ನಿತ್ಯಾನಂದನಿಗೆ ನೆರವು ನೀಡುತ್ತಿರುವವರಾರು ?
ಸಂಗತ
ವಿಜಯ್‌ ದರಡಾ
ಜಾಮೀನಿನ ಮೇಲೆ ಹೊರಬಂದ ನಂತರದಲ್ಲಿ ನಿತ್ಯಾನಂದ ಭಾರತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದ್ದಾದರೂ ಹೇಗೆ ಎಂಬುದು ಇನ್ನೊಂದು ಪ್ರಶ್ನೆ. ಆತನಿಗೆ ಬಲಯುತವಾದ ರಾಜಕೀಯ ಪ್ರೇರಿತ ಬೆಂಬಲ ಇತ್ತು ಎಂಬುದು ಸುಸ್ಪಷ್ಟ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ ಒಬ್ಬ ಯುವಕ, ನಿಧಾನವಾಗಿ ತನ್ನನ್ನು ತಾನು ಸಂತನೆಂದು ಬಿಂಬಿಸ ತೊಡಗಿದ. ಕೊನೆಗೊಂದು ದಿನ ತಾನೇ ದೇವರು ಎಂದು ಸ್ವಯಂ ಘೋಷಣೆಯನ್ನೂ ಮಾಡಿಬಿಟ್ಟ. ಆತನಿಗೆ ಸಹಸ್ರಾರು ಭಕ್ತರು ಹುಟ್ಟಿಕೊಂಡರು, ಆತನನ್ನು ದೇವಮಾನವನೆಂದು ಬಿಂಬಿಸಿ ಇನ್ನಿಲ್ಲದಂತೆ ಹೊಗಳಿ ವಿಜೃಂಭಿಸಿದರು. ಮತ್ತೊಂದು ದಿನ ಅದೇ ಸ್ವಘೋಷಿತ ದೇವಮಾನವ ದಕ್ಷಿಣ ಭಾರತದ ಚಿತ್ರರಂಗದ ಒಬ್ಬ ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಸಿಡಿಯೊಂದು ಹೊರಬಿತ್ತು.
ತದನಂತರದಲ್ಲಿ ಅನೇಕ ದೂರುಗಳು ಆತನ ಮೇಲೆ ದಾಖಲಾದವು. ಕೊನೆಗೊಂದು ದಿನ ಆತನ ದಸ್ತಗಿರಿಯೂ ಆಯಿತು. ಜಾಮೀನಿನ ಮೇಲೆ ಬಿಡುಗಡೆ ಯಾದ ನಂತರದಲ್ಲಿ ಆತ ದೇಶಬಿಟ್ಟು ಹಾರಿಹೋದ. ಕೆಲ ಕಾಲದ ನಂತರ ಮತ್ತಷ್ಟು ರೋಚಕ ಸುದ್ದಿಗಳು ಹರಡತೊಡಗಿದವು. ನಿತ್ಯಾನಂದನೆಂಬ ಆ ದೇವಮಾನವ ದ್ವೀಪ ವೊಂದನ್ನು ಖರೀದಿಸಿದ್ದಾನೆಂತಲೂ ಅದಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ಹೆಸರನ್ನೂ ಇಟ್ಟಿದ್ದಾನೆಂದು ಸುದ್ದಿಗಳು ಬಿತ್ತರವಾಗತೊಡಗಿದವು. ಅಲ್ಲಿಯೂ ಆತನ ಆಟಾಟೋಪಗಳು ಜೋರಾಗಿಯೇ ನಡೆದವು.
ಇದ್ಯಾವುದೂ ಸಿನಿಮಾ ಕಥೆಯಲ್ಲ. ಇದು ನಿತ್ಯಾನಂದನೆಂಬ ಸ್ವಘೋಷಿತ ದೇವಮಾನವನ ಕಥೆ. ಕೋವಿಡ್ ಕಾಲದಲ್ಲಿ ನಾವು ಅದೆಷ್ಟೋ ಹಳೆಯ ಸಂಗತಿಗಳನ್ನು ಮರೆತುಬಿಟ್ಟಿದ್ದೇವೆ. ಆ ಪೈಕಿ ನಿತ್ಯಾನಂದನ ಕಥೆಯೂ ಒಂದು. ಆತ ಹೆಚ್ಚೂ ಕಡಿಮೆ ನಮ್ಮ ಸ್ಮೃತಿಪಟಲದಿಂದ ಮರೆಯಾಗಿ ಹೋಗಿದ್ದ. ಆದರೆ ಕಳೆದ ತಿಂಗಳುನ ಯುನೈಟೆಡ್ ನೇಶನ್ಸ್‌ನಲ್ಲಿ ನಡೆದ ಎರಡು ಮೀಟಿಂಗ್‌ಗಳ ನಂತರ ಅದೇ ನಿತ್ಯಾನಂದ ಮತ್ತೆ ಮುನ್ನೆಲೆಗೆ ಬಂದಿದ್ದಾನೆ.
ಕಳೆದ ಫೆಬ್ರವರಿ ೨೨ರಂದು ಮಹಿಳೆಯರ ಮೇಲಿನ ಅಸಮಾನತೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮತ್ತು ಮಹಿಳೆಯರು ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಶಕ್ತರು ಎಂಬ ಅಂಶವನ್ನು ಬಿಂಬಿಸುವ ಉದ್ದೇಶದ ಒಂದು ಅಂತಾರಾಷ್ಟ್ರೀಯ ಸಮಾವೇಶ ಅಮೆರಿಕದಲ್ಲಿ ಆಯೋಜನೆಯಾಗಿತ್ತು. ನಂತರ ಫೆಬ್ರವರಿ ೨೪ ರಂದು ಇನ್ನೊಂದು ಸಮಾವೇಶ ನಡೆಯಿತು. ಇದರಲ್ಲಿ ನಿತ್ಯಾನಂದನ ಪ್ರೇಯಸಿ  ವಿಜಯಪ್ರಿಯ, ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪ್ರತಿನಿಧಿಯಾಗಿ ಈ ಸಮಾವೇಶದಲ್ಲಿ ಭಾಗವಹಿಸಿದ್ದಳು.
ಆಕೆ ತನ್ನನ್ನು ತಾನು ನಿತ್ಯಾನಂದನ ರಾಯಭಾರಿ ಎಂದೇ ಪರಿಚಯಿಸಿಕೊಂಡಳು. ನಿತ್ಯಾನಂದನನ್ನು ಆಕೆ ಹಿಂದೂ ಧರ್ಮದ ಪರಮೋಚ್ಚ ಗುರು ಎಂದು ಅಲ್ಲಿ ಹೇಳಿಕೊಂಡಳಲ್ಲದೇ ನಿತ್ಯಾನಂದನಿಗೆ ಕೊಡಲಾಗಿರುವ ಕಿರುಕುಳಗಳನ್ನು ಹತ್ತಿಕ್ಕಬೇಕೆಂತಲೂ ಹೇಳಿದಳು. ಈ ಸಮಾವೇಶದ ವೇಳೆ ವಿಜಯಪ್ರಿಯ ಹಲವಾರು ಗಣ್ಯಮಾನ್ಯರೊಂದಿಗೆ ಛಾಯಾಚಿತ್ರಗಳನ್ನೂ ತೆಗೆದುಕೊಂಡಳು ಮತ್ತು ಅವುಗಳನ್ನು ಸ್ವಘೋಷಿತ ಕೈಲಾಸದ ಜಾಲತಾಣದಲ್ಲೂ ಹಾಕಲಾಯಿತು. ಇವೆಲ್ಲವುಗಳ ಬಗ್ಗೆ ಚರ್ಚೆಗಳ ಭರಾಟೆ ಜೋರಾದಾಗ ಯುನೈಟೆಡ್ ನೇಶನ್ಸ್, ತಾವು ಇಂತಹ ಕಾಲ್ಪನಿಕ ದೇಶ ಗಳನ್ನು ನಿರ್ಲಕ್ಷಿಸುವುದಾಗಿಯೂ, ಒಬ್ಬ ದೇಶಭ್ರಷ್ಟ ವ್ಯಕ್ತಿಯ ಸಮರ್ಥಕರಿಗೆ ಇನ್ನುಮುಂದೆ ಅವಕಾಶ ಕೊಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿತು. ಆದರೆ ಇಲ್ಲಿರುವ ಪ್ರಶ್ನೆ ಬೇರೆಯದೇ ಆಗಿದೆ.
ಯುನೈಟೆಡ್ ನೇಶನ್ಸ್ ಸಮಾವೇಶದಲ್ಲಿ ನಿತ್ಯಾನಂದನ ಪ್ರೇಯಸಿ ವಿಜಯಪ್ರಿಯ ಭಾಗವಹಿಸಲು ಸಾಧ್ಯವಾಗಿದ್ದಾದರೂ ಹೇಗೆ? ಆಕೆ ಎನ್‌ಜಿಒ ಒಂದರ ಮೂಲಕ ಅಲ್ಲಿ ಪ್ರವೇಶ ಪಡೆದು ನಂತರದಲ್ಲಿ ನಿತ್ಯಾನಂದನ ಸ್ವಘೋಷಿತ ಕೈಲಾಸದ ಪ್ರತಿನಿಧಿ ಎಂದು ಬಿಂಬಿಸಿಕೊಂಡಿದ್ದಾಳೆ. ಯಾವುದೇ ರೀತಿಯ ನೋಂದಣಿ ಮತ್ತು ಪರಾಮರ್ಶೆಗೆ ಒಳಪಡಿಸದೇ ಇಂಥವರನ್ನು ಒಳಸೇರಿಸಿಕೊಂಡಿದ್ದು ಬಹುದೊಡ್ಡ ತಪ್ಪು.
ವಿಜಯಪ್ರಿಯಾಗೆ ಎಲ್ಲಿಂದಲೋ ಸಹಾಯಹಸ್ತ ಸಿಕ್ಕಿರಬೇಕು, ಅದರಲ್ಲಿ ಎರಡನೇ ಮಾತೇ ಇಲ್ಲ. ಕಳೆದ ವರ್ಷ ನಡೆದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಬ್ರಿಟನ್ನಿನ ವೃತ್ತಪತ್ರಿಕೆ ಗಾರ್ಡಿಯನ್‌ಯಲ್ಲಿ ಇದು ಪ್ರಕಟವಾಗಿತ್ತು. ನಿತ್ಯಾನಂದನ ಕಡೆಯ ಇಬ್ಬರು ಪ್ರತಿನಿಧಿಗಳು ಹೌಸ್ ಆಫ್ ಲಾರ್ಡ್ಸನ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಒಬ್ಬಾಕೆ ಇದೇ ವಿಜಯಪ್ರಿಯ. ಕನ್ಸರ್ವೇಟಿವ್ ಪಕ್ಷದ ಇಬ್ಬರು ಸಂಸದರುಆಕೆಯನ್ನು ಆಹ್ವಾನಿಸಿದ್ದರಲ್ಲದೇ ಆಕೆಯನ್ನು ಕೈಲಾಸದ ರಾಯಭಾರಿ ಎಂದೂ ಘೋಷಿಸಿದ್ದರು. ಇದಾದ ನಂತರ ಅಮೆರಿಕದಲ್ಲಿ ನಡೆದ ಸಮಾವೇಶ ದಲ್ಲಿ ಈಕೆ ಭಾಗವಹಿಸಿದ್ದಾಳೆ. ಈಕೆಗೆ ಯಾರದೋ ಸಹಾಯ ಸಿಗುತ್ತಿದೆ ಎಂಬ ಶಂಕೆ ವ್ಯಕ್ತವಾಗುವುದರಲ್ಲಿ ತಪ್ಪೇನಿಲ್ಲ.
ಅದು ತನಿಖೆಗೆ ಒಳಪಡಬೇಕಾದ ಸಂಗತಿ. ಭಾರತದಲ್ಲಿ ಅನೇಕ ಅಪರಾಧ ಪ್ರಕರಣಗಳು, ಬಲಾತ್ಕಾರ ಮತ್ತು ಅಪಹರಣದಂತಹ ಹೀನಾತಿಹೀನ ಪ್ರಕರಣಗಳು ನಿತ್ಯಾನಂದನ ಮೇಲೆ ಈಗಲೂ ಇವೆ. ಜಾಮೀನಿನ ಮೇಲೆ ಹೊರಬಂದ ನಂತರದಲ್ಲಿ ನಿತ್ಯಾನಂದ ಭಾರತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದ್ದಾದರೂ ಹೇಗೆ ಎಂಬುದು ಇನ್ನೊಂದು ಪ್ರಶ್ನೆ. ಆತನಿಗೆ ಬಲಯುತವಾದ ರಾಜಕೀಯ ಪ್ರೇರಿತ ಬೆಂಬಲ ಇತ್ತು ಎಂಬುದು ಸುಸ್ಪಷ್ಟ.
ಭಾರತದ ಅಧಿಕಾರ ವರ್ತುಲಗಳಲ್ಲಿ ಆತ ಎಷ್ಟು ಪ್ರಭಾವಿಯಾಗಿದ್ದ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ. ಈ ವ್ಯಕ್ತಿ ದಕ್ಷಿಣ ಭಾರತದವನು. ಇಬ್ಬರು ಹೆಣ್ಮಕ್ಕಳನ್ನು ಅಪಹರಿಸಿ ಗುಜರಾತಿನ ತನ್ನ ಆಶ್ರಮದಲ್ಲಿ ತಂದಿಟ್ಟಿzನೆಂಬ ಆರೋಪ ಈತನ ಮೇಲೆ ದಾಖಲಾಗಿತ್ತು. ಇನ್ನೊಬ್ಬ ಮಹಿಳಾ ಭಕ್ತೆ, ನಿತ್ಯಾನಂದ ತನ್ನ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದರ ಬಗ್ಗೆ ದೂರಿಕೊಂಡಿದ್ದಳು. ನಿತ್ಯಾನಂದನ ಮೇಲೆ ಪೋಲೀಸರು ಪೋಕ್ಸೋ ಕಾಯಿದೆಯ ಅಡಿಯಲ್ಲಿ ಕೇಸು ದಾಖಲಿಸಿದ್ದರು.
ನಿತ್ಯಾನಂದನ ಆಶ್ರಮದಲ್ಲಿ ಮಕ್ಕಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಲಾಗಿತ್ತು ಎಂಬ ಆರೋಪವೂ ಇತ್ತು. ಇಂತಹ ನಿತ್ಯಾನಂದನ ಆಶ್ರಮದಲ್ಲಿ ರಾಜಕೀಯ ಪ್ರಮುಖರೂ ಬಂದು ಹೋಗುತ್ತಾರೆ ಎನ್ನುವಾಗ ಆತನ ಮೇಲೆ ಪೋಲೀಸರಿಂದ ಯಾವ ಕ್ರಮವನ್ನು ನಿರೀಕ್ಷಿಸಬಹುದು. ೨೦೧೮ರಲ್ಲಿ ಆತನ ವಿರುದ್ಧ ದೋಷಾರೋಪಣ ಪಟ್ಟಿಯೂ ದಾಖಲಾಗಿತ್ತು. ೨೦೧೯ರಲ್ಲಿ ಆತ ನಾಪತ್ತೆಯಾಗಿದ್ದಾನೆಂದು ಪೋಲೀಸರು ಹೇಳಿಕೊಂಡರು. ಆತ ಹೇಗೆ ಪರಾರಿಯಾದ ಎಂಬುದು ಯಾರಿಗೂ ಗೊತ್ತಿಲ್ಲ.
ದಕ್ಷಿಣ ಅಮೇರಿಕಾದ ಈಕ್ವೆಡಾರ್ ಸಮೀಪದ ಒಂದು ದ್ವೀಪವನ್ನು ನಿತ್ಯಾನಂದ ಖರೀದಿ ಮಾಡಿದ್ದಾನೆಂತಲೂ ಅದಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ಹೆಸರಿಟ್ಟಿದ್ದಾನೆಂತಲೂ ನಂತರದಲ್ಲಿ ಸುದ್ದಿಯಾಯಿತು. ಈಕ್ವೆಡಾರ್ ಕೊಲಂಬಿಯಾ ಪಕ್ಕದಲ್ಲಿದೆ, ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಪೆರು ದೇಶವಿದೆ. ಪಶ್ಚಿಮದಲ್ಲಿ ಶಾಂತಸಾಗರವಿದೆ. ನಿತ್ಯಾನಂದನಿಗೆ ಆಶ್ರಯ ಕೊಟ್ಟಿರುವ ಸಂಗತಿಯನ್ನು ಈಕ್ವೆಡಾರ್ ನಿರಾಕರಿಸಿದೆ. ಆತನ ಸ್ವಘೋಷಿತ ದೇಶಕ್ಕೆ ಅದರದೇ ಆದ ಬಾವುಟವಿದೆ, ಸಂವಿಧಾನವಿದೆ, ಬ್ಯಾಂಕೂ ಇದೆ ಮತ್ತು ರಾಷ್ಟ್ರೀಯ ಲಾಂಛನವೂ ಇದೆ ಎನ್ನಲಾಗುತ್ತಿದೆ. ೨೦೧೯ರಿಂದ ಆತನಾಪತ್ತೆಯಾಗಿದ್ದರೂ ಆತನ ಪೋಟೋಗಳು, ವಿಡಿಯೋಗಳು, ಪ್ರವಚನಗಳು ಜಾಲತಾಣಗಳಲ್ಲಿ ಕಾಣಸಿಗುತ್ತಿವೆ. ಇಷ್ಟೆಲ್ಲ ಮಾಡಲು ಆತನಿಗೆ ಹಣವೆಲ್ಲಿಂದ ಬಂದು ಎಂಬುದೇ ಯಕ್ಷಪ್ರಶ್ನೆ.
ಈ ಸ್ವಯಂಘೋಷಿತ ದೇವಮಾನವ ತನ್ನ ಪ್ರತಿನಿಧಿಯನ್ನು ಯುಎನ್ ಕೌನ್ಸಿಲ್‌ಗೆ ಕಳುಹಿಸುವ ಮೂಲಕ ತನ್ನ ದಾರ್ಷ್ಟ್ಯವನ್ನು ತೋರಿದ್ದಾನೆ. ಆತನಪರವಾಗಿ ವಿಜಯಪ್ರಿಯ ಹೇಗೆ ಈ ಸಮಾವೇಶದಲ್ಲಿ ಭಾಗಿಯಾದಳು ಎಂಬುದನ್ನು ಈತ ಸ್ಪಷ್ಟಪಡಿಸಬೇಕಿದೆ. ಆದರೆ ಅದು ಆಗುತ್ತಿಲ್ಲ. ನಿತ್ಯಾನಂದನ ಪರವಾಗಿ ಇಷ್ಟೊಂದು ಮೃದು ಧೋರಣೆ ಏಕೆ? ಇದರ ಜತೆಜತೆಗೆ ಇಂತಹ ಅದೆಷ್ಟೊ ಅಪರಾಧ ಪ್ರಕರಣಗಳಲ್ಲಿ ಒಳಗಾಗಿರುವ ದೇವಮಾನವರು ಹುಟ್ಟಿಕೊಂಡಿzರೆಅಬುದನ್ನೂ ಪತ್ತೆ ಹಚ್ಚಬೇಕಿದೆ. ಈ ಎಲ್ಲ ಪ್ರಶ್ನೆಗಳಿಗೆ ತ್ವರಿತ ಉತ್ತರ ಬೇಕಿದೆ. ಭಾರತದಂತಹ ದೇಶವನ್ನು ಯಾರಿಂದಲೂಮೋಸಪಡಿಸಲು ಸಾಧ್ಯವಿಲ್ಲ ಎಂಬುದನ್ನೂ ಈ ಹಂತದಲ್ಲಿ ನಾವೆಲ್ಲ ದೃಢಪಡಿಸಬೇಕಿದ್ದೆ.