ರಾಹುಲ್ ಅನರ್ಹತೆ ಪ್ರಕರಣದ ಸುತ್ತಮುತ್ತ
ವಿಶ್ಲೇಷಣೆ
ರಮಾನಂದ ಶರ್ಮಾ
ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಶಿಕ್ಷೆಯಾಗಿದೆ. ಜನಪ್ರತಿನಿಧಿ ಕಾಯ್ದೆ ಅನ್ವಯ ಅವರ ಲೋಕ ಸಭಾ ಸದಸ್ಯತ್ವ ರದ್ದಾಗಿದೆ ಮತ್ತು ಅವರು ಇನ್ನು ೮ ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತೆ ಇಲ್ಲ. ಲೋಕಸಭಾಸದಸ್ಯರಾಗಿ ಅವರಿಗೆ ನೀಡಲಾದ ಎಲ್ಲಾ ಸವಲತ್ತು ಮತ್ತು ಸೌಲಭ್ಯಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಕ್ರಮವು ದೇಶಾ ದ್ಯಂತ ಜನಸಾಮಾನ್ಯ, ಪ್ರಜ್ಞಾವಂತ ಮತ್ತು ಕಾನೂನು ಪಂಡಿತರ ವಲಯದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಸಂಸದೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥ ದೃಷ್ಟಾಂತ ಇದು ಮೊದಲಲ್ಲ.
ಉಪ್ಪು ತಿಂದವನು ನೀರು ಕುಡಿಯಬೇಕು, ಮಾತನಾಡುವವನು ನಾಲಿಗೆ ಯನ್ನು ಹರಿಯಬಿಡಬಾರದು ಎನ್ನುವುದು ಸಾಮಾನ್ಯ ಪ್ರತಿಕ್ರಿಯೆಯಾಗಿ ಕೇಳಿ ಬರುತಿದ್ದರೂ, ಈ ಪ್ರಕರಣದ ಬಗೆಗೆ ವಿಭಿನ್ನ ರೀತಿಯ ಅಭಿಪ್ರಾಯಗಳು, ವ್ಯಾಖ್ಯಾನಗಳು ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಈ ಪ್ರಕರಣ ನಮ್ಮ ರಾಜಕೀಯ ವ್ಯವಸ್ಥೆ, ರಾಜಕಾರಣದ ಓಟ, ರಾಜಕಾರಣಿಗಳು ಮತ್ತು ಬಹು ಚರ್ಚಿತ ಮತ್ತು ವಿವಾದಕ್ಕೊಳಗಾಗಿರುವ ಆಭಿವ್ಯಕ್ತಿ ಸ್ವಾತಂತ್ರ್ಯದಂಥ ಗಹನ ವಿಷಯವನ್ನು ಒಳಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಇದು ದೇಶದ ಉನ್ನತ ನ್ಯಾಯಾಲಯದಲ್ಲಿಯೇ ತಾರ್ಕಿಕ ಅಂತ್ಯ ಕಾಣುವ ಎಲ್ಲಾ ಸಾಧ್ಯತೆ ಗಳು ಗೋಚರಿಸುತ್ತಿವೆ.
ಈ ನಿಟ್ಟಿನಲ್ಲಿ ಮೊದಲ ಮೇಲ್ಮನವಿ ಸೂರತ್ ಸೆಷನ್ಸ್ ಕೋರ್ಟ್‌ನಲ್ಲಿ ದಾಖಲಾಗುತ್ತಿದೆ. ದೇಶದ ಘಟಾನುಘಟಿ ಕಾನೂನು ಪಂಡಿತರು, ವಿಶ್ಲೇಷಕರು ಬೆವರು ಸುರಿಸುವುದನ್ನು ನಿರೀಕ್ಷಿಸಬಹುದು. ಈವರೆಗೆ ದೇಶದ ನ್ಯಾಯಾಲಯಗಳಲ್ಲಿ ಐತಿಹಾಸಿಕ ಪ್ರಕರಣಗಳು ಎನ್ನಲಾದ ಕೇಶವಾನಂದ, ಗೋಲಕ ನಾಥ್, ರಾಜಧನ ರದ್ದತಿ , ಬ್ಯಾಂಕ್ ರಾಷ್ಟ್ರೀಕರಣ, ಬೋಫೋರ್ಸ್, ಅಯೋಧ್ಯಾ ರಾಮಮಂದಿರದಂಥ ಪ್ರಕರಣಗಳಂತೆ ಈ ಪ್ರಕರಣ ಕೂಡ ಭಾರೀ ಸದ್ದು ಮಾಡುವ ಸಾಧ್ಯತೆ ಎದ್ದು ಕಾಣುತ್ತದೆ. ದೇಶದಲ್ಲಿ ನ್ಯಾಯಾಲಯದ ತೀರ್ಪು ಬಂದ ನಂತರ ಆ ತೀರ್ಪನ್ನು ಜಾರಿಗೊಳಿಸುವುದು ಸಹಜ. ತೀರ್ಪು ಜಾರಿಯಾಗದ ಪ್ರಕರಣಗಳೂ ಇರಬಹುದು.
ಆದರೆ, ನ್ಯಾಯಾಲಯ ‘ಅಪರಾಧಿ’ ಎಂದು ಘೋಷಿಸಿದ ನಂತರ ಅಲ್ಪಾವಧಿಯಲ್ಲಿಯೇ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ರೀತಿ ಮತ್ತು ಅದನ್ನು ಜಾರಿಗೊಳಿಸಿದ ವೇಗವು ಚರ್ಚೆಯನ್ನು ಹುಟ್ಟು ಹಾಕಿದೆ. ರಾಹುಲ್ ಅಪರಾಧ ಎಸಗಿದ್ದಾರೆ ಎನ್ನುವು ದರಲ್ಲಿ ಎರಡು ಮಾತಿಲ್ಲ. ಅವರು ಮಾಡಿದ ತಪ್ಪು ಅವರನ್ನು ಸಂಸದರ ಸ್ಥಾನದಿಂದ ಅನರ್ಹ ಮಾಡುವಷ್ಟು ಗಂಭಿರವಾಗಿತ್ತೇ ಎನ್ನುವುದು ಚರ್ಚಾಸ್ಪದ ವಿಷಯವಾಗಿದೆ. ಈ ಪ್ರಕರಣದಲ್ಲಿ ಬಂದಿರುವ ತೀರ್ಪು ಎಷ್ಟರ ಮಟ್ಟಿಗೆ ಸಶಕ್ತವಾಗಿದ್ದು ಮೇಲಿನ ನ್ಯಾಯಾಲಯಗಳಲ್ಲಿ ಮೇಲ್ಮನವಿಯನ್ನು ತಡೆಯಬಹುದೇ ಎನ್ನುವ ಜಿಜ್ಞಾಸೆ ಕೂಡ ಇದೆ.
ಮಾನನಷ್ಟ ಪ್ರಕರಣದಲ್ಲಿ ನೀಡುವ ಗರಿಷ್ಠ ಶಿಕ್ಷೆಯನ್ನು ಈ ಪ್ರಕರಣದಲ್ಲಿ ನೀಡಿದ್ದು, ಸಾಮಾನ್ಯವಾಗಿ ಮೊದಲ ಬಾರಿ ಎಸೆಗಿದ ಇಂಥ ಅಪರಾಧಕ್ಕೆ ಇಷ್ಟು ಗರಿಷ್ಠ ಶಿಕ್ಷೆಯನ್ನು ನೀಡುವುದಿಲ್ಲ ಎನ್ನುವ ಅಭಿಪ್ರಾಯವೂ ಕೇಳುತ್ತಿದೆ. ಮಾನನಷ್ಟ ಮೊಕದ್ದಮೆಯಲ್ಲಿ ದುರುದ್ದೇಶದಿಂದ ಒಬ್ಬ ವ್ಯಕ್ತಿಯು ಇನ್ನೊಬ್ಬನ ಮಾನಹಾನಿ ಮಾಡಿದರೆ ಮಾನನಷ್ಟ ಕಾನೂನು ಅನ್ವಯವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ಅವಹೇಳನ ಮಾಡದೇ ಒಂದು ಗುಂಪಿನ ವಿರುದ್ಧ ಅವಹೇಳನ ಮಾಡಲಾಗಿದ್ದು, ಕಾನೂನು ಪಂಡಿತರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತ ಮಾಡುತ್ತಿದ್ದಾರೆ.
ಅದಕ್ಕೂ ಮೇಲಾಗಿ ಮೋದಿ ಒಂದು ಜಾತಿ ಸೂಚಕವಲ್ಲ ಎಂದೂ ಹೇಳಲಾಗುತ್ತಿದೆ. ಹತ್ಯೆ ಪ್ರಕರಣದಲ್ಲಿ ನವಜೋತ್ ಸಿಂಗ್ ಕೇವಲ ಒಂದು ವರ್ಷ ಶಿಕ್ಷೆ ಅನುಭವಿಸಿ ಈಗ ಒಳ್ಳೆ ನಡತೆಗಾಗಿ ಹತ್ತು ತಿಂಗಳಿನಲ್ಲಿಯೇ ಹೊರಬಂದಿದ್ದು, ರಾಹುಲ್ ಗಾಂಽ ಪ್ರಕರಣ ಇದಕ್ಕಿಂತ ಘೋರ ಅಪರಾಧವಾಗಿತ್ತೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಈ ಎಲ್ಲಾ ವಿಶ್ಲೇಷಣೆಗಳು, ವಾಖ್ಯಾನ ಗಳು, ಅರ್ಥೈಸುವಿಕೆಗಳು ಒಂದು ರೀತಿಯಲ್ಲಿ ‘ಆನೆ ಮತ್ತು ಐವರು ಕುರುಡರು’ ಎನ್ನುವಂತೆ ಅವರವರ ಅನುಭವ, ಕಾನೂನುಜ್ಞಾನ, ರಾಜಕೀಯ ಮತ್ತು ಸಾಮಾಜಿಕ ನಿಲುವು ಗಳ ಮೇಲೆ ಇದ್ದು, ಸೂರತ್ ನ್ಯಾಯಾಲಯದ ತೀರ್ಪನ್ನು ಸರಿ ಅಥವಾತಪ್ಪು ಎಂದು ನಿಖರವಾಗಿ ಹೇಳಲಾಗುವುದಿಲ್ಲ.
ಭಾರತದ ರಾಜಕಾರಣದ ಸತ್ವ ಇರುವುದು ರಾಜಕೀಯ ಎದುರಾಳಿಗಳ ವಿರುದ್ಧದ ಟೀಕೆ, ಅವಹೇಳನ, ಚಾರಿತ್ರ್ಯ ವಧೆಯ ಮೇಲೆ. ತತ್ವ, ಆದಶ, ನೀತಿ-ನಿಯಮಾವಳಿ, ಕಾರ್ಯಕ್ರಮಗಳು, ಯೋಜನೆಗಳು ಇವೆಲ್ಲ ಮೇಲ್ನೋಟಕ್ಕೆ ತೋರಿಕೆಗೆ ಮಾತ್ರ. ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಇವುಗಳನ್ನು ಗಾಳಿಗೆ ತೂರಲಾಗುತ್ತದೆ. ಅತಿ ಹೆಚ್ಚು ಟೀಕೆಗಳನ್ನು ಹರಿಬಿಟ್ಟವನೇ ಜನಪ್ರಿಯ ಧುರೀಣನಾಗಿ ಹೊರ ಹೊಮ್ಮುತ್ತಾನೆ.
ಇಂಥವರನ್ನು ಪಕ್ಷಗಳು ತಮ್ಮ ಮುಖ್ಯ ಪ್ರಚಾರಕರನ್ನಾಗಿ ನಿಯುಕ್ತಿಗೊಳಿಸುತ್ತವೆ. ಇವುಗಳಲ್ಲಿನ ವಿಶೇಷತೆ ಎಂದರೆ ಈ ರೀತಿ ಟೀಕೆ ಮಾಡುವವರು ಮತ್ತು ಅವಹೇಳನ ಮಾಡುವವರು ಯಾರೂ ಅದನ್ನು ಹೃದಯಪೂರ್ವವಾಗಿ ಮಾಡುವುದಿಲ್ಲ. ಇವೆಲ್ಲವೂ ಭಾಷಣದ ಭರದಲ್ಲಿ, ನೆರೆದಿರುವ ಜನಸ್ತೋಮದ ಮುಂದೆ ಉದ್ವೇಗದಲ್ಲಿ, ಆವೇಶ ಭರಿತರಾಗಿ ಹೇಳಿದ ಮಾತುಗಳೇ ಆಗಿರು ತ್ತವೆ ವಿನಹ ಅವುಗಳಲ್ಲಿ ಅಂಥ ತೂಕ ಇರುವುದಿಲ್ಲ.
ಕುಡುಕರ ಮಾತುಗಳನ್ನು ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ಆಡಿದ ಕೆಲವು ಮಾತುಗಳನ್ನು ಯಾರೂ ಗಂಭೀರ ವಾಗಿ ತೆಗೆದುಕೊಳ್ಳಬಾರದು ಎನ್ನುವ ತಮಾಷೆ ಕೂಡ ಇದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಮಾಡಿದ ಅವಹೇಳನ ಮತ್ತು ಟೀಕೆಗಳನ್ನು ಅಲ್ಲಿಯೇ ಮರೆಯುವ ಜಾಯಮಾನವನ್ನು ನಮ್ಮ ರಾಜಕೀಯದಲ್ಲಿ ಕಾಣಬಹುದು. ಯಾರೂ ಇದನ್ನು ಅಹಂ ಮತ್ತು ಪ್ರತಿಷ್ಠೆಯ ವಿಷಯವಾಗಿ ನ್ಯಾಯಾಲಯದ ಮೆಟ್ಟಿಲೇರುವುದು ತುಂಬಾ ವಿರಳ ಎನ್ನಬಹುದು. ಕೆಲವರು ಮಾನ ನಷ್ಟ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದು, ಅ ಬೆದರಿಕೆ ಹಾಗೆಯೇ ತಣ್ಣಗಾಗುವ ಪ್ರಮೇಯಗಳು ಹೆಚ್ಚು.
ಸಾಂಕೇತಿಕವಾಗಿ ಒಂದು ರುಪಾಯಿ ಪರಿಹಾರ ಕೇಳಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಕೆಲವು ಉದಾಹರಣೆಗಳುಇರಬಹುದು. ಇವುಗಳನ್ನು ಯಾರೂ ತಾರ್ಕಿಕ ಅಂತ್ಯಕ್ಕೆ ತಲುಪಿಸುವುದಿಲ್ಲ. ರಾಹುಲ್ ಗಾಂಧಿ ಕೋಲಾರದ ಚುನಾವಣಾಪ್ರಚಾರದ ಸಮಯದಲ್ಲಿ ಮಾಡಿದ ಭಾಷಣವನ್ನು ಇಷ್ಟು ಗಂಭೀರವಾಗಿ ಪರಿಗಣಿಸಿದ್ದು ಸ್ವಲ್ಪ ವಿಶೇಷ ಎನಿಸುತ್ತದೆ.
೨೦೧೪ ರ ಲೋಕಸಭಾ ಚುನಾವಣಾ ಪೂರ್ವದಲ್ಲಿ ಖ್ಯಾತ ಪತ್ರಕರ್ತ ಅರ್ನಾಬ್ ಗೊಸ್ವಾಮಿ, ರಾಹುಲ್ ಗಾಂಧಿಯವರನ್ನು ತಮ್ಮ ಟಿವಿ ವಾಹಿನಿಗಾಗಿ ಸಂದರ್ಶಿಸಿದ್ದು, ಅದರಲ್ಲಿ ಅರ್ನಾಬ್ ರಾಹುಲ್ ಗಾಂಧಿಯವರ ಎಳಸುತನ, ಅಪಕ್ವತೆ, ಅಪ್ರಬುದ್ಧತೆ ಯನ್ನು ಹರಾಜು ಹಾಕಿ, ಅವರನ್ನು ‘ಪಾಪು’ ವನ್ನಾಗಿ ಮಾಡಿದ್ದರು. ಈ ಸಂದರ್ಶನದ ನಂತರ ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ಅವರ ನಿತ್ಯ ತೇಜೋವಧೆ ನಡೆಯುತ್ತಿದೆ. ಅದರಲ್ಲಿ ಬಳಸುವ ಪದಗಳು, ಭಾಷೆಗಳು, ಉಪಮೆ-ಅಲಂಕಾರಗಳನ್ನು ಪಟ್ಟಿ ಮಾಡಿ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷ ಮಾನನಷ್ಟ ಮೊಕದ್ದಮೆ ಹೂಡಿದ್ದರೆ, ಅದೆಷ್ಟು ಜನರು ನ್ಯಾಯಾಲಯಕ್ಕೆ ಅಡ್ಡಾಡಬೇಕಿತ್ತೋ? ಈ ಅವಹೇಳನ, ವ್ಯಂಗ್ಯ, ಜೋಕುಗಳು, ಟೀಕೆ, ತೇಜೋವಧೆಯ ಎದುರಿಗೆ ರಾಹುಲ್ ಗಾಂಧಿಯವರು ಮಾಡಿದ್ದಾರೆಂದು ಹೇಳಲಾಗುವ ತೇಜೋವಧೆ ಏನೂ ಅಲ್ಲ.
ಅವರ ಪ್ರತಿಯೊಂದು ನಡೆ, ಮಾತು, ಪ್ರತಿಕ್ರಿಯೆಯನ್ನು ಹೀನಾಯವಾಗಿ ಲೇವಡಿ ಮಾಡಲಾಗುತ್ತದೆ. ಇದರಲ್ಲಿ ತೊಡಗಿ ದವರೆಲ್ಲ ಭಾರಾಖೂನ್ ಮಾಫ್ ಎನ್ನುವಂತೆ ಅಡ್ಡಾಡಿಕೊಂಡು ಇದ್ದಾರೆ. ರಾಹುಲ್ ಮತ್ತು ಕಾಂಗ್ರೆಸ್ ಪಕ್ಷ ಮನಸ್ಸು ಮಾಡಿದ್ದರೆ ಅವರ ಬದುಕನ್ನು ಹೈರಾಣಾಗಿಸಬಹುದಿತ್ತು. ದಿನ ನಿತ್ಯದ ಜೀವನದಲ್ಲಿ ಮತ್ತು ಕೆಲವು ಬಾರಿ ಅಭಿಪ್ರಾಯಗಳನ್ನು ವ್ಯಕ್ತ ಮಾಡುವಾಗ ಕೆಲವು ಅನಪೇಕ್ಷಿತ, ಲೇವಡಿ ಮಾಡುವ, ಅವಹೇಳನ ಮಾಡುವ ಪದಪುಂಜಗಳು ಅರಿವಿಲ್ಲದಂತೆ ಹೊರ ಬರುತ್ತವೆ. ಇದರ ಹಿಂದೆ ಯಾವುದೇ ಉದ್ದೇಶ ಇರುವುದಿಲ್ಲ ಮತ್ತು ಕೇಳುಗರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವು ದಿಲ್ಲ. ಅಡ್ನಾಡಿ, ಮೆಂಟಲ್, ಅರೆಹುಚ್ಚ , ಬೂಟು ನೆಕ್ಕುವವರು, ರಕ್ತ ಪಿಪಾಸುಗಳು, ನಪುಂಸಕರು, ಗುಳ್ಳೆನರಿಗಳು, ಬಕೆಟ್ ಹಿಡಿಯುವವರು, ರೌಡಿಶೀಟರ್‌ಗಳು, ಅಲೆಮಾರಿಗಳು, ಧಮ್ ಇಲ್ಲದವರು- ಹೀಗೆ ಹಲವು ಹೀನಾಯ ಶಬ್ದಗಳು ಅವ್ಯಾಹತ ವಾಗಿ ಕೇಳಿ ಬರುತ್ತವೆ.
ಜನಸಾಮಾನ್ಯರೊಂದಿಗೆ ಕೆಲವು ರಾಜಕಾರಣಿಗಳೂ ಇವುಗಳನ್ನು ಯಥೇಚ್ಛವಾಗಿ ಬಳಸುತ್ತಾರೆ. ರಾಜಕಾರಣಿಗಳನ್ನು ಸಾರಾಸಗಟಾಗಿ ‘ಎಲ್ಲರೂ ಕಳ್ಳರು’ ಎಂದು ಜನಮಾನ್ಯರು ತಮ್ಮತಮ್ಮೊಳಗೆ ಆಡಿಕೊಳ್ಳುವುದು ಸಾಮಾನ್ಯ ದೃಶ್ಯಾವಳಿ. ಇವುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂಥ ಹೇಳಿಕೆಗಳಿಂದ ತಮ್ಮ ಮಾನ ಹರಾಜಾಯಿತೆಂದು ಹೂಂಕರಿಸುವುದಿಲ್ಲ. ಹಾಗೆಯೇ ಜಾತಿ ಆಧಾರಿತ, ಭಾಷೆ ಆಧಾರಿತ ಮತ್ತು ಪ್ರದೇಶ ಆಧಾರಿತ ಬೈಗುಳ ಟೀಕೆಗಳು ತೀರಾಸಾಮಾನ್ಯ. ಜಾತಿ ಆಧಾರಿತ ಅವಹೇಳನದಲ್ಲಿ ಬ್ರಾಹ್ಮಣರು ಮೊದಲ ಟಾರ್ಗೆಟ್.
ಮನುವಾದಿಗಳು, ತಟ್ಟೆ ಕಾಸಿನವರು, ಬೇಡಿ ತಿನ್ನುವವರು, ಜಾತಿವಾದಿಗಳು ಎಂದೆಲ್ಲಾ ಟೀಕಿಸಲಾಗುತ್ತದೆ. ಜಾತಿ ವ್ಯವಸ್ಥೆಗೆ ಅವರನ್ನೇ ದೂರಲಾಗುತ್ತದೆ. ಮಾರ್ವಾಡಿಗಳು, ಸರ್ದಾರ್ಜಿಗಳು , ಪಾನಿಪೂರಿವಾಲಾಗಳು, ಸಮೋಸಾಗಳು, ಪಾವ್ ಬಾಜಿಗಳು ಎಂದೂ ಲೇವಡಿ ಮಾಡಲಾಗುತ್ತದೆ. ದಕ್ಷಿಣ ಭಾರತದವರು ಕೂಡ ನಿರಂತರವಾಗಿ ಟೀಕೆಗೆ ಒಳಗಾಗುತ್ತಾರೆ. ಸಾಲಾ ಮದ್ರಾಸಿ ಲೋಗ್ ಎನ್ನುವುದು ಚಿರಪರಿಚಿತ ಅವಹೇಳನ ಶಬ್ದ. ಜೋಕುಗಳು ಬಂದಾಗ ಸರ್ದಾರ್ಜಿಗಳನ್ನು ಗುರಿ ಮಾಡಲಾಗುತ್ತದೆ. ಸರ್ದಾರ್ಜಿ ಜೋಕುಗಳನ್ನು ನಿಷೇಧಿಸಬೇಕು ಎಂದು ಕೆಲವರು ನ್ಯಾಯಾಲಯದ ಬಾಗಿನ್ನು ತಟ್ಟಿದ್ದರಂತೆ. ಇವು ಸಮಾಜದಲ್ಲಿ ದಿನ ನಿತ್ಯದ ಬದುಕಿನಲ್ಲಿ ಕೇಳುವ ಅವಹೇಳನದ ಸ್ಯಾಂಪಲ್ಲು ಗಳು. ಆಶ್ಚರ್ಯ ವೆಂದರೆ ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಂಡು ತಾರ್ಕಿಕ ಅಂತ್ಯಕ್ಕಾಗಿ ಹೋರಾಡುವುದಿಲ್ಲ.
ಆರಂಭಿಕವಾಗಿ ತಾವು ಗಮನಿಸಿದ್ದೇವೆಂದು ತಿಳಿಸಲು ಸ್ವಲ್ಪ ಅವಾಜ್ ಹಾಕುತ್ತಾರೆ ಮತ್ತು ಹಾಗೆಯೇ ಕಳಂಕವನ್ನು ಒರೆಸಿಬಿಸಾಡುತ್ತಾರೆ. ರಾಹುಲ್ ಗಾಂಧಿಯವರ ಅನರ್ಹತೆಯ ಹಿಂದಿನ ಕಾರಣ, ವಿರೋಧಿಗಳು ಹೇಳುವ ಷಡ್ಯಂತ್ರ, ಹಿಂದಿನ ರಾಜಕೀಯ ತಂತ್ರಗಾರಿಕೆ ಏನೇ ಇರಲಿ, ಇದು ಮುಂದಿನ ದಿನಗಳಲ್ಲಿ ದೇಶದಲ್ಲಿ ಮಹತ್ತರ ರಾಜಕೀಯ ಬದಲಾವಣೆಯನ್ನು ಉಂಟು ಮಾಡುವ ಸಾಧ್ಯತೆಯನ್ನು ಸೂಚಿಸುತ್ತಿದೆ. ೨೦೧೪ ಮತ್ತು ೨೦೧೯ ರ ಅವಮಾನವೀಯ ಪತನ ಅಥವಾ ಶರಣಾ ಗತಿಯ ನಂತರವೂ ಪಾಠ ಕಲಿಯದ ಭಾಜಪೇತರ ಪಕ್ಷಗಳು ಒಂದೇ ದೋಣಿಯನ್ನು ಹತ್ತುವ ಸಂಕೇತ ದೂರದಲ್ಲಿ ಕಾಣುತ್ತಿದೆ.
ಇನ್ನೂ ಒಂದುಗೂಡದಿದ್ದರೆ ರಾಜಕೀಯ ಭೂಪಟದಿಂದ ಕಾಣೆಯಾಗುವ ಭಯ ಆವರಿಸಿದ್ದು, ಒಗ್ಗೂಡುವ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ ಗೋಚರಿಸುತ್ತಿದೆ. ನಿರ್ಲಕ್ಷ ಮಾಡಿದ್ದರೆ, ರಾಹುಲ್ ಅವರಾಗಿಯೇ ರಾಜಕೀಯ ಭೂಪಟದಿಂದ ನಿರ್ಗಮಿಸುತ್ತಿದ್ದರೇನೋ? ಆದರೆ, ಅವರನ್ನು ಅನರ್ಹಗೊಳಿಸಿ, ಅವರಿಗೆ ರಾಜಕೀಯವಾಗಿ ಅನುಕಂಪದ ಅಲೆಯನ್ನು ನೀಡಿ, ರಾಜಕೀಯ ಪುನರ್ಜನ್ಮ ನೀಡಲಾಗುತ್ತಿದೆ ಎನ್ನುವ ಭಾವನೆ ದೇಶದಲ್ಲಿ ಮೂಡುತ್ತಿದೆ. ವಿದೇಶಿ ಮಾಧ್ಯಮಗಳೂ ಇದೇ ಭಾಷೆಯಲ್ಲಿ , ಧ್ವನಿಯಲ್ಲಿ ಭಾಷ್ಯ ಬರೆಯುತ್ತಿವೆ. ಅನರ್ಹತೆಗೆ ಬಂದ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥ ಭಾವನೆ ಸತ್ಯಕ್ಕೆ ದೂರವಿಲ್ಲ ಎನಿಸುತ್ತದೆ.