ನೆತ್ತರ ಹೊದಿಕೆ ಸರಿಸಿದಾಗ ಕಂಡ ನಿಜ ಕನಸುಗಳು
ಅಭಿಪ್ರಾಯ
ವಿಷ್ಣುಕುಮಾರ್‌ ಎ.
ಎಷ್ಟು ಭಯಾನಕ ! ಹೃದಯ ವಿದ್ರಾವಕ ! ಕೇವಲ ತನ್ನ ಹಸಿವು ನಿವಾರಿಸಲು ದಾಳಿ ಮಾಡುವ ಕ್ರೂರ ಮೃಗಗಳಿಗಿಂತ ಕ್ರೂರ ! ಕ್ರೌರ್ಯವು ಒಂದು ಕ್ಷಣ ಬೆದರಿ ಕಂಪಿಸುವಷ್ಟು ಭೀಭತ್ಸ ಮನೋಃಸ್ಥಿತಿ. ನಿಜ, ಸಿಗಲೇ ಬಾರದಂತಹವರಿಗೆ ಅಧಿಕಾರಸಿಕ್ಕಿದರೆ ಮಾಡಲೇ ಬಾರದ್ದನ್ನು ಮಾಡುತ್ತಾರೆ, ಆಗಲೇ ಬಾರದ್ದು ಆಗುತ್ತದೆ.
ಇಷ್ಟೂ ಹೇಳಿದ್ದು ಹಿಂದೆ ನಡೆದ ಸತ್ಯ ಘಟನೆಯೊಂದನ್ನು ನಾಟಕದ ರೂಪದಲ್ಲಿ ಈಗಷ್ಟೇ ನೋಡಿದ್ದರ ಕುರಿತು. ರಂಗಾಯಣದ ಈಗಿನ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರ ರಚನೆ ಹಾಗೂ ನಿರ್ದೇಶನದ ‘ಟಿಪ್ಪು ನಿಜ ಕನಸುಗಳು’ ನಾಟಕ ಟಿಪ್ಪು ಸುಲ್ತಾನನ ನಿಜ ಸ್ವರೂಪವನ್ನು ತೆರೆದಿಟ್ಟಿದೆ. ಈತನ ಧರ್ಮಾಂಧತೆಯ ವ್ಯಕ್ತಿತ್ವದ ಬಗ್ಗೆ ನಾನು ಬೇರೆ ಬೇರೆ ಮೂಲಗಳಿಂದ ಒಂದಿಷ್ಟು ಓದಿಕೊಂಡಿದ್ದೆ.
ಒಂದಷ್ಟು ಲೇಖನಗಳಿಂದ ಹಾಗೂ ಮಾತುಗಳಿಂದ ಟಿಪ್ಪುವಿನ ಕುರಿತು ತಿಳಿದ ನಂತರ ಕೆಲವು ಇತಿಹಾಸಕಾರರ ಹಾಗೂ ಇತಿಹಾಸ ಉಪನ್ಯಾಸಕರ ಜತೆ ಸಂಭಾಷಿಸಿದಾಗ, ಇತಿಹಾಸದಲ್ಲಿ ಟಿಪ್ಪುವನ್ನು ಬಹಳ ಸಂಭಾವಿನಂತೆ ವೈಭವೀಕರಿಸಿ ರುವುದು ಒಂದೆಡೆಯಾದರೆ, ನೈಜತೆಯನ್ನು ಮರೆ ಮಾಚಿ, ವಾಸ್ತವದಲ್ಲಿ ನಡೆದ ಅದೆಷ್ಟೋ ಘಟನೆಗಳನ್ನು ತಿರುಚಿರುವುದು ಇನ್ನಾವುದೋ ಮೂಲಗಳಿಂದ ಬೆಳಕಿಗೆ ಬಂದಿರುವುದು ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಸತ್ಯದ ದಾರಿ ಹಿಡಿದಿರುವುದನ್ನು ಸ್ಪಷ್ಟಪಡಿಸು ತ್ತದೆ.
ಸುಮಾರು ಎರಡು ವರ್ಷಗಳ ಹಿಂದೆ ಖ್ಯಾತ ಲೇಖಕರಾದ ಸುಧಾಕರ ಸುಶೀಲ (ಹೆಸರು ಬದಲಿಸಲಾಗಿದೆ) ಟಿಪ್ಪುವನ್ನುತುಂಬಾ ಸಂಭಾವಿತನೆಂದು ಮಾತನಾಡಿದ ತುಣುಕನ್ನು ಕೇಳಿ ನನಗೂ ಒಂದಷ್ಟು ಗೊಂದಲಗಳಾಗಿ ನೇರವಾಗಿ ಅವರಿಗೆಫೋನಾಯಿಸಿ ಮಾತನಾಡಿ (ಅವರ ಪರಿಚಯ, ನಂಬರು ಎರಡೂ ಮೊದಲೇ ಇತ್ತು). ಅವರ ಪ್ರಕಾರ ಟಿಪ್ಪು ಬಗ್ಗೆ ಅವರುಓದಿದ ಪುಸ್ತಕಗಳಲ್ಲಿ ಅಥವಾ ನೋಡಿದ ದಾಖಲೆಗಳಲ್ಲಿ ಅವನ ಬಗ್ಗೆ ಹಾಗೇ ಇತ್ತು. ಆಗಲೂ ನನಗೆ ಟಿಪ್ಪುವಿನ ಕುರಿತಾಗಿದಾಖಲಿಸುವಾಗ ಇತಿಹಾಸಕಾರರು ನಿಜಾಂಶವನ್ನು ಮರೆ ಮಾಚಿದ್ದಾರೆ ಎಂದನಿಸಿದ್ದು ಸುಳ್ಳಲ್ಲ.
ಲೇಖಕರು ತಮ್ಮ ಹೇಳಿಕೆಯನ್ನು ಸ್ಪಷ್ಟೀಕರಿಸುವಾಗ ಶ್ರೀರಂಗಪಟ್ಟಣ, ಶೃಂಗೇರಿ ಮುಂತಾದ ದೇವಸ್ಥಾನಗಳಿಗೆ ಟಿಪ್ಪು ಮಾಡಿದ ದಾನದ ಉಲ್ಲೇಖವಿದೆ ಎಂದರು (ನನಗದು ಮೊದಲೇ ತಿಳಿದಿದ್ದ ವಿಚಾರ). ಹೌದು ಸ್ವಾಮೀ, ಊರಿಗೆಲ್ಲ ಪೂರ್ತಿ ಉರಿ ಉರಿ ಖಾರ ಹಂಚಿ, ಒಬ್ಬಿಬ್ಬರಿಗೆ ಮಾತ್ರ ನೀವು ಸಿಹಿ ನೀಡಿದರೆ (ಅದೂ ತನ್ನ ಪರಮ ಸ್ವಾರ್ಥಕ್ಕಾಗಿ) ನಿಮ್ಮನ್ನೇನು ’ಮಿಠಾಯಿ ಮಾರುವವ’ ನೆಂದು ಕರೆಯಲಾಗುತ್ತದೆಯೇ? ದೇಶವನ್ನು ಆಳುವವರು ಯಾವುದೇ ಪಕ್ಷ, ಧರ್ಮ ಅಥವಾಮತಕ್ಕೆ ಸೇರಿದವರಾಗಿದ್ದರೂ ಯಾವುದೇ ಚಿಂತೆಯಿಲ್ಲ.
ಆದರೆ ತಾವು ಮೆಟ್ಟುವ ಮಣ್ಣಿನ, (ನೆಲದ) ಉಸಿರಾಡುವ ಗಾಳಿಯ, ಕುಡಿಯುವ ನೀರಿನ ಋಣವನ್ನು ತೀರಿಸುವ ಯೋಚನೆ ಯಿದ್ದು ದೇಶದ ಬಗ್ಗೆ (ಪ್ರಾಮಾಣಿಕ) ಕಾಳಜಿಯಿರುವ ವ್ಯಕ್ತಿ ಅಥವಾ ಪಕ್ಷವಾಗಿರಬೇಕಷ್ಟೇ. ಇಲ್ಲವಾದಲ್ಲಿ ಅದು ಆ ದೇಶದ ಭವಿಷ್ಯಕ್ಕೆ ತೀರಾ ಮಾರಕ. ಇದು ಈಗಾಗಲೇ ಸ್ವಲ್ಪ ತಿಳಿವಳಿಕೆಯಿರುವವರ ಗಮನಕ್ಕೆ ಬಂದಿರುವುದೇ. ಭ್ರಷ್ಟಾಚಾರ ದೊಂದಿಗೆ ಇರುವ ಸತ್ಯವನ್ನು ಮರೆಮಾಚಿ, ಅಽಕಾರಕ್ಕಾಗಿ ಬರೀ ಒಂದು ಗುಂಪನ್ನಷ್ಟೇ ಓಲೈಸಿ, ಅವರಿಗಷ್ಟೇ ದೇಶದ ಖಜಾನೆಯಿಂದ ಬಾಚಿ ಬಾಚಿ ನೆರವು ನೀಡಿ ದೇಶದ ಜನರ ಕೋಮು ಸೌಹಾರ್ದದ ಬದುಕಿಗೆ ಬೆಂಕಿಯಿಟ್ಟು ಈಗ ಅದನ್ನು ನಂದಿಸಲು ಸಾಮರಸ್ಯದ ನೀರನ್ನು ಕೆಲವರು ಮಾತ್ರ ಸುರಿದರೆ ಸಾಕೆ? ಕೆಲವು ರಾಜಕೀಯ ನಾಯಕರು ಈ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದು ಆ ಜ್ವಾಲೆಯಲ್ಲಿ ತಮ್ಮ ಬೀಡಿಯನ್ನು ಹೊತ್ತಿಸಿಕೊಳ್ಳುತ್ತಿದ್ದಾರೆ.
ಒಂದಷ್ಟು ಎಡಪಂಥೀಯರು, ಬುದ್ಧಿ (ಇಲ್ಲದ ) ಜೀವಿಗಳು, ಕುಟುಂಬ ರಾಜಕಾರಣಿಗಳು ಎಲ್ಲ ಈ ಸಾಲ ಬರುತ್ತಾರೆ. ಇವರ ಜತೆ ಭಾರೀ ಕಲಿತ, (ಭ್ರಮೆ) ತಮಗೆ ಗೊತ್ತಿರುವುದೇ ಸರಿಯೆಂದುಕೊಂಡು ವಿಚಾರ ಮಂಡಿಸುವ ದೇಶದ ಘನ ಪರಂಪರೆ ಯನ್ನು ಕೀಳಾಗಿ ಕಾಣುವ ಕೆಲವು ವಿಶ್ವವಿದ್ಯಾಲಯಗಳ ಹಲವು ಪ್ರೊಫೆಸರುಗಳು, ನಡೆದುದನ್ನು ಬಿಟ್ಟು ನಡೆಯದದೆಷ್ಟೋ ಸಂಗತಿಗಳನ್ನು ದಾಖಲಿಸಿದ/ಸುವ ಕೆಲ ಇತಿಹಾಸಕಾರರು, ಮಕ್ಕಳ ಬಾಲ್ಯದಿಂದಲೇ ಮತ್ತೊಬ್ಬರನ್ನು ದ್ವೇಷಿಸುವ, ಹಿಂಸಿಸುವ ಪಾಠ ಹೇಳುವ ಗುರುಗಳು(?), ಧರ್ಮದ ಹೆಸರಿನಲ್ಲಿ ಮನಸ್ಸನ್ನು ಸಂಕುಚಿತಗೊಳಿಸುವ ಪ್ರವಚನಕಾರರು ಎಲ್ಲರೂ ಭಾರತದ ಆರೋಗ್ಯಕರ ಬೆಳವಣಿಗೆಗೆ ಮಾರಕರೇ.
ನನ್ನ ಶೈಕ್ಷಣಿಕ ಜೀವನದಲ್ಲಿ ನಡೆದ ಎರಡು ವಿಚಾರಗಳನ್ನಿಲ್ಲಿ ಹಂಚಿಕೊಳ್ಳುತ್ತೇನೆ (ಈಗ ನಿಜಾಂಶದ ಅರಿವಿದೆ). ಒಂದು, ನನ್ನಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಟಿಪ್ಪು ಎಂದಾಗ ನನ್ನ ಮನಸ್ಸಿಗೆ ತಕ್ಷಣ ಬರುತ್ತಿದ್ದುದು ಒಬ್ಬ ಅಪ್ರತಿಮ ವೀರನ ಪೋಷಾಕಿ ನಲ್ಲಿರುವ ಅದ್ಭುತ ಸಾಹಸಿಯಂತೆ ಕಂಗೊಳಿಸುವ, ಗಾಂಭೀರ್ಯದ ಮುಖ ಹೊತ್ತ ಸಜ್ಜನ ಸುಲ್ತಾನನ ಚಿತ್ರ. ಏಕೆ ಗೊತ್ತೇ? ನನ್ನ ಎರಡನೇ ತರಗತಿಯ ಪಠ್ಯದಲ್ಲಿ ‘ಮೈಸೂರಿನ ಹುಲಿ’ ಎಂಬ ಟಿಪ್ಪುವಿನ ಪಾಠವಿತ್ತು.
ಅದರಲ್ಲಿ ಸುಲ್ತಾನನ ಬಣ್ಣ ಬಣ್ಣದ ದಿರಿಸಿನಲ್ಲಿ, ಟೋಪಿ ಧರಿಸಿದ ಗಾಂಭೀರ್ಯದ ಚಿತ್ರದ ಜತೆ ಅವನನ್ನು ಹುಲಿಯನ್ನು ಕೊಂದ ಪರಮ ಸಾಹಸಿ, ಉತ್ತಮ ಸುಲ್ತಾನನೆಂದು ಬಿಂಬಿಸಲಾಗಿತ್ತು. ಅದನ್ನೇ ಶಾಲೆಯಲ್ಲಿ ಅದ್ಭುತವಾಗಿ ಪಾಠ ಮಾಡಿದ್ದರು. ಎಲ್ಲರಿಗೂ ಟಿಪ್ಪುವೊಬ್ಬ ಶ್ರೇಷ್ಠ, ಉದಾತ್ತ, ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಸಾಹಸಿ ಯೆಂದೇ ಕಲಿಸಲಾಗಿದೆ ಅಥವಾ ನಂಬಿಸಲಾಗಿದೆ. ಇನ್ನೊಂದು, ನನ್ನ ಹೈಸ್ಕೂಲ್ ಶಿಕ್ಷಣದಲ್ಲಿ. ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ‘ಮಹಮ್ಮದ್ ಪೈಗಂಬರ್ ಹಾಗೂ ಇಸ್ಲಾಂ’ ಕುರಿತಾಗಿ ಪಾಠ ಇತ್ತು.
ಅದನ್ನು ಪಠ್ಯದಲ್ಲಿದ್ದಂತೆ ವಿವರಿಸಿದ್ದರು ಕೂಡ. ಅದಕ್ಕೆ ನನ್ನ ವಿರೋಧವಲ್ಲ, ಎಲ್ಲರಿಗೂ ಎಲ್ಲ ಮತ, ಧರ್ಮಗಳ ಸಾರತಿಳಿದಿದ್ದರೆ ಒಳ್ಳೆಯದೇ. ಆದರೆ ನನ್ನ ಒಂದನೇ ತರಗತಿಯಿಂದ ಹಿಡಿದು ಪಿಎಚ್.ಡಿ ಪದವಿವರೆಗೆ ನನಿಗಿದ್ದ ಯಾವುದೇಪಠ್ಯದಲ್ಲಿ ‘ಭಗದ್ಗೀತೆ’ ಇದ್ದ ಅಥವಾ ಓದಿದ ನೆನಪಿಲ್ಲ. ಇದನ್ನೇ ನೋಡಿ ದುರಂತವೆನ್ನುವುದು. ದೇಶದ ಪರಂಪರೆ, ಸಂಪ್ರದಾಯ, ದೇಶೀಯ ಚಿಂತನೆಗಳು ಆ ದೇಶದ ಶೈಕ್ಷಣಿಕ ಪಠ್ಯದಲ್ಲಿರದಿದ್ದರೆ ಆ ಪಠ್ಯ ಅಪೂರ್ಣವೇ. ಇಲ್ಲಿ ರೋಹಿತ್ ಚಕ್ರತೀರ್ಥ ರನ್ನೊಳಗೊಂಡ ಸಮಿತಿ ಅಂಥಾ ಲೋಪವನ್ನು ಸರಿಪಡಿಸಲು ಹೊರಟರೆ… ಬಹುಶಃ ಭಾರತ ಸ್ವತಂತ್ರವಾದ ಕೂಡಲೇ ಆಡಳಿತವನ್ನು ‘ಉಕ್ಕಿನ ಕೈ’ ಹಿಡಿದಿರುತ್ತಿದ್ದರೆ ನಮ್ಮ ದೇಶದ ಚಿತ್ರಣವೇ ಬೇರೆ ಇರುತ್ತಿತ್ತು.
‘ಇವರುಗಳಿಗೆ ಏಕೆ ಅರ್ಥವಾಗುತ್ತಿಲ್ಲ?’ ಎಂಬುದೇ ನಗಿನ್ನೂ ಅರ್ಥವಾಗದಿರುವುದು. ಈಗಲೂ ದೇಶದ ಒಳಗೆ ಮತ್ತು ಹೊರಗೆ ಹಲವಾರು ಟಿಪ್ಪುಗಳು (ಆ ಮನಃಸ್ಥಿತಿಯವರು) ಇದ್ದು ಜಿಹಾದ್ ನ ಹೆಸರಲ್ಲಿ ಭಯೋತ್ಪಾದನೆಯಂತಹ ಕುಕೃತ್ಯದಲ್ಲಿ ತೊಡಗಿ ಕೊಂಡಿರುವುದು ಅತ್ಯಂತ ವಿಷಾದನೀಯ. ಒಬ್ಬ ವ್ಯಕ್ತಿಯ ಸಾವಿನ ನಂತರ ಆತ/ಆಕೆ ಸ್ವರ್ಗಸ್ಥನಾ/ಳಾಗುವುದು ಅಥವಾ ಮೋಕ್ಷ ಪಡೆಯುವುದು ಅಂತಿಮ ಗುರಿಯೆಂದು ಎಲ್ಲ ಜಾತಿ ಧರ್ಮಗಳ ನಂಬಿಕೆ. ಆದರೆ ಜಿಹಾದ್ ನ ಹೆಸರಲ್ಲಿ ಕಾಫೀರರೆಂದು ಇತರರನ್ನು ದ್ವೇಷಿಸಿ, ಹಿಂಸಿಸಿ ನೋಯಿಸಿದರೆ ಯಾವ ದೇವರೂ ಸ್ವರ್ಗ ಕರುಣಿಸಲಾರ ಎಂಬ ಸತ್ಯದ ಜತೆಗೆ, ಸತ್ತ ನಂತರ ಯಾರೂ ನೋಡಿರದ ಸ್ವರ್ಗಕ್ಕಾಗಿ ಕ್ರೌರ್ಯದಲ್ಲಿ ತೊಡಗುವುದರ ಬದಲು, ಇರುವ ಒಂದು ಅಮೂಲ್ಯ ಜೀವನವನ್ನೇ ಸೌಹಾರ್ದದಿಂದ ಬದುಕಿ ತನ್ನ ಸ್ವಂತ ಬದುಕನ್ನು, ಪರಿಸರವನ್ನು ಚೆಂದವಾಗಿಸಿ, ಕುಟುಂಬದೊಂದಿಗೆ ಆನಂದದಿಂದ ಬಾಳುವುದೇ ಸ್ವರ್ಗ ಎಂದು ಇವರಿಗೆ ತಿಳಿ ಹೇಳುವರಾರು? ಖಂಡಿತವಾಗಿಯೂ ನಾನು ಯಾವುದೇ ಜಾತಿ, ಧರ್ಮದ ದ್ವೇಷಿಯಲ್ಲ.
ನೈಜ ಇಸ್ಲಾಮನ್ನೂ ಸೇರಿದಂತೆ ಇತರ ಮತಗಳನ್ನು ಗೌರವಿಸುತ್ತೇನೆ. ಇತರ ಧರ್ಮಗಳಲ್ಲೂ ನನಗೆ ಸ್ನೇಹಿತರಿದ್ದಾರೆ, ಸಹೋದರಿಯರಂತೆ ಇರುವವರಿದ್ದಾರೆ. ಅವರನ್ನೆಲ್ಲ ಅಕ್ಕರೆ ಹಾಗೂ ಅಭಿಮಾನದಿಂದ ಕಾಣುತ್ತೇನೆ. ಜತೆಗೆ ಅವರು ನನ್ನನ್ನು ಹಾಗೆ ಕಾಣುತ್ತಾರೆ. ದೇಶದ ರಾಷ್ಟ್ರಪತಿಯಾಗಿದ್ದ ಮಾನ್ಯ ಅಬ್ದುಲ್ ಕಲಾಂರಿಂದ ಹಿಡಿದು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಾಂಧವರನ್ನು ನೋಡುವಾಗ ಗೌರವದ ಜೊತೆಗೆ ಅಭಿಮಾನವೂ ತುಂಬಿ ಮೂಡುತ್ತದೆ.
ಭಾರತೀಯ ಕ್ರಿಕೆಟ್ ತಂಡ ಕಂಡ ಉತ್ತಮ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಸಿರಾಜ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು, ಕ್ರೀಡಾಂಗಣದಲ್ಲಿ ನಮ್ಮ ರಾಷ್ಟ್ರಗೀತೆಯಾಗುತ್ತಿದ್ದ ಸಂದರ್ಭದಲ್ಲಿ ಭಾವೋದ್ವೇಗಕ್ಕೊಳಗಾಗಿ ಆತನ ಕಣ್ಣುಗಳು ತೇವಗೊಂಡದ್ದನ್ನು ಮಾಧ್ಯಮಗಳ ಮೂಲಕ ತಿಳಿದಾಗ ಸಿರಾಜ್‌ನ ಮೇಲೆ ಗೌರವ, ಹೆಮ್ಮೆ ಎರಡೂ ಉಂಟಾಯಿತು. ಭಾರತದಲ್ಲಿ ಜನಿಸಿದ ಪ್ರತಿಯೊಬ್ಬನಿಗೂ ಇಷ್ಟಾದರೂ ದೇಶ ಭಕ್ತಿಯಿದ್ದರೆ, ಸರಕಾರವು ಭಯೋತ್ಪಾದನೆ ನಿಗ್ರಹದ ಮೇಲೆ, ಪೊಲೀಸ್, ಮಿಲಿಟರಿ, ಕೋರ್ಟ್‌ಗಳ ಮೇಲೆ ಕೋಟಿಗಟ್ಟಲೆ ವ್ಯಯಿಸುವ ಹಣ ಸ್ವಲ್ಪವಾದರೂ ಉಳಿದೀತು.
ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದನೆಗೆ ಸಡ್ಡು ಹೊಡೆದು ತೀರಾ ಅಪಾಯದ ಸ್ಥಿತಿಯಲ್ಲೂ ಎದೆಗುಂದದೇ ಅಫ್ಘಾನ್ ಕ್ರಿಕೆಟ್ ತಂಡವನ್ನು ಕಟ್ಟಿ ಬೆಳೆಸಿದ್ದನ್ನು ವಿಶ್ವೇಶ್ವರ ಭಟ್ಟರ ಲೇಖನವೊಂದರಲ್ಲಿ ಹಲವು ವರ್ಷಗಳ ಹಿಂದೆಯೇ ಓದಿದ್ದನ್ನ ಇಲ್ಲಿ ನೆನಪಿಸಿ ಕೊಳ್ಳುತ್ತೇನೆ. ಬೆರಳೆಣಿಕೆಯ ಜನ ಸೇರಿ ಭಯೋತ್ಪಾದನೆ ವಿರುದ್ಧ ನಿಂತು ಒಂದು ಕ್ರಿಕೆಟ್ ತಂಡವನ್ನು ಕಟ್ಟುವುದು ಸಾಧ್ಯವಾಗುವುದಾದರೆ, ದೇಶದ ಬಹುಪಾಲು ಜನ ಭಯೋತ್ಪಾದನೆ ವಿರುದ್ಧ ನಿಂತರೆ? ಕೆಲವು ಬುದ್ಧಿಗೇಡಿ ಸರಕಾರಗಳು, ಒಂದಷ್ಟು ಸಂಕುಚಿತ ಮನೋಭಾವದವರು, ಭಯಂಕರ ಚಿಂತಕರು (ಕೆಲವರು ಸ್ವಯಂ ಘೋಷಿತ, ಇನ್ನೂ ಕೆಲವರು ಕೃಪಾ ಪೋಷಿತ!) ಇಲ್ಲಿಯವರೆಗೆ ಜಾಣ ಕುರುಡ ಹಾಗೂ ಕಿವುಡರಂತೆ ನಟಿಸಿದ್ದೇ ನಟಿಸಿದ್ದು.
ಜಾರಿ ಬಿದ್ದಾಗ, ಬಿದ್ದದ್ದಾಲ್ಲಿ ಎಂದು ನೋಡುವುದಕ್ಕಿಂತ ಜಾರಿದ್ದಲ್ಲಿ ಎಂದು ನೋಡಬೇಕಲ್ಲವೇ? ಅದನ್ನು ತಿಳಿದರೆ ಮಾತ್ರವೇ ಮುಂದೆ ಜಾರದಂತೆ ಜಾಗ್ರತೆ ವಹಿಸಬಹುದಲ್ಲವೇ? ಪ್ರಮುಖ ಘಟನೆಯೊಂದು ನಡೆದಾಗ ಇತರರಿಗೆ ತಿಳಿಯಬೇಕಾದ್ದು ಅದರ ಮೂಲ ಹಾಗೂ ಸತ್ಯಾಸತ್ಯತೆ. ಹಲವು ಬಾರಿ ಅಧಿಕಾರದಲ್ಲಿರುವವರನ್ನು ಮೆಚ್ಚಿಸಲು, ತನ್ನ ಸ್ವಾರ್ಥ ಸಾಧನೆಗಾಗಿಯೋ, ಅಥವಾ ಅಸಮರ್ಪಕರು ಅಽಕಾರದಲ್ಲಿದ್ದರೆ ಇಲ್ಲವೇ ದೇಶೀಯ ಚಿಂತನೆಗೆ ವಿರುದ್ಧವಾಗಿರುವವರು ಆಡಳಿತದಲ್ಲಿದ್ದರೂ ಅಸಂಭವಗಳು ಘಟಿಸುವ ಸಾಧ್ಯತೆಗಳು ಹೆಚ್ಚು.
ಪ್ರಸ್ತುತ ಇಡೀ ಪ್ರಪಂಚವೇ ಪ್ರಾಮುಖ್ಯ ಕೊಡಬೇಕಾದ ಎರಡು ಪ್ರಮುಖ ವಿಚಾರಗಳೆಂದರೆ, ಅಭಿವೃದ್ಧಿ ಮತ್ತು ಭಯೋತ್ಪಾ ದನಾ ನಿರ್ಮೂಲನೆ. ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕಾದ ಒಂದಷ್ಟು ಯುವಕರು ಹಾಗೂ ಮಧ್ಯ ವಯಸ್ಕರು ಸಮರ್ಪಕ ಅರಿವಿನ ಕೊರತೆಯಿಂದ ಜಿಹಾದಿನ ಹೆಸರಲ್ಲಿ ‘ಟಿಪ್ಪುವಿನ ನಿಜ ಕನಸು’ಗಳನ್ನು ನನಸು ಮಾಡಲು ಶತಾಯ ಗತಾಯ ಪ್ರಯತ್ನಿಸುತ್ತಿರುವುದು ಖೇದಕರ ಮತ್ತು ಒಪ್ಪಿಕೊಳ್ಳಲಾಗದ ಸಂಗತಿ.
ಆಯಾ ಧರ್ಮದವರು ಅವರವರ ಧರ್ಮಗಳ ನೈಜ ಆಚರಣೆಗಳನ್ನು ಅನುಸರಿಸಿಕೊಂಡು ಬಂದರೆ ಅದುವೇ ಆ ಧರ್ಮಗಳಉಳಿವಲ್ಲವೇ? ಅದು ಬಿಟ್ಟು, ಯಾವುದೋ ಮತಾಂತರದ, ಪರ ಧರ್ಮದ ಸೀಯರ, ಪ್ರಾಣಿಗಳ ವಿಚಾರಕ್ಕೆ  ಕೈಹಾಕುವು ದರಿಂದ, ಇತರ ಧರ್ಮದವರಿಗೆ ವಸ್ತುಗಳನ್ನು ತನ್ನ ಎಂಜಲನ್ನು ಲೇಪಿಸಿ ಮಾರುವುದರಿಂದ- ತನ್ನ ಧರ್ಮದಂತೆ ನಡೆದು, ಧರ್ಮದ ಉಳಿವಿಗೆ, ವಿಸ್ತಾರಕ್ಕೆ ಕಾರಣನಾಗುತ್ತೇನೆ ಎನ್ನುವುದು ಭ್ರಮೆಯಷ್ಟೆ.
ಇದುವರೆಗೆ ಟಿಪ್ಪುವಿನ ಖಡ್ಗದಿಂದ ಹರಿದು ಮಡುಗಟ್ಟಿದ ನೆತ್ತರನ್ನೇ ಹೊದಿಕೆಯಾಗಿಸಿ ಅವನೆಲ್ಲ ಕ್ರೌರ್ಯಗಳನ್ನು ಆಹೊದಿಕೆಯ ಮುಚ್ಚಲಾಗಿತ್ತು. ಅಡ್ಡಂಡ ಸಿ.ಕಾರ್ಯಪ್ಪನವರು ತಮ್ಮ ಟಿಪ್ಪು ನಿಜ ಕನಸುಗಳು ಕೃತಿ ಹಾಗೂ ನಾಟಕದ ಮೂಲಕ ಆ ಹೊದಿಕೆಯನ್ನು ಬದಿಗೆ ಸರಿಸಿ ವಾಸ್ತವ ಸಂಗತಿಯನ್ನು ತೋರಿಸಿದ್ದಾರೆ. ಎಲ್ಲ ಧರ್ಮದ ಪ್ರವಚನಕಾರರಲ್ಲಿ ಹಾಗೂ ಧರ್ಮ ಗುರುಗಳಲ್ಲಿ ವಿನಂತಿಸುವುದಿಷ್ಟೇ, ದಯವಿಟ್ಟು ಕಣ್ಣ ನೇರಕ್ಕೆ ಬೋಧಿಸಬೇಡಿ, ಕಣ್ತೆರೆಸುವಂತೆ ಬೋಧಿಸಿ. ಇನ್ನಾದರೂ ರಾಷ್ಟ್ರ ಕವಿ ಕುವೆಂಪುರವರು ಬರೆದ ಸಾಲಿನಂತೆ, ವಿಶ್ವವೇ ‘ಸರ್ವಜನಾಂಗದ ಶಾಂತಿಯ ತೋಟವಾಗಲಿ’.
ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಜಾತಿ, ಧರ್ಮಗಳು ತಾವು ಮೆಟ್ಟಿದ ಮಣ್ಣನ್ನು ಗೌರವಿಸಿ ಪರಸ್ಪರ ಸೌಹಾರ್ದತೆ ಹಾಗೂ ಸಹಕಾರ ದಿಂದ ಬಾಳುವಂತಾಗಲಿ.