಕ್ಕೆ ತಕ್ಕ ಪಾಠ ಕಲಿಸಲೆಂದು ಅಮೆರಿಕದ ಜತೆಗಿನ ಬಾಂಧವ್ಯವನ್ನು ಭಾರತ ಬಳಸಿಕೊಳ್ಳಲು ಇದು ಸುಸಂದರ್ಭ.
ಅಮೆರಿಕದೊಂದಿಗಿನ ಸಂಘರ್ಷದ ಕಾರಣಕ್ಕೆ ಚೀನಾವನ್ನು ತೊರೆಯಲಿರುವ ಸಾವಿರಾರು ತಂತ್ರಜ್ಞಾನ ಕಂಪನಿಗಳು ಮತ್ತು ಹೂಡಿಕೆದಾರರನ್ನು ಸೆಳೆಯುವ ಎಲ್ಲ ಅವಕಾಶಗಳನ್ನು/ಸಾಧ್ಯತೆಗಳನ್ನು ಭಾರತ ಪರಾಮರ್ಶಿಸಬೇಕು. ಹಾಗೆಯೇ, ಭಾರತಕ್ಕಿ ರುವ ಭೌಗೋಳಿಕ, ಸಾಮರಿಕ ಮತ್ತು ರಾಜತಾಂತ್ರಿಕ ಮಹತ್ವಗಳನ್ನು ಅಮೆರಿಕ ಮತ್ತು ವಿಶ್ವದ ಇತರ ದೇಶಗಳಿಗೆ ಸಾರಲು ಇದಕ್ಕಿಂತ ಸೂಕ್ತ ಸಮಯ ಸಿಗಲಾರದು.
ಭಾರತ-ತೈವಾನ್ ಸಂಬಂಧದ ಪ್ರಾಮುಖ್ಯ ಭಾರತ ಮತ್ತು ತೈವಾನ್ ನಡುವಿನ ಬಾಂಧವ್ಯದಲ್ಲಿ ಒಂದು ವಿಶೇಷವಿದ್ದು, 1995ರಿಂದ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ವೃದ್ಧಿಯಾಗಿರುವುದನ್ನು ಕಾಣಬಹುದು. ನವದೆಹಲಿಯಲ್ಲಿ 1995ರಲ್ಲಿ ‘ತೈವಾನ್ ಇಕನಾಮಿಕ್ ಕಲ್ಚರಲ್ ಸೆಂಟರ್’ ಹಾಗೂ ತೈಪೆಯಲ್ಲಿ ‘ಇಂಡಿಯಾ ತೈಪೆ ಅಸೋಸಿಯೇಷನ್’ ಸ್ಥಾಪನೆಯೊಂದಿಗೆ ಉಭಯರಾಷ್ಟ್ರಗಳ ನಾಗರಿಕ ಸಂಬಂಧ ವೃದ್ಧಿಯಾಯಿತು ಮತ್ತು ಕೃಷಿ, ನಾಗರಿಕ ವಿಮಾನಯಾನದಂಥ ಕ್ಷೇತ್ರಗಳಲ್ಲಿ ಒಂದಷ್ಟು ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಯಿತು.
ನರೇಂದ್ರ ಮೋದಿಯವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ 1999ರಲ್ಲಿ ತೈವಾನ್ ದ್ವೀಪರಾಷ್ಟ್ರಕ್ಕೆ ಭೇಟಿನೀಡಿದ್ದು, ತದನಂತರ 2011ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೈವಾನಿನ ವ್ಯಾಪಾರೋದ್ದಿಮೆಯನಿಯೋಗವನ್ನು ಸತ್ಕರಿಸಿದ್ದು ಮತ್ತು ‘ವೈಬ್ರಂಟ್ ಗುಜರಾತ್’ ಹಣೆಪಟ್ಟಿಯ 2012ರ ಹೂಡಿಕೆ ಮೇಳಕ್ಕೆ ತೈವಾನ್ ಕಂಪನಿಗಳನ್ನು ಆಹ್ವಾನಿಸಿದ್ದು ಹಾಗೂ 2014ರಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತೈವಾನ್ ಇಕನಾಮಿಕ್ ಕಲ್ಚರಲ್ ಸೆಂಟರ್‌ನ ಮುಖ್ಯಸ್ಥರನ್ನು ಕರೆಸಿದ್ದು ವಿಶೇಷ ಬೆಳವಣಿಗೆಗಳೆನ್ನಬೇಕು.
ಭಾರತೀಯ ವಿದೇಶಾಂಗ ಇಲಾಖೆಯ ಸಹಯೋಗದಲ್ಲಿ ಪ್ರತಿವರ್ಷ ನಡೆಯುವ ‘ರೈಸಿನಾ ಡೈಲಾಗ್’ ಸಮ್ಮೇಳನಕ್ಕೆ ೨೦೧೬ರಲ್ಲಿ ತೈವಾನ್ ವಿದೇಶಾಂಗ ಸಚಿವ ಹುಂಗ್-ಮಾವೋ-ತಿನ್‌ರನ್ನು ಆಹ್ವಾನಿಸಿದ್ದು ಆ ದೇಶಕ್ಕೆ ಭಾರತವು ನೀಡುತ್ತಿರುವ ಮಹತ್ವಕ್ಕೆ ಸಾಕ್ಷಿ. ೨೦೨೦ರಲ್ಲಿ ಭಾರತ-ಚೀನಾ ನಡುವೆ ಗ್ಯಾಲ್ವಾನ್‌ನಲ್ಲಿ ನಡೆದ ಸಂಘರ್ಷದಲ್ಲಿ ಭಾರತವು ಒಂದಿಂಚೂ ಹಿಂದೆ ಸರಿಯದೆತೋರಿದ ಧೈರ್ಯವನ್ನು ತೈವಾನ್‌ನ ಸುದ್ದಿವಾಹಿನಿಗಳು ಕೊಂಡಾಡಿ, ಪ್ರಭು ಶ್ರೀರಾಮನು ಡ್ರ್ಯಾಗನ್ ಅನ್ನು ಹತ್ಯೆಮಾಡುವ ಚಿತ್ರಗಳ ಮೂಲಕ ಈ ವಿದ್ಯಮಾನವನ್ನು ವೈರಲ್ ಮಾಡಿದ್ದು ಕೂಡ ಸ್ಮರಣಾರ್ಹ.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತೈವಾನ್ ಮಾಡಿರುವ ಸಾಧನೆ ಶ್ಲಾಘನೀಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಈ ಪುಟ್ಟದೇಶದ ಸಹಕಾರ ವನ್ನು ಪಡೆಯುವುದರೊಂದಿಗೆ ಭಾರತವು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲು ಸಾಧ್ಯವಿದೆ, ಇನ್ನೂ ಅನೇಕ ಸಾಧನೆಗಳಿಗೆ ಮುನ್ನುಡಿ ಬರೆಯಬಹುದಾಗಿದೆ. ಪ್ರಸ್ತುತ ಕೆಲವೊಂದು ಜಾಗತಿಕ ವಿದ್ಯಮಾನಗಳು ಭಾರತಕ್ಕೆ ಸಂಬಂಧಪಡ ದಿದ್ದರೂ, ಚೀನಾಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ಅವು ಭಾರತದ ಪಾಲಿಗೆ ಅವಶ್ಯಕವಾಗಿವೆ. ಅಂದರೆ, ತೈವಾನ್‌ಗೆ ಭಾರತವು ನೀಡುವ ಬೆಂಬಲ, ಈ ಭಾಗದಲ್ಲಿ ಚೀನಾವನ್ನು ಹಿಂದಿಕ್ಕಲು ಸಹಕಾರಿಯಾಗುತ್ತದೆ.
ತೈವಾನ್ ಜತೆಗಿನ ಭಾರತದ ಬಾಂಧವ್ಯವು ಉನ್ನತ/ರಾಜತಾಂತ್ರಿಕ ಮಟ್ಟದಲ್ಲಿ ಅಧಿಕೃತವಾಗಿ ನಡೆಯದೇ ಹೋದರೂ, ಉಭಯದೇಶಗಳ ಚಿಂತಕರ ಚಾವಡಿಗಳು, ನೀತಿ-ನಿರೂಪಣಾ ತಜ್ಞರು, ಮುತ್ಸದ್ದಿಗಳು ಪರಸ್ಪರ ಕೈಹಿಡಿದುಕೊಂಡು ಮುನ್ನಡೆಯುವುದು ಪ್ರಸಕ್ತ ಸನ್ನಿವೇಶದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಇಲ್ಲಿ ತೈವಾನ್ ಜತೆಗಿನ ಬಾಂಧವ್ಯವನ್ನು ಉಲ್ಲೇಖಿಸಿರುವುದು ಉದಾಹರಣೆಗಷ್ಟೇ. ಭಾರತವು ಇಂಥದೇ ಮತ್ತಷ್ಟು ರಾಷ್ಟ್ರಗಳ ಜತೆ ಸೇರಿ, ಕೂಟನೀತಿಗಳ ನಿರೂಪಣೆಗೆ ಮುಂದಾಗುವುದಕ್ಕೆ ಇದು ಸಕಾಲ. ತೈವಾನ್ ನಂಥ ಸಣ್ಣ, ಆದರೆ ತೆಗೆದುಹಾಕಲಾಗದಂಥ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ವೃದ್ಧಿ ಮಾಡಿಕೊಳ್ಳುವ ಮೂಲಕ ಚೀನಾಕ್ಕೆ ಸೆಡ್ಡು ಹೊಡೆಯಬೇಕಾದ್ದು ಸದ್ಯದ ಅಗತ್ಯಗಳಲ್ಲೊಂದು. ಚೀನಾಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಭಾರತ ಪ್ರತ್ಯುತ್ತರ ನೀಡಬೇಕಿರುವುದು ಸದ್ಯದ ಅನಿವಾರ್ಯತೆ ಎಂಬುದರಲ್ಲಿ ಎರಡು ಮಾತಿಲ್ಲ.