ಇವರದ್ದೆಲ್ಲ ಮೊಸರಲ್ಲೂ ಕಲ್ಲು ಹುಡುಕುವ ಕಾಯಕ !
ಅವಲೋಕನ
ಗಣೇಶ್ ಭಟ್, ವಾರಣಾಸಿ
೮೦ -೯೦ ರ ದಶಕದಲ್ಲಿ ದೇಶದಲ್ಲಿ ಕಂಪ್ಯೂಟರ್ ಬಳಕೆ ವ್ಯಾಪಕಗೊಂಡಾಗ ಕಾರ್ಮಿಕ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಯಿತು. ಪ್ರತಿಭಟಿಸಿದವರಲ್ಲಿ ಕಮ್ಯುನಿಸ್ಟರು ಹಾಗೂ ಎಡ ಬೆಂಬಲಿತ ಕಾರ್ಮಿಕ ಸಂಘಟನೆಗಳೇ ಮುಂಚೂಣಿಯಲ್ಲಿದ್ದವರು. ಬ್ಯಾಂಕಿಂಗ್, ಇನ್ಶೂರೆನ್ಸ್ ಮೊದಲಾದ ಕ್ಷೇತ್ರಗಳಲ್ಲಿ ಕಂಪ್ಯೂ ಟರ್ ಹಾಗೂ ತಂತ್ರಜ್ಞಾನಗಳ ಬಳಕೆಯಿಂದಾಗಿ ಉದ್ಯೋಗಗಳಿಗೆ ಹೊಡೆತ ಬೀಳಲಿದೆ ಎನ್ನುವುದು ಇವರ ವಾದವಾಗಿತ್ತು. ಆದರೆ ಕಾಲ ಎಷ್ಟರ ಮಟ್ಟಿಗೆ ಬದಲಾಯಿತೆಂದರೆ ೨೦೨೦ ರ ಕರೋನಾ ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಮೀಟಿಂಗ್ ವೀಡಿಯೋ ಕಾನರೆನ್ಸಿಂಗ್ ಮೂಲಕ ನಡೆಯಿತು.
ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಮೂಲಕ ಮುಖ್ಯಮಂತ್ರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಜೀ ‘ಕಮ್ಯುನಿಸ್ಟ್ ಪಕ್ಷವು ಕಂಪ್ಯೂಟರ್ ಹಾಗೂ ತಂತ್ರಜ್ಞಾನದ ಸುಧಾರಣೆಯ ವಿರುದ್ಧ ಹೋರಾಟ ಮಾಡಿದುದು ಒಂದು ಮೂರ್ಖತನದ ನಿರ್ಣಯ ವಾಗಿತ್ತು’ ಎಂದು ೨೦೦೪ ರಲ್ಲಿ ಒಪ್ಪಿಕೊಂಡಿದ್ದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಹೊಸದಾಗಿ ನಿರ್ಮಾಣ ಗೊಳ್ಳುತ್ತಿರುವ ಪಾರ್ಲಿಮೆಂಟ್‌ಗೆ ಭೇಟಿ ಕೊಟ್ಟು ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿರುವ ಕಾಂಗ್ರೆಸ್ ಪಕ್ಷದ ನಾಯಕ ಜೈರಾಮ್ ರಮೇಶ್ ‘ಹೊಸ ಪಾರ್ಲಿಮೆಂಟ್ ನಿರ್ಮಾಣವು ನರೇಂದ್ರ ಮೋದಿಯವರ ವೈಯಕ್ತಿಕ ಆಡಂಬರ ಪ್ರದರ್ಶನದ ಯೋಜನೆಯಾಗಿದೆ.
ಪ್ರತೀ ಸರ್ವಾಧಿಕಾರಿಯೂ ತನ್ನದೇ ಆದ ವಾಸ್ತು ಶಿಲ್ಪದ ಪರಂಪರೆಯನ್ನು ನಿರ್ಮಿಸುವಂತೆ ಬೃಹತ್ ಮೊತ್ತದ ಹಣವನ್ನು ಈ ಯೋಜನೆಗಾಗಿ ವ್ಯರ್ಥಗೊಳಿಸಲಾಗುತ್ತಿದೆ’ ಎಂದು ಟೀಕಿಸಿದ್ದರು. ಆದರೆ ಇದೇ ಜೈರಾಮ್ ರಮೇಶ್ ೨೦೧೩ ರಲ್ಲಿ ‘ಈ ಪಾರ್ಲಿಮೆಂಟ್ ಕಟ್ಟಡವು ಹಳೆಯದಾದುದರಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ನಮಗೆ ಹೊಸಕಟ್ಟಡದ ಅವಶ್ಯಕತೆ ಇದೆ’ ಎಂದು ಹೇಳಿಕೆ ನೀಡಿದ್ದರು.
ದೆಹಲಿಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಪಾರ್ಲಿಮೆಂಟ್, ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಆಡಳಿತ ಕಚೇರಿಗಳ ಕಟ್ಟಡಗಳು ಮೊದಲಾದವುಗಳನ್ನೊಳಗೊಂಡ ಸೆಂಟ್ರಲ್ ವಿಸ್ತಾ ಯೋಜನೆಯನ್ನು ದುಂದು ವೆಚ್ಚ ಎಂದು ಬಿಂಬಿಸುವ ಪ್ರಯತ್ನಗಳನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಮೋದಿಗಾಗಿ ಹೊಸ ಪಾರ್ಲಿಮೆಂಟ್ ಅನ್ನು ಕಟ್ಟಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಆದರೆ ನೂರು ವರ್ಷಗಳಷ್ಟು ಹಳತಾಗಿರುವ ಪಾರ್ಲಿಮೆಂಟ್ ಕಟ್ಟಡವು ಮಳೆಗಾಲದಲ್ಲಿ ಅಲ್ಲಲ್ಲಿ ಸೋರುತ್ತಿದೆ. ಸ್ಥಳಾವಕಾಶದ ಕೊರತೆ ಇದ್ದು ಇಕ್ಕಟ್ಟಾಗಿದೆ. ಹೆಚ್ಚಾಗಿರುವ ಜನಸಂಖ್ಯೆಗೆ ಅನುಗುಣ ವಾಗಿ ಪಾರ್ಲಿಮೆಂಟ್ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡಿದಲ್ಲಿ ಅವರಿಗೆ ಅಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲ. ಹೀಗಾಗಿ ಹೊಸದಾದ ಪಾರ್ಲಿಮೆಂಟ್ ಕಟ್ಟಡವನ್ನು ನಿರ್ಮಿಸದೆ ಬೇರೆ ದಾರಿಯೇ ಇಲ್ಲ.
೨೦೧೩ ರಲ್ಲಿ ಕಾಂಗ್ರೆಸ್ ಸರಕಾರದ ಸ್ಪೀಕರ್ ಆಗಿದ್ದ ಮೀರಾ ಕುಮಾರ್ ಹೊಸ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು. ಪ್ರಸ್ತುತ ವಿವಿಧ ಸಚಿವಾಲಯಗಳ ಕಚೇರಿಗಳು ಬೇರೆಬೇರೆ ಕಡೆ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೇಂದ್ರ ಸರಕಾರವು ಪ್ರತೀ ವರ್ಷ ಸಾವಿರಾರು ಕೋಟಿ ರುಪಾಯಿಗಳನ್ನು ಈ ಕಟ್ಟಡಗಳ ಬಾಡಿಗೆ ಪಾವತಿಗಾಗಿ ವ್ಯಯಿಸುತ್ತಿದೆ. ಹೀಗಾಗಿ ವಿವಿಧ ಸಚಿವಾಲಯಗಳ ಎಲ್ಲ ಕಚೇರಿಗಳನ್ನು ಒಂದೇ ಕಡೆ ಸಿಗುವಂತೆ ಸೆಂಟ್ರಲ್ ವಿಸ್ತಾ ಪ್ರಾಜೆಕ್ಟಿನ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಹಾಗೂ ಸರಕಾರದ ಹಣವು ಕಟ್ಟಡ ಬಾಡಿಗೆ ಪಾವತಿಯ ರೂಪದಲ್ಲಿ ಪೋಲಾಗುವುದು ತಪ್ಪುತ್ತದೆ.
ಆದರೆ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಇನ್ನೂ ಅಪಪ್ರಚಾರವನ್ನು ಮುಂದುವರಿಸಿವೆ. ಇತ್ತೀಚೆಗೆ ನಿರ್ಮಾಣಗೊಂಡು ಲೋಕಾರ್ಪಣೆಗೊಂಡ ಮೈಸೂರು ಬೆಂಗಳೂರು ದಶಪಥ ರಸ್ತೆಯ ವಿಚಾರವನ್ನೇ ತೆಗೆದುಕೊಳ್ಳೋಣ. ರಸ್ತೆ ನಿರ್ಮಾಣದ ಕೆಲಸ ಆರಂಭವಾದಲ್ಲಿಂದಲೇ ಶುರುವಾಗಿತ್ತು ಆರೋಪಗಳ ಸುರಿಮಳೆ. ದಿನ ನಿತ್ಯ ರಸ್ತೆಯ ಗುಣಮಟ್ಟ ಸರಿಯಿಲ್ಲ, ಬೈಪಾಸ್ ಕೊಟ್ಟಿಲ್ಲ, ಸರ್ವೀಸ್ ರಸ್ತೆ ಸರಿಯಿಲ್ಲ, ಮಳೆ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲ, ನಿರ್ಮಾಣವು ತೀರಾ ಅವೈಜ್ಞಾನಿಕ ವಾಗಿದೆ ಎಂಬೆಲ್ಲ ರೀತಿಯ ಆರೋಪಗಳು. ಆದರೆ ಈ ಎಲ್ಲ ಸವಾಲುಗಳನ್ನು ಮೀರಿ ಮೈಸೂರು ಎಂಪಿ ಪ್ರತಾಪ್ ಸಿಂಹ ಅವರು ದಶಪಥ ರಸ್ತೆ ಯೋಜನೆಯನ್ನು ಸಂಪೂರ್ಣಗೊಳಿಸಿದರು. ಈ ಯೋಜನೆಯ ಕಾರ್ಯಗತ ಹಂತದಲ್ಲಿ ಅವರು ಎದುರಿಸಿದ ಅಡೆತಡೆಗಳು ನೂರಾರು. ಪ್ರಯಾಣಿಕರ ೪ ಗಂಟೆಯ ಅವಧಿಯ ಪ್ರಯಾಣವನ್ನು ೭೫ ನಿಮಿಷಗಳಿಗೆ ಇಳಿಸಿದಈ ಯೋಜನೆಯು ಬಹಳ ಜನಮನ್ನಣೆಗೆ ಪಾತ್ರವಾದಾಗ ಇದರ ಯಶಸ್ಸಿನಲ್ಲಿ ಪಾಲು ಪಡೆಯಲು ಕಾಂಗ್ರೆಸ್ ಮತ್ತುಜೆಡಿಎಸ್ ಪಕ್ಷಗಳು ಯಾವೆಲ್ಲಾ ರೀತಿಯ ಕಸರತ್ತುಗಳನ್ನು ಮಾಡಿದ್ದರು ಎಂಬುದನ್ನು ನಾವೆಲ್ಲಾ ನೋಡಿಯೇ ಇದ್ದೇವೆ.
ರಸ್ತೆಯ ಯಾವುದೋ ಒಂದು ನ್ಯೂನತೆಯನ್ನು ಸರಿಪಡಿಸುವ ಕಾಮಗಾರಿಯ ಚಿತ್ರವನ್ನು ಪ್ರಕಟಿಸಿ ಉದ್ಘಾಟನೆಯ ಮರುದಿನವೇ ಕಿತ್ತುಬಂದ ದಶಪಥ ಎನ್ನುವ ಹೆಡ್‌ಲೈನ್‌ನೊಂದಿಗೆ ನ್ಯೂಸ್ ಪ್ರಕಟಿಸಿತ್ತು ಕನ್ನಡದ ಪ್ರಮುಖ ಪತ್ರಿಕೆ. ಇದೇ ರಸ್ತೆಯ ಟೋಲು ಸಂಗ್ರಹದ ವಿಚಾರದಲ್ಲೂ ಸಾಕಷ್ಟು ವಿವಾದಗಳು!
ಅಸ್ಸಾಂನ ದಿಬ್ರೂಗರ್ ಮತ್ತು ಧೆಮಾಜಿ ಜಿಲ್ಲೆಗಳನ್ನು ಬೆಸೆಯಲು ಬ್ರಹ್ಮಪುತ್ರಾ ನದಿಯ ಮೇಲೆ ಕಟ್ಟಲಾದ ೪.೯೪ ಕಿಲೋ ಮೀಟರ್ ಉದ್ದದ ಬೋಗಿಬೀಲ್ ಸೇತುವೆಯ ವಿಚಾರದಲ್ಲೂ ಹೀಗೆಯೇ ಆಗಿದೆ. ೧೯೮೫ ರ ಅಸ್ಸಾಂ ಒಪ್ಪಂದದಲ್ಲಿ ಈ ಸೇತುವೆಯ ನಿರ್ಮಾಣದ ಪ್ರಸ್ತಾಪವಾಗಿತ್ತು. ಆರ್ಥಿಕ ಕೊರತೆಯ ನೆಪದಿಂದ ಸತತವಾಗಿ ಮುಂದೂಡಲ್ಪಟ್ಟ ಈ ಸೇತುವೆಯ ಕಾಮಗಾರಿಯು ೨೦೦೨ ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಇವರಿಂದ ಆರಂಭವಾಗಿತ್ತು. ಆದರೆ ನಂತರ ಬಂದ ಯುಪಿಎ ಸರಕಾರವು ಈ ಯೋಜನೆಯನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ೨೦೦೮ ರಲ್ಲಿ ಪೂರ್ತಿಯಾಗಬೇಕಿದ್ದ ಈ ಸೇತುವೆಯ ಕೆಲಸ ೨೦೧೪ ರಲ್ಲೂ ಆಗಲಿಲ್ಲ.
೨೦೧೪ ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ಈ ಯೋಜನೆಗೆ ಸಾಕಷ್ಟು ಅನುದಾನವನ್ನು ಒದಗಿಸಿದ ನಂತರ ಕೆಲಸವು ವೇಗವನ್ನು ಪಡೆದು ೨೦೧೮ ರಲ್ಲಿ ರಸ್ತೆ ಹಾಗೂ ರೈಲು ಪಥಗಳನ್ನು ಒಳಗೊಂಡ ಈ ಸೇತುವೆಯು ಸಂಚಾರಕ್ಕೆ ತೆರೆದುಕೊಂಡಿತು. ೨೦೧೮ ರ ಡಿಸೆಂಬರ್ ೨೫ ರಂದು ಪ್ರಧಾನಿ ನರೇಂದ್ರ ಮೋದಿ ಈ ಸೇತುವೆಯನ್ನು ಉದ್ಘಾಟಿಸಿದರು. ಈ ನಡುವೆ ೧೯೯೭ ರಲ್ಲಿ ತಾನು ಪ್ರಧಾನಿಯಾಗಿದ್ದಾಗ ಬೋಗಿಬೀಲ್ ಸೇತುವೆಗೆ ಶಂಖುಸ್ಥಾಪನೆ ಮಾಡಿದ್ದರೂ ಉದ್ಘಾಟನೆಯ ವೇಳೆ ನನ್ನನ್ನು ಯಾರೂ ನೆನೆಪು ಮಾಡಿಕೊಂಡಿಲ್ಲ ಎಂಬಂತೆ ದೇವೇಗೌಡರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು!
ಕೇಂದ್ರ ಸರಕಾರದ ಟ್ಯಾಕ್ಸ್ ಸುಧಾರಣಾ ಕ್ರಮವಾದ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ವಿನಾ ಕಾರಣ ವಿಪಕ್ಷಗಳಿಂದ ಟೀಕಿಸಲ್ಪಡುತ್ತಿದೆ. ಅತ್ಯಂತ ಜಟಿಲವಾಗಿದ್ದ ವ್ಯಾಟ್ ತೆರಿಗೆ ಸಂಗ್ರಹ ಪದ್ಧತಿಯನ್ನು ತೆಗೆದು ಹಾಕಿ ಅದರ ಬದಲು ಸರಳವಾದ ಜಿಎಸ್‌ಟಿ ಯನ್ನು ಭಾರತ ದಲ್ಲಿ ೨೦೧೭ ರಲ್ಲಿ ಜಾರಿಗೆ ತರಲಾಯಿತು. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಹೊಸ ತೆರಿಗೆ ಪದ್ಧತಿ ಮಸೂದೆ ಯನ್ನು ಮಂಡನೆ ನಡೆಸಿದ್ದು ಮಾತ್ರವಲ್ಲ ವಿರೋಧ ಪಕ್ಷಗಳು ಹಾಗೂ ಪ್ರತೀ ರಾಜ್ಯ ಸರಕಾರಗಳೊಡನೆಸಮಾಲೋಚನೆ ನಡೆಸಿ ಅವಿರೋಧವಾಗಿಯೇ ಜಿಎಸ್‌ಟಿ ಯನ್ನು ಜಾರಿ ಮಾಡಲಾಯಿತು.
೨೦೦೪ ರಿಂದ ೨೦೧೪ ರ ವರೆಗೆ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವೂ ಜಿಎಸ್‌ಟಿ ಯನ್ನು ಜಾರಿಗೆ ತರುವಪ್ರಯತ್ನಗಳನ್ನು ನಡೆಸಿತ್ತು. ಆದರೆ ಯುಪಿಎ ಸರಕಾರವು ರಾಜ್ಯಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನದಟ್ಟು ಮಾಡಿಸುವಲ್ಲಿ ವಿಫಲವಾಗಿತ್ತು. ಭಾರತದಲ್ಲಿ ಜಿಎಸ್‌ಟಿ ತೆರಿಗೆ ಪದ್ಧತಿಯು ಜಾರಿಯಾ ದುದು ದೇಶದಲ್ಲಾದ ಪ್ರಮುಖ ತೆರಿಗೆ ಸುಧಾರಣೆ ಎಂದು ಪರಿಗಣಿಸಲ್ಪಟ್ಟಿದೆ.
ಕರೋನಾ ವರ್ಷವನ್ನು ಹೊರತುಪಡಿಸಿ ಪ್ರತೀ ವರ್ಷ ಜಿಎಸ್‌ಟಿ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. ೨೦೨೨-೨೩ ರಲ್ಲಿ ೧೮.೦೫ ಲಕ್ಷ ರುಪಾಯಿಗಳಷ್ಟು ಜಿಎಸ್‌ಟಿ ಸಂಗ್ರಹವಾಗಿ ದಾಖಲೆ ಸೃಷ್ಟಿಯಾಗಿದೆ. ಅವೈಜ್ಞಾನಿಕ, ಅತ್ಯಂತ ಜಟಿಲ ಹಾಗೂ ಸಂಕೀರ್ಣವೂ ಆಗಿದ್ದ ವ್ಯಾಟ್ ತೆರಿಗೆ ಯು ಅಲ್ಲಲ್ಲಿ ಸೋರಿಕೆಯಾಗುತ್ತಿತ್ತು. ವ್ಯಾಟ್ ಪದ್ಧತಿಯಡಿಯಲ್ಲಿ ಜೀವನಾವಶ್ಯಕ ವಸ್ತುಗಳು ಹಾಗೂ ವಿಲಾಸೀ ವಸ್ತುಗಳಿಗೆ ಏಕರೀತಿಯ ಟ್ಯಾಕ್ಸ್ ವಿಧಿಸಲಾಗುತ್ತಿತ್ತು.
ಈಗ ದೇಶದಲ್ಲಿ ಹೂಡಿಕೆಗೆ, ಕೈಗಾರಿಕೀಕರಣಕ್ಕೆ, ಉದ್ಯಮಶೀಲತೆಗೆ ಬಹಳಷ್ಟು ಪ್ರೋತ್ಸಾಹವನ್ನು ಕೊಡಲಾಗುತ್ತಿದೆ. ವಿದ್ಯುತ್, ರಸ್ತೆ, ನೀರಾವರಿ ಮೊದಲಾದ ಮೂಲ ಭೂತ ಸೌಕರ್ಯದಲ್ಲಿ ವೃದ್ಧಿಯಾಗಿದೆ. ಹೂಡಿಕೆ ಹಾಗೂ ಉದ್ಯಮಗಳಿಗೆ ತೊಡಕಾಗುವ ಓಬೀರಾಯನ ಕಾಲದ ಕಾನೂನುಗಳನ್ನು ತೆಗೆದು ಹಾಕಲಾಗಿದೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮೊದಲಾದ ಸಕಾರಾತ್ಮಕ ಯೋಜನೆಗಳಿಂದಾಗಿ ದೇಶದಲ್ಲಿ ಉದ್ಯಮಗಳು ಯಶಸ್ವಿಯಾಗುತ್ತಿವೆ, ನೇರ ವಿದೇಶೀ ಹೂಡಿಕೆ ಹೆಚ್ಚಾಗಿದೆ ಹಾಗೂ ದೇಶದ ಆರ್ಥಿಕತೆ ಮತ್ತಷ್ಟು ಬಲಿಷ್ಠವಾಗಿದೆ. ಸರಕಾರವು ದೇಶದಲ್ಲಿ ಉದ್ಯಮಕ್ಕೆ ಪೂರಕವಾದವಾತಾವರಣವನ್ನು ನಿರ್ಮಿಸುತ್ತಿರುವುದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸರಕಾರವನ್ನು ಸೂಟ್ ಬೂಟ್ ಕೀ ಸರಕಾರ್ ಎಂದು ಟೀಕಿಸುತ್ತಿವೆ.
ಆದರೆ ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರೂ ಅವರು ಕೈಗಾರಿಕೆಗಳು ಆಧುನಿಕ ಭಾರತದ ದೇವಾಲಯಗಳು ಎಂದು ಹೇಳಿ ದ್ದರು ಎಂಬುದನ್ನು ಈ ವಿರೋಧ ಪಕ್ಷಗಳು ಮರೆತಿವೆ. ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೋರ್ವರೂ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಜೋಡಣೆ ಮಾಡಬೇಕೆಂದು ಕಳೆದ ಐದು ವರ್ಷಗಳಿಂದ ಸರಕಾರವುನಿರಂತರವಾಗಿ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸೂಚನೆ ಕೊಡುತ್ತಾ ಬಂದಿದೆ.
ಇದುವರೆಗೆ ಜೋಡಣೆಯ ಪ್ರಕ್ರಿಯೆಯು ಉಚಿತವೂ, ಸುಲಭವೂ ಆಗಿತ್ತು. ಇನ್ನು ಮುಂದೆ ಆಧಾರ್ ಜೊತೆಗೆ ಪ್ಯಾನ್ ಅನ್ನು ಜೋಡಿಸಲು ೧೦೦೦ ರುಪಾಯಿಗಳ ದಂಡ ತೆರಬೇಕಾಗಿದೆ. ಇಷ್ಟು ವರ್ಷ ಆಧಾರ್ ಜೊತೆಗೆ ಪ್ಯಾನ್ ನಂಬರ್ ಅನ್ನು ಜೋಡಿಸದೇ ಕುಳಿತು, ನಂತರ ದಂಡ ಪಾವತಿಸಬೇಕು ಎನ್ನುವ ಪರಿಸ್ಥಿತಿಯನ್ನು ಸೃಷ್ಟಿಸಿಗೊಂಡು ಮತ್ತೆ ಸರಕಾರವನ್ನು ದೂರುವುದರಲ್ಲಿ ಅರ್ಥವಿಲ್ಲ. ಹೇಗೆ ವಾಹನ ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ ಎನ್ನುವ ಕಾನೂನು ಇದೆಯೋ ಅದೇ ರೀತಿ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಕಡ್ಡಾಯವಾಗಿ ಜೋಡಿಸಬೇಕೆಂಬ ಕಾನೂನು ಇರುವಾಗ, ಅದನ್ನು ವಿರೋಽಸಿ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುವುದು ಮೊಸರಲ್ಲಿ ಕಲ್ಲನ್ನು ಹುಡುಕಿದಂತೆಯೇ ಸರಿ.