ನೈತಿಕತೆ, ಮೌಲ್ಯಗಳು ವಿವೇಕಾನಂದರ ಕನಸಿನ ಶಿಕ್ಷಣ
ಸಂತ ಮಂಥನ
ಬಿ.ಸಿ.ನಾಗೇಶ್
ಮಕ್ಕಳಿಗೆ ೧ನೇ ತರಗತಿಯಿಂದಲೇ ಮೌಲ್ಯ ಶಿಕ್ಷಣವನ್ನು ನೀಡಬೇಕು. ಕಿರಿಯ ವಯಸ್ಸಿನಿಂದಲೇ ಒಳ್ಳೆಯ ಗುಣಗಳನ್ನುಕಲಿಸುವುದರಿಂದ ಅವರು ದೈನಂದಿನ ಜೀವನದಲ್ಲಿ ಪಾಲಿಸುತ್ತಾರೆ. ವಯಸ್ಕ ರಾದ ನಂತರ ಉತ್ತಮ ಗುಣಗಳೊಂದಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿ ಸಲು ಸಾಧ್ಯವಾಗುತ್ತದೆ.
ಉತ್ತಮ ನಡತೆಯನ್ನು ರೂಪಿಸುವ, ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವ, ಚಿಂತನ ಲಹರಿಯನ್ನು ವಿಸ್ತರಿಸುವ ಶಿಕ್ಷಣ ನಮಗೆ ಬೇಕು. ಈ ಮೂಲಕ ಪ್ರತಿ ಯೊಬ್ಬ ವ್ಯಕ್ತಿಯು ಸ್ವಾವಲಂಬಿಯಾಗಿ ತನ್ನ ಕಾಲ ಮೇಲೆ ತಾನು ನಿಲ್ಲು ವಂತಾಗಬೇಕು’ -ಸ್ವಾಮಿ ವಿವೇಕಾನಂದ
ಶತಮಾನದ ಹಿಂದೆಯೇ ‘ಭಾರತಕ್ಕೆ ಅಗತ್ಯ’ವಾದ ಶಿಕ್ಷಣದ ಬಗ್ಗೆ ಸ್ವಾಮಿ ವಿವೇಕಾನಂದರು ತಮ್ಮ ಭಾಷಣಗಳು, ಬರಹಗಳು, ಪ್ರವಚನ, ಬೋಧನೆಗಳ ಮೂಲಕ ಹೇಳಿದ್ದರು. ಇಂದು ಬರೀ ಭಾರತ ಮಾತ್ರವಲ್ಲ. ಇಡೀ ಜಗತ್ತಿಗೆ ಮೌಲ್ಯ/ನೈತಿಕ ಶಿಕ್ಷಣ ಅತ್ಯಂತ ಅಗತ್ಯ ಮತ್ತು ಅನಿವಾರ್ಯವಾಗಿದೆ.
ಸ್ವಾವಲಂಬಿ, ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅತ್ಯಂತ ಅಗತ್ಯ. ಶಿಕ್ಷಣವನ್ನು ನೀಡುವುದು ಸಮಾಜಕ್ಕೆ ಸಲ್ಲಿಸುವ ಅತ್ಯಂತ ದೊಡ್ಡ ಸೇವೆ. ‘ಜನರ ಸೇವೆಯೇ, ದೇವರ ಸೇವೆ’ ಎಂಬ ತತ್ವವನ್ನು ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರು ಪಾಲಿಸುತ್ತಿದ್ದರು. ಶಿಕ್ಷಣವೂ ಮೌಲ್ಯಗಳನ್ನು ಹೊಂದಿರಬೇಕು ಎಂದು ಮಹನೀಯರು ಹೇಳಿದ್ದರು. ವರ್ತಮಾನ ಮತ್ತು ಭವಿಷ್ಯಕ್ಕೆ ಮಹನೀಯರ ಕನಸಿನ ಶಿಕ್ಷಣದ ಅಗತ್ಯತೆಯ ಬಗ್ಗೆ ಇಂದು ಸಮಾಜದಲ್ಲಿ ಪ್ರತಿನಿತ್ಯ ಚರ್ಚೆಯಾಗುತ್ತಿದೆ.
ಭಾರತದಲ್ಲಿ ನೂರು ವರ್ಷಗಳ ಹಿಂದೆ ಪರಿಸ್ಥಿತಿ ಬೇರೆಯೇ ಇತ್ತು. ಬಡತನ, ಕೃಷಿ ಉತ್ಪಾದನೆಯಲ್ಲಿ ಹಿಂದುಳಿದಿರುವಿಕೆ,ಅನಕ್ಷರತೆ, ಅಪೌಷ್ಟಿಕತೆ ಮುಂತಾದ ಕಾರಣಗಳಿಂದ ಭಾರತೀಯರ ಸ್ಥಿತಿ ಶೋಚನೀಯವಾಗಿತ್ತು. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಈ ಸಮಸ್ಯೆ ಅತ್ಯಂತ ಗಂಭೀರವಾಗಿತ್ತು. ಭಾರತೀಯರ ಇಂತಹ ಸ್ಥಿತಿಗೆ ಕಾರಣ ವಾಗಿದ್ದು ಪರಕೀಯರ ಆಕ್ರಮಣ. ಸಾವಿರಾರು ವರ್ಷಗಳಿಂದ ಸ್ವಾವಲಂಬಿ, ಸ್ವಾಭಿಮಾನಿ ಜೀವನ ಸಾಗಿಸುತ್ತಿದ್ದ ಭಾರತದ ಮೇಲೆ ದಂಡೆತ್ತಿ ಬಂದ ಅರಬ್ಬರು, ಬ್ರಿಟಿಷರು ಸೇರಿದಂತೆ ಅನೇಕ ಆಕ್ರಮಣಕಾರರು ಭಾರತದ ವ್ಯವಸ್ಥೆಯನ್ನು ಹಾಳುಗೆಡವಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಜನ್ಮ ತಾಳಿದ ಅನೇಕ ಮಹನೀಯರಲ್ಲಿ ಸ್ವಾಮಿ ವಿವೇಕಾನಂದರೂ ಪ್ರಮುಖರು. ತಮ್ಮ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರಿಂದ ಪ್ರೇರಿತರಾದ ವಿವೇಕಾನಂದರು, ದೇಶಾದ್ಯಂತ ಪ್ರವಾಸ ಕೈಗೊಂಡರು. ಈ ವೇಳೆ ದೇಶದಲ್ಲಿ ಬಡತನ ಸೇರಿದಂತೆ ಇನ್ನಿತರ ಗಂಭೀರ ಸಮಸ್ಯೆಗಳು ಅವರಲ್ಲಿ ಸುಧಾರಣೆ, ಪರಿವರ್ತನೆಯ ಆಲೋಚನೆಗಳನ್ನು ಬಿತ್ತಿದವು. ಈ ದೇಶದ ಜನತೆಯ ಜೀವನ ಮಟ್ಟ ಸುಧಾರಿಸಲು ಅಗತ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಕೃಷಿ ಉತ್ಪಾದನೆಯ ಸುಧಾರಣೆ, ಶಿಕ್ಷಣ, ಉದ್ಯೋಗ, ಸ್ವಾಭಿಮಾನಿ ಜೀವನ ಕಟ್ಟಿಕೊಳ್ಳುವುದರ ಬಗ್ಗೆ ಹೇಳುತ್ತಿದ್ದ ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಸಂದೇಶಗಳನ್ನು ಅನುಷ್ಠಾನಗೊಳಿಸಲು ಪ್ರತಿಜ್ಞೆ ಮಾಡಿದರು. ‘ರಾಮಕೃಷ್ಣಮಿಷನ್’ ಸ್ಥಾಪಿಸಿದರು. ಶಿಕ್ಷಣ, ಮೌಲ್ಯಗಳು, ಸ್ವಾವಲಂಬಿ ಜೀವನದ ಕಡೆ ಭಾರತೀಯರು ಸಾಗಬೇಕು ಎನ್ನುವ ದೂರದೃಷ್ಟಿ ಯೊಂದಿಗೆ ಪ್ರಚಾರ ಆರಂಭಿಸಿದರು.
೧೦೦ ವರ್ಷಗಳ ಹಿಂದಿನ ಪರಿಸ್ಥಿತಿ ಇಂದು ನಮ್ಮ ದೇಶದಲ್ಲಿ ಇಲ್ಲ. ಸಾಕಷ್ಟು ಸುಧಾರಣೆ, ಬದಲಾವಣೆಯಾಗಿದೆ. ಜೀವನ ಮಟ್ಟ ಸುಧಾರಿಸಿದೆ. ಆದರೆ, ನೈತಿಕತೆ, ಮೌಲ್ಯಗಳು ಕುಸಿದಿವೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಹೀಗಾಗಿ, ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದ ಎಲ್ಲ ಭಾಗಗಳಿಂದಲೂ ಶಾಲಾ ಹಂತದಿಂದಲೇ ನೈತಿಕ ಶಿಕ್ಷಣ ಅನುಷ್ಠಾನಕ್ಕೆ ಒತ್ತಾಯ ಕೇಳಿ ಬರುತ್ತಿದೆ. ನಾವು ಶುದ್ಧವಾಗಿರಬೇಕು. ಶುದ್ಧವಾಗಿರುವುದೇ ನಮ್ಮ ನೈಸರ್ಗಿಕವಾದ ಗುಣ. ಸಮಾಜಕ್ಕೆ, ನೆರೆಹೊರೆಯವರಿಗೆ ಒಳ್ಳೆಯವರಾಗಿರಬೇಕು. ಕೆಡುಕು ಮಾಡಬಾರದು’ ಎಂದು ವಿವೇಕಾನಂದರು ಸಂದೇಶ ನೀಡಿದ್ದರು.
ಮೌಲ್ಯ ಶಿಕ್ಷಣದಿಂದ ಪರಿವರ್ತನೆ: ಕಳೆದ ಕೆಲವು ವರ್ಷಗಳಲ್ಲಿ ತರಗತಿಯೊಳಗೆ, ಶಾಲೆಯ ಆವರಣ, ಹೊರಭಾಗದಲ್ಲಿನಡೆದಿರುವ ಘಟನೆಗಳು ಕಳವಳಕಾರಿಯಾಗಿವೆ. ಶಿಕ್ಷಕರಿಗೆ ಶಾಲೆಯ ವಿದ್ಯಾರ್ಥಿಗಳೇ ತರಗತಿಯಲ್ಲಿ ಮುಜುಗರ ಉಂಟು ಮಾಡಿದ್ದಾರೆ. ಹಿರಿಯರು, ಪಾಲಕರಿಗೆ ಮಕ್ಕಳು ಗೌರವ ನೀಡುವುದಿಲ್ಲ. ಮಾತು ಕೇಳುವುದಿಲ್ಲ. ಸುಳ್ಳು ಹೇಳುವುದು, ಅಪ್ರಾಪ್ತ ವಯಸ್ಸಿನ ದುರಾಭ್ಯಾಸಗಳನ್ನು ಕಲಿತಿದ್ದಾರೆ ಎಂಬ ವರದಿಗಳನ್ನು ದಿನನಿತ್ಯ ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡತ್ತಲೇ ಇರುತ್ತೇವೆ.
ಇಂತಹ ಘಟನೆಗಳು ಒಟ್ಟಾರೆ ಸಮಾಜದ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ. ಇದಕ್ಕೆ ಮೌಲ್ಯ ಶಿಕ್ಷಣ ಪರಿಹಾರನೀಡಬಹುದು ಎಂಬುದು ಮಕ್ಕಳ ತಜ್ಞರು, ಶಿಕ್ಷಣ ತಜ್ಞರು, ಧಾರ್ಮಿಕ ಗುರುಗಳ ಬಲವಾದ ನಂಬಿಕೆಯಾಗಿದೆ. ಸಾರ್ವಜನಿಕ ವಲಯದಲ್ಲೂ ಇದೇ ವಿಚಾರ ಚರ್ಚೆಯಾಗುತ್ತಿದೆ. ಮಕ್ಕಳಿಗೆ ೧ನೇ ತರಗತಿಯಿಂದಲೇ ಮೌಲ್ಯ ಶಿಕ್ಷಣವನ್ನು ನೀಡಬೇಕು. ಕಿರಿಯ ವಯಸ್ಸಿನಿಂದಲೇ ಒಳ್ಳೆಯ ಗುಣಗಳನ್ನು ಕಲಿಸುವುದರಿಂದ ಅವರು ದೈನಂದಿನ ಜೀವನದಲ್ಲಿ ಪಾಲಿಸುತ್ತಾರೆ. ವಯಸ್ಕರಾದ ನಂತರ ಉತ್ತಮ ಗುಣಗಳೊಂದಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ.
ಇದಕ್ಕೆ ಉದಾಹರಣೆಯಾಗಿ ನಾಡಿನ ಅನೇಕ ಮಠ- ಮಾನ್ಯಗಳು, ಟ್ರಸ್ಟ್‌ಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡುತ್ತಿವೆ ಎಂಬುದು ನನಗೆ ತಿಳಿದಿದೆ. ಮಕ್ಕಳು ಉತ್ತಮ ಗುಣಗಳನ್ನು ರೂಢಿಸಿಕೊಂಡಿದ್ದಾರೆ. ಶೈಕ್ಷಣಿಕ ವಾಗಿಯು ಉತ್ತಮ ಸಾಧನೆ ಮಾಡಿರುವುದು ಫಲಿತಾಂಶ ಸಹಿತ ಕಣ್ಣ ಮುಂದೆ ಇರುವುದನ್ನು ರಾಜ್ಯದ ಅನೇಕ ಶಿಕ್ಷಣ ಸಂಸ್ಥೆಗಳು ನನ್ನ ಗಮನಕ್ಕೆ ತಂದಿವೆ. ಹೀಗಾಗಿ, ನೈತಿಕ ಶಿಕ್ಷಣವನ್ನು ರಾಜ್ಯದ ಎಲ್ಲ ಶಾಲೆಗಳಲ್ಲಿ ಅನುಷ್ಠಾನಗೊಳಿಸುವುದಕ್ಕೆರಾಜ್ಯ ಸರಕಾರ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಮೂಲಕ ಸ್ವಾಮಿ ವಿವೇಕಾನಂದರು ಶತಮಾನದ ಹಿಂದೆಯೇ ನೀಡಿದ ಸಂದೇಶಗಳನ್ನು ಸಮಾಜದ ಒಳಿತಿಗೆ ರಾಜ್ಯ ಸರಕಾರ ಅನುಷ್ಠಾನಗೊಳಿಸುತ್ತಿದೆ.
ವಿವೇಕಾನಂದರ ಕನಸಿನ ಪರಿಪೂರ್ಣ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ಪ್ರಮುಖರ ಸಲಹೆ ಸೂಚನೆ ಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದೆ. ರಾಜ್ಯಾದ್ಯಂತ ನಡೆಸಿದ ಪ್ರವಾಸದ ವೇಳೆ ಶಾಲೆಗಳ ಶಿಕ್ಷಕರು, ಪಾಲಕರು,ಮುಖ್ಯಸ್ಥರು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ನೀಡುವ ಅಭಿಪ್ರಾಯಗಳನ್ನು ನಾನು ಆಲಿಸಿದ್ದೇನೆ. ಸಮಸ್ಯೆಗಳು ಕೈಮೀರಿ ಹೋಗುವ ಮೊದಲು ಮಕ್ಕಳನ್ನು, ಭಾರತದ ಭವಿಷ್ಯವನ್ನು ಸುರಕ್ಷಿತಗೊಳಿಸಬೇಕಿದೆ.
ಹೊಸತನಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವು, ವಿವೇಕಾನಂದರು ಕಂಡಕನಸಿನ ಮೌಲ್ಯ ಶಿಕ್ಷಣವನ್ನು ಅನುಷ್ಠಾನ ಮಾಡುವಲ್ಲಿ ದಾಪುಗಾಲು ಇಡುತ್ತಿದೆ ಎಂಬುದು ಹೆಮ್ಮೆಯ ಸಂಗತಿ.
(ಲೇಖಕರು ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಮತ್ತುಸಾಕ್ಷರತೆ ಇಲಾಖೆ ಸಚಿವರು)