ಅಣ್ಣಾವ್ರು, ಒಬ್ಬ ಅಪ್ಪಟ ಸುಸಂಸ್ಕೃತ ನಟ
ತನ್ನಿಮಿತ್ತ
ರವೀಂದ್ರ ಸಿಂಗ್ ಕೋಲಾರ
ರಾಜ್ ಒಬ್ಬ ಆರಾಧ್ಯ ದೈವವಾಗಿ ಎಲ್ಲರ ಮನದ ಮಂದಿರದಲ್ಲಿ ಉಳಿದಿರಬೇಕಾದರೆ, ಆ ದೇವರನ್ನು ಒಬ್ಬ ಅಭಿಮಾನಿ ಎನ್ನುವ ಭಕ್ತ ಹೇಗೆತಾನೇ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂಥ ನಟನೆಯನ್ನು ಸ್ವೀಕರಿಸಬಲ್ಲ? ರಾಜ್ಹಲವಾರು ಸಂದೇಶ ಸಾರಬಲ್ಲ ಚಿತ್ರಗಳನ್ನು ಮಾಡಿದ್ದಲ್ಲದೆ ಆ ಚಿತ್ರಗಳಿಂದ ಜನರ ಮನ ಪರಿವರ್ತನೆ ಆಗಿರುವ ನಿದರ್ಶನಗಳು ಬೇಕಾದಷ್ಟಿವೆ.
ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಐವತ್ತು ವರ್ಷಗಳ ಕಾಲ ನಾಯಕ ನಟನಾಗಿ ಉಳಿದ ದಕ್ಷಿಣ ಭಾರತದ ಏಕೈಕ ನಟನೆಂದರೆ ಅದು ಡಾ. ರಾಜ್‌ಕುಮಾರ್ ಒಬ್ಬರೇ. ಚಿತ್ರ ರಂಗಕ್ಕೆ ಅವರನ್ನು ಪರಿಚಯಿಸಿದ ಹೆಗ್ಗಳಿಕೆ ನಿರ್ದೇಶಕ ಎಚ್‌ಎಲ್ ಎನ್ ಸಿಂಹ ಅವರಿಗೆ ಸಲ್ಲುತ್ತದೆ. ಭಕ್ತ ಅಂಬರೀಷ ನಾಟಕದಲ್ಲಿ ರಮಾಕಾಂತನ ಪಾತ್ರವನ್ನು ಗಮನಿಸಿದ ಸಿಂಹ, ಮುತ್ತುರಾಜರ ಕಲೆಗಾರಿಕೆ ಏನೆಂಬುದನ್ನು ಸೂಕ್ಷ್ಮಮತಿಯಿಂದ ಆಗ ಅರಿತು ಕೊಂಡರು.
ರಾಜ್ ಕುಮಾರ್ ಹೆಸರಿನಿಂದ ಅವರನ್ನು ಬೇಡರ ಕಣ್ಣಪ್ಪ ಚಿತ್ರಕ್ಕೆ ಪದಾರ್ಪಣೆ ಮಾಡಿ ಸಿಯೇ ಬಿಟ್ಟರು. ಇಂಗ್ಲಿಷ್ ಗೊತ್ತಿರದ ರಾಜ್, ಪ್ರಾರಂಭದಲ್ಲಿ ನಟನೆಗಿಳಿದಾಗ ಕೆಲವು ಪೇಚಾಟಗಳನ್ನು ಅನುಭವಿಸಿದ್ದು ಸುಳ್ಳಲ್ಲ. ಲಿಟ್ಲ್ ಫಾರ್ವಡ್ ಪ್ಲೀಸ್ ಅಂದ್ರೆ ರಾಜ್ ‘ಏನೋ ಅಂದ್ನಲ್ಲಪ್ಪ ಇವ್ನ ಮನೆ ಕಾಯಹೋಗ’ ಎಂದು ಗೊಂದಲದಲ್ಲಿದ್ದಾಗ ಅವರ ಸಹಾಯಕ್ಕೆ ಬಂದಿದ್ದು ಚಿತ್ರದ ನಾಯಕಿ ಪಂಡರಿಬಾಯಿ. ಅವರು ಇಂಗ್ಲಿಷ್ ಪದಗಳ ಅರ್ಥವನ್ನು ಕನ್ನಡದಲ್ಲಿ ರಾಜ್‌ಗೆ ಹೇಳಿ ಸಹಾಯ ಮಾಡುತ್ತಿದ್ದರು. ಅವರ ಆ ಒಳ್ಳೆಯ ಮನಸ್ಸನ್ನು ರಾಜ್ ಕಡೆವರೆಗೂ ನೆನಪಿಸಿಕೊಳ್ಳುತ್ತಿದ್ದರು ಎಂಬುದನ್ನು ಮರೆಯುವಂತಿಲ್ಲ.
ಮೊದಲ ಚಿತ್ರದ ಯಶಸ್ಸು ಅವರನ್ನು ಎಷ್ಟರ ಮಟ್ಟಿಗೆ ಜನಪ್ರಿಯತೆ ತಂದುಕೊಟ್ಟಿತೆಂದರೆ; 1960ರ ದಶಕದಲ್ಲಿ ವರ್ಷಕ್ಕೆ 14 ಸಿನಿಮಾದಂತೆ ಹತ್ತು ವರ್ಷಗಳಲ್ಲಿ 53 ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಳ್ಳುವಂತೆ ಮಾಡಿತು. ಇದಲ್ಲವೇ ನಿಜವಾದ ನಟನಾ ಸಾಮರ್ಥ್ಯ. ಕೇವಲ ನಟನೆ ಮಾಡುವುದಷ್ಟೆ ಅಲ್ಲದೆ ಅವರಲ್ಲಿ ಒಬ್ಬ ಗಾಯಕನಿದ್ದಾನೆ ಎಂಬುದು ಗೊತ್ತಾಗಿದ್ದು ಬಹುವರ್ಷಗಳ ನಂತರ.
ಭಾರತೀಯ ಸಿನಿಮಾ ರಂಗದಲ್ಲಿ ಕುಂದಲ್ ಲಾಲ್ ಸೈಗಾಲ್ ನಾಯಕ ನಟ ಗಾಯಕನಾಗಿ ಯಶಸ್ಸು ಕಂಡಿದ್ದು. ಅದು ಬಿಟ್ಟರೆ ಮತ್ತೊಬ್ಬರು ರಾಜ್ ಒಬ್ಬರೇ. ಉಪೇಂದ್ರಕುಮಾರ್ಅವರಿಂದ ಸಂಗೀತ ಕಲಿತ ರಾಜ್ ಒಮ್ಮೆ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಸಿತಾರ್ ವಾದನ ಆಲಿಸಿ ಮಾರುಹೋಗಿದ್ದರಂತೆ. ನಂತರ ಅವರನ್ನು ಕಂಡು ಕೊರಳಿಗೆ ಹಾರ ಹಾಕಿ ನಮಸ್ಕರಿಸಿ ಮಾತ ನಾಡಿಸಿ ಬಂದಿದ್ದರು. ರಾಜ್‌ಕುಮಾರ್ ಅವರ ವ್ಯಕ್ತಿತ್ವವನ್ನು ಕಣ್ಣಾರೆ ಕಂಡ ಪಂಡಿತ್ ರವಿಶಂಕರ್ ಅವರು ‘ರಾಜ್ ಕುಮಾರ್ ಅವರು ಮಾತನಾಡುತ್ತಿದ್ದರೆ ಹಾಡು ಹಾಡಿದಂತೆ ಕೇಳಿಸುತ್ತೆ’ ಎಂದು ಹೇಳಿ ಮೆಚ್ಚಿಕೊಂಡಿದ್ದು ವಿಶೇಷವೇ ಸರಿ.
ಸಾಧಕರನ್ನು, ಸಾಹಿತಿಗಳನ್ನು ಮತ್ತು ವಯಸ್ಸಿನಲ್ಲಿ ತನಗಿಂತ ಹಿರಿಯರನ್ನು ಕಂಡಾಗ ರಾಜ್ ಅವರೆದುರು ತುಂಬಾ ನಮ್ರತೆ ಯಿಂದ ನಡೆದುಕೊಳ್ಳುತ್ತಿದ್ದರು. ಏಕವಚನ ಪ್ರಯೋಗವನ್ನು ಅಷ್ಟು ಸಲೀಸಾಗಿ ಅವರು ಮಾಡುವುದಕ್ಕೆ ಹೋಗುತ್ತಿರಲಿಲ್ಲ. ಮನೋಜ್ಞವಾಗಿ ಯಾರೇ ನಟಿಸಿರಲಿ ಅವರನ್ನು ಕಂಠಪೂರ್ತಿ ಹಾಡಿ ಹೊಗಳುವ ಸಂಸ್ಕಾರ ಗುಣ ಅವರಲ್ಲಿತ್ತು. ರಾಜಣ್ಣನವರ ನಟನೆಯನ್ನು ಅನುಕರಣೆ ಮಾಡಲಾಗದೆ ಎಷ್ಟೋ ಪಳಗಿದ ನಟರು ಸೋತು, ರಾಜ್‌ಕುಮಾರ್ ಅದ್ಭುತ ನಟನೆಯ ತಲ್ಲೀನತೆ ಬಗ್ಗೆ ಮೆಚ್ಚಿಕೊಂಡಿದ್ದುಂಟು.
ಬಹಳ ವರ್ಷಗಳ ಹಿಂದೆ ತೆಲುಗಿನ ನಟ ಚಿರಂಜೀವಿಯವರು ಬಂಗಾರದ ಮನುಷ್ಯ ಸಿನಿಮಾ ನೋಡಿ ತಾನು ಆ ಪಾತ್ರ ಮಾಡ ಬೇಕು ಎಂಬ ಆಸೆಯನ್ನು ಬಿಚ್ಚಿಟ್ಟಿದ್ದು ಈಗ ಹಳೇ ವಿಚಾರ. ರಾಜ್ ಅನೇಕ ಸಿನಿಮಾಗಳು ರಿಮೇಕ್ ಆಗಿದ್ರೂ ಅದರಲ್ಲಿ ನಟಿಸಿದ ಮಹಾನ್ ಕಲಾವಿದರಲ್ಲಿ ‘ರಾಜ್ ಅವರಿಗೆ ನಟನೆಯಲ್ಲಿ ಸರಿಗಟ್ಟಲು ಸಾಧ್ಯವಿಲ್ಲ’ ಎಂದವರೇ ಹೆಚ್ಚು. ರಾಜ್‌ಕುಮಾರ್ ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಲು ಲೆಕ್ಕವಿಲ್ಲದಷ್ಟು ಅವಕಾಶಗಳು ಬಂದರೂ ಅವರು ತಮ್ಮ ನಿರ್ಧಾರದಿಂದಮಾತ್ರ ಎಂದೂ ಹಿಂದೆ ಸರಿಯಲಿಲ್ಲ.
ಹಾಗೆಂದ ಮಾತ್ರಕ್ಕೆ ಬೇರೆ ಭಾಷೆಗಳ ಸಿನಿಮಾಗಳನ್ನು ಪ್ರೀತಿಸುತ್ತಿರಲಿಲ್ಲ ಅಂತಲ್ಲ. ಪುನೀತ್ ರಾಜ್‌ಕುಮಾರ್ ಅವರೇ ಹೇಳುವಂತೆಅಪ್ಪಾಜಿಗೆ 10 ಮೆನ್ ನಾಕಿಂಗ್, ಫಾರೆಸ್ಟ್ ಗಂಪ್, ಬೆನ್ ಹರ್, ಟ್ರಾಯ್, ಗ್ಲಾಡಿಯೇಟರ್ ಸಿನಿಮಾಗಳು ಇಷ್ಟದ ಸಿನಿಮಾ ಗಳಾಗಿತ್ತು. ರಾಜ್ ಅವರಿಗೆ ತಮ್ಮ ಹೃದಯದಲ್ಲಿ ಸರ್ವವೂ ಮಾನ್ಯವೇ ಆಗಿರುತ್ತಿತ್ತು. ಯಾರ ಬಗ್ಗೆಯಾಗಲೀ ಯಾರ ಕುರಿತಾಗಲೀ ಕೊಂಕು ನುಡಿಯುತ್ತಿರಲಿಲ್ಲ. ಸಿರಿವಂತಿಕೆ-ಬಡತನ ಅಂಥ ಯಾವತ್ತೂ ಅಡ್ಡಗೋಡೆ ಹಾಕಿ ಬದುಕಲಿಲ್ಲ.
ಸರಳವಂತಿಕೆಯಲ್ಲಿ ಹೆಚ್ಚು ತೃಪ್ತಿಯನ್ನು ಕಂಡವರು. ಈ ನಡೆಯಿಂದಲೇ ಅವರು ಕೋಟ್ಯಂತರ ಜನರ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯವಾಯಿತು. ಅವರ ಚಿತ್ರಗಳನ್ನು ಮಾಡುತ್ತಿದ್ದ ನಿರ್ದೇಶಕರಿಗೆ ಸವಾಲಾಗುತ್ತಿದ್ದ ಪ್ರಶ್ನೆಯೆಂದರೆ; ಅಣ್ಣಾವ್ರು ಒಬ್ಬ ಅಪ್ಪಟ ಸುಸಂಸ್ಕೃತ ನಟ. ಅವರನ್ನು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸದಂತೆ, ಅಸಂಬದ್ಧ ಸಂಭಾಷಣೆಯನ್ನು ಅವರಬಾಯಿಂದ ಹೊರಳಿಸದಂತೆ ಎಚ್ಚರಿಕೆ ವಹಿಸಿ ಚಿತ್ರ ಮಾಡಬೇಕಾಗಿತ್ತು. ‘ರಾಜಣ್ಣನವರನ್ನು ಇನ್ನೆಷ್ಟು ಸಿನಿಮಾಗಳಲ್ಲಿ ಸಿಗರೇಟ್, ಮದ್ಯಪಾನ ಮಾಡದಂತೆ ತೋರಿಸಲು ಸಾಧ್ಯ’ ಎಂದು ನಿರ್ದೇಶಕರೊಬ್ಬರು ಪಾರ್ವತಮ್ಮನವರನ್ನು ಕೇಳಿಯೇಬಿಟ್ಟರಂತೆ.
ಆಗ ಪಾರ್ವತಮ್ಮನವರು ನೀಡಿದ್ದ ಉತ್ತರವೂ ಪರಿಣಾಮಕಾರಿ ಯಾಗಿತ್ತು. ಅದನ್ನು ಬಿಟ್ಟು ಸಿನಿಮಾ ಮಾಡೋದಿಕ್ಕೆ ಆಗೋಲ್ವ? ಯಾಕೆ ಸಾಧ್ಯವಾಗೊಲ್ಲ ಹೇಳಿ, ನಾನು ಮಾಡಿ ತೋರಿಸಲಾ? ಎಂದು ಮರು ಪ್ರಶ್ನೆ ಹಾಕಿದ್ದರಂತೆ. ಪರಶುರಾಮ್ ಚಿತ್ರದ ನಂತರ ಐದು ವರ್ಷಗಳ ಕಾಲ ಯಾವ ಚಿತ್ರದಲ್ಲೂ ನಟಿಸದೆ ಮೌನವಾಗಿ ಇದ್ದುಬಿಟ್ಟಿದ್ದರು ರಾಜ್. ಇದರಿಂದ ಕೆಲ ಅಭಿಮಾನಿಗಳುಅವರ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು.
ರಾಜ್ ಗಾಬರಿಯಾಗಿ ಅಭಿಮಾನಿಗಳ ಒತ್ತಡಕ್ಕೆ ಮಣಿದು, ಮತ್ತೆ ಬಣ್ಣ ಹಚ್ಚಿ ಜೀವನಚೈತ್ರ ಚಿತ್ರದಲ್ಲಿ ನಟಿಸಿದ್ದೂ ಒಂದು  ಆಕಸ್ಮಿಕ. ಇದಲ್ಲವೇ ಒಬ್ಬ ನಟ ಅಭಿಮಾನಿಗಳ ಪ್ರೀತಿಗೆ ಕರಗುವ ಪರಿ. ರಾಜ್ ಒಬ್ಬ ಆರಾಧ್ಯ ದೈವವಾಗಿ ಎಲ್ಲರ ಮನದ ಮಂದಿರ ದಲ್ಲಿ ಉಳಿದಿರಬೇಕಾದರೆ ಆ ದೇವರನ್ನು ಒಬ್ಬ ಅಭಿಮಾನಿ ಎನ್ನುವ ಭಕ್ತ ಹೇಗೆತಾನೇ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂಥ ನಟನೆಯನ್ನು ಸ್ವೀಕರಿಸಬಲ್ಲ? ಪ್ರತಿಯೊಬ್ಬ ಮನುಷ್ಯ ಸಮಾಜದ ಮೇಲೆ ಋಣ ಹೊಂದೇ ಬದುಕುತ್ತಿರುತ್ತಾನೆ. ಇಲ್ಲಿ ತುಸು ಗಾಢವಾಗಿ ಚಿಂತಿಸಬೇಕಿರುವ ವಿಚಾರವೆಂದರೆ; ರಾಜ್ ಹಲವಾರು ಸಂದೇಶ ಸಾರಬಲ್ಲ ಚಿತ್ರಗಳನ್ನು ಮಾಡಿದ್ದಲ್ಲದೆ ಆ ಚಿತ್ರಗಳಿಂದ ಜನರ ಮನ ಪರಿವರ್ತನೆ ಆಗಿರುವ ನಿದರ್ಶನಗಳು ಬೇಕಾದಷ್ಟಿವೆ.
ಸಮಾಜವನ್ನು ಆರೋಗ್ಯಕಾರಿಯಾಗಿ ನಿರ್ಮಿಸುವ ಪ್ರಯತ್ನದಲ್ಲಿ ಸಾಗಿ ನಿರ್ವ್ಯಾಜ ನಟನಾಗಿ ಬೆಳೆಯುವ ರೀತಿ, ಇಡೀ ಸಮಾಜವೇ ಅಂತಹ ವ್ಯಕ್ತಿಯ ಋಣ ಹೊಂದಿರುವಂತದ್ದು. ಈ ದೃಷ್ಟಿಯಲ್ಲಿ ಡಾ.ರಾಜ್ ಕುಮಾರ್ ಅವರನ್ನು ವಿಶೇಷವಾಗಿ ಪ್ರಸ್ತುತ ಕಾಲಘಟ್ಟಕ್ಕೆ ಹೋಲಿಕೆ ಮಾಡಿಕೊಂಡು ನೋಡಬೇಕಾಗುತ್ತೆ. ಸಾಮಾಜಿಕವಾಗಿ ಅವರ ಚಿತ್ರಗಳಲ್ಲಿ ಅಡಗಿರುವ ಮೌಲ್ಯಮತ್ತ ಸಂದೇಶಗಳು ಎಲ್ಲ ವಯೋಮಾನದವರಿಗೂ ಸಲ್ಲುವಂತದ್ದು. ಅವರು ನಟಿಸಿರುವ ಚಿತ್ರಗಳು ನೀಡಿರುವ ಕೊಡುಗೆ ಮುಂದಿನ ತಲೆಮಾರಿಗೂ ಅನ್ವಯಿಸುವಂತದ್ದು.
ನಟಿ ಜಯಂತಿ ಅವರು ಹೇಳುವಂತೆ ರಾಜ ಒಬ್ಬ ಫ್ಲೆಕ್ಸಿಬಲ್ನಟ. ಹಾಗೇ ನಿಜ ಜೀವನದಲ್ಲೂ ಒಬ್ಬ ಫ್ಲೆಕ್ಸಿಬಲ್ಆದ ಕಾಮನ್ ಮ್ಯಾನ್ ಆಗಿದ್ದವರು. ಜೀವನದುದ್ದಕ್ಕೂ ಮಾದರಿ ಪುರುಷನಾಗಿ ಬಾಳಿದವರು. ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಒಬ್ಬ ರಾಯಭಾರಿ ಯಂತೆ ಇದ್ದವರು. ಹೆಚ್ಚೆಚ್ಚು ಸಂಭಾವನೆ ಪಡೆದು ಮೌಲ್ಯಾಧಾರಿತವಾದ ಸಂದೇಶಗಳನ್ನು ನೀಡುವಂಥ ಚಿತ್ರಗಳನ್ನು ನೀಡದೆ ಹೋದರೆ ಆತ ಹೇಗೆ ಸ್ಟಾರ್ ಆಗಿ ಶಾಶ್ವತವಾಗಿ ಹೇಗೆ ನೆನಪಿನಲ್ಲಿ ಉಳಿಯಬಲ್ಲ? ನಿಜ ಜೀವನದಲ್ಲೂ ಒಡೆದ ಬದುಕನ್ನು ಬೆಸೆಯುವಂಥ, ಸಾಮರಸ್ಯ ಸಾರುವಂಥ, ನೀತಿಯನ್ನು ಹೇಳಿ ಉನ್ಮೇಷಗೊಳ್ಳುವಂತೆ ಮಾಡುವ, ಕಿರಿಯರಿಂದ ಹಿಡಿದುವಯಸ್ಸಾದವರಿಗೂ ಮೆಚ್ಚುಗೆಯಾಗುವಂತೆ ಮಾಡಿದ್ದ ರಾಜ್ ಚಿತ್ರಗಳ ಕೊರತೆ ಪ್ರಸ್ತುತವಾಗಿ ಬಹಳ ಕಾಡುತ್ತೆ.
ಭಾಷೆ, ಜನ, ನೆಲದ ಮೇಲೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡಂಥ ಹಾಗೂ ಅಭಿಮಾನಿಗಳಲ್ಲಿ ದೇವರನ್ನು ಕಂಡಂತಹ ರಾಜ್‌ರಂತಹ ಒಬ್ಬ ಶ್ರೇಷ್ಠ ನಟ ಮಾತ್ರ ಚರಿತ್ರೆಯ ಪುಟಗಳಲ್ಲಿ ಚಿರಕಾಲ ಜನರ ನೆನಪಲ್ಲಿ ಉಳಿಯಲು ಸಾಧ್ಯ! ನಡೆ ಬೇರೆ, ನುಡಿ ಬೇರೆ ಎಂದು ಭಾವಿಸದೆ ನಟನೆಯಲ್ಲಿ ಪರಿಪಕ್ವತೆಯನ್ನು ಬೆಳೆಸಿಕೊಂಡಿದ್ದ ರಾಜ್ ತನ್ನ ತಾಜಾ ಕಣ್ಣಲ್ಲಿ ಕಂಡಿದ್ದೆಲ್ಲ ಒಳ್ಳೆಯ ವರನ್ನೇ. ಅವರಿಗೆ ಭೂಮಿ ಮೇಲೆ ಯಾರೂ ಕನಿಷ್ಠರಾಗಿ ಕಾಣಲಿಲ್ಲ. ಈ ಕಾರಣಕ್ಕಾಗಿ ಡಾ. ರಾಜ್ ಕುಮಾರ್ ಅವರಿಗೆ ಇಡಿ ಸಮಾಜವೇ ಋಣಿಯಾಗಿ ಇಂದೂ ಮುಂದೂ ನೆನೆಯುತ್ತಲೇ ಇರುತ್ತದೆ.