ಬಂಡೀಪುರದ ಹುಲಿರಾಯನಿಗೆ ಚಿನ್ನದ ಹಬ್ಬದ ಸಂಭ್ರಮ
ವನ್ಯ ಲೋಕ
ನಂ.ಶ್ರೀಕಂಠ ಕುಮಾರ್‌
ಜಗತ್ತಿನಾದ್ಯಂತ ಇರುವ ಪ್ರಮುಖ ಅರಣ್ಯಗಳಲ್ಲಿ ಭಾರತದಲ್ಲಿನ ‘ಗಂಧದ ಗುಡಿ’ಯೆಂದೇ ಪ್ರಖ್ಯಾತವಾದ ಕರ್ನಾಟಕ, ಸಮೃದ್ಧ ಅರಣ್ಯದಿಂದ ಕೂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಪೂರ್ವದ ಮೈಸೂರು ಸಂಸ್ಥಾನದ ಮಹಾರಾಜ ರಾಗಿದ್ದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಅವರು ಶ್ರೇಷ್ಠ ಆಡಳಿತಗಾರರಾಗಿ, ವನ್ಯಜೀವಿ ಪ್ರೇಮಿಗಳಾಗಿ ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಿರುವುದು ಕಾಣಬಹುದು.
ಈ ನಿಟ್ಟಿನಲ್ಲಿ ಅಂದಿನ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರದ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಕಾವಲು ವಲಯವನ್ನಾಗಿ ರೂಪಿಸಿ, ೧೯೪೧ರಲ್ಲಿ ಶ್ರೀಗೋಪಾಲಸ್ವಾಮಿ ಬೆಟ್ಟದ ತಮ್ಮ ಇಷ್ಟ ದೈವವಾದ ಶ್ರೀವೇಣುಗೋಪಾಲ ಸ್ವಾಮಿ ಹೆಸರಿನಲ್ಲಿ ‘ವೇಣುಗೋಪಾಲ ವನ್ಯ ಮೃಗಧಾಮ’ವನ್ನು ಆರಂಭಿಸಿ ದರು. ಧಾಮದಲ್ಲಿ ಅಲ್ಲಲ್ಲಿ ಹುಲಿಯ  ಸಂತತಿ ಯನ್ನು ನೈಸರ್ಗಿಕವಾಗಿ ಕಾಣಬಹುದಾಗಿತ್ತು.
ಆನಂತರ ವನ್ಯ ಮೃಗ ಹುಲಿಯ ಸಂತತಿ ಕ್ಷೀಣಿಸಿ ಕಣ್ಮರೆಯಾಗುತ್ತಿದ್ದು, ನಾಶದ ಅಂಚಿ ನಲ್ಲಿರುವುದನ್ನು ಗಮನಿಸಿ ಈ ಅಪೂರ್ವ ದೇಶಿಯ ಪ್ರಾಣಿಯ ಸಂತತಿಯನ್ನು ಉಳಿಸಿ, ವೃದ್ಧಿ ಪಡಿಸಬೇಕೆಂಬ ದೂರದೃಷ್ಟಿಯಿಂದ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾಗಾಂಧಿಯವರು ೧೯೭೩ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಕಾಯಿದೆಯನ್ನು ರೂಪಿಸಿ ದೇಶದಲ್ಲೇ ಪ್ರಥಮವಾಗಿ ‘ಬಂಡಿಪುರದ ಅರಣ್ಯಧಾಮ‘ವನ್ನು ಪ್ರಮುಖವಾಗಿ ಆಯ್ಕೆಮಾಡಿ ಹುಲಿ ಸಂತತಿಯ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿದರು.
೧೯೭೩ರ ನವೆಂಬರ್ ೧೬ರಂದು ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಡಿ ದೇವರಾಜ ಅರಸು ಅವರು ಬಂಡಿಪುರ ರಾಷ್ಟ್ರೀಯಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಹುಲಿ ಸಂರಕ್ಷಣೆ ಯೋಜನೆ’ಯನ್ನು ಉದ್ಘಾಟಿಸಿದರು. ಈ ಯೋಜನೆಯ ಅನುಷ್ಠಾನಕ್ಕೆ ವನ್ಯ ಪ್ರೇಮಿಗಳಾದ ಡಾ. ಉಲ್ಲಾಸ್ ಕಾರಂತರ ಪ್ರಯತ್ನ ಸ್ಮರಣೀಯ. ನಂತರದಲ್ಲಿ ರಾಷ್ಟ್ರೀಯ ಹುಲಿ ಯೋಜನೆಯನ್ನು ಪ್ರತಿಷ್ಠಿತ ಅಭಯಾರಣ್ಯಗಳಾದ ಕೊಡಗು ಜಿಲ್ಲೆಯ ನಾಗರಹೊಳೆ, ೨೦೧೧ರಲ್ಲಿ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಸುತ್ತಲಿನ ಸುಮಾರು ೫೭೦ ಚ.ಕಿ. ಮೀ ಅರಣ್ಯ ಪ್ರದೇಶವನ್ನು ಯೋಜನೆ ವ್ಯಾಪ್ತಿಗೆ ವಿಸ್ತರಿಸಲಾಯಿತು.
ಅಲ್ಲದೆ ಮಲೈ ಮಹದೇಶ್ವರ ಬೆಟ್ಟದ ಅರಣ್ಯವನ್ನು ಸಹ ರಾಷ್ಟ್ರೀಯ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ಪ್ರಯತ್ನಗಳು ನಡೆಯುತ್ತಿದೆ. ಬಂಡಿಪುರದ ಕಾವಲುಕಾಡು ಕೊಡಗಿನ ನಾಗರಹೊಳೆ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ನೆರೆಯಪ್ರದೇಶವಾಗಿದ್ದು, ಕೇರಳ ರಾಜ್ಯದ ವೈನಾಡು ವನ್ಯಮೃಗಧಾಮ ಹಾಗೂ ತಮಿಳು ನಾಡಿನ ಮುಧುಮಲೈ ವನ್ಯ ಮೃಗಧಾಮಗಳಿಗೆ ಗಡಿಯನ್ನು ಹಂಚಿಕೊಂಡಿದೆ.
ಕರ್ನಾಟಕ ಸರಕಾರ ಅಂತಾರಾಜ್ಯಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದ ಒಳಗಿನ ಮಾರ್ಗವನ್ನು ರಾತ್ರಿ ವೇಳೆ ಸಂಚಾರಕ್ಕೆ ನಿಷೇಧಿಸಿ ಅರಣ್ಯ ಹಾಗೂ ಪ್ರಾಣಿಪಕ್ಷಿ ಸಂಕುಲದ ರಕ್ಷಣೆಯ ಬದ್ಧತೆಯನ್ನು ತೋರಿರುವುದು ಸಂತಸದ ವಿಷಯ. ಬಂಡಿಪುರ ಸಂರಕ್ಷಿತ ಅರಣ್ಯ: ಬಂಡಿಪುರ ನಿಸರ್ಗ ಸಹಜ ಸುಂದರ ವಾತಾವರಣದಲ್ಲಿ ವೈವಿಧ್ಯಮಯ ವನ್ಯ ಮೃಗಗಳನ್ನು, ಅಪೂರ್ವ ಸಸ್ಯ ಸಂಪತ್ತನ್ನು ಕಾಣಬಹುದು. ಹುಲಿಯ ನಾಡಿನ ಅರಣ್ಯ ಕಾಶಿಯೆಂದೇ ಹೇಳಬಹುದು. ಬೃಹತ್ ಸಂಖ್ಯೆಯಲ್ಲಿನ ಜಿಂಕೆ, ಕಡವೆ,ಕರಡಿ, ಚಿಪ್ಪುಹಂದಿ ಮುಂತಾದ ವನ್ಯಮೃಗಗಳು ರಾಷ್ಟ್ರೀಯ ಪಕ್ಷಿಯಾದ ನವಿಲು, ಗಿಡುಗ, ಕಾಡುಕೋಳಿ, ಲಾವಕ್ಕಿ, ಮರಕುಟಿಗ ಮುಂತಾದ ಪಕ್ಷಿಸಂಕುಲಗಳು ಮೊಸಳೆ, ಹೆಬ್ಬಾವು, ಉಡ, ಆಮೆ ಇನ್ನಿತರ ಉರಗ ಕುಲಗಳು ವಿವಿಧ ಜಾತಿಯ ಮಂಗಗಳು ಬಂಡಿಪುರದ ಅರಣ್ಯದೆಲ್ಲಡೆ ಸ್ವೇಚ್ಛೆಯಿಂದ ವಿಹರಿಸುವುದನ್ನು ಪ್ರವಾಸಿಗರು ಕಾಣಬಹುದು.
ಕಾಡನೆಗಳ ವೀಕ್ಷಣೆಯ ಅನುಭವ ವಿಶಿಷ್ಟವಾದುದು. ಗಂಭೀರಗತಿಯಿಂದ ಸಾಲಾಗಿ ಸಾಗುವ ಆನೆಗಳ ಹಿಂಡನ್ನು ನೋಡುವುದೇ ಮನಮೋಹಕ. ಅದೃಷ್ಟವಿದ್ದಲ್ಲಿ ಹುಲಿರಾಯನು ಅವಿಸ್ಮರಣೀಯ ದರ್ಶನ ನೀಡುತ್ತಾನೆ. ಇಂತಹ ಮೈನವೀರೇಳಿಸುವ ಅನೇಕ ನೋಟಗಳನ್ನು ಬಂಡಿಪುರದಲ್ಲಿ ಕಾಣಲು ಸಾಧ್ಯ. ಎತ್ತರಕ್ಕೆ ತಲೆಯೆತ್ತಿ ನಿಂತಿರುವ ತೇಗ, ಬೀಟೆ, ಮತ್ತು ಅಮೂಲ್ಯವಾದಶ್ರೀಗಂಧದ ಮರಗಳು ಸಮೃದ್ಧವಾಗಿದ್ದು ಗಂಧದ ಗುಡಿಯನ್ನಾಗಿಸಿದೆ. ನಡುವೆ ಮನತಣಿಸುವ ರೋಲಿಂಗ್ ರಾಕ್ ಜಲಪಾತದ ನೋಟ ಅತೀ ಸುಂದರ. ಬಂಡಿಪುರ ಸಂರಕ್ಷಿತ ಅರಣ್ಯ ಪ್ರದೇಶವು ಸುಮಾರು ೯೦೦ ಚ.ಕಿ.ಮೀ ವಿಸ್ತೀರ್ಣದ ವರೆಗೆ ವ್ಯಾಪಿಸಿದ್ದು ಭಾರತದ ಎರಡನೇ ಅತೀ ದೊಡ್ಡ ಹುಲಿ ಸಂರಕ್ಷಣಾ ನೆಲೆಯಾಗಿದೆ.
ಇಲ್ಲಿ ಸುಮಾರು ೧೭೦ ರಿಂದ ೧೮೦ರ ಸಂಖ್ಯೆಯೆಷ್ಟು ಹುಲಿರಾಯನ ಬಳಗವಿದೆ ಎಂದು ಅಂದಾಜಿಸಲಾಗಿದೆ. ನಾಗರಹೊಳೆ ಅಭಯಾರಣ್ಯ: ನಾಗರಹೊಳೆ ನ್ಯಾಷನಲ್ ಪಾರ್ಕ್ ಹಾಗೂ ಹುಲಿ ಸಂರಕ್ಷಣಾ ಪ್ರದೇಶವು ಅತ್ಯಂತ ಪ್ರತಿಷ್ಠಿತ ಅಭಯಾರಣ್ಯ ಗಳಲ್ಲಿ ಪ್ರಮುಖವಾದುದು. ಈ ಪ್ರದೇಶವು ವಿಶ್ವದ ಏಳು ಜೈವಿಕ ವಲಯಗಳಲ್ಲಿ ಒಂದಾಗಿರುವ ನೀಲಗಿರಿ ಜೈವಿಕ ವಲಯ ಭಾಗವಾಗಿದ್ದು ಉತ್ತಮ ಅರಣ್ಯ ಸಂಪತ್ತು ಹಾಗೂ ವನ್ಯ ಜೀವಿಗಳಿಗೆ ವಾಸಸ್ಥಾನವಾಗಿದೆ. ನಿತ್ಯ ಹರಿದ್ವರ್ಣ ಮತ್ತು ತೇವಾಂಶವುಳ್ಳ ಅರಣ್ಯವಾಗಿದ್ದು ಅತೀ ಶ್ರೇಷ್ಠ ಗುಣಮಟ್ಟದ ತೇಗದ ಮರಗಳ ಬೀಡಾಗಿದೆ.
೨೦೧೬ರಲ್ಲಿ ಈ ಅಭಯಾರಣ್ಯ ವನ್ನು ಸಹ ರಾಷ್ಟ್ರೀಯ ಹುಲಿ ಸಂರಕ್ಷಣಾ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಮೈಸೂರು ಜಿಲ್ಲೆಯ ಈ ಅಭಯಾರಣ್ಯವನ್ನು ಹುಣಸೂರು, ವೀರನಹೊಸಹಳ್ಳಿ, ಅಂತರಸಂತೆ, ಮೇಟಿಕುಪ್ಪೆ ಮತ್ತು ಡಿ.ಬಿ ಕುಪ್ಪೆ ವಲಯಗಳಾಗಿ ವಿಂಗಡಿಸಿ ಸುಮಾರು ೩೫೦ ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ. ಇದಕ್ಕೆ ಹೊಂದಿಕೊಂಡಂತಿರುವ ಕೊಡಗು ಜಿಲ್ಲೆಯ ನಾಗರಹೊಳೆ, ಕಲ್ಲಹಳ್ಳಿ ಮತ್ತು ಆನೆಚೌಕೂರು ವಲಯಗಳನ್ನು ನಿರ್ಮಿಸಿ ಸುಮಾರು ೨೯೦ ಚ.ಕಿ.ಮೀ ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ಹೊಂದಿರುತ್ತದೆ.
ಒಟ್ಟಾರೆ ನಾಗರಹೊಳೆ ರಾಷ್ಟ್ರೀಯ ಹುಲಿ ಅಭಯಾರಣ್ಯದಲ್ಲಿ ಅಂದಾಜು ೧೨೦ ರಿಂದ ೧೩೦ರ ವರೆಗೆ ಹುಲಿರಾಯನು ವಾಸವಾಗಿದ್ದು ಆಕಸ್ಮಿಕವಾಗಿ ದರ್ಶನ ನೀಡುತ್ತಾನೆ. ಅಲ್ಲದೆ ಪ್ರಮುಖವಾಗಿ ವನ್ಯ ಜೀವಿಗಳಾದ ಚಿರತೆ, ಆನೆಗಳ ಹಿಂಡನ್ನು ವಿಶೇಷವಾಗಿ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಕಾಣಬಹುದಾಗಿದೆ. ೧೯೯೨ರಲ್ಲಿ ಈ ಅಭಯಾರಣ್ಯವನ್ನು ರಾಜೀವ್ ಗಾಂಧಿರಾಷ್ಟ್ರೀಯ ಉದ್ಯಾನವನ ಎಂದು ಮರು ನಾಮಕರಣ ಮಾಡಲಾಗಿದೆ.
ಬೆಳ್ಳಿಹಬ್ಬದ ಆಚರಣೆ:ರಾಷ್ಟ್ರೀಯ ಹುಲಿ ಸಂರಕ್ಷಣಾ ಯೋಜನೆಯು ೫೦ ವರ್ಷಗಳು ಪೂರೈಸಿದ ಹಿನ್ನೆಲೆ ಸುವರ್ಣ ಮಹೋತ್ಸವದ ಆಚರಣೆಯನ್ನು ಸ್ವತಃ ವನ್ಯ ಜೀವಿ ಪ್ರೇಮಿಯೂ ಆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೆಚ್ಚಿನ ಆಸಕ್ತಿ, ಸಂಭ್ರಮದಿಂದ ಆಚರಿಸಲು ಸ್ವತಃ ಬಂಡಿಪುರ ರಾಷ್ಟ್ರೀಯ ಅರಣ್ಯಕ್ಕೆ ಇಂದು(ಭಾನುವಾರ)ಆಗಮಿಸಲಿದ್ದಾರೆ. ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಬಂಡಿಪುರದಲ್ಲಿ ಅಮೃತಕಾಲ ಸಮಯದಲ್ಲಿ ಹುಲಿಸಂರಕ್ಷಣೆಗಾಗಿ ಕೇಂದ್ರ ಸರಕಾರದ ದೃಷಿಕೋನ ಮತ್ತು ಚಿನ್ನದ ಹಬ್ಬದ ಸ್ಮರಣಾರ್ಥ ನಾಣ್ಯ ಬಿಡುಗಡೆ, ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ.
ಅಲ್ಲದೇ ಮಾವುತರೊಂದಿಗೆ ಸಂವಾದ, ಕಾಡಾನೆಯ ಜೀವ ಉಳಿಸಿದ ಅರಣ್ಯ ಸಿಬ್ಬಂದಿಯನ್ನು ಮತ್ತು ಆಸ್ಕರ್ ಪ್ರಶಸ್ತಿಗಳಿಸಿದ ಸಾಕ್ಷ್ಯ ಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ದಲ್ಲಿರುವ ಆನೆಮರಿ ಸಲಹಿದ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಸನ್ಮಾನಿಸ ಲಿದ್ದಾರೆ. ಮೈಸೂರಿನಲ್ಲಿ ರಾಷ್ಟ್ರದ ಹುಲಿ ಗಣತಿಯ ಇತ್ತೀಚಿನ ವರದಿಯನ್ನು ಬಿಡುಗಡೆ ಮಾಡಲಿದ್ದು, ಜತೆಗೆ ೫೦ನೇ ವರ್ಷದ ಪ್ರಾಜೆಕ್ಟ್ ಟೈಗರ್ ಯೋಜನೆಯ ಅಂಗವಾಗಿ ವರ್ಷಪೂರ ಆಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಅರಣ್ಯ ಸಂಪತ್ತು ಹಾಗೂ ಹುಲಿ ಸಂತತಿ ಸಂರಕ್ಷಣೆಯ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಹೆಮ್ಮೆಯ ವಿಷಯ. ಈಗಾಗಲೇ ಘೋಷಿತ ಅರಣ್ಯ ಪ್ರದೇಶಗಳ ಅಂತರರಾಜ್ಯ ಗಡಿ ಸಂರಕ್ಷಣೆಯ ಆಧುನೀಕರಣ ಮತ್ತು ಅಭಿವೃದ್ಧಿ, ಅಗತ್ಯ ಸಿಬ್ಬಂದಿ ನೇಮಕ, ಬೇಸಿಗೆ ಕಾಲದಲ್ಲಿ ಆಗಾಗ್ಗೆ ಸಂಭವಿಸಬಹುದಾದ ಕಾಡ್ಗಿಚ್ಚು ನಿಯಂತ್ರಣಕ್ಕೆ ವ್ಯವಸ್ಥೆ, ವನ್ಯ ಜೀವಿಗಳ ಕಳ್ಳಬೇಟೆಗಾರರನ್ನು ತಡೆಗಟ್ಟು ಸೇರಿದಂತೆ ಹಲವಾರು ನೈಸರ್ಗಿಕ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸುವ ಅವಶ್ಯಕತೆ ಇದೆ.
ಹಾಗೆಯೇ ಅರಣ್ಯದ ಗಡಿಭಾಗದಲ್ಲಿ ಇರುವ ಗ್ರಾಮಗಳಲ್ಲಿ ಉಗ್ರ ವ್ಯಾಘ್ರನಿಂದ ಜನರ ಹಾಗೂ ಜಾನುವಾರುಗಳ ಪ್ರಾಣಹಾನಿಗಳ ವರದಿಗಳೂ ಆಗುತ್ತಿದ್ದು ಹಾಗೆಯೇ ಮಾನವನನ್ನು ಬೇಟೆಯಾಡುವ ಇತರೆ ಮಾಂಸಹಾರಿ ವನ್ಯ ಪ್ರಾಣಿಗಳಿಂದಲೂ ಉಂಟಾಗುತ್ತಿರುವ ಉಪಟಳದಿಂದ ಪ್ರಾಣಹಾನಿಯಾದ ಸಂದರ್ಭದಲ್ಲಿ ಅಂತಹ ಕುಟುಂಬಗಳಿಗೆ ಸೂಕ್ತ ಹೆಚ್ಚಿನ ಪರಿಹಾರದ ಬಗ್ಗೆಯೂ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ.