ಆಕೆಯ ಕಾಲುಗಳಿಗೆ ಮತ್ತಷ್ಟು ಕಸುವು ತುಂಬೋಣ
ತನ್ನಿಮಿತ್ತ
ಶ್ರೀನಿವಾಸಮೂರ್ತಿ ಎನ್.ಸುಂಡ್ರಹಳ್ಳಿ
ಅದು ೧೯೧೦ ರ ಆಗಸ್ಟ್ ತಿಂಗಳು. ಮಹಿಳೆಯರ ಸಾರ್ವತ್ರಿಕ ಮತದಾನ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿಅಂತರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನವೊಂದು ಡೆನ್ಮಾರ್ಕ್‌ನ ಕೂಪನ್ ಹೇಗ್‌ನಲ್ಲಿ ಆಯೋಜನೆಗೊಂಡಿತ್ತು. ಜರ್ಮನಿಯ ಸೋಷಿಯಲ್ಡೆಮಾಕ್ರಟಿಕ್, ವುಮೆನ್ಸ್ ಲೇಬರ್ ಲೀಗ್, ಫೆಡರೇಷನ್ ಆಫ್ ಸೋಶಿಯಲಿಸ್ಟ್ವುಮೆನ್ಸ್ ಕ್ಲಬ್ ಸೇರಿದಂತೆ ೧೭ ದೇಶಗಳ ೧೦೦ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಅಂತರಾಷ್ಟ್ರೀಯ ಮಹಿಳಾ ಸೆಕ್ರೇಟರಿಯೇಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾಜೆಟ್‌ಕಿನ್ ವಹಿಸಿದ್ದರು.
ಇವರು ‘ಅಂತಾರಾಷ್ಟ್ರೀಯ ಮಹಿಳಾ ದಿನ’ವನ್ನು ಆಚರಿಸಬೇಕೆಂದು ಕರೆಕೊಟ್ಟರು. ಆ ಪ್ರಕಾರ ೧೯೧೧ ರಲ್ಲಿ ಮಹಿಳೆಯರ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿಗೆ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಅಂದಿನಿಂದ ಬೇರೆ ಬೇರೆ ದೇಶಗಳು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾ ರಂಭಿಸಿದವು. ಮೊದಲಿಗೆ ಮಾರ್ಚ್ ೧೯ನ್ನು ಆಸ್ಟ್ರೇಲಿಯಾ, ಜರ್ಮನಿ, ಡೆನ್ಮಾರ್ಕ್, ಸ್ವಿಟ್ಜರ್ಲ್ಯಾಂಡ್ ದೇಶಗಳು ಗುರ್ತಿಸಿದವು.
ಆ ನಂತರ ಮೊದಲ ಮಹಾಯುದ್ದದ ಸಂದರ್ಭ ಶಾಂತಿ ಚಳುವಳಿಯ ಅಂಗವಾಗಿ ಯುದ್ಧ ನೀತಿಯನ್ನು ವಿರೋಧಿಸಿ ರಷ್ಯಾದ ಮಹಿಳೆಯರು ಫೆಬ್ರವರಿ ಕೊನೆಯ ಭಾನುವಾರದಂದು ವಿಶ್ವ ಮಹಿಳಾ ದಿನವನ್ನು ಆಚರಿಸಿ ಗಮನ ಸೆಳೆದರು. ಇದು ಗ್ರೆಗೋರಿಯನ್ ಕ್ಯಾಲೆಂಡರ್‌ನ ಪ್ರಕಾರ ಮಾರ್ಚ್ ೮ ಆಗಿತ್ತು. ಹಾಗಾಗಿ ಅಂದಿನಿಂದ ಮಾರ್ಚ್ ೮ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಕ್ಲಾರಾಜೆಟ್‌ಕಿನ್‌ರ ಹೋರಾಟದ ಫಲ ಮಹಿಳೆಯರಿಗೊಂದು ದಿನ ಸಿಗುವಂತಾಯಿತು. ಮಾರ್ಚ್ ೮ಕ್ಕೆ ಎಲ್ಲರ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಮುಖಗಳೇ ರಾರಾಜಿಸುತ್ತವೆ. ಮಹಿಳಾ ಪರ ಸ್ಟೇಟಸ್ ಗಳು, ಶುಭಾಷಯಗಳು ನಿರಂತರವಾಗಿ ಹರಿದಾಡುತ್ತವೆ.
ಆ ನಂತರ ಮುಗಿಯಿತು ಎಲ್ಲವೂ ಬದಲಾಗುತ್ತವೆ. ಮಹಿಳೆ ಅದೇ ದಿನ ನಿತ್ಯದ ಬದುಕಿನ ಬಂಡಿಗೆ ಕೊರಳೊಡ್ಡಿ ಬಿಡುತ್ತಾಳೆ. ಅಡುಗೆ ತಯಾರು ಮಾಡುತ್ತಲೇ ಗಂಡ ಮಕ್ಕಳೆನ್ನೆ ಬ್ಬಿಸು, ಮಕ್ಕಳಿಗೆ ಸ್ನಾನ ಮಾಡಿಸು, ತಿಂಡಿ ತನ್ನಿಸು ನಂತರ ಶಾಲೆಗೆ ಓಡಿಸು. ತಾನೂ ಲಗು ಬಗೆಯಲ್ಲಿ ತಿಂದೋ ತಿನ್ನ ದೆಯೋ ಅಥವಾ ಕಚೇರಿಯಲ್ಲಿ ತಿಂದರಾಯಿತೆಂದು ಬಾಕ್ಸಿಗೊಂದಿಷ್ಟು ಹಾಕಿಕೊಂಡು ಮನೆಯಿಂದ ಹೊರ ನಡೆಯುತ್ತಾಳೆ. ಆಕೆಯ ತಾಳ್ಮೆ, ಸಹನೆ ಮತ್ತು ಆಕೆಯ ಶಕ್ತಿಗೆ ತಲೆ ಬಾಗಲೇಬೇಕು. “ಕಾರ್ಯೇಷು ದಾಸೀ ಕರಣೇಷು ಮಂತ್ರೀ, ಭೋಜ್ಯೇಷು ಮಾತಾ, ಶಯನೇಷು ರಂಭಾ/ ರೂಪೇಷು ಲಕ್ಷ್ಮೀ, ಕ್ಷಮಯಾ ಧರಿತ್ರೀ, ಷಟ್‌ಧರ್ಮಯುಕ್ತಾ ಕುಲಧರ್ಮ ಪತ್ನೀ” ಎಂಬ ಪ್ರಾಚೀನ ಉಕ್ತಿಯಂತೆ ಆಕೆ ಮನೆಯ ಒಳಗಾಗಲೀ, ಹೊರಗಾಗಲೀ ಆಕೆಗೆ ಆಕೆಯೇಸಾಟಿ.
ಯಾವುದೇ ರಂಗವಾದರೂ ಸರಿ, ಎಂತಹುದೇ ಹೊಣೆಗಾರಿಕೆಯಾದರೂ ಸರಿ ನಿಭಾಯಿಸಬಲ್ಲಳು. ಒಂದು ಕಾಲಕ್ಕೆ ಒಂದು ಮಗುವನ್ನು ಹಡೆದರೆ ಸಾಕು ಅಲ್ಲಿಗೆ ಬದುಕು ಮುಗಿಯಿತು ಎಂದು ಶಯನಗೃಹ, ಅಡುಗೆ ಕೋಣೆ, ಗಂಡ ಮಕ್ಕಳ ಹಾರೈಕೆ ಇವಿಷ್ಟಕ್ಕೇ ಸೀಮಿತವಾಗಿದ್ದವಳು ಇಂದು ಈ ಎಲ್ಲದರ ಜತೆಗೆ ಹೊರ ಜಗತ್ತಿನ ಎಲ್ಲ ರಂಗಗಳಲ್ಲಿಯೂ ತನ್ನ ಹೆಜ್ಜೆ ಗುರುತುಗಳನ್ನು ಬಲವಾಗಿ ಮೂಡಿಸಿದ್ದಾಳೆ. ಶ್ವೇತಾ ಚೌಹಾಣ್ ಎಂಬ ಹೆಣ್ಣು ಮಗಳು ತನ್ನ ೪೫ ನೇ ವಯಸ್ಸಿನಲ್ಲಿ ದೆಹಲಿಯ ಪ್ರಥಮ ಮಹಿಳಾ ಡಿಸಿಪಿಯಾಗಿ ನೇಮಕಗೊಂಡಿದ್ದಾಳೆ.
ನವಜೋತ್ ಕೌರ್ ಎಂಬ ಕುಸ್ತಿ ಪಟು ಏಷ್ಯಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಪಡೆದು ಇತಿಹಾಸ ನಿರ್ಮಿಸಿದ್ದಾಳೆ. ಭಾರತದ ಇತಿಹಾಸದಲ್ಲಿಯೇ ಅವನಿ ಚತುರ್ವೇದಿ ಎಂಬ ಮಹಿಳಾ ಪೈಲಟ್ ಯುದ್ಧ ವಿಮಾನವನ್ನು ಚಲಾಯಿಸುವ ಮೂಲಕ ಭಾರತದ ಈ ಶತಮಾನಕ್ಕೆ ಮಾದರಿಯಾಗಿದ್ದಾಳೆ. ೫೭ ವರ್ಷದ ರೇಣು ಸಿಂ ಎಂಬ ಭಾರತದ ಏಕೈಕ ಮಹಿಳೆ ಲಂಡನ್ ಎಡಿನ್ ಬರ್ಗ್ – ಲಂಡನ್ ೨೦೨೨ ಅಂತ ರಾಷ್ಟ್ರೀಯ ಸೈಕ್ಲಿಂಗ್‌ನಲ್ಲಿ ೧೫೫೦ ಕಿಮೀ ಗುರಿಯನ್ನು ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.
ಏರ್ ಇಂಡಿಯಾದ ಹಿರಿಯ ಪೈಲಟ್ ಕ್ಯಾಪ್ಟನ್ ಜೋಯಾ ಅಗರ್ವಾಲ್ ಉತ್ತರ ಧೃವದ ಮೇಲೆ ೧೬೦೦೦ ಕಿ.ಮೀ ದೂರವನ್ನು ಕ್ರಮಿಸುವ ಮೂಲಕ ಉತ್ತರ ಧೃವದ ಮೇಲೆ ಹಾರಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾಳೆ. ಕೋಲಾರ ಜಿಲ್ಲೆಯ ಅಶ್ವಿನಿ ಎಂಬುವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ವಿಶೇಷ ವರಿದಿಗಾರರಾಗಿ ನೇಮಕಗೊಳ್ಳುವ ಮೂಲಕ, ಈ ಹುದ್ದೆಗೆ ನೇಮಕಗೊಂಡಭಾರತೀಯ ಮತ್ತು ಏಷ್ಯಾದ ಮೊದಲ ಮಹಿಳೆ ಎಂಬಹೆಗ್ಗಳಿಕೆಗೆ ಭಾಜನಾರಾಗಿದ್ದಾರೆ. ಹೀಗೆ ಮಹಿಳೆಯ ಮೈಲುಗಲ್ಲುಗಳು ಸಾವಿರಾರು ಎದುರಾಗುತ್ತವೆ.
ಸಂಸಾರ, ಮಕ್ಕಳು, ಗಂಡ, ಹೊರಗಿನ ಕೆಲಸ ಹೀಗೆ ಹೊಣೆಗಾರಿಕೆಗಳನ್ನು ನಿಭಾಯಿಸುವ ಈ ರೀತಿಯ ಹೆಣ್ಣು ಮಕ್ಕಳನ್ನು ಕಂಡಾಗಲೆಲ್ಲಾ ಎದೆಯು ಬ್ಬಲೇಬೇಕು. ಹೆಣ್ಣಿನ ವಿಷಯದಲ್ಲಿ ವಿಶ್ವದಾದ್ಯಂತ ಇಂತಹ ಎಷ್ಟೋ ನಿದರ್ಶನಗಳಿವೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಆಕೆ ವಿಕ್ರಮ ಮೆರೆಯುತ್ತಿದ್ದಾಳೆ. ಹಾಗೆಂದ ಮಾತ್ರಕ್ಕೆ ಅಕೆ ಮನೆಯ ಹೊರಗೆ ಮತ್ತು ಒಳಗೆ ಸುರಕ್ಷಿತವಾಗಿದ್ದಾಳಾ? ಎಂದರೆ ಉಹೂಂ, ಶತಮಾನಗಳಿಂದಲೂ ಆಕೆ ಮಾನಸಿಕ, ದೈಹಿಕ, ಲೈಂಗಿಕ ದೌರ್ಜನ್ಯಗಳಿಗೊಳಗಾಗುತ್ತಲೇ ಬಂದಿದ್ದಾಳೆ.
ಜಗತ್ತಿನ ಎಲ್ಲಾ ಸಮಾಜಗಳೂ ಪುರುಷ ಪ್ರಧಾನ ಸಮಾಜಗಳೇ ಆಗಿದ್ದು ಎಲ್ಲೆಡೆಯೂ ಆಕೆಗೆ ಎರಡನೇಯ ದರ್ಜೆಯ ಸ್ಥಾನವನ್ನೇ ನೀಡಲಾಗಿದೆ.ಮಹಿಳಾ ದಿನಾಚರಣೆಯನ್ನು ಮಾಡುತ್ತ ಆಕೆ ಪೂಜ್ಯ ನೀಯ, ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದು ಹೇಳುತ್ತಲೇ ಆಕೆಯ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ೨೦೧೬ರಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ೧,೦೬,೯೫೮ ಪ್ರಕರಣಗಳು ದಾಖಲಾಗಿವೆ. ೨೦೧೯ ರಲ್ಲಿ ಪೋಕ್ಸೋ ಕಾಯಿದೆಯಡಿ ೪೮೦೪೩ ಪ್ರಕರಣಗಳು ದಾಖಲಿಸಲ್ಪಟ್ಟಿವೆ. ಕೇಂದ್ರ ಸರ್ಕಾರದ ಇವೇ ಅಂಕಿ ಅಂಶಗಳ ಪ್ರಕಾರ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದೆ. ಶೇ. ೫೩.೨೨ರಷ್ಟು ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ.
ಇಲ್ಲಿ ಬಹುತೇಕ ಪ್ರಕರಣಗಳು ಪರಿಚಯದವರಿಂದಲೇ ಆಗುತ್ತಿರುವುದು ಗಮನಾರ್ಹ. ಭಾರತದಲ್ಲಿ ಪ್ರತಿ ೭ ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಗೃಹ ಖಾತೆ ಪೊಲೀಸ್ ರೀಸರ್ಚ್ ಬ್ಯೂರೋ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಡಿಫೆನ್ಸ್ ಆಧರಿಸಿದ ಮಾಹಿತಿಯ ಪ್ರಕಾರ ಪ್ರತಿವರ್ಷ ಭಾರತದಲ್ಲಿ ಸರಾಸರಿ ೧೫ಸಾವಿರಕ್ಕಿಂತ ಹೆಚ್ಚಿನ ಅತ್ಯಾಚಾರ, ೪೦ ಸಾವಿರಕ್ಕಿಂತ ಹೆಚ್ಚಿನ ಮಹಿಳಾ ಪೀಡನಾ ಪ್ರಕರಣ ಅಲ್ಲದೆ ವರದಕ್ಷಿಣೆ ಕಿರುಕುಳಗಳೂ ಕೂಡ ಅವ್ಯಾಹತವಾಗಿ ನಡೆಯುತ್ತಿವೆ ಎನ್ನುತ್ತವೆ ವರದಿಗಳು.
ನಿತ್ಯ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ಆಸಿಡ್ ದಾಳಿ, ವೇಶ್ಯಾವಾಟಿಕೆ ಈ ಎಲ್ಲವುಗಳನ್ನು ಗಮನಿಸಿದರೆ ಮಹಿಳಾ ದಿನಾಚರಣೆಗೆ ಅರ್ಥವಿದೆಯೇ? ಎಂಬ ಪ್ರಶ್ನೆ ಮನಸ್ಸಿಗೆ ಇರಿಯದೇ ಇರುವುದಿಲ್ಲ. ಹೆಣ್ಣು ಗಂಡಿನಷ್ಟೇ ಸರಿ ಸಮಾನ. ಎಲ್ಲಾ ಕ್ಷೇತ್ರಗಳಲ್ಲಿಯೂ ಗಂಡಿಗೆ ಸೆಡ್ಡು ಹೊಡೆಯಬಲ್ಲೆ ಎಂಬುದನ್ನು ನಿರೂಪಿಸಿದ್ದರೂ ಕೂಡ ಆಕೆಯ ಮೇಲಿನ ಶೋಷಣೆ, ಲಿಂಗ ತಾರತಮ್ಯ ನಿಂತಿಲ್ಲ. ಎಲ್ಲಿ ನಾರಿ ಪೂಜಿಸ ಲ್ಪಡುತ್ತಾಳೆಯೋ ಅಲ್ಲಿ ದೇವತೆಗಳು ವಾಸಿಸುತ್ತವೆ ಎಂಬುದು ಕೇವಲ ಶ್ಲೋಕವಾಗಿಯಷ್ಟೇ ಉಳಿಯದೆ ಆಕೆಗೂ ಗೌರವ ಹಾಗೂ ಸಮಾನ ಸ್ಥಾನ ಮಾನನೀಡುವುದರೊಂದಿಗೆ ಆಕೆಯನ್ನು ನಿಜವಾಗಿಯೂ ಪೂಜ್ಯ ನೀಯವಾಗಿ ಕಾಣುವಂತಹ ಮನಃಸ್ಥಿತಿಯನ್ನು ಪುರುಷ ಸಮಾಜ ಹೊಂದಬೇಕು.
ಆಕೆಯನ್ನು ಈಗ ಬಲವಂತವಾಗಿ ಇರಿಸಲಾಗಿರುವ ಎರಡನೇ ದರ್ಜೆಯ ಸ್ಥಾನದಿಂದ ಸಮಸ್ಥಾನದಲ್ಲಿಟ್ಟು ಗೌರವ ನೀಡಬೇಕು. ‘: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ’ ಎಂಬುದು ಈ ವರ್ಷದ ಮಹಿಳಾ ದಿನದ ಘೋಷ ವಾಕ್ಯ. ಇದರಂತೆ ಲಿಂಗ ಸಮಾನತೆಯೊಂದಿಗೆ ಆಕೆಯ ಸಬಲೀಕರಣ ಕ್ಕಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ ಹಾಗೂ ಶಿಕ್ಷಣ ನೀಡುವ ಮನಸ್ಸಿನೊಂದಿಗೆ ಈವರ್ಷದ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿಸುವುದಾಗಿದೆ. ಆಕೆಯನ್ನೂ ಕೂಡ ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಷ್ಟೇ ಸಮಾನವಾಗಿ ಕಾಣುವುದರೊಂದಿಗೆ ಆಕೆಯ ಓಡುವ ಕಾಲುಗಳಿಗೆ ಇನ್ನಷ್ಟು ಕಸುವು ತುಂಬೋಣ ಎನ್ನುತ್ತಾ ಹ್ಯಾಪಿ ವುಮೆನ್ಸ್ ಡೇ.