ಹಾಲಾಡಿ ಸ್ಪರ್ಧಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೇ ಗೌರವ
ವಿಶ್ಲೇಷಣೆ
ಮರಿಲಿಂಗಗೌಡ ಮಾಲಿಪಾಟೀಲ್
ರಾಜಕಾರಣಿಗಳೆಲ್ಲ ಒಳ್ಳೆಯವರು ಎನ್ನುವ ಬಗ್ಗೆ ಜನಸಾಮಾನ್ಯರಿಗೆ ಅಂತಹ ನಂಬಿಕೆಯೇನೂ ಇದ್ದಂತಿಲ್ಲ. ‘ಯಾರು ಅಧಿಕಾರಕ್ಕೆ ಬಂದರೇನು, ನಾವು ರಾಗಿ ಬೀಸುವುದು ತಪ್ಪುವುದಿಲ್ಲ’ ಎನ್ನುವ ಸಾಮಾನ್ಯ (ಸಿನಿಕ) ಹೇಳಿಕೆಗಳೂ, ‘ಪಾಲಿಟಿಕ್ಸ್ ಈಸ್ ದಿ ಲಾಸ್ಟ್ ರೆಸಾರ್ಟ್ ಆಫ್…’ ಎನ್ನುವ ಭಯಂಕರಹೇಳಿಕೆಗಳೂ ಈ ಸಮಾಜದಲ್ಲಿ ಪ್ರಚಲಿತದಲ್ಲಿವೆ.
ಒಟ್ಟಾರೆಯಾಗಿ ಹೇಳುವುದಿದ್ದರೆ ರಾಜಕಾರಣಕ್ಕೆ ಬರುವುದೇ ದುಡ್ಡು ಮಾಡಲು ಅಷ್ಟೇ ಹೊರತು ಜನರಿಗೆ ಒಳ್ಳೆಯ ದನ್ನು ಮಾಡಲು ಅಲ್ಲ ಎನ್ನುವ ಭಾವನೆಯೇ ಮೇಲುಗೈ ಸಾಧಿಸಿದೆ. ಚುನಾವಣೆಗಳಲ್ಲಿ ಗೆದ್ದ ಬಳಿಕ ರಾಜಕಾರಣಿ ಗಳ ಶ್ರೀಮಂತಿಕೆ ಹೆಚ್ಚುವುದು ಈ ಭಾವನೆಗೆ ಇಂಬು ಕೊಡುತ್ತದೆ. ಹಾಗಿದ್ದರೆ ರಾಜಕೀಯದಲ್ಲಿ ನಿಸ್ವಾರ್ಥಿಗಳು ಇಲ್ಲವೇ ಇಲ್ಲವಾ ಎಂದು ಕೇಳಿದರೆ ‘ಹಾಗೇನೂ ಇಲ್ಲ ಎನ್ನುವ ಉತ್ತರ ಥಟ್ಟನೆ ಬರುತ್ತದೆ. ಪರರ ದುಡ್ಡಿಗೆ ಆಸೆ ಪಡದ, ಅಧಿಕಾರಕ್ಕೆ ಹಂಬಲಿಸದ, ಜನಸೇವೆಯೇ ಆದ್ಯತೆಯಾಗಿರುವ ರಾಜಕಾರಣಿಗಳು ಖಂಡಿತ ಇದ್ದಾರೆ. ಅಂಥವ ರಿಂದಾಗಿಯೇ ಇಂದಿಗೂ ಪ್ರಜಾಪ್ರಭುತ್ವದ ಮೌಲ್ಯಗಳು ಜೀವಂತವಾಗಿವೆ. ಆದರೆ ಅಂಥವರ ಸಂಖ್ಯೆ ಕಡಿಮೆ ಎನ್ನುವುದಷ್ಟೇ ಆತಂಕದ ವಿಷಯ.
ಪ್ರಜಾಪ್ರಭುತ್ವದಲ್ಲಿ ಯಾವುದನ್ನೇ ಆದರೂ ನಿರ್ಧರಿಸುವುದು ಮೆಜಾರಿಟಿಯೇ. ಆದುದರಿಂದ ನಿಸ್ವಾರ್ಥಿಗಳು ಕಡಿಮೆ ಇರುವುದರಿಂದ ರಾಜಕಾರಣಿಗಳ ಬಗ್ಗೆ ಒಟ್ಟಾರೆಯಾಗಿ ಒಳ್ಳೆಯ ಅಭಿಪ್ರಾಯ ಕಾಣಿಸಿಕೊಳ್ಳುತ್ತಿಲ್ಲ. ಈ ಪರಿಸ್ಥಿತಿ ಬದಲಾಗಬೇಕಿದ್ದರೆ ನಿಸ್ವಾರ್ಥಿ ರಾಜಕಾರಣಿಗಳು ಹೆಚ್ಚಬೇಕು. ಆದರೆ ದುರಂತವೆಂದರೆ ಇರುವ ಕೆಲವರೂ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿದ್ದಾರೆ.
ಕುಂದಾಪುರದ ವಾಜಪೇಯಿ: ಭಾರತದ ರಾಜಕಾರಣದಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಂಡವರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ. ಪಕ್ಷ ಭೇದವಿಲ್ಲದೇ ವಿರೋಧಿಗಳಿಂದಲೂ ಹೊಗಳಿಸಿಕೊಂಡ ಅವರು ಅಜಾತಶತ್ರು ಎಂದೇ ಹೆಸರಾದವರು. ಪ್ರಧಾನಮಂತ್ರಿಯೂ ಆಗಿ ರಾಜಕೀಯ ಬದುಕಿನ ಶಿಖರ ತಲುಪಿದ ಅವರು ರಾಜಕಾರಣಿ ಗಳಿಗೆಲ್ಲ ಮಾದರಿ ಎಂದರೆ ಅತಿಶಯವೇನೂ ಅಲ್ಲ. ನಮ್ಮ ಕುಂದಾಪುರದ ಬಿಜೆಪಿಯ ಹಾಲಿ ಶಾಸಕ ಹಾಲಾಡಿಶ್ರೀನಿವಾಸ ಶೆಟ್ಟಿಯವರು ಕುಂದಾಪುರದ ವಾಜಪೇಯಿ ಎಂದು ಹೆಸರಾಗಿದ್ದಾರೆ ಎನ್ನುವ ಒಂದು ವಾಕ್ಯ ಹೇಳಿದರೆ ಸಾಕು, ಇನ್ನವರ ವ್ಯಕ್ತಿತ್ವದ ಪರಿಚಯ ಮಾಡಿಕೊಡಬೇಕಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ, ಚುನಾವಣಾ ರಾಜಕೀಯ ತನಗೆ ಸಾಕು ಎನ್ನುವ ಅವರ ಹೇಳಿಕೆ ಜನರನ್ನು ದಿಗ್ಭ್ರಮೆಗೆ ತಳ್ಳಿದೆ. ಇರುವ ಸಜ್ಜನರೆಲ್ಲಾ ಚುನಾವಣಾ ರಾಜಕೀಯದಿಂದ ದೂರ ಸರಿದರೆ ಯಾರನ್ನು ಮಾದರಿಯಾಗಿ ತೋರಿಸಬೇಕು ಎನ್ನುವ ಭಾವನೆಯೂ ಆತಂಕಕ್ಕೆ ಕಾರಣ. ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ವಯಸ್ಸು ೭೫ ದಾಟಿದ್ದರೆ, ನರೇಂದ್ರಮೋದಿ ಪ್ರಣೀತ ವಯಸ್ಸು ೭೫+ ಆದವರು ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲಿ ಎನ್ನುವ ನಿಯಮಕ್ಕೆ ಮೇಲ್ಪಂಕ್ತಿ ಹಾಕಿಕೊಡುತ್ತಿದ್ದಾರೆ ಎಂದಾದರೂ ಭಾವಿಸಿ ಸಮಾಧಾನ ಪಡಬಹುದಿತ್ತು. ಆದರೆ ಇನ್ನೂ ೭೨ವಯಸ್ಸಿ ನ (ಜನನ ೬.೪.೧೯೫೧) ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಬದುಕಿನ ಅಂತಿಮ ಚುನಾವಣಾ ಸಮರವನ್ನು ಈ ಬಾರಿ ನಿಭಾಯಿಸಿ ನಂತರ ನಿವೃತ್ತರಾಗಬಹುದಿತ್ತು. ಆ ಮೂಲಕ ಬಿಜೆಪಿಗೆ ವಿಧಾನಸಭೆಯಲ್ಲಿ ಒಂದು ಸೀಟು ಖಚಿತಪಡಿಸುವುದರೊಂದಿಗೆ ಮುಂದಿನ ೫ ವರ್ಷಗಳ ಕಾಲ ಬಿಜೆಪಿಯ ರಾಜಕೀಯದಲ್ಲಿ ‘ಮಾದರಿ ಮುಖ’ವಾಗಿಯೂ ವಿಜೃಂಭಿಸಬಹುದಿತ್ತು.
ಸತತ ಗೆಲುವುಗಳ ಸರದಾರ :ಹಾಲಾಡಿ ಶ್ರೀನಿವಾಸ್ ಶೆಟ್ಟಿ ಚುನಾವಣಾ ರಾಜಕೀಯದಲ್ಲಿ ಯಾವತ್ತೂ ಸೋಲನುಭವಿಸಲಿಲ್ಲ. ೧೯೯೮ರಿಂದ ಆರಂಭ ವಾದ ಅವರ ಚುನಾವಣಾ ಗೆಲುವುಗಳು ೨೦೧೮ರ ವರೆಗೂ ಮುಂದುವರಿದಿದೆ. ಬಿಜೆಪಿ ಕರಾವಳಿ ಭಾಗದಲ್ಲಿ ಬಲಿಷ್ಠವಾಗಿದ್ದುದರಿಂದ ಹಾಲಾಡಿ ಶೆಟ್ಟರು ಗೆದ್ದರು ಎನ್ನುವಂತಿಲ್ಲ. ಬಿಜೆಪಿ ಟಿಕೆಟ್ ನಿರಾಕರಿಸಿದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಽಸಿಯೂ ಗೆದ್ದರು. ಅಲ್ಲಿಗೆ ಹಾಲಾಡಿ ಶ್ರೀನಿವಾಸ ಶೆಟ್ಟರ ಗೆಲುವು ಗಳು ಅವರ ವೈಯಕ್ತಿಕ ಗೆಲುವುಗಳು ಮತ್ತು ಅವರಿಂದಾಗಿ ಪಕ್ಷಕ್ಕೆ ಬಲ ಹೆಚ್ಚುತ್ತದೆ ಎನ್ನುವುದು ಅನುಮಾನಕ್ಕೆ ಅವಕಾಶವಿಲ್ಲದಂತೆ ಸಾಬೀತಾಯಿತು. ಸತತ ೫ ಚುನಾವಣೆಗಳಲ್ಲಿ ದಾಖಲೆ ಅಂತರದ ಜಯ ಸಾಧಿಸಿದವರು ಎನ್ನುವುದಕ್ಕಿಂತ ಹೆಚ್ಚಿನ ವಿವರಣೆ ಖಂಡಿತ ಬೇಕಿಲ್ಲ.
ಇಂಥ ಜನಪ್ರಿಯ ಶಾಸಕರನ್ನು ಬಿಜೆಪಿಯ ಕೆಲವರು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವುದು ಬಿಜೆಪಿಯ ಸ್ವಯಂಕೃತ ಅಪರಾಧ. ಯಾವುದೇ ಪದವಿಗೆ ಆಸೆ ಪಡದ ಹಾಲಾಡಿಯವರಿಗೆ ಬಿಜೆಪಿ ತಾನಾಗಿ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪಿಸಿ, ಹಾಲಾಡಿಯವರು ಬೆಂಗಳೂರು ತಲುಪುವಷ್ಟ ರಲ್ಲಿ ಯೂಟರ್ನ್ ಹೊಡೆಯಿತು. ಹಾಲಾಡಿ ಯವರೇ ಒತ್ತಡ ಹೇರಿದ್ದರೆ ಅದು ಬೇರೆ ವಿಷಯ, ಆದರೆ ಅವರ ಕಡೆಯಿಂದ ಯಾವ ಬೇಡಿಕೆಯೂ ಇಲ್ಲದಿ ದ್ದಾಗ ಕರೆದು ಮುಖಭಂಗ ಮಾಡಿದವರದು ಅಕ್ಷಮ್ಯ ಅಪರಾಧ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಇದನ್ನು ಹೊಟ್ಟೆಗೆ ಹಾಕಿ ಕೊಂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂದೆ ಎಂದೂ ಎಲ್ಲಿಯೂ ಇದನ್ನು ಪ್ರಸ್ತಾಪಿಸದೆ ಬಿಜೆಪಿಯಲ್ಲಿಯೇ ಉಳಿದರು.
ಸ್ಥಿತಪ್ರಜ್ಞ ಶ್ರೀನಿವಾಸ ಶೆಟ್ಟಿ?:ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ಎಲ್ಲಿಯೂ ತೋರಿಸದಿದ್ದರೂ ಅಂತರಂಗದಲ್ಲಿ ಅವರಿಗೆ ಅಸಮಾಧಾನವಾಗಿಲ್ಲವೆ? ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಲು ಅದೇ ಕಾರಣವಾ? ಎಂಬಿತ್ಯಾದಿ ಪ್ರಶ್ನೆಗಳು ಅವರ ಅಭಿಮಾನಿ ವಲಯದಲ್ಲಿ ಚಟುವಟಿಕೆಗೀಡಾಗುತ್ತಿವೆ. ೫ ಬಾರಿ ಶಾಸಕರಾಗಿದ್ದರೂ ಸಚಿವರಾಗದ ಬಗ್ಗೆ ಖಂಡಿತ ಅವರಿಗೂ ಅಸಮಾಧಾನ ಇರಬಹುದು. ಆದರೆ ವಶೀಲಿ, ಒತ್ತಡ, ಇತ್ಯಾದಿಗಳು ಅವರ ಸಹಜ ಸ್ವಭಾವವಲ್ಲ. ಮತ್ತು ಇಂದಿನ ರಾಜಕೀಯದಲ್ಲಿ ಒತ್ತಡ ಸೃಷ್ಟಿಸಿದವರಿಗೆ ಗೌರವ ದೊರೆಯುವುದು ಸುಲಭವೂ ಅಲ್ಲ. ತಾನಾಗಿ ಬಂದರೆ ಬರಲಿ ಎನ್ನುವವರಿಗೆ ಬರುವ ಸಂಭವನೀಯತೆಯೂ ಇಲ್ಲ. ಆದರೆ ಅಂತಹ ಸಜ್ಜನ ರಾಜಕಾರಣಿಗೆ ಸಚಿವ ಸ್ಥಾನ ನೀಡಿಲ್ಲ ಎಂದಾದರೆ ಅದು ರಾಜಕೀಯ ವ್ಯವಸ್ಥೆಗೇ ಅವಮಾನವಲ್ಲವೇ ಎಂದು ಯೋಚಿಸಬೇಕಿರುವುದು ಮಾತ್ರ ಅವರ ಪಕ್ಷವೇ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕುಂದಾಪುರ ಕ್ಷೇತ್ರದ ಅಭ್ಯರ್ಥಿಯ ಸ್ಥಾನಕ್ಕೆ ಹಾಲಾಡಿ ಶ್ರೀನಿವಾಸ್ ಶೆಟ್ಟರ ಜತೆಗೆ ಜಯಪ್ರಕಾಶ ಹೆಗ್ಡೆ ಮತ್ತು ಶ್ರೀನಿವಾಸ ಶೆಟ್ಟರ ರಾಜಕೀಯ ಗುರು ಎ.ಜಿ. ಕೊಡ್ಲಿ ಅವರ ಪುತ್ರ ಕಿರಣ್ ಕೊಡ್ಲಿ ಅವರ ಹೆಸರುಗಳೂ ಚಚೆರ್ಗೆ ಬಂದಿವೆ. ಚರ್ಚೆಯಿಲ್ಲದೆ ಶ್ರೀನಿವಾಸ ಶೆಟ್ಟರ ಹೆಸರನ್ನು ಅಂತಿಮಗೊಳಿಸದ ಕಾರಣಕ್ಕೆ ಅಸವಧಾನಗೊಂಡು ಶ್ರೀನಿವಾಸ ಶೆಟ್ಟರು ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದರಾ? ಇದಕ್ಕೆ ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ‘ಚುನಾವಣೆಯಲ್ಲಿ ಸ್ಪರ್ಧಿಸದಿರುವುದು ಶ್ರೀನಿವಾಸ ಶೆಟ್ಟರ ಸ್ವಂತ ನಿರ್ಧಾರ’ ಎಂದರು.
ತಮ್ಮ ರಾಜಕೀಯ ಗುರುಪುತ್ರ ಕಿರಣ್ ಕೊಡ್ಲಿಗೆ ಅವಕಾಶ ಕೊಡಬೇಕೆಂದು ಹಾಲಾಡಿ ಶ್ರೀನಿವಾಸ ಶೆಟ್ಟರು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕುಂದಾಪುರದ ಸಾರ್ವಜನಿಕರು ನಮಗೆ ಮಾದರಿ ಶಾಸಕ ಶ್ರೀನಿವಾಸ ಶೆಟ್ಟರ ಸೇವೆ ಬೇಕಿದೆ ಎನ್ನುತ್ತಾರೆ. ಹಾಗಾಗಿ ಬಿಜೆಪಿ ವರಿಷ್ಠರು ಹಾಲಾಡಿ ಶ್ರೀನಿವಾಸ ಶೆಟ್ಟರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಹೇಳಬೇಕು.
ಯಾಕೆಂದರೆ ಎಲ್ಲದಕ್ಕೂ ಒಂದು ಅಂತ್ಯವಿರುತ್ತದೆ. ಮತ್ತೆ ಆ ಅಂತ್ಯ ಸುಂದರವಾಗಿರುತ್ತದೆ ಎಂದು ಜನ ಭಾವಿಸುವಂತಿರಬೇಕು. ಮೊದಲೇ ಹೇಳಿದಂತೆ ಹಾಲಾಡಿ ಶ್ರೀನಿವಾಸ ಶೆಟ್ಟರಂತಹವರು ಸಚಿವರಾಗಲಿಲ್ಲ ಎಂಬುದು ಹಾಲಾಡಿ ಯವರಿಗೆ ಎಂದೂ ಅವಮಾನದ ವಿಚಾರ ಆಗಿರಲಿಲ್ಲ, ನಾನು ಸೇವೆ ಮಾಡಲು ಬಂದವನು ಎನ್ನುತ್ತಿದ್ದರು. ಹಾಗಾಗಿ ಶ್ರೀನಿವಾಸ ಶೆಟ್ಟಿ ಮತ್ತೆ ಇಂತಹ ಸೇವಕನನ್ನ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ಬಹುಮತ ಪಡೆದರೆಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಸಚಿವರನ್ನಾಗಿಸಬೇಕು. ಆ ಮೂಲಕ ಸಚಿವರಾಗಿ ಅವರ ಕಾರ್ಯವೈಖರಿ ಎಲ್ಲರಿಗೂ ತಿಳಿಯುವಂತಾಗಬೇಕು.
ಹಾಲಾಡಿ ಶ್ರೀನಿವಾಸ ಶೆಟ್ಟರ ಸಕ್ರಿಯ ರಾಜಕೀಯ ಬದುಕಿಗೆ ಒಳ್ಳೆಯ ಅಂತ್ಯ ನೀಡುವುದು ಬಿಜೆಪಿಯ ಕರ್ತವ್ಯವೂ ಆಗಬೇಕು. ಅ ಮೂಲಕ ಬಿಜೆಪಿ ಸಜ್ಜನರಿಗೆ, ಮಾದರಿ ಶಾಸಕರಿಗೆ, ಜನ ಸೇವಕರಿಗೆ ನಮ್ಮಲ್ಲಿ ಗೌರವವಿದೆ ಎನ್ನುವ ಸಂದೇಶ ನೀಡಬೇಕಿದೆ. ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಸೊಗಡಿದೆ. ಘನತೆ, ಗೌರವಗಳಿವೆ. ಹಲವು ರಾಜಕಾರಣಿಗಳು ಅಧಿಕಾರ ಪಡೆದು ಪ್ರಜಾಪ್ರಭುತ್ವದ ಮಾನ್ಯತೆಯನ್ನು ಮಣ್ಣುಪಾಲು ಮಾಡಿದ್ದಕ್ಕೆ ಈ ಸಮಾಜ ಸಾಕ್ಷಿ ಯಾಗಿದೆ. ಇಂಥವರೂ ಸಚಿವರಾದರಾ? ಎಂದು ದಿಗ್ಭ್ರಾಂತಿಯಿಂದ ಪ್ರಶ್ನಿಸಿದ್ದೇವೆ.
ಅಧಿಕಾರ ಮದ ಎಂಥ ಅನಾಹುತಗಳನ್ನು ಮಾಡಿದೆ ಎಂಬುದನ್ನೂ ನೋಡಿದ್ದೇವೆ. ಅದಕ್ಕೆ ಪ್ರತಿಯಾಗಿ ಸಜ್ಜನಿಕೆಯ ವ್ಯಕ್ತಿಗಳ ಕಾರ್ಯವೈಖರಿಯನ್ನು ಸಮಾಜ ಹೆಚ್ಚಾಗಿ ನೋಡಬೇಕು. ಹಾಗಾಗಬೇಕಿದ್ದರೆ ಹಾಲಾಡಿ ಶ್ರೀನಿವಾಸ ಶೆಟ್ಟರು ತಮ್ಮ ನಿರ್ಧಾರವನ್ನು ಬದಲಿಸಿ ಮತ್ತೊಮ್ಮೆ ಚುನಾವಣೆಗೆ ಸ್ಪಽಸಿ ಸಚಿವರಾಗಬೇಕು, ಅದು ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಗೆ ಗೌರವ ತರುವಂಥ ಸಂಗತಿ. ಬಿಜೆಪಿ ವರಿಷ್ಠರು ಈ ನಿಟ್ಟಿನಲ್ಲಿ ಯೋಚಿಸಲಿ.