ರಷ್ಯಾ ಉಕ್ರೇನ್ ಯುದ್ದ ಹೇಳುತ್ತಿರುವ ಚಾರಿತ್ರಿಕ ಪಾಠಗಳು
ಪ್ರಸ್ತುತ
ಪ್ರೊ.ಆರ್‌.ಜಿ.ಹೆಗಡೆ
ರಷ್ಯಾ-ಉಕ್ರೇನ್ ನಡುವಿನ ಮುಗಿಯದ ಯುದ್ಧ ಚಾರಿತ್ರಿಕ ಪಾಠಗಳನ್ನು ಹೇಳಿದೆ. ಒಂದನೆಯದು, ಈ ಯುದ್ಧ ಸೂಪರ್ ಪವರ್ ದೇಶಗಳಾದ ಅಮೆರಿಕ ಮತ್ತು ರಷ್ಯಾ ತಮ್ಮ ಲಾಭಕ್ಕಾಗಿ ಸೃಷ್ಟಿಸುವ ಜಾಗತಿಕ ದುರಂತ ನಾಟಕಗಳ ಹೊಸ ಆವೃತ್ತಿಅಷ್ಟೇ. ಉಳಿದಂತೆ ಎಲ್ಲವೂ ಹಳೆಯದು.
ಥೀಮ್, ತಂತ್ರಗಳು, ಪಾತ್ರಗಳು, ವೇಷ ಭೂಷಣಗಳು, ರಂಗಸ್ಥಳ ಬೇರೆ ಅಷ್ಟೇ. ೮೦ರ ದಶಕದಲ್ಲಿ ಅದು ನಡೆದಿದ್ದು ಅಫ್ಘಾನಿಸ್ತಾನದಲ್ಲಿ. ಇಂದು ಉಕ್ರೇನ್‌ನಲ್ಲಿ. ಅಫ್ಘಾನಿಸ್ತಾನದ ಕಥೆಯನ್ನು ನೋಡಿ ಬರೋಣ. ಒಂದು ದಿನ ಬೆಳ್ಳಂಬೆಳಿಗ್ಗೆ ರಷ್ಯಾ ಆ ದೇಶವನ್ನು ಆಕ್ರಮಿಸಿ ಬಿಟ್ಟಿತು. ಅದಕ್ಕೆ ಅಲ್ಲಿನ ಖನಿಜ ಸಂಪತ್ತಿನ ಮೇಲೆ ಕಣ್ಣಿತ್ತು. ಈಗ ಅಮೆರಿಕದ ಹೊಟ್ಟೆಯಲ್ಲಿ ಬೆಂಕಿ ಬಿತ್ತು. ರಷ್ಯಾ ತನ್ನ ಪ್ರಭಾವ ವಿಸ್ತರಿಸುವುದು ಅದಕ್ಕೆ ಇಷ್ಟವಿರಲಿಲ್ಲ.
ಮತ್ತೆ ರಷ್ಯಾದ ವಿರುದ್ಧ ನೇರ ಯುದ್ಧ ಮಾಡುವ ಮನಸ್ಸೂ ಅಮೆರಿಕಕ್ಕೆ ಇರಲಿಲ್ಲ. ಅದು ಬಯಸುವುದು ಪರೋಕ್ಷ  ಯುದ್ಧವನ್ನೇ. ಹಾಗಾಗಿ ತನ್ನ ಬೇಳೆ ಬೇಯಿಸಿಕೊಳ್ಳಲು ಅದು ಪಾಕಿಸ್ತಾನವನ್ನು ಮುಂದುಮಾಡಿತು. ಅಮೆರಿಕ ಯುದ್ಧ ಸಾಮಗ್ರಿಗಳ ದೊಡ್ಡ ವ್ಯಾಪಾರಿ. ಸಂದರ್ಭ ತನ್ನಶಸಾಸಗಳ ಮಾರಾಟಕ್ಕೂ ಒಳ್ಳೆಯ ಅವಕಾಶ ಎಂದು ಅದು ಲೆಕ್ಕಹಾಕಿತು. ಪಾಕ್ ಸೇನೆಗೆ, ಗಡಿಭಾಗಗಳ ಜನರಿಗೆ, ಸುತ್ತಮುತ್ತಲ ದೇಶಗಳ ಬಾಡಿಗೆ ಸೈನಿಕರಿಗೆ ಹೇರಳ ಯುದ್ಧ ಸಾಮಗ್ರಿ ಒದಗಿಸಿತು. ರಷ್ಯಾ ವಿರುದ್ಧ ತೊಡಗಿಸಿತು.
ತಾಲಿಬಾನ್‌ಅನ್ನು ಹುಟ್ಟು ಹಾಕಿತು. ಅಲ್ಲಿ ಸುಮಾರು ಎರಡು ದಶಕಗಳ ಕಾಲ ಅನುದಿನ, ನಿರಂತರ, ಭೀಕರ ಯುದ್ಧ ನಡೆ ಯಿತು. ರಷ್ಯಾ ಅಂತಿಂಥ ದೇಶವಲ್ಲ. ಭಾರಿ ಶಕ್ತಿಯದು. ಅದೂ ಬಿಡಲಿಲ್ಲ. ಆದರೂ ಸುದೀರ್ಘ ಯುದ್ಧ ರಷ್ಯಾವನ್ನು ಕ್ರಮೇಣ ಒಳಗಿನಿಂದ ಪೊಳ್ಳು ಮಾಡಿತು. ಆಫ್ಘಾನಿಸ್ತಾನದಲ್ಲಿ ರಷ್ಯಾದ ಕೆಲಸ ಕೂಡ ಮುಗಿದಿತ್ತು. ಹೀಗಾಗಿ ಒಂದು ದಿನ ಅದು ತನ್ನ ಸೇನೆಯನ್ನು ಹಿಂದೆ ತೆಗೆದುಕೊಂಡು ಹೊರಟು ಹೋಯಿತು.
ಆದರೆ ಈ ಯುದ್ಧದ ನಂತರ ಆರ್ಥಿಕವಾಗಿ ಬಳಲಿ ಬೆಂಡಾಗಿ ಹೋಗಿದ್ದ ಸೋವಿಯಟ್ ಯೂನಿಯನ್ ಚೂರು ಚೂರಾಗಿ ಹಲವು ದೇಶಗಳಾಗಿ ಒಡೆದು ಹೋಯಿತು. ಅಮೆರಿಕಕ್ಕೆ ಭಾರಿ ಯಶಸ್ಸು ಸಿಕ್ಕಿಬಿಟ್ಟಿತು. ಸೋವಿಯಟ್ ಯೂನಿಯನ್ ಅನ್ನು ನಾಶ ಮಾಡುವ ಅದರ ಕನಸು ನನಸಾಗಿ ಹೋಯಿತು. ಆದರೆ ಅಫ್ಘಾನಿಸ್ತಾನ ಸ್ಮಶಾನವಾಗಿ ಹೋಯಿತು. ಖಾಲಿಯಾಗಿದ್ದ ಗದ್ದುಗೆಯನ್ನು ತಾಲಿಬಾನ್ ಆಕ್ರಮಿಸಿತು. ತನ್ನ ವಿರುದ್ಧ ಹೋರಾಡಿದ್ದ ರಷ್ಯಾ ಬೆಂಬಲಿತ ಆಫ್ಘನ್ನರ ಮಾರಣ ಹೋಮ ಮಾಡಿತು. ಮಹಿಳೆಯರ ಸ್ವಾತಂತ್ರ್ಯವನ್ನು ಕಸಿದುಕೊಂಡಿತು.
ಭಯೋತ್ಪಾದಕರು ಹುಟ್ಟಿಕೊಂಡರು. ತಾಲಿಬಾನ್ ಮೈಂಡ್‌ಸೆಟ್ ಅನ್ನು ಮತ್ತು ಒಸಾಮಾ ಬಿನ್ ಲಾಡೆನ್‌ನನ್ನು ಹುಟ್ಟಿಹಾಕಿದ್ದು ಅಮೆರಿಕ. ರಷ್ಯಾವನ್ನು ಓಡಿಸಲು ಸುತ್ತ ಮುತ್ತ ದೇಶಗಳ ಸೈನಿಕರು ಮತ್ತು ಜನರನ್ನು ಹುರಿದುಂಬಿಸುವ ಮಾರ್ಗ ಮತಾಂಧತೆ ಯನ್ನು ಬೆಳೆಸುವುದು ಎನ್ನುವುದು ಅದಕ್ಕೆ ಗೊತ್ತಿತ್ತು. ಆದರೆ ವ್ಯಂಗ್ಯವೆಂದರೆ ಕ್ರಮೇಣ ಮತಾಂಧ ತಾಲಿಬಾನ್ ಕ್ರಮೇಣ ಅಮೆರಿಕದ ವಿರುದ್ಧವೇ ತಿರುಗಿ ಬಿತ್ತು. ಅಮೆರಿಕದ ಟ್ವಿನ್ ವರ್‌ಗಳ ಮೇಲೆ ದಾಳಿ ಮಾಡಿತು. ರೋಷಗೊಂಡ ಅಮೆರಿಕ ಅ-ನಿಸ್ತಾನದ ಮೇಲೆ ಇಂಚಿಂಚು ಬಿಡದೆ ಬಾಂಬ್ ಹಾಕಿತು.
ಅಫ್ಘಾನ್ ಅಂತರ್ಯುದ್ಧದ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡಿತು. ಆದರೆ ತಾಲಿಬಾನಿಗಳು ಬಿಡಲಿಲ್ಲ. ರಷ್ಯಾ ವಿರುಧ್ದ ಹೋರಾಡಿದ್ದ ಅವರು ಈಗ ಅಮೆರಿಕದ ವಿರುದ್ಧ ನಿರಂತರ ಹೋರಾಡಿದರು. ತಾನು ಸ್ವತಃ ಭಾಗವಹಿಸಿದ ಯುದ್ಧದಿಂದಾಗಿ ಅಮೆರಿಕಕ್ಕೆ ಹಾನಿಯಾಗತೊಡಗಿತು. ಮುಖಭಂಗ ಉಂಟಾಯಿತು. ಹೀಗಾಗಿ ಒಂದು ದಿನ ಅದು ತನ್ನ ಸೈನ್ಯವನ್ನುಕರೆದುಕೊಂಡು ವಾಪಸ್ ಹೋಗಿಬಿಟ್ಟಿತು. ಮತ್ತೆ ತಾಲಿಬಾನ್ ಬಂದಿದೆ. ಮುಗಿಯದ ದುರಂತ. ಇದೆಲ್ಲದಕ್ಕೆ ಕಾರಣ ಅಮೆರಿಕ ಮತ್ತು ರಷ್ಯಾ.
ಇಂದು ಉಕ್ರೇನ್‌ನಲ್ಲಿ ನಡೆದಿರುವುದು ಅಮೆರಿಕ – ರಷ್ಯಾದ ಒಳ ಹೊಡೆದಾಟ ಸೃಷ್ಟಿಸಿದ ಅಫ್ಘಾನಿಸ್ತಾನದಂತಹ ಮತ್ತೊಂದು ಯುದ್ಧ ಮತ್ತು ದುರಂತ. ಬದಲಾಗಿರುವುದು ಕೇವಲ ಸ್ಥಳ ಮತ್ತು ಹೆಸರು. ಉಳಿದೆಲ್ಲ ಅದೇ ಹಳೆಯ ಕಥೆ. ಈ ಯುದ್ಧಕ್ಕೆ ಮತ್ತು ಅದು ಬೇಗ ಮುಗಿಯದಿರುವುದಕ್ಕೆ ಕಾರಣಗಳನ್ನು ಗಮನಿಸಿ. ಅಮೆರಿಕದ ಬಣ ಸೇರದಂತೆ ರಷ್ಯಾ ಉಕ್ರೇನ್‌ಗೆ ಹೇಳಿತು. ಸೇರಲು ಪ್ರಯತ್ನಿಸಿದರೆ ಅದರ ವಿರುಧ್ದ ಯುದ್ಧಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿತ್ತು. ಗಮನಿಸಬೇಕು.
ಇದಕ್ಕೆ ಮೊದಲು ಉಕ್ರೇನ್‌ನ ಝೆಲೆನ್ಸ್ಕಿಗೆ ನ್ಯಾಟೋ ಸೇರುವಂತೆ ಪುಸಲಾಯಿಸಿದ್ದು, ಸೇರಿದರೆ ರಕ್ಷಣೆ, ಬೆಂಬಲ, ಸಹಾಯ ನೀಡುವುದಾಗಿ ಹೇಳಿದ್ದು ಅಮೆರಿಕ. ಯುರೋಪಿಯನ್ ಯೂನಿಯನ್ ದೇಶಗಳೆಲ್ಲವೂ ಸೇರಿ ಉಕ್ರೇನನ್ನು ರಕ್ಷಿಸುತ್ತೇವೆ ಎಂದುಭರವಸೆ ನೀಡಿತು. ಇದೆಲ್ಲ ಅಮೆರಿಕ ಮಾಡಿದ್ದು ರಷ್ಯಾವನ್ನು ಕೆಣಕಲು ಮತ್ತು ಶಕ್ತಿಹೀನಗೊಳಿಸಲು. ಬಲೆಗೆ ಬಿದ್ದ ಝೆಲೆನ್ಸ್ಕಿ ನ್ಯಾಟೋ ಸೇರಲು ಅರ್ಜಿ ಹಾಕಿದರು.
ರಷ್ಯಾಕ್ಕೆ ಕೆಂಡದಂತಹ ಸಿಟ್ಟು ಬಂತು. ಏಕೆಂದರೆ ಉಕ್ರೇನ್ ಹಿಂದಿನ ಸೋವಿಯಟ್ ಯೂನಿಯನ್‌ನ ಭಾಗ. ಅಲ್ಲದೆ ರಷ್ಯಾಕ್ಕೂ ಉಕ್ರೇನ್ ಮೇಲೆ ಕಣ್ಣಿತ್ತು. ನ್ಯಾಟೋ ಸೇರದಂತೆ, ಇಲ್ಲವಾದರೆ ಯುದ್ಧ ಎದುರಿಸುವಂತೆ ಹೇಳಿತು. ಅಮೆರಿಕದಅಮಲಿನಲ್ಲಿದ್ದ ಝೆಲೆನ್ಸ್ಕಿ ಮಾತು ಕೇಳಲಿಲ್ಲ. ರಷ್ಯಾ ಯುಕ್ರೇನ್ ಮೇಲೆ ಧಾಳಿ ಆರಂಭಿಸಿತು. ಪಾಕಿಸ್ತಾನದ ಹಾಗೆ ಈಗ ಬಕರಾ ಆಗಿದ್ದು ಯುಕ್ರೇನ್. ಬೆಂಕಿ ಹತ್ತಿದ ಉಕ್ರೇನ್‌ನಲ್ಲಿ ಮೀಸೆ ತೂರಿಸಿದರೆ ಸಿಗುವ ಲಾಭವನ್ನು ಅಮೆರಿಕ ಮೊದಲೇ ಗ್ರಹಿಸಿತ್ತು.ಶಸಾಸಗಳಿಗೆ ಮತ್ತೆ ಬ್ರಹತ್ ಮಾರುಕಟ್ಟೆ ಸಿಗುತ್ತದೆ.
ಪಾಕಿಸ್ತಾನವನ್ನು ಮುಂದು ಮಾಡಿ ರಷ್ಯಾ ವಿರುದ್ಧ ಹೋರಾಡಿದ ಮಾದರಿಯ ಈಗ ಉಕ್ರೇನ್ ಮುಂದು ಮಾಡಿದರಾಯಿತು. ದೀರ್ಘ ಯುದ್ಧದ ನಂತರ ಸೋವಿಯಟ್ ಯೂನಿಯನ್ ಕುಸಿದಿದ್ದು ಅಮೆರಿಕಕ್ಕೆ ಗೊತ್ತಿತ್ತು. ಈಗ ಮತ್ತೆ ರಷ್ಯಾ ಕುಸಿದರೆಬಹಳ ಒಳ್ಳೆಯದು. ಇಲ್ಲವಾದರೂ ನಾಶವಾಗುವುದು ಉಕ್ರೇನ್. ತನಗೆ ಲಾಭವೇ. ಯುದ್ಧ ದೀರ್ಘ ಕಾಲ ನಡೆದರೆ ಶಸಾಸಗಳಿಗೆ ಭಾರಿ ಬೇಡಿಕೆ ಮತ್ತು ಬೆಲೆ. ಹೇಗಿದ್ದರೂ ನ್ಯಾಟೋ ಉಕ್ರೇನ್ ಬೆಂಬಲಕ್ಕಿರುವಾಗ ರಷ್ಯಾಕ್ಕೆ ಗೆಲುವು ಬೇಗ ಸಿಗುವುದಿಲ್ಲ ಎನ್ನುವುದು ಅಮೆರಿಕದ ಲೆಕ್ಕಾಚಾರ.
ಇಂತಹ ಕುತಂತ್ರಕ್ಕೆ ಕೈ ಹಾಕಿರುವ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್‌ಗಳೇ ನಿಜವಾಗಿ ಈಗ ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಹೋರಾಡುತ್ತಿರುವುದು, ಯುದ್ಧ ಸಾಮಗ್ರಿ ಪೂರೈಸುತ್ತಿರುವುದು. ಸಾಯುತ್ತಿರುವುದು ಅಲ್ಲಿನ ಸೈನಿಕರು. ರಷ್ಯಾವನ್ನು ಮಣಿಸುವ ಅಮೆರಿಕದ ತಂತ್ರದ ದಾಳ ಉಕ್ರೇನ್. ಪುಟಿನ್‌ಗೆ ಅಮೆರಿಕದ ಮನಸ್ಸು ಗೊತ್ತಿದೆ. ದೀರ್ಘಕಾಲಹೋರಾಡಬೇಕಾಗುತ್ತದೆ ಎನ್ನುವುದು ಅರ್ಥವಾಗಿದೆ.
ಆದರೆ ಆತನಿಗೂ ಅಂತಹ ಬೇಸರವೇನೂ ಇಲ್ಲ. ಹೇಗಿದ್ದರೂ ಫಲವತ್ತಾದ, ಹೇರಳ ಗೋಽ ಬೆಳೆಯುವ, ನ್ಯೂಕ್ಲಿಯರ್ ಪ್ಲಾಂಟ, ತೈಲ ನಿಕ್ಷೇಪ ಇರುವ ಉಕ್ರೇನ್‌ನ ಪ್ರದೇಶಗಳು ಈಗಾಗಲೇ ಕೈಯಲ್ಲಿವೆ. ಆರಾಮಾಗಿ ಯುದ್ಧ ಮಾಡಿದರಾಯಿತು. ಬೆಂಬಲಕ್ಕೆ ಚೀನಾ, ಇರಾನ್, ಇರಾಕ್ ಮತ್ತಿತರ ಹಲವು ಮುಸ್ಲಿಂ ದೇಶಗಳೂ ಇವೆ. ಅದಕ್ಕಾಗಿಯೇ ರಷ್ಯಾ ಒಮ್ಮೆಲೇ ತನ್ನ ಸಂಪೂರ್ಣ ಶಕ್ತಿ ಪ್ರಯೋಗಿಸಿ ಯುದ್ಧ ಮಾಡುತ್ತಿಲ್ಲ. ಎಚ್ಚರದಿಂದ ಯುದ್ಧ ಮಾಡುತ್ತಿದೆ.
ಹೀಗಾಗಿ ಇದು ಮುಗಿಯದ ಯುದ್ಧ. ಮುಂದೆ ಏನಾಗುತ್ತದೆ? ಯುಕ್ರೇನ್ ಪುಡಿ ಪುಡಿ ಆದ ಮೇಲೆ ರಷ್ಯಾ ಅಮೆರಿಕ ಎರಡೂ ಆಸಕ್ತಿ ಕಳೆದುಕೊಳ್ಳುತ್ತವೆ. ಬರಡು ದೇಶ ಯಾರಿಗೆ ಬೇಕು? ಯುಕ್ರೇನ್ ಮತ್ತೊಂದು ಅಫ್ಘಾನಿಸ್ತಾನವಾಗುತ್ತದೆ. ದುಷ್ಟರ, ಉಗ್ರಗಾಮಿಗಳ ಕೈಯಲ್ಲಿ ಬೀಳುತ್ತದೆ. ನಾಶವಾದ ದೇಶದಲ್ಲಿ ಉಳಿಯುವುದು ಅಂತವರು ಮಾತ್ರ. ಬಕರಾ ಮಾಡಲು ಅಮೆರಿಕ ಮತ್ತೊಂದು ದೇಶವನ್ನು ಹುಡುಕುತ್ತದೆ. ಮುಂದಿನ ಪಾಳಿ ಇರಾನ್ ಆಗಬಹುದು. ಇರಾಕ್ ಅನ್ನು ಮುಂದು ಮಾಡಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಬಹುದು. ರಷ್ಯಾ ಇರಾನ್‌ನ ಬೆಂಬಲಕ್ಕೆ ನಿಲ್ಲಬಹುದು. ನಂತರದ ಸರದಿ ತೈವಾನ್.
ಅದರ ಮುಂದಿನದು ದಕ್ಷಿಣ ಕೊರಿಯಾ. ವಿಷಯ ಅದೇ. ಒಂದನೆಯ ಪಾಠ. ಅಮೆರಿಕ ರಷ್ಯಾಗಳ ನಡುವಿನ ರಾಜಕೀಯ ಇಡೀ ಜಗತ್ತನ್ನು ಆಳವಾದ ದುರಂತಕ್ಕೆ ತಳ್ಳುತ್ತಿದೆ ಎನ್ನುವುದು. ಶಬ್ದಗಳಲ್ಲಿ ಹೇಳಲಾಗದ ಮಾನವ ದುರಂತಕ್ಕೆ. ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿ. ಇಂದು ಅದು ಅಕ್ಷರಶಃ ನರಕ. ಅಲ್ಲಿನ ಸಾವು ನೋವುಗಳಿಗೆ ಲೆಕ್ಕವೇ ಇಲ್ಲ. ಮಹಿಳೆಯರ, ಮಕ್ಕಳ ಬದುಕಂತೂ ದಾರುಣವಾದದ್ದು. ಹಾಗೆಯೇ ಉಕ್ರೇನ್‌ನದ್ದು. ಅಲ್ಲಿ ಈಗ ವಿದ್ಯುತ್ತು ಸ್ಥಾವರಗಳು, ಕುಡಿಯುವ ನೀರಿನ ವ್ಯವಸ್ಥೆ, ಸಂಪರ್ಕ ಸಾಧನಗಳು ಎಲ್ಲವೂ ನಾಶವಾಗಿವೆ.
ತಲೆಯ ಮೇಲೆ ಸುರಿಯುವ ಬಾಂಬ್ ಭಯಕ್ಕೆ ಮನೆಗಳಲ್ಲಿ ಉಳಿಯಲಾಗದೆ ಹೆಚ್ಚಾಗಿ ಅಂಡಗ್ರೌಂಡ್ ಟನಲ್‌ಗಳಲ್ಲಿ ಘನಘೋರ ಚಳಿಗಾಲದಲ್ಲಿ ಬದುಕುತ್ತಿರುವ ಜನರ ದುರಂತ ನಮ್ಮ ಊಹೆಗೆ ನಿಲುಕದ್ದು. ಇದೆಲ್ಲದರ ಅಪಕೀರ್ತಿ ಸಲ್ಲುವುದು ಅಮೆರಿಕ ಮತ್ತು ರಷ್ಯಾಕ್ಕೆ. ಇನ್ನೂ ಹೆಚ್ಚಿನ ದುರಂತವೆಂದರೆ ವ್ಯಾಪಾರಕ್ಕೆ ಮತ್ತು ದುಡ್ಡಿನ ಲಾಭ ನಷ್ಟದ ಲೆಕ್ಕಾಚಾರಕ್ಕೆ ಬಿದ್ದಿರುವ ದೇಶಗಳಿಗೆ ಈ ಎರಡು ದೇಶಗಳ ಕುತಂತ್ರಗಳನ್ನು ಎದುರಿಸುವ, ಮೆಟ್ಟಿ ನಿಲ್ಲುವ ಮನಸ್ಸು ಮತ್ತು ಸಾಮರ್ಥ್ಯ ಇದ್ದಂತಿಲ್ಲ.
ಇನ್ನೊಂದು ಮಹತ್ವದ ವಿಷಯ. ಒಂದು ಕಾಲದಲ್ಲಿ ಅಮೆರಿಕ ಮತ್ತು ಯೂರೋಪ್ ಮಾನವ ಪ್ರಗತಿಯ ಗುರಿ ಹೊಂದಿದ ಚಳುವಳಿಗಳ ಕೇಂದ್ರಗಳಾಗಿದ್ದವು. ರಿನೈಸನ್ಸ್, ರೆಫಾರ್ಮೇಶನ್, ಕೈಗಾರಿಕಾ ಕ್ರಾಂತಿ, ಆಧುನಿಕ ಪ್ರಜಾಪ್ರಭುತ್ವಗಳಿಗೆ ದಾರಿ ದೀಪವಾದ ಫ್ರೆಂಚ್ ಕ್ರಾಂತಿ, ಕಮ್ಯೂನಿ ಕ್ರಾಂತಿ ಹುಟ್ಟಿದ್ದು ಅಲ್ಲಿ. ಸವರ್ಣೀಯರ, ಮಹಿಳೆಯರ ಬದುಕಿಗೆ ಘನತೆ ತಂದುಕೊಟ್ಟ ಚಳುವಳಿಗಳು ಜನಿಸಿದ್ದೂ ಅಲ್ಲಿ. ಲಿಬರ್ಟಿ, ಇಕ್ವಾಲಿಟಿ ಘೋಷಣೆಗಳು ಹುಟ್ಟಿಕೊಂಡಿದ್ದು, ಮ್ಯಾನ್ ಈಸ್ ಬಾರ್ನ್ ಫ್ರೀ ಬಟ್ಹೆಲ್ಡ್ ಇನ್ ಚೈ ಎವೆರಿವೇರ್ ಎನ್ನುವ ವಿಚಾರ ಹುಟ್ಟಿದ್ದು ಅಲ್ಲಿ.
ಬರ್ನಾರ್ಡ್ ಶಾ, ಬರ್ಟ್ರಂಡ್ ರಸೆಲ್, ಜಾರ್ಜ್ ಆರ್ವೆಲ್‌ನಂತಹ ಮಹಾನ್ ಚಿಂತಕರು ಬಂದಿದ್ದು ಅಲ್ಲಿಂದ. ಈಗ ಅವು  ತಮ್ಮ ನೈತಿಕ ನಾಯಕತ್ವ ಕಳೆದುಕೊಂಡಿವೆ. ಮಾನವಾಧಿಕಾರಗಳ ಕುರಿತು, ಪರಿಸರ ಸಂರಕ್ಷಣೆ ಕುರಿತು,ಪ್ರಜಾಪ್ರಭುತ್ವದ ಕುರಿತು ಅವು ಆಡುವ ಮಾತುಗಳು ಹಿಪಾಕ್ರಸಿ ಮತ್ತು ಮೋಸಗಾರಿಕೆ. ‘ಪಶ್ಚಿಮ’ ಈಗ ಮೂರನೆಯ ದರ್ಜೆಯ ವ್ಯಾಪಾರಿ ಮಾತ್ರ. ಎಲಿಯಟ್‌ನ ಕವಿತೆಯಲ್ಲಿ ಬರುವ ಕೇವಲ ಪ್ರಾಫಿಟ್ ಮತ್ತು ಲಾಸ್ ಮೇಲೆ ಕಣ್ಣಿಟ್ಟಿರುವ ಒಕ್ಕಣ್ಣ ವ್ಯಾಪಾರಿ ಯುಜಿನೈಡಸ್’ ನಹಾಗೆ. ಅದಕ್ಕೆ ಮಾನವತೆಯ ಕಣ್ಣು ಇಲ್ಲವೇ ಇಲ್ಲ.
ಲಾಭಕ್ಕಾಗಿ ಏನು ಮಾಡಲೂ ಅದು ಹೇಸುವುದಿಲ್ಲ. ಅದನ್ನು ಸೈತಾನನ ಸಂಸ್ಕೃತಿ ಎಂದು ಗಾಂಧಿ ವರ್ಣಿಸಿದ್ದು ಏಕೆ ಎನ್ನುವುದು ಈಗ ಚೆನ್ನಾಗಿ ಅರ್ಥವಾಗುತ್ತಿದೆ. ನೈತಿಕತೆಯನ್ನು ರಾಜಕೀಯದ ಕನಿಷ್ಟ ಅಂಶವಾಗಿಯೂ ಕಾಣದ ಈ ಜಗತ್ತು ನಿಜಕ್ಕೂ ಅಪಾಯದಲ್ಲಿದೆ. ಉಕ್ರೇನ್ ಯುದ್ಧ ನಮಗೆ ಹೇಳಿರುವ ಎರಡನೆಯ ಪಾಠ ಇದು.