ಹಣೆಬರಹ ಪುಸ್ತಕದ ಕೊನೆಯಲ್ಲಿ ಖಾಲಿಪುಟಗಳು !
ದೇಹಜ್ಞಾನ
ಡಾ.ದಯಾನಂದ ಲಿಂಗೇಗೌಡ
@.
ಒಂದು ವಿಷಯವನ್ನು ಗಮನಿಸಿ. ಡಾ.ರಾಜಕುಮಾರ್ (೧೯೨೯-೨೦೦೬, ೭೭ ವರ್ಷ) ಮತ್ತು ಪಾರ್ವತಮ್ಮ ರಾಜಕುಮಾರ್ ಅವರು (೧೯೩೯-೨೦೧೭, ೭೮ ವರ್ಷ) ಬದುಕಿದ ಜೀವಿತಾವಧಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಇವರಿಬ್ಬರ ಜೀವನ ಶೈಲಿ ಒಂದೇ ರೀತಿ ಇರಲಿಲ್ಲ. ಅಣ್ಣಾವ್ರು ಯೋಗಭ್ಯಾಸ ಮತ್ತುಕಠಿಣ ವ್ಯಾಯಾಮದಂಥ ದೇಹ ದಂಡನೆಗೆ ಒತ್ತು ಕೊಟ್ಟು , ಕೊನೆಯವರೆಗೂ ಶಿಸ್ತಿನಿಂದ ಬದುಕಿದರು. ಆದರೆ ಪಾರ್ವತಮ್ಮನವರು ಎಲ್ಲ ಭಾರತೀಯ ಗೃಹಿಣಿಯಂತೆ ಗೃಹ ಚಟುವಟಿಕೆಗಳಿಗೆ ಮತ್ತು ಕುಟುಂಬ ವ್ಯಾಪಾರದಲ್ಲಿ ತೊಡಗಿಸಿಕೊಂಡು ಬದುಕಿದವರು.
ಆದರೂ ಇವರಿಬ್ಬರೂ ಜೀವಿಸಿದ್ದ ಅವಧಿಯಲ್ಲಿ ಹೆಚ್ಚಿನ ವ್ಯತ್ಯಾಸವಿರಲಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಹಾಗಾದರೆ ವ್ಯಾಯಾಮದಿಂದ ಆಯುನ್ನು ಹೆಚ್ಚಿಸಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ. ವಿಷಯವನ್ನು ಇನ್ನೂ ಸಂಕೀರ್ಣಗೊಳಿಸಬೇಕೆಂದರೆ, ಪುನೀತ್ ರಾಜಕುಮಾರ್ ಅವರನ್ನು ಚರ್ಚೆಯಲ್ಲಿ ಉಪಯೋಗಿಸಿಕೊಳ್ಳ ಬಹುದು. ರಾಜಕುಮಾರ್ ಅವರಿಗಿಂತಲೂ ಹೆಚ್ಚಾಗಿ ದೇಹದಂಡನೆಯಲ್ಲಿ ತೊಡಗಿದ್ದ ಪುನೀತ್ ರಾಜಕುಮಾರ್ ಅವರ ಜೀವತಾವಧಿ ಹೆಚ್ಚಾಗಿರಲಿಲ್ಲ (೧೯೭೫-೨೦೨೧, ೪೬ ವರ್ಷ). ಇಲ್ಲಿ ಹೆಚ್ಚಿನ ವ್ಯಾಯಾಮದಿಂದ ಜೀವತಾ ವಧಿ ಕಡಿಮೆ ಯಾಗುತ್ತದೆಯೇ? ಎನ್ನುವ ಮತ್ತೊಂದು ಪ್ರಶ್ನೆ ಇಲ್ಲಿ ಮೂಡುತ್ತದೆ.
ಈ ಮೂವರ ಜೀವಿತವನ್ನು ಹೋಲಿಸುವುದು ಹೆಚ್ಚೇನೂ ತಪ್ಪಾಗುವುದಿಲ್ಲ. ಏಕೆಂದರೆ ಇವರ ಪರಿಸರ ಮತ್ತು ಆಹಾರ ಪದ್ಧತಿಗಳು ಒಂದೇ ಆಗಿದ್ದವು. ಇದೇ ವಾದವನ್ನು ಮುಂದುವರಿಸುವುದಾದರೆ, ವಿಷ್ಣುವರ್ಧನರಿಗಿಂತ ತದ್ವಿರುದ್ಧ ಜೀವನ ಶೈಲಿ ಹೊಂದಿದ್ದ ಅಂಬರೀಷ್ ಅವರು, ತಮ್ಮ ಸ್ನೇಹಿತನಿಗಿಂತ ಏಳು ವರ್ಷ ಹೆಚ್ಚಿಗೆ ಬದುಕಿ ದ್ದರು! ಕೆಲವು ವಿಚಿತ್ರಗಳನ್ನು ಗಮನಿಸಿ, ಸದಾ ಓಡುತ್ತ ಕುಪ್ಪಳಿಸುವ ಮೊಲದ ಸರಾಸರಿ ಆಯುಸ್ಸು 5-7 ವರ್ಷ ಅಷ್ಟೇ. ಎಂದೂ ಓಡದ ಆಮೆ ಬದುಕು ವುದು ೧೦೦-೧೫೦ ವರ್ಷ. ಹಾಗಾದರೆ ವ್ಯಾಯಾಮಕ್ಕೂ ಆಯುಸ್ಸಿಗೂ ಸಂಬಂಧವಿಲ್ಲವೇ? ಅಂದರೆ ಎಲ್ಲ ಜೀವಿಗಳಿಗೂ ಸೀಮಿತ ಸಂಖ್ಯೆಯ ಹೃದಯದ ಬಡಿತ ಎಂಬುದು ಇದೆಯೇ? ಆ ಹೃದಯದ ಬಡಿತದ ಸಂಖ್ಯೆ ಮುಗಿದ ತಕ್ಷಣ ಸಾವು ಬರುತ್ತದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ.
ಇದಕ್ಕೆ ಸರಳ ಉತ್ತರ ಕೊಡಬೇಕಾದರೆ ಹೌದು! ಎಲ್ಲರಿಗೂ ಗರಿಷ್ಠ ಹೃದಯ ಬಡಿತದ ಮಿತಿಯಿದೆ. ಅದನ್ನ ಬದಲಿಸಲು ಬಹುಶಃ ಸಾಧ್ಯವಿಲ್ಲ. ಹಾಗಾದರೆ ವ್ಯಾಯಾಮದಿಂದ ಏನು ಪ್ರಯೋಜನ ? ಇದು ಜನರು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿರುವ ಕಾಲ. ಹಾಗೆಯೇ ಅಂತರ್ಜಾಲದ ಕಾಲವು ಹೌದು. ವ್ಯಾಯಾಮದ ಬಗ್ಗೆ ಅಂರ್ತಜಾಲದಲ್ಲಿ ಹುಡುಕಿ ನೋಡಿ. ಒಂದಕ್ಕೊಂದು ವೈಪರಿತ್ಯದ ಅಭಿಪ್ರಾಯ ಬರುವಂತಹ ಲೇಖನಗಳು, ವಿಡಿಯೋಗಳು ಯಥೇಚ್ಛವಾಗಿ ಸಿಗುತ್ತವೆ. ಕೆಲವರು ದಿನಕ್ಕೆ ಕನಿಷ್ಠವೆಂದರೆ ೧೦ ಸಾವಿರ ಹೆಜ್ಜೆಗಳನ್ನಾದರೂ ಹಾಕಬೇಕು ಎಂದರೆ, ಮತ್ತೊಬ್ಬ ವೈದ್ಯರು ಹತ್ತು ಸಾವಿರ ಹೆಜ್ಜೆಗಳ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದ ಡೇನಿಯಲ್ ಬದುಕಿದ್ದೇ ೫೮ ವರ್ಷಗಳು ಎಂದು ಕುಹಕವಾಡುತ್ತಾರೆ.
ಪ್ರಪಂಚದಾದ್ಯಂತ ಜನರು ಯೋಗದ ಬಗ್ಗೆ ಒಲವು ತೋರುತ್ತಿರುವಾಗ, ಯೋಗ ದಿನ ಸಮೀಪವಿರುವಾಗಲೇ ಮಂಗಳೂರಿನ ವೈದ್ಯರೊಬ್ಬರು ತಮ್ಮ ಹಳೆಯ ಲೇಖನಗಳನ್ನು ಬತ್ತಳಿಕೆಯಿಂದ ಹೊರ ತೆಗೆದು ವ್ಯಾಪಕವಾಗಿ ಹಂಚುತ್ತಾರೆ. ಇದರಲ್ಲಿ ಯೋಗ ದಿಂದ ಯಾವುದೇ ರೋಗ ಗುಣವಾಗುವುದಿಲ್ಲ, ಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎಂಬ ತಮ್ಮ ನಂಬಿಕೆಯನ್ನು ಹೇರಲು ತೊಡಗುತ್ತಾರೆ. ಜಿಮ್ ಕಸರತ್ತಿನ ಪ್ರಚಾರ ಎಷ್ಟಾಗಿದೆ ಎಂದರೆ, ಜಿಮ್‌ಗೆ ಹೋಗಿ ಮಾಡುವುದೂ ಮಾತ್ರ ವ್ಯಾಯಾಮ, ಬೇರೆ ಯಾವುದೂ ವ್ಯಾಯಾಮವಲ್ಲ ಎನ್ನುವ ಭಾವನೆ ಕೂಡ ಹೆಚ್ಚಾಗುತ್ತಿದೆ.
ಇತ್ತೀಚಿನ ಗೃಹಿಣಿಯರು ಮನೆಗೆಲಸವನ್ನು ವ್ಯಾಯಾಮದ ಭಾಗವಾಗಿ ಪರಿಗಣಿಸುವುದನ್ನು ಬಿಟ್ಟಿದ್ದಾರೆ. ಮನೆಗೆಲಸ ಮಾಡುವುದಕ್ಕೆ ಕೆಲಸದವರನ್ನು ಇಟ್ಟುಕೊಂಡು, ತಾವು ಜಿಮ್ಮುಗಳಲ್ಲಿ ಕಳೆಯುತ್ತಿದ್ದಾರೆ. ಗರಿಷ್ಠ ಹೃದಯ ಬಡಿತ ಸೀಮಿತವಾಗಿದ್ದರೂ, ಹೃದಯದ ಕೆಲಸದ ಮೇಲೆ ಹಲವಾರು ವಿಷಯ ಗಳು ಪ್ರಭಾವ ಬೀರುತ್ತವೆ. ಉದಾಹರಣೆಗೆ ರಕ್ತನಾಳಗಳ ಒತ್ತಡ ಸರಿಯಾಗಿದ್ದರೆ, ಹೃದಯಕ್ಕೆ ಕೆಲಸ ಸಲೀಸು. ಇಲ್ಲವಾದರೆ ಅದರ ಕಾರ್ಯ ಕ್ಷಮತೆ ಕಡಿಮೆ ಯಾಗಬಹುದು. ಅದರಂತೆ ಹೃದಯಕ್ಕೆ ಪೋಷಕಾಂಶ ಪೂರೈಸುವ ರಕ್ತನಾಳಗಳಲ್ಲಿ ಯಾವುದೇ ಅಡಚಣೆ ಇದ್ದರೆ ಹೃದಯ ತನ್ನ ಪೂರ್ಣ ಕೆಲಸಮಾಡಲು ಸಾಧ್ಯವಾಗುವುದಿಲ್ಲ.
ದೇಹದ ಎಲ್ಲ ಅಂಗಾಂಗದ ರೋಗ ರುಜಿನಗಳು ತನ್ನದೇ ರೀತಿಯಲ್ಲಿ ಹೃದಯದ ಮೇಲೆ ಪ್ರಭಾವ ಬೀರುತ್ತವೆ. ಹೃದಯ ತನ್ನ ಬಡಿತದ ಪೂರ್ಣ ಮೀಸಲು ಮುಗಿಸುವುದಕ್ಕೆ, ಈ ಎಲ್ಲ ಅಂಶಗಳ ಸಹಕಾರ ಬೇಕು. ಇಲ್ಲವಾದರೆ, ಹೃದಯದ ಪೂರ್ಣ ಬಡಿತದ ಪಾಲು ಮೀರುವ ಮುಂಚೆಯೇ, ಹೃದಯ ಕೆಲಸನಿಲ್ಲಿಸಬಹುದು. ಹೃದಯದ ಗರಿಷ್ಠ ಬಡಿತದ ಮೇಲೆ ನಮಗೆ ಯಾವುದೇ ಹಿಡಿತವಿಲ್ಲದಿದ್ದರೂ, ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವ ವಿಷಯಗಳ ಮೇಲೆ ನಮ್ಮ ಭಾಗಶಃ ನಿಯಂತ್ರಣ ಸಾಧ್ಯವಿರುವುದರಿಂದ, ಹೃದಯ ತನ್ನ ಗರಿಷ್ಠ ಕಾರ್ಯನಿರ್ವಹಣೆ ಮಾಡುವಂತೆ ಸಹಾಯ ಮಾಡಬಹುದು.
ಉದಾಹರಣೆಗೆ ರಕ್ತದ ಕೊಲೆಸ್ಟ್ರಾಲ್ ಕಡಿಮೆ ನಿಯಂತ್ರಿಸಿ, ಹೃದಯದ ರಕ್ತನಾಳಲ್ಲಿ ಅಡೆ ತಡೆ ಮೂಡದಂತೆ ಮಾಡುವುದು. ಹೃದಯ ಕೆಲಸಕ್ಕೆ ಪೂರಕ ವಾತಾವರಣ ಉಂಟುಮಾಡುವುದರಲ್ಲಿ ವ್ಯಾಯಾಮ ಬಹು ದೊಡ್ಡ ಕೊಡುಗೆ ನೀಡುತ್ತದೆ. ವ್ಯಾಯಾಮದದಿಂದ ಸ್ವಲ್ಪ ಮಟ್ಟಿನ ರಕ್ತದೊತ್ತಡ ನಿಯಂತ್ರಣ, ರಕ್ತದಲ್ಲಿ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ದಿನ ನಿತ್ಯ ವ್ಯಾಯಾಮ ಮಾಡುವವರಲ್ಲಿ ಸಕಾರಾತ್ಮಕ ಆಲೋಚನೆ ಹೆಚ್ಚಿರುತ್ತದೆ. ಜೀವನಕ್ಕೆ ಬರಿ ಹೃದಯ ಬಡಿತವಿದ್ದರೆ ಸಾಕಾಗುವುದಿಲ್ಲ. ಮಾನಸಿಕ ದೈಹಿಕ ಸಮತೋಲನ ಬೇಕು.
ಅದಕ್ಕೆ ವ್ಯಾಯಾಮದ ಒಂದು ಕೊಂಡಿ. ಹೆಚ್ಚು ಹೆಚ್ಚು ವ್ಯಾಯಾಮ ಮಾಡಿದರೆ ಹೆಚ್ಚು ಹೆಚ್ಚು ಲಾಭವಾಗುತ್ತದೆಯೇ? ಎಂಬುದು ಮತ್ತೊಂದು ಪ್ರಶ್ನೆ.ಒಂದು ಸಂಶೋಧನೆಯ ಪ್ರಕಾರ ದಿನಕ್ಕೆ ಸಾವಿರ ಹೆಜ್ಜೆ ಹಾಕಿದರೆ, ಅವಧಿ ಪೂರ್ವ ಸಾವನ್ನು ಶೇ.೨೦ ಕಡಿಮೆಮಾಡಬಹುದು ಎನ್ನುತ್ತದೆ. ಇದನ್ನೋದಿದ ಬುದ್ಧಿವಂತರು, ೧೦ಸಾವಿರ ಹೆಜ್ಜೆ ಹಾಕಿದರೆ ಶೇ.೧೦೦ ಅವಧಿ ಪೂರ್ವ ಸಾವನ್ನು ಮುಂದೂಡಬಹುದು ಎಂದುಕೊಳ್ಳಬಹುದು. ಹಾಗಾದರೆ ದಿನಕ್ಕೆ ೨೦ ಸಾವಿರ ಹೆಜ್ಜೆ ಹಾಕಿದರೆ ಆಯುಸ್ಸು ಹೆಚ್ಚಾಗ ಬೇಕಲ್ಲವೇ? ಇನ್ನೂ ಹೆಚ್ಚು ವ್ಯಾಯಾಮದಿಂದ ಚಿರಂಜೀವಿಯಾಗಬಹುದಲ್ಲವೇ? ಆದರೆ ಅದು ಹಾಗಾ ಗುವುದಿಲ್ಲ.
ಒಂದು ಮಿತಿಯಾಗಿ ವ್ಯಾಯಾಮ ಮಾಡುವುದರಿಂದ ಹೃದಯ ಮತ್ತು ಬುದ್ಧಿಗಳಿಗೂ ಅದರಿಂದ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಅತಿಯಾದರೆ ಅಮೃತವೂ ವಿಷ, ಮಿತಿಯಲ್ಲಿ ವಿಷವು ಕೂಡ ಔಷಧದಂತೆ ಕೆಲಸ ಮಾಡಬಹುದು. ಆದ್ದರಿಂದ ಒಂದು ಮಿತಿಯಾದ ವ್ಯಾಯಾಮ ಮಾಡುವವರಲ್ಲಿ ಎಲ್ಲ ಅಂಗಾಂಗಗಳ ಕಾರ್ಯಕ್ಕೆ ಪುಷ್ಟಿ ಸಿಗುತ್ತದೆ. ಆದರೆ ಅತಿಯಾದ ವ್ಯಾಯಾಮ ಮಾಡುವುದರಿಂದ ಮುಂದುವರಿದ ಪ್ರಮಾಣದಲ್ಲಿ ಉಪಯೋಗ ಕಂಡು ಬರದೆ, ವ್ಯತಿರಿಕ್ತ ದುಷ್ಪರಿಣಾಮಗಳು ಬೀಳುವ ಸಾಧ್ಯತೆ ಇದೆ. ಅತಿಯಾದ ವ್ಯಾಯಾಮ ಮಾಡಿದಾಗ ಪ್ರತಿಯೊಂದೂ ಅಂಗಾಂಗ ಗಳಿಗೂ ಸಣ್ಣ ಪ್ರಮಾಣದ ಗಾಯಗಳು ಆಗುತ್ತವೆ. ಅತಿಯಾಗಿ ಓಡುವವರಿಗೆ ಮೊಣ ಕಾಲಿನ ಸಮಸ್ಯೆ ಕಂಡು ಬರಬಹುದು.
ಹಾಗೆಯೇ ಅತಿಯಾದ ವ್ಯಾಯಾಮ ಮಾಡುವಾಗ ಹೃದಯದ ಸ್ನಾಯುಗಳಿಗೂ ಸೂಕ್ಷ್ಮ ಗಾಯಗಳು ಆಗುವ ಸಾಧ್ಯತೆ ಇದೆ. ಅತಿಯಾಗಿ ವ್ಯಾಯಾಮ ಮಾಡಿದ ನಂತರ ರಕ್ತದಲ್ಲಿ ಟ್ರೋಪೆನಿನ್ ಎಂಬ ಕೆಮಿಕಲ್ ಇರುವುದು ಸ್ವಲ್ಪ ಹೆಚ್ಚಾಗುವುದು ಕಂಡುಬಂದಿದೆ. ಸಾಮಾನ್ಯವಾಗಿ ಹೃದಯಘಾತಸಂಬಂಧಗಳಲ್ಲಿ ಹೆಚ್ಚಾಗಿ ರಕ್ತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸದ್ಯದ ಸಂಶೋಧನೆಗಳಿಂದ ತಿಳಿದು ಬಂದಿರುವುದ್ದೇನೆಂದರೆ, ದಿನಕ್ಕೆ 30 ನಿಮಿಷದ ವ್ಯಾಯಾಮದ ಅವಶ್ಯಕತೆ ಇದೆ. ತೂಕ ಕಳೆದುಕೊಳ್ಳುವ, ಇಂಗಿತ ಇದ್ದವರು ಅಥವಾ ಇತರೆ ವಿಶೇಷ ಉದ್ದೇಶ ಉಳ್ಳವರಿಗೆ ಹೆಚ್ಚಿನ ವ್ಯಾಯಾಮಮಾಡುವ ಅವ್ಯಶ್ಯಕತೆ ಇದೆ.
ಕೆನಡಾ ಸರಕಾರ ಜನರಲ್ಲಿ ವ್ಯಾಮಾಮದ ಬಗ್ಗೆ ಜಾಗೃತಿ ಮೂಡಿಸಲು ಒಂದು ಜಾಹೀರಾತು ತಯಾರಿಸಿದ್ದರು. ಅದರಲ್ಲಿ ಒಂದೇ ಓರಿಗೆಯ ಇಬ್ಬರು ವೃದ್ಧರನ್ನು ತೋರಿಸಿದ್ದರು. ಅದರಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡಿದ ವೃದ್ಧರು, ಲವಲವಿಕೆಯಿಂದ ಮೊಮ್ಮಕ್ಕಳ ಜತೆ ಆಟವಾಡುತ್ತ ಕಾಲ ಕಳೆಯುತ್ತಿದ್ದರೆ, ನಿಯಮಿತ ವ್ಯಾಯಾಮ ಮಾಡದ ವೃದ್ಧರು ಹಾಸಿಗೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ದಿನಗಳನ್ನು ಕಳೆಯುತ್ತಿರುವುದು ಕಂಡುಬಂದಿತ್ತು. ಜಾಹೀರಾತಿನ ಕೊನೆಯಲ್ಲಿ ನಿಮಗೆ ಯಾವುದೂ ಬೇಕೋ ಅದನ್ನು ಆಯ್ಕೆಮಾಡಿ ಎಂಬ ಸಂದೇಶವಿತ್ತು. ಇದು ವ್ಯಾಯಾಮದ ಎಲ್ಲ ಸಾರಾಂಶವನ್ನು ತೋರಿದಂತೆ ಇತ್ತು.
ವ್ಯಾಯಾಮದ ಮೂಲ ಉದ್ದೇಶ ಕೊನೆಗಳಿಗೆಯವರೆಗೂ, ದೈನಂದಿನ ಚಟುವಟಿಕೆಗಳಿಗೆ ಯಾರನ್ನೂ ಅವಲಂಬಿಸದೇ ಜೀವಿಸುವುದು. ವ್ಯಾಯಾಮದ ಮಿಕ್ಕ ಎಲ್ಲ ಲಾಭಗಳು ಬೋನಸ್. ಆ ಬೋನಸ್ ಕೆಲವರಿಗೆ ಸಿಗಬಹುದು, ಸಿಗದೇ ಇರಬಹುದು. ಆದರೆ ಮೂಲ ಲಾಭ ಬಹುತೇಕರಿಗೆ ಲಭ್ಯ. ಸೌರವ್ ಗಂಗೂಲಿಯವರು ಹೃದಯಾಘಾತಕ್ಕೆ ಒಳ ದಾಗ, ಕಠಿಣ ವ್ಯಾಯಾಮ ಮಾಡಿ ಏನು ಪ್ರಯೋಜನ ಎಂದು ಜನರು ಪ್ರಶ್ನೆಗಳನ್ನು ಕೇಳಿದ್ದರು. ಸೌರವ್ಗಂಗೂಲಿಯವರಿಗಾದ ಹೃದಯಾಘಾತ, ವ್ಯಾಯಾಮ ಮಾಡದ ವ್ಯಕ್ತಿಗೆ ಆಗಿದ್ದರೆ ಬಹುಶಃ ಅವರು ಚೇತರಿಸಿಕೊಳ್ಳುತ್ತಿರಲಿಲ್ಲ. ಆದರೆ ಗಂಗೂಲಿಯವರಿಗೆ ಅವರ ನಿಯಮಿತ ವ್ಯಾಯಾಮದ ಜೀವನಶೈಲಿಯಿಂದ, ಹೃದಯಾಘಾತದ ನಂತರವೂ ಸಾಮಾನ್ಯವಾಗಿ ಜೀವಿಸಲು ಸಾಧ್ಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇನ್ನು ಜಿಮ್‌ನಲ್ಲಿನ ಕಸರತ್ತು ಮೇಲೋ, ಯೋಗ ಮೇಲೋ ಎಂಬ ಪ್ರಶ್ನೆ. ಇದಕ್ಕೆ ಸರಳ ಉತ್ತರ ಬೇಕಾದರೆ ವ್ಯಾಯಾಮ ಯಾವ ರೂಪದದರೂ ಸರಿ ಎನ್ನಬಹುದು. ಆದರೆ ಯಾವುದೇ ಉಪಕರಣವಿಲ್ಲದೆ, ಹಳ್ಳಿಯಾಗಲಿ ಅಥವ ಪಟ್ಟಣವಾಗಲೀ ಭೇದವಿಲ್ಲದೆ, ಆಬಾಲವೃದ್ಧರು, ಮುದುಕ-ಮೋಟರು ಮಾಡುವಂಥ ವ್ಯಾಯಾಮ ವೆಂದರೆ ಅದು ಯೋಗ. ಈ ಅಂಶ ಜಿಮ್ಮಿಗಿಲ್ಲ ಎಂಬುದು ಸತ್ಯ. ಈಗ ಮತ್ತೊಮ್ಮೆ ಮೊದಲ ಪ್ಯಾರವನ್ನು ಮತ್ತೊಮ್ಮೆಓದಿ. ಮೊದಲು ಗಮನಿಸದ ಹೊಸ ಅರ್ಥಗಳು ನಿಮ್ಮಲ್ಲಿ ಸಿಗುತ್ತವೆ.
ಕೊನೆಮಾತು:ಹಣೆಬರಹವನ್ನು ಬರೆಯಬೇಕಾಗಿದ್ದನ್ನು ಬರೆದು ಮುಗಿಸಿದ ನಂತರ, ಬ್ರಹ್ಮಕೊನೆಯ ಪುಟಗಳನ್ನು ಹಾಗೆಯೆ ಖಾಲಿ ಬಿಟ್ಟಿರುತ್ತಾನಂತೆ. ಖಾಲಿಜಾಗದಲ್ಲಿ ಏನಾದರೂ ಬರೆದುಕೊಳ್ಳಲಿ ಎಂಬುದೇ ಅದರ ಉದ್ದೇಶ. ಅದರಲ್ಲಿ ನಮಗಿಷ್ಟವಾದುದನ್ನು ಬರೆದುಕೊಳ್ಳಬಹುದು. ಆದರೆ ಅದಕ್ಕೆ ಮನುಷ್ಯ ಪ್ರಯತ್ನ ಬೇಕು.