ತೈವಾನ್ ರಕ್ಷಣೆಗೆ ಅಮೆರಿಕ-ಚೀನಾ ಯುದ್ದ ?
ವಿಶ್ವ ವಿಹಾರ
ಗಣೇಶ್ ಪ್ರಸಾದ್
ಅಮೆರಿಕಾ ಮತ್ತು ಚೀನಾ ದೇಶಗಳು ತಮ್ಮ ತಮ್ಮ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳುತ್ತಿವೆ. ತೈವಾನಿನ ವಿಷಯವಾಗಿ ಯಾವುದೇ ಅಸ್ಥಿರತೆ ಕಂಡು ಬಂದಲ್ಲಿ, ಅದನ್ನು ಸಂಪೂರ್ಣವಾಗಿ ಹೊಸಕಿ ಹಾಕಲು ಸಂಕಲ್ಪವನ್ನು ಮಾಡಿದ್ದಾರೆ. ಇಂದು ತೈವಾನಿನ ವಿಷಯವಾಗಿ ಅಮೆರಿಕ, ಚೀನಾ ಮಾತಾಡಿದಲ್ಲಿ ಅದು ಇಡೀ ಜಗತ್ತಿನಾದ್ಯಂತ ಸುದ್ದಿ ಮಾಡುತ್ತದೆ.
ಯುರೋಪ್ ಖಂಡದಲ್ಲಿ ಯುದ್ಧಗಳಿಗೇನೂ ಕೊರತೆಯಿಲ್ಲ. ೧೯೪೫ ರಿಂದ ಯುರೋಪ್ ತನ್ನ ರಕ್ತಸಿಕ್ತ ಗಡಿಯಾಚೆಗಿನ ಯುದ್ಧಕ್ಕೆ ಸಾಕ್ಷಿಯಾಗಿದೆ. ಆದರೆ ಇಂದು ಏಷ್ಯಾವು ಇನ್ನೂ ಕೆಟ್ಟದ್ದನ್ನು ಎದುರಿಸುತ್ತಿದೆ. ತೈವಾನಿಗಾಗಿ ಚೀನಾ ಮತ್ತು ಅಮೆರಿಕಾದ ನಡುವಿನ ಸಂಘರ್ಷ.
ತೈವಾನಿನ ಮೇಲೆ ಚೀನಾದ ಕ್ಷಿಪಣಿ ದಾಳಿಯನ್ನು ತಡೆಯಲು ಅಮೆರಿಕಾ ಈಗಾಗಲೇ ಹೊಸ ಹೊಸ ಕಾರ್ಯತಂತ್ರಗಳನ್ನು ರಚಿಸಿದೆ. ಕಳೆದ ಕೆಲವು ವಾರಗಳ ಹಿಂದೆ ಚೀನಾದ ಮಿಲಿಟರಿ ಜೆಟ್ ವಿಮಾನಗಳು ತೈವಾನಿನ ವಾಯು ಗಡಿ ರೇಖೆಯನ್ನು ಉಲ್ಲಂಘಿಸಿ ಒಳಕ್ಕೆ ಬಂದಿವೆ. ತೈವಾನಿನ ಮೇಲಿನೆ ಅಮೆರಿಕಾದ ಹಸ್ತಕ್ಷೇಪವನ್ನು ಚೀನಾವು ಹಿಂದಿನಿಂದಲೂ ಖಂಡಿಸು ತ್ತಲೇ ಬಂದಿದೆ. ಆದರೆ ಅಮೆರಿಕಾವು ತೈವಾನಿನ ಮೇಲಿರುವ ತನ್ನ ಪಟ್ಟನ್ನು ಸಡಿಲಿಸು ವಂತೆ ಕಾಣುತ್ತಿಲ್ಲ.
ತೈವಾನ್ ಅಮೆರಿಕಾದ ಮಿತ್ರ ರಾಷ್ಟ್ರ. ಏಷ್ಯಾದಲ್ಲಿ ಅಮೆರಿಕವು ತನ್ನ ಮಿತ್ರರಾಷ್ಟ್ರಗಳನ್ನು ಹುರಿದುಂಬಿಸಲು ಪ್ರಯತ್ನಿಸು ತ್ತಿರುವಾಗ, ಎರಡು ಪ್ರಶ್ನೆಗಳು ಎದುರಾಗುತ್ತವೆ. ಒಂದು, ತೈವಾನ್ ಅನ್ನು ರಕ್ಷಿಸಲು ಅದು ಮತ್ತೊಂದು ಪರಮಾಣು ಶಕ್ತಿಯುತ ದೇಶವಾದ ಚೀನಾದೊಂದಿಗೆ ನೇರ ಯುದ್ಧವನ್ನು ಆಹ್ವಾನಿಸಿ ಅಪಾಯಕ್ಕೆ ಸಿಲುಕಲು ಸಿದ್ಧವಾಗಿದೆಯೇ? ಮತ್ತು ಎರಡನೆಯ ದಾಗಿ, ಏಷ್ಯಾದಲ್ಲಿ ಚೀನಾದೊಂದಿಗೆ ಮಿಲಿಟರಿಯಾಗಿ ಸ್ಪರ್ಧಿಸುವ ಮೂಲಕ, ಅದು ಈವರೆಗೆ ತಡೆಯಲು ಪ್ರಯತ್ನಿಸುತ್ತಿರುವ ಯುದ್ಧವನ್ನು ಪ್ರಚೋದಿಸಬಹುದೇ? ತೈವಾನ್‌ನ ಆಕ್ರಮಣವು ಹೇಗೆ ಪ್ರಾರಂಭವಾಗಬಹುದು ಎಂದು ಯಾರೂ ಖಚಿತವಾಗಿ ಹೇಳಲಾಗುವುದಿಲ್ಲ.
ಸ್ವಯಂ-ಆಡಳಿತ ದ್ವೀಪವಾದ ತೈವಾನ್ ಅನ್ನು ನಿರ್ಬಂಧಿಸಲು, ಅದರ ಆರ್ಥಿಕತೆ ಮತ್ತು ನೈತಿಕತೆಯನ್ನು ಕುಗ್ಗಿಸಲು ಚೀನಾವು ಕೆಲವು ತಂತ್ರಗಳನ್ನು ಉದ್ದೇಶಪೂರ್ವಕವಾಗಿ ಬಳಸಬಹುದು. ಅಲ್ಲದೇ ಚೀನಾವು, ಗುವಾಮ್ ಮತ್ತು ಜಪಾನ್‌ನಲ್ಲಿನ ಅಮೆರಿ ಕನ್ ನೆಲೆಗಳ ಮೇಲೆ ಪೂರ್ವ ಭಾವಿ ಕ್ಷಿಪಣಿ ದಾಳಿಗಳನ್ನು ಪ್ರಾರಂಭಿಸಬಹುದು. ಇದು ಉಭಯ ದೇಶಗಳ ದಾಳಿಗೆ ದಾರಿ ಮಾಡಿ ಕೊಡುತ್ತದೆ. ತೈವಾನ್ ತನ್ನ ಮೇಲಿನ ದಾಳಿಯನ್ನು ಕೆಲವು ದಿನಗಳು ಅಥವಾ ವಾರಗಳವರೆಗೆ ಮಾತ್ರ ವಿರೋಧಿಸ ಬಹುದಾದ್ದ ರಿಂದ, ಯಾವುದೇ ಸಂಘರ್ಷವು ಸೂಪರ್ ಪವರ್ ದೇಶಗಳ ಮುಖಾಮುಖಿಯಾಗಿ ತ್ವರಿತವಾಗಿ ಉಲ್ಬಣಗೊಳ್ಳ ಬಹುದು.
ಒಂದು ವೇಳೆ ತೈವಾನಿನ ಮೇಲೆ ಯುದ್ಧ ಶುರುವಾದಲ್ಲಿ, ಹೈಪರ್ ಸಾನಿಕ್ ಕ್ಷಿಪಣಿಗಳು ಮತ್ತು ಉಪಗ್ರಹ ವಿರೋಧಿ ಶಸ್ತ್ರಾಸ್ತ್ರ ಗಳಂಥ ಹೊಸ ತಲೆಮಾರಿನ ಶಸ್ತ್ರಾಸ್ತ್ರಗಳನ್ನು ಅಮೆರಿಕಾ ಮತ್ತು ಚೀನಾ ದೇಶಗಳು ಬಳಸಿಕೊಳ್ಳಬಹುದು. ಇದು ನಂಬಲ ಸಾಧ್ಯವಾದ ವಿನಾಶವನ್ನು ಉಂಟು ಮಾಡಬಹುದು. ಎರಡೂ ಸೂಪರ್ ಪವರ್ ದೇಶಗಳಿಂದ ಅನಿರೀಕ್ಷಿತ ಪ್ರತೀಕಾರವನ್ನು ಕಾಣಬಹುದು. ಜಾಗತಿಕ ಆರ್ಥಿಕ ಕುಸಿತವು ಉಂಟಾಗಬಹುದು. ಈಗಾಗಲೇ ರಷ್ಯಾ ಮತ್ತು ಉಕ್ರೈನ್ ಯುದ್ಧದಿಂದ ಇಡೀಜಗತ್ತು ಸಾಕಷ್ಟು ಆರ್ಥಿಕ ಹಿಂಜರಿಕೆಯನ್ನು ಕಂಡಿದೆ. ತೈವಾನ್ ಮೇಲಿನ ಯುದ್ಧವು ಅದಕ್ಕಿಂತಲೂ ಹೆಚ್ಚಿನ ತೊಂದರೆಯನ್ನು ಉಂಟು ಮಾಡಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಯಾಕೆಂದರೆ ತೈವಾನ್   ಗಳನ್ನು ಇಡೀ ವಿಶ್ವಕ್ಕೆ ಪೂರೈಸುವ ಅಗ್ರಮಾನ್ಯ ದೇಶವಾಗಿದೆ. ಅಮೆರಿಕಾ,ಚೀನಾ ಮತ್ತು ಜಪಾನ್ – ಮೂರು ಅತೀ ದೊಡ್ಡ ಆರ್ಥಿಕತೆ ಹೊಂದಿರುವಂತ ದೇಶಗಳಾಗಿವೆ. ಜಾಗತಿಕ ವ್ಯವಹಾರಗಳಲ್ಲಿ ಪರಸ್ಪರ ಒಂದನ್ನೊಂದು ಅವಲಂಬಿಸಿಕೊಂಡಿವೆ. ಯುದ್ಧ ಶುರುವಾದಲ್ಲಿ, ಈ ದೇಶಗಳು ಪರಸ್ಪರ ನಿರ್ಬಂಧಗಳನ್ನು ಹೇರ ಬಹುದು. ಇವು ಜಾಗತಿಕ ವ್ಯಾಪಾರವನ್ನು ಕುಂಠಿತಗೊಳಿಸುತ್ತವೆ. ಅಲ್ಲದೆ ಅಮೆರಿಕಾವು ತನ್ನ ಯೂರೋಪ್ ಮಿತ್ರ ರಾಷ್ಟ್ರಗಳ ಮೂಲಕ ಚೀನಾದ ಮೇಲೆ ಹೆಚ್ಚಿನ ನಿರ್ಬಂಧವನ್ನು ಹಾಕಬಹುದು.
ಯುದ್ಧವು ಇನ್ನು ಮುಂದೆ ಕೇವಲ ದೂರದ ಸಾಧ್ಯತೆಯಾಗಿ ಉಳಿದಿಲ್ಲ. ಏಕೆಂದರೆ ತೈವಾನ್ ವಿಷಯವಾಗಿ ಅಮೆರಿಕಾ ಮತ್ತು ಚೀನಾ ಹಲವಾರು ಬಾರಿ ಪರಸ್ಪರ ರಾಜತಾಂತ್ರಿಕವಾಗಿ ಕಿತ್ತಾಡಿಕೊಂಡೇ ಬಂದಿವೆ. ೧೯೭೦ ರಿಂದಲೂ ಅಮೆರಿಕವು ತೈವಾನ್ ಅನ್ನು ಔಪಚಾರಿಕವಾಗಿ ಸ್ವಾತಂತ್ರ್ಯ ದೇಶವಾಗಿ ಘೋಷಿಸಲು ಪ್ರೋತ್ಸಾಹಿಸಿಲ್ಲ ಅಥವಾ ಅದನ್ನು ರಕ್ಷಿಸಲು ಸ್ಪಷ್ಟವಾಗಿ ಭರವಸೆ ನೀಡಿಲ್ಲ. ಚೀನಾಕ್ಕೆ ತೈವಾನನ್ನು ತನ್ನ ದೇಶದ ಆಡಳಿತದ ಸುಪರ್ದಿಗೆ ತರಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿದೆ.
ಚೀನಾವು ಶಾಂತಿಯುತ ಪುನರೇಕೀಕರಣವನ್ನು ಬೆಂಬಲಿಸುವುದಾಗಿ ಹೇಳಿದೆ. ಆದರೆ ಇದು ನೆರವೇರದಿದ್ದಲ್ಲಿ ಮಿಲಿಟರಿ ಕಾರ್ಯಾ ಚರಣೆಯ ಮೂಲಕ ಪುನರೇಕೀಕರಣವನ್ನು ಸಾಧಿಸುವುದಾಗಿ ಪಣತೊಟ್ಟಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪೀಪಲ್ಸ್ ಲಿಬರೇಶನ್ ಆರ್ಮಿಗೆ ೨೦೨೭ ರ ವೇಳೆಗೆ ಆಕ್ರಮಣಕ್ಕೆ ಸಿದ್ಧರಾಗಿರಲು ಹೇಳಿದ್ದಾರೆ ಎಂದು ಸಿಐಎ ಹೇಳಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು, ಚೀನಾವು ತೈವಾನಿನ ಮೇಲೆ ದಾಳಿ ಮಾಡಿದರೆ ತೈವಾನ್ ಅನ್ನು ಅಮೆರಿಕ ರಕ್ಷಿಸುತ್ತದೆ ಎಂದು ಹೇಳಿದ್ದಾರೆ.
೧೯೯೦ ರಲ್ಲಿ ಅಮೆರಿಕಾದ ಮಿಲಿಟರಿ ಸಾಮರ್ಥ್ಯವು ಚೀನಾಕ್ಕಿಂತ ಬಲಿಷ್ಠವಾಗಿದ್ದವು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಚೀನಾವು ಬಲಿಷ್ಠವಾಗಿದೆ. ಚೀನಾವು ಹೇಗೆ ಹಾಂಗ್ ಕಾಂಗ್ ಸ್ವಾತಂತ್ರವನ್ನು ಕಿತ್ತುಕೊಂಡಿತ್ತೋ ಹಾಗೆಯೆ ತೈವಾನನ್ನು ಕಬಳಿಸಬಹುದು ಎಂದು ತೈವಾನಿನ ಜನರು ಹೆದರಿದ್ದಾರೆ. ತೈವಾನಿನ ಜನಸಂಖ್ಯೆಯ ಕೇವಲ ೭% ಜನರು ಮಾತ್ರ ಚೀನಾದೊಂದಿಗಿನ ಪುನರೇಕೀಕರಣ ವನ್ನು ಬೆಂಬಲಿಸುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಗಳು ಹೇಳುತ್ತವೆ.
ಅಮೆರಿಕಾ ಮತ್ತು ಚೀನಾ ದೇಶಗಳು ತಮ್ಮ ತಮ್ಮ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳುತ್ತಿವೆ. ತೈವಾನಿನ ವಿಷಯವಾಗಿ ಯಾವುದೇ ಅಸ್ಥಿರತೆ ಕಂಡು ಬಂದಲ್ಲಿ, ಅದನ್ನು ಸಂಪೂರ್ಣವಾಗಿ ಹೊಸಕಿ ಹಾಕಲು ಸಂಕಲ್ಪವನ್ನು ಮಾಡಿದ್ದಾರೆ. ಇಂದು ತೈವಾನಿನ ವಿಷಯವಾಗಿ ಅಮೆರಿಕಾ, ಚೀನಾ ಮಾತಾಡಿದಲ್ಲಿ ಅದು ಇಡೀ ಜಗತ್ತಿನಾದ್ಯಂತ ಸುದ್ದಿ ಮಾಡುತ್ತದೆ. ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಆಗಿದ್ದ ನ್ಯಾನ್ಸಿ ಪೆಲೋಸಿಕಳೆದ ವರ್ಷ ತೈಪೆಗೆ ಭೇಟಿ ನೀಡಿದ್ದರು. ಇದನ್ನುಚೀನಾವು ತೀವ್ರವಾಗಿ ವಿರೋಧಿಸಿತ್ತು.
ಇದೂ ಅಲ್ಲದೆ, ಚೀನಾವು ದೂರದ ತೈವಾನೀಸ್ ದ್ವೀಪಗಳಿಗೆ ಸಮುದ್ರದೊಳಗೆ ಹಾಕಿದ ಇಂಟರ್‌ನೆಟ್ ಕೇಬಲ್ ಗಳನ್ನು ನಿಗೂಢ ವಾಗಿ ತುಂಡರಿಸಿದೆ. ಆದರೆ ಹೆಚ್ಚಿನ ಮಾಧ್ಯಮಗಳಲ್ಲಿ ಇದು ವರದಿಯಾಗಿಲ್ಲ. ಎರಡೂ ದೇಶಗಳ ರಾಜತಾಂತ್ರಿಕ ಮಾತುಕತೆಗಳು ಸ್ಥಗಿತಗೊಂಡಿವೆ. ಅಮೆರಿಕ ಮತ್ತು ಚೀನಾದ ರಕ್ಷಣಾ ಅಧಿಕಾರಿಗಳು ನವೆಂಬರ್‌ನಿಂದ ಮಾತನಾಡಿಲ್ಲ. ಇತ್ತೀಚಿಗೆ ಅಮೆರಿಕಾದಲ್ಲಿ ಪತ್ತೆಯಾದ ಪತ್ತೇದಾರಿ- ಬಲೂನ್ ಘಟನೆಯ ಸಂದರ್ಭದಲ್ಲಿ, ಚೀನಾವು ಅಮೆರಿಕಾ ಮಾಡಿದ ಫೋನ್ ಕರೆಯನ್ನು ಸ್ವೀಕರಿಸಲೇ ಇಲ್ಲ.
ಫೋನ್ ಲೈನ್ ತಾಂತ್ರಿಕ ಕಾರಣ ಗಳಿಂದ ಕೆಲಸ ಮಾಡುತ್ತಿಲ್ಲ ಎಂದು ಚೀನಾ ಹೇಳಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಎರಡೂದೇಶಗಳ ಸಂಬಂಧಗಳು ಮತ್ತಷ್ಟು ಹಳಸಿದೆ. ತೈವಾನ್ ಅನ್ನು ರಕ್ಷಿಸಲು ಅಮೆರಿಕ ಎಷ್ಟು ದೂರ ಹೋಗುತ್ತದೆ ಮತ್ತು ಯಾವ ತರಹದ ತೊಂದರೆಗಳನ್ನು ಎದುರು ಹಾಕಿಕೊಳ್ಳುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಚೀನಾವು ಈಗಿರುವ ಗಡಿಯಾಚೆಗೂ ಕೆಲವು ಆಕ್ರಮಿತ ಪ್ರದೇಶಗಳನ್ನು ಹೊಂದಿದೆ.
ಆದರೆ ಏಷ್ಯಾದ್ಯಂತ ಆಕ್ರಮಣ ಮಾಡಲು ಅಥವಾ ನೇರವಾಗಿ ಆಳಲು ಬಯಸಿದರೂ ಅದು ಸಾಧ್ಯವಾಗುವಂಥದ್ದಲ್ಲ. ಆದರೆಪ್ರತಿಶತ ೯೩% ನಷ್ಟು ತೈವಾನಿನ ಜನರು ಚೀನಾ ತಮ್ಮ ದೇಶದ ಮೇಲೆ ಆಕ್ರಮಣ ಮಾಡಬಹುದು ಎಂದು ಅಂದಾಜಿಸಿದ್ದಾರೆ. ಇದು ನಿಜಕ್ಕೂ ಗಾಬರಿ ಹುಟ್ಟಿಸುವಂಥವುದು. ಒಂದು ವೇಳೆ ಚೀನಾ ಆಕ್ರಮಣ ಮಾಡಿದಲ್ಲಿ, ತೈವಾನಿಗೆ ಅದನ್ನು ಎದುರಿಸುವ ತಾಕತ್ತು ಇದೆಯೇ? ಕಾಲವೇ ಉತ್ತರವನ್ನು ಕೊಡಬೇಕಿದೆ.
ಚೀನಾವು ದಾಳಿ ಆರಂಭಿಸಿದ್ದೇ ಆದಲ್ಲಿ, ತೈವಾನಿಗೆ ಉಕ್ರೇನಿಯನ್ನರಂತೆ ಅಮೆರಿಕದ ಸಹಾಯವು ಬೇಕಾಗುತ್ತದೆ. ಪ್ರಸ್ತುತ ತೈವಾನಿನ ಆಡಳಿತವು ಪ್ರಜಾಪ್ರಭುತ್ವದಿಂದ ಕೂಡಿದೆ. ಆದರೆ ಪ್ರಜಾ ಪ್ರಭುತ್ವ ಆಡಳಿತವು ಚೀನೀಯರ ಕಮ್ಯುನಿಸ್ಟ್ ಆಡಳಿತಕ್ಕೆ ಸಂಪೂರ್ಣ ವಿರೋಧಿಯಾಗಿದೆ. ಪ್ರಜಾ ಪ್ರಭುತ್ವ ಹೊಂದಿದ ದೇಶದ ಜನರು ಸರ್ವಾಧಿಕಾರಕ್ಕೆ ಶರಣಾಗಬೇಕಾದರೆ ಅದು ಒಂದು ದುರಂತವೇ ಸರಿ. ಒಂದು ವೇಳೆ ಅಮೆರಿಕವು ಈ ತಿಕ್ಕಾಟದಲ್ಲಿ ಹೊರನಡೆದರೆ, ಏಷ್ಯಾದಲ್ಲಿ ಅದರ ಭದ್ರತಾ ಶಕ್ತಿಯ ಮೇಲಿರುವ ವಿಶ್ವಾಸಾರ್ಹತೆಗೆ ಗಂಭೀರ ಪೆಟ್ಟನ್ನು ಕೊಡಬಹುದು.
ಕೆಲವು ಏಷ್ಯಾದ ದೇಶಗಳು ಚೀನಾಕ್ಕೆ ಹೆಚ್ಚು ಅವಕಾಶ ಕಲ್ಪಿಸಬಹುದು; ದಕ್ಷಿಣ ಕೊರಿಯಾ ಮತ್ತು ಜಪಾನ್ ಪರಮಾಣುಶಸ್ತ್ರಾಸ್ತ್ರಗಳನ್ನು ಹುಡುಕಬಹುದು. ಚೀನಾವು ಇದರಿಂದ ಮತ್ತಷ್ಟು ಬಲಿಷ್ಠವಾಗಬಹುದು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಗಳಿಗಿಂತ ಮೊದಲು ರಾಜ್ಯಗಳ ಹಿತಾಸಕ್ತಿಗಳು ಬರುತ್ತವೆ ಎಂಬ ಚೀನಾದ ವಿಶ್ವದೃಷ್ಟಿಕೋನವನ್ನು ಇದು ಹೆಚ್ಚಿಸಬಹುದು.ಆದರೆ ತೈವಾನ್ ಪಡೆಯುವ ಸಹಾಯವು ಚೀನಾದ ದಾಳಿಯನ್ನು ಪ್ರಚೋದಿಸದೆ, ಅದನ್ನು ತಡೆಯುವ ಗುರಿಯನ್ನು ಹೊಂದಿರ ಬೇಕು.
ಅಮೆರಿಕವು ಚೀನಾದ ನಡೆಯನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಬೇಕು. ಅಮೆರಿಕದ ಭದ್ರತಾ ಖಾತರಿಯು ಔಪಚಾರಿಕ ಸ್ವಾತಂತ್ರ್ಯವನ್ನು ಘೋಷಿಸಲು ತೈವಾನ್‌ಗೆ ಧೈರ್ಯ ತುಂಬಬಹುದು. ತೈವಾನ್‌ನಲ್ಲಿ ಹೆಚ್ಚು ದೊಡ್ಡದಾದ ಅಮೆರಿಕನ್ಮಿಲಿಟರಿ ಉಪಸ್ಥಿತಿಯ ಭರವಸೆಯು, ಚೀನಾ ಬರುವ ಮೊದಲು ಆಕ್ರಮಣ ಮಾಡಲು ಕಾರಣ ವಾಗಬಹುದು. ಅದಾಗ್ಯೂ, ಕ್ಷಿಪ್ರ ಆಕ್ರಮಣವು ಚೀನಾಕ್ಕೆ ತುಂಬಾ ನಷ್ಟವನ್ನು ಉಂಟು ಮಾಡಬಹುದು. ಅಂತಹ ದಾಳಿ ಮಾಡಿ ಚೀನಾವು ಅಮೆರಿಕಾವನ್ನು ಎದುರು ಹಾಕಿಕೊಳ್ಳಲು ತಯಾರಾಗುತ್ತದಾ? ಅಮೆರಿಕಾವು ಈ ವಿಷಯದಲ್ಲಿ ಆದಷ್ಟು ರಾಜತಾಂತ್ರಿಕ ನಡೆಯನ್ನು ಬಳಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಆಕ್ರಮಣಶೀಲತೆಗೆ ತೈವಾನ್ ಆದಷ್ಟು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವಂತೆ ಕಾಣುತ್ತದೆ. ತೈವಾನ್ ಪ್ರಚೋದನೆಯನ್ನು ತಪ್ಪಿಸಿದೆ. ಅದರ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರು ಸ್ವಾತಂತ್ರ್ಯವನ್ನು ಘೋಷಿಸಲಿಲ್ಲ. ಆದರೆ ಅದು ತನ್ನನೆರೆಹೊರೆಯವರನ್ನು ತಡೆಯಲು ಹೆಚ್ಚಿನದನ್ನು ಮಾಡಬೇಕಾಗಿದೆ. ರಕ್ಷಣಾ ವೆಚ್ಚವನ್ನು ಹೆಚ್ಚಿಸುವ ಮೂಲಕ ಅದು ಅಮೆರಿಕದ ಸಹಾಯವಿಲ್ಲದೆ ಹೆಚ್ಚು ಕಾಲ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು ಎಂದು ತೋರಿಸಿಕೊಡಬೇಕಾಗಿದೆ.
ತೈವಾನಿನ ಜನರನ್ನು ಚೀನಾ ಕೊಡುವ ತಪ್ಪು ಮಾಹಿತಿಗಳಿಂದ ರಕ್ಷಿಸಬೇಕಾಗಿದೆ. ಅದರ ಭಾಗವಾಗಿ, ಚೀನಾಕ್ಕೆ ಧೈರ್ಯತುಂಬಲು ಮತ್ತು ಅದನ್ನು ತಡೆಯಲು ಅಮೆರಿಕವು ಹೆಚ್ಚು ಪ್ರಯತ್ನಿಸಬೇಕು. ತನ್ನನ್ನು ತಾನು ರಕ್ಷಿಸಿಕೊಳ್ಳುವ ತೈವಾನ್‌ನಸಾಮರ್ಥ್ಯವನ್ನು ಬಲಪಡಿಸದೆ, ಚೀನಾವನ್ನು ಪ್ರಚೋದಿಸುವ ಸಾಂಕೇತಿಕ ಕೃತ್ಯಗಳನ್ನು ಅದು ತಪ್ಪಿಸಬೇಕು. ಅದು ತನ್ನ ಸಶಸಪಡೆಗಳನ್ನು ಆಧುನೀಕರಿಸುತ್ತಲೇ ಇರಬೇಕು ಮತ್ತು ತನ್ನ ಮಿತ್ರರಾಷ್ಟ್ರಗಳನ್ನು ಒಟ್ಟುಗೂಡಿಸಬೇಕು.
ಭವಿಷ್ಯದ ಚೀನಾದ ದಿಗ್ಬಂಧನವನ್ನು ಮುರಿಯಲು, ಇಂಧನವನ್ನು ಸಂಗ್ರಹಿಸುವ ಮೂಲಕ, ಏರ್‌ಲಿಫ್ಟ್ ಅನ್ನು ಯೋಜಿಸುವಮೂಲಕ, ಬ್ಯಾಕ್‌ಅಪ್ ಇಂಟರ್‌ನೆಟ್ ಲಿಂಕ್ ಗಳನ್ನು ಒದಗಿಸುವ ಮೂಲಕ ಮತ್ತು ಇತರ ನಿರ್ಬಂಧಗಳ ಕುರಿತು ಮಿತ್ರ ರಾಷ್ಟ್ರ ಗಳ ಒಮ್ಮತವನ್ನು ಸಂಗ್ರಹಿಸಿ ಎಲ್ಲದಕ್ಕೂ ಸಿದ್ಧವಾಗಬೇಕು. ಅಮೆರಿಕ ಮತ್ತು ಇಂದಿನ ಚೀನೀ ಆಡಳಿತವು ತೈವಾನ್ ಬಗ್ಗೆ ಎಂದಿಗೂ ಒಂದೇ ರೀತಿಯ ನಿಲವುಗಳನ್ನು ಒಪ್ಪುವುದಿಲ್ಲ.
ಆದರೆ ಅವರು ಮೂರನೇ ಮಹಾಯುದ್ಧವನ್ನು ತಪ್ಪಿಸಲು ಸಾಮಾನ್ಯ ಆಸಕ್ತಿಯನ್ನು ಹೊಂದಿದ್ದಾರೆ. ಅಮೆರಿಕ- ಸೋವಿಯತ್ ರಷ್ಯಾದ ಶೀತಲ ಸಮರದ ಮೊದಲ ೧೫ ವರ್ಷಗಳು ಎಷ್ಟೊಂದು ದುರಂತಗಳನ್ನು ಕಂಡಿತ್ತು ಎನ್ನುವುದು ಇಡೀ ಜಗತ್ತಿಗೇ ತಿಳಿದಿದೆ. ರಷ್ಯಾ, ಉಕ್ರೈನ್ ಯುದ್ಧವು ಇಡೀ ಜಗತ್ತಿಗೆ ಹಾನಿ ಯನ್ನು ಉಂಟು ಮಾಡಿದೆ. ದುರದೃಷ್ಟವಶಾತ್, ತೈವಾನ್ ವಿಷಯ ತೈವಾನ್ವಾ‌ಗಿ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಎರಡು ದೇಶಗಳ ನಡುವೆ ವಿಶ್ವಾಸಾರ್ಹತೆ ಕುಗ್ಗಿದೆ.
ಹೇಗಾದರೂ ಮಾಡಿ, ಎರಡು ಪ್ರತಿಸ್ಪರ್ಧಿ ದೇಶಗಳು ಕಡಿಮೆ ಅಪಾಯಕಾರಿಯಾಗಿ, ಯುದ್ಧವನ್ನು ತಪ್ಪಿಸಿ, ಒಟ್ಟಿಗೆ ಬದುಕಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು. ಅದು ಏಷ್ಯಾಕ್ಕೂ, ಜಗತ್ತಿಗೂ ಒಳ್ಳೆಯದು.