ಬಣ್ಣದ ಕಪ್ಪು ಚುಕ್ಕೆ ಮೀರಿ, ಬಡವರ ಆಹಾರದ ಶ್ರೀಮಂತ ಗುಣ
ಆಲೂರು ಸಿರಿ
ಡಾ.ಅಶೋಕ್‌ ಆಲೂರು
@.
‘ರಾಗಿ ತಂದೀರಾ, ಬಿತ್ತಕೆ ರಾಜಿ ತಂದೀರಾ…’ ಎಂದಿರುವ ದಾಸರು, ಯೋಗ್ಯ, ಭೋಗ್ಯ ಮಾತ್ರವಲ್ಲ, ನಿರೋಗಿಯಾಗಳು ರಾಗಿಯೇ ಅತ್ಯುತ್ತಮ ಆಹಾರವೆಂದು ಬಹು ಹಿಂದೆಯೇ ಬಣ್ಣಿಸಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರೂ ಶ್ಲಾಘಿಸಿ ರಾಗಿಗೆ ರುಚಿ, ಸತ್ವ, ಗುಣಮಟ್ಟದ ಮುದ್ರೆ ಒತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಮೂಲಕ ದಿಲ್ಲಿಯವರೆಗೂ ತಲುಪಿ, ದೇಶಾದ್ಯಂತ ಪರಿಚಯಸಲ್ಪಟ್ಟ ರಾಗಿ ಕರ್ನಾಟಕದ ಅತ್ಯಂತಪ್ರಚಲಿತ ಪ್ರಮುಖ ಸಿರಿಧಾನ್ಯ. ಇಂದು ಅಂತಾರಾಷ್ಟ್ರೀಯ ಖ್ಯಾತಿ ಹಾಗೂ ಬಳಕೆಗೆ ಪ್ರವೇಶ ಪಡೆದಿದೆ.
ಕರ್ನಾಟಕದ ರಾಗಿಯು ವಿಶೇಷ ಗಮನ ಸೆಳೆದಿದ್ದು, ‘ಜೀವನ ಶೈಲಿಗೆ ಹೊಂದಿದಂತೆ’ ಎಲ್ಲ ವಯಸ್ಸಿನವರ ಹಾಗೂ ಎಲ್ಲ ಸಾಮಾಜಿಕ ಹಿನ್ನೆಲೆಗೂ ಹೊಂದುವ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೂ ಒಗ್ಗುವಂತಹ ಸಂಸ್ಕರಣೆ ಔಲ್ಯವರ್ಧನೆಯೊಂದಿಗೆ ಇನ್ನಷ್ಟು ಪ್ರಚುರಪಡಿಸಬೇಕಿದೆ. ಕೋವಿಡ್ ಮಹಾಮಾರಿಯ ಆರೋಗ್ಯದ ಕಾಳಜಿ ಹೆಚ್ಚುತ್ತಿದ್ದಂತೆಯೇ, ಕನ್ನಡೇತರ ಭಾರತೀಯರಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಣ್ಣವನ್ನು ಲೆಕ್ಕಿಸದೇ ಕರುನಾಡಿನ ಕಪ್ಪು ರಾಗಿಯನ್ನು ಬಳಸಲು ಮುಂದಾಗಿದ್ದಾರೆ. ಅಲ್ಲಿಯವರೆಗೂ ರಾಗಿಯೆಂದರೆ ಕರ್ನಾಟಕ ಅದರಲ್ಲೂ ಮೈಸೂರು ಕರ್ನಾಟಕಕ್ಕೆ ಸೀಮಿತವಾಗಿತ್ತು.
ಹಾಗೆ ನೋಡಿದರೆ, ರಾಗಿಯ ಈ ಕಪ್ಪು ಬಣ್ಣವೇ ಈ ಧಾನ್ಯದ ಪ್ರಮುಖ ವಿಶೇಷ ಗುಣ. ರೋಗ ತಡೆಯುವ, ರೋಗ ನಿಯಂತ್ರಿಸುವ ಹಾಗೂ ರೋಗ ನಿರ್ವಹಿಸುವ ಮೂರು ಶಕ್ತಿಗಳನ್ನು ಒದಗಿಸುವುದು ರಾಗಿಯಲ್ಲಿನ ಈ ಕಪ್ಪುಬಣ್ಣ ಎಂದರೆ ಅಚ್ಚರಿಯಾದೀತು. ಆದರೆ ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ನಂತಹ ರೋಗಗಳನ್ನು ತಡೆಯುವಲ್ಲಿ ಸಹಕಾರಿಯಾಗಿರುವುದೂ ರಾಗಿಯಲ್ಲಿನ ಕಪ್ಪು ಅಂಶವೇ. ಸುಮಾರು ಶೇಕಡವಾರು ೫-೮ರಷ್ಟು ಪ್ರೋಟಿನ್, ೧-೨ ಕೊಬ್ಬಿನಂಶ, ೬೫-೭೫ಬಹುಶರ್ಕರಗಳು, ೧೫-೨೦ ಉಪಯುಕ್ತ ನಾರಿನಂಶ ಹಾಗೂ ೨.೫ ರಿಂದ ೩.೫ರಷ್ಟು ಅವಶ್ಯಕ ಖನಿಜಾಂಶಗಳನ್ನು ರಾಗಿ ಹೊಂದಿದೆ.
ವಿಶೇಷವೆಂದರೆ ರಾಗಿ ಅತ್ಯಂತ ಗರಿಷ್ಠ ಮಟ್ಟದಲ್ಲಿ ಅಂದರೆ, ಪ್ರತೀ ೧೦೦ ಗ್ರಾಂನಲ್ಲಿ ೩೪೪ ಮಿಲಿ.ಗ್ರಾಂ. ಸುಣ್ಣದಂಶವನ್ನೂ ಒದಗಿಸುತ್ತದೆ. ರಾಗಿಯನ್ನು ಪ್ರಮುಖವಾಗಿ ಆರೋಗ್ಯಕರ ಅವಶ್ಯಕ ಅಮಿನೋ ಆಮ್ಲಗಳಾದ ವೇಲಿನ್, ಮಿಥಿಯೋನಿನ್, ಐಸೋಲ್ಯೂಸಿನ್, ಪ್ರಯೋನಿನ್ಮತ್ತು ಟ್ರಿಪ್ರೋ-ನ್ಒದಗಿಸುತ್ತದೆ. ವೇಲಿನ್ ಅಮಿನೋ ಆಮ್ಲವು ಕೋಶಗಳ ಪುನಾರಚನೆಗೆ ನೆರವು ನೀಡುತ್ತದೆ. ಜತೆಗೆ ಚಯಾಪಚಯ ಕ್ರಿಯೆ ಮತ್ತು ಸ್ನಾಯುಗಳ ಕ್ರಿಯಾಶೀಲತೆಗೆ ನೆರವಾಗುತ್ತದೆ. ಐಸೋಲ್ಯೂಸಿನ್ ರಕ್ತರಚನೆ ಹಾಗೂ ರಕ್ತದ ಸಕ್ಕರೆ ಅಂಶ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳು ತ್ತದೆ.
ತ್ರಿಯೋನಿನ್ ಒಟ್ಟಾರೆ ಶರೀರದಲ್ಲಿ ಪ್ರೋಟೀನ್ ಪೂರೈಕೆಗೆ ಸಹಕರಿಸುತ್ತದೆ. ಟ್ರಿಪ್ರೋ-ನ್ನೈಸರ್ಗಿಕವಾಗಿ ಒತ್ತಡ ನಿವಾರಣೆ, ಮನೋಶಕ್ತಿಹೆಚ್ಚಿಸುವುದು, ದೌರ್ಬಲ್ಯ ನಿರ್ವಹಣೆ, ಮರೆವು ನಿಯಂತ್ರಣಕ್ಕೆ ನೆರವಾಗುತ್ತದೆ. ಮಿಥಿಯೊನೀನ್ ಪ್ರಮುಖವಾಗಿ ಆರೋಗ್ಯಕರ ಚರ್ಮ ಹಾಗೂ ಕೂದಲಿನ ರಕ್ಷಣೆ ಮಾಡುತ್ತದೆ. ಪೌಷ್ಟಿಕತೆಯ ವಿಷಯದಲ್ಲಿ ರಾಗಿ ವಿಶೇಷ ಗುಣ ಹೊಂದಿದ ಹೆಮ್ಮೆಯ ಬೆಳೆ. ಈಗಾಗಲೇ ಹೇಳಿದಂತೆ ರಾಗಿಯಲ್ಲಿರುವಸುಣ್ಣದಂಶ (೦.೩೮% ಅಥವ ಪ್ರತೀ ೧೦೦ ಗ್ರಾಂ ರಾಗಿಯಲ್ಲಿ ೩೪೪ ಮಿ. ಗ್ರಾಂ), ಆರೋಗ್ಯದಾಯಕ ನಾರಿನಾಂಶ (೧೦.೦%) ಮತ್ತು ಫಿನೋಲಿಕ್ ಅಂಶ (೦.೩-೩%) ಗಳು ರಾಗಿಯನ್ನು ಈ ಸ್ಥಾನಕ್ಕೇರಿಸಿವೆ.
ಅನೇಕ ಅಧ್ಯಯನಗಳ ಪ್ರಕಾರ ರಾಗಿಯಲ್ಲಿರುವ ಮೇಲಿನ ಅಂಶಗಳೆಲ್ಲವೂ ಪೂರ್ಣ ಆರೋಗ್ಯ ರಕ್ಷಕಗಳಾಗಿದ್ದು ಮಧುಮೇಹ ವಿರೋಧಿ, ಗಡ್ಡೆ ಮತ್ತು ಕ್ಯಾನ್ಸರ್ ವಿರೋಧಿ, ಹೃದ್ರೋಗ ವಿರೋಧಿ, ಸೂಕ್ಷ್ಮಾಣು ವಿರೋಽಗುಣ ಹೊಂದಿದೆ. ಇನ್ನು ರಾಗಿಯ ಭೌತಿಕ ಗುಣದ ಬಗ್ಗೆ ಹೇಳುವುದಾದರೆ, ಇದರ ಹೊರಪದರ ಗಾಢವಾದ ಕಪ್ಪು ಬಣ್ಣವನ್ನು ಹೊಂದಿದ್ದು ಬಹಳ ಹೊಳಪಾಗಿ ಇರುವ ಕಾರಣಕ್ಕೇ ಇದನ್ನು ದುಡಿಯವ ಕೆಳವರ್ಗದ, ಬಡವರ ಧಾನ್ಯ ಎಂದು ಪರಿಗಣಿಸಲಾಗಿತ್ತು. ಇದು ಬಿಟ್ಟರೆ ಬೇರೆ ಯಾವುದೇ ವೈಜ್ಞಾನಿಕ ಅಧ್ಯಯನಗಳೂ ರಾಗಿಯು ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದೂ, ಇಂದಿಗೂ ದಾಖಲಿಸಿಲ್ಲ. ಬದಲಾಗಿ ಅನೇಕ ಅಧ್ಯಯನಗಳು ರಾಗಿ ಒಂದು ಅತ್ಯುನ್ನತ ಆಹಾರ ಧಾನ್ಯವೆಂಬುದನ್ನು ಖಚಿಪಡಿಸಿವೆ.
ಇದರಿಂದಾಗಿಯೇ ಇದರ ರಕ್ಷಕ ಗುಣದ ಪ್ರಖ್ಯಾತಿಯು ‘ರಾಗಿ ಉಂಡವ ನಿರೋಗಿ’ ಎಂಬ ನಾಣ್ನುಡಿಗೆ ಕಾಣವಾಗಿದೆ. ರಾಗಿಯನ್ನು ಪೂರ್ಣಧಾನ್ಯದ ಹಿಟ್ಟಾಗಿ; ಅಂದರೆ ಹೊಟ್ಟಿನೊಂದಿಗೇ ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ಅತ್ಯಂತ ಉತ್ಕೃಷ್ಟ ಪೋಷಣೆ ದೊರೆಯುವುದರೊಂದಿಗೆ ನಿರಂತರ ಚಯಾಪಚಯ ಹಾಗೂ ನಿರಂತರ ಶಕ್ತಿಯ ಬಿಡುಗಡೆ ಆಗುತ್ತದೆ. ರಾಗಿಯಲ್ಲಿರುವ -ಲಿಫಿನಾಲ್ಸ್ ಎನ್ನುವ ಅಂಶವು ಜೀವನ ಪೂರ್ತಿ ‘ಅವಶ್ಯಕ ಪೌಷ್ಟಿಕಾಂಶ’ವನ್ನು ದಕ್ಕಿಸುತ್ತದೆ. ಈ ವಿಷಯ ಜನರ ಗಮನಕ್ಕೆ ಬಂದನಂತರವೇ ರಾಗಿ ಒಂದು ಶ್ರೇಷ್ಠ ಧಾನ್ಯದ ಸಾಲಿಗೆ ಏರಿ, ಅಂತಾರಾಷ್ಟ್ರೀಯ ಬಳಕೆ-ಮಾನ್ಯತೆಯ ಹಂತ ತಲುಪಿದ್ದು. ಸಾಮಾನ್ಯವಾಗಿ ಆರೋಗ್ಯ ರಕ್ಷಕ ಪಾಲಿಫಿನಾಲ್ಸ್ ಇರುವುದು ಧಾನ್ಯದ ಹೊರ ಪದರ ಹೊಟ್ಟಿನ ಭಾಗದಲ್ಲಿ.ಧಾನ್ಯದ ಸುಮಾರು ಶೇಕಡ ೧೨ರಷ್ಟಿರುತ್ತದೆ.
ಧಾನ್ಯಗಳನ್ನು ಸಂಸ್ಕರಿಸುವ ಹಂತಗಳಲ್ಲಿ ಬಹುತೇಕ ಧಾನ್ಯಗಳ ಹೊಟ್ಟನ್ನು ತೆಗೆದೆಸೆಯಲಾಗುತ್ತದೆ. ಸಿಪ್ಪೆ ಬೇರ್ಪಡಿಸುವುದು, ನೆನೆಸುವುದು,ಮೊಳಕೆ ಮಾಡುವುದು, ಹುದುಗು ಬರಿಸುವುದು, ಅರಳು ಮಾಡುವುದು ಮತ್ತು ಬೇಯಿಸುವುದರಿಂದ ಅಪೋಷ್ಟಿಕಾಂಶವಾದ ಟ್ಯಾನಿನ್ ಹೆಚ್ಚಿ, ಫಿನಾಲ್ಸಗಳು ಪ್ರಮಾಣದಲ್ಲಿ ಕಡಿಮೆಯಾಗುತ್ತವೆ. ಉಳಿದ ಸಿರಿಧಾನ್ಯಗಳಲ್ಲೂ ಸಿಪ್ಪೆ ಭಾಗ ಬೇರ್ಪಡಿಸುವುದರಿಂದಲೇ ಶೇ.೭೪.೭ರಷ್ಟು ಪಾಲಿಫಿನಾಲ್ ಪ್ರಮಾಣ ತಗ್ಗುತ್ತದೆ. ಆದರೆ ರಾಗಿ ಇದಕ್ಕೆ ಅಪವಾದ.
ಅನೇಕ ಅಭಿವೃದ್ಧಿಪಡಿಸಿರುವ ರಾಗಿ ತಳಿಗಳನ್ನು ಕರ್ನಾಟಕದ ನಾನಾ ಕೃಷಿ ವಿಶ್ವವಿದ್ಯಾಲಯಗಳು ಈಗಾಗಲೇ ಬಿಡುಗಡೆ ಮಾಡಿವೆ. ಈ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೊಡುಗೆ ಅಪಾರ. ಕರ್ನಾಟಕ ಸರಕಾರ ಈ ಬೆಳೆಯ ಉತ್ತಮ ತಳಿ ಅಭಿವೃದ್ಧಿಗಾಗಿ ನೆರವು ಒದಗಿಸುವ ಹಲವಾರು ಯೋಜನೆಗಳನ್ನು ರೂಪಿಸಿದೆ. ಪರಿಣಾಮ ಅಂತಾರಾಷ್ಟ್ರೀಯ ಹಂತದಲ್ಲಿ ಈ ಪೌಷ್ಟಿಕ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲುಸಾಧ್ಯವಾಗುತ್ತಿದೆ. ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ಕಾರ್ಯವೂ ನಡೆಯುತ್ತಿದೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಪೂರ್ಣ ರಾಗಿ’ ಆಧಾರಿತ ವೈವಿಧ್ಯಮಯ ಆಹಾರ ತಿನಿಸುಗಳನ್ನು ಪ್ರೋತ್ಸಾಹಿಸಿ ವಾಣಿಜ್ಯೋದೈ ಮವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ಪ್ರಮುಖವಾಗಿ ಪಥ್ಯಮೂಲ, ನಾರಿನಾಂಶ ಮತ್ತು-ಲಿಫಿನಾಲ್‌ಗಳು ರಾಗಿಯಲ್ಲಿ ಯಥೇಚ್ಛವಾಗಿ, ಸಂಸ್ಕರಣೆಯ ನಂತರವೂ ದೇಹಕ್ಕೊದಗುತ್ತವೆ. ಹೀಗಿರುವಾಗ ವೈಜ್ಞಾನಿಕವಾಗಿ ಉನ್ನತ ಮಟ್ಟದ ತಂತ್ರಜ್ಞಾನ ಬಳಸಿ ರಾಗಿಯನ್ನು ಎಲ್ಲ ಜೀವನ ಶೈಲಿಗೂ ಹೊಂದುವಂಥ ಆಹಾರೋತ್ಪನ್ನಗಳನ್ನು ಪರಿಚಯಿಸಬೇಕಿದೆ.
ರಾಗಿಯಿಂದ ಸೂಪ್, ಬೇಕರಿ ಪದಾರ್ಥಗಳು, ಎಕ್‌ಸ್ಟ್ರೋಡ್ಡ್, ದಿಢೀರ್ ತಯಾರಿಸಬಹುದಾದ, ದಿಢೀರ್ ತಿನ್ನಬಹುದಾದ ತಿನಿಸುಗಳು, ಪ್ಲೇಕ್ಸ್,ಪಾಸ್ತಾ, ಬೆಳಗಿನ ಉಪಹಾರ..ಇತ್ಯಾದಿಗಳ ಪ್ರಯೋಗ ಯಶಸ್ವಿಯಾಗಿದೆ. ಆದರೆ ಇವನ್ನೆಲ್ಲ ಲೇಬಲ್ ನಿಯಮಾವಳಿ ಮೂಲಕ ಗ್ರಾಹಕರ ಅರಿವಿಗೆ ತರಲು ಒತ್ತು ನೀಡಬೇಕಿದೆ. ಇದಕ್ಕೆ ಸೂಕ್ತ ಪ್ರಚಾರಾಂದೋಲನ ಅಗತ್ಯ. ಹಾಗಾದಲ್ಲಿ, ಯುವಕರು ಸಹ ಕಪ್ಪು ಬಣ್ಣ ಹೊಂದಿರುವ ರಾಗಿಯುನಿಸರ್ಗದತ್ತ ಆರೋಗ್ಯದಾಯಕ ಅಂಶಗಳನ್ನು ಮನಗಂಡಾರು.
ಇದಲ್ಲಕ್ಕಿಂತ ಹೆಚ್ಚಾಗಿ ಆಧುನಿಕ ಒತ್ತಡದ ಜೀವನ ಶೈಲಿಗೆ ರಾಗಿ ಹೇಳಿ ಮಾಡಿಸಿದ ಆಹಾರ. ಇದರಲ್ಲಿರುವ ನಾರಿನಂಶವು ವಿಶೇಷವಾಗಿ ವಿವಿಧ ರೀತಿಯ ದೈಹಿಕ ಹಾಗೂ ಮಾನಸಿಕ ಒತ್ತಡಗಳ ನಿವಾರಕವಾಗಿ ಕೆಲಸ ಮಾಡುತ್ತದೆ. ರಾಗಿ ಬೆಳೆ ಹೇಗೆ ನೈಸರ್ಗಿಕ ಹವಾಮಾನ ಏರುಪೇರು ಗಳನ್ನೂ ಎದುರಿಸಿ ತಾನು ಬೆಳೆಯುವಂತೆ ಜನರಿಗೂ ಕೂಡ ಎಲ್ಲ ರೀತಿಯ ಅನಾರೋಗ್ಯಕರ ಒತ್ತಡಗಳನ್ನು ದೂರ ಮಾಡಿ ಉತ್ತಮ ಗುಣಮಟ್ಟದಆಹಾರವಾಗುತ್ತದೆ. ವೈವಿಧ್ಯಮಯ ಕುದಿಸುವ, ಹುರಿಯುವ, ಕರಿಯುವ, ಬೇಕಿಂಗ್ ವಿಧಾನ, ಯಾವುದೇ ಸಂಸ್ಕರಿಸಿದ ವಿಧಾನದ ಬಳಿಕವೂ ತನ್ನದೇ ಶ್ರೇಷ್ಠ ರಾಸಾಯನಿಕ ರಚನೆಯಲ್ಲಿ ಯಾವುದೇ ಬದಲಾವಣೆ ತೋರುವುದಿಲ್ಲ ಎಂಬ ಕಾರಣಕ್ಕೇ ರಾಗಿ ಅತ್ಯುತ್ತಮ ಆಹಾರ ಎನಿಸಿದೆ.
ರಾಗಿಯನ್ನು ಪ್ರಮುಖ ಆಹಾರವಾಗಿ ಬಳಸುವುದರಿಂದ ಪಡೆಯುವ ಹಲವಾರು ಪ್ರಯೋಜನಗಳು ಈ ಕೆಳಗಿನಂತಿವೆ.
ಮಧುಮೇಹ:ಅತ್ಯಂತ ಮುಖ್ಯವಾದುದು ರಕ್ತದಲ್ಲಿ ಗ್ಲೂಕೋಸ್ ಸಮತೋಲನ ಕಾಪಾಡುವುದು. ರಾಗಿಯನ್ನು ಯಥೇಚ್ಛ ಉಂಡ ಬಳಿಕವೂ ರಕ್ತಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುತ್ತದೆ. ಜತೆಗೆ ರಾಗಿಯಲ್ಲಿರುವ ಕರಗದ ನಾರು ಜೀರ್ಣಕ್ರಿಯೇ ಮತ್ತು ವಿಸರ್ಜನಾ ಕ್ರಿಯೆಯನ್ನು ಸುಲಭಗೊಳಿಸುತ್ತದೆ.
ರಕ್ತಹೀನತೆ ನಿವಾರಣೆ:ರಾಗಿಯಲ್ಲಿರುವ ಕೆಲವೊಂದು ಅಂಶಗಳು ಕಬ್ಬಿನಾಂಶದ ಕೊರತೆ ನಿವಾರಿಸುವುದು. ಇದು ಕಬ್ಬಿನಾಂಶದಿಂದ ಸಮೃದ್ಧ ವಾಗಿರುವ ಧಾನ್ಯವಾಗಿದೆ. ಮಹಿಳೆಯರಿಗೆ ಇದು ತುಂಬಾ ಉಪಯುಕ್ತವಾದ ಆಹಾರ.
ರಕ್ತದೊತ್ತಡ ನಿಯಂತ್ರಣ:ಅಧಿಕ ರಕ್ತದೊತ್ತಡ ಅಥವಾ ಪರಿಧಮನಿಯ ರೋಗಗಳಿಂದ ಬಳಲುವವರಿಗೆ ನಾರಿನಾಂಶವು ಅಧಿಕವಾಗಿರುವ ರಾಗಿಯು ತುಂಬಾ ಒಳ್ಳೆಯ ಆಹಾರ. ಮೂಳೆಯ ಸುಧಾರಣೆ: ರಾಗಿಯಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕವಾಗಿದೆ. ನಿಯಮಿತವಾಗಿ ರಾಗಿ ಸೇವನೆ ಮಾಡುವ ದರಿಂದ ಮೂಳೆಗಳು ಬಲಗೊಳ್ಳುತ್ತವೆ.
ತೂಕ ಕಡಿಮೆ ಮಾಡಲು:ಹೆಚ್ಚು ತೂಕ ಹೊಂದಿದ್ದ ಸ್ಥೂಲಕಾಯದಿಂದ ಹೊರಬರಲಿಚ್ಛಿಸುವವರಿಗೆ ರಾಗಿ ಉತ್ತಮವಾದ ಪರ್ಯಾಯ ಆಹಾರವಾಗಿದೆ. ರಾಗಿಯಲ್ಲಿರುವ ಪೋಷಕಾಂಶಗಳು ನಿಧಾನವಾಗಿ ಶರೀರಕ್ಕೆ ಲಭ್ಯವಾಗುವುದರಿಂದ ಹೆಚ್ಚಿನ ಕೊಬ್ಬು ಖರ್ಚಾಗುತ್ತದೆ. ಜೊತೆಗೆ ಶರೀರದಲ್ಲಿಕ್ಯಾಲೋರಿಗಳು ನಿಧಾನವಾಗಿ ಲಭ್ಯವಾಗಿ ದಿನದ ಚಟುವಟಿಕೆ ಸುಲಲಿತವಾಗುವಂತೆ ನೋಡಿಕೊಳ್ಳುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾ ಗುತ್ತದೆ.
ಪ್ರೋಟೀನ್ ಅಧಿಕ:ರಾಗಿಯಲ್ಲಿ ಪ್ರೋಟೀನ್ ಅಧಿಕವಾಗಿದೆ. ಜತೆಗೆ ಇದರಲ್ಲಿನ ಅಮಿನೋ ಆಮ್ಲವು ಸ್ನಾಯುಗಳಲ್ಲಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ.
ವಯಸ್ಸಿಗೆ ತಡೆ:ರಾಗಿಯಲ್ಲಿ ಹಲವಾರು ರೀತಿಯ ಆಂಟಿಆಕ್ಸಿಡೆಂಟ್‌ಗಳಿವೆ. ಇದು ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು.
ಕೊಲೆಸ್ಟ್ರಾಲ್ ನಿಯಂತ್ರಣ:ಇದರಲ್ಲಿರುವ ಅಮೈನೋ ಆಮ್ಲಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತವೆ. ಯಕೃತ್‌ನಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸಿ ಹೊರದಬ್ಬುತ್ತದೆ. ಇನ್ನಷ್ಟು ಕೊಬ್ಬು ಬೆಳೆಯುವುದನ್ನು ತಡೆಗಟ್ಟುತ್ತದೆ.
ದೇಹಕ್ಕೆ ಆರಾಮ:ರಾಗಿಯಿಂದ ನಿಮ್ಮ ದೇಹಕ್ಕೆ ಒಳ್ಳೆಯ ಆರಾಮ ಸಿಗುವುದು. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಹಿತಕಾರಿಯಾದ ಪೋಶಕಾಂಶಗಳು ಇವೆ. ಇದು ದೇಹವನ್ನು ಶಾಂತವಾಗಿಡುತ್ತದೆ.
ತಾಯಂದಿರ ಸ್ನೇಹಿ:ಮಕ್ಕಳಿಗೆ ಹಾಲುಣಿಸುವಂತಹ ಮಹಿಳೆಯರಲ್ಲಿ ಹಾಲು ಉತ್ಪಾದನೆ ಹೆಚ್ಚು ಮಾಡಲು ರಾಗಿ ಸೇವನೆ ತುಂಬಾ ಒಳ್ಳೆಯದು. ಇದರಿಂದ ದೀರ್ಘ ಕಾಲದತನಕ ಮಗುವಿಗೆ ಹಾಲುಣಿಸಲು ನೆರವಾಗುವುದು.
ನಾನಾ ಕಾಯಿಲೆಗಳಿಗೆ ಪರಿಹಾರ:ದೇಹವನ್ನು ಬಾಧಿಸುವ ಅಪೌಷ್ಟಿಕತೆ, ವಯಸ್ಸಿಗೂ ಮುನ್ನವೇ ವೃದ್ದಾಪ್ಯ ಆವರಿಸುವುದು, ಆಂಗಾಂಶಗಳುಘಾಸಿಗೊಂಡು ಹೊಸ ಅಂಗಾಂಶ ಬೆಳೆಯದೇ ದೇಹ ಸೊರಗುವುದು (ಮಧುಮೇಹದ ಒಂದು ಅಡ್ಡಪರಿಣಾಮ) ಮೊದಲಾದ ತೊಂದರೆಗಳಿಗೆ ರಾಗಿಉತ್ತಮ ಪರಿಹಾರವಾಗಿದೆ. ಹಸಿರು ರಾಗಿ (ರಾಗಿ ಹಸಿಯಿದ್ದಾಗಲೇ ಕೊಯ್ಲು ಮಾಡಿದ್ದುದು) ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ,ದುರ್ಬಲವಾಗಿದ್ದ ಹೃದಯ ಸಬಲಗೊಳ್ಳುತ್ತದೆ, ಯಕೃತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಮಲಬದ್ಧತೆಯನ್ನು ನಿವಾರಿಸುತ್ತದೆ:ನಾರಿನಾಂಶ ಕಡಿಮೆ ಇರುವ ಯಾವುದೇ ಆಹಾರ ಮಲಬದ್ಧತೆಗೆ ಕಾರಣವಾಗುತ್ತದೆ. ಆದರೆ ರಾಗಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವುದರಿಂದ ಮಲಬದ್ಧತೆಯ ತೊಂದರೆಯನ್ನು ಸುಲಭವಾಗಿ ನಿವಾರಿಸುತ್ತದೆ. ಹೇಗೇ ನೋಡಿದರೂ ರಾಗಿ ಒಂದು ಆಹಾರ ಮಾತ್ರವಲ್ಲ, ಪರಿಣಾಮಕಾರಿ ಮದ್ದು ಸಹ ಹೌದು. ಅದಕ್ಕಾಗಿಯೇ ಹಿಂದೆಲ್ಲ ಆಹಾರವೇ ಔಷಧವೆನಿಸಿತ್ತು, ಅಡಿಗೆಮನೆಯೇ ಆಸ್ಪತ್ರೆ ಆಗಿತ್ತು. ರಾಗಿಯನ್ನು ಮರೆತಪರಿಣಾಮ ಇಂದು ಆಸ್ಪತ್ರೆ ಎರಡನೇ ಮನೆಯಾಗಿದೆ. ಔಷಧವೇ ಆಹಾರವಾಗಿದೆ.