ಗವಿಸಿದ್ದೇಶ್ವರನ ಜಾತ್ರೆ, ಸಾಮಾಜಿಕ ಜಾಗೃತಿಯಾತ್ರೆ !
ತನ್ನಿಮಿತ್ತ
ಗವಿಸಿದ್ದೇಶ್ ಕೆ.ಕಲ್ಗುಡಿ
‘ಕಣ್ಣೀರಲ್ಲಿ ಕನಕಗಿರಿಯನ್ನು ನೋಡು, ಕಾಲಿದ್ದರೆ ಹಂಪೆಯನ್ನು ನೋಡು ಹಾಗೂ ಜೀವವಿದ್ದರೆ ಒಮ್ಮೆ ಕೊಪ್ಪಳದ ಜಾತ್ರೆಯನ್ನು ನೋಡು’ ಎನ್ನುವ ಸುಪ್ರಸಿದ್ಧ ನಾಣ್ನುಡಿ ಉತ್ತರ ಕರ್ನಾಟಕದಲ್ಲಿ ಮನೆಮಾತು. ನಿಜಕ್ಕೂ ಈ ನುಡಿ ಈ ಕ್ಷೇತ್ರಗಳ ಭವ್ಯತೆಯನ್ನು ಹೊರಚೆಲ್ಲುತ್ತದೆ. ಜೈನಕಾಶಿ ಎಂದೇ ಪ್ರಸಿದ್ಧವಾಗಿದ್ದ ಕೊಪ್ಪಳದ ಪ್ರಮುಖ ಆಕರ್ಷಣೆ, ಕೇಂದ್ರಬಿಂದು ಗವಿಮಠ. ಗವಿಮಠ ಎಂದಾಕ್ಷಣ ನಮ್ಮೆಲ್ಲರ ಕಣ್ಣಿಗೆ ಕಾಣುವ, ಮನಸ್ಸಿನಲ್ಲಿ ಮೂಡುವ ಚಿತ್ರ ಅಲ್ಲಿ ಅದ್ದೂರಿಯಾಗಿ ನೆಡೆಯುವ ಗವಿ ಸಿದ್ದೇಶ್ವರನ ಜಾತ್ರಾ ಮಹೋತ್ಸವ.
ಇದು ದಕ್ಷಿಣದ ಕುಂಭಮೇಳವೆಂದೇ ಖ್ಯಾತಿ ಪಡೆದಿದೆ. ಕಾರಣ ಅಂದು ಸುತ್ತ ಹತ್ತು ಹಳ್ಳಿಗಳಿಂದ ಅಲ್ಲದೇ ಕರ್ನಾಟಕದ ಹಲವು ಜಿಗಳಿಂದ ಅಜ್ಜನ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ಸೇರಿರುತ್ತಾರೆ. ಅನ್ನ, ಅಕ್ಷರ ಮತ್ತು ಆರೋಗ್ಯವೆಂಬ ತ್ರಿವಿಧ ದಾಸೋಹಗಳ ಮೂಲಕ ಸಮಾಜದ ಮನೆ ಮಾತಾಗಿರುವ ಗವಿಮಠ, ವೀರಶೈವ ಪರಂಪರೆಯಲ್ಲಿ ಬೆಳೆದು ಬಂದಿದೆ. ಗವಿಮಠದ ಪರಂಪರೆ ಯಾವುದಾದ ರೇನಂತೆ, ಅದು ಯಾವುದೇ ಜಾತಿ-ಮತ-ಪಂಥಗಳಿಗೆ ಅಂಟಿಕೊಳ್ಳದೇ, ಸೀಮಿತ ವಾಗದೇ, ಇಂದು ಸಮಾಜದ ಸರ್ವ ಜನಾಂಗವನ್ನೂ ತನ್ನತ್ತ ಸೆಳೆದಿದೆ.
ಅವರ ಏಳ್ಗೆಗಾಗಿ ಹಗಲಿರುಳೂ ಶ್ರಮಿಸುತ್ತಿದೆ. ಈಗಾಗಲೇ ೧೭ ಪೀಠಾಧಿಪತಿಗಳನ್ನು ಕಂಡ ಗವಿಮಠ, ಇಂದು ೧೮ನೇಪೀಠಾಽಪತಿಗಳಾದ ಶ್ರೀಗವಿಸಿದ್ದೇಶ್ವರ ಮಹಾ ಸ್ವಾಮಿಗಳ ಸಾನ್ನಿಧ್ಯಕ್ಕೆ ಸಾಕ್ಷಿಯಾಗಿದೆ. ಗವಿಶ್ರೀಗಳು ವಿಶಾಲ ಮನಸ್ಕರು,ಸಾಮಾಜಿಕ ಕಳಕಳಿಯುಳ್ಳಂಥವರು ಅಲ್ಲದೇ ಹೊಸ ಹೊಸ ಚಿಂತನೆ, ಸೇವಾಕಾರ್ಯಗಳಿಂದ ನಾಡಿನಲ್ಲಿ ಮನೆ ಮಾತಾಗಿ ದ್ದಾರೆ.
ಗವಿಮಠದಲ್ಲಿ ಅಕ್ಷರಜಾತ್ರೆ ದಿನವೂ ನಡೆಯುತ್ತಿರುತ್ತದೆ. ರಾಜ್ಯದ ಹಲವು ಜಿಗಳಿಂದ ಗವಿಮಠಕ್ಕೆ ಇಂದಿಗೂ ಓದಲು ಬರುತ್ತಾರೆ. ಹೀಗೆ, ಕೆಲವು ವರ್ಷಗಳ ಹಿಂದೆ ಕಲ್ಬುರ್ಗಿಯ ಹಾಗರಗುಂಡಿ ಎನ್ನುವ ಹಳ್ಳಿಯಿಂದ ಪರ್ವತಯ್ಯ ಎನ್ನುವ ವಿದ್ಯಾರ್ಥಿ ಗವಿಮಠಕ್ಕೆ ಓದಲು ಬಂದಿದ್ದ. ಅಂದು ಮಠದ ೧೭ನೇ ಪೀಠಾಽಪತಿಗಳಾಗಿದ್ದ ಶ್ರೀಶಾಂತವೀರ ಮಹಾಸ್ವಾಮಿಗಳಿಗೆ ಪರ್ವತಯ್ಯ ತುಂಬಾ ಪ್ರಿಯನಾಗಿದ್ದ. ಸ್ವಾಮಿಗಳು ಪರ್ವತಯ್ಯನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು.
ಅಲ್ಲದೇ ಅವನಿಗೆ ಗವಿಸಿದ್ದೇಶ್ವರ ಎಂದು ನಾಮಕರಣವನ್ನೂ ಮಾಡಿ, ಮುಂದಿನ ಪೀಠಾಧಿಪತಿ ಅವನೇ ಎಂದು ಮನಸ್ಸಿನಲ್ಲಿ ನಿಶ್ಚಯಿಸಿದರು. ಹೀಗೆ, ಮುಂದಿನ ದಿನಗಳಲ್ಲಿ ಶ್ರೀಶಾಂತವೀರರು ಸಮಾಧಿಯಾದ ನಂತರ ಅವರ ಸದಾಶಯದಂತೆ ೧೮ನೇಪೀಠಾಧಿಪತಿಗಳಾದವರೇ ನಮ್ಮೀ ಶ್ರೀಗವಿಸಿದ್ದೇಶ್ವರರು. ಗವಿಶ್ರೀಗಳು ಗದ್ದುಗೆ ಏರಿದ ಮೇಲೆ ಎರಡು ವರ್ಷಗಳ ಕಾಲ ಜಾತ್ರೆಯನ್ನು ಸಹಜವಾಗಿಯೇ ಸಾಧಾರಣ ಜಾತ್ರೆಯನ್ನಾಗಿಯೇ ನಡೆಸಿದರು.
ಆದರೆ, ೨೦೦೫ರಿಂದ ಕೊಪ್ಪಳದ ಹೆಸರನ್ನೇ ಜಾತ್ರೆಗೆ ಅನ್ವರ್ಥಕವಾಗುವಂತೆ ಅದರೆ ದಿಕ್ಕನ್ನೇ ಬದಲಿಸಿದರು. ಗವಿ ಸಿದ್ದೇಶ್ವರನ ಆ ಜಾತ್ರೆ ಸಾಮಾಜಿಕ ಯಾತ್ರೆಯಾಗಿ ಪರಿವರ್ತನೆಗೊಂಡಿದ್ದು ಆಗಿನಿಂದಲೇ. ಅಂದರೆ ಸಮಾಜಮುಖಿ ಎನ್ನುವ ತತ್ತ್ವದಡಿ ಅಜ್ಜನ ಜಾತ್ರೆಯನ್ನು ನಡೆಸಲು ನಿಶ್ಚಯಸಿದ್ದರು ಶ್ರೀಗಳು. ಇಂದಿಗೂ ಇದನ್ನು ನಾವು ಕಣ್ತುಂಬಿಕೊಳ್ಳ ಬಹುದು. ಸುಮಾರು ೧೫ ದಿನಗಳ ಕಾಲ ನಡೆಯುವ ಅಜ್ಜನ ಜಾತ್ರೆಯಲ್ಲಿ, ಹಂಪೆಯ ಉತ್ಸವದ ಮಾದರಿಯಲ್ಲಿ ಮೂರು ವೇದಿಕೆಗಳನ್ನು ಮಾಡಲಾಗುತ್ತದೆ. ಆ ವೇದಿಕೆಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ದೇಶದ ಮೂಲೆಯಲ್ಲಿರುವ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿ ಅಪರಿತ ಸಾಧನೆಗೈದ ಸಾಧಕರನ್ನು ಆ ವೇದಿಕೆಗಳಲ್ಲಿ ಪರಿಚಯಿಸಲಾಗುತ್ತದೆ. ಅಲ್ಲದೇ, ಹಲವು ವರ್ಷಗಳಿಂದ ಪೀಠಾಽಪತಿಗಳಿಂದಲೇ ಆರಂಭಗೊಳ್ಳುತ್ತಿದ್ದ ಜಾತ್ರಾ ಮಹೋತ್ಸವ, ಇಂದು ಸಮಾಜ ಸೇವಕ, ಸಾಧಕರ ಕೈಯಿಂದ ಆರಂಭಗೊಳ್ಳುತ್ತಿದೆ. ಇದು ಗವಿಶ್ರೀಗಳ ಮಹತ್ತ್ವಾಕಾಂಕ್ಷೆಗೆ ಜ್ವಲಂತ ಉದಾಹರಣೆ.
ಈಗಾಗಲೇ ಕ್ರೀಡಾಲೋಕದ ಮಹಾತಾರೆ ಡಾ.ಮಾಲತಿಹೊಳ್ಳ, ಅಣ್ಣಾ ಹಜಾರೆ,ಸಾಲು ಮರದ ತಿಮ್ಮಕ್ಕ, ಖ್ಯಾತನಟ ರಮೇಶ ಅರವಿಂದ್ ಅವರಿಂದ ಅಜ್ಜನ ಜಾತ್ರೆ, ಸಾಮಾಜಿಕ ಜಾಗೃತಿಯಾತ್ರೆ ಚಾಲನೆಗೊಂಡಿದೆ. ಈ ವರ್ಷ ಈಶಾ ಪೌಂಡೇಶನ್ ಸಂಸ್ಥಾಪಕರಾದ ಶ್ರೀಸದ್ಗುರು ಅವರಿಂದ ಜಾತ್ರೆ ಭಾನುವಾರ ಚಾಲನೆಗೊಂಡಿದೆ. ಸಾಮಾಜಿಕ ಕಳಕಳಿ ಮನುಷ್ಯರಲ್ಲಿ ಮೇಳೈಸಬೇಕು, ಆಗ ಮಾತ್ರ ಮನುಷ್ಯನಿಗೆ ಬೆಲೆ ಬರುವುದು ಎನ್ನುತ್ತಾರೆ ಗವಿಶ್ರೀಗಳು. ಮನುಷ್ಯನಿಗೆ ಸತ್ತವರನ್ನು ಬದುಕಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಿಲ್ಲ.
ಆದರೆ, ಸಾಯುತ್ತಿರುವ ವ್ಯಕ್ತಿಗಳನ್ನು ಬದುಕಿಸುವ ಶಕ್ತಿಯನ್ನು ನೀಡಿದ್ದಾನೆ. ಅದು ರಕ್ತದಾನ ಮಾಡುವುದರ ಮೂಲಕಎಂದ ಸ್ವಾಮಿಗಳು ೨೦೧೫ರಲ್ಲಿ ಜಾತ್ರೆಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿದರು. ಇಂದು ಜಾತ್ರೆಯಲ್ಲಿ ದಾಖಲೆಯ ರಕ್ತಸಂಗ್ರಹಕ್ಕೆ ಗವಿಮಠ ಸಾಕ್ಷಿಯಾಗಿದೆ. ಅಜ್ಜನ ಜಾಗೃತಿಯಾತ್ರೆ ಇಲ್ಲಿಗೆ ನಿಲ್ಲಲ್ಲಿಲ್ಲ ನೋಡಿ. ೨೦೧೬ರಲ್ಲಿ ಬಾಲ್ಯವಿವಾಹ ನಿಯಂತ್ರಣ, ತಡೆ ಜಾಥಾವನ್ನೂ ಹಮ್ಮಿಕೊಂಡು ಜಾಗೃತಿ ಮೂಡಿಸಲಾಯಿತು. ಇದರ ಪರಿಣಾಮ ಬಾಲ್ಯವಿವಾಹದಲ್ಲಿ ಪ್ರಥಮ ಸ್ಥಾನದಲ್ಲಿದ್ದ ಕೊಪ್ಪಳ ಇಂದು ೧೨ನೇ ಸ್ಥಾನಕ್ಕೆ ಬಂದು ನಿಂತಿದೆ. ಹೀಗೆ ಜಲದೀಕ್ಷೆಯ ಮೂಲಕ ಜಲಸಂರಕ್ಷಣೆ, ಕೃಪಾದೃಷ್ಟಿ ಎನ್ನುವ ಜಾಥಾದ ಮೂಲಕ ಜನರನ್ನು ಕಣ್ಣುದಾನ ಮಾಡಲು ಪ್ರೇರೇಪಿಸಲಾಯಿತು.
ಇದರ ಪರಿಣಾಮದಿಂದ ಕೊಪ್ಪಳದಲ್ಲಿ ಐ ಸ್ಟೋರೇಜ್ ಯುನಿಟ್ ಪ್ರಾರಂಭವಾಯಿತು. ಸಾಮಾನ್ಯವಾಗಿ ಮಠ-ಮಂದಿರಗಳಲ್ಲಿ ಲಕ್ಷದೀಪೋತ್ಸವ ಮಾಡಲಾಗುತ್ತದೆ. ಆದರೆ ಇದೇನಿದು ಲಕ್ಷ ವೃಕ್ಷೋತ್ಸವ ಎನ್ನುತ್ತೀರಾ! ಅದಕ್ಕೆ ನಮ್ಮ ಗವಿಶ್ರೀಗಳು ನುಡಿಯುತ್ತಾರೆ ಕೇಳಿ. ದೈವ ಸಾಕ್ಷಾತ್ಕಾರಕ್ಕೆ ಲಕ್ಷದೀಪೋತ್ಸವವಾದರೆ, ಪ್ರಕೃತಿಯ ಸಾಕ್ಷಾತ್ಕಾರಕ್ಕೆ ಲಕ್ಷವೃಕ್ಷೋತ್ಸವಂತೆ. ಹೌದು ಲಕ್ಷವೃಕ್ಷೋತ್ಸವ ಎನ್ನುವ ಜಾಥಾದ ಮೂಲಕ ಗವಿಶ್ರೀಗಳು ಒಂದು ವರ್ಷದಲ್ಲಿ ೧ ಲಕ್ಷ ಸಸಿಗಳನ್ನು ನೆಡುವ ಕನಸು ಕಂಡು, ಲಕ್ಷ ಸಸಿಗಳನ್ನು ಬೆಳೆಸಿ ಪ್ರಕೃತಿ ಮಾತೆಗೆ ಅಭೂತಪರ್ವ ಕೊಡುಗೆ ನೀಡಿದ್ದಾರೆ.
ಅದೊಮ್ಮೆ ಗವಿಶ್ರೀಗಳು ಗದಗನಿಂದ ಕೊಪ್ಪಳದೆಡೆಗೆ ಪ್ರಯಾಣ ಬೆಳೆಸುವಾಗ, ದಾರಿಯಲ್ಲಿ ವಿನಾಶದ ಅಂಚಿನಲ್ಲಿದ್ದ ಹಿರೇಹಳ್ಳ ವನ್ನು ನೋಡಿದರು. ಅದನ್ನು ನೋಡಿದ ಶ್ರೀಗಳಿಗೆ ಬೇಸರವಾಯಿತು. ಕಾರಣ ಅದೆಷ್ಟೋ ರೈತರ ಕೃಷಿ ಹಿರೇಹಳ್ಳದ ಮೇಲೆ ಅವಲಂಬಿತವಾಗಿತ್ತು. ಹಾಗಾಗಿ ಅಂದೇ ಹಳ್ಳದ ಪುನರುಜ್ಜೀವನದ ಕನಸುಕಂಡರು. ಅದಕ್ಕೂ ಮೊದಲು ಮಠದ ಆವರಣದಲ್ಲಿ ದೊಡ್ಡ ಗೋಪುರವೊಂದನ್ನು ಕಟ್ಟುವ ಕನಸು ಕಂಡಿದ್ದರು. ಅದಕ್ಕಾಗಿ ಮೀಸಲಾಗಿದ್ದ ಕೋಟಿ ರೂಪಾಯಿಯನ್ನು ಹಿರೇಹಳ್ಳದಪುನರುಜ್ಜೀವನಕ್ಕಾಗಿ ಮೀಸಲಿಟ್ಟರು.
ಇತಿಹಾಸದಲ್ಲಿ ಬಲಬೀರಸಿಂಗ್ ಎನ್ನುವ ವ್ಯಕ್ತಿ ಬಿಯಾಸ್ ನದಿಯ ದಿಕ್ಕನ್ನೇ ಬದಲಿಸಿದ ಕಥೆಯನ್ನು ಕೇಳಿ, ಸ್ವತಃ ಆ ಸ್ಥಳಕ್ಕೆ ಭೇಟಿ ನೀಡಿ, ತಿಳಿದುಬಂದರು. ೨೦೧೯ರಲ್ಲಿ ಒಂದು ವರ್ಷದಲ್ಲಿ, ೧ ಲಕ್ಷವನ್ನು ಖರ್ಚುಮಾಡಿ, ಸುಮಾರು ೨೬ ಕಿಲೋ ಮೀಟರ್ ಹಿರೇಹಳ್ಳದ ಪುನರುಜ್ಜೀವನ ಮಾಡುವುದರ ಮೂಲಕ ಜಲಕ್ರಾಂತಿಗೆ ನಾಂದಿ ಹಾಡಿದರು. ಇದರ ಪರಿಣಾಮ ಅಂತರ್ಜಲ ವೃದ್ಧಿಯಾಗಿ, ಸುಮಾರು ೩೦ ಕ್ಕೂ ಹೆಚ್ಚು ಗ್ರಾಮಗಳ ಜಲದಾಹವನ್ನು ನೀಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಳ್ಳಕ್ಕೆ ನದಿ ಜೋಡನೆ ಮಾಡುವ ಕನಸ್ಸನ್ನು ಕಂಡಿದ್ದಾರೆ.
ಇಂದಿಗೂ ಗವಿಶ್ರೀಗಳ ಸಾಮಾಜಿಕ ಜಾಗೃತಿಯಾತ್ರೆ ಮುಂದುವರಿದಿದೆ. ಇಷ್ಟು ದಿನಗಳ ಕಾಲ ಗವಿಮಠ ಕೇವಲ ತ್ರಿವಿಧ ದಾಸೋಹಗಳಿಗೆ ಹೆಸರಾಗಿತ್ತು, ಆದರೆ ಇಂದು ಅನ್ನ,ಅಕ್ಷರ, ಆರೋಗ್ಯ, ಅರಿವು ಹಾಗೂ ವೃಕ್ಷ ಎನ್ನುವ ಪಂಚದಾಸೋಹಗಳಿಗೆ ಹೆಸರಾಗಿದೆ. ಹೀಗೆ, ಮಠ-ಮಂದಿರಗಳೆಂದರೆ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಅರಿವು ಮೂಡಿಸುವ ಕೇಂದ್ರಗಳಾಗಿರಬೇಕು. ಜಾತ್ಯಾತೀತವಾಗಿ, ಸರ್ವೇಜನಾಃ ಸುಖಿನೋ ಭವಂತು ಎನ್ನುವ ತತ್ತ್ವದಡಿ ಕಾರ್ಯವೆಸಗುವಂತಹ ವಾಗಬೇಕು. ದುರ್ದೈವ ಇಂದು ಮಠಗಳ ರೂಪವೇ ಬದಲಾಗಿದೆ.
ಬಹುತೇಕ ಇಂದಿನ ಮಠಗಳು ರಾಜಕೀಯ ತಾಣಗಳು, ಜಾತಿ ಕೇಂದ್ರಿತವಾಗಿವೇ. ಸರ್ವ ಸಮಾಜದ ಹಿತಕ್ಕಿಂತ ತಮ್ಮತಮ್ಮ ಸಮಾಜದ (ಜಾತಿ) ಹಿತವೇ ಬಹುಮುಖ್ಯವನಿಸಿದೆ. ಆದರೆ ಇಂತಹ ಸಾಲಿಗೆ ಸೇರದ ಮಠಗಳಲ್ಲಿ ಕೊಪ್ಪಳದಗವಿಮಠವೂ ಒಂದು. ಇದಕ್ಕೆ ಗವಿಶ್ರೀಗಳ ಉತ್ಕಟ ಸಾಮಾಜಿಕ ಕಳಕಳಿಯೇ ಇದಕ್ಕೆ ಕಾರಣ ಎನ್ನುತ್ತದೆ ಇಲ್ಲಿಯ ಭಕ್ತ ಸಮೂಹ.