ರಷ್ಯಾ ಯುದ್ದ ಪುನರುತ್ಥಾನಕ್ಕೆ ಚೀನಾ ಶಸ್ತ್ರ !
ವಿಶ್ವ ವಿಹಾರ
ಗಿರೀಶ್ ಲಿಂಗಣ್ಣ
ಹಲವಾರು ವರ್ಷಗಳ ಕಾಲ ಚೀನಾಕ್ಕೆ ರಷ್ಯಾ ಆಯುಧಗಳನ್ನು ಪೂರೈಸುತ್ತ ಬಂದಿತ್ತು. ೨೦೦೧ರಿಂದ ೨೦೧೦ರ ಅವಧಿಯಲ್ಲಿ ಪ್ರತಿ ವರ್ಷವೂ ೨ ಬಿಲಿಯನ್ ಡಾಲರ್ ಮೌಲ್ಯದ ಆಯುಧಗಳನ್ನು ಚೀನಾಗೆ ಒದಗಿಲಾಗಿತ್ತು. ೨೦೧೫ರಲ್ಲಿ ೭ ಬಿಲಿಯನ್ ಡಾಲರ್‌ಗಳಷ್ಟು ಬೃಹತ್ ಪ್ರಮಾಣದಆಯುಧ ಗಳನ್ನು ಪೂರೈಸಿತ್ತು. ಆದರೆ ಈಗ ರಷ್ಯಾಗೆ ಈ ಪರಿಸ್ಥಿತಿ ತಿರುವು ಮುರುವಾಗಿದೆ.
1500 ಟ್ಯಾಂಕ್‌ಗಳೂ ಸೇರಿದಂತೆ, ರಷ್ಯಾ ತನ್ನ ವೈಫಲ್ಯ ಎದುರಿಸುತ್ತಿರುವ ಉಕ್ರೇನ್ ಯುದ್ಧದಲ್ಲಿ ೯,೪೦೦ ಆಯುಧ ಗಳನ್ನು ಕಳೆದುಕೊಂಡಿದೆ. ಹೀಗಾಗಿ ಅದು ಪ್ರಸ್ತುತ ಅಪಾರ ಪ್ರಮಾಣದಲ್ಲಿ ಆಯುಧ ಕೊರತೆಯನ್ನು ಎದುರಿಸು ತ್ತಿದೆ. ಅಮೆರಿಕದ ಮಾಹಿತಿಗಳ ಪ್ರಕಾರ, ಚೀನಾ ಇನ್ನೂ ತಾನು ರಷ್ಯಾಗೆ ಆಯುಧ ಪೂರೈಸಬೇಕೇ ಬೇಡವೇ ಎಂದು ಆಲೋಚಿಸುತ್ತಿದೆ. ಒಂದು ವೇಳೆ ಚೀನಾ ಏನಾದರೂ ಆಯುಧಗಳನ್ನು ಪೂರೈಸಿದರೆ, ಅದು ಯುದ್ಧದ ಫಲಿತಾಂಶ ವನ್ನು ಬದಲಾಯಿಸಬಲ್ಲದು. ಆದರೆ, ಅಮೆರಿಕ ಮತ್ತು ಯುರೋಪ್ ಜತೆ ಚೀನಾದ ಸಂಬಂಧ ಧಕ್ಕೆಗೀಡಾಗುತ್ತದೆ.
ಯುದ್ಧ ಆರಂಭಗೊಂಡ ಬಳಿಕ, ರಷ್ಯಾ ಹಲವು ಬಾರಿ ಚೀನಾದ ಬಳಿ ಆಯುಧ ಪೂರೈಸುವಂತೆ ಕೋರಿಕೊಂಡಿತ್ತು. ಆದರೆ ಚೀನಾ ರಷ್ಯಾಗೆ ಮಾರಕ ಆಯುಧಗಳನ್ನು ಪೂರೈಸಲು ತಿರಸ್ಕರಿಸಿ, ಕೇವಲ ಮಾರಕವಲ್ಲದ ಆಯುಧಗಳಾದ ಹೆಲ್ಮೆಟ್‌ಗಳು ಹಾಗೂ ವಿಮಾನಗಳ ಬಿಡಿಭಾಗಗಳನ್ನು ಮಾತ್ರವೇ ಪೂರೈಸಿದೆ. ರಷ್ಯಾದ ವಿಚಾರವಾಗಿ ಚೀನಾದ ಉದ್ದೇಶಗಳೇನು ಎನ್ನುವುದನ್ನು ಅಮೆರಿಕದ ಅಧಿಕಾರಿಗಳು ಇನ್ನೂ ಬಯಲು ಮಾಡಿಲ್ಲ. ಆದರೆ, ಜರ್ಮನಿಯ ಮಾಧ್ಯಮಗಳ ಪ್ರಕಾರ, ರಷ್ಯನ್ ಸೇನೆ ಮತ್ತು ಚೀನಾದ ಕ್ಸಿಯಾನ್ ಬಿಂಗೋ ಇಂಟಲಿಜೆಂಟ್ ಏವಿಯೇಷನ್ ಟೆಕ್ನಾಲಜಿ ಸಂಸ್ಥೆಗಳು 100 ದಾಳಿ ಡ್ರೋನ್‌ಗಳ ಖರೀದಿಯ ಕುರಿತು ಚರ್ಚೆ ನಡೆಸುತ್ತಿವೆ. ಅಕ್ಟೋಬರ್ ತಿಂಗಳಲ್ಲಿ ರಷ್ಯನ್ ಸೇನೆ ಈ ಡ್ರೋನ್‌ಗಳನ್ನು ಮುಂಚೂಣಿಯಲ್ಲಿ ಬಳಸುತ್ತ, ಉಕ್ರೇನಿನ ವಿದ್ಯುತ್ ಜಾಲದ ಮೇಲೆ ನಿಯಮಿತವಾಗಿ ದಾಳಿ ನಡೆಸುತ್ತಿತ್ತು.
ಜರ್ಮನ್ ಮಾಧ್ಯಮಗಳ ವರದಿಯ ಅನ್ವಯ, ಅಮೆರಿಕದ ಅಧಿಕಾರಿಗಳು, ಚೀನಾ ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಹೆಚ್ಚು ಮಾರಕ ಆಯುಧ ಗಳನ್ನು, ಶೆಲ್ ಗಳನ್ನು ಪೂರೈಸುವ ಕುರಿತು ಆಲೋಚಿಸುತ್ತಿದೆ ಎಂದಿದ್ದರು. ಉಕ್ರೇನ್ ಮತ್ತು ರಷ್ಯಾಗಳು ತಮ್ಮ ಆರ್ಟಿಲರಿಯಲ್ಲಿ ಸೋವಿಯತ್ ಕ್ಯಾಲಿಬರ್ 122ಎಂಎಂ ಹಾಗೂ ೧೫೨ ಎಂಎಂ ಶೆಲ್‌ಗಳನ್ನು ಬಳಸುತ್ತಿವೆ. ಅವುಗಳನ್ನು ಜಗತ್ತಿನ ನಾನಾ ರಾಷ್ಟ್ರಗಳಿಂದ ಪಡೆದುಕೊಳ್ಳುತ್ತಿವೆ. ಆದರೆ ರಷ್ಯಾ ಈಗ ಆಯುಧಗಳನ್ನು ಪಡೆಯಲು ಮಿತ್ರರಾಷ್ಟ್ರಗಳ ಕೊರತೆ ಎದುರಿಸುತ್ತಿದೆ. ರಷ್ಯಾ ಬೆಲಾರಸ್‌ನ ಆಯುಧಾಗಾರವನ್ನು ಖಾಲಿಯಾಗಿಸಿದ್ದು, ತಮ್ಮ ಆಯುಧಗಳು ಖಾಲಿಯಾಗಬಹುದು ಎಂದು ಗಾಬರಿಯಾಗಿರುವ ಉತ್ತರ ಕೊರಿಯಾ ಸಣ್ಣ ಪ್ರಮಾಣದಲ್ಲಷ್ಟೇ ರಷ್ಯಾಗೆ ಆಯುಧ ಪೂರೈಸಿದೆ. ಈವಿಚಾರದಲ್ಲಿ ಇರಾನ್ ಸಹ ರಷ್ಯಾಗೆ ಹೆಚ್ಚಿನ ಸಹಕಾರ ನೀಡಲು ಸಾಧ್ಯವಾಗಿಲ್ಲ.
ಪೆಂಟಗನ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯ ಮಾಜಿ ಅಧಿಕಾರಿ ಲೋನೀ ಹೆನ್ಲಿ ಅವರ ಪ್ರಕಾರ, ಚೀನಾದ ಬಳಿ ರಷ್ಯಾದ ಆಯುಧಗಳಿಗೆ ಸರಿ ಹೊಂದುವ ಶೆಲ್‌ಗಳಿವೆ. ಆದರೆ ಅದರ ಗುಣಮಟ್ಟ ಮತ್ತು ಸಾಮರ್ಥ್ಯ ಹಾಗೂ ಪ್ರಮಾಣದ ಕುರಿತು ಮಾಹಿತಿ ಲಭ್ಯವಿಲ್ಲ. ಆದರೆ ಈ ಶೆಲ್ ಗಳು ಕೊರತೆ ಎದುರಿಸು ತ್ತಿರುವ ರಷ್ಯಾಗೆ ನೆರವಾಗಬಲ್ಲವು. ಯುದ್ಧಗಳಲ್ಲಿ ನಿರಂತರತೆ ಅತ್ಯಂತ ಮುಖ್ಯವಾಗಿದ್ದು, ಸತತ ಶೆಲ್ ದಾಳಿಗಳು ಇಂತಹ ಪರಿಸ್ಥಿತಿಯಲ್ಲಿ ಮೇಲುಗೈ ಒದಗಿಸಬಲ್ಲವು. ರಷ್ಯಾ ಮತ್ತು ಉಕ್ರೇನ್ ಎರಡೂ ರಾಷ್ಟ್ರಗಳ ರಕ್ಷಣಾ ಉದ್ಯಮಗಳೂ ಉತ್ಪಾದನೆ ಹೆಚ್ಚಿಸುವಲ್ಲಿ ಕಷ್ಟ ಎದುರಿಸುತ್ತಿವೆ.
ಆಯುಧ ರಫ್ತಿನ ವಿಚಾರದಲ್ಲಿ, ಚೀನಾ ಮಾರುಕಟ್ಟೆ ಪಾರಮ್ಯ ಹೊಂದಿದೆ. ಪ್ರಸ್ತುತ ಚೀನಾ ಜಗತ್ತಿನ ನಾಲ್ಕನೇ ಅತಿದೊಡ್ಡ ಆಯುಧ ರಫ್ತುದಾರ ರಾಷ್ಟ್ರವಾಗಿದ್ದು, ಸ್ಟಾಕ್ ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನ ಮೊದಲ ನೂರು ಆಯುಧ ಕಂಪನಿಗಳ ಪಟ್ಟಿಯಲ್ಲಿ ಚೀನಾದ ಎಂಟು ಕಂಪನಿಗಳು ಸ್ಥಾನ ಪಡೆದಿವೆ. ಅವುಗಳಲ್ಲಿ ಏಳು ಕಂಪನಿಗಳು ಮೊದಲ ಇಪ್ಪತ್ತು ಸ್ಥಾನಗಳಲ್ಲಿದ್ದು, ಕೇವಲ ಅಮೆರಿಕದಿಂದ ಮಾತ್ರವೇ ಹಿಂದಿವೆ. ಸಮಯ ದೊಡನೆ, ಚೀನಾದ ಪ್ರಮುಖ ಆಯುಧ ಪೂರೈಕೆದಾರರು ವ್ಯಾಪಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದಾರೆ.
ಈ ಯುದ್ಧ ಚೀನಾಗೆ ರಷ್ಯಾದೊಡನೆ ತನ್ನ ರಕ್ಷಣಾ ಸಹಯೋಗದ ಕುರಿತು ಮರು ವಿಮರ್ಶಿಸುವ ಹಾಗೂ ಸರಿಹೊಂದಿಸುವ ಅವಕಾಶ ಒದಗಿಸುತ್ತಿದೆ. ಚೀನಾ ದೀರ್ಘಕಾಲ ರಷ್ಯಾದ ಮಿಲಿಟರಿ ತಂತ್ರeನದ ಮೇಲೆ ಅವಲಂಬಿತವಾಗಿತ್ತು. ಹಲವು ಬಾರಿ ಅದು ರಷ್ಯಾದ ತಂತ್ರಜ್ಞಾನವನ್ನು ಆಧರಿಸಿ, ಕಳಪೆ ಗುಣಮಟ್ಟದ ಆಯುಧಗಳನ್ನೂ ಉತ್ಪಾದಿಸಿತ್ತು. ೨೦೧೭ರಿಂದ ೨೦೨೧ರ ಮಧ್ಯೆ ಚೀನಾದ ಶೇ.೮೧ರಷ್ಟು ರಕ್ಷಣಾ ಆಮದು ರಷ್ಯಾದಿಂದಲೇ ನಡೆದಿತ್ತು.ಅದರಲ್ಲಿ ಚೀನಾದ ಅತ್ಯಾಧುನಿಕ ಸ್ಟೆಲ್ತ ಯುದ್ಧ ವಿಮಾನಗಳಲ್ಲಿ ಬಳಕೆಯಾದ ಎಂಜಿನ್ ಸಹ ಸೇರಿತ್ತು.
ಸಿಂಗಾಪುರದ ಎಸ್ ರಾಜರತ್ನಂ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ಸಂಸ್ಥೆಯ ಮೈಕೆಲ್ ರಾಸ್ಕಾ ಅವರ ಪ್ರಕಾರ, ಚೀನಾಗೆ ಈಗ ರಕ್ಷಣಾ ಉದ್ಯಮದಲ್ಲಿ ರಷ್ಯಾಗೆ ಸರಿಸಮನಾದ ಸಹಯೋಗಿಯಾಗುವ ಅವಕಾಶ ಒದಗಿ ಬಂದಿದೆ. ರಷ್ಯಾಗೆ ಕೇವಲ ಸಾಧಾರಣ ಆಯುಧಗಳನ್ನು, ಉಪಕರಣ ಗಳನ್ನು ಒದಗಿಸುವ ಬದಲು, ಚೀನಾ ರಷ್ಯಾಗೆ ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ತಪ್ಪಿಸಲು ನೆರವಾಗಿ, ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು, ಹಾಗೂ ನಿರ್ದೇಶಿತ ದಾಳಿ ಆಯುಧಗಳಂತಹ ಹೈಟೆಕ್ ಆಯುಧಗಳಿಗೆ ಬೇಕಾದ ಪೂರಕ ಉಪಕರಣಗಳನ್ನು ಒದಗಿಸಬಹುದು. ರಾಸ್ಕಾ ಅವರ ಪ್ರಕಾರ, ಚೀನಾ ತಾನು ರಷ್ಯಾಗೆ ನೀಡುತ್ತಿರುವ ಸಹಾಯಕ್ಕೆ ಪ್ರತಿಯಾಗಿ, ಆರ್ಡಿ-೧೮೦ ಎಂಬ ರಷ್ಯಾ ಬಳಸುವ ರಾಕೆಟ್ ಇಂಜಿನ್ (ಬ್ಯಾಲೆಸ್ಟಿಕ್ ಕ್ಷಿಪಣಿಯಲ್ಲಿ ಬಳಸುವ ಸಾಧ್ಯತೆಗಳೂ ಇವೆ) ತಂತ್ರಜ್ಞಾನವನ್ನು ರಷ್ಯಾದಿಂದ ಕೇಳಬಹುದು.
ಇದರೊಡನೆ, ಆಧುನಿಕ ಜೆಟ್ ಎಂಜಿನ್‌ಗಳು ಹಾಗೂ ಸಬ್ ಮರೀನ್ ತಂತ್ರಜ್ಞಾನಗಳೂ ಚೀನಾಗೆ ಪೂರಕವಾಗಲಿವೆ. ಚೀನಾದ ನಾಯಕತ್ವ ಈಗ ಒಂದು ರೀತಿ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದೆಡೆ ಚೀನಾಗೆ ರಷ್ಯಾಯುದ್ಧದಲ್ಲಿ ಸೋಲನುಭವಿಸುವುದು, ಅದರಲ್ಲೂ ಅಮೆರಿಕದ ರಾಕೆಟ್ ಲಾಂಚರ್‌ಗಳು ಮತ್ತು ಯುರೋಪಿನ ಟ್ಯಾಂಕ್‌ಗಳೆದುರು ಮಣಿಯುವುದು ಇಷ್ಟವಿಲ್ಲ. ಉಕ್ರೇನ್ ಆಕ್ರಮಣಕ್ಕೆ ಕೆಲ ಸಮಯ ಮೊದಲಷ್ಟೇ ರಷ್ಯಾ ಮತ್ತುಚೀನಾಗಳು ತಮ್ಮ ಸಹಕಾರವನ್ನು ಸಂಭ್ರಮಿಸಿ, ಅವುಗಳ ಸಂಬಂಧದ ಮಹತ್ವವನ್ನು ಸಾರಿದ್ದವು. ಅದರೊಡನೆ, ಅಮೆರಿಕದ ಗಮನವನ್ನು, ಪ್ರಯತ್ನ ಗಳನ್ನು ಇಂಡೋ- ಪೆಸಿಫಿಕ್ ಪ್ರದೇಶದಿಂದ ದೂರ ಮಾಡಿ, ಯುರೋಪ್ ಕಡೆ ಕೇಂದ್ರೀಕರಿಸುವಂತೆ ಮಾಡುವುದು ಲಾಭದಾಯಕ ಎಂದು ಚೀನಾದ ಅಧಿಕಾರಿಗಳು ಭಾವಿಸಿರುವ ಸಾಧ್ಯತೆಗಳಿವೆ.
ಯುರೋಪಿನ ಮೂಲಗಳ ಪ್ರಕಾರ, ರಹಸ್ಯವಾಗಿರಬೇಕೆಂದು ಉದ್ದೇಶಿಸಿದ್ದ ಆಯುಧ ವ್ಯಾಪಾರದ ಕುರಿತು ರಷ್ಯಾ ಈ ರೀತಿ ಬಹಿರಂಗವಾಗಿ ಚರ್ಚಿಸು ವುದು ಅಸಮಾಧಾನ ಉಂಟು ಮಾಡಿದೆ. ಯಾವುದೇ ಆಯುಧಗಳಿಗೆ ಸಂಬಂಧಿಸಿದ ರಷ್ಯಾದ ಬೇಡಿಕೆಯಾದರೂ ಅದು ರಹಸ್ಯವಾಗಿರಬೇಕೆಂದು ಚೀನಾ ಬಯಸಿತ್ತು. ಹಾಗಾದರೆ ಮಾತ್ರವೇ ತಾನು ನಿಷ್ಪಕ್ಷಪಾತಿ ಮಧ್ಯಸ್ಥಿಕೆದಾರ ಎನಿಸಿಕೊಳ್ಳಲು ಸಾಧ್ಯ ಎಂದು ಚೀನಾ ನಂಬಿತ್ತು. ಈ ಮೊದಲು ಉಕ್ರೇನಿನ ಮಿತ್ರ ರಾಷ್ಟ್ರಗಳು ಚೀನಾವನ್ನು ಪಕ್ಷಪಾತಿ ಎಂದು ಅದರ ಮಧ್ಯಸ್ಥಿಕೆಯನ್ನು ನಿರಾಕರಿಸಿದ್ದವು. ರಷ್ಯಾಗೆ ಬೆಂಬಲ ನೀಡುವುದು ಚೀನಾಗೆ ಅಮೆರಿಕ ದೊಡನೆ ಸಂಬಂಧ ಹಾಳು ಮಾಡುವುದು ಮಾತ್ರವಲ್ಲದೆ, ಯುರೋಪ್‌ನಿಂದಲೂ ಅಪಾಯ ಎದುರಾಗುವಂತೆ ಮಾಡಬಹುದು. ವಿಶ್ವಸಂಸ್ಥೆಯಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್ ಹಾಗೂ ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿಯ ಮುಖ್ಯಸ್ಥ ಜೋಸೆಪ್ ಬೊರೆಲ್ ಈಗಾಗಲೇ ರಷ್ಯಾಗೆ ಮಹತ್ವದ ಆಯುಧಗಳನ್ನು ಒದಗಿಸುವುದು ಮಿತಿ ಮೀರಿದ ವರ್ತನೆ ಎಂದೇ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ, ಚೀನಾ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವಂತೆ ಕಂಡುಬರುತ್ತದೆ. ಫೆಬ್ರವರಿ ೧೮ರಂದು ಬೊರೆಲ್ ಜತೆ ನಡೆದ ಸಭೆಯಲ್ಲಿ ಚೀನಾದ ಪ್ರಮುಖ ರಾಯಭಾರಿ ವಾಂಗ್ ಯಿ ಚೀನಾ ರಷ್ಯಾಗೆ ಆಯುಧಗಳನ್ನು ಪೂರೈಸುತ್ತಿಲ್ಲ ಎಂದಿದ್ದರು. ಅದರೊಡನೆ, ವಾಂಗ್ ಈ ಮೊದಲೇ ಚೀನಾ ಯುದ್ಧ ನಿರತ ರಾಷ್ಟ್ರಗಳಿಗೆ ಆಯುಧ ಪೂರೈಸುವುದಿಲ್ಲ ಎಂದಿದ್ದರು. ಈ ಕ್ರಮವನ್ನು ಚೀನಾ ಮೊದಲಿನಿಂದಲೂ ಅನುಸರಿಸುತ್ತಿದೆ ಎಂದಿದ್ದರು. ಫೆಬ್ರವರಿ ೨೪ರಂದು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಅವರು ವಾಂಗ್ ತನ್ನ ಹೇಳಿಕೆಯಲ್ಲಿ ನಿಜವನ್ನೇ ಹೇಳಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಒಂದು ವೇಳೆ, ಬೇಸಿಗೆಯಲ್ಲಿ ಉಕ್ರೇನ್ ಪ್ರತಿದಾಳಿ ನಡೆಸಿದಾಗ ರಷ್ಯಾದ ಯುದ್ಧ ಪರಿಸ್ಥಿತಿ ಮಸುಕಾದರೆ, ಆಗ ಚೀನಾದ ಸ್ವಯಂ ನಿಯಂತ್ರಣಕ್ಕೆ ಪ್ರಮುಖ ಸವಾಲುಗಳು ಎದುರಾಗಬಹುದು.