ಬಗರ್‌ ಹುಕುಂ ಸಾಗುವಳಿದಾರನ ಬವಣೆ
ಅಭಿಮತ
ರಾಘವೇಂದ್ರ ಈ ಹೊರಬೈಲ್
ಪ್ರತೀ ಹಳ್ಳಿಗೂ ಹಸುಗಳು ಮೇಯಲೆಂದು ಇಂತಿಷ್ಟು ಎಕರೆ ಜಮೀನನ್ನು ಗೋಮಾಳ ವೆಂದು ಸರಕಾರವೇ ಘೋಷಿಸಿದೆ.
ಕಾಲಕ್ರಮೇಣ ಹಳ್ಳಿಗಳ ಹಸುಗಳ ಸಂಖ್ಯೆ ಕ್ಷೀಣಿಸುತ್ತಾಬಂದಿದ್ದರಿಂದ ತಮಗೆ ಸ್ವಂತ ಜಮೀನಿಲ್ಲದ, ಗೋಮಾಳದಲ್ಲಿ ಸಾಗುವಳಿ ಮಾಡುತ್ತಿದ್ದ ಬಡ ರೈತರಿಗೆ ನಾಲ್ಕು ಎಕರೆಗೆ ಮೀರದಂತೆ ಜಮೀನನ್ನು ಮಂಜೂರು ಮಾಡಬಹುದು ಎಂಬ ಆದೇಶದ ಮೇಲೆ ನಿಯಮ ೫೦, ೫೩ ಹಾಗೂ ೫೭ರಂತೆ ಸಾವಿರಾರು ಬಗರ್ ಹುಕುಂ ಸಾಗುವಳಿದಾರರು ನಿಜವಾದ ರೈತರಾದರು.
ಆದರೆ ಕೆಲವು ಅನಕ್ಷರಸ್ಥ ರೈತರಿಗೆ ಸರಿಯಾದ ಮಾಹಿತಿಯ ಕೊರತೆಯಿಂದಾಗಿ, ಕೆಲವು ಅಧಿಕಾರಿಗಳ ಉದಾಸೀನತೆ ಹಾಗೂ ಲಂಚಾವತಾರದಿಂದಾಗಿ ಅವರು ಕೇಳಿದಷ್ಟು ಹಣ ಕೊಡಲೂ ಆಗದೆ, ದೊಡ್ಡದೊಡ್ಡವರ ಹಿಂದೆ ಅಲೆದು ತಮಗೆ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲೂ ಸಾಧ್ಯವಾಗದೆ ೧೯೯೬ ರಿಂದಲೂ ಅನೇಕ ಸಾಗುವಳಿದಾರರು ಬವಣೆ ಅನುಭವಿಸುತ್ತಿದ್ದಾರೆ.
ಬಗರ್ ಹುಕುಂ ಜಮೀನಿನಲ್ಲಿ ಬೋರು ಕೊರೆಸಲೂ ಅವಕಾಶ ನೀಡದ ಕಾರಣ, ಮಳೆಯನ್ನೇ ಆಶ್ರಯಿಸಿ, ಆ ಮಳೆಯೊಂದಿಗೆ ಜೂಜಾಟವಾಡಿ ಕೈಗೊಂದಿಷ್ಟು ಬೆಳೆ ಸಿಕ್ಕರೂ ಆ ವರ್ಷ ಬೆಲೆಯೇ ಕಮ್ಮಿಯಾಗಿ ಮಾಡಿದ ಸಾಲ ಮೈಮೇಲೆ ಬರುತ್ತದೆ. ಅಥವಾ ಕೆಲವೊಮ್ಮೆ ಮಳೆಯೇ ಬಾರದೆ ಬಿತ್ತಿದ ಬೀಜ ಸುಟ್ಟು ಹೋದರೆ, ಕೆಲವೊಮ್ಮೆ ಆಕಾಶಕ್ಕೇ ತೂರು ಬಿದ್ದಂತೆ ಬರಬಾರದ ಸಮಯದ ಹುಚ್ಚು ಮಳೆ ಸುರಿದು, ಬೆಳೆದ ಬೆಳೆಯೆ ಹೊಲದ ಕೊಳೆತು ಹೋಗಿಯೋ, ನೀರಿನಲ್ಲಿ ಕೊಚ್ಚಿ ಹೋಗಿಯೇ ಸಂಪೂರ್ಣ ಬೀದಿಗೆ ಬೀಳುವಂತಾಗುತ್ತದೆ.
ಜಮೀನು ಖಾತೆಯಾಗಿರುವ ರೈತನಿಗೆ ಇಂತಹ ಸಂದರ್ಭಗಳಲ್ಲಿ ಸರಕಾರದಿಂದ  ಲ್ಪಸ್ವಲ್ಪ ಪರಿಹಾರವಾದರೂ ಸಿಕ್ಕುತ್ತದೆ. ಆದರೆ ಬಗರ್ ಹುಕುಂ ಬೇಸಾಯಗಾರ ಸರಕಾರದ ಪ್ರಕಾರ ರೈತನೇ ಅಲ್ಲದಿರುವುದರಿಂದ ಅವನಿಗೆ ಆ ರೀತಿಯ ಯಾವುದೇ ಸವಲತ್ತೂ ಸಿಗದೆ, ಬದುಕು ಮೂರಾಬಟ್ಟೆಯಾಗುತ್ತದೆ. ಈ ಬಗರ್ ಹುಕುಂ ಬೇಸಾಯಗಾರನ ಕಥೆ ಹೇಗಾಗಿದೆಯೆಂದರೆ ಇತ್ತ ರೈತನೂ ಅಲ್ಲದೇ ಅತ್ತ ಕೂಲಿ ಕಾರ್ಮಿಕನೂ ಅನಿಸಿಕೊಳ್ಳದೆ, ಭದ್ರತೆಯಿಲ್ಲದೆ, ರೈತನಿಗೆ ಸಿಗುವ ಸರಕಾರದ ಎಲ್ಲಾ ಸವಲತ್ತುಗಳಿಂದ ವಂಚಿತನಾಗಿ ಭವಿಷ್ಯದ ಅಭದ್ರತೆಯಲ್ಲಿ, ಸ್ವಂತದ್ದೂ ಅನ್ನುವ ಜಮೀನನ್ನು ಹೊಂದದೆ, ಇದ್ದೂ ಇಲ್ಲದೆ ಬದುಕುವಂತಾಗಿದೆ.
ಕೆಲವು ವರ್ಷಗಳ ಹಿಂದೆ ಅನೇಕ ಬಗರ್ ಹುಕುಂ ಜಮೀನುಗಳನ್ನು ಸರಕಾರವೇ ಮುಂದೆ ನಿಂತು ಪ್ರತೀ ಬಗರ್ ಹುಕುಂಸಾಗುವಳಿದಾರನಿಗೆ ಗರಿಷ್ಠ ನಾಲ್ಕು ಎಕರೆ ಜಮೀನನ್ನು ಖಾತೆ ಮಾಡಿಸಿ ಕೊಟ್ಟು, ರೈತರ ಪಟ್ಟ ನೀಡಿದೆ. ಅದೇ ಸಂದರ್ಭದಲ್ಲಿ ಇನ್ನೂ ಅನೇಕರ ಜಮೀನುಗಳು ಅಂದಿನ ಯಾರದೋ ಯಡವಟ್ಟಿನಿಂದ ಖಾತೆಯಾಗದೆ, ಇಂದಿನ ನೂರಾರು ನಿಯಮ ಗಳಿಂದಾಗಿ, ತೀರಾ ಕೆಳಹಂತದಿಂದಲೂ ಹಣ ತೆರಬೇಕಾದ ಅನಿವಾರ್ಯತೆಯಲ್ಲಿ ಅನೇಕ ಬಡಪಾಯಿ ರೈತರಲ್ಲದ ರೈತರು ಚಾತಕ ಪಕ್ಷಿಗಳಂತೆ ತಮ್ಮ ಬಗರ್ ಹುಕುಂ ಜಮೀನು ತಮ್ಮ ಹೆಸರಿಗೆ ಖಾತೆಯಾಗಿಯೇ ಆಗುತ್ತದೆಯೆಂದು ಕಾಯುತ್ತಾ ಕುಳಿತಿ ದ್ದಾರೆ.
ಇನ್ನೂ ಕೆಲವರು ಸರಕಾರದ ಹೊಸ ಹೊಸ ನೀತಿಗಳಿಂದಾಗಿ ನೂರಾರು ವರ್ಷಗಳಿಂದ ಕಡಿದು ಹೊಡೆದು, ಮೈಮೂಳೆ ಮುರಿದು ಕೊಂಡು ಹಸನು ಮಾಡಿ, ಮೈತುಂಬಾ ಸಾಲ ಮಾಡಿಕೊಂಡು, ಸಾಗಲಾರದ ಜೀವನ ಸಾಗಿಸುತ್ತಿದ್ದರೂ ಎಲ್ಲಿ ತಮ್ಮಿಂದ ಜಮೀನು ಕೈತಪ್ಪಿ ಹೋಗುವುದೋ ಎಂದು ತಲೆ ಮೇಲೆ ಕೈಹೊತ್ತು, ತಾವು ನಂಬಿದ ದೇವರ ಮೇಲೆ ಭಾರ ಹಾಕಿ ಕುಳಿತಿದ್ದಾರೆ. ಸರಕಾರ ಖಂಡಿತಾ ಇದಕ್ಕೊಂದು ಪರಿಹಾರ ನೀಡುವ ಅನಿವಾರ್ಯತೆ ಇದೆ.
 - 