ಚುನಾವಣೆ ದೇಶದ ಜನಪ್ರಿಯ ಮನರಂಜನೆ
ವಿಶ್ಲೇಷಣೆ
ಪ್ರೊ.ಅರ್‌.ಜಿ.ಹೆಗಡೆ
ನಮ್ಮ ದೇಶದಲ್ಲಿ ಇಂದು ಧರ್ಮ ಜಾತಿಗಳು ಉಳಿದಿರುವುದು ರಾಜಕೀಯವಾಗಿ ಮಾತ್ರ ಎಂದೇ ಅನಿಸುತ್ತದೆ. ಉಳಿದಂತೆ ಜಾತಿ ಧರ್ಮಗಳು ಪರದೆಯ ಹಿಂದೆ ಹೋಗಿವೆ. ಹೆಚ್ಚು ಕಡಿಮೆ ಎಲ್ಲರೂ, ಎಲ್ಲರ ಮನೆಗಳಲ್ಲಿಯೂ, ಎಲ್ಲವನ್ನೂ ಊಟ ಮಾಡುವವರೇ! ಎಲ್ಲರೂ ಎಲ್ಲವನ್ನೂ ಕುಡಿಯುವವರೇ!
ಚುನಾವಣೆ ರಾಜಕೀಯ ದೇಶದ ಜನಪ್ರಿಯ ಮನರಂಜನೆ. ಮೊದಲು ಸಿನಿಮಾಕ್ಕೆ ಅಂತಹ ಸೆಳೆತ ಇತ್ತು. ಯಾಕೋ ಈಗ ಸಿನಿಮಾಗಳು ಜನಪ್ರಿಯತೆ ಕಳೆದುಕೊಂಡು ಕುಳಿತ ಹಾಗೆ ಕಾಣಿಸುತ್ತವೆ. ಆದರೆ ರಾಜಕೀಯ ಮತ್ತು ಕ್ರಿಕೆಟ್ ಎರಡರ ಹಸಿವು ತಗ್ಗುವ ಹಾಗೆ ಕಾಣಿಸುತ್ತಿಲ್ಲ. ಪ್ರತಿ ದಿನ ಕ್ರಿಕೆಟ್ ಇದ್ದರೂ ಕೂಡ ಜನ ಟೀವಿಯ ಮುಂದೆಯೇ. ಅದೇ ರೀತಿ ರಾಜಕೀಯ ಹಾಗೂ ಚುನಾವಣೆಗಳು. ಗ್ರಾಮ ಪಂಚಾಯತ್ ಚುನಾವಣೆ ಇರಲಿ, ಲೋಕ ಸಭಾ ಚುನಾವಣೆ ಇರಲಿ. ಅದೇ ತೀರದ ದಾಹ.
ಎಲ್ಲ ಜಾತಿ, ಧರ್ಮ, ವರ್ಗ, ಪಂಥದವರು ಸೇರಿ, ಬಡವ ಬಲ್ಲಿದರೆನ್ನುವ ಭೇದವಿಲ್ಲದೆ ಜೊತೆಯಾಗಿ ಆಚರಿಸು ಜಾತ್ರೆ ಚುನಾವಣೆ. ಕಡು ಬಡವನಿಂದ ಹಿಡಿದು ಕೋಟ್ಯಽಪತಿಗಳವರೆಗಿನ ವಿವಿಧ ವರ್ಗದ ಜನರಿಗೂ ಅವರದೇ ಆದ ಹಂತಗಳಲ್ಲಿ ಮತ್ತು ವೈವಿಧ್ಯತೆಗಳಲ್ಲಿ ಆನಂದಿಸಲು ಚುನಾವಣೆ ಅನುವು ಮಾಡಿಕೊಡುತ್ತದೆ. ಬಣ್ಣದ ಓಕುಳಿಗಳನ್ನು, ಚುನಾವಣಾ ಪ್ರಚಾರದ ವಿವಿಧ ರೀತಿಯ ವಾದ್ಯಗಳ ಸದ್ದನ್ನು, ದೊಂಬರಾಟಗಳನ್ನು ನೋಡಿಯೇಅನುಭವಿಸಬೇಕು. ಉತ್ಸವ ಅದು.
ನಮ್ಮ ಜನ ರಾಜಕಾರಣಿಗಳನ್ನು ಎಷ್ಟು ಬೇಕಾದರೂ ಹೊರಗಿನಿಂದ ಬಯ್ಯಲಿ! ಒಳೊಳಗೆ ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ಒಂದು ರೀತಿಯ ವಿಚಿತ್ರ ಪ್ರೀತಿ ಇದ್ದೇ ಇದೆ ಎಂದೇ ಭಾವನೆ. ಅವರ ಬಗ್ಗೆ, ಅವರ ಒಳ ವ್ಯವಹಾರಗಳ ಬಗ್ಗೆ, ಪ್ರೇಮ ಪ್ರಕರಣಗಳ ಬಗ್ಗೆ, ಹಣದ ಬಗ್ಗೆ ಮಾತನಾಡುವುದೆಂದರೆ ಜನರಿಗೆ ವಿಚಿತ್ರ ಖುಷಿ. ಇಂತಹ ಪರಂಪರೆಗೂ ಒಂದು ಇತಿಹಾಸ ವಿದ್ದಂತೆ ತೋರುತ್ತದೆ. ನೆಹರೂ ಕುರಿತು ದೇಶಾದ್ಯಂತ ಹರಡಿಕೊಂಡಿದ್ದ ಗಾಸಿಪ್‌ಗಳನ್ನು ನೆನಪಿಸಿಕೊಳ್ಳಬೇಕು. ಅವು ಅತಿರಂಜಿತ ಕಥೆಗಳು.
ನೆಹರೂ ಬಟ್ಟೆಗಳಿಗೆ ಎಲ್ಲಿ ಇಸಿ ಹಾಕಿಸುತ್ತಿದ್ದರು? ಯಾವ ಸಿಗರೇಟ್ ಸೇದುತ್ತಿದ್ದರು? ಎಷ್ಟು ಜನ ಹಾಗೂ ಯಾವ ಯಾವ ಸುಂದರಿಯರೊಂದಿಗೆಸರಸವಿತ್ತು? ಇತ್ಯಾದಿ ಕಟ್ಟುಕಥೆಗಳು. ದೇಶದ ಆಧುನಿಕ ಇತಿಹಾಸದ ಮೊದಲರ್ಧದ ಭಾಗದ ಮನರಂಜನೆಯ ವಿಷಯಗಳಾಗಿದ್ದವು. ಇಂಥ ಕಥೆಗಳು ವಾಟ್ಸಾಪ್‌ಗಳಲ್ಲಿ ಇಂದಿಗೂ ಹರಿದಾಡುತ್ತಿರುತ್ತವೆ. ಬಹುಶಃ ನೆಹರೂ ಅವರನ್ನು ದಂತ ಕಥೆಯಾಗಿ, ಜೀವನಕ್ಕಿಂತ ದೊಡ್ಡ ಗಾತ್ರದಲ್ಲಿ ಬಿಂಬಿಸಿದವು ಗಳು,  ಐವತ್ತು, ಅರವತ್ತರ ದಶಕದಲ್ಲಿ ರಾಜ್‌ಕಪೂರ್ ಸಿನಿಮಾಗಳಿಗಿಂತ ಹೆಚ್ಚು ಮನರಂಜನೆಯನ್ನು ಒದಗಿಸಿದ್ದವು.
ಇಂಥ ಕಥೆಗಳು. ಕಲ್ಪನಾ ವಿಲಾಸಗಳು. ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳೂ ತುಂಬ ಮನರಂಜನೆಯನ್ನು ವರ್ಣರಂಜಿತ ಕಥೆಗಳನ್ನು ಸಮಾಜಕ್ಕೆ ಒದಗಿಸಿದ್ದರು. ಗಾಳಿ ತುಂಬಿ ಉಬ್ಬಿಸಿದ ಕಥೆಗಳು. ಈ ಮುಖ್ಯಮಂತ್ರಿಗಳ ಕುರಿತಾಗಿ ಎಂತಹ ಕಥೆಗಳಿದ್ದವೆಂದರೆ ಪ್ರತಿ ಊರಿನಲ್ಲಿಯ ಈಗ ತುಸು ಮುಪ್ಪಾದ ಎಲ್ಲ ಸುಂದರ ಮಹಿಳೆಯರ ಜತೆಗೂ ಅವರ ಗೆಳೆತನವಿತ್ತು ಎಂದು ಜನ ಮಾತಾಡಿ ಸುಖ ಪಡುತಿದ್ದುದನ್ನು ಕೇಳಿದ್ದೇನೆ. ಕೆಲವು ಸುಂದರಿಯರು ಇಬ್ಬರಿಗೂ ಗೆಳತಿಯರಾಗಿದ್ದರು ಎನ್ನುವ ವಿಪರೀತದ ಕಥೆಗಳೂ ಚಾಲ್ತಿಯಲ್ಲಿದ್ದವು. ಅವರ ಮೊಮ್ಮಗಳ ವಯಸ್ಸಿನ ಹುಡುಗಿಯರ ಜತೆಯೂ ಅವರ ಬಾಂಧವ್ಯ ಕಲ್ಪಿಸಿ ಜನ ಮಾತನಾಡುವುದು ಕೇಳಿದ್ದೇನೆ.
ಹೋಟೆಲ್‌ಗಳಲ್ಲಿ, ಬಾರ್‌ಗಳಲ್ಲಿ, ಕ್ಷೌರದ ಅಂಗಡಿಗಳಲ್ಲಿ ಎಂಥ ಕಥೆಗಳನ್ನು ಹೇಳುತ್ತಿದ್ದರೆಂದರೆ ಕೇಳುವವರು ಬಾಯಿ ಚಪ್ಪರಿಸಿ ಕೇಳುತ್ತಿದ್ದರು.ಮೇಲಿಂದ ರಾಜಕಾರಣಿಗಳ ನಡವಳಿಕೆಗಳನ್ನು ಬಯ್ಯುವಂತೆ, ಖಂಡಿಸುವಂತೆ ಕಂಡರೂ ಒಳಗಿನಿಂದ ಅದನ್ನು ಆನಂದಿಸುವುದು, ಅಸೂಯೆಪಡುವುದು, ಆ ಮೋಹಿನಿಯರು ತಮ್ಮ ಜೀವನದೊಳಗೆ ನುಗ್ಗಿ ಬಂದಿದ್ದರೆ ಹೇಗಿರುತಿತ್ತು ಎಂಬ ಕಾಲ್ಪನಿಕ ಹಿಗ್ಗು ಅವರ ಬಾಡಿ ಲ್ಯಾಂಗ್‌ವೇಜ್ ನಲ್ಲಿ ಎದ್ದು ಕಾಣುತ್ತಿತ್ತು. ಈಗಲೂ ಎರಡು ಮೂರು ಪೆಗ್ಗುಗಳ ನಂತರ ಇಂತಹ ಸುದ್ದಿಗಳೇ ಹೊಳೆಯಾಗಿ ಹರಿಯುತ್ತವೆ.
ಕೆಲವೊಮ್ಮೆ ಸಪ್ಲಾಯರಗಳು, ಮಾಲಿಕರು ಕೂಡ ಇಂಥ ಸಂಭಾಷಣೆಗಳಲ್ಲಿ ಭಾಗಿಯಾಗಿ ಕಲ್ಪನೆಗಳನ್ನು ವಿಸ್ತರಿಸುತ್ತಾರೆ. ಕೆಲವೊಮ್ಮೆ ಬಾರ್ ಮಾಲಿಕ ರಿಗೆ ವಿಪರೀತ ಖುಷಿಯಾಗಿ ಹೋಗಿ ಬಿಲ್ ಕಡಿಮೆ ಮಾಡಿಬಿಡುವುದೂ ಇದೆ. ರಾಜಕಾರಣಿಗಳು ನಮ್ಮ ದೇಶದಲ್ಲಿ ಜನಪ್ರಿಯರಾಗುವುದು  ಹುಶಃ ಬಣ್ಣ ಬಣ್ಣದ ಸುದ್ದಿಗಳಿಂದ ಎಂದೇ ಅನಿಸುತ್ತದೆ. ಕೇವಲ ಅಭಿವೃದ್ಧಿಯ ಮೇಲೆ ಗಮನ ಹರಿಸಿದ ರಾಜಕಾರಣಿಗಳು ಮಾಸ್ ಲೀಡರ್ ಆಗದೇ ಇರಲು ಇದೇ ಕಾರಣವಿದ್ದರೂ ಇರಬಹುದು.
ಸರಳ ವ್ಯಕ್ತಿತ್ವದ, ಕಥೆಗಳಿಗೆ ಆಸ್ಪದ ಕೊಡದ ರಾಜಕಾರಣಿಗಳನ್ನು ನಮ್ಮ ಜನ ಸೀರಿಯಸ್ ಆಗಿ ತೆಗೆದುಕೊಳ್ಳುವ ಹಾಗೆ ಕಾಣುವುದೇ ಇಲ್ಲ. ರಾಜಕಾರಣಿ ಗಳ ಒಳಕಥೆಗಳು ಸಾಮಾಜಿಕ ಜೀವನಕ್ಕೆ ಒಂದು ರೀತಿಯಲ್ಲಿ ಪುಳಕ (ಅರಿಸ್ಟಾಟಲ್ ಹೇಳುವ ಕೆಥಾರ್ಸಿಸ್) ಒದಗಿಸುವಂತೆ ಕಾಣಿಸುತ್ತದೆ. ಈ ಗ್ಲಾಮರ್ ಅವರ ರಾಜಕೀಯ ಯಶ್ಸಸಿನ, ಜನಮಾನಸದಲ್ಲಿ ಅವರ ಅಚ್ಚಳಿಯದ ನೆನಪಿನ ಭಾಗವೆಂದೇ ನನಗೆ ತೋರುತ್ತದೆ. ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ, ರಾಜಕಾರಣಿಗಳಿಗೆ ಸಂಬಂಧಿಸಿದ ಹಲವು ಪ್ರೇಮಕಥೆಗಳು ಅಭಿವೃದ್ಧಿ ಕಥೆ ಗಳಿಗಿಂತಲೂ ಹೆಚ್ಚು ಜೋರಾಗಿಚರ್ಚೆಯಾಗಿದ್ದನ್ನೂ ನಾನು ಕೇಳಿದ್ದೇನೆ.
ರಸಗವಳದ, ಗಮ್ಮತ್ತಿನ ಸುದ್ದಿಗಳು. ರಾಜಕೀಯ ಒಂದು ರೀತಿಯಲ್ಲಿ ನಿಜವಾದ ಸಿನಿಮಾ ಅಥವಾ ಕ್ರಿಕೆಟ್. ಅದರ ನಾಯಕ ನಾಯಕಿಯರು ವಾಸ್ತವ ಜೀವನದ ಹೀರೊ-ಹೀರೊಯಿನ್ ಗಳು. ರಾಸಲೀಲೆಯ ವಿಡಿಯೋಗಳು ಸಾರ್ವಜನಿಕವಾಗಿ ಹೋದ ಕೆಲವು ರಾಜಕಾರಣಿಗಳು ಇನ್ನೂ ಜನಪ್ರಿಯ ರಾಗಿಯೇ ಉಳಿದಿರುವುದನ್ನು ಗಮನಿಸಬೇಕು. ನಿಜಕ್ಕೂ ಜನ ಸಾರ್ವಜನಿಕ ವ್ಯಕ್ತಿಯ ವೈಯಕ್ತಿಕತೆ ಕುರಿತು ತಲೆ ಕೆಡಿಸಿಕೊಳ್ಳುವಂತೆ ಅನಿಸುವುದಿಲ್ಲ ಅಥವಾ ಮನರಂಜನೆ ನೀಡುವುದು ಕೂಡ ಸಾರ್ವಜನಿಕ ವ್ಯಕ್ತಿಗಳ ಜವಾಬ್ದಾರಿಯೇ.
ರಾಜಕೀಯ ಚರ್ಚೆ, ಚುನಾವಣಾ ಚರ್ಚೆ ನಮ್ಮ ದೇಶದಲ್ಲಿ ಮನೆ ಮನೆಗಳಲ್ಲಿ ನಿರಂತರ ಚರ್ಚೆಯ ಸಿದ್ಧ ವಸ್ತು. ಚುನಾವಣೆ ಹತ್ತಿರ ಬಂದಿರಬೇಕೆಂದೇನೂ ಇಲ್ಲ. ಯಾರು ಯಾರು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಬಹುದೆಂಬುದು ಈ ಚುನಾವಣೆಯ ಮುಕ್ತಾಯದಲ್ಲಿಯೆ ಆರಂಭ ವಾಗುತ್ತದೆ. ಈ ರೀತಿಯ ಊಹಾಪೋಹಗಳ ಹಿಂದೆ ಅದ್ಭುತ ಕಲ್ಪನಾ ವಿಲಾಸವಿರುತ್ತದೆ. ಪೇಪರ್‌ನಲ್ಲಿ ಯಾರದಾದರೂ ಫೋಟೋಗಳು ನಾಲ್ಕಾರುಕಾರ್ಯಕ್ರಮಗಳಲ್ಲಿ, ಕವಿ-ಗೋಷ್ಠಿಯನ್ನು ಹೊರತುಪಡಿಸಿ (ಅವರು ಪಾಪ ಬಿಡಿ), ಸೆಮಿನಾರ್ ಗಳು ಇರಬಹುದು, ವೇದಿಕೆಗಳ ಕಾರ್ಯಕ್ರಮಗಳುಇರಬಹುದು, ರೋಟರಿ, ಲಯನ್ಸ ಕ್ಲಬ್‌ನಂಥ ಸಾಮಾಜಿಕ ಕಾರ್ಯಕ್ರಮಗಳು ಕೂಡ ಇರಬಹುದು.
ಪದೇ ಪದೆ ಒಂದು ವ್ಯಕ್ತಿಯ ಫೋಟೊ ಪ್ರಕಟವಾದರೆ ಜನಮಾನಸದಲ್ಲಿ ಅವರ ಕುರಿತು ರಾಜಕೀಯ ಅನುಮಾನ ಆರಂಭವಾಗುತ್ತದೆ. ಅವರು ಮುಂದೆ ರಾಜಕೀಯ ಸೇರಬಹುದಾ? ಅವರಿಗೆ ಜಾತಿ ಬಲ ಇದೆಯಾ? ಹಣ ಬಲ ಇದೆಯಾ? ಇತ್ಯಾದಿ ಚರ್ಚೆಗಳು ಆರಂಭವಾಗುತ್ತವೆ. ಹಾಗೆಯೇ ಅವರ ವ್ಯಕ್ತಿತ್ವದ ಒಳಮಜಲುಗಳ ಚರ್ಚೆ ಕೂಡ ನಿರಂತರ ವ್ಯವಹಾರವಾಗುತ್ತದೆ. ರಾಜಕೀಯಕ್ಕೆ ಆತ ಅಥವಾ ಆಕೆ ಹೊಂದಾಣಿಕೆಯಾಗಬಹುದಾ? ಇತ್ಯಾದಿ ವಿಷಯಗಳು ಮಾತು ಕಥೆಗಳ ಭಾಗವಾಗುತ್ತವೆ. ಮನೆ ಮನೆಗಳ ಧಾರ್ಮಿಕ, ಕಾರ್ಯಕ್ರಮಗಳಲ್ಲಿ ಜನ ಸೇರಿದಾಗ ಹೆಚ್ಚಾಗಿ ಗಂಡಸರ ಚರ್ಚೆಯ ವಿಷಯ ಇದೇ.
ಹೀಗೆ ಆರಂಭವಾದ ಚರ್ಚೆ ಚುನಾವಣೆಗಳು ಹತ್ತಿರ ಹತ್ತಿರ ಬಂದಂತೆ ಈಗ ಯಾರಿಗೆ ಸೀಟ್ ಸಿಗಬಹುದು? ಯಾರು ಯಾವ ಪಕ್ಷಕ್ಕೆ ಹಾರಬಹುದು ಇತ್ಯಾದಿಚರ್ಚೆಗಳೊಂದಿಗೆ ಸಂಗಮವಾಗಿ ಮುಂದೆ ಚುನಾವಣೆಗಳ ಮಹಾಸಾಗರವನ್ನು ಸೇರಿಕೊಳ್ಳುತ್ತದೆ. ಇನ್ನೂ ಹಲವು ಕೂತೂಹಲಕಾರಿ ವಿಷಯಗಳಿವೆ.ನಮ್ಮ ದೇಶದಲ್ಲಿ ಇಂದು ಧರ್ಮ ಜಾತಿಗಳು ಉಳಿದಿರುವುದು ರಾಜಕೀಯವಾಗಿ ಮಾತ್ರ ಎಂದೇ ಅನಿಸುತ್ತದೆ. ಉಳಿದಂತೆ ಜಾತಿ ಧರ್ಮಗಳು ಪರದೆಯ ಹಿಂದೆ ಹೋಗಿವೆ. ಹೆಚ್ಚು ಕಡಿಮೆ ಎಲ್ಲರೂ, ಎಲ್ಲರ ಮನೆಗಳಲ್ಲಿಯೂ, ಎಲ್ಲವನ್ನೂ ಊಟ ಮಾಡುವವರೇ! ಎಲ್ಲರೂ ಎಲ್ಲವನ್ನೂ ಕುಡಿಯುವವರೇ! ಅಲ್ಲದೆ ಬಹಳ ಜನರಿಗೆ ಹೆಂಡತಿ ಮನೆಯಲ್ಲಿದ್ದಾಗ ಮತ್ತು ಇಲ್ಲದಿದ್ದಾಗ ಹೀಗೆ ಎರಡು ರೀತಿಯಲ್ಲಿ ಕಟ್ಟು ಪಾಡುಗಳು ಬದಲಾಗುತ್ತಿರುತ್ತವೆ.
ಆದರೆ ಜಾತಿ ಧರ್ಮಗಳ ರೀತಿ, ರಿವಾಜಗಳು ಚುನಾವಣೆ ಬಂದಾಗ ಜಾಗ್ರತವಾಗಿ ಹೋಗುತ್ತವೆ. ಅಲ್ಲಿಯವರೆಗೂ ನೆನಪಿರದ ಜಾತಿಯ ನೆನಪು ಈಗಮರುಕಳಿಸುತ್ತದೆ. ಜಾತಿ ಧರ್ಮಗಳ ಈ ರಾಜಕೀಯ ಮತಾಂತರ ಸಮಾಜಶಾಸಜ್ಞರಿಗೆ ಉತ್ತಮವಾದ ಅಧ್ಯಯನದ ವಸ್ತು. ಚುನಾವಣಾ ಹತ್ತಿರ ಬಂದರಂತರೂ ಸರಿಯೇ. ಒಣಗಿ ಹೋಗಿದ್ದ ಜಾತಿಯ ಬೇರುಗಳು ಬಲಗೊಂಡು ಕಚ್ಚಿಕೊಂಡು ನಿಲ್ಲುತ್ತವೆ. ಜಾತಿ, ಧರ್ಮ ರಾಜಕೀಯದೊಳಗೆ ಬೆರೆತುಕೊಳ್ಳುತ್ತವೆ.
ಚುನಾವಣೆಗಳು ಹತ್ತಿರ ಹತ್ತಿರ ಬಂದಂತೆ ಮಜವೇ ಮಜ. ಯಾರು ನಿಲ್ಲಬಹುದು? ಎನ್ನುವದರಿಂದ ಹಿಡಿದು ಯಾರು ಗೆಲ್ಲಬಹುದು? ಎನ್ನುವ ಚರ್ಚೆಗಳು ವ್ಯಾಪಕ ಸ್ವರೂಪ ಪಡೆದುಕೊಳ್ಳುತ್ತವೆ. ಅದ್ಭುತ ಹಾಸ್ಯದ ವಿಷಯಗಳು. ಉದಾಹರಣೆಗೆ ಒಬ್ಬ ಜ್ಯೋತಿಷಿ ಚುನಾವಣಾ ಉಮೇದುವಾರನಿಗೆ (ಕೋಟ್ಯಧಿಪತಿಗೆ) ನೀನು ಈ ಬಾರಿ ಸ್ಪರ್ಧೆ ಮಾಡು. ಲಕ್ಷಾಧಿಪತಿಯಾಗುತ್ತಿ ಎಂದು ಹೇಳಿದ್ದನಂತೆ. ಆತ ನಿಂತ. ಇದ್ದ ಕೋಟಿ, ಕೋಟಿ, ಕರಗಿಹೋಗಿ ಲಕ್ಷಾಧಿಪತಿಯಾಗಿ ಹೋದ. ಹಾಗೆಯೇ ಚುನಾವಣೆಯ ಬಳಿಕ ಈಗ ಯಾಕೆ ಸೋತರು? ಎನ್ನುವವರೆಗಿನ ವಿಶ್ಲೇಷಣೆಗಳು ಮತ್ತೆ ಮನೆ ಮನೆಗಳ ಮಾತುಗಳು.
ಉಳಿದಂತೆ ಕುತೂಹಲದ ವಿಷಯಗಳು ಯಾರಿಗೆ ಎಷ್ಟು ದುಡ್ಡು ಸಿಕ್ಕಿತು? ಯಾರು ಯಾರು ಚುನಾವಣೆಯ ಸಂದರ್ಭದಲ್ಲಿ ಮನೆ ಕಟ್ಟಿಸಿದರು? ಕಾರು ತೆಗೆದುಕೊಂಡರು? ಯಾರು ಯಾವ ಹೆಂಡ ಹಂಚಿದರು? ಅದು ಎಲ್ಲಿಂದ ಬಂತು? ಅದನ್ನು ಕುಡಿದವರಿಗೆ ಏನು ಆಯಿತು? ಇತ್ಯಾದಿ ಕಥೆಗಳು ಜನರ ಬಾಯಲ್ಲಿ ಹರಿದಾಡುತ್ತವೆ. ಒಮ್ಮೆ ಯಾವುದೋ ಕಾರಣಕ್ಕೆ ಅಭ್ಯರ್ಥಿ ನೀಡಿದ ಬಾಟಲಿ ಸರಾಯಿ ಸರಿಯಿಲ್ಲದೆ ತಮಗೆ ಕೊಟ್ಟೆ ಸರಾಯಿಯನ್ನೇ ಕೊಡಿ ಎಂದು ಜನ ಕೇಳಿದರು ಇತ್ಯಾದಿ. ಈ ರೀತಿಯ ಚುನಾವಣಾ ಸಂದರ್ಭವೊಂದರಲ್ಲಿ ಮತ್ತಿನಲ್ಲಿದ್ದ ವಿವಿಧ ಪಕ್ಷದ ಹಲವರು ಜಗಳವಾಡಲು ಹೋಗಿ ಕಾಲು ಜಾರಿ ದಾರಿಯ ಪಕ್ಕದಲ್ಲಿದ ಹೊಟ್ಟು ಬಾವಿಯಲ್ಲಿ ಚುನಾವಣೆಯ ದಿನ ಜತೆ ಒಟ್ಟಾಗಿಯೇ ಕುಳಿತಿದ್ದರು ಎನ್ನುವುದು ನಾನು ಕೇಳಿದ ಕಥೆಗಳಲ್ಲೊಂದು.
ಸದಾ ನನ್ನ ಹಿಂದೆಯೇ ಸುಳಿದಾಡುತ್ತಿದ್ದ ಡ್ರೈವರ್ ಒಬ್ಬ ಚುನಾವಣೆಗಳ ಸಂದರ್ಭದಲ್ಲಿ ನನಗೆ ಕೈ ಕೊಟ್ಟು ಹೋಗಿ ಹದಿನೈದು ದಿನಗಳ ಬಳಿಕಮರಳಿದ್ದು ಯಾಕೆ ಎಂಬುದು ಆ ಮೇಲೆ ತಿಳಿದು ನಗು ತಡೆಯಲಾಗಲೇ ಇಲ್ಲ. ಚುನಾವಣೆಯ ಹಿಂದಿನ ದಿನ ರಾತ್ರಿ ಬಿರಿಯಾನಿಯ ಬಿಸಿ ಬಿಸಿ ವಾಸನೆ. ಹಾಗೆಯೇ ತರಹೇವಾರಿ ಪರಿಮಳಗಳು. ರಸ್ತೆಯಲ್ಲೇ ಮತ್ತೇ ರಿಸುವ ಪರಿಮಳ (ಈ ಸಲದ ಚುನಾವಣೆಯಲ್ಲಿ ಚುನಾವಣಾ ಆಯೋಗದ ಕಠಿಣ ಕ್ರಮಗಳಿಂದಾಗಿ ಇವೆಲ್ಲ ಕಾಣಿಸಲೇ ಇಲ್ಲ). ಚುನಾವಣೆ ದಿನ ಹಬ್ಬದ ಕೊನೆಯ ದಿನ. ವಿವಿಧ ಪಕ್ಷಗಳ ಕಾರ್ಯಕರ್ತರ ಭರಾಟೆ. ಚೀಟಿ ನೀಡುವವರ ಸಂಭ್ರಮ.
ಪ್ರತಿಯೊಂದು ಅಭ್ಯರ್ಥಿಗೂ ಬರುವವರೆಲ್ಲಾ ತನ್ನವರೇ ಎನ್ನುವ ಭಾವನೆ. ಎಲ್ಲ ಗದ್ದಲದ ನಡುವೆ ಕೊನೆಗೂ ಮತದಾರ ಮತ ನೀಡುವುದು ಯಾರಿಗೆಬೇಕೋ ಅವರಿಗೆ ಮಾತ್ರ. ಚುನಾವಣೆ ಮುಗಿದ ನಂತರ ಇಡೀ ಸಮಾಜಕ್ಕೂ ಒಮ್ಮೆಲೇ ವಿಚಿತ್ರ ಸುಸ್ತು. ಯಾರಿಗೂ ಹೆಚ್ಚು ಮಾತನಾಡುವ ಮೂಡು ಕೂಡಇರುವುದಿಲ್ಲ. ಚುನಾವಣೆ ಪದೇ ಪದೆ ಯಾಕೆ ನಡೆಯಬಾರದಿತ್ತು? ಎನ್ನುವ ವಿಷಾದ ಈಗ.