ಸೆಕ್ಯೂಲರ್‌ ವಾದದಿಂದ ಮೌಲ್ವಿ ವಾದದೆಡೆಗೆ
ವಿಶ್ಲೇಷಣೆ
ನಾಗರಾಜ ನಾಯಕ
ರಾಜಕಾರಣದಲ್ಲಿ ಕಾಂಗ್ರೆಸ್ಸಿಗೆ ದಲಿತರು ಎಂದರೆ ತೋರಿಕೆಯ ಪ್ರೀತಿ ಎಂಬುದು ಸಿದ್ಧವಾಗಿ ಹೋಯಿತು. ಅನೇಕ ಬಾರಿ ದಲಿತ ನಾಯಕರನ್ನು ನಡೆಸಿಕೊಂಡ ರೀತಿ ಕಾಂಗ್ರೆಸ್ಸಿಗೆ ದಲಿತರ ಬಗ್ಗೆ ಕಾಳಜಿ ಎನ್ನುವುದು ಕೇವಲ ಮೊಸಳೆ ಕಣ್ಣೀರು ಎಂಬ ಸಂದೇಹ ಹುಟ್ಟಿ ಹಾಕಿತ್ತು.
ಆದರೆ ಮೊನ್ನೆ ಪುಲಕೇಶಿನಗರ ಸೀಟ್ ಹಂಚಿಕೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿಯವರಿಗೆ ಸೀಟು ತಪ್ಪಿಸಿದ ನಂತರ ಇನ್ನೂ ಕಾಂಗ್ರೆಸ್ ತಾನೂ ದಲಿತರ ಪರ ಎಂದು ಹೇಳಿ ಕೊಳ್ಳಲಾಗದಷ್ಟು ಕರ್ನಾಟಕದ ಜನರಿಗೆ ಮನದಟ್ಟು ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎರಡೆರಡು ಬಾರಿ ಅಂಬೇಡ್ಕರರನ್ನು ಕಾಂಗ್ರೆಸ್ ಸೋಲಿಸಿದಾಗ, ಅಂಬೇಡ್ಕರ್ ಸಾವಿನ ನಂತರ ಕಾಂಗ್ರೆಸ್ ನಡೆದುಕೊಂಡ ರೀತಿ ಕಾಂಗ್ರೆಸ್ ಬಗ್ಗೆ ತೀವ್ರ ಅನುಮಾನಗಳನ್ನು ಹುಟ್ಟುಹಾಕಿತ್ತು.
ಕರ್ನಾಟಕದಲ್ಲಿ ಕೆ.ಎಚ್. ರಂಗನಾಥ್ ಎಂಬ ಶುದ್ಧಹಸ್ತದ ವ್ಯಕ್ತಿಯನ್ನು ಮುಖ್ಯಮಂತ್ರಿ ಹುದ್ದೆಯಿಂದ ವಂಚಿತಗೊಳಿಸಿದ್ದ ಸಂದರ್ಭ, ಪರಮೇಶ್ವರ ಅವರು ಮುಂದಿನ ಮುಖ್ಯಮಂತ್ರಿ ಆಗಬಹುದು ಎಂದುಅವರನ್ನು ಸೋಲಿಸಿದ್ದು , ಪರಮೇಶ್ವರರು ಮತ್ತೆ ಎಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗುತ್ತಾರೆ ಎಂದು ಭಾವಿಸಿ ಖರ್ಗೆಯವರಿಗೆ ಮುಖ್ಯಮಂತ್ರಿ ಮಾಡಬಹುದು ಎಂದು ಪ್ರಸ್ತಾಪ ಮಾಡುವಾಗೆಲ್ಲಾ ದಲಿತ ರನ್ನು ಕಾಂಗ್ರೆಸ್ ಹೇಗೆ ಬಡಿಯುತ್ತಿದೆ ಎಂದು ಜನರಿಗೆ ಅರ್ಥವಾಗುತ್ತಿತ್ತು.
೮೫ ವರ್ಷ ವಯಸ್ಸಿನ ಖರ್ಗೆಯವರು ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ರಾದ್ದರಿಂದ ಬ್ಯುಸಿ ಆಗಿಬಿಡುತ್ತಾರೆ ಎಂದು ತಿಳಿದೂ ಅವರ ಹೆಸರು ಪ್ರಸ್ತಾಪ ಮಾಡುವುದು ಪರಮೇಶ್ವರರನ್ನು ತುಳಿಯಲೇ ಎನ್ನುವುದು ಎಂತವರಿಗೂ ತಿಳಿಯುತ್ತದೆ. ಆದರೆ ಪುಲಕೇಶಿ ನಗರದ ವಿಧಾನಸಭಾ  ಚುನಾವಣೆ ಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿಯವರಿಗೆ ಸೀಟು ನಿರಾಕರಿಸಿದ ನಂತರ ಕಾಂಗ್ರೆಸ್ಸು ದಲಿತರ ಜೊತೆ ಖಂಡಿತವಾಗಿ ಇಲ್ಲ ಎನ್ನುವುದು ಸಂಶಯಾತೀತವಾಗಿ ಪುರಾವೆಯಾಗಿದೆ.
ಅಖಂಡ ಶ್ರೀನಿವಾಸ ಮೂರ್ತಿಗೆ ಸೀಟು ತಪ್ಪಿಸಲು ಯಾವುದೇ ಸಬಲ ಕಾರಣಗಳು ಕಾಂಗ್ರೆಸ್ಸಿಗೆ ಇರಲಿಲ್ಲ. ೨೦೧೮ ರ ಚುನಾವಣೆಯಲ್ಲಿ ಒಟ್ಟು ೯೭,೫೭೪ ಮತಗಳನ್ನು ಪಡೆದ ಅಖಂಡ ೮೧,೬೨೬ ಅಂತರದ ಮತಗಳಿಂದ ತನ್ನ ಎದುರಾಳಿ ಜೆಡಿಎಸ್‌ನ ಬಿ. ಪ್ರಸನ್ನಕುಮಾರ್ ಅವರ ವಿರುದ್ಧ ಜಯ ಗಳಿಸಿದ್ದರು. ಗೆಲುವಿನ ಅಂತರ ರಾಜ್ಯದ ರಾಜಕಾರಣದಲ್ಲಿ ಹುಬ್ಬೇರುವಂತೆ ಮಾಡಿತ್ತು. ಅಖಂಡರ ಮೇಲೆ ಅಂತಹ ಭ್ರಷ್ಟಾಚಾರದ, ಸ್ವಜನ ಪಕ್ಷಪಾತದ ಯಾವುದೇ ಆಪಾದನೆಗಳು ಇರಲಿಲ್ಲ. ಪಕ್ಷದ್ರೋಹ ಎಸಗಿದ ಒಂದೇ ಒಂದು ಉದಾಹರಣೆ ಇರಲಿಲ್ಲ. ಆದರೂ ಅವರಿಗೆ ಸೀಟು ತಪ್ಪಿಸಲಾಗಿತ್ತು.
ಅದಕ್ಕೆ ಕಾರಣ ಕೆಲವು ಮುಸ್ಲಿಂ ಮೌಲ್ವಿಗಳು ಅಖಂಡರಿಗೆ ಸೀಟು ಕೊಡಲು ವಿರೋಧಿಸಿದ್ದರಂತೆ. ಕಾಂಗ್ರೆಸ್ ಪಕ್ಷ ಪುಲಕೇಶಿ ನಗರದಲ್ಲಿ ಯಾರಿಗೆ ಸೀಟು ನೀಡಬೇಕೆಂದು ಪಕ್ಷದೊಳಗೆ ಚರ್ಚಿಸಲಿಲ್ಲ, ಬದಲಿಗೆ ಖರ್ಗೆಯವರ ಬದಲು, ಡಿ.ಕೆ.ಶಿವಕುಮಾರ ಬದಲು, ಮೌಲ್ವಿಯೇ ಆಚರಣೆಯ ಹೈಕಮಾಂಡಾಗಿ ಬಿಟ್ಟರು. ಒಳ್ಳೆಯ ಚಾರಿತ್ರ್ಯ ಹೊಂದಿದ್ದ ಒಬ್ಬ ದಲಿತ ನಾಯಕನ ಹಣೆ ಬರಹ ಒಬ್ಬ ಮೌಲ್ವಿ ಬರೆಯಲು ಸ್ವತಃ ಖರ್ಗೆ ಸಾಹೇಬರ ಕಾಂಗ್ರೆಸ್ ಪಕ್ಷ ಮುಕ್ತ್ಯಾರ ನಾಮೆ ನೀಡಿತು.
ಅಷ್ಟಕ್ಕೂ ಮೌಲ್ವಿ ಈ ಫತ್ವಾವನ್ನು ಕಾಂಗ್ರೆಸ್ಸಿಗೆ ಹೊರಡಿಸಲು  ಕಾರಣ ಮತ್ತೇನಿಲ್ಲ. ಅದೊಂದು ಕರಾಳ ದಿನ, ಅಖಂಡ ಶ್ರೀನಿವಾಸ ಮೂರ್ತಿಯವರಿಗೆ. ಆಗಸ್ಟ್ ೧೧ , ೨೦೨೦ ರಂದು ಸಾವಿರಾರು ಮುಸ್ಲಿಂಮರು ಶಾಸಕ ಅಖಂಡರ ಮನೆಯ ಬಳಿ ನುಗ್ಗಿದ್ದಾರೆ. ಮನೆಯ ಮೇಲೆ ಕಲ್ಲು , ಪೆಟ್ರೋಲ್ ಬಾಂಬ್ ಎಲ್ಲಾ ಎಸೆದಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿಯ ಮನೆಯನ್ನು ಅಲ್ಲಿರುವ ವಸ್ತುಗಳ ಸಮೇತ ಸುಟ್ಟಿದ್ದಾರೆ. ಕೆಲವೊಂದು ಅಮೂಲ್ಯ ವಸ್ತುಗಳನ್ನು ದೋಚಿದ್ದಾರೆ. ಅಷ್ಟಕ್ಕೂ ಶ್ರೀನಿವಾಸ ಮೂರ್ತಿಮಾಡಿದ ತಪ್ಪಾದರೂ ಏನು? ಯಾರೋ ಅವರ ಸಂಬಂಧಿಕರ ಹುಡುಗ ಪ್ರವಾದಿಯ ಕುರಿತು ಬೇಡವಾದ ಒಂದು ಫಾರ್ವರ್ಡ್ ಮೆಸೇಜನ್ನು ಮೊಬೈಲ್‌ನಲ್ಲಿ ಕಳುಹಿಸಿದ್ದು.
ಒಂದು ವೇಳೆ ಶ್ರೀನಿವಾಸ ಮೂರ್ತಿಯವರ ಸಂಬಂಧಿಕರ ಹುಡುಗ ತಪ್ಪೇ ಮಾಡಿದರೂ ಈ ದಾಂಧಲೆಕೋರರು ಬೆಂಕಿ ಇಟ್ಟಿದ್ದು ಮಾತ್ರ ನಿರಪರಾಧಿ ಅಖಂಡರ ಮನೆಗೆ. ಅಷ್ಟಕ್ಕೇ ಬಿಡದೇ ಪೊಲೀಸ್ ಸ್ಟೇಷನ್ನಿಗೇ ಬೆಂಕಿ ಇಟ್ಟರು. ಅಖಂಡರ ಮನೆಗೆ ಬೆಂಕಿ ಇಡುವ ಸಮಯಕ್ಕೆ ಪುಣ್ಯಕ್ಕೆ ಮನೆಯಲ್ಲಿ ಯಾರೂ ಇರಲಿಲ್ಲ. ಇದ್ದಿದ್ದರೆ ಎಲ್ಲರೂ ಕೊಲೆಯಾಗುತ್ತಿದ್ದರು. ಇಂತಹ ಘನಘೋರ ಅನ್ಯಾಯ ಅವರ ಪಕ್ಷದ ಶಾಸಕನಿಗೇ ಆದಾಗಲೂ ಸಹ ಕಾಂಗ್ರೆಸ್ ಇದನ್ನು ಗಟ್ಟಿ ಧ್ವನಿಯಿಂದ ಖಂಡಿಸಲಿಲ್ಲ. ಯಾಕೆಂದರೆ ಬೆಂಕಿ ಇಟ್ಟವರೆಲ್ಲಡಿಕೆಶಿಯ ಮಾತಿನಂತೆ ಅವರ ಬ್ರದರ್ಸ್ ಅ ಲ್ಲವೇ? ಅಖಂಡರ ಪರಿಸ್ಥಿತಿ ಯಾರಿಗೂ ಸಹ ಬರಬಾರದು. ಇವರ ಪರಿಸ್ಥಿತಿ ಹೇಗಿದೆ ಎಂದರೆ ಮೃದಂಗ ಎರಡೂ ಕಡೆಯಿಂದ ಬಾರಿಸಿಕೊಂಡಂತೆ.
ಡಿಕೆಶಿಯ ಬ್ರದರ್ಸ್‌ಗಳು ಒಂದು ಕಡೆಯಿಂದ ಬಾರಿಸಿದರೆ, ಇನ್ನೊಂದು ಕಡೆ ಸೀಟು ನೀಡದೇ ಪಕ್ಷ ಬಾರಿಸಿದ್ದು.ಮೌಲ್ವಿಗೆ ಪಕ್ಷ ನಡೆಸಲು ಬಿಟ್ಟರೆ ಇದೆಂತಹ ಸೆಕ್ಯೂಲರ್ ಪಕ್ಷ. ಬಹುಶಃ ಅಖಂಡ ಶ್ರೀನಿವಾಸ ಮೂರ್ತಿ ಸಂಪೂರ್ಣ ಮನೆಯನ್ನು ಸುಟ್ಟುಕೊಂಡ ಮೇಲು ನಾನು ಹಿಂದೂ ವಿರೋಧಿ ಎಂದು ಬೋರ್ಡ್ ಹಿಡಿದು ಕ್ಷೇತ್ರದಲ್ಲಿ ತಿರುಗಿದ್ದರೆ ಕಾಂಗ್ರೆಸ್ ಕಣ್ಣು ತೆರೆದು ಸೀಟು ನೀಡುತ್ತಿತ್ತೋ ಏನೋ? ಕಾಂಗ್ರೆಸ್ಸಿಗೆ ದಲಿತ ಮತ್ತು ಮುಸಲ್ಮಾರು ಎಂಬ ಆಯ್ಕೆ ಬಂದಾಗ ಅವರು ಆರಿಸಿಕೊಳ್ಳುವುದು ಯಾವುದು ಎಂದು ಸ್ಪಷ್ಟವಾಯಿತು.
ಭಾರತ-ಪಾಕಿಸ್ತಾನ ವಿಭಾ ಗವಾದಾಗ ಪಾಕಿಸ್ತಾನವು ಬೆಂಗಾಲಿ ದಲಿತ ಮುಖಂಡರಾದ ಶ್ರೀ ಜೋಗಿಂದರ ಮಂಡಲರವರನ್ನು ತನ್ನ ಕಾನೂನು ಮತ್ತು ಕಾರ್ಮಿಕ ಸಚಿವರನ್ನಾಗಿಸಿತು. ಇಂದಿನ ಬಾಂಗ್ಲಾದೇಶ ಅಂದು ಪಾಕಿಸ್ತಾನದ ಭಾಗ. ದೇಶ ವಿಭಜನೆಯ ನಂತರ ಬಾಂಗ್ಲಾದಲ್ಲಿ ಮುಸ್ಲಿಮರು ಹಿಂದೂಗಳನ್ನು ಅದರಲ್ಲೂಹೆಚ್ಚು ದಲಿತರನ್ನು ಕೊಲ್ಲುತ್ತಿರುವಾಗ ಮಂಡಲ್ ಅಸಹಾಯಕರಾದರು. ಹೆಣವಾಗಿ ಬಿದ್ದ ದಲಿತರನ್ನು ಅಂತ್ಯಕ್ರಿಯೆ ಮಾಡುತ್ತೇನೆ ಎಂದರೂ ಅಲ್ಲಿಯ ಮತಾಂಧರು ಬಿಡಲಿಲ್ಲ.
ಹೆಚ್ಚುದಿನ ಅಲ್ಲೇ ಇದ್ದರೂ ಮಂಡಲರವರನ್ನು ಕೊಲ್ಲುತ್ತಿದ್ದರು. ತಕ್ಷಣವೇ ಮಂಡಲ್ ಅಂದಿನ ಪಾಕಿಸ್ತಾನ ಬಿಟ್ಟು ಭಾರತ ದೇಶಕ್ಕೆ ಬಂದು ಭಾರತದ ಮಣ್ಣಿಗೆ ಹಣೆಯಿಟ್ಟರು. ಮಂಡಲರವರ ವಿಷಯದಲ್ಲಿ ನೆರೆರಾಷ್ಟ್ರ ಯಾವ ರೀತಿಯ ಉಪೇಕ್ಷೆ ಮಾಡಿತ್ತೋ ಅದೇ ಉಪೇಕ್ಷೆಯನ್ನು ಕಾಂಗ್ರೆಸ್ ಅಖಂಡರವರ ವಿಷಯದಲ್ಲಿ ಮಾಡಿತು. ಸೆಕ್ಯೂಲರ್ ವಾದ ದಿಂದ ಕಾಂಗ್ರೆಸ್ ಮೌಲ್ವಿ ವಾದದೆಡೆಗೆ ಬರುತ್ತಿದೆ. ಎನ್‌ಐಎ ಈಗಾಗಲೇ ಆರೋಪಿಗಳ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದೆ. ಇಡೀ ದೇಶವೇ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಘಟನೆಯಿಂದ ದಂಗಾಗಿ ಹೋಗಿತ್ತು. ಘಟನೆಯನ್ನು ಇಂದಿಗೂ ಖಂಡಿಸುತ್ತಿದೆ.
ಅಂತಹುದರಲ್ಲಿ ಅಖಂಡರಿಗೆ ಸೀಟ್ ತಪ್ಪಿಸಿರುವ ಕಾಂಗ್ರೆಸ್ ಆರೋಪಿಗಳ ಪರ ನಿಂತಂತೆ. ಆರೋಪಿಗಳಿಗೆ ಕ್ಲೀನ್ ಚೀಟ್ ನೀಡಿದಂತೆ ಅಲ್ಲವೇ? ಭಾರತೀಯ ಪ್ರಜೆ ಇದೆಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾನೆ. ಆತನಿಗೆಇದೆಲ್ಲವೂ ಅರ್ಥವಾಗುತ್ತಿದೆ. ಆದ್ದರಿಂದಲೇ ಕಾಂಗ್ರೆಸ್ಸನ್ನು ಎಲ್ಲೆಡೆ ಕಡೆಗಣಿಸುವ ಪರ್ವ ಶುರುವಾಗಿದೆ. ಕಾಂಗ್ರೆಸ್ ತನ್ನ ಸ್ವಯಂಕೃತ ಅಪರಾಧದಿಂದಲೇ ಭಾರತದಿಂದ ಮುಕ್ತವಾಗುವ ಆತುರದಲ್ಲಿದೆ. ನಿರಪರಾಧಿ ಅಖಂಡರನ್ನು ಕಡೆಗಣಿಸಿದ್ದು, ದಂಗೆ ಕೋರರನ್ನು ಅಪರೋಕ್ಷವಾಗಿ ಬೆಂಬಲಿಸಿದ್ದು ಕಾಂಗ್ರೆಸ್ ಮುಕ್ತ ಭಾರತಕ್ಕೆ ದೊಡ್ಡ ಸರಕಾಗಿದೆ.