ರಾಜ್ಯ ಬಿಜೆಪಿಗೊಂದು ಬಹಿರಂಗ ಪತ್ರ
ಅಭಿವ್ಯಕ್ತ
ಅರ್ಜುನ್ ಶೆಣೈ
ನಮಸ್ಕಾರ. ಹೇಗಿದ್ದೀರಿ? ಓಹ್, ಇದು ನಿಮಗೇ ಕೇಳುವ ಪ್ರಶ್ನೆಯೇ ಅಲ್ಲ ಬಿಡಿ. ಡಬಲ್ ಎಂಜಿನ್ ಸರಕಾರ ಅಂದ ಮೇಲೆ ಈ ಪ್ರಶ್ನೆಯನ್ನೇ ಅಮಾನತಿ ನಲ್ಲಿಡಬೇಕು. ಅಂತೂ ಕಷ್ಟಪಟ್ಟೋ, ಇಷ್ಟಪಟ್ಟೋ ಸರಕಾರ ಮಾಡಿ ಅವಧಿ ಪೂರೈಸಿಬಿಟ್ಟಿರಿ. ಮುಂದಿನ ಚುನಾವಣೆಗೆ ದಾಪುಗಾಲಿಟ್ಟು ಮತ್ತೆ ಕುರ್ಚಿಯಲ್ಲಿ ಕೂರುವ ಉತ್ಸುಕvಯಲ್ಲಿಯೂ ಇದ್ದೀರಿ. ಇಂತಹ ಸಂದರ್ಭದಲ್ಲಿನಿಮ್ಮೆದುರು ಕೆಲವು ವಾಸ್ತವ ಸಂಗತಿಯನ್ನು ಬಿಚ್ಚಿಡಬೇಕು ಎಂದು ಅನ್ನಿಸಿತು.
ಒಬ್ಬನ ಯೋಗ್ಯತೆ ತಿಳಿಯಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ನೋಡಬೇಕೆಂಬ ಮಾತಿದೆ. ಚುನಾವಣೆಯ ನಂತರದ ಆತ್ಮಾವಲೋಕನವೇ ಬೇರೆ. ಇದು ವಾಸ್ತವ ದರ್ಶನಕ್ಕೆ ಸುಸಂದರ್ಭ. ಪ್ರಾಯಶಃ ವಾಸ್ತವತೆಯ ಕಠೋರತೆ ನಿಮ್ಮನ್ನು ಚುನಾವಣಾ ಪ್ರಚಾರಕ್ಕೆ ತುಸು ಗಟ್ಟಿಗೊಳಿಸೀತು. ನ್ಯಾಯವಾಗಿ ಎದೆ ಮುಟ್ಟಿಕೊಂಡು ಹೇಳಿ, ಇದು ಯಾವ ಸರಕಾರ? ಬಿಜೆಪಿ-ಜೆಡಿಎಸ್, ಬಿಜೆಪಿ-ಕಾಂಗ್ರೆಸ್ ಅಥವಾ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ. ಅಯ್ಯೋ, ಗೊಂದಲವಾಯಿತಾ? ನಾವು ಕೇಸರಿ ಪಕ್ಷದವರು, ಬಹು ಮತದ ಸರಕಾರ ನಮ್ಮದು, ಇಂಥ ಪ್ರಶ್ನೆ ಏಕೆ ಎಂದು? ಇಲ್ಲ, ಆಯ್ಕೆಗಳು ಸರಿಯಾಗಿಯೇ ಇವೆ.
ಅದಕ್ಕೂ ಸುಳಿವು ಕೊಡೋಣ, ಒಮ್ಮೆ ನಿಮ್ಮ ಮಂತ್ರಿಮಂಡಲದ ಪಟ್ಟಿ ಡಿದು ಬಳಿಕ ಹೇಳಿ. ಈಗಲೂ ಗೊತ್ತಾಗಿಲ್ಲವೆಂದರೆ ಹೇಳು ತ್ತೇನೆ ಕೇಳಿ, ನಿಮ್ಮದು ಅಘೋಷಿತ ಸಮ್ಮಿಶ್ರ ಸರಕಾರ. ನಿಮ್ಮ ಆಡಳಿತದಲ್ಲಿ ಮೋದಿ ವೈಖರಿಯಿಲ್ಲ, ನಿಖರತೆಯಿಲ್ಲ, ಸಂಘದ ಲವಲೇಶವೂ ಇಲ್ಲ. ಪಕ್ಷದ ಸಿದ್ಧಾಂತಗಳು ಎಂದೋ ಮಣ್ಣು ಪಾಲಾಗಿ ಹೋಗಿವೆ. ಇನ್ನೂ ಸ್ಪಷ್ಟವಾಗಿ ಐದು ಕಾರಣಗಳನ್ನುನೋಡೋಣ.
೧. ಸಮ್ಮಿಶ್ರ ಸರಕಾರ:ಕೇವಲ ಎರಡು ಸೀಟಿನಿಂದ ಸ್ವಂತ ಬಲದಲ್ಲಿ ಸರಕಾರ ರಚಿಸುವ ತಾಕತ್ತು ಬರುವುದು ಬರೀ ಭಾಷಣ ಮಾಡಿ ಆಗಿರಲಿಕ್ಕಿಲ್ಲ. ಆದರೆ ಅಧಿಕಾರದ ಅಮಲು ನಿಮಗೆ ಯಾವಾಗ ಹತ್ತಿತೋ, ಪಕ್ಷ ವಿಸ್ತರಣೆ ಎಂಬ ಭ್ರಾಂತಿಯೊಂದಿಗೆ ಹೆಜ್ಜೆಹಾಕುತ್ತ ಅದು ಎರ್ರಾಬಿರ್ರಿಯಾಗಿ ಸಾಗಿತು. ಸಿಕ್ಕಸಿಕ್ಕವರಿಗೆಲ್ಲ ಪಕ್ಷದ ಬಾವುಟ ಕೊಟ್ಟಿರಿ. ಅಷ್ಟಕ್ಕೇ ನಿಲ್ಲಲಿಲ್ಲ. ಸರಕಾರ ಸ್ಥಾಪನೆಯ ಏಕೋದ್ದೇಶದಿಂದ ಬಂದವರಿಗೆಲ್ಲ ಮಂತ್ರಿಗಿರಿಯೂ ಕೊಟ್ಟಿರಿ. ಆದರೆ ಕಾಗೆ ಬಿಳಿ ಪೇಯಿಂಟಿನಲ್ಲಿ ಮುಳುಗೆದ್ದರೆ ಕೋಗಿಲೆಯಂತೆ ಕಂಠ ಇರದು ಎಂಬ ವಾಸ್ತವ ನಿಮಗೆ ತಿಳಿಯಲೇ ಇಲ್ಲ. ಈಗ ನಿಜವಾಗಿಯೂ ಮೂಲ ಪಕ್ಷದವರ‍್ಯಾರು, ವಲಸಿಗರ‍್ಯಾರು ಎಂಬುದೇ ತಿಳಿಯದ ಮಟ್ಟಿಗೆ ವಕ್ರವಕ್ರವಾಗಿ ನಿಮ್ಮ ಪಕ್ಷ ಬೆಳೆದಿದೆ.
ಅಧಿಕಾರಕ್ಕೆ ಬಂದವರೆಲ್ಲ ಸಾರ್ವಜನಿಕ ಶೌಚಾಲಯದಂತೆ ಬಂದು ಬಂದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಆದರೆನೀವು ಪಕ್ಷ ಬೆಳೆದಿದೆ ಎಂಬ ಭ್ರಾಂತಿಯಲ್ಲಿ ಮುಳುಗಿದ್ದೀರಿ. ನಿಮಗೇನೋ ಒಂದಲ್ಲದಿದ್ದರೆ ಇನ್ನೊಂದು ಹುದ್ದೆ ಸಿಕ್ಕೀತು. ಆದರೆ ಇದೆಲ್ಲದರ ಪರೋಕ್ಷ ಏಟು ಬೀಳುತ್ತಿರುವುದು ಕಾರ್ಯಕರ್ತನಿಗೆ!
೨. ಕಾರ್ಯಕರ್ತನ ಬೆವರು:ನೀವೇನೋ ಅಧಿಕಾರವನ್ನನು ಭವಿಸಿದಿರಿ, ಆದರೆ ನಿಮ್ಮದೇ ಪಕ್ಷದ ಬಾವುಟಕ್ಕೆ ಅಂಟಿದ್ದಕಾರ್ಯಕರ್ತನ ಬೆವರು ನಿಮ್ಮ ಕಣ್ಣಿಗೆ ಕಾಣಲೇ ಇಲ್ಲ. ಅಧಿಕಾರದಲ್ಲಿದ್ದಾಗ ನೆನಪಾಗದ ಕಾರ್ಯಕರ್ತ ಇನ್ನೆರಡು ತಿಂಗಳಲ್ಲಿ ಆಪದ್ಬಾಂಧವನಂತೆ ಆಗಿ ಅವನ ಮನೆಯ ಕದ ತಟ್ಟುವಿರಲ್ಲ ಆಗ ಇದೆ ನಿಮಗೆ ಗ್ರಹಚಾರ. ಗ್ರೌಂಡ್ ಲೆವೆಲ್‌ನ ಕಾರ್ಯಕರ್ತನ ಬಳಿ ಕೂತು ಕೇಳಿ, ಅವನ ಆಕ್ರೋಶ ಮುಗಿಲು ಮುಟ್ಟಿದೆ. ಗದ್ದುಗೆಯ ಮೇಣ ಕಿವಿಯಲ್ಲಿ ಗಟ್ಟಿಯಾಗಿರುವುದರಿಂದ ನಿಮ್ಮ ಕಿವಿಗೆ ಕೇಳಿಸಿಲ್ಲವಷ್ಟೆ. ನಿಮ್ಮ ಅಹಂಕಾರಕ್ಕೆ ಬೇಸತ್ತು ಅವನ ಮನಸ್ಸು ಮುರಿದು ಹೋಗಿದೆ.
ಹ್ಞಾಂ, ಹಾಗಂತ ನಿಷ್ಠೆ ಬದಲಾಗಿಲ್ಲ, ಯಾಕೆಂದರೆ ಅವನಿಗೆ ಲಾಭಕ್ಕಿಂತ ಸಿದ್ಧಾಂತದ ಮೌಲ್ಯ ಗೊತ್ತಿದೆ. ಇಂದು ನೀವು ಅವನಿಗೆ ಎಂತಹ ದುಸ್ಥಿತಿಯನ್ನು ತಂದಿಟ್ಟಿರುವಿರಿ ಗೊತ್ತಾ? ಕಳೆದ ಚುನಾವಣೆಯಲ್ಲಿ ಯಾವ ರಾಜಕಾರಣಿಯ ವಿರುದ್ಧ ಪ್ರಚಾರ ಮಾಡಲು ನೀವು ಅವನನ್ನು ಕಳುಸಿದ್ದಿರೋ ಆ ರಾಜಕಾರಣಿ ಪಕ್ಷ ಬದಲಾಯಿಸಿ ನಿಮ್ಮ ಸರಕಾರದಲ್ಲಿ ಮಂತ್ರಿಯಾಗಿದ್ದಾನೆ!
ನಿಮಗೆ ಅದೆಲ್ಲ ದೊಡ್ಡ ವಿಷಯವಲ್ಲ, ಆದರೆ ನಂಬಿಕೊಂಡು ಬಂದ ತತ್ವವನ್ನು ಮಾರಿ ಪಕ್ಷಕ್ಕೋಸ್ಕರ ಅವನೀಗ ಯುದ್ಧ ಭೂಮಿಗೆ ಇಳಿಯಬೇಕಾದ ಉಭಯ ಸಂಕಟ ಅವನದ್ದು! ಅಷ್ಟೇ ಅಲ್ಲ, ತಾನು ಬೆಳೆಸಿದ ನಾಯಕನನ್ನು ಮಂತ್ರಿಯಾಗಿ ಕಾಣುವ ಆಸೆ ಆತನಿಗಿರುವುದು ತಪ್ಪೇ? ನೀವೇ ಹೇಳಿ.
೩. ಹಿಂದುತ್ವದ ದಾಳ:ನಿಮ್ಮ ಸರಕಾರದಲ್ಲಿ ನಿಮ್ಮದೇ ಪಕ್ಷದ ಕಾರ್ಯ ಕರ್ತರ ಹತ್ಯೆಗಳಾದವು. ಕರಾವಳಿ ಉದ್ವಿಗ್ನಗೊಂಡಿತು. ನಿಮ್ಮ ಪಕ್ಷದ ಶಾಸಕರು ಕಾರ್ಯಕರ್ತರಿಗೆ ಮುಖ ತೋರಿಸಲಾಗದೇ ಬೆಂಚಿನಡಿ ಹೋಗಿ ಹೊಕ್ಕು ಕೂತರು. ಇದಕ್ಕಿಂತ ನಾಚಿಕೆ ಗೇಡು ಇನ್ನೇನಿದೆ? ಅಂದು ಕಸಬ್‌ನನ್ನು ಗಲ್ಲಿಗೇರಿಸದೇ ಮೀನಮೇಷ ಎಣಿಸುತ್ತ ವೋಟ್‌ಬ್ಯಾಂಕ್ ರಾಜಕೀಯ ಮಾಡಿದವರ ವಿರುದ್ಧ ಘೋಷಣೆ ಕೂಗಿದವರು ನೀವೇ ಅಲ್ಲವೇನು? ಈಗ ನಿಮ್ಮ ಪೌರುಷ ಎಲ್ಲಿ ಹೋಯಿತು? ಈಗ ನಿಮ್ಮ ಕಾರ್ಯಕರ್ತನನ್ನು ಕೊಂದವರು ಜೈಲಿನಲ್ಲಿ ಬಿರಿಯಾನಿ ತಿನ್ನುತ್ತಿಲ್ಲವೇ? ನಿಮ್ಮದೇ ಸರಕಾರದಲ್ಲಿ ನಿಮ್ಮದೇ ಪಕ್ಷದ ಕಾರ್ಯಕರ್ತರಿಗೆ ರಕ್ಷಣೆಯಿಲ್ಲ, ಇದಕ್ಕಿಂತ ರ್ದುವಿಧಿ ಇನ್ನೇನಿದೆ? ಅದು ಬಿಡಿ. ಹಿಂದೂ ಸಂಪ್ರದಾಯ-ಆಚರಣೆ- ನಂಬಿಕೆಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ನಿಮಗೆ ದೈವನರ್ತಕರಿಗೆ ಮಾಸಾಶನ ನೀಡಬೇಕು ಎಂದು ಅರಿವಾಗಲು ‘ಕಾಂತಾರ’ ಎಂಬ ಸಿನಿಮಾವೇ ಬರಬೇಕಾ ಯಿತೇನು? ಸಿದ್ದರಾಮಯ್ಯ ಸರಕಾರದಲ್ಲಿ ಮಸೀದಿಗೆ ಅಷ್ಟು ಹೋಯಿತು, ಚರ್ಚಿಗೆ ಇಷ್ಟು ಹೋಯಿತು ಎನ್ನುವ ನೀವು ಹಿಂದುತ್ವಕ್ಕೇನು ಕೊಟ್ಟಿರಿ ಎಂಬ ಪ್ರಶ್ನೆ ಸೂಕ್ತವಾದುದಲ್ಲವೇ?
೪. ಮೋದಿ-ಶಾ ನಾಮಬಲ:ಇನ್ನೊಮ್ಮೆ ಎದೆಮುಟ್ಟಿಕೊಂಡು ಹೇಳಿ, ನಿಮ್ಮಲ್ಲಿ ಎಷ್ಟು ಜನರಿಗೆ ನಿಮ್ಮದೇ ಮುಖವಿಟ್ಟು ಕೊಂಡು ಚುನಾವಣೆಯಲ್ಲಿ ನಿಂತು ಗೆಲ್ಲುವ ತಾಕತ್ತಿದೆ? ಪ್ರತಿ ಚುನಾವಣೆಯಲ್ಲಿಯೂ ಮೋದಿ-ಶಾ ಬರುತ್ತಾರೆಂದು ಟವೆಲ್ಲು ತಲೆ ಮೇಲೆ ಹಾಕಿ ಕುಳಿತುಕೊಳ್ಳುವ ನಿಮಗೆ ನಿಮ್ಮದೇ ಐಡೆಂಟಿಟಿ ಬರುವುದು ಯಾವಾಗ? ನಿಮ್ಮ ಮನೆಯ ಎದುರಿನ ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಮೋದಿ ಹೆಸರು ಹೇಳುವುದನ್ನು ಯಾವಾಗ ಬಿಡುತ್ತೀರಿ? ಈಗಲೂ ಅದೇ ‘ಮ್ಯಾಜಿಕ್’ಗೆ ಕಾಯುತ್ತಿರುವ ನಿಮಗೆ ಕನಿಷ್ಠ ನೈತಿಕಪ್ರeಯೂ ಇಲ್ಲವೇ? ಅಷ್ಟಕ್ಕೂ ಮೋದಿ ಮುಖ ನೋಡಿ ನಿಮಗೆ ಮತಕೊಟ್ಟ ಬಳಿಕ ಮೋದಿ ಬರಲಾರರು ಎಂಬುದನ್ನೂ ತಿಳಿಯದಷ್ಟು ಮತದಾರ ದಡ್ಡನೇ? ನನ್ನ ಕ್ಷೇತ್ರಕ್ಕೆ ನಾನು ಈ ಕೆಲಸ ಮಾಡಿದ್ದೇನೆ ಅಥವಾ ಮಾಡಬಲ್ಲೆ ಎಂದು ಎದೆಯುಬ್ಬಿಸಿ ಹೇಳುವ ಕಾಲ ನಿಮಗೆ ಯಾವಾಗ ಬಂದೀತು? ಕಾಂಗ್ರೆಸಂತೂ ಈ ವಿಚಾರದಲ್ಲಿ ಇನ್ನೊಂದು ಶತಮಾನ ಕಳೆದರೂ ಬದಲಾಗದು, ‘ಗಾಂಧಿ’ತನದ ನೆರಳಿ ನಲ್ಲೇ ಅದಕ್ಕೆ ಮತ ಬೇಕು, ಆದರೆ ಅದನ್ನು ವಿರೋಧಿಸಿದ ನೀವು ಮಾಡುತ್ತಿರುವುದೇನನ್ನು?
೫. ಯಾರು ನಿಮಗೆ ಮಾದರಿ?:ದೇಶದಲ್ಲಿ ಉತ್ತಮ ಪ್ರಗತಿಯನ್ನು ತೋರುತ್ತಿರುವ ರಾಜ್ಯ ಸರಕಾರಗಳಲ್ಲಿ ನಿಮ್ಮ ಪಕ್ಷದಆಡಳಿತರುವ ಸರಕಾರಗಳದ್ದು ಮೇಲುಗೈ ಎಂದರೆ ತಪ್ಪಾಗದು. ನಿಮಗೆ ಗೊತ್ತೇ? ನಿಮ್ಮ ಸರಕಾರ ಪ್ರತಿ ಬಾರಿ ಎಡವಿದಾಗಉತ್ತರ ಪ್ರದೇಶದ ಅಥವಾ ಅಸ್ಸಾಮಿನ ನಿಮ್ಮದೇ ಪಕ್ಷದ ಸರಕಾರದ ಕಾರ್ಯವೈಖರಿಯನ್ನು ತುಲನೆ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟರುಗಳನ್ನು ಹರಿಯಬಿಡಲಾಗುತ್ತದೆ.
ಅವರೇನೂ ಕಾಂಗ್ರೆಸಿಗರಲ್ಲ! ನಿಮ್ಮ ನಿಷ್ಕ್ರಿಯತೆ ಕಂಡು ರೋಸಿ ಹೋಗಿ ನಿಮ್ಮ ಪಕ್ಷದ ಸರಕಾರವಿರುವ ಇತರ ರಾಜ್ಯಗಳನ್ನುಕಂಡು ಅವರು ಕರುಬುತ್ತಿದ್ದಾರೆ. ತಮ್ಮಲ್ಲಿ ಇಂತಹ ನಾಯಕತ್ವವಿಲ್ಲ, ಖಡಕ್‌ತನವಿಲ್ಲ ಎಂಬ ಬೇಸರಿಕೆ ಅವರದ್ದು. ಅಷ್ಟಕ್ಕೂನಿಮಗೆ ಮಾದರಿ ಯಾರು ಎಂದೇ ತಿಳಿಯುವುದಿಲ್ಲ. ಕೇಂದ್ರ ದಲ್ಲಿ ಇಚ್ಛಾಶಕ್ತಿಯಿದೆ, ಉತ್ತರ ಪ್ರದೇಶದಲ್ಲಿ ವಿಕಾಸದೊಂದಿಗೆ ಖಡಕ್‌ತನವಿದೆ, ಅಸ್ಸಾಮ್ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ, ಪುಟ್ಟ ಗೋವಾ ಕೂಡಏಳಿಗೆಗೆ ಪ್ರಾಮುಖ್ಯ ನೀಡುತ್ತಿದೆ. ನಮ್ಮಲ್ಲಿ ಮಾತ್ರ ಬೆಳಗೆದ್ದರೆ ಯಾವ ಮಂತ್ರಿ ಯಾರ ಕಪಾಳಕ್ಕೆ ಬಿಗಿದ, ಯಾವ ಶಾಸಕ ಯಾರಿಗೆ ಧಮ್ಕಿ ಹಾಕಿದ, ಯಾವ ಖಾತೆಯಿಂದ ಅವ್ಯವಹಾರದ ವಾಸನೆ ಬರುತ್ತಿದೆ ಎಂಬುದು ಪ್ರಮುಖ ಸುದ್ದಿಯಲ್ಲಿರುತ್ತವೆ.
ಇದ್ಯಾಕೆ ಹೀಗೆ? ತಪ್ಪು ಯಾರದ್ದು? ನಿಮ್ಮನ್ನು ಆರಿಸಿದ ಮತದಾರನದ್ದೋ, ನಿಮಗಾಗಿ ದುಡಿವ ಕಾರ್ಯಕರ್ತನದ್ದೋ, ಕುರ್ಚಿ ಗೋಸ್ಕರ ತಾತ್ಕಾಲಿಕವಾಗಿ ಕೇಸರಿ ಬಾವುಟ ಹಿಡಿದ ಮಂತ್ರಿಗಳದ್ದೋ, ನೆಲಕಚ್ಚಿರುವ ನಿಮ್ಮ ಸಿದ್ಧಾಂತದ್ದೋ ತಿಳಿಯದು. ಒಂದಂತೂ ಸತ್ಯ. ಪಕ್ಷದೊಳಗಿನ ಹತ್ತಾರು ಸಮಸ್ಯೆಗೆ ಶುದ್ಧೀಕರಣದ ಅತ್ಯಗತ್ಯತೆಯಿದೆ. ರಾಜ್ಯ ಬಿಜೆಪಿಯ ಪುನರುತ್ಥಾನಕ್ಕೆಧ್ಯಾನಸ್ಥರಾಗಬೇಕಿದೆ. ಇಲ್ಲವಾದಲ್ಲಿ ಸರಕಾರವೇನೋ ಅವರಿವರ ಕಾಲಿಡಿದು ಅಸ್ತಿತ್ವಕ್ಕೆ ಬಂದೀತು, ಪಕ್ಷದ ಭಷ್ಯತ್ತಿಗೆ ಕುತ್ತಂತೂ ಕಟ್ಟಿಟ್ಟ ಬುತ್ತಿ.
 - 