ಮಕರ ಸಂಕ್ರಮಣ: ಏನಿದರ ಸೊಬಗು-ಬೆಡಗು ವಿಶೇಷ
ಅಕ್ಷರ ತೋರಣ
ಗವಿಸಿದ್ದೇಶ್ ಕೆ.ಕಲ್ಗುಡಿ
ಜನಪದ ಗೀತೆಗಳಲ್ಲಿ ಸಂಕ್ರಾಂತಿಯ ಬಗ್ಗೆ ಹೇಳಲಾಗಿದೆ. ಶಿವ ಪಾರ್ವತಿಯರು ಲೋಕ ಸಂಚಾರವನ್ನು ಇಂದೇ ಮಾಡುತ್ತಾರೆ. ಇಂದ್ರ ಮತ್ತು ಚಿತ್ರಸೇನ ಆದಿ ದೇವತೆಗಳ ಶಾಪ ವಿಮೋಚನೆಯಾದ ಪುಣ್ಯದಿನವೂ ಸಂಕ್ರಾಂತಿಯಾಗಿದೆ.ಕೃತಯುಗದಲ್ಲಿ ಶಿವ-ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದ ಪುಣ್ಯಕಾಲದಲ್ಲಿಯೇ
ಸೂರ್ಯದೇವ ವಿಶ್ವದ ಆತ್ಮ, ಜಗತ್ತಿನ ಕಣ್ಣು. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳೆಗಲು ಸೂರ್ಯ ದೇವನೇ ಕಾರಣ. ಇಂತಹ ಸೂರ್ಯಾರಾಧನೆಯ ಪುಣ್ಯದಿನವಿಂದು. ಸೂರ್ಯ ಧನಸ್ಸು ರಾಶಿಯಿಂದ ಮಕರರಾಶಿಯೆಡೆಗೆ ಪಯಣಿಸುವ, ಸೇರುವ ಸಂಧಿಕಾಲವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗಿದೆ.
ಸೂರ್ಯನಿಗೆ ಎರಡು ಗತಿಗಳಿವೆ- ಉತ್ತರಾಯಣ ಮತ್ತು ದಕ್ಷಿಣಾಯಣ ಗಳೆಂದು. ಸೂರ್ಯ ವರ್ಷದ ಆರು ತಿಂಗಳು ಕಾಲ ದಕ್ಷಿಣಾಯಣದಲ್ಲಿದ್ದರೆ, ಇನ್ನುಳಿದ ಆರು ತಿಂಗಳು ಉತ್ತರಾಯಣದಲ್ಲಿರುತ್ತಾನೆ. ಇಷ್ಟು ದಿನ ದಕ್ಷಿಣಾಯಣದಲ್ಲಿದ್ದ ಸೂರ್ಯ ಇಂದು ಉತ್ತರಕ್ಕೆ ಪಯಣಿಸುತ್ತಾನೆ. ಹಾಗಾ ಗಿಯೇ ಕೆಲವು ಕಡೆ ಸಂಕ್ರಾಂತಿಯನ್ನು ‘ಉತ್ತರಾಯಣಿ’ ಎಂದೂ ಆಚರಣೆ ಮಾಡಲಾಗುತ್ತದೆ.
ವಿಶೇಷವಾಗಿ ಗುಜರಾತಿನಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣಿ ಎನ್ನುವ ಹೆಸರಿನಿಂದ ಆಚರಣೆ ಮಾಡಲಾಗುತ್ತದೆ. ಇಂದು ಸೂರ್ಯ ಉತ್ತರಾರ್ಧ ಗೋಳದ ಕಡೆ ವಾಲುವುದರಿಂದ ಪ್ರಕೃತಿಯಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಇಂದಿನಿಂದ ಹಗಲು ಹೆಚ್ಚಾಗಿ, ಇರುಳು ಕಡಿಮೆಯಾಗುತ್ತದೆ. ಅಲ್ಲದೆ, ಸೂರ್ಯನ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗಿ, ಕ್ರಮೇಣ ಚಳಿಗಾಲ ಅಂತ್ಯಗೊಂಡು, ಬೇಸಿಗೆ ಆರಂಭವಾಗುತ್ತದೆ.
ಸಾಮಾನ್ಯವಾಗಿ ಪುಷ್ಯಮಾಸದಲ್ಲಿ ಬರುವ ಈ ಮಕರ ಸಂಕ್ರಾಂತಿಯನ್ನು ಉತ್ತರಾಯಣದ ಪುಣ್ಯಕಾಲವೆಂದು ಕರೆಯಲಾಗು ತ್ತದೆ. ಉತ್ತರಾಯಣ ದೇವತೆಗಳ ಕಾಲವಾದರೆ, ದಕ್ಷಿಣಾಯಣ ಪಿತೃಗಳ ಕಾಲ; ಹಾಗಾಗಿ ಇದು ಯಜ್ಞ-ಯಾಗ, ಸಮಸ್ತ  ದೇವತಾ ಶುಭಕಾರ್ಯಗಳಿಗೂ, ಮರಣಗಳಿಗೂ ಪ್ರಶಸ್ತವಾದ ಕಾಲವೆಂದು ಪುರಾಣಗಳಲ್ಲಿ ಹೇಳಲಾಗಿದೆ. ಹಾಗೂ ಗೀತಾ ಚಾರ್ಯ ಕೃಷ್ಣ ಕೂಡ ಗೀತೆಯಲ್ಲಿ ಆಯಣಗಳಲ್ಲಿ ಉತ್ತರಾಯಣ ಶ್ರೇಷ್ಠ ಎಂದು ಹೇಳಿದ್ದಾನೆ. ಹಾಗಾಗಿಯೇ ಇಚ್ಛಾಮರಣಿ ಯಾಗಿದ್ದ ಭೀಷ್ಮಚಾರ್ಯರು ಮೋಕ್ಷ ಪ್ರಾಪ್ತಿಗಾಗಿ, ಉತ್ತರಾಯಣ ಬರುವವರೆಗೆ ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣದಲ್ಲಿ ಜೀವ ಬಿಟ್ಟ ಕಥೆಯನ್ನು ನಾವು ಮಹಾಭಾರತದಲ್ಲಿ ಓದುತ್ತೇವೆ.
ಆದ ಕಾರಣ ಇಂದು ಪುಣ್ಯಕ್ಷೇತ್ರಗಳಿಗ ಭೇಟಿ ನೀಡಿ, ನದಿಸ್ನಾನ ಮಾಡಿ, ಪಿತೃಗಳಿಗೆ ತರ್ಪಣವನ್ನು ನೀಡಿ, ದೇವರ ದರ್ಶನ ಪಡೆಯುತ್ತಾರೆ. ಸಂಕ್ರಾಂತಿಯ ಆಚರಣೆಯಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಇಂದು ರೈತರು ತಾವು ಬೆಳೆದ ಪೈರನ್ನುರಾಶಿರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಹಾಗಾಗಿ ಇದನ್ನು ಸುಗ್ಗಿಯ ಹಬ್ಬವೆಂದು ಕರೆಯಲಾಗಿದೆ. ಹೀಗೆ ಪೈರುತೆಗೆಯುವ ಸಂದರ್ಭದಲ್ಲಿ ಆಚರಿಸಲ್ಪಡುವ ಈ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ಇನ್ನು ತಮಿಳುನಾಡಿನಲ್ಲಿ ಪೊಂಗಲ್, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಲೋಹರಿ, ಅಸ್ಸಾಂನಲ್ಲಿ ಬಿಹು, ಹಿಮಾಚಲ ಪ್ರದೇಶದಲ್ಲಿ ಸಜ್ಜಿ, ಗರ್ವಾಲ್‌ನಲ್ಲಿ ಖಿಚಡಿ ಸಂಕ್ರಾಂತಿ, ಮಹಾರಾಷ್ಟ್ರದಲ್ಲಿ ತಿಲ್ ಗುಲ, ಒರಿಸ್ಸಾದಲ್ಲಿ ಮಕರಚೌಲಾ, ಬಂಗಾಳದಲ್ಲಿ ಪೌಷ್, ಬಿಹಾರ ಮತ್ತು ಮಧ್ಯಪ್ರದೇಶ ದಲ್ಲಿ ಸಕ್ರತ್ ಎಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ವಿಶೇಷವಾಗಿ ಇಂದು ಎಲ್ಲರೂ ಎಳ್ಳು ಬೆಲ್ಲವನ್ನು ಸವಿಯುತ್ತಾರೆ. ಪರಸ್ಪರ ಎಳ್ಳು-ಬೆಲ್ಲವನ್ನು ಬೀರುತ್ತಾ ‘ಎಳ್ಳು-ಬೆಲ್ಲ ತಿಂದು ಒಳ್ಳೆಯದು ಮಾತಾಡೋಣ’ ಎನ್ನುವ ಸಂದೇಶವನ್ನೂ ಸಾರುತ್ತಾರೆ. ವೈಜ್ಞಾನಿಕವಾಗಿ ನೋಡುವುದಾದರೆ ಎಳ್ಳು ಉಷ್ಣಕಾರಕ ಮತ್ತು ತೈಲ ಗುಣವುಳ್ಳದ್ದು. ಚಳಿಯಿಂದ ಚರ್ಮದಲ್ಲಿ ಎಣ್ಣೆಯ ಅಂಶ ಕಡಿಮೆಯಾಗಿರುವುದರಿಂದ, ಎಳ್ಳಿನ ಸೇವನೆಯಿಂದ ಚರ್ಮದಲ್ಲಿ ಎಣ್ಣೆಯ ಅಂಶ ಜಾಸ್ತಿಯಾಗಿ ತ್ವಚೆಯ ಸಂರಕ್ಷಣೆಯಾಗುತ್ತದೆ. ಹಾಗಾಗಿ ಎಳ್ಳು-ಬೆಲ್ಲದ ಸೇವನೆ ಆಚರಣೆಯಲ್ಲಿದೆ. ಇಂದು ಎಳ್ಳಿನ ದಾನ ಮಾಡಬೇಕು ಎನ್ನಲಾಗಿದೆ.
ಕಾರಣ ಎಳ್ಳು ಶನಿಯ ಪ್ರತಿನಿಧಿ ಮತ್ತು ಅವನ ಧಾನ್ಯವಾಗಿದೆ (ಶನಿ ಎಂದರೆ ಎಲ್ಲರಿಗೂ ಭಯ!). ಎಳ್ಳು ದಾನ ಮಾಡಲು ಹೋದಾಗ ಯಾರೂ ತೆಗೆದುಕೊಳ್ಳುವುದಿಲ್ಲ. ಕಾರಣ ಅವರ ಪಾಪ ಎಲ್ಲಿ ನಮಗೆ ಸುತ್ತಿಕೊಳ್ಳವುದೋ ಎನ್ನುವ ಭಯ. ಆದ್ದರಿಂದ ಎಳ್ಳಿನ ಜತೆಯಲ್ಲಿ ಹುರಿಗಡಲೆ, ಕೊಬ್ಬರಿ, ಸಕ್ಕರೆ, ಕಬ್ಬು ಮತ್ತು ಕಡಲೆಕಾಯಿ ಬೀಜವನ್ನು ಮಿಶ್ರಣಮಾಡಿ ದಾನ ಮಾಡುವ ಪದ್ಧತಿ ಜಾರಿಗೆ ಬಂದಿತು. ಹಾಗೂ ಬೆಳೆದ ಬೆಳೆಗಳು ಆಗ ತಾನೆ ಮಾರುಕಟ್ಟೆಗೆ ಬಂದಿರುತ್ತವೆ. ಅವುಗಳನ್ನು ಪೂಜೆಮಾಡಿ ದಾನ ಮಾಡಿದರೆ ಹೆಚ್ಚಿನ ಫಲ ಬರುವುದು ಎನ್ನುವ ನಂಬಿಕೆಯಿದೆ.
ಜನಪದ ಗೀತೆಗಳಲ್ಲಿ ಸಂಕ್ರಾಂತಿಯ ಬಗ್ಗೆ ಹೇಳಲಾಗಿದೆ. ಶಿವ ಪಾರ್ವತಿಯರು ಲೋಕ ಸಂಚಾರವನ್ನು ಇಂದೇ ಮಾಡುತ್ತಾರೆ. ಇಂದ್ರ ಮತ್ತು ಚಿತ್ರಸೇನ ಆದಿ ದೇವತೆಗಳ ಶಾಪ ವಿಮೋಚನೆಯಾದ ಪುಣ್ಯದಿನವೂ ಸಂಕ್ರಾಂತಿಯಾಗಿದೆ. ಕೃತಯುಗದಲ್ಲಿ ಶಿವ-ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದ ಪುಣ್ಯಕಾಲದಲ್ಲಿಯೇ. ಬ್ರಹ್ಮದೇವರು ಸೃಷ್ಟಿಯನ್ನು ಪ್ರಾರಂಭಿಸಿದ್ದು, ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಅವತರಿಸಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಉದಯಿಸಿದ್ದು ಮತ್ತು ಋಷಿ-ಮನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡ ದಿನವು ಈ ಉತ್ತರಾಯಣದ ಪುಣ್ಯಕಾಲವೇ ಆಗಿದೆ.
ಹಾಗೂ ರಾಜಾ ಭಗೀರಥ ತನ್ನ ಪೂರ್ವಜರ ಆತ್ಮಗಳಿಗೆ ಮುಕ್ತಿ ನೀಡಲು ಗಂಗೆಯನ್ನು ಭೂಮಿಗೆ ಕರೆತಂದ ದಿನವೂ ಮಕರಸಂಕ್ರಾಂತಿಯೇ. ಇಂದು ಗಂಗೆ ಕಪಿಲ ಮುನಿಯ ಆಶ್ರಮದ ಮೂಲಕ ಧರೆಗೆ ಇಳಿಯುತ್ತಾಳೆ. ಇದರ ನೆನಪಿಗಾಗಿ ಬಂಗಾಳದ ಗಂಗಾಸಾಗರದ ತೀರ್ಥದಲ್ಲಿರುವ ಕಪಿಲ ಮುನಿಯ ಆಶ್ರಮದಲ್ಲಿ ಮಕರ ಸಂಕ್ರಾಂತಿಯಂದು ಅದ್ದೂರಿ ಜಾತ್ರೆ ಮಾಡಲಾಗುತ್ತದೆ.
ಉತ್ತರ ಕರ್ನಾಟಕದ ಕಡೆ ತೆರಳಿದರೆ ಇಂದು ಮನೆಯ ಎಲ್ಲ ಸದಸ್ಯರು ಸೇರಿ ಗಾಳಿಪಟವನ್ನು ಹಾರಿಸಿ ಮನರಂಜನೆಪಡೆಯುತ್ತಾರೆ. ಶ್ರೀರಾಮನು ಸಂಕ್ರಾಂತಿಯಂದು ಸಹೋದರರೊಂದಿಗೆ ಗಾಳಿಪಟ ಹಾರಿಸಿದಉಲ್ಲೇಖ‘ಶ್ರೀರಾಮಚರಿತ ಮಾನಸ’ದಲ್ಲಿಉಲ್ಲೇಖವಾಗಿದೆ. ಸಂಕ್ರಾಂತಿ ಸುಗ್ಗಿಯ ಹಬ್ಬವಾದ್ದರಿಂದ ಇಂದು ಹಳ್ಳಿಗಳಲ್ಲಿ ದನಕರುಗಳನ್ನು ಸ್ವಚ್ಚಗೊಳಿಸಿ, ಬಣ್ಣದಿಂದ ಸಿಂಗರಿಸಿ ಕಿಚ್ಚು ಹಾಯಿಸುವ ಪದ್ಧತಿಯೂ ಜಾರಿಯಲ್ಲಿದೆ. ಇನ್ನು ತಮಿಳುನಾಡಿನಲ್ಲಿ ‘ಪೊಂಗಲ’ ಎಂದು ಕರೆಯುವ ಈ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ.
ಇಂದು ‘ಭೋಗಿ’ ಅಂದರೆ ಹೊಸ ಬಟ್ಟೆಗಳನ್ನು ಧರಿಸಿ, (ಪೊಂಗಲ) ಸಮೃದ್ಧಿಯ ಸಂಕೇತವಾದ ಹಾಲು ಮತ್ತು ಬೆಲ್ಲವನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ ಹಾಗೂ ಗೋಪೂಜೆಯನ್ನು ಮಾಡಲಾಗುತ್ತದೆ. ಕೆಲವು ಕಡೆ ಗೂಳಿಯನ್ನು ಪಳಗಿಸುವ ‘ಜಲ್ಲಿಕಟ್ಟು’ ಎಂಬ ವಿಶಿಷ್ಟ ಕ್ರೀಡೆಯನ್ನು ಇಂದು ಆಡಲಾಗುತ್ತದೆ. ಇನ್ನು ಕೇರಳದ ಶಬರಿಮಲೆಯಲ್ಲಿ ಸಾಗರೋಪಾದಿಯಲ್ಲಿ ಸೇರುವ ಅಯ್ಯಪ್ಪನ ಭಕ್ತರು ಆಗಸದಲ್ಲಿ ಕಾಣುವ ಮಕರಜ್ಯೋತಿಯನ್ನು ಕಣ್ತುಂಬಿಕೊಂಡು ಕೃತಾರ್ಥರಾಗುತ್ತರೆ. ಹೀಗೆನಾಡಿನಾದ್ಯಂತ ಸಂಕ್ರಾಂತಿ ವಿಭಿನ್ನವಾಗಿ ಆಚರಿಸ್ಪಲ್ಪಟ್ಟು, ಎಲ್ಲರಲ್ಲೂ ಸಾಮರಸ್ಯ, ಧಾರ್ಮಿಕಶ್ರದ್ಧೆ, ಭಾವೈಕ್ಯತೆಮೂಡಿಸಿ, ಸಮೃದ್ಧಿಯನ್ನು ನೀಡಿ, ಜನರ ಜೀವನದಲ್ಲಿ ಸುಹೊಕ್ಕಾಗಿದೆ.