ಅರಿವೆಂಬ ಗುರುವಿನ ಗರಡಿಯಲ್ಲಿ ಅನುದಿನವೂ ಬೆಳೆಯಲಿ ಅಂತರಂಗ…
ಯಶೋ ಬೆಳಗು
@.
ಮನೆಯೆ ಮೊದಲ ಪಾಠಶಾಲೆ; ತಾಯಿಯೆ ಮೊದಲ ಗುರು! ಅನ್ನೋದನ್ನ ನಾವೆಲ್ಲರೂ ಸಣ್ಣ ವಯಸ್ಸಿನಿಂದಲೇ ಕೇಳುತ್ತಾ ಬೆಳೆದಿರ್ತೀವಿ. ವಿದ್ಯೆ-ಬುದ್ಧಿಗೆನಮಿಸುವ ನಮ್ಮ ಗೌರೀ ಪುತ್ರ ಗಣಪ ತನ್ನ ಅಪ್ಪ-ಅಮ್ಮನಿಗೇ ಮೂರು ಪ್ರದಕ್ಷಿಣೆ ಹಾಕಿ ‘ನೀವೇ ನನ್ನ ಮೂರೂ ಲೋಕ’ ಅಂದು ಶಿವಪ್ಪನ ಮನಸನ್ನು ಗೆದ್ದ ಪೋರನ ಕಥೆ ಕೂಡ ಕೇಳಿಯೇ ಇರ್ತೀವಿ. ಅದರಲ್ಲಿ ಅದೆಷ್ಟೊಂದು ಸತ್ಯ ಅಡಗಿದೆ ಅನ್ನುವುದನ್ನು ಮಾತ್ರ ಅರಿಯದೇ ಕಥೆ ಕೇಳಿ ಸುಮ್ಮನಾಗಿರ್ತೀವಿ.
ಆಗತಾನೆ ಹುಟ್ಟಿದ ಮಗುವಿನ ಜಗತ್ತೆಂದರೆ ಕೇವಲ ಅಮ್ಮ. ಮೊಲೆಹಾಲ ನೀಡುತ್ತಾ, ತುತ್ತುಣಿಸುತ್ತ ಜೀವ ಬೆಳೆಸುವ ಮಹಾನ್ ಮಾತೆಯ ಸ್ಪರ್ಶ, ನಗು, ಅಳು, ದುಃಖ, ನೋವು, ಆತಂಕ, ಅಸಮಧಾನ, ನೆಮ್ಮದಿ ಎಲ್ಲ ವನ್ನೂ ಪ್ರತೀಕ್ಷಣವೂ ತಣ್ಣಗೆ ತಾಯ ಗರ್ಭದಲ್ಲಿರುವಾಗಲಿಂದಲೇ ಅರಿಯುತ್ತಾ ಬರುವ ಮಗುವಿಗೆ, ಹೊರ ಬಂದ ನಂತರವೂ ಉಳಿದೆಲ್ಲರ ನಡುವೆ ಬೆಚ್ಚಗಿನ ಮಮತೆಯ ಅರಿವಾಗುವುದು ತಾಯಿಯ ಸ್ಪರ್ಶದ ಅನುಭವದ. ಹೀಗಾಗಿ ಅದು ಅಮ್ಮನನ್ನು ಕಚ್ಚಿಕೊಂಡೇ ಬೆಳೆಯುತ್ತದೆ. ಅಮ್ಮ ಹೇಳಿದ್ದೆಲ್ಲ ಕೇಳುತ್ತಾ, ಕಲಿಯುತ್ತಾ,ತಿಳಿಯುತ್ತಾ ಬೆಳೆಯುತ್ತದೆ. ಹೀಗಾಗಿ ನಿಸ್ಸಂಶಯವಾಗಿ ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುವ ಅಮ್ಮನೇ ಮಗುವಿನ ಮೊದಲ ಗುರು.
ಆದರೆ ಕಲಿಕೆ ಅನ್ನುವುದು ನಿರಂತರ ನದಿಯಂತೆ. ಅದು ಬೃಹತ್ ಸಾಗರವಾಗುವವರೆಗೂ, ನಂತರವೂ ಹರಿಯುತ್ತಲೇ ಇರುತ್ತದೆ… ಅದಕ್ಕೆ ಕೊನೆಯೇ ಇಲ್ಲ. ಆದರೆ ಅರಿಯುವ ತಾಕತ್ತು ನಮಗೆಷ್ಟಿದೆ ಅನ್ನುವುದರ ಮೇಲೆ ನಮ್ಮ ಕಲಿಕೆ ಸದಾ ಅವಲಂಬಿತವಾಗಿರುತ್ತದೆ. ಕುತೂಹಲದ ನೆರಳಾಗಿ ಕಲಿಕೆ ನಿರಂತರವಾಗಿ ಹಿಂಬಾ ಲಿಸುತ್ತಲೇ ಇರುತ್ತದೆ. ‘ಯಾಕೆ?’ ಮತ್ತು ‘ಹೇಗೆ?’ ಅನ್ನುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಪರಿಹಾರ ವನ್ನು ಕಂಡು ಕೊಳ್ಳುವ ವಿಶೇಷವಾದ ಜ್ಞಾನವೇ ವಿಜ್ಞಾನ. ಕಲಿಕೆಗೆ ಒಳ್ಳೆಯದ್ದು-ಕೆಟ್ಟದ್ದು ಅನ್ನುವ ಬೇಧಭಾವವಿಲ್ಲ.
ಹೀಗಾಗಿ ಆರಿಸಿಕೊಳ್ಳುವ ವಿಷಯ ಮಾತ್ರ ನಮ್ಮ ಮೇಲೆಯೇ ಅವಲಂಬಿತವಾಗಿರುತ್ತದೆ. ಬಗೆದಷ್ಟೂ ತೆರೆದುಕೊಳ್ಳುವ ಈ ವಿಸ್ಮಯ ಜಗತ್ತಿನಲ್ಲಿ ನಮ್ಮ ಗ್ರಹಿಕೆಗೆ ನಿಲುಕುವುದು ಕೇವಲ ಹಿಡಿಯಷ್ಟು ಮಾತ್ರ. ಅದನ್ನ ತುಂಬಿಸಿಕೊಳ್ಳುವ ಪ್ರಯತ್ನದ ಈ ಬದುಕು ಮುಗಿದು ಹೋಗಿರುತ್ತದೆ. ಜೀವನ ನಿರ್ವಹಣೆ ಗಾಗಿ ಹಣ ಅತಿ ಅವಶ್ಯಕ. ಹೀಗಾಗಿ ಅದನ್ನು ಹೆಚ್ಚೆಚ್ಚು ಗಳಿಸಲು ಬೇಕಾದ ವಿದ್ಯೆಗಳನ್ನು ಕಲಿಸಲು ದೇಶ-ವಿದೇಶಗಳಲ್ಲಿ ಸಾಕಷ್ಟು ಶಾಲಾ ಕಾಲೇಜುಗಳಿವೆ ಇಂದು.
ಕೊಡುವ ಸರ್ಟಿಫಿಕೇಟು ಉತ್ತಮ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬೇಕಾದ ಅರ್ಹತಾ ಪತ್ರ. ಹೀಗಾಗಿ ಅದರೆಡೆಗೆ ನಿರ್ಲಕ್ಷ್ಯ ಮಾಡದೆ ಕಲಿಯುವಕಾಲದಲ್ಲಿ, ಕಲಿಕೆಯಿಂದ ವಿಮುಖರಾಗದೆ ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ಕಲಿತರೆ, ತಮ್ಮ ಮುಂದಿನ ಜೀವನದಲ್ಲಿ ಉತ್ತಮ ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಗುತ್ತದೆ. ಇಡೀ ಜಿವನದಲ್ಲಿ ‘ವಿದ್ಯಾರ್ಥಿ ದೆಸೆ’ ಅನ್ನುವುದು ಬಹಳ ಅಮೂಲ್ಯವಾದದ್ದು.
ಅದನ್ನು ಉಡಾಫೆಯಿಂದ ನಿರ್ಲಕ್ಷ್ಯ ಮಾಡಿದರೆ ಮುಂದೆ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ಹಣ, ಆಸ್ತಿ ಎಂಬುದನ್ನು ಬೇರೆ ಯಾರು ಬೇಕಾದರೂ ಕದ್ದು ಒಯ್ಯಬಹುದು. ಆದರೆ ವಿದ್ಯೆಯಿಂದ ಸಿಗುವ ಜ್ಞಾನವನ್ನು ಮಾತ್ರ ಯಾರಿಂದಲೂ ಕದಿಯಲಾಗದು. ಅದು ನಮ್ಮೊಡನೆ ಶಾಶ್ವತವಾಗಿರುತ್ತದೆ. ವಿದ್ಯೆ ಅನ್ನುವುದು ಹುಟ್ಟಿದ ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಪ್ರತಿಯೊಂದು ಮಗುವಿಗೆ ತಲುಪಿಸಲು ಸರಕಾರದ ಜೊತೆ ಜೊತೆಗೆ ಸಾಕಷ್ಟು ಘೆಎu ಸಂಸ್ಥೆಗಳೂ ಸಹ ಕಾರ್ಯನಿರತವಾಗಿದೆ.
ನಾವು ಮಾತ್ರ ಕಲಿತರೆ ಸಾಲದು, ನಮ್ಮ ಸುತ್ತಮುತ್ತಲಲ್ಲಿ ಕಾಣುವ ಅನಕ್ಷರಸ್ಥ ಮಕ್ಕಳನ್ನು ಅಕ್ಷರಸ್ಥರನ್ನಾಗಿ ಮಾಡುವ ಹೊಣೆ ನಮ್ಮೆಲ್ಲರದ್ದೂ ಆಗಿರುವಂತಾಗಲಿ. ನಮ್ಮ ಪಕ್ಕದ ನಾಡಾದ ಕೇರಳದಂತೆ ಮುಂದೆ ನಮ್ಮ ಭಾರತ ದೇಶವೂ ಕೂಡ ಸಂಪೂರ್ಣ ಅಕ್ಷರಸ್ಥ ದೇಶವಾಗಿ ಹೊರದೇಶ ಗಳೆದುರು ಹೆಮ್ಮೆಯಿಂದ ಬೀಗುವಂತಾಗಲಿ. ಇದೆಲ್ಲವೂ ವ್ಯಾವಹಾರಿಕ ಪ್ರಪಂಚದ ವಿದ್ಯೆಯ ಮೂಲಕ ಅರಿಯುವ ಜ್ಞಾನಕ್ಕೆ ಸಂಬಂಧಿಸಿದ ವಿಷಯ ಗಳಾದರೆ, ಇರುವ ಕೋಟ್ಯಂತರ ಜನರ ನಡುವೆ ಕೇವಲ ಕೆಲವರಿಗೆ ಮಾತ್ರ ದಕ್ಕುವಂಥ ಆಧ್ಯಾತ್ಮದ ಅರಿವು.
ಹಾಗಾದರೆ ಏನು ಈ ಆಧ್ಯಾತ್ಮ ಎಂದರೆ? ಧಾರ್ಮಿಕ ಸ್ಥಳಗಳಲ್ಲಿ ಮಾಡುವ ಪೂಜೆಯಾ? ದಿನಾ ಬೆಳಗೆದ್ದು ಗುಡಿಗುಂಡಾರ ಸುತ್ತುವುದಾ? ಸಂಪ್ರದಾಯ,ಆಚಾರ-ವಿಚಾರಗಳನ್ನೆಲ್ಲ ಮಡಿವಂತಿಕೆಯಿಂದ ಚಾಚೂ ತಪ್ಪದೆ ಪಾಲಿಸಿಕೊಂಡು ಬರುವುದಾ? ಭಕ್ತಿಯ ಉನ್ಮಾದವಾ? ನೀರಿನ ಮೇಲೆ ಪಾದ ಒದ್ದೆ ಯಾಗದಂತೆ ನಡೆಯುವುದಾ? ಪರಕಾಯ ಪ್ರವೇಶ ಮಾಡುವುದಾ? ಕೂಡಿ ಕಳೆದು ಲೆಕ್ಕಾಚಾರ ಹಾಕಿ ಭವಿಷ್ಯದ ದಿನಗಳನ್ನು ಊಹಿಸುವ ಜ್ಯೋತಿಷ್ಯವಾ? ದೂರದ ಇರುವ ನಮ್ಮಂಥ ಮನುಷ್ಯರ ನಡುವೆ ಒಂದೇ ಸಮಯದಲ್ಲಿ ಮೂಡಿ ನಿಲ್ಲುವ ಆಲೋಚನೆಯನ್ನು ಗ್ರಹಿಸುವ ಟೆಲಿಪತಿಯಾ? ಅಥವಾ ಅತೀಂದ್ರಿಯ ಶಕ್ತಿಗಳಾ? ಅನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಆಧ್ಯಾತ್ಮ ಎಂದರೆ ಇದ್ಯಾವುದೂ ಅಲ್ಲ.
ಸರಳವಾಗಿ ಹೇಳಬೇಕೆಂದರೆ ಅದು ‘ತನ್ನನ್ನು ತಾನು ಅರಿಯುವ ಕ್ರಿಯೆ’. ಅದು ನಮ್ಮ ಅಂತರಂಗದಲ್ಲಿ ನಡೆಯುವ ಬದಲಾವಣೆ. ನಮ್ಮ ಅಂತರಂಗ ದಲ್ಲಿಯ ನಮ್ಮ ಅನುಭವ, ಅಂತರ್ಮುಖಿ ಅನ್ವೇಷಣೆ ಹಾಗೂ ಪರಿಶೋಧನೆಗಳು. ಉಸಿರಾಡುವ ತನಕ ನಾನು ನನದೆಂಬ ಮಮಕಾರ ನಿಂತ ಮರುಗಳಿಗೆ ಮಸಣದೆ ಸಂಸ್ಕಾರ ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು ಮುಗಿಯುವ ದೇಹಕೆ ವ್ಯಾಮೋಹವೇಕೆ? ಮಾನವ ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ… ಎಂದು ವಿಠ್ಠಲನ ಧ್ಯಾನ ಮಾಡುತ್ತ ತನ್ಮಯನಾಗಿ ಹಾಡುವ ಕಾಯಕ ಯೋಗಿ ಕುಂಬಾರನ ಭಕ್ತಿಯಲ್ಲಿ ಕಾಣಬಹುದು ಆಧ್ಯಾತ್ಮದ ಹೊಳಪು.
ಹಾಗೆಯೇ ನಮ್ಮ ತೀರ್ಥಹಳ್ಳಿಯ ‘ಆರಗ’ದಲ್ಲಿ ಜನಿಸಿದ ಶ್ರೀನಿವಾಸ ನಾಯಕನೆಂಬ ಅತ್ಯಂತ ಜಿಪುಣಾಗ್ರೇಸರನು ತನ್ನ ಹೆಂಡತಿಯ ಮೂಗುತಿಯ ಕಥೆಯಿಂದಾಗಿ ತನ್ನಲ್ಲಿ ಉಂಟಾದ ಮನಃಪರಿವರ್ತನೆಯಿಂದಾಗಿ ಇದ್ದ ಶ್ರೀಮಂತಿಕೆಯನ್ನೆಲ್ಲ ತೊರೆದು ಹರಿಯ ಧ್ಯಾನದಲ್ಲಿ ಪುರಂದರ ದಾಸರಾಗಿ,ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಮಾಚಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು…ಎಂದು ಹಾಡುತ್ತ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿ ‘ಕರ್ನಾಟಕ ಸಂಗೀತ’ದ ಪಿತಾಮಹನೆನೆಸಿಕೊಂಡು ಇಂದು ಎಲ್ಲರ ಮನದಲ್ಲಿ ನಲಿದಾಡುತ್ತಿದ್ದಾರೆ.
ಅಷ್ಟೇ ಅಲ್ಲ, ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೊ, ನೀ ದೇಹದೊಳಗೊ, ನಿನ್ನೊಳು ದೇಹವೋ’ ಎಂದು ಹಾಡಿದ ಕನಕದಾಸರು, ‘ಎಲ್ಲಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ’ ಎಂದು ನಂಬಿದ್ದ ಕಾಳಿಯ ಆರಾಧಕರಾಗಿದ್ದ ನಮ್ಮ ರಾಮಕೃಷ್ಣ ಪರಮ ಹಂಸರು, ‘ನಾನು ಯಾರು?’ ಎಂಬ ಆತ್ಮಾನ್ವೇಷಣಾ ವಿಧಾನ ಆತ್ಮಜ್ಞಾನಪ್ರಾಪ್ತಿಗೆ ಮುಖ್ಯ ಸಾಧನವೆಂದು ಬೋಽಸಿದ ರಮಣ ಮಹರ್ಷಿಗಳು, ‘ಸಬ್ ಕಾ ಮಾಲಿಕ್ ಏಕ್’ ಎನ್ನುತ್ತಾ ಜಾತಿ, ಧರ್ಮಗಳನ್ನು ಮೀರಿ ಸಮರ್ಪಣಾ ಮನೋಭಾವ, ಸೇವಾ ಮನೋಭಾವ, ಪರೋಪಕಾರ, ದಯಾಪರತೆ, ಕರ್ತವ್ಯ ನಿಷ್ಠೆಯಂಥ ಮಾನವೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸಿದ ಶ್ರೇಷ್ಠ ಗುರುವಾದ ಶಿರಡಿಯ ಸಾಯಿನಾಥರು, ವಿಜಯನಗರದ ಅರಸನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿಕೊಟ್ಟ ಮಾಧ್ವ ಸಂಪ್ರದಾಯದ ಪಂಡಿತ ಕೃಷ್ಣಭಟ್ಟರ ಮರಿಮೊಮ್ಮಗನಾದ ವೆಂಕಟನಾಥನು ಸನ್ಯಾಸವನ್ನು ಸ್ವೀಕರಿಸಿ ಶ್ರೀಪೂಜ್ಯ ಗುರು ರಾಘವೇಂದ್ರ ರಾಯರಾಗಿ ಬದಲಾಗಿದ್ದು, ನಗರ ಸಂಚಾರಕ್ಕೆ ಹೊರಟಿದ್ದ ಸಿದ್ಧಾರ್ಥನು ಹಾದಿಯಲ್ಲಿ ಕಂಡ ರೋಗ ಹಾಗೂ ಸಾವನ್ನು ಕಂಡು ಮನಕಲುಕಿ, ದುಃಖದ ಮೂಲವನ್ನು ಅರಿತು ಅದನ್ನು ಮೀರುವ ಪ್ರಯತ್ನದಲ್ಲಿ ಗೌತಮ ಬುದ್ಧನಾಗಿ ಪರಿವರ್ತಿತನಾದದ್ದು…. ಎಲ್ಲರೂ ಈ ಜಗತ್ತಿಗೆಅಗಾಧವಾದ eನದ ಸಂಪತ್ತನ್ನು ಬಳುವಳಿಯಾಗಿ ಕೊಟ್ಟು ಹೋದವರೇ.
ಹಾಗೆಯೇ ಆಧ್ಯಾತ್ಮ ಅಂದರೆ ಎಲ್ಲವನ್ನೂ ಸಂಪೂರ್ಣವಾಗಿ ತೊರೆದು ಹೋಗುವುದೂ ಅಲ್ಲ. ಮೀರಾಳಿಗೆ ಕೃಷ್ಣನೆಡೆಗಿದ್ದ ನಿರಂತರ ಭಕ್ತಿ ತುಂಬಿದ ಪ್ರೀತಿ, ರಾಧೆಗೆ ಕೃಷ್ಣನೆಡೆಗಿದ್ದ ಉತ್ಕಟವಾದ ಪ್ರೇಮ, ಅಕ್ಕಮಹಾದೇವಿಗೆ ಚೆನ್ನ ಮಲ್ಲಿಕಾರ್ಜುನನೆಡೆಗಿದ್ದ ಪ್ರಶ್ನಾತೀತ ಒಲವು ಎಲ್ಲವೂ ಸಹಆಧ್ಯಾತ್ಮದ ಪ್ರಕಾರವೇ. ನಿಸ್ವಾರ್ಥದಿಂದ ಮಗುವನ್ನು ಕಾಣುವ ತಾಯಿಯ ಮಮತೆಯಲ್ಲೂ ಸಹ ನಾವು ಆಧ್ಯಾತ್ಮವನ್ನು ಕಾಣಬಹುದು.
ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಆಧ್ಯಾತ್ಮ ಚಿಂತಕರು ಭವಬಂಧನದ ಮೋಹ ತೊರೆದು, ನಿಷ್ಠೆಯ ಕಾಯಕದಲ್ಲಿ, ಪರಧ್ಯಾನದಲ್ಲಿ, ನಿಷ್ಕಲ್ಮಶ ಪ್ರೀತಿಯಲ್ಲಿ, ನಿಸ್ವಾರ್ಥದ ಮಮತೆಯಲ್ಲಿ ತಮ್ಮನ್ನು ತಾವು ಹುಡುಕಿಕೊಂಡಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಹೇಗೆ ಒಬ್ಬ ಶಿಷ್ಯನಿಗೆ ಉತ್ತಮ ಗುರುವಿನ ಹುಡುಕಾಟವಿರುತ್ತದೋ ಹಾಗೆಯೇ ಒಬ್ಬ ಗುರುವಿಗೂ ಸಹ ಉತ್ತಮ ಶಿಷ್ಯನ ಹುಡುಕಾಟವಿರುತ್ತದಂತೆ. ಹಾವೇರಿಜಿಲ್ಲೆಯಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಮುಸಲ್ಮಾನ ಕುಟುಂಬದಲ್ಲಿ ಜನಿಸಿದ ಶರೀ-ರನ್ನು ‘ಕಳಸ’ದಿಂದ ಹುಡುಕಿ ಕೊಂಡು ಬಂದ ಗೋವಿಂದ ಭಟ್ಟರು ಒಮ್ಮೆ ಎಲ್ಲರೆದುರು ನಿಲ್ಲಿಸಿ ‘ನಿಮ್ಮ ಅಪ್ಪ ಯಾರೋ?’ ಅಂತ ಕೇಳಿದಾಗ, ಅವರು ತಡವರಿಸದೇ, ಗಾಬರಿಗೊಳ್ಳದೆ ದೇವಾ, ನೀವು ಯಾವ ಅಪ್ಪನನ್ನುಕೇಳುತ್ತಿರುವಿರಿ? ಒಂದು ಜೀವ ೮೪ ಲಕ್ಷ ಯೋನಿಗಳಲ್ಲಿ ಹುಟ್ಟಿ ಹುಟ್ಟಿ ಬರುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ.
ನಾನೂ ಈ ಹಿಂದೆ ನೂರಾರು ಸಲ ಹುಟ್ಟಿದ್ದೇನೆ, ಸತ್ತಿದ್ದೇನೆ. ಹುಟ್ಟಿದಾಗೊಮ್ಮೆ ನನ್ನ ಅಪ್ಪ ಇದ್ದೇ ಇದ್ದ. ಇಂಥ ಹಲವಾರು ಅಪ್ಪಂದಿರಲ್ಲಿ ನೀವುಯಾವ ಅಪ್ಪನನ್ನು ಕೇಳುತ್ತಿದ್ದೀರಿ ಅನ್ನುವುದು ಸ್ಪಷ್ಟವಾದರೆ ನಾನು ಇಂಥ ಜನ್ಮದಲ್ಲಿ ಇಂಥವನೇ ನನ್ನ ಅಪ್ಪ ಆಗಿದ್ದನು ಎಂದು ಹೇಳುತ್ತೇನೆ. ಎಂದಾಗ ಗುರುಗಳು ಹಸನ್ಮುಖರಾಗಿ, ‘ಶರೀಫ್ ಒಂದು ಜೀವಕ್ಕೆ ಎಷ್ಟು ಮಂದಿ ಅಪ್ಪಂದಿರೋ?’ ಎಂದು ಪ್ರಶ್ನಿಸಿದಾಗ, ಗುರುವೇ ಒಂದು ಜೀವಕ್ಕೆ ಇಬ್ಬರು ಅಪ್ಪಂದಿರು.
ಒಬ್ಬ ಹಡೆದಪ್ಪ, ಇನ್ನೊಬ್ಬ ಪಡೆದಪ್ಪ… ಈ ಜನ್ಮದಲ್ಲಿ ಈ ದೇಹ ಕೊಟ್ಟವನು ಹಡೆದಪ್ಪ ಇಮಾಮ ಸಾಹೇಬರಾದರೆ, ಗುರುವಾಗಿ ಮೋಕ್ಷದ ಹಾದಿ ಯನ್ನು ತೋರಿಸಿ ಕೊಡುವವನೇ ಪಡೆದಪ್ಪ. ಅದು ನೀವೇ ಗುರುದೇವಾ! ಅಂದಾಗ ಅವರ ಅಭಿಮಾನದ ಮಾತುಗಳಿಗೆ ಮನತುಂಬಿ ಬಂದು, ‘ಭೂಮಿ ಹದವಾಗಿದೆ ನಾನುಬೀಜ ಬಿತ್ತಿದರೆ ತಕ್ಕ -ಲ ಸಿಗುತ್ತದೆ. ನನ್ನ ವಸ್ತು ನಾನು ಒಯ್ಯುತ್ತೇನೆ’ ಎಂದು ಇಮಾಮ ಸಾಹೇಬರಿಗೆ ಹೇಳಿ, ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ತಮ್ಮ ಮನದಲ್ಲಿ, ಮನೆಯಲ್ಲಿ ಸ್ಥಳ ನೀಡಿದರು. ತಮ್ಮ ಅನ್ನದಲ್ಲಿ ಅವರಿಗೆ ಅನ್ನ ನೀಡಿದರು. ಅವರ ಪಾರಮಾರ್ಥಿಕ ತಂದೆಯಾದರು. ತಮ್ಮ ಇಡೀ ಆಧ್ಯಾತ್ಮ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಯಾಗಿಸಲು ಬೇಕಾದ ಸಂಸ್ಕಾರ ನೀಡಿ ದೀಕ್ಷೆ ಕೊಟ್ಟು ಬ್ರಹ್ಮಜ್ಞಾನದ ಸಲುವಾಗಿ ಜನಿವಾರ ಹಾಕಿದರು.
ಮುಸಲ್ಮಾನರ ಹುಡುಗನಿಗೆ ಬ್ರಾಹ್ಮಣ ಸಂಸ್ಕಾರ ನೀಡುತ್ತಿರುವುದನ್ನು ಕಂಡು ಮಡಿವಂತ ಸಮಾಜ ಸಹಿಸದಾದಾಗ ಅವರ ವರ್ತನೆಯನ್ನು ಕಂಡುಮುರುಕು ತೊಲೆಯು ಹುಳುಕು ಜಂತಿ ಕೊರೆದು ಸರಿದು ಕೀಲ ಸಡಲಿ ಹರುಕು ಚಪ್ಪರ ಜೇರುಗಿಂಡಿ ಮೇಲಕೇರಿ ಹೋಗಲಾರೆ ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ…. ಎಂದು ಹಾಡುತ್ತಾ ತಮ್ಮ ಅರಿವನ್ನು ಗೀತೆಗಳ ಮೂಲಕ ಹಂಚಿಕೊಳ್ಳುತ್ತಾ ಇಂದು ಮನೆಮಾತಾಗಿದ್ದಾರೆ.
ಇದೆಲ್ಲ ಒಂದು ಕಾಲವಾದರೆ ಈಗಿನ ಕಾಲದ ಮಕ್ಕಳಿಗೆ ಬೇಕೆನಿಸಿದ್ದೆಲ್ಲ ಬೆರಳಂಚಿನ ಸಿಗುತ್ತದೆ. ಎಲ್ಲದಕ್ಕೂ  ಅನ್ನುವ ಮಹಾಗುರುವಿದ್ದೇ ಇದೆ. ಆದರೂ ಗುರುವಿನ ಅಗತ್ಯವಿದೆಯಾ? ಖಂಡಿತಾ ಇದೆ. ಯಾಕೆಂದರೆ ನಾವು ನೋಡಿದ್ದು, ಕಲಿತದ್ದು ನಮ್ಮ ಪಾಲಿಗೆ ಎಲ್ಲವೂ ಯಾವಾಗಲೂ ಸರಿಯೆ ನಿಸುತ್ತಲೇ ಇರುತ್ತದೆ. ಆದರೆ ಕೇವಲ ಗುರು ಮಾತ್ರ ನಾವು ಎಲ್ಲಿ ತಪ್ಪುತ್ತಿದ್ದೇವೆ ಅನ್ನುವ ಅರಿವು ಮೂಡಿಸಿ ನಮ್ಮನ್ನು ತಿದ್ದುತ್ತಾ ಸರಿಯಾದಮಾರ್ಗದಲ್ಲಿ ನಡೆಸಲು ಸಾಧ್ಯ. ಹೀಗಾಗಿ ಎಲ್ಲ ಕಾಲಕ್ಕೂ ಗುರುವಿನ ಅಗತ್ಯವಿದ್ದೇ ಇದೆ. ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ.
 - 