ಬರವಣಿಗೆ ನಿತ್ಯ, ಸಾಯುವ ಮುನ್ನಾ ದಿನವೂ ಇದೇನಿದು ಸತ್ಯ ?
ನೆನಪಿನ ಪುಟಗಳು
ಶಿವಸುಬ್ರಹ್ಮಣ್ಯ
.@.
ಕೆ.ಸತ್ಯನಾರಾಯಣ ಕನ್ನಡಪ್ರಭ ಸಂಗಾತಿ. ಕನ್ನಡಪ್ರಭ ಸತ್ಯನಾರಾಯಣರ ಸಂಗಾತಿ. ನಿವೃತ್ತಿಯ ನಂತರವೂ, ದೈಹಿಕ ಶಕ್ತಿ ಇರುವವರೆಗೆ ಕನ್ನಡಪ್ರಭಕ್ಕಾಗಿ ಬರೆದ ಪತ್ರಕರ್ತ. ಪತ್ರಿಕೆಯವರಿಗೆ ತಮ್ಮ ಲೇಖನ ಬೇಡವೆನಿಸಿದಾಗ, ದೈಹಿಕ ಶಕ್ತಿ ಕುಂದಿದಾಗ ಅವರು ಕನ್ನಡಪ್ರಭಕ್ಕೆ ಬರೆಯುವು ದನ್ನು ನಿಲ್ಲಿಸಿದರು. ಕನ್ನಡಪ್ರಭ ಕಚೇರಿಗೇ ಹೋಗುವುದನ್ನು ಬಿಟ್ಟರು.
ಇದೆಲ್ಲ ಒಬ್ಬ ಪತ್ರಕರ್ತನ ಸುದೀರ್ಘ ಜೀವನದಲ್ಲಿ ಸಹಜ ಪ್ರಕ್ರಿಯೆ. ಅಂದರೆ, ಸತ್ಯ ಅವರ ಐದು ದಶಕಗಳ ಪಯಣದಲ್ಲಿ ನಡೆದ ಘಟನೆ. ಆದರೆ, ಅವರೊಳಗಿನ ಪತ್ರಕರ್ತ ಅವರು ನಿಧನರಾಗುವ ಮುನ್ನಾ ದಿನವೂ (೯೦ರ ಇಳಿವಯಸ್ಸಿನಲ್ಲೂ!) ಕಾರ್ಯ ಪ್ರವೃತ್ತನಾಗಿದ್ದ. ಜನವರಿ ೮, ೨೦೨೩ರಂದು ‘ಕನ್ನಡ ಪ್ರಭ ಸತ್ಯ’ ಇಹಲೋಕ ತ್ಯಜಿಸಿದರು. ಜನವರಿ ೭, ೨೦೨೩ ರಂದೂ ಅವರು ಏನೋ ಬರೆಯಲು ಹಾತೊರೆಯುತ್ತಿದ್ದರು. ಬೆಂಗಳೂರಿನ ಜಯ ನಗರದಲ್ಲಿರುವ ಅವರ ಹಳೇ ಮನೆಯ ಮೊದಲ ರೂಮಿನಲ್ಲಿ ಅವರ ಬರಹಗಳಿಗೆ ‘ಹೆಗಲು ಕೊಟ್ಟ’ ಮೇಜು, ಕುರ್ಚಿ ಇದೆ.
ಜ.೮ರಂದು ಮಧ್ಯಾಹ್ನ ಅ ಮಲಗಿಸಿದ್ದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಾನು, ಅವರ ಪತ್ನಿ ವೆಂಕಮ್ಮ ಅವರನ್ನು ಮಾತನಾಡಿಸಿ ಪರಿಚಯ ಮಾಡಿ ಕೊಂಡೆ. ‘ನನಗೆ ಕನ್ನಡಪ್ರಭದಲ್ಲಿ ಉದ್ಯೋಗ ಕೊಡಿಸಿದವರೇ ಸರ್’ ಎಂದು ಹೇಳಿದೆ. ‘ಇತ್ತೀಚೆಗೆ ಏನು ಮಾಡುತ್ತಿದ್ದರು? ಮನೆಯಲ್ಲಿ ಹೇಗೆ ಇರುತ್ತಿದ್ದರು’ ಎಂದು ಪ್ರಶ್ನಿಸಿದೆ. ವೆಂಕಮ್ಮ ಅವರ ಉತ್ತರವೇ ಕನ್ನಡ ಪತ್ರಿಕೋದ್ಯಮದ ದೊಡ್ಡ ಶಕ್ತಿ ಎಂಥದ್ದು ಎಂಬು ದನ್ನು ಕಣ್ಣ ಮುಂದೆ ತಂದು ನಿಲ್ಲಿಸಿತು.
ಜ.೭ ರಂದೂ ಸತ್ಯನಾರಾಯಣ ಏನೋ ಬರೆಯಲು ಪ್ರಯತ್ನಿಸಿದ್ದಾರೆ. ಅವು ಅಸ್ಪಷ್ಟವಾಗಿವೆ. ಪ್ರತಿದಿನ, ದಿನಕ್ಕೆ ಹೆಚ್ಚೂ ಸಮಯಸತ್ಯನಾರಾಯಣ ಅವರು ಕನ್ನಡ ಟಿವಿ ನ್ಯೂಸ್ ನೋಡುತ್ತಿದ್ದರಂತೆ. ಎಷ್ಟೋ ಬಾರಿ ಸಾಕು ವಿಶ್ರಾಂತಿ ತಗೊಳ್ಳಿ ಎಂದು ಹೇಳಿದ್ದನ್ನು ವೆಂಕಮ್ಮ ನೆನಪಿಕೊಂಡರು. ಟಿವಿ ನ್ಯೂಸ್ ನೋಡುತ್ತಿದ್ದಂತೆ ಸತ್ಯ ನಾರಾಯಣ ಜಾಗೃತರಾಗುತ್ತಿದ್ದರು. ನ್ಯೂಸ್ ನೋಡಿದ ಮೇಲೆ ಅವರು ಬರೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಅದು ಪೂರ್ಣಗೊಳ್ಳುತ್ತಿರಲಿಲ್ಲ. ನೆನಪಿನ ಶಕ್ತಿ ಕುಂದಿತ್ತು. ಜ.೭ ರಂದೂ ಬರೆದ ಅಪೂರ್ಣ ಲೇಖನಗಳನ್ನು ನನಗೆ ತೋರಿಸುವ ವ್ಯವಸ್ಥೆ ವವಸ್ಥೆಯನ್ನು ಸತ್ಯನಾರಾಯಣ ಅವರ ಆರೈಕೆಗೆ ಇದ್ದ ಸಹಾಯಕಿ ಮೂಲಕ ಮಾಡಿಸಿದರು.
ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಜಿ- ೨೦ ಸಭೆಯ ಬಗ್ಗೆ ಸತ್ಯನಾರಾಯಣ ಬರೆಯಲು ಹೊರಟಿದ್ದಾರೆ. ಈ ಲೇಖನ ಮುಂದೆ ಬೇರೆ ವಿಚಾರಗಳಿಗೆ ಹೊರಳಿದೆ. ಭಾರತದ ದೊಡ್ಡ ಜವಾಬ್ದಾರಿಗಳು. ಹೊಸ ಚಿಂತನೆಯನ್ನು ಕ್ಷಿಪ್ರಗೊಳಿಸಲಿದೆ. ‘ವಿಶಿಷ್ಟ ಅತಿಥಿ ಗಳಿಗೆ ಬೆಂಗಳೂರಿನ ಸ್ವಾಗತ’ ಎಂದು ಲೇಖನದಲ್ಲಿ ಅವರ ಕೈ ಬರಹ ಇದೆ. ಕೆಲವು ದಿನಗಳ ಹಿಂದೆ ಮಹದಾಯಿ ಯೋಜನೆ ಬಗ್ಗೆ ಬರೆಯಲು ಆರಂಭಿಸಿದ್ದರು. ಅದು ಕೂಡ ಅಪೂರ್ಣ. ರಾಜ್ಯ ಸರಕಾರ ವನ್ಯಜೀವಿ ಸಂರಕ್ಷಣೆಗೆ ಕೈಗೊಂಡ ನಿರ್ಧಾರದ ಬಗ್ಗೆ ಟಿವಿಯಲ್ಲಿ ಬಂದ ಸುದ್ದಿಯನ್ನೂ ಸತ್ಯನಾರಾಯಣ ಟಿಪ್ಪಣಿ ಮಾಡಿಕೊಂಡಿದ್ದಾರೆ.
ಒಂದು ಪುಟದಲ್ಲಂತೂ ಪತ್ರಕರ್ತರನ್ನೇ ಪ್ರಶ್ನಿಸುವ ರೀತಿಯಲ್ಲಿ ವಾಕ್ಯಗಳನ್ನು ಬರೆದಿzರೆ. ಏನಿದೇನಿದು ಸತ್ಯ ಎಂದು ತಮ್ಮ ಪ್ರಶ್ನೆ ಕೇಳಿಕೊಂಡಿದ್ದಾರೆ? ಅವರ ನಿಧನಾನಂತರ ಎಲ್ಲರೂ ಸರಳ, ನೇರ, ನಿಷ್ಠುರ ಎಂದು ಆಡುವ ಮಾತು. ಆದರೆ ಅವರ ಪತ್ನಿವೆಂಕಮ್ಮ ಏನು ಹೇಳುತ್ತಾರೆ ಗೊತ್ತಾ? -‘ಅವರಿಗೆ ಬರೆಯುವುದೇ ಯೋಚನೆ. ಸುಮಾರು ಮೂವತ್ತು ವರ್ಷಗಳಿಂದ ಕನ್ನಡಪ್ರಭ ಕಚೇರಿಗೆ ಹೋಗೋದೇ ಅವರಿಗೆ ನಿತ್ಯದ ಯೋಚನೆಯಾಗಿತ್ತು. ಪತ್ರಿಕೆ ಬಗ್ಗೆ ಎಷ್ಟು ಹಚ್ಚಿಕೊಂಡಿದ್ದರೆಂದರೆ, ನಿವೃತ್ತಿ ನಂತರ ಅವರು ಪತ್ರಿಕಾ ಕಚೇರಿಯನ್ನೇ ಮನೆಗೆ ತಾರದೇ ಇರುವುದೇ ಅಚ್ಚರಿ!’
ಅಂದರೆ, ಪತ್ರಿಕಾ ಕಚೇರಿ ಮನೆಗೆ ತರಲಾಗುವುದಿಲ್ಲ. ಪತ್ರಕರ್ತ ಮತ್ತು ಪತ್ರಿಕೆ- ಪತ್ರಿಕಾ ಕಚೇರಿಯ ಸಂಬಂಧ ಯಾವ ರೀತಿ ಯದ್ದು ಎಂಬುದು ಇದರಿಂದ ನಾವು ತಿಳಿಯಬಹುದು. ಅವರ ನಿಧನ ಸುದ್ದಿ ತಿಳಿದು ಕನ್ನಡಪ್ರಭದಲ್ಲಿ ಅವರಿಂದ ಉದ್ಯೋಗ ಪಡೆದು, ಅವರು ಕೆಲಸ ಮಾಡುವಾಗ ಉದ್ಯೋಗದಲ್ಲಿ ಇದ್ದವರು ಆಘಾತಗೊಂಡಿದ್ದು ಸಹಜ. ಅವ ರನ್ನು ಗುರುಗಳು, ಆತ್ಮೀಯರು ಎಂದು ಕರೆದವರೂ ಅನೇ ಕರು. ಕೆಲವರು ೧೩-೧೫ ವರ್ಷ ಕೆಲಸ ಮಾಡಿದವರಿದ್ದರು. ಗುರುಗಳು ಎಂದು ಆಂಗ್ಲ ಪತ್ರಿಕೆಯವರೂ ಹೇಳುತ್ತಿದ್ದರು. (ನಾನೂ ಕನ್ನಡಪ್ರಭವೊಂದರ ೧೩ ವರ್ಷ ಕೆಲಸ ಮಾಡಿದ್ದೇನೆ). ಆದರೆ ಸತ್ಯನಾರಾಯಣ ಅವರು ಯಾರನ್ನೂ ಶಿಷ್ಯರಾಗಿ ಪರಿಗಣಿಸಲೇ ಇಲ್ಲ. ಈ ಮಾತು ಯಾಕೆ ಹೇಳುತ್ತಿದ್ದೇನೆಂದರೆ ಈಗಿನ ಹಲವು ಘಟಾನುಘಟಿಗಳಿಗೆ ಶಿಷ್ಯ ಕೂಟವೇ ಇದೆ!
ಸತ್ಯನಾರಾಯಣರ ಲೇಖನಗಳನ್ನೇ ಓದಿದರೆ ಅವುಗಳು ಗುರು ಸಮಾನವಾಗುತ್ತಿತ್ತು. ಅವರ ಬರಹಗಳು ನೇರ, ಸ್ಪಷ್ಟ ಮತ್ತು ನಿಖರಮಾಹಿತಿಗಳನ್ನು ಒಳಗೊಂಡಿದ್ದವು. ಸತ್ಯ ನಾರಾಯಣರ ಕೈಗೆ ವರದಿಗಾರರ ವಿಶೇಷ ವರದಿಗಳು ಸಿಕ್ಕರೆ ಸಿಕ್ಕಾಪಟ್ಟೆ ಎಡಿಟ್ಆಗುತ್ತಿತ್ತು. ಪುನರಾವರ್ತನೆ ಆಗುತ್ತಿದ್ದ ಅನಗತ್ಯ ವಾಕ್ಯಗಳನ್ನು ಕಿತ್ತು ಬಿಸಾಡುತ್ತಿದ್ದರು. ಅವರ ಅಡ್ಡ ಗೆರೆಗಳು ಕೈಬರಹದ ಅಥವಾ ಪ್ರಿಂಟ್ ಔಟ್‌ಗಳಲ್ಲಿ ಎದ್ದು ಕಾಣುತ್ತಿತ್ತು.
ನನ್ನ ವರದಿಯೊಂದಕ್ಕೆ ಅವರು ಹಾಕಿದ ಟಿಪ್ಪಣಿ ಹೀಗಿತ್ತು: ‘ಇದು ಯಾರೋ ಎ ಯಾರಿಗೋ ಹೇಳಿದ ಮಾತುಗಳಂತಿವೆ!’ ನಾನು ಅನಂತರ ಆ ವರದಿಗೆ ಪೂರಕ ಅಂಶಗಳನ್ನು ಸಂಗ್ರಹಿಸಿ ತಿದ್ದಿ, ಹೊಸದಾಗಿ ಬರೆದುಕೊಟ್ಟಾಗ ಮುದ್ರಣಕ್ಕೆ ಅವರ ಒಪ್ಪಿಗೆ ಪಡೆಯಿತು. ಸತ್ಯನಾರಾಯಣ ಅವರು ಹೊಸ ಉಪ ಸಂಪಾದಕ/ಕಿ ಯರ ಜತೆ ಕ್ಯಾಂಟೀನ್‌ನಲ್ಲಿ ಕಾಫಿ ಕುಡಿಯುತ್ತ ಹರಟುತ್ತಿದ್ದ ದನ್ನು ನಾನು ಅನೇಕ ಬಾರಿ ನೋಡಿದ್ದೇನೆ. ಹಾಗಂತ ಅವರೊಡನೆ ಆತ್ಮೀಯರಾಗಿದ್ದರು ಎಂದಲ್ಲ.
ಆ ಉಪ ಸಂಪಾದಕ / ಕಿ ಸತ್ಯನಾರಾಯಣರನ್ನು ಕಾಫಿ ಕುಡಿಯೋಣವೇ ಸರ್ ಎಂದಿದ್ದಕ್ಕೆ ಕ್ಯಾಂಟೀನ್‌ಗೆ ಬರುತ್ತಿದ್ದರು. ಹೀಗೆ ಕಾಫಿಗೆ ಆಂಗ್ಲ ಪತ್ರಿಕೆಯವರೂ ಕರೆಯುತ್ತಿದ್ದರು. ಅಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಸತ್ಯನಾರಾಯಣ ಉತ್ತರಿಸುತ್ತಿದ್ದುದು ನಮಗೂ ಕೇಳಿಸುತ್ತಿತ್ತು. ಸತ್ಯನಾರಾಯಣ ಅವರಿಗೆ ವರದಿಗಾರರೆಂದರೆ ಸ್ವಲ್ಪ ಹೆಚ್ಚು ಪ್ರೀತಿ. ಏಕೆಂದರೆ ಅವರೂ ವರದಿಗಾರರಾಗಿದ್ದರು. ಅವರಲ್ಲಿದ್ದ ವರದಿಗಾರ ಸದಾ ಜಾಗೃತ ಆಗಿರುತ್ತಿದ್ದ.
ಸತ್ಯನಾರಾಯಣ ಕನ್ನಡಪ್ರಭದ ಅಸಿಸ್ಟೆಂಟ್ ಎಡಿಟರ್ ಆಗಿದ್ದಾಗಾಗಲೀ, ಎಡಿಟರ್ ಆಗಿದ್ದಾಗಾಗಲೀ ಒಟ್ಟಾರೆ ಬಿಗಿಯಾದ ಆಡಳಿತ ನಡೆಸಿದವರಲ್ಲ. ಎಡಿಟೋರಿಯಲ್‌ನಲ್ಲಿ ಸದಾ ಬುಸುಗುಡುತ್ತಿದ್ದ ಇಬ್ಬರನ್ನು ನಿಯಂತ್ರಿಸಲೇ ಇಲ್ಲ. ಇಬ್ಬರೂ ಎಡಿಟೋರಿಯಲ್‌ನಲ್ಲಿ ಪ್ರತ್ಯೇಕ ಕ್ರಿಕೆಟ್/ ಕಬಡ್ಡಿ ಟೀಮ್ ಕಟ್ಟಲು ಶತಪ್ರಯತ್ನ ನಡೆಸುತ್ತಿದ್ದರು.! ಎಡಿಟರ್ ಆಗಿ ಬಿಗಿಯಾದ ಆಡಳಿತ ನಡೆಸಿದರೆ ಎಷ್ಟು ಜನ ಹಿಡಿಶಾಪ ಹಾಕುತ್ತಾರೆ ಎಂಬುದು ಅನಂತರ ಸಂಪಾದಕರಾದ ಎಚ್. ಆರ್.ರಂಗನಾಥ್ ಮತ್ತು ಶಿವಸುಬ್ರಹ್ಮಣ್ಯ(ನಾನೇ!) ಅನುಭವಕ್ಕೆ ಬಂದ ವಿಚಾರ!
ಸತ್ಯನಾರಾಯಣ ಯಾವತ್ತೂ ಬಿಗುವಾದ ಆಡಳಿತ ನಡೆಸದೇ ಇದ್ದುದರಿಂದ, ಜೀವನದಲ್ಲಿ ಒಂದೇ ಒಂದು ಲೇಖನ, ವರದಿ ಬರೆಯದ, ಒಂದೇ ಒಂದು ಸಮರ್ಪಕ ಎಡಿಟ್ ಮಾಡಲು ಸಾಮರ್ಥ್ಯ ಹೊಂದಿರದ ಪತ್ರಕರ್ತರೂ ಕನ್ನಡಪ್ರಭದಲ್ಲಿ ನಿವೃತ್ತಿ ಯಾಗುವವರೆಗೂ, ನಂತರವೂ ಸುಖವಾಗಿದ್ದರು! ಅಂತಹ ಪತ್ರಕರ್ತರ ಜತೆ ಸತ್ಯನಾರಾಯಣ ಅವರಿಗೆ ಯಾವುದೇ ಸಂವಹನ ಮತ್ತು ಸಂಪರ್ಕವೂ ಇರಲಿಲ್ಲ.
ವಿಜಯಕರ್ನಾಟಕ ಸೇರಲೆಂದು ಕನ್ನಡಪ್ರಭದ ಸಂಪಾದಕೀಯ ತಂಡವೊಂದು ಪ್ರಯತ್ನಿಸಿತ್ತು. ಅದು ಸತ್ಯನಾರಾಯಣ ಅವರಿಗೆತಿಳಿದೂ ಸುಮ್ಮನಿದ್ದರು. ಆ ತಂಡಕ್ಕೆ ವಿಜಯ ಕರ್ನಾಟಕದ ಅಂದಿನ ಮಾಲೀಕರು ಸೊಪ್ಪು ಹಾಕಲಿಲ್ಲ. ಬೇರೆ ದಾರಿಯಿಲ್ಲದೆ ತಂಡವು ಮತ್ತೆ ಕನ್ನಡಪ್ರಭಕ್ಕೇ ಅಂಟಿಕೊಂಡಿತು. ಸತ್ಯನಾರಾಯಣರು ಕನ್ನಡಪ್ರಭದಲ್ಲಿ ದಿಗ್ಗಜರಾಗಿಯೇ ಇದ್ದಾಗ, ವರದಿಗಾರರ ವಿಭಾಗದಲ್ಲಿ ಇದ್ದ ಡಿ. ಮಹದೇವಪ್ಪ ಅವರು ತೊರೆದು, ಅವರ ಸನ್ಮಿತ್ರ ಈಶ್ವರ ದೈತೋಟ ನೇತೃತ್ವದ ವಿಜಯ ಕರ್ನಾಟಕಕ್ಕೆ ಹೋದರು. ಕನ್ನಡಪ್ರಭದ ರಂಗನಾಥ್ ಮತ್ತು ಶಿವಸುಬ್ರಹ್ಮಣ್ಯ ವಿಜಯಕರ್ನಾಟಕ್ಕೆ ಬರಬೇಕು ಎಂಬುದು ಮಹದೇವಪ್ಪ ಅವರ ಅಪೇಕ್ಷೆಯಾಗಿತ್ತು.
ಇಂಡಿಯನ್ ಎಕ್ಸ್‌ಪ್ರೆಸ್ ಸಮೀಪದ ಹೋಟೆಲಲ್ಲಿ ಇದಕ್ಕಾಗಿ ಮೀಟಿಂಗ್ ಆಯ್ತು. ನಾಯಕ ಹುದ್ದೆ ಕೊಡದೆ ವಿಜಯಕರ್ನಾಟಕವರದಿಗಾರರ ಸೆಕ್ಷನ್‌ಗಷ್ಟೇ ರಂಗನಾಥ್ ಅವರನ್ನು ಸೇರ್ಪಡೆ ಮಾಡುವ ಪ್ರಯತ್ನ ನನಗೆ ಸರಿ ಕಾಣಲಿಲ್ಲ. ರಂಗನಾಥ್‌ರಿಗೆಇದನ್ನು ಮನದಟ್ಟು ಮಾಡಿದ್ದೆ. ಎರಡೇ ದಿನಗಳಲ್ಲಿ ಸತ್ಯನಾರಾಯಣರಿಗೆ ನಮ್ಮ ಬಗ್ಗೆ ಸಂಶಯ ಮೂಡಿತ್ತು. ಅಂದು ವರದಿ ಗಾರಿಕೆ ಮುಗಿಸಿ ಕಚೇರಿಗೆ ಬಂದು, ವಿಭಾಗದಲ್ಲಿ ಒಬ್ಬನೇ ಕುಳಿತಿದ್ದೆ. ಹಿಂದೆ ಬಂದು ನಿಂತಿದ್ದ ಸತ್ಯನಾರಾಯಣ, ‘ನೋಡಪ್ಪಾ, ಅಲ್ಲಿಗೆ ಟ್ರೈ ಮಾಡ್ಬೇಡ, ಇ ಇರು ಒಳ್ಳೇದಾಗುತ್ತೆ’ ಎಂದು ಹೇಳಿದರು.
ಮುಂದಿನದು ಇತಿಹಾಸ. ರಂಗನಾಥ್ ಮತ್ತು ಶಿವಸುಬ್ರಹ್ಮಣ್ಯ ಕನ್ನಡಪ್ರಭದ ಸಂಪಾದಕರಾದರು. ಸತ್ಯನಾರಾಯಣ ಕನ್ನಡಪ್ರಭ ದಲ್ಲಿ ಇzಗ ಮತ್ತು ಅವರು ನಿವೃತ್ತರಾದರೂ ಕನ್ನಡಪ್ರಭದ ಸಂಗಾತಿಯೇ ಆಗಿzಗ, ನಾನಾ ಕಾರಣಗಳಿಂದ ಕನ್ನಡಪ್ರಭ ಬಿಟ್ಟವರ ಸಂಖ್ಯೆ ದೊಡ್ಡದಿದೆ. ಆದರೆ ಸತ್ಯನಾರಾಯಣ ಯಾವತ್ತೂ ಕನ್ನಡಪ್ರಭ ಬಿಟ್ಟವರಲ್ಲ. ನಿವೃತ್ತಿಯ ನಂತರವೂ ಕಚೇರಿಗೆ ಬಂದು ಲೇಖನ ಬರೆದು, ಎಡಿಟರ್ ಮತ್ತು ಇತರರ ಜತೆ ಮಾತನಾಡಿಯೇ ವಾಪಸ್ ಮನೆಗೆ ಹೋಗುತ್ತಿದ್ದರು.
ಸತ್ಯನಾರಾಯಣ ಅವರು ಸಂಪಾದಕರಾಗಿದ್ದಾಗಲೇ ಮನೋಜ್ ಕುಮಾರ್ ಸೋಂಥಾಲಿಯಾ ಬಿಗಿ ಆಡಳಿತದ ನಿರೀಕ್ಷೆಯಿಂದ ವೆಂಕಟ ನಾರಾಯಣರನ್ನು ಎಡಿಟರ್ ಹುದ್ದೆಗೆ ಕರೆತಂದರು. ಆಗಲೂ ಸತ್ಯನಾರಾಯಣ ಕಚೇರಿಗೆ ಬಂದು ಖಾಲಿ ಇದ್ದ ಯಾವು ದಾದರೂ ಒಂದು ಕ್ಯಾಬಿನ್‌ನಲ್ಲಿ ಕುಳಿತು ಲೇಖನ ಬರೆದುಕೊಟ್ಟು ಹೋಗುತ್ತಿದ್ದರು. ವೆಂಕಟ ನಾರಾಯಣ ಎಡಿಟರ್ ಆಗಿದ್ದಾಗ ಸ್ಪೆಷಲ್ ಕರೆಸ್ಪಾಂಡೆಂಟ್ ಆಗಿದ್ದ ರಂಗನಾಥ್ ಅವರನ್ನು ಇನ್ನಷ್ಟು ಬಿಗಿ ಆಡಳಿತಕ್ಕಾಗಿ ಸೋಂಥಾಲಿಯಾ ನೇಮಿಸಿದರು.
ರಂಗನಾಥ್ ಎಡಿಟರ್ ಆಗಿದ್ದಾಗಲೂ ಸತ್ಯನಾರಾಯಣ ಕಚೇರಿಗೆ ಬಂದು ಲೇಖನ ಬರೆದು ಕೊಟ್ಟು , ರಂಗನಾಥ್ ಜತೆ ಕೆಲ ಹೊತ್ತು ಮಾತನಾಡಿ ಹೋಗುತ್ತಿದ್ದರು. ಎಷ್ಟೋ ಬಾರಿ ಬೆಳಗ್ಗೆ ಬಂದವರು ಮಧ್ಯಾಹ್ನ ದವರೆಗೆ, ಮಧ್ಯಾಹ್ನ ಬಂದವರು ಸಂಜೆ ವರೆಗೆ ಇರುತ್ತಿದ್ದರು. ರಂಗನಾಥ್, ಕನ್ನಡಪ್ರಭ ತೊರೆದು ಸುವರ್ಣ ಟಿವಿಗೆ ಹೋಗಲು ತಯಾರಿ ನಡೆಸುತ್ತಿರುವಾಗಲೂ ಸತ್ಯ ನಾರಾಯಣ ಎಂದಿನಂತೆ ಕಚೇರಿಗೆ ಬರುತ್ತಿದ್ದರು. ರಂಗನಾಥ್ ರಾಜಿನಾಮೆ ನಂತರ, ಸಂಪಾದಕರಾಗಲು ಕೆಲವರು ಪ್ರಯತ್ನಿಸಿ ದರು. ಕನಸು ಕಂಡರು!
ಆದರೆ ಹಠಾತ್ ಆಗಿ ಸೋಂಥಾಲಿಯಾ ಅವರು ನನ್ನನ್ನು ಸಂಪಾದಕನನ್ನಾಗಿ ನೇಮಿಸಿದರು. ಅದೇ ದಿನವೂ ಸತ್ಯ ಕಚೇರಿಗೆ ಬಂದು ಅಭಿನಂದಿಸಿದರು. ಎಂದಿನಂತೆ ಲೇಖನ ಬರೆದು ಕೊಟ್ಟು ಹೋದರು. ಕನ್ನಡಪ್ರಭಕ್ಕೆ ರಾಜೀವ್ ಚಂದ್ರಶೇಖರ್‌ರಿಂದ ಹೂಡಿಕೆಯಾದಾಗ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದ ಎರಡನೇ ಮಹಡಿಯಲ್ಲಿ ಹೊಸ ಕಚೇರಿ ನಿರ್ಮಿಸಲಾಯಿತು. ಆಗಲೂ ಸತ್ಯನಾರಾಯಣ ಬರುತ್ತಿದ್ದರು. ಆಗ ಅವರು ಪ್ರತ್ಯೇಕ ಕ್ಯಾಬಿನ್‌ನಲ್ಲಿ ಕುಳಿತು ಬರೆಯಲು ವ್ಯವಸ್ಥೆ ಮಾಡಿಸಿದ್ದೆ. ಅವರು ಮೊದಲ ಪುಟ ಬರೆಯುತ್ತಿದ್ದಂತೆ ಬಿಸಿಬಿಸಿ ಕಾಫಿ ಅವರ ಟೇಬಲ್‌ಗೇ ಕಳುಹಿಸುತ್ತಿದ್ದೆ.
ಆಗ ಅವರಿಗೆ ಖುಷಿ. ಅದಕ್ಕಾಗಿ ಥ್ಯಾಂಕ್ಸ್ ಹೇಳುತ್ತಿದ್ದರು. ‘ಸಂಪಾದಕ ನಾಗಿರುವಾಗ, ವ್ಯಕ್ತಿತ್ವ ತೇಜೋವಧೆ ಮಾಡಿ, ಬೇರೆ ಬೇರೆ ಆರೋಪ ಮಾಡುವ ಜನರೇ ಇರುತ್ತಾರೆ. ಅಂಥವರ ಬಗ್ಗೆ ಎಚ್ಚರದಿಂದ ಇರಪ್ಪಾ ಶಿವಾ…’ ಎಂದು ಒಮ್ಮೆ ಕಿವಿಮಾತು ಹೇಳಿದ್ದರು. ಈಗಲೂ ಆ ಮಾತು ನನ್ನ ಕಿವಿಗೆ ಗುನುಗುತ್ತಿದೆ. ಆದರೆ ಆ ದುಷ್ಕರ್ಮಿಗಳ ಪತ್ತೆ ಸಾಧ್ಯವಾಗಿಲ್ಲ. ಪತ್ತೆಯಾದ ಕೆಲವರು ಇಂದಿಗೂ ಕುಖ್ಯಾತ ಪತ್ರಕರ್ತರಾಗಿಯೇ ಇzರಲ್ಲ ಎಂಬ ಬೇಸರ ನನಗಿದೆ.
ನಾನು ಸಂಪಾದಕನಾದ ತಕ್ಷಣ ರಂಗನಾಥ್ ಅವರು ಸುಮಾರು ೨೮ ಪತ್ರಕರ್ತರನ್ನು ಕನ್ನಡಪ್ರಭ ಪತ್ರಿಕೆಯ ಸೋದರ ಸಂಸ್ಥೆ ಯಾಗಿ ರೂಪುಗೊಂಡಿದ್ದ ಸುವರ್ಣಕ್ಕೆ ಸೇರಿಸಿಕೊಂಡಿದ್ದರು. ಮ್ಯಾನೇಜ್ ಮೆಂಟ್ ಕೂಡ ಸುಮ್ಮನಿತ್ತು! ನಾನು ಮಾತ್ರ ಎದೆ ಗುಂದದೆ, ಧೃತಿಗೆಡದೆ ತಂಡ ಕಟ್ಟಿದೆ. ಆಗ ಮಾತ್ರ ಸತ್ಯನಾರಾಯಣ ಅವರು ನೀಡಿದ ಪ್ರೋತ್ಸಾಹ ಎಂದಿಗೂ ಮರೆಯಲಾರೆ. ಹೊಸಬರನ್ನು ಬೆಳೆಸು. ಅವರೆಲ್ಲ ಚೆನ್ನಾಗಿ ಕೆಲಸ ಮಾಡುತ್ತಾರೆ ಎನ್ನುತ್ತಾ ಆತ್ಮವಿಶ್ವಾಸ ಮೂಡಿಸಿದರು.
ಸತ್ಯನಾರಾಯಣ ಅವರು ಕನ್ನಡಪ್ರಭ ಬಿಟ್ಟು ಹೋದ ರಂಗನಾಥ್ ಅವರೊಡನೆಯೂ ಚೆನ್ನಾಗಿದ್ದರು. ಕನ್ನಡಪ್ರಭ ಇದ್ದ ನನ್ನ ಜತೆಯೂ ಚೆನ್ನಾಗಿದ್ದರು. ಕನ್ನಡ ಪತ್ರಿಕೋದ್ಯ ಮದ ವಿಚಿತ್ರವೆಂದರೆ ಅನಂತರ ರಂಗನಾಥ್ ಅವರು ನಮಸ್ಕಾರ ಎಂಬ ಮಾತಿಗೆ ಸಿಗುತ್ತಿದ್ದದು ಪ್ರೆಸ್ ಕ್ಲಬ್ ಚುನಾವಣೆ ಸಂದರ್ಭದಲ್ಲಿ ಮಾತ್ರ. ಅಪಪ್ರಚಾರದ ಶಕ್ತಿಗಳು ಎಲ್ಲಿ ಕೆಲಸ ಮಾಡುತ್ತವೆ ಎಂಬುದನ್ನು ಸತ್ಯನಾರಾಯಣ ಅವರಿಂದಲೇ ನಾನು ತಿಳಿಯಬೇಕಿತ್ತು ಎಂದು ಎಷ್ಟೋ ಬಾರಿ ಯೋಚಿಸಿದ್ದಿದೆ. ಪ್ರೆಸ್ ಕ್ಲಬ್‌ನಲ್ಲೂ ಸತ್ಯ ಅವರ ದರ್ಶನ ಆಗುತ್ತಿತ್ತು.
ನಾನು ಸಂಪಾದಕನಾಗಿದ್ದಾಗ ಕನ್ನಡಪ್ರಭ ಪತ್ರಿಕೆ ದಾಖಲೆ ಪ್ರಸಾರ ( ೨.೧೪ ಲಕ್ಷ) ಮತ್ತು ಆದಾಯ ವೃದ್ಧಿಯಾದಾಗ (ಇದರವಿವರ ಸೋಂಥಾಲಿಯಾ ಮತ್ತು ನನ್ನ ಮಧ್ಯೆ ಮಾತ್ರ!) ಹಠಾತ್ ಆಗಿ ವಿಶ್ವೇಶ್ವರ ಭಟ್ಟರನ್ನು ಪ್ರಧಾನ ಸಂಪಾದಕರನ್ನಾಗಿ ರಾಜೀವ್ ಚಂದ್ರ ಶೇಖರ್ ಶಿಫಾರಸಿನಿಂದ ಸೋಂಥಾಲಿಯಾ ನೇಮಿಸಿದರು. ಕನ್ನಡಪ್ರಭವೇ ದೇಗುಲ, ಕನ್ನಡಪ್ರಭವೇ ಮನೆ ಎಂದು ೧೩ ವರ್ಷಗಳಿಂದ ಭಾವಿಸಿದ್ದ ನಾನೂ ಹೊರಗೆ ಬರಬೇಕಾಯಿತು.
ಮ್ಯಾನೇಜ್ ಮೆಂಟ್ ನನ್ನ ಜತೆ ಚರ್ಚಿಸಿಲ್ಲ ಮತ್ತು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ನನ್ನ ಮುಂದುವರಿ ಕೆಗೆ ಸೂಕ್ತ ವಾತಾ ವರಣ ನಿರ್ಮಿಸಿಲ್ಲ ಎಂಬುದಷ್ಟೇ ನನ್ನ ತಕರಾರು ಆಗಿತ್ತೇ ಹೊರತು ವಿಶ್ವೇಶ್ವರ ಭಟ್ಟರ ಜತೆ ಭಿನ್ನಾಭಿ ಪ್ರಾಯ ಇರಲಿಲ್ಲ. ನಾವು ಸಂಯುಕ್ತ ಕರ್ನಾಟಕದಲ್ಲೂ ಜತೆ ಯಾಗಿಯೇ ಕೆಲಸ ಮಾಡಿದವರು. ಈಗಲೂ ಸ್ನೇಹಿತರೇ ಆಗಿದ್ದೇವೆ. ವಿಶ್ವೇಶ್ವರ ಭಟ್ಟರ ಆಡಳಿತ ಅವಽಯಲ್ಲೂ ಕನ್ನಡಪ್ರಭ ಕಚೇರಿಗೆ ತೆರಳುವುದನ್ನು ಸತ್ಯನಾರಾಯಣ ಮುಂದುವರಿಸಿದರು. ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಬಿಡುವ ಕಾಲದಲ್ಲೂ ಸತ್ಯನಾರಾಯಣ ಸಂಪಾದಕೀಯ ಮತ್ತು ಸಮಕಾಲೀನ ಅಂಕಣ ಬರೆಯುತ್ತಿದ್ದರು.
ನಂತರ ನೇಮಕಗೊಂಡ ಸುಗತ ಆಡಳಿತದಲ್ಲಿ ಸತ್ಯನಾರಾಯಣ ಅವರ ಅಂಕಣ ಹದಿನೈದು ದಿನಕ್ಕೊಮ್ಮೆ ಎಂದು ನಿರ್ಧಾರವಾಯಿತು. ಅಲ್ಲದೇ, ಹೊರಗಿನವರು (ಸತ್ಯ ನಿವೃತ್ತರಾದವರು) ಸಂಪಾದಕೀಯ ಬರೆಯಕೂಡದು ಎಂಬ ನಿರ್ಧಾರ ಆಯಿತು.ಅಲ್ಲಿಗೆ ಸತ್ಯ ಮತ್ತು ಕನ್ನಡಪ್ರಭದ ಪ್ರತಿದಿನದ ಮುಖಾಮುಖಿ ನಿಂತಿತು. ಸಮಕಾಲೀನ ಪ್ರಕಟವಾಗುತ್ತಿತ್ತು. ಸತ್ಯನಾರಾಯಣಹಠಾತ್ ಆಗಿ ಒಮ್ಮೆ ಅನಾರೋಗ್ಯಕ್ಕೆ ತುತ್ತಾಗಿ, ಸಮಕಾಲೀನ ಬರೆಯುವುದನ್ನು ನಿಲ್ಲಿಸಿದರು. ಅಲ್ಲಿಗೆ ಕನ್ನಡಪ್ರಭದಿಂದಸಮಕಾಲೀನವೂ ಕಳಚಿತು. ಅರೋಗ್ಯ ಸುಧಾರಣೆ ಆದಾಗ, ಬರೆಯಿರಿ ಎಂದು ಕನ್ನಡಪ್ರಭದಿಂದ ಕರೆ ಹೋಗಿಲ್ಲ. ಬರೀಲಾ ಎಂದು ಸತ್ಯನಾರಾಯಣ ಕೇಳಲೂ ಇಲ್ಲ. ಆಗ ಶುರುವಾದದ್ದೇ ಮನೆಯ ಬರವಣಿಗೆ, ಟಿಪ್ಪಣಿಗಳು.
ಅಷ್ಟೇ…. ಸುಗತ ನಿರ್ಗಮನದ ನಂತರ ಡಾ. ವಾಸುದೇವ ಶೆಟ್ಟರು ಹದಿನೈದು ದಿನ ಸಂಪಾದಕ ಹುzಯ ಉಸ್ತುವಾರಿಯಾಗಿ ದ್ದರು.ಶೆಟ್ಟರಿಗೆ ಸತ್ಯನಾರಾಯಣ ಶುಭ ಹಾರೈಸಿದರು. ಆದರೆ, ಸತ್ಯ ಕನ್ನಡಪ್ರಭಕ್ಕಾಗಿ ಬರೆಯಲಿಲ್ಲ. ಅನಂತರ ರವಿ ಹೆಗಡೆ ಸಂಪಾದಕ ರಾದರು. ಆದಾಗಲೇ ಸತ್ಯನಾರಾಯಣ ವಯೋಸಹಜವಾಗಿ ಬಳಲಿದ್ದರು. ಪತ್ರಿಕೆಗೆ ಬರೆಯುತ್ತಿರಲಿಲ್ಲ. ಈ ಮಧ್ಯೆ ಕೆಡಬ್ಲ್ಯುಜೆ ಸತ್ಯನಾರಾಯಣ ಅವರನ್ನು ಮನೆಯ ಸನ್ಮಾನಿಸಿತ್ತು. ಆಗ ಕೆಲ ಮಾತುಗಳನ್ನಾಡಿದ್ದರು.ಅವರು ನಮ್ಮ ಸಂಪಾದಕರಾಗಿದ್ದಾಗ ನಾನು ಸೀನಿಯರ್ ರಿಪೋರ್ಟರ್. ಒಂದು ಸಂದರ್ಶನ ಮಾಡಿದ್ದೆ. ಮುದಿ ಪಾಕೆಟ್ ರೆಕಾರ್ಡರ್ ಎಲ್ಲಾ ಕಳೆದು ಹೋದಾಗ ಅದರಲ್ಲಿದ್ದ ಅವರ ಧ್ವನಿಯೂ ಕಳೆದು ಹೋಯಿತು.
ಉದಯ ಟಿವಿಯಲ್ಲಿ ‘ಪರಿಚಯ’ಕ್ಕಾಗಿ ಶೈಲಜಾ ಅವರಿಂದ ಮಾಡಿಸಿದ್ದ ಸಂದರ್ಶನ ಅವರ ನೆನಪಲ್ಲಿ ಬಹುಕಾಲ ಇತ್ತು. ಅದನ್ನು ಆಗಾಗ ಹೇಳುತ್ತಿದ್ದರು. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆ, ಸಂಪುಟ ನಿರ್ಣಯಗಳು, ವಿಧಾನಮಂಡಲದ ಪ್ರಮುಖ ವರದಿಗಳ ಪ್ರತಿ ನಮ್ಮಿಂದ ಪಡೆಯುತ್ತಿದ್ದರು. ಅವರ ನಿವಾಸದಲ್ಲಿ ಈಗಲೂ ಆ ದಾಖಲೆಗಳು ಪ್ಲಾಸ್ಟಿಕ್ ಕವರ್ ಹಾಕಿ ಜೋಡಿಸಿ ಇಟ್ಟಿರುವುದು, ಅವರ ಪತ್ರಿಕೋದ್ಯಮದ ಹೆಜ್ಜೆಗಳಿಗೆ ಸಾಕ್ಷಿಯಾಗಿ ಕಂಡು ಬಂತು!
ಕ್ಷೇತ್ರ ಮತ್ತು ಸಂಸ್ಥೆಯೇ ದೊಡ್ಡದು ಎಂದು ನಂಬಿಯೇ ಇದ್ದ ಕನ್ನಡ ಪತ್ರಿಕೋದ್ಯಮದ ಅಪೂರ್ವ ವ್ಯಕ್ತಿ ಸತ್ಯನಾರಾಯಣರನೆನಪು ಅಮರ. ಇನ್ನಾದರೂ ಅವರ ಅಂಕಣ ಬರಹಗಳ ಕೃತಿ ಗುಚ್ಚ ಹೊರ ಬಂದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ, ಹೊಸಪತ್ರಕರ್ತರಿಗೆ ಅಧ್ಯಯನಕ್ಕೆ ಅನುಕೂಲವಾದೀತು.
(ಲೇಖಕರು ಹಿರಿಯ ಪತ್ರಕರ್ತ, ಕನ್ನಡಪ್ರಭದ ಮಾಜಿಸಂಪಾದಕ)
 - 