ಚುನಾವಣೆಯಲ್ಲಿ ಚಲಾವಣೆಯಾಗುವ ಕಪ್ಪು ಹಣ
ವಿಶ್ಲೇಷಣೆ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಚುನಾವಣೆ ಪ್ರಜಾತಂತ್ರದ ಒಂದು ಭಾಗ. ಅಭ್ಯರ್ಥಿಗಳ ಆಯ್ಕೆ ಮುಂದುವರಿಯುತ್ತಿದೆ. ಭ್ರಷ್ಟಾ ಚಾರ ರಹಿತ, ಪ್ರಜಾತಂತ್ರಕ್ಕನುಗುಣವಾಗಿ ಕಾರ್ಯನಿರ್ವಹಿಸಬಲ್ಲ ಅಭ್ಯರ್ಥಿಗಳು ಎಷ್ಟಿದ್ದಾರೆ? ಇದು ಯಕ್ಷ ಪ್ರಶ್ನೆಯಲ್ಲವೇ? ಯಾರುಹಿತವರು? ಯಾರು ಪ್ರಜೆಗಳಿಗೆ ಹಿತವರು, ಯಾರು ನಾಯಕರೆನಿಸಿಕೊಂಡವರಿಗೆ ಹಿತವರು?
ರಾಜಕೀಯ ವ್ಯಕ್ತಿಗಳಿಗೆ ಚುನಾವಣೆಯ ಸಂದರ್ಭದಲ್ಲಿ ಅಗಾಧ ಪ್ರಮಾಣದ ಕಪ್ಪು ಹಣ ರಾಜಾರೋಷವಾಗಿ ಪೂರೈಕೆಯಾಗುತ್ತದೆ. ಈ ಹಣವನ್ನು ಬಳಸಿ ಪ್ರಜೆಗಳಿಗೆ ಆಶೆ ಆಮಿಷಗಳನ್ನು ತೋರಿಸಿ ವಾಮ ಮಾರ್ಗದಿಂದ ಅಽಕಾರವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಧಿಕಾರ ಗ್ರಹಣ ಮಾಡುವುದಕ್ಕಾಗಿ ಚುನಾವಣೆ ಎಂಬುದು ವ್ಯಾಪಾರದಂತಾಗಿದೆ.
ಪ್ರಜಾತಂತ್ರವೆಂದು ಆರಾಧಿಸುವ ಜೀವನ ಧರ್ಮಕ್ಕೆ ಕೊಡಲಿಯೇಟು ಬಿದ್ದಂತಾಗಿದೆ. ಅರ್ಥಾತ್ ಸಂಬಂಧವೇ ಇಲ್ಲವೆಂಬತ್ತಾಗಿದೆ. ಈ ಕಪ್ಪು ಹಣದ ಪ್ರಭಾವವು ರಾಜಕೀಯದ ದಿಕ್ಕನ್ನೂ ಬದಲಿಸುವ ಮಟ್ಟಿಗೆ ಬೆಳೆದು ನಿಂತಿದೆ ಎಂದರೆ ತಪ್ಪಾಗಲಾರದು. ಅನೈತಿಕತೆಯಿಂದ ಪಡೆದ ಅಧಿಕಾರದಿಂದ ಪ್ರಬಲ ರಾಷ್ಟ್ರ ನಿರ್ಮಾಣ ಅಸಾಧ್ಯ. ಸರಕಾರದ ಲೆಕ್ಕಕ್ಕೆ ಸಿಗದ, ಸರಕಾರಕ್ಕೆ ವರದಿಯಾಗದೆ ಚಲಾವಣೆಯಲ್ಲಿರುವ ಹಣವೇ ಕಪ್ಪು ಹಣ. ಸರಕಾರಕ್ಕೆಲೆಕ್ಕ ನೀಡದೆ, ತೆರಿಗೆ ಪಾವತಿ ಮಾಡದೆ ಇರುವ ಹಣ ಕಪ್ಪು ಹಣವಾದರೆ, ಇದರಿಂದ ಗಳಿಸಿದ ಎಲ್ಲಾ ವಸ್ತುಗಳು, ಸಾಮಗ್ರಿಗಳು, ಸಂಪತ್ತು ಹಾಗೂ ಆಸ್ತಿ ಪಾಸ್ತಿಗಳು ಕಪ್ಪು ಸಂಪತ್ತಾಗುತ್ತವೆ.
ಕಪ್ಪು ಹಣದ ಸರಿಯಾದ ಲೆಕ್ಕ ಸಿಗುತ್ತಿಲ್ಲ. ವಿಶ್ವಬ್ಯಾಂಕ್ ಅಂದಾಜಿಸಿದಂತೆ ಶೇ. ೨೦ ರಷ್ಟು ದೇಶೀಯ ಉತ್ಪಾದನೆ ಯಷ್ಟು ಕಪ್ಪು ಹಣವಿದೆಯಂತೆ. ಸಿಬಿಐ ಅಂದಾಜಿಸಿದ ಪ್ರಕಾರ ರೂ. ೨೫ ಲಕ್ಷ ಕೋಟಿಯಷ್ಟು ಕಪ್ಪು ಹಣವಿದೆಯಂತೆ. ಕಪ್ಪು ಹಣ ಭಾರತದ ಆರ್ಥಿಕ ವ್ಯವಸ್ಥೆಯ ಒಂದು ಪೀಡೆಯಾಗಿ ಇಡೀ ಅರ್ಥ ವ್ಯವಸ್ಥೆಯನ್ನು ಬಾಧಿಸುತ್ತದೆ. ಸಮಾನಾಂತರ ಅರ್ಥ ವ್ಯವಸ್ಥೆ, ಭೂಗತ ಅರ್ಥ ವ್ಯವಸ್ಥೆ, ವರದಿಯಾಗದ ಅರ್ಥ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಕಪ್ಪು ಹಣವೆಂಬ ಗೂಡು ಕಾನೂನು, ಆಡಳಿತ ರಾಜನೀತಿಯನ್ನು ಪ್ರಶ್ನಿಸುವ ಹಂತಕ್ಕೆ ಬೆಳೆದು ನಿಂತಿದೆ. ಸಮಾನಾಂತರ ಸರಕಾರ ವನ್ನು ನಡೆಸುವಷ್ಟು ಬಲಿಷ್ಠವಾಗಿ ಬೆಳೆದು ನಿಂತಿದೆ. ಅದರಲ್ಲೂ ವಿದೇಶೀ ಬ್ಯಾಂಕ್‌ಗಳಲ್ಲಿ ಮುಚ್ಚಿಡಲಾದ ಕಪ್ಪು ಹಣ ಸರಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಖಡಕ್ಕಾಗಿ ಹೇಳುವುದಿದ್ದರೆ ಅಪರಾಧಿಗಳಿಗೆ ಮತ್ತು ದುಷ್ಕರ್ಮಿಗಳಿಗೆ ಕ್ಲಪ್ತ ಸಮಯದಲ್ಲಿ ಕಟ್ಟುನಿಟ್ಟಿನ ಶಿಕ್ಷೆ ಮತ್ತು ದಂಡವನ್ನು ವಿಧಿಸದಿರುವುದೇ ಕಪ್ಪು ಹಣದ ಹಾವಳಿಗೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ತೆರಿಗೆ ವಂಚಕರು ಸರಕಾರದ ಪ್ರಾಧಿಕಾರದಿಂದ ಮರೆ ಮಾಚಿ ಅನೈತಿಕ ಸಂಪತ್ತನ್ನು ಶೇಖರಿಸಿಕೊಂಡಿದ್ದಾರೆ. ಇವರಲ್ಲಿ ಹಲವಾರು ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು, ಉದ್ಯಮಿಗಳು ಮತ್ತು ವಿವಿಧ ಸ್ತರದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಎಂಬುದು ದುರಂತ ಮತ್ತು ದುರಾದೃಷ್ಟ.
ಇತ್ತೀಚೆಗೆ ಬಹಿರಂಗ ಪಡಿಸಿದ ಪ್ರಕಾರ ಪ್ರಚಲಿತ ಸ್ವಿಸ್ ಮತ್ತು ಇತರೆ ವಿದೇಶಗಳಲ್ಲಿ ಭಾರತ ದೇಶದ ರೂ. ೯೦ ಲಕ್ಷ ಕೋಟಿ (ಯು.ಯಸ್. ಡಾಲರ್ ೧೫೦೦ ಬಿಲಿಯನ್) ಯಷ್ಟು ಹಣ ಕಾನೂನು ಬಾಹಿರವಾಗಿ ಬಚ್ಚಿಡಲಾಗಿದೆ. ಭಾರತೀಯರು ವಿದೇಶಗಳಲ್ಲಿ ಠೇವಣಿ ಇರಿಸಿದ ಹಣದ ಲೆಕ್ಕ ಸಿಗುತ್ತಿಲ್ಲ. ಕೆಲವು ವರದಿಗಳು ಸ್ವಿಸ್ ಬ್ಯಾಂಕ್ ಒಂದರಲ್ಲಿಯೇ ಯು.ಯಸ್ ಡಾಲರ್ ೧೦.೦೬ ರಿಂದ ೧೧.೦೪ ಟ್ರಿಲಿಯನ್ ನಷ್ಟು ಹಣವಿದೆಯೆಂದು ಪ್ರತಿಪಾದಿಸಿದರೂ ಸತ್ಯಕ್ಕೆ ಹತ್ತಿರವೆಂಬಂತೆ ಕಂಡು ಬಂದರೂ ಕೂಡ ಸ್ವಿಸ್ ಸರಕಾರ ಇದನ್ನು ಸುಳ್ಳು ಮತ್ತು ಕಪೋಲ ಕಲ್ಪಿತ ಎಂದು ಸುದ್ದಿ ಮಾಡಿದೆ. ಆದರೆ ಚುನಾವಣಾ ಸಂದರ್ಭದಲ್ಲಿ ಕೆಲವಂಶ ಸ್ವದೇಶಕ್ಕೆ ಬರುತ್ತಿರುವುದು ನೈಜ ವಿಚಾರ.
ದಿನೇ ದಿನೇ ಕುಸಿಯುತ್ತಿರುವ ನೈತಿಕ ಮೌಲ್ಯಗಳು ಭ್ರಷ್ಟಾಚಾರ, ಕಾನೂನಿನಲ್ಲಿರುವ ಲೋಪದೋಷಗಳು, ತೆರಿಗೆಯ ದರ, ಅಗಾಧ ಸಾರ್ವಜನಿಕ ವೆಚ್ಚಗಳು ಮತ್ತು ಅದರಲ್ಲಿ ನಡೆಯುತ್ತಿರುವ ಸೋರಿಕೆಗಳು ಹಣದುಬ್ಬರ, ಅಕ್ರಮ ವ್ಯವಹಾರ, ಕಾಳಸಂತೆ ವ್ಯಾಪಾರ, ತೆರಿಗೆಗಳ್ಳತನದಿಂದ ನಿರ್ದಿಷ್ಟ ಆದಾಯ ಪಡೆಯುವ ಗುಂಪು ಸಂಕಷ್ಟಕ್ಕೊಳಗಾಗುತ್ತದೆ. ನಮ್ಮಲ್ಲಿ ಎಲ್ಲಿಯವರೆಗೆ ಕರ್ತವ್ಯ ಪ್ರe ಮತ್ತು ರಾಷ್ಟ್ರ ಪ್ರೇಮವಿರುವುದಿಲ್ಲವೋ ಅಲ್ಲಿಯವರೆಗೆ ಪ್ರಾಮಾಣಿಕ ಸರಕಾರಗಳೂ ಈ ನಿಟ್ಟಿನಲ್ಲಿ ಸೋಲಬೇಕಾಗುತ್ತದೆ. ಕಪ್ಪು ಹಣದ ಬಗ್ಗೆ ಕಠಿಣ ಕ್ರಮಗಳಿದ್ದರೂ ಕೂಡ ಸರಕಾರ ಸೋತಿದೆ.
ಇದರಿಂದ ಕಪ್ಪು ಹಣ ರಾಜಾರೋಷವಾಗಿ ನಡೆಯುತ್ತಲೇ ಇದೆ. ಬೃಹತ್ ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾದರೂ ಕೂಡ ಬಡ ಜನರು ನೆಲೆಸಿರುವ ಶ್ರೀಮಂತ ರಾಷ್ಟ್ರವೆಂಬ ಬಿರುದನ್ನು ತಳ್ಳಿ ಹಾಕುವಂತಿಲ್ಲ. ವಂಚನೆ ಮಾನವನ ಇತಿಹಾಸದಷ್ಟೇ ಪುರಾತನವಾದುದಾದರೂ ಕಠಿಣ ಆರ್ಥಿಕ ಸುಧಾರಣೆ ಗಳಿಂದ, ತೆರಿಗೆ ವಂಚಕರ ನಿಯಂತ್ರಣದಿಂದ, ಬೇನಾಮಿ ಕುಳಗಳ ಕಪಿ ಮುಷ್ಟಿಯಿಂದ, ಲೂಟಿ ಕೋರರ ಕಡಿವಾಣದಿಂದ, ಈ ದೇಶ ವಿಮುಕ್ತವಾದರೆ ಐಶ್ವರ್ಯ, ಸಮೃದ್ಧಿಯ, ಶಾಂತಿಯ ನೆಲೆವೀಡಾಗುವುದಕ್ಕೆ ಸಂದೇಹವಿಲ್ಲ.
ಇದಕ್ಕೆ ಒಂದೇ ಉತ್ತರ ನಮ್ಮ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಲ್ಲಿ ಸತ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಹೆಚ್ಚಲೇಬೇಕಾಗಿದೆ. ಆದರೆಬೇಲಿಯೇ ಹೊಲವನ್ನು ಮೇಯುತ್ತಿರುವ ವಿಪರ್ಯಾಸ, ದುರಂತ. ಮತ್ತು ದುರದೃಷ್ಟ ಮತ್ತು ಇದು ಕಪ್ಪು ಹಣ ನಿರ್ಮೂಲನೆಗೆ ಮಾರಕವಾಗಿದೆ. ‘ಚುನಾವಣಾ ಸಂದರ್ಭಗಳಲ್ಲಿ ಪೊಲೀಸ್ ವಾಹನಗಳಿಂದಲೇ ಕಪ್ಪು ಹಣದ ಮೂಟೆಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸುವುದು ವಿಪರ್ಯಾಸದ ಸಂಗತಿಗಳನ್ನು ಕೇಳಿದ್ದೇವೆ.’ ‘ನೋಟ್ ಅಮಾನ್ಯದ ಈ ನಿರ್ಧಾರವು ದೇಶದ ಭ್ರಷ್ಟಾಚಾರ, ಭಯೋತ್ಪಾದನೆ, ಖೋಟಾ ನೋಟು ಮತ್ತುಕಾಳಧನ ನಿರ್ಮೂಲನದ ಮಹಾಯಜ್ಞ (ಐ  ಟ್ಞಜ bಛಿಞಟ್ಞಛಿಠಿಜ್ಢಿZಠಿಜಿಟ್ಞ ಡಿಜ್ಝ್ಝಿ ಡಿಜ್ಞಿ bಛ್ಛಿಜ್ಞಿಜಿಠಿಛ್ಝಿ, ಚ್ಠಿಠಿ ಟಠಿ ಜಿಞಞಛಿbಜಿZಠಿಛ್ಝಿ).” ನೋಟ್ ಅಮಾನ್ಯೀಕರಣವು ಕಪ್ಪು ಹಣ ನಿಗ್ರಹವನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಸಾಧ್ಯವಾಗಲಿಲ್ಲವೆಂಬುದು ಗೋಚರವಾಗುತ್ತದೆ.
ಆರ್ ಬಿಐ ವರದಿ ಪ್ರಕಾರ ಕಪ್ಪು ಹಣಕ್ಕೆ ಬಿಳಿ ಬಣ್ಣ ಬಳಿದಂತಾದರೂ ತೆರಿಗೆಯ ಪರಿಮಿತಿಯಲ್ಲಿ ಸೇರಿಕೊಂಡಿತು. ನೋಟ್ ಅಮಾನ್ಯದ ಕೆಲವು ವೈಪಲ್ಯ ಗಳಿಗೆ ದುಷ್ಕೃತ್ಯಕ್ಕೆ ಹಲವಾರು ಮಂದಿ ಕೈಜೋಡಿಸಿದುದು ದುಃಖದ ವಿಚಾರ. ಇತ್ತೀಚಿಗಿನ ಯು.ಎನ್. ಸಮೀಕ್ಷೆಯ ಅಂದಾಜಿನ ಪ್ರಕಾರ ಭಾರತದ ಪ್ರಸಕ್ತ ಜನಸಂಖ್ಯೆ ೧೪೧ ಕೋಟಿ ತಲುಪುತ್ತಿದೆ. ೧೧೦೩ ಜನರ ಕೈಯಲ್ಲಿ ೧೦೦೦ ಕೋಟಿಗಿಂತಲೂ ಹೆಚ್ಚಿನ ಆಸ್ತಿ. ದೇಶದ ೭೪% ವಾರ್ಷಿಕ ಸಂಪತ್ತು ೧% ಶ್ರೀಮಂತರ ಕೈ ಸೇರುತ್ತದೆ. ಇಂಥ ಅಸಮಾನತೆಯ ದೇಶದಲ್ಲಿ ಶಾಂತಿ ನೆಲೆಸಿರಲು ಸಾಧ್ಯವೇ.
‘ಶ್ರೀಮಂತರ ಸಿರಿತನ ದರಿದ್ರದ ಬಡತನದಲ್ಲಿದೆ.’ ಎಲ್ಲಿಯವರೆಗೆ ಸಾಮಾಜಿಕ ಪ್ರಭುತ್ವ ಮತ್ತು ಆರ್ಥಿಕ ಸಮಾನತೆಗಳಿರುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯ ಸ್ಥಿರತೆ ಇರುವುದಿಲ್ಲ. ಇದೀಗ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಚುನಾವಣೆ ಪ್ರಜಾತಂತ್ರದ ಒಂದು ಭಾಗ. ಅಭ್ಯರ್ಥಿಗಳ ಆಯ್ಕೆ ಮುಂದುರಿ ಯುತ್ತಿದೆ. ಭ್ರಷ್ಟಾಚಾರ ರಹಿತ, ಪ್ರಜಾತಂತ್ರಕ್ಕನುಗುಣವಾಗಿ ಕಾರ್ಯನಿರ್ವಹಿಸಬಲ್ಲ ಅಭ್ಯರ್ಥಿಗಳು ಎಷ್ಟಿದ್ದಾರೆ? ಇದು ಯಕ್ಷ ಪ್ರಶ್ನೆ ಯಲ್ಲವೇ? ಯಾರು ಹಿತವರು? ಯಾರು ಪ್ರಜೆಗಳಿಗೆ ಹಿತವರು, ಯಾರು ನಾಯಕರೆನಿಸಿಕೊಂಡವರಿಗೆ ಹಿತವರು? ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷಗಳಾದರೂ ದೇಶದಲ್ಲಿ ಪಸರಿಸಿರುವ ಭ್ರಚ್ಟಾಚಾರ ದಿನೇ ದಿನೇ ಹೆಚ್ಚುತ್ತಿದ್ದು, ಕಪ್ಪು ಹಣವೂ ಹೆಚ್ಚುತ್ತಿದೆ.
ಎಲ್ಲಾ ಸ್ತರದ ಪರಿಣಿತರು ಮತ್ತು ತಜ್ಞರು, ನ್ಯಾಯಾಽಶರುಗಳು, ನ್ಯಾಯವಾದಿಗಳು, ಆರ್ಥಿಕ ತಜ್ಞರು, ಆಡಳಿತಗಾರರು, ಲೆಕ್ಕ ಪರಿಶೋಧಕರು, ಕಂದಾಯ ಇಲಾಖೆಯವರು ಅಲ್ಲದೇ ಎಲ್ಲಾ ಕಾರ್ಯಕ್ಷೇತ್ರದ ಪ್ರಜ್ಞಾವಂತ ಪ್ರಜೆಗಳು ವ್ಯಕ್ತಪಡಿಸುವ ಕಳವಳಕಾರಿ ವಿಚಾರವೇನೆಂದರೆ, ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಹಣ ಒದಗಿಸುವುದು ಪ್ರತಿಯೊಂದೂ ದೊಡ್ಡ ರಾಜಕೀಯ ಪಕ್ಷಕ್ಕೂ ಆರ್ಥಿಕ ವೆಚ್ಚದ ಪ್ರಾಯೋಜಕರುಗಳ ಒಂದು ಪೀಠ ಮತ್ತು ಘಟಕ ಇದ್ದೇ ಇರುತ್ತದೆ.
ಸಾರ್ವಜನಿಕರ ಕೊಡುಗೆ ಕೇವಲ ಕಿಂಚಿತ್ ಭಾಗಕ್ಕೆ ಸೀಮಿತವಾಗಿರುತ್ತದೆ. ಒಂದು ಪಂಚಾಯತ್ ಚುನಾವಣೆಯ ಅಭ್ಯರ್ಥಿಯೂ ಒಂದು ಕೋಟಿ ವ್ಯಯಿಸುವುದು. ಲೋಕಸಭಾ ಅಭ್ಯರ್ಥಿಯ ಖರ್ಚು ೫೦ ಕೋಟಿಯವರೆಗೆ. ಅಭ್ಯರ್ಥಿಗಳ ಆಸ್ತಿಪಾಸ್ತಿ ನೂರಾರು ಕೋಟಿ. ಇದೆಲ್ಲವನ್ನು ಬುಡ ಸಮೇತ ಪರಿಶೀಲಿಸಬೇಕು. ಇದು ಸದೃಢ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಿಂದ ಸಾಧ್ಯ. ಅಂಥ ವ್ಯವಸ್ಥೆಯ ಭವಿಷ್ಯವನ್ನು ನಿರೀಕ್ಷಿಸೋಣವೇ?ಚುನಾವಣೆಯ ಸಂದರ್ಭದಲ್ಲಿ ನಡೆಯುವ ಲೇವಾದೇವಿಗಳು ಎಷ್ಟೇ ಕಲುಷಿತವಾಗಿದ್ದರೂ ಪ್ರಜಾತಾಂತ್ರಿಕ ಸಮಾಜದ ಜವಾಬ್ದಾರಿಯುತ ಸದಸ್ಯರಾಗಿನಾವು ನಮ್ಮ ಮತವನ್ನು ಅತ್ಯಂತ ವಿವೇಚನೆಯಿಂದ ಚಲಾಯಿಸಬೇಕಾಗಿದೆ.
ನಮ್ಮ ಪ್ರತಿಯೊಂದೂ ಓಟ್ ಅಮೂಲ್ಯವಾದದ್ದು ಭಾರತೀಯ ಮತದಾರ ಸಿರಿವಂತ ರಾಜಕಾರಣಿ ಮತ್ತು ಪಕ್ಷಗಳ ಅಬ್ಬರಕ್ಕೆ ತಲೆದೂಗುವವನಲ್ಲ, ಮತಿಹೀನನಲ್ಲ ಮತ್ತು ತನ್ನ ಕ್ಷೇತ್ರ, ಪ್ರದೇಶ, ದೇಶದ ಅರಿವು ಹಾಗೂ ಕಾಳಜಿಯುಳ್ಳ ಸಂವೇದನಾಶೀಲ ಪೌರ ಎಂಬುದನ್ನು ರಾಜಕಾರಣ ನಡೆಸುವವರಿಗೆ ಮನದಟ್ಟು ಮಾಡಬೇಕಾಗಿದೆ. ಚುನಾವಣಾ ವೆಚ್ಚವು ಪ್ರಜೆಗಳ ತೆರಿಗೆಯಿಂದಲೇ. ಆದುದರಿಂದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಚೌಕಟ್ಟಿನಲ್ಲಿ ಕರ್ತವ್ಯವನ್ನು ಪಾಲಿಸಿ ಜವಾಬ್ದಾರಿಯುತ ಸ್ಥಿರ ಸರಕಾರವನ್ನು ಸ್ಥಾಪಿಸಬೇಕು.
ಮತದಾನದ ಕಡೆಗಣನೆ ಸಲ್ಲದು. ನಿರ್ಲಕ್ಷ್ಯ ಧೋರಣೆ ಸರ್ವತಾ ಅಸಮ್ಮತ. ಪ್ರಾಮಾಣಿಕರು ಮತ ನೀಡದಿದ್ದರೆ ಅಪ್ರಮಾಣಿಕ ನಾಯಕರು ಚುನಾಯಿತ ರಾಗುತ್ತಾರೆ. ‘ಮತದಾನದ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು’ ಅಲ್ಲವೇನು?
(ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರು ಮತ್ತು ಸಂದರ್ಶಕ ಪ್ರಾಧ್ಯಾಪಕರು)