ಹರಿಯುವ ನೀರಿಗೆ ಶಾಸ್ತ್ರದ ಕಟ್ಟಿಲ್ಲ
ಶಶಾಂಕಣ
.@.
ಕಾಡಿನ ನಡುವೆ ಹರಿಯುವ ಒಂದು ದೊಡ್ಡ ಹಳ್ಳದ ನೀರಿನ ಏರಿಳಿತವನ್ನು ಗಮನಿಸುತ್ತಾ ಹೋದರೆ, ಒಂದು ಜನ ಸಂಸ್ಕೃತಿಯ ಜಲ ಪದ್ಧತಿಯನ್ನು ನೋಡಬಹುದು; ಆ ಸುತ್ತಲಿನ ಜನಸಾಮಾನ್ಯರ ಬದುಕಿನ ಹಲವು ಮಜಲುಗಳನ್ನು ಕಾಣಬಹುದು, ನಾಗರಿಕತೆಯ ಓಟದ ವೇಗವನ್ನು ಸಹ ಗುರುತಿಸಬಹುದು.
ನಮ್ಮ ಹಳ್ಳಿ ಮನೆಯ ಪೂರ್ವ ದಿಕ್ಕಿನಲ್ಲಿರುವ ಒಂದು ಕಿ.ಮೀ. ಉದ್ದನೆಯ ಗದ್ದೆ ಬೈಲನ್ನು ಹಾದು, ಹರನಗುಡ್ಡೆಯ 120 ಮೆಟ್ಟಿಲುಗಳನ್ನು ಏರಿ, ಅಲ್ಲಿನ ಹಾಡಿ, ಗುಡ್ಡದಲ್ಲಿ ಮುಕ್ಕಾಲು ಗಂಟೆ ನಡೆದರೆ, ಕೊಟಬಚ್ಚಲು ಹೊಳೆ ಸಿಗುತ್ತದೆ. ಹಸಿರು ಪರಿಸರದ ನಡುವೆಯೇ ಸಾಗುವ ಆ ದಾರಿಯಲ್ಲಿ ನಾನು ನಡೆದದ್ದು ಹಲವು ಬಾರಿ – ಅದಕ್ಕೆ ಸಕಾರಣವೂ ಇದೆ. ಅದನ್ನು ಆಮೇಲೆ ಹೇಳುತ್ತೇನೆ.
ನಮ್ಮ ಮನೆಯಿಂದ ನಡೆಯಲು ಆಂಭಿಸಿ ಸುಮಾರು ಒಂದು ಗಂಟೆ ಕ್ರಿಮಿಸಿ ದಾಗ ಸಿಗುವ ಈ ಕೊಟಬಚ್ಚಲು ಹೊಳೆ ದಾಟುವಾಗ, ನಾನು ಹಲವು ಬಾರಿ ಯೋಚಿಸಿದ್ದುಂಟು : ಈ ಹೆಸರು ಹೇಗೆ ಬಂತು? ಕೊಟಬಚ್ಚಲು ಎಂಬ ಪದದಲ್ಲಿ, ಬಚ್ಚಲು ಎಂಬುದು ಇದ್ದರೂ, ಆ ಹೊಳೆಗೂ, ಸ್ನಾನ ಮಾಡುವ ಬಚ್ಚಲಿಗೂ ಸಂಬಂಧ ಇದ್ದಂತೆ ಕಾಣದು. ನಮ್ಮ ಸುತ್ತಲಿನ ಹಲವು ಸ್ಥಳನಾಮ ಗಳಿಗೆ ಹೋಲಿಸಿದರೆ, ‘ಕೊಟಬಚ್ಚಲು’ ಎಂಬುದು ತುಸು ‘ಆಡ್’ ಹೆಸರು ಎಂದೇ ನನ್ನ ಅಭಿಮತ.
ಕೊಟಬಚ್ಚಲು ಹೊಳೆ ಎಂಬ ಹೆಸರಿದ್ದರೂ, ಅಲ್ಲಿ ಹರಿಯುತ್ತಿದುದು ದೊಡ್ಡ ಹೊಳೆಯೇನಲ್ಲ. ಅಬ್ಬಬ್ಬಾ ಎಂದರೆ, ಅದನ್ನು ದೊಡ್ಡ ಹಳ್ಳ ಎನ್ನಬಹುದು. ಆ ದಾರಿಯಲ್ಲಿ ಸಾಗುವಾಗ ಮೊದಲಿಗೆ ಬಾವಣಿ ತೋಡು, ನಾಗೇರ್ತಿ ಕಾನು, ಗರಡಿ, ಆಮರಕಲ್ಲು ಇವನ್ನೆಲ್ಲ ದಾಟಿದ ನಂತರ ಸಣ್ಣ ಇಳುಕಲು ಇಳಿದಾಗ, ಕೊಟಬಚ್ಚಲು ಹೊಳೆ ಅಡ್ಡಲಾಗಿ ಹರಿಯುವುದನ್ನು ಕಾಣಬಹುದು. ಡಿಸೆಂಬರ್, ಜನವರಿ ನಂತರ, ಅದರಲ್ಲಿ ನೀರಿರುವುದು ತುಂಬಾ ಕಡಿಮೆ.
ಎಪ್ರಿಲ್-ಮೇ ಸಮಯದಲ್ಲಿ, ಅಲ್ಲಲ್ಲಿ ಕೆಲವು ಗುಂಡಿಗಳಲ್ಲಿ ಮಾತ್ರ ನೀರು ಉಳಿದು, ಬೇಸಗೆಯ ಬಿಸಿಲಿಗೆ ಬಾಯಾರುವ ದನಕರುಗಳಿಗೆ ಮಾತ್ರ ಸಾಕಾಗುತ್ತದೆ. ಜೂನ್‌ನಿಂದ ಅಕ್ಟೋಬರ್ ತನಕ ಸಾಕಷ್ಟು ರಭಸವಾಗಿ ಹರಿದರೂ, ಬಿರು ಮಳೆ ಇಲ್ಲದೇ ಇರುವ ದಿನಗಳಲ್ಲಿ ಅದನ್ನು ಕಾಲ್ನಡಗೆಯಲ್ಲಿ ಸುಲಭವಾಗಿ ದಾಟಬಹುದು. ಹಿಂದೆ ಆ ಹೊಳೆಗೆ ಮಳೆಗಾಲ ಆರಂಭ ವಾದ ತಕ್ಷಣ ಒಂದು ದೊಡ್ಡ ‘ಸಂಕ’ ಹಾಕುತ್ತಿದ್ದರಂತೆ. ಒಂದು ಮಳೆಗಾಲದಲ್ಲಿ ಹರಿದು ಬಂದ ನೆರೆಗೆ ಅದು ಕೊಚ್ಚಿ ಹೋಯಿತು; ಆ ನಂತರ ಸಂಕ ಹಾಕಿಸಲೇ ಇಲ್ಲ.
ಆದ್ದರಿಂದ, ನೆರೆ ಬಂದಾಗ ಒಂದೆರಡು ಗಂಟೆಯ ಕಾಲ ಆ ಹೊಳೆಯ ತುಂಬಾ ನೀರು ತುಂಬುವುದರಿಂದ, ದಡದಲ್ಲೇಕಾಯಬೇಕು; ನೆರೆ ಇಳಿದ ನಂತರ ದಾಟಬಹುದು. ನಮ್ಮ ಅಮ್ಮಮ್ಮ ಒಂದೆರಡು ಬಾರಿ, ಅಂತಹ ನೆರೆಯ ದಿನಗಳಲ್ಲಿ ಆ ಹೊಳೆಯ ಬಳಿ ಬಂದು, ದಾಟಲು ಸಾಧ್ಯವಾಗದೇ, ನೆರೆ ಇಳಿಯುವ ತನಕ ಕಾದು ಕುಳಿತಿದ್ದೆನೆಂದು ಹೇಳುತ್ತಿದ್ದರು; ಆದರೆನಮಗೆಲ್ಲಾ ಅಂತಹ ಪ್ರಮೇಯ ಎದುರಾಗಿರಲಿಲ್ಲ.
ಸೆಪ್ಟೆಂಬರ್‌ನಿಂದ ಡಿಸೆಂಬರ್ ತನಕ ಕೊಟಬಚ್ಚಲು ಹೊಳೆಯಲ್ಲಿ ತಿಳಿಯಾದ ನೀರು ಹರಿಯುತ್ತದೆ; ಒಂದು ಗಂಟೆ ನಡೆದು ಸುಸ್ತಾಗಿದ್ದ ನಾವೆಲ್ಲಾ, ಅದರ ನೀರನ್ನು ಮನಸೇಚ್ಚೆ ಕುಡಿದು, ಬಾಯಾರಿಕೆ ನೀಗಿಸಿಕೊಂಡು ಮುಂದೆ ಸಾಗುತ್ತಿದ್ದುದೂ ಮಾಮೂಲು. ಆ ಕಾಡಿನ ನಡುವಿನ ನೀರು ಕುಡಿದರೆ ತೊಂದರೆ ಇಲ್ಲವೇ ಎಂಬ ಅನುಮಾನ ಮೂಡಿದರೆ, ‘ಹರಿಯುವ ನೀರಿಗೆ ಶಾಸದ ಕಟ್ಟಿಲ್ಲ’ ಎಂಬ ಗಾದೆಯನ್ನು ಉದಹರಿಸುತ್ತಿದ್ದರು, ನಮ್ಮ ಹಳ್ಳಿಗರು.
ಆ ಹಳ್ಳದ ಎರಡೂ ಕಡೆ ಮರಗಿಡಗಳು, ಬಳ್ಳಿಗಳು. ಅಲ್ಲಿನ ಗಿಡಗಳ ಕೊಂಬೆಯ ಮೇಲೆ ಕುಳಿತು ಮೀನು ಹಿಡಿಯಲು ಹೊಂಚು ಹಾಕುತ್ತಿದ್ದ ಮಿಂಚುಳ್ಳಿಗಳ ನೋಟವೇ ಅನನ್ಯ. ಸಣ್ಣ ಮಿಂಚುಳ್ಳಿ, ಬಿಳಿ ಎದೆಯ ಮಿಂಚುಳ್ಳಿ, ಸ್ಟಾರ್ಕ್ ಬಿಲ್ಡ್ ಮಿಂಚುಳ್ಳಿಗಳು ಆ ಸುತ್ತಲಿನ ಪ್ರದೇಶದಲ್ಲಿ ಸಾಮಾನ್ಯ. ಜತೆಗೆ, ಕಾಜಾಣ, ಪ್ಯಾರಡೈಸ್ -ಕ್ಯಾಚರ್ ಮೊದಲಾದ ಸುಂದರ ಹಕ್ಕಿಗಳಿಗೂಕೊಟಬಚ್ಚಲು ಹೊಳೆಯ ಸುತ್ತಲಿನ ಗಿಡಮರಗಳು ಆಶ್ರಯ ನೀಡಿದ್ದವು.
ಕೊಟಬಚ್ಚಲು ಹೊಳೆಯನ್ನು ಹಲವು ಬಾರಿ ದಾಟಿದ್ದೆ ಎಂದೆನಲ್ಲ, ಅದಕ್ಕೆ ವಿಶಿಷ್ಟ ಕಾರಣವೂ ಇದೆ! ನಾನು ಮಾತ್ರವಲ್ಲ, ನಮ್ಮ ಕುಟುಂಬದ ಎಲ್ಲರೂ ಕಳೆದ ಹತ್ತು ದಶಕದಲ್ಲಿ ಕೊಟಬಚ್ಚಲುನ್ನು ಅದೆಷ್ಟು ಬಾರಿ ದಾಟಿದ್ದೆವೋ ಲೆಕ್ಕವೇ ಇಲ್ಲ. ನಮ್ಮ ಮನೆಯಿಂದ ಸುಮಾರು ಆರು ಕಿ.ಮೀ. ದೂರದ ಅಬ್ಲಿಕಟ್ಟೆಯು ನಮ್ಮ ಅಮ್ಮಮ್ಮನ ತವರು ಮನೆ; ನಂತರದ ವರ್ಷಗಳಲ್ಲಿ ಅದು ನಮ್ಮ ಅಮ್ಮನ ತವರು ಮನೆಯೂ ಹೌದೆಂದು ಹೇಳಬಹುದು.
ಅಬ್ಲಿಕಟ್ಟೆಯಿಂದ ಒಂದು ಕಿ.ಮೀ. ಅಂತರದಲ್ಲಿದ್ದ ತಾರಿಕಟ್ಟೆಯು ನನ್ನ ಮಾವನ ಮನೆಯೂ ಹೌದು! ಆದ್ದರಿಂದ ನಮ್ಮ ಅಮ್ಮಮ್ಮನ ಕಾಲದಿಂದ ಆರಂಭಿಸಿ, ಆ ದಾರಿಯಲ್ಲಿ ಹೋಗಿ ಬಂದು ಮಾಡಲು ಆರಂಭಿಸಿದ ನಮ್ಮ ಕುಟುಂಬವು, ಅದೆಷ್ಟು ಬಾರಿ ಕೊಟಬಚ್ಚಲು ಹೊಳೆಯನ್ನು ದಾಟಿತ್ತೋ, ಅದೆಷ್ಟು ಬಾರಿ ನಾವೆಲ್ಲಾ ಅದರ ನೀರನ್ನು ಕುಡಿದ್ದೆವೋ ಲೆಕ್ಕವಿಲ್ಲ. ಈಗ ಅಲ್ಲೆಲ್ಲಾ ರಸ್ತೆ ಆಗಿರುವುದರಿಂದ, ನಡೆಯುವ ಪ್ರಮೇಯ ಇಲ್ಲ.
ಈ ಕೊಟಬಚ್ಚಲು ಎಂಬ ಹೆಸರು ಸಹ ವಿಶಿಷ್ಟ ಮತ್ತು ಅದು ಬಹಳ ಪುರಾತನವಾಗಿರಲೇಬೇಕು; ಆದ್ದರಿಂದಲೇ ಆ ಪದದ ನಿಷ್ಪತ್ತಿಯನ್ನು ತಿಳಿಯಲು ತಿಣುಕಬೇಕಾಗಿದೆ. ಆ ಹೊಳೆಯ ಹತ್ತಿರವೇ ಆಮರಕಲ್ಲು ಎಂಬ ಬೃಹತ್ ಗಾತ್ರದ ಬಂಡೆಯಿದೆ;ಆ ಬಂಡೆಯ ತುದಿಯಲ್ಲಿ ಎರಡು ಪುಟ್ಟ ಗುಂಡಿಗಳಿದ್ದು, ಅದರಲ್ಲಿ ಸಾಮಾನ್ಯವಾಗಿ ನೀರು ತುಂಬಿರುತ್ತದೆ. ಆ ಪುಟ್ಟ ಗುಂಡಿಗಳನ್ನು ಅಕ್ಕತಂಗಿಯರ ಬಾವಿ ಎಂದು ಕರೆಯುವುದುಂಟು.
ನಾಗರಿಕತೆಯು ಇನ್ನೂ ಗದ್ದೆ, ತೋಟಗಳಷ್ಟು ಪ್ರಗತಿಯನ್ನು ಕಾಣದೇ ಇದ್ದ ಕಾಲದಲ್ಲಿ ನಿರ್ಮಾಣಗೊಂಡ ನೀರಿನ ಸಂಗ್ರಹ ಗಳು ಅವು ಎಂದು ನನ್ನ ಅನಿಸಿಕೆ. ಕೊಟಬಚ್ಚಲು ಹೊಳೆಯ ದಕ್ಷಿಣ ದಿಕ್ಕಿನಲ್ಲಿ, ಎರಡು ಕಿ.ಮೀ. ದೂರದಲ್ಲಿ ‘ಮುಂಡಾರ ಮುಂಡಿ’ ಎಂಬ ಹೆಸರು ಹೊತ್ತ ಬೃಹತ್ ಬಂಡೆಗಳ ಸಾಲೇ ಇದೆ! ನಾವು ಆ ದಾರಿಯಲ್ಲಿ ನಡೆದು ಸಾಗುವಾಗ ಬಹಳ ದೂರದ ತನಕ ಆ ಬಂಡೆಗಳ ಸಾಲು ಕಪ್ಪಗೆ ಕಾಣಿಸುತ್ತದೆ. ಈ ಬಂಡೆಯ ಹೆಸರು ಸಹ, ಆ ಪ್ರದೇಶದಲ್ಲಿ ಬಹು ಹಿಂದೆ ‘ಮುಂಡಾ’ ಜನಾಂಗದವರು ಇದ್ದ ಕುರುಹು ಇರಬೇಕು. ಇವೆಲ್ಲವೂ ಕೊಟಬಚ್ಚಲು ಹೊಳೆಯ ಪ್ರಾಚೀನತೆಯನ್ನು ಕಟ್ಟಿಕೊಡಲು ಒದಗುವ ಸಾಂದರ್ಭಿಕ ಪುರಾವೆಗಳಾಗಿ ಒದಗಿಬರಬಹುದು.
ನಮ್ಮ ಹಳ್ಳಿ ಮನೆಯಿಂದ ತಾರಿಕಟ್ಟೆಯತ್ತ ನಡೆದು ಸಾಗುವಾಗ, ಕೊಟಬಚ್ಚಲು ಹೊಳೆಗಿಂತ ಮೂರು ಕಿ.ಮೀ. ಹಿಂದೆಯೇ, ಬಾವಣಿ ತೋಡು ಎಂಬ ಹಳ್ಳ ಅಡ್ಡಲಾಗುತ್ತದೆ. ನೋಡಲು ಅಗಲವಾಗಿದ್ದರೂ, ಅದರಲ್ಲಿ ಹರಿವಯುವ ನೀರು ಸಣ್ಣ ಪ್ರಮಾಣದ್ದು. ಹಿಂದೆ ಅದು ದೊಡ್ಡ ಹಳ್ಳವಾಗಿದ್ದಿರಬಹುದು. ಈಗ ಜಾಸ್ತಿ ಮಳೆ ಸುರಿದಾಗ ಅದರಲ್ಲಿ ಸಣ್ಣ ಮಟ್ಟದ ಪ್ರವಾಹ ಬಂದರೂ, ಚಳಿಗಾಲದ ಕೊನೆಯಲ್ಲಿ ಅದು ಒಣಗಿ ಹೋಗುತ್ತದೆ. ಮಳೆಗಾಲದಲ್ಲೂ ಅದರಲ್ಲಿ ಮೊಳಕಾಲು ಮಟ್ಟದ ನೀರು. ಆದರೆ ಅದು ಬಹು ಹಿಂದೆ ಅದು ಸಾಕಷ್ಟು ಶ್ರೀಮಂತ ಜಲಮೂಲವೇ ಆಗಿರಬೇಕು.
ಏಕೆಂದರೆ, ಅದಕ್ಕೆ ತಾಗಿಕೊಂಡಂತೆ ಒಂದು ಕಡೆ ಹರನಗುಡ್ಡೆ ಮತ್ತು ಅದಕ್ಕೆ ಹೊಂದಿಕೊಂಡ ಕಾಡು, ಇನ್ನೊಂದು ಕಡೆನಾಗೇರ್ತಿ ಕಾನು ಇದೆ. ನಾಗರತಿ ಎಂಬ ನಾಗದೇವತೆಯ ಹೆಸರನ್ನು ಹೊತ್ತ ನಾಗೇರ್ತಿ ಕಾನು ಒಂದು ಕಾಲದಲ್ಲಿ ದಟ್ಟವಾದ ಕಾಡೇ ಆಗಿತ್ತಂತೆ; ನಮ್ಮ ಅಮ್ಮಮ್ಮನ ಬಾಲ್ಯದಲ್ಲಿ ಅವರು ಅಬ್ಲಿಕಟ್ಟೆಯಿಂದ ನಮ್ಮ ಮನೆಗೆ ನಡೆದು ಬರುವಾಗ (ಅವರಿಗೆ ೧೨ ವರ್ಷಕ್ಕೇ ಮದುವೆಯಾಗಿತ್ತು) ನಾಗೇರ್ತಿ ಕಾನು ಪ್ರದೇಶದ ಸುಮಾರು ಆ ಒಂದು ಕಿ.ಮೀ. ದಾಟಲು ಭಯವಾಗು ತ್ತಿತ್ತಂತೆ; ಅಷ್ಟು ದಟ್ಟವಾಗಿ ಬೆಳೆದಿತ್ತು ಅಲ್ಲಿನ ಕಾಡು. ಆದರೆ ನಂತರದ ನಾಲ್ಕಾರ ದಶಕಗಳಲ್ಲಿ, ನಾಗೇರ್ತಿ ಕಾನುಸಾಕಷ್ಟು ಬೆಳಾರವಾಗಿತ್ತು, ಮರಗಳ ದಟ್ಟಣೆ ಕಡಿಮೆಯಾಗಿತ್ತು, ಹಗಲಿನಲ್ಲೂ ಕತ್ತಲು ತುಂಬಿದ ವಾತಾವರಣ ಮರೆಯಾಗಿತ್ತು. ಆ ಸುತ್ತಲಿನ ಕೆಲವು ಕುಟುಂಬಗಳು ನಿರಂತರವಾಗಿ ಮರಗಳನ್ನು ಕಳ್ಳತನದಿಂದ ಕಡಿದು, ಮಾರಿದ್ದರಿಂದಾಗಿ ನಾಗೇರ್ತಿಕಾನಿನ ‘ಕಾನು’ ಪಟ್ಟಕ್ಕೆ ಕುಂದು ಬಂದಿತ್ತು; ಅದೀಗ ಹಾಡಿಯ ಸ್ವರೂಪ ಪಡೆದಿದೆ.
ಈಗಲೂ ನಾಗೇರ್ತಿ ಕಾನಿನ ಸರಹದ್ದಿನಲ್ಲಿ ಸಾಕಷ್ಟು ಮರಗಿಡಗಳು ಬದುಕಿ ಉಳಿದಿದ್ದರೂ, ಅಲ್ಲಿನ ದಟ್ಟಣೆಯು ಎದ್ದುಕಾಣಿಸಿದರೂ, ಅದನ್ನು ‘ಕಾನು’ ಎಂದು ಕರೆಯಲಾಗದು. ಈ ನಾಗೇರ್ತಿ ಕಾನಿನಲ್ಲಿ ದಟ್ಟ ಕಾಡು ಇದ್ದಾಗ, ಬಾವಣಿ ತೋಡಿನಲ್ಲಿ ಸಾಕಷ್ಟು ಉಜರು ನೀರು ಸದಾ ಹರಿಯುತ್ತಿದ್ದಿರಬೇಕು. ನಾಗೇರ್ತಿ ಕಾನು ದಟ್ಟವಾಗಿದ್ದಾಗ, ಅಲ್ಲಿ ಹುಲಿಗಳಿದ್ದವು. ಆದ್ದರಿಂದ ಆ ಕಾಡುದಾರಿಯಲ್ಲಿ ನಡೆದು ಬರುವವರಿಗೆ ಹುಲಿಯ ಭಯ! ಅಕಸ್ಮಾತ್ ಹುಲಿ ಅಟ್ಟಿಸಿಕೊಂಡು ಬಂದರೆ ಏನು ಮಾಡಬೇಕು?ಬಾವಣಿ ತೋಡಿನ ಹತ್ತಿರವೇ ಎರಡು ಎತ್ತರವಾದ ಮರಗಳಿವೆ – ಆ ಮರಗಳನ್ನು ಹತ್ತಿ ಕುಳಿತರೆ ಹುಲಿಯ ದಾಳಿಯಿಂದ ತಪ್ಪಿಸಿಕೊಳ್ಳಬಹುದಿತ್ತು. ಆ ಮರಗಳ ಕಾಂಡವು ಸುಮಾರು 30 ಅಡಿ ನೇರವಾಗಿ ಏರಿ ಹೋಗಿತ್ತು ಮತ್ತು ಬಿಳಿಯಾಗಿ ನಯವಾಗಿದೆ.
ಹುಲಿ ಅಥವಾ ಚಿರತೆ ಅದನ್ನು ಏರಲಾಗದಷ್ಟು ನಯ. ಮರ ಹತ್ತಲು ಸಾಧ್ಯವಿದ್ದವರು ಆ ಮರ ಹತ್ತಿ ಕುಳಿತು ಜೀವ ಉಳಿಸಿ ಕೊಳ್ಳಬಹುದು, ನಿಜ, ಆದರೆ ಆ ಎತ್ತರದ ಮರ ಹತ್ತಲು ಸಾಧ್ಯವಾಗದೇ ಇರುವವರು ಏನು ಮಾಡಬೇಕು? ಇಂತಹಕುಚೋದ್ಯದ ಪ್ರಶ್ನೆಯನ್ನು ನಾವು ಕೇಳಿದರೆ, ಅದಕ್ಕೆ ನಮ್ಮ ಅಮ್ಮಮ್ಮ ಇನ್ನೊಂದೇ ರೀತಿಯ ಉತ್ತರ ಹೇಳುತ್ತಿದ್ದರು ‘ನಮ್ಮೂರಿನಲ್ಲಿ ಹುಲಿಗಳು ಮನುಷ್ಯರನ್ನು ತಿಂದ ಉದಾಹರಣೆ ಇಲ್ಲ. ಅವು ಗಂಟಿಯನ್ನು ಮಾತ್ರ ಹಿಡಿದು ತಿನ್ನುತ್ತವೆ’. ಆದರೆನಾವು ಆ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಅಂತಹ ಪ್ರಮೇಯ ಎದುರಾಗುವ ಸಾಧ್ಯತೆ ಇರಲೇ ಇಲ್ಲ – ನಮ್ಮ ಸುತ್ತಲಿನ ಕಾಡುಗಳಲ್ಲಿ ಹುಲಿಗಳು ನಾಶವಾಗಿ ಅದಾಗಲೇ ಒಂದೆರಡು ದಶಕಗಳೇ ಕಳೆದಿದ್ದವು.
ಬಾವಣಿ ತೋಡು ಮತ್ತು ಕೊಟಬಚ್ಚಲು ಹೊಳೆಯನ್ನು ದಾಟಿದರೆ, ಮೊದಲಿಗೆ ಸಿಗುತ್ತಿದ್ದುದು ನನ್ನ ಮಾವನ ಮನೆ, ತಾರಿಕಟ್ಟೆ; ಅದಾಗಿ ಒಂದು ಕಿ.ಮೀ. ನಡೆದರೆ ನಮ್ಮ ಅಮ್ಮ ಮತ್ತು ಅಮ್ಮಮ್ಮ ಇವರಿಬ್ಬರ ತವರು ಮನೆಯಾದ ಅಬ್ಲಿಕಟ್ಟೆ ಸಿಗುತ್ತಿತ್ತು. ಈ ಎರಡು ಹಳ್ಳಿಗಳ ನಡುವೆ ಒಂದು ಅಪರೂಪದ ಜಲಮೂಲವಿದೆ – ಅದೊಂದು ಕಲ್ಲು ಕಟ್ಟಿದ ಸುಂದರವಾದ ಬಾವಿ. ಅದನ್ನು ‘ಸೂರ್ಗೊಳಿ ಅಂತು ಕಟ್ಟಿಸಿದ ಬಾವಿ’ ಎಂದೇ ಅಲ್ಲಿನವರು ಕರೆಯುತ್ತಾರೆ. ತಾರಿಕಟ್ಟೆಯ ಉದ್ದನೆಯ ಬಯಲಿನ ಮಧ್ಯ ಭಾಗದಲ್ಲಿದ್ದ ಆ ಬಾವಿಯನ್ನು ನೋಡಲು ಒಮ್ಮೆ ಹೋಗಿದ್ದೆ. ವಿಶಾಲವಾದ ಆ ಬಾವಿಗೆ, ಬಿಳಿ ಬಣ್ಣದ ಉತ್ತಮ ಗುಣಮಟ್ಟದ ಶಿಲೆಕಲ್ಲುಗಳ ಕಟ್ಟೋಣ ಮಾಡಲಾಗಿತ್ತು.
ಅದರಲ್ಲಿ ಸಾಕಷ್ಟು ನೀರು ಸಹ ಇತ್ತು. ತುಸು ಒಣ ಪ್ರದೇಶದ ನಡುವೆ ಇದ್ದ ತಾರಿಕಟ್ಟೆ ಬೈಲಿನಲ್ಲಿ ಬೆಳೆ ತೆಗೆಯಲು ಕಟ್ಟಿಸಿದ ಬಾವಿ ಅದಾಗಿರಬೇಕು. ಈ ಬಾವಿಯನ್ನು ಕಟ್ಟಿಸಿದ ‘ಸೂರ್ಗೊಳಿ ಅಂತು’ ಎಂಬಾತನ ಕುರಿತು ಹಲವು ಕತೆಗಳಿವೆ. ಸುಮಾರು ೧೮ನೆಯ ಶತಮಾನದಲ್ಲಿದ್ದಿರಬಹುದಾದ ಸೂರ್ಗೊಳಿ ಅಂತು, ದೊಡ್ಡ ಜಮೀನುದಾರರ ತೋಟದಿಂದ ಬಾಳೆಗೊನೆ, ತೆಂಗು ಮೊದಲಾದವನ್ನು ಕದ್ದು ಬಡವರಿಗೆ ಹಂಚುತ್ತಿದ್ದನಂತೆ. ಜಾನುವಾರುಗಳಿಗೆ ಬೇಸಗೆಯಲ್ಲಿ ನೀರು ಕುಡಿಯಲು ಕಲ್ಲಿನ ಬಾಣಿಯನ್ನು ನಿರ್ಮಿಸಿ, ‘ಕಲ್ಮರ್ಗಿ’ ಮೊದಲಾದ ಹಳ್ಳಿಗಳಲ್ಲಿ ಇರಿಸಿದ್ದನಂತೆ.
ಮಂದರ್ತಿಯಲ್ಲಿನ ಯಕ್ಷಗಾನ ಮೇಳವು ಮೊದಲು ಆರಂಭವಾಗಲು ಈತನ ಕೊಡುಗೆಯೂ ಇತ್ತಂತೆ. ಇಂತಹ ವ್ಯಕ್ತಿನಿರ್ಮಿಸಿದ್ದ ಆ ಬಾವಿಯು, ತಾರಿಕಟ್ಟೆಯ ಬೈಲಿನ ಮಧ್ಯೆ ಏಕಾಂಗಿಯಾಗಿತ್ತು – ಏಕಾಂಗಿ ಏಕೆಂದರೆ, ಅದರ ಬಳಿ ಯಾವುದೇ ಮನೆಗಳಿರಲಿಲ್ಲ. ಆ ಬೈಲಿನಲ್ಲಿ ಬೆಳೆ ಬೆಳೆಯಲೆಂದೇ ಆ ಬಾವಿಯನ್ನು ನಿರ್ಮಿಸಿರಬೇಕು. ವಿಶೇಷವೆಂದರೆ, ಸೂರ್ಗೊಳಿಅಂತುವಿನ ಈ ರೀತಿಯ ಸಾಹಸಗಳ ಕುರಿತು ಹೆಚ್ಚಿನ ಅಧ್ಯಯನ ನಡೆದಂತಿಲ್ಲ.
ಕೊಟಬಚ್ಚಲು ಹೊಳೆಯಂತಹ ಕಾಡಿನ ನಡುವಿನ ತೊರೆಯಿಂದಾರಂಭಿಸಿ, ಸೂರ್ಗೊಳಿ ಅಂತು ನಿರ್ಮಿಸಿದ ಬಾವಿಯ ತನಕ ಸಾಗಿ ಬರುವ ಅಂದಿನ ಕಾಲಘಟ್ಟವನ್ನು ಅವಲೋಕಿಸಿದರೆ, ನಾಗರಿಕತೆಯ ಬೆನ್ನು ಹತ್ತಿದ ಮಾನವನು ತನ್ನ ಸುತ್ತಲಿನ ಪರಿಸರವನ್ನು ನಿಧಾನವಾಗಿ ನಾಶಮಾಡಿದ ಕಥನದ ಕೆಲವು ಮಜಲುಗಳನ್ನು ಗುರುತಿಸಬಹುದು. ಈಚಿನ ವರ್ಷಗಳಲ್ಲಿ ಈಪ್ರದೇಶದಲ್ಲಿ ಅಲ್ಲಲ್ಲಿ ಬುಲ್‌ಡೋಜರ್‌ಗಳು ಓಡಾಡುತ್ತಿವೆ, ರಬ್ಬರ್, ಅಕೇಶಿಯಾ, ಗೋಡಂಬಿ ಮೊದಲಾದ ಏಕ ಪ್ರಭೇದದ ಪ್ಲಾಂಟೇಷನ್‌ಗಳು ತಲೆ ಎತ್ತುತ್ತಿವೆ.
ನದಿ, ತೊರೆ, ಹಳ್ಳಗಳಂತಹ ಜಲಮೂಲಗಳು ಬತ್ತಿಹೋಗುತ್ತಿವೆ; ನೆಲದಾಳದ ಜಲಸಂಪತ್ತಿಗೆ ಕನ್ನಕೊರೆಯುವ ಪ್ರಕ್ರಿಯೆಯುಸಾಗಿದೆ. ಇಂದು ಕೊಟಬಚ್ಚಲು ಹೊಳೆ ಎಂಬ ವಿಶಿಷ್ಟ ಹೆಸರನ್ನು ನೆನಪಿಸಿಕೊಳ್ಳಬಹುದಷ್ಟೇ ಹೊರತು, ಅದರ ನೀರನ್ನು ಕುಡಿಯುವಂತಿಲ್ಲ!