ಹೆಚ್ಚುತ್ತಿರುವ ವಿಚ್ಛೇದನಗಳು ಕಳವಳಕಾರಿ ಬೆಳವಣಿಗೆ
ಅಭಿಮತ
ಡಾ.ಕೋಮಲಾಭಟ್ಟ
ಸ್ವಾತಂತ್ರ್ಯಪೂರ್ವ ಭಾರತದಲ್ಲಿ, ಭಾರತೀಯ ಸಂಸ್ಕೃತಿಯ ಕೌಟುಂಬಿಕ ಗಟ್ಟಿತನದಿಂದಾಗಿ ವಿವಾಹ ವಿಚ್ಛೇದನ ತುಂಬಾ ವಿರಳವಾಗಿತ್ತು. ಅ ಇಲ್ಲೇ ಆದರೂ ಅದು ಸಿನಿಮಾ ಜಗತ್ತಿನವರೋ, ಶ್ರೀಮಂತ ಕುಟುಂಬದವರೋ ಅಥವಾ ಅನಿವಾರ್ಯ ಪ್ರಸಂಗಗಳಲ್ಲಿ ನಡೆಯುತ್ತಿತ್ತು.
ಆದರ ಇತ್ತೀಚಿನ ದಿನಗಳಲ್ಲಿ ಅದು ಎಲ್ಲ ವರ್ಗಗಳಲ್ಲಿ, ಪ್ರಜ್ಞಾವಂತರಲ್ಲಿ, ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿರು ವದು ಕಳವಳಕ್ಕೆ ಎಡೆ ಮಾಡುತ್ತಿದೆ. ಗಂಡು- ಹೆಣ್ಣು ಭೇದ ಭಾವವಿಲ್ಲದೇ ಶಿಕ್ಷಿತ, ಅಶಿಕ್ಷಿತರೆನ್ನದೇ ಎಲ್ಲಡೆ ವಿಚ್ಛೇದನಗಳು ಹೆಚ್ಚುತ್ತಿವೆ. ತನ್ನ ಗೆಳೆಯರಿಗೆ ಕೊಟ್ಟ ಟೀ ಸರಿ ಇರಲಿಲ್ಲವೆಂಬ, ಅವಳು ಮಾಂಸದ ಅಡಿಗೆ ಮಾಡುತ್ತಿಲ್ಲ, ಸಂಗಾತಿಯ ಬಣ್ಣ ಅಥವಾ ದಂಪತಿಯರಲ್ಲಿ ಯಾರಿಗಾದರೂ ಮುಖದ ಮೇಲೆ ಮೊಡವೆಗಳು, ಅವಳಿಗೆ ಇಂಗ್ಲೀಷ್ ಸರಿಯಾಗಿ ಬರುತ್ತಿಲ್ಲ ಎನ್ನುವ ಕ್ಷುಲಕ ಕಾರಣದಿಂದ ಹಿಡಿದು, ಪರಸ್ಪರ ಸಂಶಯ ಪ್ರವ್ರತ್ತಿ, ಕೌಟುಂಬಿಕ ಕಲಹಗಳು, ಹಿಂಸೆ, ಸಮಾನತೆ ಮತ್ತು ಗೌರವ ಬಯಸುವ ತುಡಿತ, ವಿವಾಹೇತರ ಸಂಬಂಧಗಳು, ಮಾತಿನ ಚಕಮಕಿಗಳು, ದೈಹಿಕ, ಮಾನಸಿಕ ಭಾಂಧವ್ಯದ, ಪ್ರೀತಿಯ ಕೊರತೆ, ಚಟಗಳು, ಹಣಕಾಸಿನ ಸಮಸ್ಯೆಗಳು, ಪರಸ್ಪರ ಆಕರ್ಷಣೆಗೊಳಗಾಗಿ ಮದುವೆಯಾಗಿ ತದ ನಂತರದಲ್ಲಿ ಹೊಂದಾಣಿಕೆ ಆಗದಿರುವದು, ಅನ್ಯ ಜಾತಿಯ ವಿವಾಹ ಗಳಂತಹ ಹಲವಾರು ವಿಷಯಗಳು ಇಂದು ವಿಚ್ಛೇದನಕ್ಕೆ ಕಾರಣವಾಗುತ್ತಿವೆ.
ನಾಲ್ಕು ಗೋಡೆಗಳ ಮಧ್ಯೆ ಇದ್ದ ಹೆಣ್ಣು, ಈಗ ಅರಳುಗಣ್ಣಿನಿಂದ ಸಮಾಜವನ್ನು ನೋಡುತ್ತಿದ್ದಾಳೆ. ಸಂಘಟನೆ, ಸಹಕಾರದಿಂದ ಸಬಲೀಕರಣದತ್ತ ಹೆಣ್ಣು ಹೆಜ್ಜೆ ಹಾಕುತ್ತಿದ್ದಾಳೆ. ಸ್ವಾತಂತ್ರ್ಯದ ಸವಿಗಳನ್ನು ಅನುಭವಿಸುತ್ತಿದ್ದಾಳೆ. ತಪ್ಪು ಸರಿಗಳ ಅಲ್ಪ ಸ್ವಲ್ಪ ಪ್ರಶ್ನಿಸುತ್ತಿದ್ದಾಳೆ. ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗದಂತೆ ಜಾಗ್ರತೆ ವಹಿಸಬೇಕಿದೆ ಅಷ್ಟೇ. ತನ್ನದೇ ಎಲ್ಲಾ ಎಂದು ಬೀಗಿ, ಹೆಂಗಸರನ್ನು ಹತ್ತಿಕ್ಕಿ, ಸೊಕ್ಕಿನಿಂದ ಓಡಾಡುತ್ತಿದ್ದ ಪುರುಷರು ಮೆತ್ತಗಾಗುತ್ತಿದ್ದಾರೆ. ಕೆಲವೊಮ್ಮೆ ಬಲಿಪಶುಗಳು ಆಗುತ್ತಿದ್ದಾರೆ.
ಜಗತ್ತೆಲ್ಲ ನಿಬ್ಬೆರಗಾಗಿ ನೋಡಿದ ಭಾರತೀಯ ಕುಟುಂಬ ವ್ಯವಸ್ಥೆ, ಇಲ್ಲಿಯ ವಿವಾಹಗಳು, ಸಾಂಸ್ಕೃತಿಕ ಗಟ್ಟಿತನ, ಸ್ವಸ್ಥ ಸಮಾಜಕ್ಕೆ ಭದ್ರಬುನಾದಿ ಹಾಕಿದ್ದಂತೂ ಒಪ್ಪಲೇ ಬೇಕು. ತನ್ನ ಸಂಸ್ಕೃತಿ ಪರಂಪರೆಗೆ ಹೆಸರಾಗಿದ್ದ, ಸಾಮಾಜಿಕವಾಗಿ ವಿಶೇಷತನವನ್ನು ಹೊಂದಿದ್ದ ಭಾರತವಿಂದು ಬದಲಾಗು ತ್ತಿದೆ. ನಗರೀಕರಣ, ಪಾಶ್ಚಾತಿಕರಣ, ಜಾಗತೀಕರಣ , ಔದ್ಯೋಗಿಕರಣ ಇತ್ಯಾದಿಗಳು ನಮ್ಮ ಸಾಮಾಜಿಕ ಸ್ತರಗಳಲ್ಲಿ ಯಾವ ರೀತಿಯಾಗಿ ಪರಿಣಾಮ ಬೀರುತ್ತಿದೆ ಎನ್ನುವದು ಹಂತಹಂತವಾಗಿ ತಿಳಿದು ಬರುತ್ತಿದೆ.
ಎಲ್ಲವನ್ನೂಬಾಚಿ ತಬ್ಬಿಕೊಳ್ಳುತ್ತಿರುವ ಸಮಾಜ ಮುಂದೆ ಅಶಕ್ತ ಸಮಾಜ ನಿರ್ಮಾಣ ಮಾಡೀತೆ ಎಂಬುದರ ಕುರಿತು ವಿಷ್ಲೇಶಿಸುವ ಸಮಯ ಬಂದೊದ ಗಿದೆ. ಪ್ರಪಂಚದ ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ವಿವಾಹವು ಪವಿತ್ರವಾದ ಕಾರ್ಯವಾಗಿದ್ದು ಇದು ಮೋಕ್ಷಕ್ಕೆ ದಾರಿ ಮಾಡಿಕೊಡುವ ಸಾಧನವಾಗಿದೆ ಎಂಬ ನಂಬಿಕೆ ಇದೆ. ಭಾರತದಲ್ಲಿ ಮದುವೆಗಳು ಎರಡು ಕುಟುಂಬಗಳ ನಡುವೆ ನಡೆಯುತ್ತವೆ, ಸಮಾಜ ಮತ್ತು ಭಾರತೀಯ ಶಾಸನವು ಮದುವೆಯನ್ನು ರಕ್ಷಿಸಲು ಪ್ರಯತ್ನಿಸುತ್ತದೆ. ವಿವಾಹ ಪೂರ್ವದಲ್ಲಿ ಜಾತಕ ಹೊಂದಾಣಿಕೆ ಅತ್ಯಗತ್ಯ.
ವಿವಾಹದಲ್ಲಿ ಮದುಮಗನು ಧರ್ಮೇಚ ಅರ್ಥೇಚ ಕಾಮೇ ಚ ನಾತಿ ಚರಿತವ್ಯಮ್ (ಧರ್ಮ (ಜವಾಬ್ದಾರಿ/ಕರ್ತವ್ಯಗಳು), ಅರ್ಥ(ಹಣ) ಮತ್ತು ಕಾಮ (ದಾಂಪತ್ಯ ಪ್ರೀತಿ)) ಎಂದು ಆಶ್ವಾಸನೆ ಕೊಟ್ಟಿರುತ್ತಾನೆ. ಸಪ್ತಪದಿ ಎಂದರೆ ವಧು-ವರರು ಒಟ್ಟಾಗಿ ತೆಗೆದುಕೊಳ್ಳುವ ಏಳು ಪ್ರತಿeಗಳು, ಅದು ಆಹಾರಕ್ಕಾಗಿ, ಶಕ್ತಿಗಾಗಿ, ಸಮೃದ್ಧಿಗಾಗಿ, ಬುದ್ಧಿವಂತಿಕೆಗಾಗಿ, ಸಂತತಿಗಾಗಿ, ಆರೋಗ್ಯಕ್ಕಾಗಿ ಮತ್ತು ಸ್ನೇಹಕ್ಕಾಗಿ. ಇದನ್ನು ಅಗ್ನಿಸಾಕ್ಷಿ ಎನ್ನುತ್ತಾರೆ. ಪುರುಷ ಮತ್ತು ಮಹಿಳೆಯ ಜೀವನದಲ್ಲಿ ಹಲವಾರು ಪ್ರಮುಖ ವಿಷಯಗಳು ಮದುವೆಗೆ ಸಂಬಂಧಿಸಿವೆ; ಉದಾಹರಣೆಗೆ, ಪುರುಷ ಮತ್ತು ಮಹಿಳೆಯ ನಡುವಿನ ಪ್ರೀತಿ, ಅವರ ಸಂಬಂಧ, ಸಂತತಿ, ಅವರ ಜೀವನದಲ್ಲಿ ವಿವಿಧ ಸಂತೋಷದ ಘಟನೆಗಳು, ಸಾಮಾಜಿಕ ಸ್ಥಾನಮಾನ ಇತ್ಯಾದಿಗಳು.
ಆದರ ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಪ್ರೇಮ ವಿವಾಹಗಳು, ಡೇಟಿಂಗ್ ಸಂಸ್ಕೃತಿಯ ಪ್ರಾರಂಭದೊಂದಿಗೆ, ಜಾತಕ ವಿಶ್ಲೇಷಣೆಯು ಸ್ವಲ್ಪಮಟ್ಟಿಗೆ ಕಡಿಮೆ ಯಾಗಿದೆ, ವಧು ಮತ್ತು ವರ ತಮ್ಮದೇ ಆದ ಸಂಗಾತಿಯನ್ನು ಆಯ್ಕೆ ಮಾಡಲು ಆದ್ಯತೆ ನೀಡುತ್ತಾರೆ ಮತ್ತು ಅವರ ಪೋಷಕರು ಮೆಚ್ಚಿದವರನ್ನು ಇವರು ಒಪ್ಪಲು ಬಯಸುವುದಿಲ್ಲ; ಇದು ಗ್ರಾಮೀಣ ಪ್ರದೇಶಗಳಿಗಿಂತ ನಗರ ಮತ್ತು ಉಪನಗರ ಪ್ರದೇಶಗಳಲ್ಲಿ ಹೆಚ್ಚು. ಇಂದು ಮದುವೆಯ ಸಂಸ್ಕೃತಿ ಯು ಲವ್-ಅರೇಂಜ್ ಮ್ಯಾರೇಜ್ ಅಥವಾ ಅರೇಂಜ-ಲವ್ ಮ್ಯಾರೇಜ್ ಮತ್ತು ಲಿವ್ ಇನ್ ರಿಲೇಷನ್ ಷಿಪ್, ಸಿಂಗಲ್ ಪೇರಂಟ್ ಎಂಬ ಹೊಸಪರಿಕಲ್ಪನೆ ಯೊಂದಿಗೆ ಹೆಚ್ಚು ಪ್ರಚಲಿತ ಗೊಳ್ಳುತ್ತಿದೆ.
ಇಲ್ಲಿ ಪರಸ್ಪರ ಆಕರ್ಷಣೆಯೇ ಪ್ರಮುಖ. ಜಾತಕವಿಲ್ಲ, ಹಿರಿಯರ ಒಪ್ಪಿಗೆಯಿಲ್ಲ, ಯಾವ ಕಟ್ಟು ಕಟ್ಟಳೆಗಳಿಲ್ಲ. ಬೇಡವೆನಿಸಿದಾಗ ವಿಚ್ಛೇದನ. ಚಿಕ್ಕಪುಟ್ಟ ಕಾರಣಗಳಿಗೆ ಮುರಿದು ಬೀಳುತ್ತಿರುವ ಮದುವೆಗಳು ಸರ್ವೇಸಾಮಾನ್ಯವಾಗಿದೆ. ಪ್ರಪಂಚದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ದಲ್ಲಿ ಮುರಿದು ಬೀಳುವ ಮದುವೆಗಳ ಪ್ರಮಾಣ ಕಡಿಮೆಯೇ. ಭಾರತೀಯ ಸಮಾಜದಲ್ಲಿ ಕುಟುಂಬ ವ್ಯವಸ್ಥೆಗೆ ಪ್ರಮುಖ ಆದ್ಯತೆ ನೀಡಲಾಗಿದೆ.ಬದಲಾಗುತ್ತಿರುವ ಭಾರತದಲ್ಲಿ ಇಂದು ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗಿ ವಿಭಕ್ತ ಕುಟುಂಬ ಪದ್ಧತಿಯನ್ನು ನೆಚ್ಚಿಕೊಂಡ ಮೇಲಂತೂ ಸಮಸ್ಯೆ ಗಳು ಇನ್ನೂ ಜಟಿಲಗೊಳ್ಳುತ್ತಲಿವೆ. ಮನೆಯಲ್ಲಿ ಅಸಹನೆ, ಪರಸ್ಪರ ಹೊಂದಾಣಿಕೆಯ ಅಭಾವ, ಮುಖಂಡತ್ವದ ಕೊರತೆಗಳೆಲ್ಲವೂ ಎದ್ದು ಕಾಣುತ್ತಿದೆ.
ಅವಿಭಕ್ತ ಕುಟುಂಬದಲ್ಲಿ ಮನೆಯ ಯಜಮಾನ ಮನೆಯ ಹಿರಿಯನಾಗಿರುತ್ತಿದ್ದು, ಅವನ ಆಣತಿಯನ್ನು ಮೀರುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ. ವಿಭಕ್ತ ಕುಟುಂಬಗಳಲ್ಲಿ ಹಿರಿಯರ ಮಾರ್ಗದರ್ಶನದ ಕೊರತೆ, ಕೆಲಸಕ್ಕಾಗಿ ತಂದೆತಾಯಿಂದ ದೂರ ಇರುವದು, ತಂದೆ ತಾಯಿರಲ್ಲಿ ಸಲುಗೆ ಹೆಚ್ಚಾಗಿಗೌರವ ಕಡಿಮೆಯಾಗಿರುವದು, ಧಾರ್ಮಿಕತೆ ಕಡಿಮೆ ಆಗಿರುವದು, ಎಲ್ಲ ಮಾಹಿತಿಗಳು ಅಂಗೈಯಲ್ಲಿ ದೊರಕುತ್ತಿರುವಾಗ ಕುತೂಹಲ ಕಡಿಮೆಯಾಗು ತ್ತಿರುವದು, ಜಾತಕ ನೋಡದ ವಿವಾಹಗಳು ಮತ್ತು ಇದಕ್ಕೆ ಪೂರಕವಾಗಿ ನಮ್ಮ ಇತ್ತೀಚಿನ ಚಲನಚಿತ್ರ, ಮಾಧ್ಯಮಗಳು ಯುವಜನೆತೆಯ ದಿಕ್ಕು ತಪ್ಪಿಸು ತ್ತಿವೆ.
೧೦ ವರುಷಗಳ ಕಾಲ ಲಿವ್‌ಇನ್ ರಿಲೇಷನ್‌ಷಿಪ್, ಚಿಕ್ಕ ಪುಟ್ಟ ಕಾರಣಕ್ಕೆ ಅಸಮಾಧಾನ, ಪರಸ್ಪರ ಗೌರವಾದಾರ ಇಲ್ಲದಿರುವದು, ತಾಳ್ಮೆ  ಕಳಕೊಳ್ಳು  ವದು, ಅದಕ್ಕಿಂತ ಮುಖ್ಯವಾಗಿ ಮದುವೆಯಲ್ಲಿ ನಿರಾಸಕ್ತಿ. ಇನ್ನು ಕೈತುಂಬಾ ಹಣ ಇದ್ದಾಗ ಮದುವೆಯ ಜಂಜಾಟವೇಕೆ? ಮಕ್ಕಳನ್ನು ಹೆರುವ ಸಂಕಷ್ಟ ವೇಕೆ? ನಾಳೆ ಅವರ ಪೋಷಣೆಯ ಜವಾಬ್ದಾರಿ ಯಾಕೆ? ಆರಾಮಾಗಿ ಸುತ್ತಾಡಿಕೊಂಡು ಇದ್ದರಾಯಿತು ಅನ್ನುವ ಭಾವ. ವಯಸ್ಸು ಮೀರಿದ ಮದುವೆ ಮತ್ತು ವಿಚ್ಛೇದನ, ವಯಸ್ಸು ಮೀರಿದ ಮದುವೆಗಳ ನಂತರ ಸಂತಾನ.
ವಿಚ್ಛೇದನದ ಪರಿಣಾಮಗಳು ಸುವ್ಯವಸ್ಥಿತ ಸಮಾಜದಲ್ಲಿ ಧಾರ್ಮಿಕತೆಯ ಚೌಕಟ್ಟಿನಲ್ಲಿ ಶಿಸ್ತಿನಿಂದ ನಡೆಸುತ್ತಿದ್ದ ಜೀವನ ಶೈಲಿ ಮರೆಯಾಗುತ್ತಿದೆ. ಜಾತಿ, ಕುಲ, ಗೋತ್ರದ ಪರಿವೆಯಿಲ್ಲದೆಯೇ ಮದುವೆ ಆಗಿ, ಅದರಲ್ಲಿ ಪರಸ್ಪರ ಹೊಂದಾಣಿಕೆಯಾಗದೆ ಹತಾಶೆಯಾಗಿ ಮದುವೆಗಳು ಮುರಿದು ಬೀಳುತ್ತಿವೆ. ಆಸಿಡ್ ದಾಳಿ, ಹುಚ್ಚು ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಎಲ್ಲವೂ ಅಯೋಮಯವಾಗುತ್ತಿದೆ. ವಯಸ್ಸಿಗೆ ಮೀರಿದ ಮದುವೆಗಳು, ವಿಚ್ಛೇದಿ ತರ ಪುನರ್‌ವಿವಾಹ, ಆಂಥವರ ಮಾನಸಿಕ ಸ್ಥಿತಿ, ಮುಂದಿನ ಶಕ್ತ ಪೀಳಿಗೆಯನ್ನು ನಿರ್ಮಾಣ ಮಾಡೀತೆ ಎಂಬ ಭಯ ಕಾಡುತ್ತಿದೆ. ಆದರೆ ಒಂದಂತೂ ಸತ್ಯ. ಹೆಂಗಸರು ಮೊದಲಿನಂತೆ ತಮಗೆ ಒಗ್ಗದವರ ಜೊತೆ ಇದ್ದು, ಗಂಡನ ಎದುರು ನಿಂತು ಮಾತನಾಡದೇ, ಅವರು ಕೊಡುವ ಹಿಂಸೆಯನ್ನು ಸಹಿಸಿ ಕೊಂಡು ಹೇಗೋ ಅಡ್ಜಸ್ಟ್ ಆಗಿ ಸಂಸಾರ ಸಾಗಿಸುತ್ತಿದ್ದವಳೂ, ಅಲ್ಪಸ್ವಲ್ಪ ಧನಿ ಎತ್ತುತ್ತಿರುವುದು ಸಂತಸದ ಸಂಗತಿಯಾಗಿದ್ದರೂ ಹೆಚ್ಚುತ್ತಿರುವ ವಿಚ್ಛೇದಗಳು ಆತಂಕಕ್ಕೆ ಎಡೆಮಾಡಿಕೊಟ್ಟಿದ್ದಂತೂ ಸುಳ್ಳಲ್ಲ.
ಇದು ನಮ್ಮ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರದಿರದು. ಧರ್ಮ ಪ್ರಜ್ಞೆ ಕಡಿಮೆಯಾಗುತ್ತಿರುವದು ಪಾತಕ ಜಗತ್ತಿಗೆ ಪುಷ್ಠಿಕೊಡುತ್ತಿದೆ. ಮನುಷ್ಯ ಜಾತಿಯ ಸಕಲ ಕ್ರಿಯೆಗಳೂ ಧರ್ಮಕ್ಕೆ ಪೂರಕವಾಗಿ ಇರಬೇಕೆಂಬುದು ಮನುಸ್ಮೃತಿಯಲ್ಲಿ, ಧರ್ಮವು ಮಾನವ ಜನಾಂಗದಉದ್ಧಾರಕ್ಕಾಗಿ ಇದೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಮಂತ್ರ, ಇದು ಯಾವಾಗಲೂ ಸತ್ಯ. ಅಸತ್ಯ ಧರ್ಮವಲ್ಲ. ಧರ್ಮವು ಸಮಸ್ತರಿಗೂ, ಸರ್ವರ ಕ್ಷೇಮಕ್ಕೂ ಕಾರಣವಾದ ಒಂದು ಕಟ್ಟಳೆ. ಧಾರ್ಮಿಕ ಮೌಲ್ಯಗಳಿಂದ ಜೀವನೋಭ್ಯುದಯ ಸಾಧ್ಯವೆಂದು ಧರ್ಮ ಸಾರಿ ಹೇಳುತ್ತದೆ.
ನಾವೆ ಚಿಕ್ಕವರಿರುವಾಗ ಅಧರ್ಮ, ಅಸತ್ಯಕ್ಕೆ ಯಮಲೋಕದಲ್ಲಿ ಕೊತಕೊತ ಕುದಿಯುವ ಎಣ್ಣೆಯಲ್ಲಿ ಹಾಕುತ್ತಾರೆ ಎಂದು ನಂಬಿಸಿ. ಇಂದಿಗೂ ಅದು ತಲೆಯಲ್ಲಿ ಅಚ್ಚಳಿಯದೇ ಉಳಿಯುವಂತೇ ಮಾಡಿದ್ದಾರೆ. ಆದರೆ ೨೧ನೇ ಶತಮಾನದ ಕೆನೆಪದರುಗಳಲ್ಲಿ ಹಲವಾರು ಪ್ರಶ್ನೆಗಳುಹುಟ್ಟುತ್ತಿವೆ. ಈಸಂರ್ಕೀಣತೆಯಲ್ಲಿ ಧರ್ಮ ಶಾಸದಂತೇ ನಡೆಯುವದು ಎಷ್ಟು ಪ್ರಸ್ತುತ?ಶಾಸ್ತ್ರವಿಹಿತ ನಿಷಿದ್ದಗಳನ್ನು ನಾವೆಷ್ಟು ಪಾಲಿಸುತ್ತಿದ್ದೇವೆ ಎಂಬಿತ್ಯಾದಿ. ತಿಳಿಹೇಳುವವರು, ತಿಳಿದುಕೊಳ್ಳುವವರು ಬೇಕಾಗಿದ್ದಾರೆ. ಕೂಡುಕುಟುಂಬಗಳ ಕೊರತೆ, ಒಂಟಿ ಬದುಕು, ಅತಿ ಸ್ವಾತಂತ್ರ್ಯ, ಪಾಶ್ಚಿಮಾತ್ಯರ ಕಡೆ ಸೆಳೆತ, ಹದಿ ಹರಯದ ಕೈತುಂಬ ಹಣ, ಬದುಕು ಮಜಕ್ಕೆ, ಸತ್ತ ನಂತರ ಏನೂ ಇಲ್ಲ, ಇzಗ ಅನುಭವಿಸುವ ಹಪಹಪಿತನ, ಒಳ್ಳೆಯದೇ ಆಗಲಿಲ್ಲವೆಂದಲ್ಲ ಪ್ರಮಾಣಕಡಿಮೆ ಅಷ್ಟೆ.
ಹೆಚ್ಚುತ್ತಿರುವ ಆತ್ಮಹತ್ಯೆಗಳು, ಮಾನಸಿಕವಾಗಿ ಅಶಕ್ತರಾಗುತ್ತಿರುವದು, ನಮ್ಮ ಪರಂಪರೆ, ಸಂಸ್ಕೃತಿಯ ಅದರ ಮಹತ್ವ ಅರಿಯದೇ ನಮ್ಮತನ ಕಳಕೊಂಡ ಭಾವ ಕಾಡಿ ಏಕಾಂಗಿ ತನಕ್ಕೆ, ಸ್ವಾರ್ಥಕ್ಕೆ ಇಂಬುಕೊಡುತ್ತಿದೆ. ಸರ್ವೇಭವಂತು ಸುಖೀನಃ ಸರ್ವೇಸಂತು ನಿರಾಮಯ ಭಾವ ಕಡಿಮೆಯಾಗಿ ಆಂತರಿಕ ಕಲಹ, ಕಚ್ಚಾಟ, ಆಸ್ತಿ ವಿವಾದಗಳು, ವಿಷೇಶತಃ ವಿಚ್ಛೇದನಗಳು, ಅತ್ಯಾಚಾರಗಳು, ದೊಂಬಿಗಳು ಹೆಚ್ಚಾಗುತ್ತಿರುವದು ಎಲ್ಲವೂ ಸರಿ ಇಲ್ಲ ಎಂದು ಸೂಚಿಸುತ್ತಿದೆ.
ಇದಕ್ಕೇನು ಪರಿಹಾರ? ಕಾಲಗತಿಯಲ್ಲಿ ಬದಲಾವಣೆ ಸಹಜವಾದರೂ ಇಡೀ ಸಮಾಜದ ಸುವ್ಯವಸ್ಥೆಯು ಬುಡಮೇಲು ಆದಾಗ ಎಲ್ಲವೂ ಕಲಸು ಮೇಲೋಗರವಾದೀತು. ಇದರಲ್ಲಿ ಹಿರಿಯರ ಪಾತ್ರ ಬಹಳ ಮಹತ್ವದ್ದು. ಎಲ್ಲಕ್ಕೂ ವಿಚ್ಛೇದನ ಪರಿಹಾರವಲ್ಲ, ಹೊಂದಾಣಿಕೆ, ತಾಳ್ಮೆ, ವಿವೇಕ, ನಮ್ಮ ಸಂಪ್ರದಾಯ, ಆಚಾರ, ವಿಚಾರಗಳ ಕುರಿತು ಆಗಾಗ ಚಿಕ್ಕವರಿರುವಾಗಲೇ ಮಕ್ಕಳಿಗೆ ತಿಳಿಹೇಳಿ ಅವರ ಮನೋಚೈತನ್ಯ ಹೆಚ್ಚಿಸಬೇಕು. ಕ್ಷಣಮಾತ್ರದ ಕೋಪಕ್ಕೆ ಮನಸ್ಸನ್ನು ಘಾಸಿಗೊಳಿಸಿಕೊಳ್ಳದಂತೆ, ಪರಸ್ಪರ ಹೊಂದಾಣಿಕೆಯೇ ವಿವಾಹದ ಮೂಲಮಂತ್ರವೆಂಬುದನ್ನು ಮನ ದಟ್ಟು ಮಾಡಿಸುವ ಕೆಲಸ ಮಠಮಾನ್ಯಗಳಿಂದ, ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮನದಟ್ಟು ಮಾಡಿಕೊಡಬೇಕು.
ಇದರಲ್ಲಿ ತಂದೆ ತಾಯಿಯರ ಪಾತ್ರವೂ ಹಿರೀದು. ಅಂಥಹ ವಿಪರೀತ ಪರಿಸ್ಥಿಯಲ್ಲಿ ಮಾತ್ರ ವಿಚ್ಛೇದನಕ್ಕೆ ಅವಕಾಶ ಕೊಡಬಹುದಾದರೂ ಈ ಕಳವಳ ಕಾರಿ ಬೆಳವಣಿಗೆ ಅವ್ಯವಸ್ಥಿತ ಸಮಾಜಕ್ಕೆ ನಾಂದಿಯಾಗದಿರಲಿ ಎಂಬ ಆಶಯ.
(ಲೇಖಕರು: ನಿವೃತ್ತ ಪ್ರಾಂಶುಪಾಲರು, ಎಮ್.ಎಮ್.ಕಲಾ ಮತ್ತು ವಿಜ್ಞಾನ ಮಹಾವಿದ್ಯಲಯ ಶಿರಸಿ)