ಜೀವನಾಂಶ ಕಾಯಿದೆ ಒಂದು ವಿಶ್ಲೇಷಣೆ
ಕಾನೂನು ಅರಿವು
ಕೆ.ವಿ.ವಾಸು
vasuvasu05787@.
ದೇಶದ ಹಲವಾರು ವಿಚಾರಣಾ ನ್ಯಾಯಾಲಯಗಳಲ್ಲಿ ಜೀವನಾಂಶ ಕೋರಿ ಸಲ್ಲಿಕೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ನ್ಯಾಯಾಲಯದ ಸಂಕೀರ್ಣತೆಯಿಂದ ನೊಂದ ಮಹಿಳೆ ಹಾಗೂ ಇತರ ಸಂಬಂದಪಟ್ಟವರಿಗೆ ಸಾಕಷ್ಟು ಕಷ್ಟಗಳನ್ನು ಎದುರಾಗುತ್ತವೆ.
ಕೌಟುಂಬಿಕ ವ್ಯಾಜ್ಯಗಳಲ್ಲಿ ಹಿಂದು ವಿವಾಹ ಕಾಯ್ದೆಯ ಸೆಕ್ಷನ್ ೨೪ರ ಅನುಸಾರ ಜೀವನಾಂಶ ಕೋರಿ ಸಲ್ಲಿಸುವ ಅರ್ಜಿಗಳನ್ನು ವಿಲೇವಾರಿ ಮಾಡಲು ವಿಚಾರಣಾ ನ್ಯಾಯಲಯಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ಗರಿಷ್ಠ ಆರು ತಿಂಗಳ ಕಾಲಮಿತಿ ನಿಗದಿಪಡಿಸಿ ಸ್ವಾಗತಾರ್ಹ ತೀರ್ಪು ನೀಡಿದೆ. ದೇಶದ ಹಲವಾರು ವಿಚಾರಣಾ ನ್ಯಾಯಾಲಯಗಳಲ್ಲಿ ಜೀವನಾಂಶ ಕೋರಿ ಸಲ್ಲಿಕೆ ಯಾಗುತ್ತಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಒಂದು ಕಡೆ ಕೌಟುಂಬಿಕ ವ್ಯಾಜ್ಯಗಳು ಹೆಚ್ಚುತ್ತಿದ್ದರೆ, ಅಂತಹ ವ್ಯಾಜ್ಯಗಳ ಪ್ರಮುಖ ಅಂಗವಾದ ಜೀವನಾಂಶ ಕೋರಿಕೆಯ ಅರ್ಜಿಗಳು ವಿಲೇಯಾಗದೇ ವರ್ಷಗಟ್ಟಲೆ ಉಳಿಯುವುದರಿಂದ ನೊಂದ ಮಹಿಳೆ ಹಾಗೂ ಇತರ ಸಂಬಂದಪಟ್ಟವರಿಗೆ ಸಾಕಷ್ಟು ಕಷ್ಟಗಳನ್ನು ಎದುರಾಗುತ್ತವೆ.
ಜೀವನಾಂಶ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯಗಳು ಸಾಧ್ಯ ವಾದಷ್ಟೂ ೬೦ದಿನಗಳ ಒಳಗೆ ವಿಲೇವಾರಿ ಮಾಡಬೇಕೆಂಬ ನಿಯಮವಿದ್ದರೂ, ಬೇರೆ ಬೇರೆ ಕಾರಣಗಳಿಂದ, ಪ್ರಕರಣ ಮುಂದೂಡುತ್ತಲೇ ಹೋಗುತ್ತದೆ. ಕೆಲವು ಪ್ರಕರಣಗಳಲ್ಲಿ ಪತ್ನಿಯು, ಸಕಾರಣಗಳಿಲ್ಲದೇ ಪತಿಯಿಂದ ದೂರವಾಗಿ ಪತಿಗೆ ಕಿರುಕುಳ ನೀಡಲು ವರದಕ್ಷಿಣೆ ಪ್ರಕರಣ, ಜೀವನಾಂಶದ ಅರ್ಜಿ ಸಲ್ಲಿಸುವ ಪ್ರಕರಣಗಳು ಸಹ ಹೆಚ್ಚುತ್ತಿವೆ.
ಸಕಾರಣಗಳಿಲ್ಲದೇ ಪತಿಯಿಂದ ದೂರವಾಗುವ ಸ್ವತಃ ವರಮಾನವಿರುವ ಪತ್ನಿಗೆ ಪತಿಯಿಂದ ಜೀವನಾಂಶ ಕೋರುವ ಹಕ್ಕಿರುವುದಿಲ್ಲ. ಅದೇ ರೀತಿ, ಪತಿಗೆ ಸಾಕಷ್ಟು ವರಮಾನವಿಲ್ಲದೇ, ಪತ್ನಿಯೇ ಕೆಲಸದಲ್ಲಿದ್ದ ಸಂಧರ್ಭಗಳಲ್ಲಿ ಸಹ ಜೀವನಾಂಶ ನೀಡಬೇಕಾದ ಅಗತ್ಯವಿಲ್ಲ. ಒಬ್ಬ ಹಿಂದೂಪತಿಯು ತನ್ನ ವಿವಾಹಿತ ಪತ್ನಿ, ಮಕ್ಕಳು ಹಾಗೂ ವಯಸ್ಸಾದ ತಂದೆ ತಾಯಿಗಳನ್ನು (ಹಿಂದೂ ದತ್ತಕ ಮತ್ತು ಜೀವನಾಂಶ ಕಾಯ್ದೆ ೧೯೫೬ ರ ಅನುಸಾರ) ಪೋಷಣೆ ಮಾಡಬೇಕಾದ ನೈತಿಕ ಹಾಗೂ ಕಾನೂನಾತ್ಮಕ ಕರ್ತವ್ಯವನ್ನು ಪಾಲಿಸಬೇಕು.
ಯಾವುದೇ ವಿವಾಹಿತ ಪುರುಷ ಆತನಿಗೆ ಸಾಕಷ್ಟು ವರಮಾನವಿದ್ದರೂ, ಹೆಂಡತಿ ( ಕಲಂ ೧೮) ಮಕ್ಕಳು ಅಥವಾ ವಯಸ್ಸಾದ ತಂದೆ ತಾಯಿಯ ರನ್ನು (ಕಲಂ ೨೦) ಪೋಷಣೆ ಮಾಡಲು ವಿPಲನಾದರೆ ಆತನ ವಿರುದ್ಧ ನೊಂದ ವ್ಯಕ್ತಿಗಳು ಹಿಂದೂ ದತ್ತಕ ಮತ್ತು ಜೀವನಾಂಶ ಕಾಯ್ದೆ ೧೯೫೬ರ ಪ್ರಕಾರ ಪ್ರಕರಣ ದಾಖಲಿಸಬಹುದಾಗಿದೆ. ಇದೇ ಕಾಯಿದೆಯ ಕಲಂ ೧೯ರ ಪ್ರಕಾರ ವಿಧವಾ ಸೊಸೆ ಸಹ ಜೀವನಾಂಶಕ್ಕೆ ಅರ್ಹಳಾಗಿದ್ದಾಳೆ. ಒಂದು ವೇಳೆ ಪತ್ನಿ ಅಥವಾ ಸೊಸೆ ಮರು ವಿವಾಹವಾದರೆ, ಜೀವನಾಂಶದ ಹಕ್ಕನ್ನು ಕಳೆದು ಕೊಳ್ಳುತ್ತಾರೆ.
ಅದೇ ರೀತಿ ೧೮ ವರ್ಷ ತುಂಬಿದ ಮಕ್ಕಳು ತಮ್ಮ ಸ್ವಂತ ಸಂಪಾದನೆಯಿಂದ ವರಮಾನಗಳಿಸಲು ಪ್ರಾರಂಭಿಸಿದರೆ, ಜೀವನಾಂಶದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಆದರೆ ವಯಸ್ಸಾದ ತಂದೆ ತಾಯಿಗಳು ಮಾತ್ರ ಜೀವನ ಪರ್ಯಂತ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಅದೇರೀತಿಯಲ್ಲಿ ಅವಿವಾಹಿತ ಮಗಳು ಸಹ (ಆಕೆಗೆ ವಿವಾಹವಾಗುವ ತನಕ) ತಂದೆಯಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ. ಅದೇ ರೀತಿ ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಮಕ್ಕಳು ಅವರು ಜೀವಿಸಿರುವವರೆಗೂ ತಮ್ಮ ತಂದೆಯಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.
ಈ ಎಲ್ಲ ಪ್ರಕರಣಗಳಲ್ಲಿಯೂ, ಆರೋಪಿಗಳಿಗೆ ಸಾಕಷ್ಟು ವರಮಾನವಿದೆ ಎಂಬ ಅಂಶವನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರೆ, ನ್ಯಾಯಾಲಯ ತನ್ನ ವಿವೇಚನೆಯಂತೆ ತೀರ್ಪು ನೀಡಬಹುದು. ಪತ್ನಿಗೆ ಯಾವಾಗ ಜೀವನಾಂಶ ಸಿಗುತ್ತದೆ ? ಈ ಕೆಳಕಂಡ ಕಾರಣಗಳಿಂದ ಹಿಂದೂ ಪತ್ನಿಯು ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ.
ಎ. ಗಂಡ ಸಕಾರಣವಿಲ್ಲದೇ ಪತ್ನಿಯನ್ನು ತ್ಯಜಿಸಿದ್ದರೆ ಅಥವಾ ಉದ್ದೇಶಪೂರ್ವಕವಾಗಿ ಅವಳನ್ನು ನಿರ್ಲಕ್ಷಿಸಿದ್ದರೆ
ಬಿ. ಪತ್ನಿಯು, ತನ್ನ ಗಂಡನೊಡನೆ ವಾಸಿಸುವುದು ಹಾನಿಕಾರಕ ಅಥವಾ ತೊಂದರೆದಾಯಕ ಎಂಬ ಸಕಾರಣ ಭಯವು ಅವಳ ಮನಸ್ಸಿನಲ್ಲಿ ಉಂಟಾಗುವಷ್ಟು ಕ್ರೂರ ರೀತಿಯಲ್ಲಿ ಅವನು ಅವಳೊಂದಿಗೆ ನಡೆದುಕೊಂಡಿದ್ದರೆ
ಸಿ. ಪತಿಯು ತೀವ್ರ ಕುಷ್ಟರೋಗ ಅಥವಾ ಗುಹ್ಯರೋಗಗಳಿಂದ ನರಳುತ್ತಿದ್ದರೆ, ಅಥವಾ ಅವನಿಗೆ ಇನ್ನೊಬ್ಬಳು ಜೀವಂತ ಪತ್ನಿಯಿದ್ದರೆ
ಡಿ. ಆರೋಪಿ ಪತಿಯು, ತನ್ನ ಪತ್ನಿಯು ವಾಸಿಸುವಂತಹ ಮನೆಯಲ್ಲಿಯೇ ಇನ್ನೊಬ್ಬಳನ್ನು ಇಟ್ಟುಕೊಂಡಿದ್ದರೆ ಅಥವಾ ಇನ್ನೊನ್ನಳೊಂದಿಗೆ ಯಾವಾಗಲೂ ಬೇರೆಡೆಯಲ್ಲಿ ವಾಸಿಸುತ್ತಿದ್ದರೆ
ಇ. ಬೇರೊಂದು ಧರ್ಮಕ್ಕೆ ಮತಾಂತರಗೊಂಡಿದ್ದರೆ ಹಾಗೂ ಅವನು ಹಿಂದೂವಾಗಿರುವುದು ಕೊನೆಯಾಗಿದ್ದರೆ ಎ-. ಅರ್ಜಿದಾರ ಪತ್ನಿಯು ತಾನು ಪ್ರತ್ಯೇಕವಾಗಿ ವಾಸಿಸುವುದನ್ನು ಸಮರ್ಥಿಸುವಂತಹ ಇತರೇ ಯಾವುದಾದರೂ ಕಾರಣವಿದ್ದರೆ. ಒಬ್ಬ ಹಿಂದೂ ಪತ್ನಿಯು ಶೀಲಭ್ರಷ್ಟಳಾಗಿದ್ದರೆ ಅಥವಾ ಬೇರೊಂದು ಮತಕ್ಕೆ ಮತಾಂತರಗೊಂಡಿದ್ದರೆ ಅವಳು ತನ್ನ ಗಂಡನಿಂದ ಪ್ರತ್ಯೇಕ ವಾಸ ಮತ್ತು ಜೀವನಾಂಶವನ್ನು ಪಡೆಯಲು ಅರ್ಹಳಲ್ಲ.
ವಿಧವೆ ಸೊಸೆಗೂ ಉಂಟು ಜೀವನಾಂಶ ಹಿಂದೂ ದತ್ತಕ ಮತ್ತು ಜೀವನಾಂಶ ಕಾಯ್ದೆಯ ೧೯ನೇ ಕಲಂ ಪ್ರಕಾರ, ಹಿಂದೂ ಪತ್ನಿಯು ತನ್ನ ಪತಿಯ ಮರಣಾ ನಂತರ ಅವಳ ಮಾವನಿಂದ ಪೋಷಿತಳಾಗಿರಲು ಹಕ್ಕನ್ನು ಹೊಂದಿರುತ್ತಾಳೆ. ಅವಳು ತನ್ನ ಸ್ವಂತ ಸಂಪಾದನೆಯಿಂದ ಅಥವಾ ಇತರ ಸ್ವತ್ತಿನಿಂದ ತನ್ನನ್ನು ಪೋಷಿಸಿಕೊಳ್ಳಲು ಅಸಮರ್ಥಳಾಗಿರುವ ತನಕ ಹಾಗೂ ಅವಳ ಗಂಡನ ಅಥವಾ ತಂದೆಯ ಅಥವಾ ತಾಯಿಯ ಸಂಪಾದನೆ ಯಿಂದ ಅಥವಾ ಅವಳ ಮಗ ಅಥವಾ ಮಗಳು ಯಾರಾದರೂ ಇದ್ದರೆ, ಅವರಿಂದ ಪೋಷಣೆ ಪಡೆಯಲು ಅಸಮರ್ಥಳಾದರೆ ಹಾಗೂ ತನ್ನ ಮಾವನ ಸ್ವಾಧೀನದಲ್ಲಿರುವ ಯಾವುದೇ ದಾಯಾದಿ ಸ್ವತ್ತಿನಿಂದ ಆಸ್ತಿ ಪಡೆಯದಿದ್ದರೆ, ಅಂತಹ ವಿಧವಾ ಸೊಸೆ ಪುನರ್ವಿವಾಹ ಆಗದಿದ್ದ ಸಂದರ್ಭದಲ್ಲಿ, ಅವಳಿಗೆ ಮಾವನಿಂದ ಜೀವನಾಂಶ ಪಡೆಯುವ ಹಕ್ಕಿರುತ್ತದೆ.
ಜೀವನಾಂಶ ಮೊಬಲಗು:ಅರ್ಜಿದಾರರಿಗೆ ಯಾವುದೇ ಜೀವನಾಂಶವನ್ನು ಕೊಡಬೇಕೆ ಮತ್ತು ಹಾಗೆ ಕೊಡಬೇಕಾಗಿದ್ದಲ್ಲಿ ಎಷ್ಟು ಎಂಬುದನ್ನುನಿರ್ಧರಿಸುವುದು ನ್ಯಾಯಾಲಯದ ವಿವೇಚನೆಗೆ ಸೇರಿರುತ್ತದೆ. ( ಕಲಂ ೨೩). ಹಾಗೆ ಮಾಡುವಾಗ, ನ್ಯಾಯಾಲಯವು ಸಂದರ್ಭಾನುಸಾರ, ಅವು ಅನ್ವಯಿಸಬಹುದಾದರಷ್ಟು ಮಟ್ಟಿಗೆ ಈ ಕೆಳಕಂಡ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.
೧. ಪಕ್ಷಕಾರರ ಸ್ಥಿತಿ ಮತ್ತು ಸ್ಥಾನಮಾನ೨. ಅರ್ಜಿದಾರರ ಯುಕ್ತ ಅವಶ್ಯಕತೆಗಳು
೩. ಆರೋಪಿ ವ್ಯಕ್ತಿಗಳ ಸ್ವತ್ತಿನ ಮೌಲ್ಯ ಮತ್ತು ಅಂತ ಸ್ವತ್ತಿನಿಂದ ಬರುವ ಆದಾಯ೪. ಒಂದು ವೇಳೆ ಆರೋಪಿ, ಸರ್ಕಾರಿ ಅಥವಾ ಖಾಸಗಿ ನೌಕರಿಯಲ್ಲಿದ್ದರೆ, ಸಂಬಳದ ಮೂಲದಿಂದ ಬರುವ ವರಮಾನ
೫. ಇತರ ಯಾವುದೇ ಮೂಲದಿಂದ ಬರುವ ವರಮಾನ ನ್ಯಾಯಾಲಯದ ಡಿಕ್ರಿ ಅಥವಾ ಒಪ್ಪಂದದ ಮೂಲಕ
ಒಮ್ಮೆ ನಿಗದಿಪಡಿಸಲಾಗುವ ಜೀವನಾಂಶ ಮೊಬಲಗನ್ನು ಕಾಲಾನುಸಾರ ಆರೋಪಿಯ ಆದಾಯ ಏರಿಕೆ ಅಥವಾ ಇಳಿಕೆ, ಅರ್ಜಿದಾರರ ಸ್ಥಾನಮಾನದ ಬದಲಾವಣೆಗೆ ಹಾಗೂ ಇನ್ನಿತರ, ಸನ್ನಿವೇಶಗಳನ್ನು ನ್ಯಾಯಾಲಯ ಗಮನಕ್ಕೆ ತಂದರೆ, ನ್ಯಾಯಾಲಯ ತನ್ನ ಹಿಂದಿನ ಆದೇಶದಲ್ಲಿ ಸೂಕ್ತವಾದ ತಿದ್ದುಪಡಿ ಅಥವಾ ಬದಲಾವಣೆ ಮಾಡಬಹುದು.
ಒಂದು ವೇಳೆ ಪತ್ನಿಯು, ಜೀವನಾಂಶ ಕೋರಿ, ಹಿಂದೂ ದತ್ತಕ ಮತ್ತು ಜೀವನಾಂಶ ಕಾಯ್ದೆ ಸಡಿ ಅರ್ಜಿ ಸಲ್ಲಿಸಿದ್ದರೆ, ಸಿಪಿಸಿ ಕಲಂ ೧೫೧ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯವು ಮದ್ಯಂತರ ಪರಿಹಾರ ನೀಡಲು ಆದೇಶಿಸಬಹುದು ( ಪಿ. ಶ್ರೀನಿವಾಸ ರಾವ್-ಶ್ರೀಮತಿ ಇಂದಿರಾ ಅಐ ೨೦೦೨ ಅಕ್ಟ್ ೧೩೦) ಜೀವನಾಂಶ ಕೋರಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಕಾಲ ಮಿತಿ ನಿಗದಿ ಪಡಿಸಿರುವ ರಾಜ್ಯ ಹೈಕೋರ್ಟ್, ಅರ್ಜಿ ಸಲ್ಲಿಕೆ ಯಾದ ತಕ್ಷಣ ನೋಟಿಸ್ ಜಾರಿಗೊಳಿಸಬೇಕು, ಇ-ಮೇಲ್, ವಾಟ್ಸ್‌ಆಪ್ ಮೂಲಕ ನೀಡುವ ನೋಟಿಸ್‌ಗಳಿಗೂ ಸಹ ಕಾನೂನಿನ ಮಾನ್ಯತೆ ಇದೆಎಂದು ಹೇಳಿ, ಹಿಂದೂ ವಿವಾಹ ಕಾಯ್ದೆ ಸೆಕ್ಷನ್ ೨೪ ರ ಮಧ್ಯಂತರ ಜೀವನಾಂಶ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಪತಿಗೆ ೨ ತಿಂಗಳ ಕಾಲಾವಕಾಶ ನೀಡಬೇಕು ಎಂದು ಹೇಳಿ, ಅರ್ಜಿ ಸಲ್ಲಿಸುವ ಪತ್ನಿಗೂ ಆಸ್ತಿ ಮತ್ತು ಹೊಣೆಗಾರಿಕೆಯ ಕುರಿತು ಮಾಹಿತಿ ನೀಡಲು ೨ ತಿಂಗಳ ಅವಕಾಶ ನೀಡಬೇಕು ಎಂದು ಹೇಳಿ, ಬಳಿಕ ನ್ಯಾಯಾಲಯ ಎಲ್ಲ ಪಕ್ಷಕಾರರ ವಾದ ಆಲಿಸಿ, ೨ ತಿಂಗಳ ಒಳಗೆ ಆದೇಶ ಹೊರಡಿಸಬೇಕೆಂದು ಹೇಳಿದೆ. ಅಲ್ಲಿಗೆ ಮಧ್ಯಂತರ ಪರಿಹಾರ ಕೋರಿ ಅರ್ಜಿ ಸಲ್ಲಿಕೆಯಾದ ದಿನಾಂಕದಿಂದ ೬ ತಿಂಗಳ ಕಾಲಮಿತಿ ಒಳಗಾಗಿ ಆದೇಶ ಪ್ರಕಟಿಸಬೇಕೆಂದು ಹೇಳಿದೆ.
ಈ ಕಾಲಮಿತಿಯನ್ನು ವಿಚಾರಣಾ ನ್ಯಾಯಾಲಯಗಳು ಪಾಲಿಸಿದರೆ, ವಿಲೇವಾರಿ ಕಾಣದೇ ಉಳಿದಿರುವ ಜೀವನಾಂಶದ ಸಾವಿರಾರು ಪ್ರಕರಣಗಳು ವಿಲೆಯಾಗಬಹುದು.