ಆರೋಗ್ಯವಾಗಿದ್ದರೆ ಬಡವನೂ ಶ್ರೀಮಂತನೇ
ಆರೋಗ್ಯ- ಭಾಗ್ಯ
ಬಸವರಾಜ ಎಂ.ಯರಗುಪ್ಪಿ
ಮನುಷ್ಯನಿಗೆ ಆರೋಗ್ಯವೇ ಶ್ರೇಷ್ಠ ಉಡುಗೊರೆ. ಸಂತೃಪ್ತಿಯೇ ಶ್ರೇಷ್ಠ ಸಂಪತ್ತು. ವಿಶ್ವಾಸಾರ್ಹತೆಯೇ ಶ್ರೇಷ್ಠ ಸಂಬಂಧ ಎಂದು – ಗೌತಮ ಬುದ್ಧ ಹೇಳಿರುವ ನುಡಿಯ ಉಲ್ಲೇಖ ಈ ದಿನಗಳಲ್ಲೂ ಪ್ರಸ್ತುತ. ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಇಂದಿಗೂ ಈ ಮಾತು ಅನ್ವಯಿಸುತ್ತದೆ. ಅದೇರೀತಿಯಾಗಿ ಆರೋಗ್ಯ ನಿಜವಾದ ಸಂಪತ್ತೆ ಹೊರತು, ಚಿನ್ನ, ಬೆಳ್ಳಿಯ ತುಂಡುಗಳಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದರು.
ಕೋವಿಡ್-೧೯ ಸಾಂಕ್ರಾಮಿಕ ಆರಂಭದ ಬಳಿಕ ಈ ಮಾತಿಗೆ ಹೆಚ್ಚಿನ ಮಹತ್ವ ದೊರೆತಿದೆಯೇನೋ ಎಂದು ಅನಿಸುವುದು ಸುಳ್ಳಲ್ಲ. ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾ ಜಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯದ ಜೊತೆಗೆ ಜೀವನಶೈಲಿಯು ತುಂಬಾ ಮುಖ್ಯ. ಉತ್ತಮ ಆರೋಗ್ಯವು ನಾವು ಖರೀದಿಸಬಹುದಾದ ವಸ್ತುವಲ್ಲ. ಆದಾಗ್ಯೂ,ಇದು ಅತ್ಯಂತ ಮೌಲ್ಯಯುತ ವಾದ ಉಳಿತಾಯ ಖಾತೆಯಾಗಿರುತ್ತದೆ. ಆದರೆ ಪ್ರಪಂಚದ ಎಲ್ಲಾ ಹಣವು ನಿಮಗೆ ಉತ್ತಮ ಆರೋಗ್ಯವನ್ನು ಮರಳಿ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿವರ್ಷ ಏಪ್ರಿಲ್ ೭ ರಂದು ವಿಶ್ವ ಆರೋಗ್ಯ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಗತ್ತಿನಾದ್ಯಂತ ಇತರ ಆರೋಗ್ಯ ಸಂಬಂಧಿತ ಸಂಸ್ಥೆಗಳು ಆಚರಿಸುತ್ತವೆ. ಉತ್ತಮ ಆರೋಗ್ಯದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಆರೋಗ್ಯ ದಿನದ ಉದ್ದೇಶವಾಗಿದೆ.
ಪ್ರಥಮ ವಿಶ್ವ ಆರೋಗ್ಯ ದಿನ :೧೯೫೦ರ ಏಪ್ರಿಲ್ ೭ ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸ ಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ ಒಂದು ವಿಷಯದ ಮೇಲ್ಪಂಕ್ತಿ ಯನ್ನು ಆರಿಸಿ ಆ ವಿಷಯದ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ಅನುಷ್ಠಾನಗೊಳಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ.
ಆರೋಗ್ಯ ಎಂದರೆ ನಮ್ಮ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕವಾಗಿ ಮಾನಸಿಕ ಸಮತೋಲನ ಹೊಂದಿರುವುದೇ ಆಗಿದೆ. ಸಂಪೂರ್ಣ ಯೋಗಕ್ಷೇಮದತ್ತ ಜನರ ಗಮನವನ್ನು ಸೆಳೆಯಲು, ವಿಶ್ವ ಆರೋಗ್ಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಪ್ರಪಂಚ ದಾದ್ಯಂತ ಬಡತನದಿಂದ ಬಳಲುತ್ತಿರುವ ಪ್ರದೇಶಗಳ ಜನರಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಆರೋಗ್ಯ ದಿನಾಚರಣೆಯ ಹಿಂದಿನ ಪ್ರಮುಖ ಉದ್ದೇಶದ ಜೊತೆಗೆ ಗುರಿಯೂ ಆಗಿದೆ.
ಯಾತಕ್ಕಾಗಿ ಈ ಆಚರಣೆ? :ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದು ವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮಾಹಿತಿಯನ್ನು ನೀಡುತ್ತಾರೆ. ಇದರಿಂದ ಸಮಾಜದ ಆರೋಗ್ಯಉತ್ತಮ ಗೊಳ್ಳುತ್ತದೆ. ಆರೋಗ್ಯಕರ ಸಮಾಜ, ದೇಶದ ಶಕ್ತಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
ಆರೋಗ್ಯವೇ ಭಾಗ್ಯ:ಈ ನುಡಿಯನ್ನು ನಾವು ಆಗಾಗ್ಗೆ ಕೇಳುತ್ತಾ ಇರುತ್ತೇವೆ. ಇದು ಆರೋಗ್ಯದ ಮಹತ್ವ ಮಾಹಿತಿ ನೀಡುವ ಸಾರ್ವತ್ರಿಕವಾದಮಾತಾಗಿದೆ. ಈ ಹಿಂದೆ ವಿಶ್ವ ಸಂಸ್ಥೆ ಆರೋಗ್ಯ ಎಂದರೆ ‘ರೋಗವಿಲ್ಲದಿರುವುದೇ ಆರೋಗ್ಯ’ ಎಂಬ ವ್ಯಾಖ್ಯಾನ ನೀಡಿತ್ತು. ಆದರೆ ಈಗ ಬದಲಾದ ಪರಿಸ್ಥಿತಿ ಮತ್ತು ಕಾಲಘಟ್ಟದಲ್ಲಿ ಈ ವ್ಯಾಖ್ಯಾನ ತನ್ನ ಅರ್ಥವನ್ನು ಕಳೆದುಕೊಂಡಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಈಗ ದುರ್ಬೀನು ಹಾಕಿ ಹುಡುಕಿ ದರೂ ನಮಗೆ ಆರೋಗ್ಯವಂತ ವ್ಯಕ್ತಿ ಸಿಗುವುದು ಕಷ್ಟ. ಒಂದು ವೇಳೆ ಆತ ಅಥವಾ ಆಕೆ ದೈಹಿಕವಾಗಿ ಆರೋಗ್ಯವಂತನಾಗಿದ್ದರೂ ಮಾನಸಿಕ ವಾಗಿ ಬಹಳಷ್ಟು ಒತ್ತಡ ಅಥವಾ ಆತಂಕದಿಂದ ಇರುತ್ತಾನೆ. ಈ ನಿಟ್ಟಿನಲ್ಲಿ ನಾವು ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತ ಎಂದು ಪ್ರಾಮಾಣೀಕರಿಸಬೇಕಾದರೆ ಆತ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಆರೋಗ್ಯವಂತನಾಗಿರಲೇ ಬೇಕು.
೨೦೨೩ರ ವಿಶ್ವ ಆರೋಗ್ಯ ದಿನಾಚರಣೆ ಉದ್ದೇಶ:ವಿಶ್ವ ಆರೋಗ್ಯ ದಿನವನ್ನು ಆಚರಿಸಲು ನಿರ್ದಿಷ್ಟ ಉದ್ದೇಶವನ್ನು ವಿಶ್ವ ಆರೋಗ್ಯ ಸಂಸ್ಥೆ ಇಟ್ಟುಕೊಂಡಿದೆ. ಹಾಗಾಗಿ ೨೦೨೩ನೇ ಇಸ್ವಿಯ ಉದ್ದೇಶ – ಎಲ್ಲರಿಗೂ ಆರೋಗ್ಯ ಎಂದು ಒತ್ತಿ ಹೇಳಿದೆ.
ಆರೋಗ್ಯದ ರಕ್ಷಣೆಗಿರುವ ಕ್ರಮಗಳು:‘ಬೇಗ ಮಲಗಿ ಬೇಗ ಏಳು’ ಎಂಬ ಹಿರಿಯರ ಮಾತನ್ನು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸಿಕೊಂಡು ಈ ಕೆಳಗಿನ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕು.
೧) ಧೂಮಪಾನ ಮದ್ಯಪಾನದಿಂದ ದೂರವಿರಿ.೨) ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ನೀಡಿ.೩) ಆದಷ್ಟು ಹಸಿ ತರಕಾರಿ, ಹಸಿರು ಸೊಪ್ಪು, ಕಾಳು ಬೇಳೆ ಇರುವ ಆಹಾರ ಸೇವಿಸಿರಿ.
೪) ಸ್ವಯಂ ಔಷಧಿಗಾರಿಕೆ ಮಾಡುವುದು ಬೇಡ.೫) ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಬಿರುಸು ನಡಿಗೆ, ವ್ಯಾಯಾಮ, ಸ್ವಿಮ್ಮಿಂಗ್, ಸೈಕ್ಲಿಂಗ್ ಗಳನ್ನು ಅಳವಡಿಸಿಕೊಳ್ಳಿ.
೬) ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯನ್ನು ನಿಯಂತ್ರಿಸಿ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಉಪಕರಣ ಬರುವುದು ಸಹಜ. ಆದರೆ ಅನಿವಾರ್ಯದಲ್ಲಿ ಮಾತ್ರ ಬಳಸಿ.
ಆಚರಣೆ ಹೇಗೆ? :ವಿಶ್ವ ಆರೋಗ್ಯ ದಿನವನ್ನು ಆಚರಿಸಲು ವಿಶ್ವ ಆರೋಗ್ಯ ಸಂಸ್ಥೆ, ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಅಂತಾರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದಲ್ಲದೇ ಶಾಲಾ-ಕಾಲೇಜುಗಳಲ್ಲಿ ವಿಚಾರ ಸಂಕಿರಣ, ಕಾರ್ಯಾಗಾರ, ಚರ್ಚಾಸ್ಪರ್ಧೆ ನಡೆಸಿ ಯುವ ಪೀಳಿಗೆಗೆ ಚಿಕ್ಕ ವಯಸ್ಸಿನಲ್ಲೇ ಉತ್ತಮ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಓಟ, ಸೈಕ್ಲಿಂಗ್, ಹೈಕಿಂಗ್ ಮುಂತಾದ ಹೊರಾಂಗಣ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ದೈನಂದಿನ ಜೀವನದಲ್ಲಿ ಅವುಗಳನ್ನು ಅಭ್ಯಾಸ ಮಾಡಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಯೋಗ ಮತ್ತು ಧ್ಯಾನವು ಉತ್ತಮ. ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಪ್ರೋತ್ಸಾಹಿಸಲಾಗುತ್ತದೆ. ಈ ಚಟುವಟಿಕೆಗಳ ಜೊತೆಗೆ, ಅನೇಕ ಪ್ರದೇಶಗಳಲ್ಲಿ ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವ ಪ್ರಾಮುಖ್ಯತೆಯ ಕುರಿತು ವಿಚಾರಗೋಷ್ಠಿಗಳನ್ನು ಸಹ ನಡೆಸಲಾಗುತ್ತದೆ.
ಒಟ್ಟಿನಲ್ಲಿ ಸಮುದಾಯ ಆರೋಗ್ಯವಾಗಿಲ್ಲದಾಗ ಸುಂದರ ಸದೃಢ ಸಮಾಜದ ನಿರ್ಮಾಣ ಖಂಡಿತ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ ‘ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ’ ಎಂಬ ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ದಿನದ ಆಚರಣೆಯ ಧ್ಯೇಯ ವಾಕ್ಯಕ್ಕೆ ನ್ಯಾಯ ಒದಗಿದಂತಾಗುತ್ತದೆ. ಇಲ್ಲವಾದಲ್ಲಿ ಎಲ್ಲರಿಗೂ ಆರೋಗ್ಯ ಎನ್ನುವುದು ಮರೀಚಿಕೆಯಾಗುವ ಎಲ್ಲ ಸಾಧ್ಯತೆಗಳು ಇವೆ. ಹೀಗಾಗಿಮನುಷ್ಯ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ಆರೋಗ್ಯ ಅತ್ಯಗತ್ಯ. ಅದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಒಳಗೊಂಡಿರುತ್ತದೆ. ಆರೋಗ್ಯದ ನಿಜವಾದ ಅರ್ಥ, ಕಾಳಜಿ ಹಾಗೂ ಸಮುದಾಯದ ಆರೋಗ್ಯ ಕಾಪಾಡಲು ವ್ಯಕ್ತಿ ಮಾಡಬೇಕಾದ ಕರ್ತವ್ಯದ ಬಗ್ಗೆ ಅರಿವು ಮೂಡಿದಾಗ ಮಾತ್ರ ಈ ದಿನಾಚರಣೆ ಸಾರ್ಥಕವಾಗಲು ಸಾಧ್ಯ. ಅಂತಸ್ತು ಒಬ್ಬರ ಸಾಮಾಜಿಕ ಸ್ಥಾನಮಾನ ಹೇಳುತ್ತೆ, ಆದ್ರೆ ಆರೋಗ್ಯ ಅದನ್ನೆಲ್ಲಾ ಮೀರಿದ್ದಾಗಿದೆ. ಹಾಗಾಗಿ ಆರೋಗ್ಯವಾಗಿದ್ರೆ ಬಡವನೂ ಸಿರಿವಂತನಾಗಬಹುದು. ಸರಿ ತಾನೆ?
ಕೊನೆಯ ಮಾತು:ಶಿಕ್ಷಣದ ಹೊರತಾಗಿ ಉತ್ತಮ ಆರೋಗ್ಯ ಬೇಕು. ಅದಕ್ಕಾಗಿ ಕ್ರೀಡೆಗಳನ್ನು ಆಡಬೇಕು ಎಂದು ಕಪಿಲ್ ದೇವ್ ಅವರ ಅಭಿಪ್ರಾಯವಾಗಿದೆ.