ಹೆಲಿಕಾಪ್ಟರ್‌ ಪೋಷಕತ್ವ ಎಂಬ ಪೆಡಂಬೂತ
ವ್ಯಕ್ತಿತ್ವ ವಿಕಸನ
ಡಾ| ಮುರಲೀ ಮೋಹನ್‌ ಚೂಂತಾರು
ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬ ಹೆತ್ತವರು ತನ್ನ ಮಕ್ಕಳು ಎಲ್ಲರಿಗಿಂತ ಮುಂದೆ ಇರಬೇಕು ಎಂದು ಬಯಸುವುದು ಸಹಜವೇ. ಆದರೆ ಅದಕ್ಕೆ ಬೇಕಾಗಿ ಮುಗ್ಧ ಮಗುವಿನ ಮೇಲೆ ಇನ್ನಿಲ್ಲದ ಒತ್ತಡ ಹಾಕಿದಲ್ಲಿ ಮಗುವಿನ ಮನಸ್ಸಿನ ಮೇಲೆ ಋಣತ್ಮಕಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿದಿದೆ.
ಯುನಿವರ್ಸಿಟಿ ಆಫ್ ಮಿನಸ್ಫೋಟ ಇದರ ಸಂಶೋಧಕರಾದ ಡಾ.ನಿಕೋಲ್ ಪೆರ್ರಿ ಅವರ ಪ್ರಕಾರ ಅತಿಯಾದ ಉಸಿರುಗಟ್ಟುವ ಪೋಷಕತ್ವದಿಂದ ಮಗುವಿನ ಮೇಲೆ ಭಾವನಾತ್ಮಕ ಪರಿಣಾಮ ಬೀರಿ ತನ್ನ ಭಾವನೆಗಳನ್ನು ನಿಯಂತ್ರಿಸುವಲ್ಲಿ ವಿಫಲ ವಾಗುತ್ತದೆ ಎಂದು ತಿಳಿದು ಬಂದಿದೆ.
ಸದಾ ಮಗುವಿನ ಸುತ್ತ ಗಿರಾಕಿ ಹೊಡೆಯುತ್ತ ಪ್ರತಿಯೊದು ಸಣ್ಣ ವಿಚಾರಕ್ಕೂ ಮಗುವಿಗೆ ಸ್ವಾತಂತ್ರ್ಯ ನೀಡದೆ ಸದಾ ಕಾಲ ಮಗುವಿನ ಮೇಲೆ ಗಮನವಿಟ್ಟು ಹೆತ್ತವರೇ ನಿರ್ಧಾರ ತೆಗೆದುಕೊಳ್ಳುವ ನಡವಳಿಕೆಯನ್ನು ಹೆಲಿಕಾಪ್ಟರ್ ಪೋಷಕತ್ವ ಎನ್ನುತ್ತಾರೆ. ಹೇಗೆ ಹೆಲಿಕಾಪ್ಟರ್ ಅಥವಾ ವಿಮಾನ ನಮ್ಮ ತಲೆ ಮೇಲೆ ಸುತ್ತುತ್ತಾ ಹಾರಾಡುತ್ತದೆಯೇ, ಮತ್ತು ನಾವು ಹೋದೆಡೆಯ ನಮ್ಮ ತಲೆ ಮೇಲೆ ಹಾರಾಡಿದಂತೆ ಅನಿಸುತ್ತದೆಯೇ ಮತ್ತು ನಮ್ಮ ಕಣ್ಣಿಗೆ ಕಾಣದಿದ್ದರೂ ಬರಿ ಶಬ್ದದಿಂದಲೂ ನಮ್ಮ ತಲೆಯ ಸುತ್ತ ಹಾರಾ ಡುತ್ತಿರುತ್ತದೆ ಎಂದು ಭಾಸವಾಗುತ್ತದೆಯೇ, ಅದೇ ರೀತಿ ಈ ಹೆಲಿಕಾಪ್ಟರ್ ಪೋಷಕತ್ವವು ಅಷ್ಟೇ.
ಮಗು ಯಾವತ್ತೂ ತನ್ನ ಹೆತ್ತವರ ತನ್ನನ್ನು ಗಮನಿಸುತ್ತಿರುತ್ತಾರೆ ಎಂಬ ಭ್ರಮೆಯಲ್ಲಿಯೇ ಇರುತ್ತದೆ. ಇರಿಂದ ಮಗು ತನ್ನದೇ ಆದ ಸ್ವಂತ ನಿರ್ಧಾರ ತೆಗೆದುಕೊಳ್ಳವ ಅವಕಾಶದಿಂದ ವಂಚಿತವಾಗುತ್ತದೆ.
ಏನು ತೊಂದರೆಗಳು?೧.ಸದಾಕಾಲ ಹೆತ್ತವರೇ ನಿರ್ಧಾರ ತೆಗೆದುಕೊಳ್ಳುವುದರಿಂದ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ವಿಷಮ ಪರಿಸ್ಥಿತಿಗಳಲ್ಲಿ ಮಗು ಭಾವನಾತ್ಮಕವಾಗಿ ಸೋತು ಹೋಗಿ ಬೇಗನೆ ಸೋಲನ್ನು ಸ್ವೀಕರಿಸುತ್ತದೆ. .
೨. ‘ಮಗುವಿನ ಸ್ವಂತಿಕೆ’ ಅಥವಾ ಸ್ವಂತ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವ್ಯಕ್ತ ಭಯ ಮತ್ತು ಸಂಕೋಚ ಉಂಟಾಗುತ್ತದೆ. ಎಲ್ಲಿ ತಾನು ತಪ್ಪು ಮಾಡುತ್ತೇನೆಯೇ ಅಥವಾ ಎಡವಿ ಬೀಳುತ್ತೇವೆ ಎಂಬ ಭಯದಲ್ಲಿಯೇ ಬದುಕು ಕಳೆದು ಹೋಗುತ್ತದೆ.
೩. ಮಗು ಸೋಲನ್ನು ನೈಜ ಸೂರ್ತಿಯಲ್ಲಿ ತೆಗೆದುಕೊಳ್ಳುವಲ್ಲಿ ವಿಫಲವಾಗುತ್ತದೆ. ಸೋಲನ್ನೇ ಸರ್ವಸ್ವ ಎಂದು ತಿಳಿದು ಮಾನಸಿಕವಾಗಿ ದೈಹಿಕವಾಗಿ ಮತ್ತಷ್ಟು ಕುಗ್ಗಿ ಹೋಗುತ್ತದೆ.
೪. ಸದಾಕಾಲ ಒತ್ತಡದಲ್ಲಿಯೇ ಮಗು ಬದುಕುತ್ತದೆ. ಶಾಲೆಯ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ, ಸೋತಾಗ, ಬದುಕಿನ ಪರೀಕ್ಷೆಯನ್ನು ಗೆಲ್ಲಲು ವಿಫಲವಾಗುತ್ತದೆ.
೫. ಧೈರ್ಯದಿಂದ ಏಕಾಂಗಿಯಾಗಿ ಒಬ್ಬಂಟಿಯಾಗಿ ಎದುರಿಸುವ ಗೋಜಿಗೆ ಹೋಗದೆ, ಜೀವನದ ಸವಾಲುಗಳಿಗೆ ಬಹಳ ಬೇಗ ಸೋತು ಹೋಗಿ ಅವಕಾಶಗಳನ್ನು ಕೈ ಚೆಲ್ಲುತ್ತಾರೆ.
೬. ಈ ರೀತಿ ಬೆಳೆದ ಮಕ್ಕಳು ಜೀವನದಲ್ಲಿ ಯಾವತ್ತೂ ರಿಸ್ಕ್ ತೆಗೆದುಕೊಳ್ಳಲು ಬಯಸುವುದೇ ಇಲ್ಲ. ಸ್ವಂತ ನಿರ್ಣಯ ತೆಗೆದುಕೊಳ್ಳಲು ಮೊದಲೇ ಧೈರ್ಯವಿಲ್ಲ, ಅದರ ಜತೆಗೆ ಹಿಂಜರಿಕೆಯಲ್ಲಿಯೇ ಜೀವನದ ಪಯಣದಲ್ಲಿ ಬೇಗ ಸೋತು ಬಿಡುತ್ತಾರೆ.
೭. ಕಷ್ಟದ ಪರಿಸ್ಥಿತಿಗೆ ಹೊಂದಿಕೊಳ್ಳುವ ಮನಃಸ್ಥಿತಿ ಇಂತಹಾ ಮಕ್ಕಳಿಗೆ ಬರುವುದೇ ಇಲ್ಲ. ಸೋತ ಕೂಡಲೇ ಹತಾಶರಾಗಿ ಕೈ ಚೆಲ್ಲಿ ಶಸ್ತ್ರ ತ್ಯಾಗ ಮಾಡುತ್ತಾರೆ. ಎಲ್ಲಿಯಾದರೂ ಸೋತರೆ ಎಂಬ ಭಯದಿಂದಾಗಿ ಇಂತಹ ಮಕ್ಕಳು ಸಮಾಜಕ್ಕೆ ಆಸ್ತಿಯಾಗದೆ ಹೊರೆಯಾಗುತ್ತಾರೆ.
ಪೋಷಕರು ಏನು ಮಾಡಬೇಕು?ನಿಮ್ಮ ಮಕ್ಕಳಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿ. ಅವರಿಗೆ ಅವರದ್ದೇ ಆದ ಆಯ್ಕೆ ಮತ್ತು ನಿರ್ಧಾರ ತೆಗೆದು ಕೊಳ್ಳುವ ಸ್ವತಂತ್ರ ನೀಡಬೇಕು. ಮಕ್ಕಳಿಗೆ ಸರಿ ತಪ್ಪುಗಳ ನಿರ್ಧಾರ ಮಾಡಲು ಹೆತ್ತವರು ಸಹಾಯ ಮಾಡಬೇಕು. ಹೊರತು ಹೆತ್ತವರೇ ನಿರ್ಧಾರ ತೆಗೆದುಕೊಳ್ಳಬಾರದು. ಮಕ್ಕಳನ್ನು ದೊಡ್ಡವರ ರೀತಿಯಲ್ಲಿಯೇ ಕೆಲವೊಮ್ಮೆ ಕಾಣಬೇಕು. ಇದರರ್ಥ ಅವರನ್ನು ಅವರ ಪಾಡಿಗೆ ಸಂಪೂರ್ಣವಾಗಿ ಬಿಟ್ಟು ಬಿಡುವುದೆಂದಲ್ಲ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಅವರೇ ಜವಾ ಬ್ದಾರರು ಮತ್ತು ಅವರೇ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಎಂಬ ಭಾವನೆಯನ್ನು ಮಕ್ಕಳಲ್ಲಿ ಬರುವಂತೆ ಹೆತ್ತವರು ಮಾಡಬೇಕು.
ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ನಿರ್ದೇಶನ ಅಥವಾ ಮಾರ್ಗದರ್ಶನ ನೀಡಬೇಕು. ಆದರೆ ಯಾವತ್ತೂ ಅವರ ದಾರಿಯನ್ನು ಹೆತ್ತವರು ನಡೆಯಬಾರದು. ನಿರಂತರವಾಗಿ ಮಕ್ಕಳನ್ನು ಅತಿಯಾಗಿ ಗಮನಿಸುವುದು ಮತ್ತು ನಿರಂತರವಾಗಿ ನಿರ್ದೇಶನ ನೀಡುವುದು ಖಂಡಿತವಾಗಿಯೂ ಅಪಾಯಕಾರಿ. ಇದರಿಂದ ಸಹಾಯಕ್ಕಿಂತ ತೊಂದರೆಗಳೇ ಜಾಸ್ತಿ.