ಎಲ್ಲ ಗಾಲಿಗಳು ಸರಿಯಾಗಿದ್ದರೂ, ಸ್ಟೆಪ್ಣಿ ಇರಲೇಬೇಕು !
ಬುಲೆಟ್ ಪ್ರೂಫ್
ವಿನಯ್ ಖಾನ್
ಭೀಕರ ಕಳಿಂಗ ಯುದ್ಧದ ನಂತರ, ರಾಜ್ಯದಲ್ಲಿ ಆದಂತಹ ಅನಾಹುತಗಳನ್ನು ನೋಡಲು ಹೋಗಿದ್ದ ಅಶೋಕನಿಗೆ ಕಂಡದ್ದು ಬರೀ ಸಾವು, ರಕ್ತ, ಮಾಂಸ ಖಂಡಗಳು, ಸೈನಿಕರ ಮಡದಿ, ಮಕ್ಕಳು, ಪಾಲಕರ ರೋಧನೆ, ಅಳಿದುಳಿದ ಕೆಲವು ಸೈನಿಕರ ದೇಹಗಳು… ಅದನ್ನೇ ನೋಡಿ ಮರುಕಪಡುತ್ತಿದ್ದ ಅಶೋಕ ನಿಗೆ ಬೌದ್ಧ ಬಿಕ್ಕುಗಳು ನೀಡಿದ ಉಪದೇಶದಿಂದ ಪ್ರಭಾವಿತನಾದಸಾಮ್ರಾಟ, ಬೌದ್ಧ ಧರ್ಮ ಸ್ವೀಕರಿಸಿ, ಬೌದ್ಧ ಧರ್ಮದ ಹಾರ್ಡ್ ಕೋರ್ ಅನುಯಾಯಿಯಾಗಿದ್ದು ಮಾತ್ರವಲ್ಲ, ತನ್ನ ಮಕ್ಕಳನ್ನೂ ಬೌದ್ಧ ಧರ್ಮದ ಪ್ರಚಾರಕ್ಕೆ ಹಲವಾರು ದೇಶಗಳಿಗೆ ಕಳುಹಿಸಿದ. ಅವನ ರಾಜ್ಯದಲ್ಲಿದ್ದ ಅನೇಕರೂ ಬೌದ್ಧರಾಗಿ ಧರ್ಮಾಂತರ ಹೊದಿದರು.
ಅದೇ ರೀತಿ ಜೈನ ಧರ್ಮೀಯ ರಾಜರುಗಳೂ ತಮ್ಮ ಮತ ಪ್ರಚಾರಕ್ಕಾಗಿಯೇ ಹಲವರನ್ನು ನೇಮಿಸುತ್ತಿದ್ದರು; ಅವರಿಗೆಲ್ಲ ರಾಜಾಶ್ರಯ ಕೊಡುತ್ತಿದ್ದರು. ಧರ್ಮಾಂತರದ ವಿಷಯದಲ್ಲಿ ಮುಸಲ್ಮಾನರ ರಕ್ತ ಚರಿತ್ರೆಯ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಇನ್ನು ಕ್ರಿಶ್ಚಿಯನ್ನರು ಹಲವೆಡೆ ಜನರನ್ನು ಹೆದರಿಸಿಯೋ, ಭಾರತದಲ್ಲಿ ಕದ್ದ ದುಡ್ಡನ್ನು ಕೊಟ್ಟೋ, ಸಂದರ್ಭವನ್ನು ದುರುಪಯೋ ಗಪಡಿಸಿಕೊಂಡೋ.. ಅಂತೂ ಹಲವು ಮಾರ್ಗಗಳಿಂದ ಜನರನ್ನು ತಮ್ಮ ಧರ್ಮಕ್ಕೆ ಸೆಳೆದದ್ದು, ಸೆಳೆಯುತ್ತಿರುವುದು ನಡೆದೇ ಇದೆ, ಇರಲಿ.
ಈಗ ಹಲವು ಊರುಗಳಲ್ಲಿ ಮಾರವಾಡಿ ಗಲ್ಲಿ, ತಿಗಳರ ಪೇಟೆ, ಕುಲಕರ್ಣಿ ಪೇಟೆ, ಜೋಶಿ ಗಲ್ಲಿ, ಗೌಳಿ ಗಲ್ಲಿ, ಅಗ್ರಹಾರ, ಮರಾಠಿ ಗಲ್ಲಿ, ಸಾವಜಿ ಗಲ್ಲಿ, ಬಸವ ನಗರ…. ಗಳೆಂಬ ಹಲವು ಪ್ರದೇಶಗಳು ಕಾಣುವುದು ಸರ್ವೇಸಾಮಾನ್ಯ. ಹಾಗೆಯೇ ಜಾತಿಯ ಹೆಸರಲ್ಲಿ ಸಮ್ಮೇಳನಗಳು, ಇಡೀ ಸಮಾಜದ ನಾಯಕನ ಅಥವಾ ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿಯನ್ನು ತಮ್ಮದೇ ಜಾತಿಯ ಐಕಾನ್‌ನನ್ನಾಗಿ ಮಾಡಿ, ಅವರ ಜಯಂತಿಯನ್ನೋ, ಸ್ಮರಣೆ ಕಾರ್ಯಕ್ರಮಗಳು ಇತ್ತೀಚೆಗೆ ಎಲ್ಲೆಂದರಲ್ಲಿ ನಡೆಯು ತ್ತಿವೆ.
ಇಂಥವು ಆಯಾ ಜಾತಿ ಸಂಘಟನೆಗಳಿಂದ ಆಯೋಜನೆಗೊಂಡು, ಅವುಗಳಲ್ಲಿ ರಾಜಕೀಯ ನಾಯಕರೆನಿಸಿಕೊಂಡವರು ಪ್ರವೇಶವೂ ಆಗಿ, ಕೊನೆಗೆ ಆ ಜಾತಿ-ಸಮುದಾಯದ ವೋಟಿನ ಕ್ರೋಡೀಕರಣ ಆಗುತ್ತಿರುವುದನ್ನು ನೋಡುತ್ತಿದ್ದೇವೆ.ಇದನ್ನ ಯಾವತ್ತಾದರೂ ಯೋಚಿಸಿದ್ದೀರಾ? ರಾಜ-ಮಹಾರಾಜರುಗಳು ತಮ್ಮ ಧರ್ಮ ಪ್ರಚಾರ ಮಾಡಿಸಿ ಅಥವಾ ಹೆದರಿಸಿ ಜನರನ್ನು ಮತಾಂತರಗೊಳಿಸುತ್ತಿದ್ದುದು ಅಥವಾ ಹಳೇ ಕಾಲದ ರಾಜರುಗಳೆಲ್ಲರೂ ತಾವೊಂದು ಧರ್ಮಕ್ಕೆ ಬದಲಾದ ಮೇಲೆ, ಅದೇ ಧರ್ಮದ ಗುಣಗಳನ್ನು ಎತ್ತಿಹಿಡಿದು, ಆ ಧರ್ಮದ ಪ್ರಾರ್ಥನಾ ಮಂದಿರಗಳನ್ನು ಆ ಧರ್ಮದ ನಾಯಕರಿಗೆ, ಪರಿಪಾಲಕರಿಗೆ, ಸ್ವಾಮೀಜಿಗಳಿಗೆ ಹಣ ಕೊಟ್ಟು, ಭೂಮಿಕೊಟ್ಟು, ಕಾಲನಿಗಳನ್ನು ಕಟ್ಟಿಸಿ, ಬಿಟ್ಟಿ ಆಶ್ರಯಕೊಟ್ಟು, ಸಾಕಿ ಸಲುಹುತ್ತಿದ್ದುದು ಏಕೆ? ಯಾವಾಗಲೋ ಬೇರೆ ರಾಜ್ಯದಿಂದ ಹೊಟ್ಟೆಪಾಡಿಗಾಗಿ ವಲಸೆ ಬಂದಂತಹ ಮಾರ್ವಾಡಿಗಳು ಮತ್ತೆ ಅವರಂತಹ ಕೆಲವು ಬೇರೆ ಬೇರೆ ಸಮುದಾಯದವರು, ತಮ್ಮ ಜೀವನ ಸರಿದಾರಿಗೆ ಬರುತ್ತಿದ್ದ ಹಾಗೆ.
ತಮ್ಮ ಸ್ನೇಹಿರನ್ನು, ಬಂಧುಗಳನ್ನು ಅದೇ ಊರಿಗೆ ಕರೆಸಿಕೊಂಡು, ತಮ್ಮ ತಮ್ಮಲ್ಲೇ ವ್ಯವಹಾರ ಮಾಡಿ, ತಮ್ಮ ಜನರಿಗೆಕಡಿಮೆ ಬಡ್ಡಿಯಲ್ಲಿ ಸಾಲವನ್ನೂ ಕೊಟ್ಟು, ಅವರನ್ನು ಬೆಳಸಿ, ತಮ್ಮದೇ ‘ಸ್ಟ್ರಾಂಗ್ ಬೇಸ್’ ಸೃಷ್ಟಿಸಿಕೊಳ್ಳುವುದು ಯಾಕೆ?ಕೊನೆಗೆ ರಾಜಕಾರಣಿಗಳೂ ಜಾತಿಗಳ ಸಂಖ್ಯೆಯ ಆಧಾರದ ಮೇಲೆ ಸರಕಾರದ ಧನಸಹಾಯ ಒದಗಿವುದು ಏಕೆ?***
ಆಗಿನ ಮಾಜಿ ಕೇಂದ್ರ ಸಚಿವ ಮಾಧವ್‌ರಾವ್ ಸಿಂಧಿಯಾ ವಿಮಾನ ಅಪಘಾತಕ್ಕೀಡಾಗಿದ್ದರು. ಆಗ ಅವರ ಜತೆ ಅನೇಕಪತ್ರಕರ್ತರು, ಛಾಯಾಚಿತ್ರಗ್ರಾಹಕರೂ ಹತರಾಗಿದ್ದರು. ಅದರಲ್ಲಿ ಗೋಪಾಲ್ ಬಿಷ್ಟ್ ಸಹ ಒಬ್ಬರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಒಬ್ಬ ಬಿಜೆಪಿ ಕಾರ್ಯಕರ್ತನಿಗೆ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಫೋನ್ ಕಾಲ್ ಬರುತ್ತದೆ. ಕರೆ ಸ್ವೀಕರಿಸಿ ಮಾತಾಡತೊಡಗಿದ ಆ ವ್ಯಕ್ತಿಗೆ, ಅಟಲ್ ಅವರು ‘ಎಲ್ಲಿದ್ದೀ?’ ಎಂದು ಪ್ರಶ್ನಿಸಿದರು.
ಆಗ ಆ ವ್ಯಕ್ತಿ ತಾನೊಬ್ಬರ ಅಂತ್ಯಕ್ರಿಯೆಗೆ ಬಂದಿರುವುದಾಗಿ ಹೇಳದ. ಪ್ರತಿಯಾಗಿ ಅಟಲ್ ಅವರು ‘ಸಂಜೆ ಮನೆ ಹತ್ತಿರಬಾ ಮಾತನಾಡಬೇಕು’ ಎಂದು ಕರೆ ನೀಡಿದರು. ಸಂಜೆ ಮನೆಗೆ ಹೋಗಿದ್ದ ಆ ವ್ಯಕ್ತಿಗೆ ಅವರು ಹೇಳಿದ್ದು, ‘ದೆಹಲಿ ನಿನ್ನನ್ನು ದಪ್ಪಮಾಡಿದೆ, ನೀನು ವಾಪಸು ಗುಜರಾತಿಗೆ ಹೋಗು’ ಎಂದು. ಕೆಲದಿನಗಳ ನಂತರ ಎಂಎಲ್‌ಎ ಸಹ ಆಗಿರದ ಆ ವ್ಯಕ್ತಿ, ಸೀದಾಮುಖ್ಯಮಂತ್ರಿ ಆಗಿದ್ದರು. ಹೆಸರು ನರೇಂದ್ರ ಮೋದಿ!
***ಎರಡು ವರ್ಷದ ಹಿಂದೆ ಕರ್ನಾಟಕದಲ್ಲಿ ಯಡಿಯೂರಪ್ಪ ನವರು ವಯಸ್ಸಿನ ಸಮಸ್ಯೆಯಿಂದ ಮುಖ್ಯಮಂತ್ರಿ ಪದವಿಗೆರಾಜೀನಾಮೆ ನೀಡುವ ಪರಿಸ್ಥಿತಿ ಬಂದಿತ್ತು. ಹೈಕಮಾಂಡ್ ಒತ್ತಡಕ್ಕೆ ಮಣಿದು ಅವರು ರಾಜೀನಾಮೆಯನ್ನೂ ನೀಡಿದರು. ಬಿಜೆಪಿಯಲ್ಲಿ ಸಮಸ್ಯೆ ಶುರುವಾಗಿದ್ದೇ ಅಲ್ಲಿಂದ. ಯಡಿಯೂರಪ್ಪನವರು ಇರುವವರೆಗೂ ರಾಜ್ಯ ಬಿಜೆಪಿಗೆ ಅವರೇ ಬಾಸ್ (ಈಗಲೂ). ಅವರ ಮುಂದಾಳತ್ವದಲ್ಲಿ ಎಂದಿಗೂ ನಾಯಕತ್ವದ ಕೊರತೆ ಕಾಣಿಸುತ್ತಿರಲಿಲ್ಲ. ಅವರು ರಾಜೀನಾಮೆ ನೀಡಿದ ಕ್ಷಣದಿಂದಲೇ ಉತ್ತರಾಧಿಕಾರಿ ಯಾಗಲು ಬೃಹತ್ ಪಡೆಯೇ ಸಿದ್ಧವಾಗಿತ್ತು.
ಆ ಪೈಕಿ ಎಷ್ಟೋ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹವೂ ಆಗಿತ್ತು. ಸಮರ್ಥರೂ ಇದ್ದರು. ಮೇಲಿಂದ ಪ್ರಹ್ಲಾದ್ ಜೋಷಿ, ಬಿ. ಎಲ್.ಸಂತೋಷ್‌ರಂತಹ ಹೆಸರುಗಳೂ ಕೇಳಿಬಂತು. ಕೊನೆಗೆ ಮುಖ್ಯಮಂತ್ರಿ ಆಗಿದ್ದು ಬಸವರಾಜ್ ಬೊಮ್ಮಾಯಿ. ಹಾಗೆ ನೋಡಿದರೆ ಕರ್ನಾಟಕ ಬಿಜೆಪಿಯಲ್ಲಿ ಆ ಸ್ಥಾನಕ್ಕೆ ಇನ್ನೂ ಪ್ರತಿಭಾವಂತ, ಬುದ್ಧಿವಂತ,  ಮತ್ತು ಹೆಸರುವಾಸಿಗಳೆಷ್ಟೋ ಜನ ಇದ್ದರು.
ಆದರೆ, ಲಿಂಗಾಯತ ವೋಟ್ ಬ್ಯಾಂಕ್ ಕೈ ತಪ್ಪದಂತೆ, ಹೇಳಿದಂತೆ (ಯಾರು) ಕೇಳುವ ಲಿಂಗಾಯತ ಕ್ಯಾಂಡಿಡೇಟ್‌ನ ಹುಡುಕಾಟದಲ್ಲಿ ಸಿಕಿದ್ದು ಬಸವರಾಜ ಬೊಮ್ಮಾಯಿ. ನರೇಂದ್ರ ಮೋದಿಯವರ ಸನ್ನಿವೇಶದಲ್ಲಿಯೂ ಹಾಗೆ! ಮೇಲ್ನೋಟಕ್ಕೆ ಸಂಘದ, ಪಕ್ಷದ ಒಬ್ಬ ಕಾರ್ಯಕರ್ತನನ್ನು ಸೀದಾ ಮುಖ್ಯಮಂತ್ರಿ ಸ್ಥಾನಕ್ಕೆ ಕಳುಹಿಸಿದ್ದು ಕಂಡರೂ, ಮೋದಿಯವರ ಮೋಧ್-ಗಂಚಿ-ತೇಲಿ ಸಮದಾಯದ ವೋಟ್ ಬ್ಯಾಂಕ್ ಅನ್ನು ಬಿಟ್ಟು ಕೊಡದಿರಲು ಆಗಿನ ವರಿಷ್ಠರು ಮಾಡಿದ್ದ ಒಂದು ಗೇಮ್ ಪ್ಲಾನ್. ಇಂದಿನ ದಿನಗಳಲ್ಲಿ ಮೋದಿ ಸುನಾಮಿಗೆ ಭಾರತದವರಲ್ಲದೇ ಬೇರೆ ದೇಶದವರೂ ಫಿದಾ ಆಗಿದ್ದಾರೆ.
ಪಾಕಿಸ್ತಾನ್‌ದಂತಹ ದೇಶಗಳಲ್ಲೂ ಮೋದಿಯಂತಹ ನಾಯಕ ಬೇಕೆನ್ನುವ ಕೂಗು ಆಗಾಗ ಕೇಳುತ್ತಲೇ ಇದೆ. ಆದರೆ ಒಂದು ಸಾರಿ ಯೋಚಿಸಿ, ಇದೇ ನರೇಂದ್ರ ಮೋದಿ ಯಾವುದೇ ಗಟ್ಟಿ ಮತ ಬ್ಯಾಂಕ್ ಹಿನ್ನೆಲೆಯ ವ್ಯಕ್ತಿ ಅಲ್ಲದೇ ಇದ್ದಿದ್ದರೆ, ಅವರು ಮುಖ್ಯಮಂತ್ರಿ ಆಗುತ್ತಿದ್ದರೆ? ಅದಾದ ಕೆಲ ವರ್ಷದ ಮೇಲೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಏರುತ್ತಿದ್ದರೆ? ಅದು ಎಲ್ಲರ ಊಹೆಗೂ ನಿಲುಕದ್ದು.
ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರದ್ದೂ ಬೇರೆ ಕತೆಯೇನಲ್ಲ. ಅವರ ಹಿಂದೆಯೂ ‘ಅಹಿಂದ’ದ ಮತಗಳ ದೊಡ್ಡ ಗಣಿಯೇ ಇದೆ. ಜೆಡಿಎಸ್‌ನಲ್ಲಿ ಉಪಮುಖ್ಯಮಂತ್ರಿ ಆಗಿ, ಆಮೇಲೆ ಅಹಿಂದ ಮತಗಳ ಕ್ರೋಡೀಕರಣಕ್ಕಾಗಿಯೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದನ್ನು ಸಹಿಲಾಗದೇ ‘ಸೆಕ್ಯುಲರ್ ಜೆಡಿಎಸ್’ ಸಿದ್ಧಾಂತ ವಿರೋಧಿ ಪಟ್ಟ ಕಟ್ಟಿ ಅವರನ್ನು ಪಕ್ಷದಿಂದ ಹೊರಹಾಕಿದ್ದು ತಾನೇ? ಮತ್ತೆ ದೇವರಾಜ್ ಅರಸು ಅವರ ಜಾತಿಯ ಲೆಕ್ಕಾಚಾರ ನೋಡಿದರೆ, ಅತೀ ಸಣ್ಣ ಸಂಖ್ಯೆಯ ಜಾತಿ ಹಿನ್ನೆಲೆ ಹೊಂದಿದ್ದರೂ ಮುಖ್ಯಮಂತ್ರಿ ಆಗಿದ್ದು ಅಹಿಂದ ಮತಗಳ ಕಾರಣಕ್ಕೇ.
ದೇವೇಗೌಡ, ಕುಮಾರ ಸ್ವಾಮಿ, ಎಸ್.ಎಂ ಕೃಷ್ಣರಂತಹ ನಾಯಕರ ಹಿಂದಿದ್ದುದು ‘ನಾಯಕಕತ್ವ’ಕ್ಕಿಂತ ಒಕ್ಕಲಿಗರ ವೋಟ್ ಬ್ಯಾಂಕ್. ಯಾರು ಎಷ್ಟೇ ತಮ್ಮನ್ನು ಜಾತ್ಯತೀತ, ಧರ್ಮಾತೀತ, ಸರ್ವಧರ್ಮ ಸಹಿಷ್ಣು ಎನ್ನುವ ಬಿರುದು ಕೊಟ್ಟುಕೊಂಡರೂ,ಅವರೆಲ್ಲರ ಹಿಂದೆ ಒಂದು ಮತ ಬ್ಯಾಂಕಿನ  ಇದ್ದೇ ಇರುತ್ತೆ. ಧರ್ಮಸಿಂಗ್, ವೀರಪ್ಪ ಮೊಯ್ಲಿ ವರಂತಹ ಕೆಲವೇ ಕೆಲವರನ್ನು ಹೊರತುಪಡಿಸಿ(ಬೇರೆ ರಾಜಕೀಯ ಸನ್ನಿವೇಶ, ಲೆಕ್ಕಾಚಾರಗಳಿದ್ದವು) ಬೇರೆಲ್ಲ ಅಧಿಕಾರಸ್ಥರ ಹಿಂದೆ ತಮ್ಮದೇ ಜಾತಿ ಇಲ್ಲವೇ ವೋಟ್ ಬ್ಯಾಂಕ್ ಇದ್ದೇ ಇತ್ತು.
ಅಷ್ಟೇ ಏಕೆ ಕೊನೆಯ ಬ್ರಾಹ್ಮಣ ಸಿಎಂ ರಾಮಕೃಷ್ಣ ಹೆಗಡೆಯವರ ಹಿಂದೆಯೂ ಲಿಂಗಾಯತರ ವೋಟ್ ಬ್ಯಾಂಕ್ ಇತ್ತಲ್ಲವೇ? ಅದಾದ ಮೇಲೆ ಲಿಂಗಾಯತರ ವೋಟ್ ಬ್ಯಾಂಕ್ ಸಂಪೂರ್ಣವಾಗಿ ಸಿಕ್ಕಿದ್ದು ಯಡಿಯೂರಪ್ಪನವರ ಕೈಗೆ. ದೇಶದ ಯಾವುದೇ ಮುಖ್ಯಮಂತ್ರಿಯ ಜಾತಿಯನ್ನು ನೋಡಿದರೂ ಅವರ ಹಿಂದೆ  ವೋಟ್ ಬ್ಯಾಂಕ್ ಮಾತ್ರ ಇದ್ದೇ ಇರುತ್ತೆ. ಅದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಹೊರಗಿನವರಲ್ಲ.
ಇದನ್ನೆಲ್ಲ ನೋಡಿದಾಗ, ಎಲ್ಲರಿಗೂ ಅವರದ್ದೇ ಸ್ಟ್ರಾಂಗ್ ಕಮ್ಯೂನಿಟಿ ಬೇಸ್ ಎಲ್ಲ ಕಡೆಗೂ ಇದೆ. ಹಲವಾರು ಜಾತಿಯಮತಗಳು ಒಂದೇ ಪಕ್ಷಕ್ಕೋ ಅಥವಾ ಅದರ ನಾಯಕನಿಗೋ ಕನ್‌ಸಾಲಿಡೇಟ್ ಅಗಿಯೇ ಆಗಿರುತ್ತಿವೆ. ಬರಾಕ್ ಒಬಾಮಾ ನೂ ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ನಿಂತಾಗ ಇದೇ ರೀತಿಯ - ಮತಗಳು ಕೈ ಹಿಡಿದಿದ್ದವು. ಭಾರತದಲ್ಲಂತೂ ಇದರ ಪ್ರಮಾಣ ಬೇರೆಯೇ ಇದೆ ಬಿಡಿ. ಇತ್ತೀಚೆಗೆ ಚುನಾವಣೆಗಳಲ್ಲಿ ಬರೀ ಜಾತಿ ಲೆಕ್ಕಾಚಾರ ಅಲ್ಲದೇ, ವಿದ್ಯಾವಂತ-ಅವಿದ್ಯಾವಂತ, ನಗರವಾಸಿ-ಗ್ರಾಮೀಣ ವಾಸಿ, ಬಡವ-ಮಧ್ಯಮ- ಶ್ರೀಮಂತ… ಹೀಗೆ ಸಮಾಜದ ಅನೇಕಾ ನೇಕ ಸ್ಥರಗಳೂ ಚುನಾವಣೆಯ ಮುಖ್ಯ ಭೂಮಿಕೆಯಲ್ಲಿ ‘ಬೂಮಿಂಗ್’ ಆಗುತ್ತಿವೆ. ಇದು ಪ್ರತೀ ಪಕ್ಷದ ಪ್ರಣಾಳಿಕೆಯನ್ನು ನೋಡಿದಾಗ ಕಣ್ಣಿಗೆ ರಾಚುವ ಸಾದಾ ಸರಕುಗಳೇ!
ಒಬ್ಬ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹನಾಗಿದ್ದರೆ, ಯಾವುದೇ ಬೇಸ್ ಇಲ್ಲದೆಯೂ ಅವರಿಗೆ ಸೋಲು ಕಾಣುವುದಿಲ್ಲ. ಆದರೂ ಅವರಿಗೆ ಯಾವಾಗಲೂ ಒಂದು ಬೇಸ್ ಇರಲೇ ಬೇಕು, ಅದು ಕಾರಿನ ಸ್ಟೆಪ್ಣಿ ಥರ! ಎಲ್ಲ ಗಾಲಿಗಳೂ ಸರಿಯಾಗಿದ್ದರೂ, ಕೆಲವೊಮ್ಮೆ ಯಾವುದಾದರು ಕೈ ಕೊಟ್ಟರೆ ಅವರಾದರೂ ಏನು ಮಾಡುತ್ತಾರೆ? ಮುಂದೆ ಬರುವ ಕರ್ನಾಟಕದ ಮುಖ್ಯ ಮಂತ್ರಿಯೇ ನೋಡಿ, ಇದೇ ಥರ ಯಾವುದಾದರೂ ಒಳ್ಳೆಯ ವೋಟ್ ಬ್ಯಾಂಕಿನ ‘ಜಮೀನ್ದಾರ’ನೇ ಆಗಿರುತ್ತಾನೆ.ಏನಂತೀರಾ?