ಹಲವು ಚಿಂತನೆಗಳ ಬಹುವಚನಕ್ಕೊಂದೇ ತತ್ತ್ವ
ದಾಸ್ ಕ್ಯಾಪಿಟಲ್
dascapital1205@.
ಬಹುವಚನಕ್ಕೊಂದೇ ತತ್ತ (ಸಾಹಿತ್ಯ ಪ್ರಕಾಶನ, ಬೆಲೆ : ೧೬೦ ರು.ಗಳು) ಡಾ. ಅಜಕ್ಕಳ ಗಿರೀಶ್ ಭಟ್ ಬರೆದ ಪುಸ್ತಕವಿದು. ಏಕತ್ವ ಅನೇಕತ್ವಗಳ ಹಿಂದುತ್ವ ಎಂಬ ಘೋಷಣೆ ಅಥವಾ ಘೋಷವಾಕ್ಯವನ್ನು ಶೀರ್ಷಿಕೆಯೊಂದಿಗೆ ಹೊಂದಿರುವ ಈ ಪುಸ್ತಕವು ತತ್ಸಂ ಬಂಧಿತವಾದ ವಿಚಾರಗಳನ್ನು, ಅಭಿಪ್ರಾಯಗಳನ್ನು, ಪರಿಕಲ್ಪನೆಗಳನ್ನು ನಿರೂಪಿಸುತ್ತ ಸಮೂಹವೊಂದು ಸ್ವೀಕರಿಸ ಬಹುದಾದ ನೆಲೆಯಲ್ಲಿ ಒಂದು ಆರೋಗ್ಯಕರ ಚರ್ಚೆಯನ್ನು ಒಟ್ಟೂ ೧೫ ಅಧ್ಯಾಯಗಳನ್ನು ಹುಟ್ಟುಹಾಕಿದ್ದಾರೆ.
ತಾನು ಆಯ್ದುಕೊಂಡ ವಸು -ವಿಷಯಗಳ ಚರ್ಚೆಗೆ ಆಕರಗಳನ್ನು ಜೋಡಿಸುತ್ತ ಹೋಗು ವಾಗ ಯಾವ ವಿಚಾರಗಳಲ್ಲೂ ಭಟ್ಟರು ಇದೇ ಆತ್ಯಂತಿಕವಾದ ಸತ್ಯ ಅಥವಾ ನಿಲುವು ಎಂಬ ಹಠಕ್ಕೆ ನಿಲ್ಲುವುದಿಲ್ಲ. ಆದರೆ ಸತ್ಯವನ್ನು ಮಾತ್ರ ಗಾಳಿ ರಾಚುವ ಹಾಗೆ ಹೇಳುತ್ತಾರೆ. ಬಗ್ಗಬೇಕಾದಲ್ಲಿ ಬಗ್ಗುವ, ಸೆಟೆದು ನಿಲ್ಲಬೇಕಾದಲ್ಲಿ ನಿಲ್ಲುವ, ಹಾಗಂತ ಕಂಡ ಕಂಡಲ್ಲಿ ಉರುಳುವ ಗೋಲವಾಗದೇ ತಮ್ಮ ಪರಿಕಲ್ಪನೆಗಳನ್ನು ಅನೇಕರ ಪರಿಕಲ್ಪನೆಗಳಿಗೆ ನಿಸ್ಸಂದೇಹವಾಗಿ ಮುಖಾಮುಖಿಯಾಗಿಸುತ್ತಾರೆ.
ತನಗೆ ಬೇಕಾದುದನ್ನು ಮಾತ್ರ ಆಯದೇ ವರ್ತಮಾನದ ಅನೇಕ ಗೊಂದಲಗಳಿಗೆ ವಿದ್ಯಮಾನಗಳಿಗೆ ಸಮಸ್ಯೆಗಳಿಗೆ ಆಯಾಯ ಸಂಗತಿಗಳ ಎತ್ತು ವಿಕೆಯಲ್ಲೇ ಉತ್ತರವನ್ನೂ ಸ್ಪಷ್ಟತೆಯನ್ನೂ ನೀಡುತ್ತ ಹೋಗುವುದು ಈ ಪುಸ್ತಕದ ಹೆಗ್ಗಳಿಕೆ. ಅಂದರೆ ಗಾಳಿಯಲ್ಲಿ ಗುಂಡು ಹೊಡೆದ ಅಥವಾ ಹೊಡೆಯುವ ಪ್ರವೃತ್ತಿ ಇಲ್ಲಿಯ ಬರಹದಲ್ಲಿಲ್ಲ. ಯಾವುದೇ ವಿಚಾರವಿದ್ದರೂ ಅದಕ್ಕೆ ಪೂರಕವಾದ ಹಿಂದಿನ ತಾತ್ವಿಕ ನಿಲುವುಗಳು ಏನೇನಿದೆ, ಹೇಗಿವೆ ಮತ್ತು ಅವು ಹೇಗಿರಬೇಕಿತ್ತು ಎಂಬುದನ್ನು ಸತಾರ್ಕಿಕವಾಗಿ ಅಧ್ಯಯನದ ಮೂಲಕವೇ ಪ್ರತಿಕ್ರಿಯೆಯನ್ನೂ ಉತ್ತರವನ್ನೂ ಒಂದು ಅಕಾಡೆಮಿಕ್ ಡೀಸೆನ್ಸಿಯಲ್ಲಿ ನೀಡುವ ಪ್ರಯತ್ನದಲ್ಲಿ ಭಟ್ಟರು ಗೆದ್ದಿದ್ದಾರೆ.
ಹಾಗೆ ನೋಡಿದರೆ, ಯಾವುದನ್ನೂ ಭಟ್ಟರು ಒಂದು ಮೇಲುಮೇಲಿನ ಹಂತದಲ್ಲಿ ನಿಂತು ಬರೆಯಲಾರರು. ಬರೆದಿಲ್ಲ ಕೂಡ. ಮಾತನ್ನೂ ಆಡಲಾರರು. ಒಂದು ಶಿಸ್ತಾದ ಅಧ್ಯಯನ ಅವರ ಬರಹದಲ್ಲಿ ಎದ್ದು ಕಾಣುತ್ತದೆ. ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅ-ಸತ್ಯ ಅಥವಾ ಸತ್ಯ ಎಂಬೆರಡು ಅವರ ಪುಸ್ತಕಗಳನ್ನು ಅವಲೋಕಿಸಿದರೆ ಪೂರ್ಣಪ್ರಮಾಣದಲ್ಲಿ ಭಟ್ಟರ ಬರಹವನ್ನು, ಅದರ ಕಸುವನ್ನು ಅರ್ಥೈಸಿಕೊಳ್ಳಬಹುದು.
ಈ ಪುಸ್ತಕದಲ್ಲಿ, ಭಾಶಾಂತರಗೊಂಡ ಪದಗಳು ಮತ್ತು ಪರಿಕಲ್ಪನೆಗಳು, ಹಿಂದುತ್ವ ಎಂದರೇನು? ರಿಲಿಜನ್, ಹಿಂದೂ ಸಂಪ್ರದಾಯಗಳು ಮತ್ತು ಸೆಕ್ಯುಲರಿಸಂ, ಸೆಕ್ಯುಲರಿಸಂ ಮತ್ತು ರಿಲಿಜಿಯಸ್ ಫ್ರೀಡಂ, ಭಾರತದ್ದು ಸೆಕ್ಯುಲರ್ ರಾಷ್ಟ್ರವಾದ,ಸಾವರ್ಕರ್ ವಿಚಾರಗಳ ಪರಾಮರ್ಶೆ, ಪ್ರತ್ಯೇಕತಾಭಾವದಿಂದ ಪ್ರತ್ಯೇಕತಾವಾದ, ವಿಮರ್ಶಾತೀತ ರಿಲಿಜನ್ ಮತ್ತು ಅದರಒತ್ತಡ, ಸಂವಿಧಾನ, ಸಾವರ್ಕರ್ ಮತ್ತು ಅಂಬೇಡ್ಕರ್, ಹಿಂದುತ್ವ ಮತ್ತು ಜಾತಿಗಳು, ರಾಷ್ಟ್ರಭಕ್ತಿಯೆಂಬ ಭಾವನೆ, ಈಗಿನ ಮೌಲ್ಯಗಳು ಯಾವುವು? ರಿಲಿಜಿಯಸ್ ಸೆಕ್ಯಲರ್ ವಾದದಿಂದ ಅಸಹಿಷ್ಣುತೆ, ಸಮಾಜವಿಜ್ಞಾನ ಮತ್ತು ರಾಜಕೀಯ ಸರಿತನ, ಕೊನೆಯಲ್ಲದ್ದು – ಎಂಬ ೧೫ ಅಧ್ಯಾಯಗಳಿವೆ.
ಈ ಅಧ್ಯಾಯಗಳ ಶೀರ್ಷಿಕೆಯೇ ಅದರ ವಿಷಯ ವಸ್ತುವನ್ನು ಒಂದು ಲೆವೆಲ್ಲಿಗೆ ನಿರ್ವಚಿಸುತ್ತವೆಯಾದರೂ ಪೂರ್ತಿ ಓದಿದಾಗ ಸಿಗುವ ಅನುಭವ ಓದುಗನನ್ನು ಸ್ವಲ್ಪಮಟ್ಟಿಗಾದರೂ ತಲ್ಲಣಿಸುತ್ತವೆ ಎಂಬುದು ಇಲ್ಲಿ ಗಮನೀಯ. ಗಮನಾರ್ಹ. ನಾವು ನಿತ್ಯವೂ ಕಾಣುವ, ಕೇಳುವ, ನೋಡುವ ಅನೇಕ ಜ್ವಲಂತ ಸಮಸ್ಯೆಗಳಿಗೆ, ಗೊಂದಲಗಳಿಗೆ ಉತ್ತರವನ್ನು, ಪರಿಹಾರವನ್ನು ಸಾದ್ಯಂತವಾಗಿ, ಸಾಧಾರವಾಗಿ ದಾಖಲಿಸುತ್ತಾರೆ. ಹೀಗೆ ದಾಖಲಿಸುವಾಗ ಎಲ್ಲಿಯೂ ಪರ, ವಿರೋಧಗಳ ಸ್ಥಾನದಲ್ಲಿ ನಿಂತು ಅತೀತವೆಂಬಂತೆ ಬರೆಯುವುದಿಲ್ಲ ಅಥವಾ ಚರ್ಚೆಯನ್ನು ಮಾಡುವುದಿಲ್ಲ.
ಇಲ್ಲಿಯೇ ಭಟ್ಟರ ಬರಹದ ಹೆಗ್ಗಳಿಕೆ ಮತ್ತು ಜಾಣ್ಮೆಯಿರುವುದು. ನೇರವಾಗಿ ಪರಿಕಲ್ಪನೆಗಳನ್ನು ಪ್ರಸ್ತುತ ಪಡಿಸುತ್ತ ಅದಕ್ಕೆ ಸ್ಪಷ್ಟತೆಯನ್ನು ನೀಡುತ್ತಾ ಹೋಗುತ್ತಾರೆ. ಹಾಗಾಗಿ ಇದೊಂದು ವೈಚಾರಿಕ ಲೇಖನಗಳ ಸಂಕಲನವೂ, ಸಂಕಥನವೂ ಅಹುದು ಎಂದು ಭಾವಿಸುತ್ತೇನೆ. ಒಳ್ಳೆಯದನ್ನು ಹೇಳಬೇಕು, ಒಳ್ಳೆಯದನ್ನು ಹೇಳುವಾಗಲೂ ಕೆಟ್ಡದ್ದು ಯಾವುದೆಂದು ಹೇಳಬೇಕು. ಹೇಳುವ ಧೈರ್ಯ ಬೇಕು. ಎರಡನ್ನೂ ಸರಿಯೆಂಬುದು ಪಲಾಯನವಾದವೇ ಹೊರತು ಅದು ಸತ್ಯವಲ್ಲ. ತರತಮ ಜ್ಞಾನದ ಬಗ್ಗೆಯೂ ಆರಂಭದಲ್ಲೇ ಭಟ್ಟರು ಹೇಳಿಬಿಡುತ್ತಾರೆ.
ವರ್ತಮಾನದಲ್ಲಿ ಕಾಣುವ ಪ್ರಸಂಗಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ತರತಮವನ್ನು ನಿರೂಪಿಸುತ್ತಾರೆ. ಇಲ್ಲಿಯೂ ಸತ್ಯದ ಪರವೇ ನಿಲ್ಲುವುದು ಅಥವಾ ಸತ್ಯ ಯಾವುದು ಎಂಬುದನ್ನು ನಿರೂಪಿಸುತ್ತಾರೆ. ಸಂಗತಿಗಳನ್ನು ನಿರೂಪಿಸುತ್ತಾ ಓದುಗರಿಗೇ ಒಂದು ದೃಢ ತೀರ್ಮಾನಕ್ಕೆ ಬರಲು ಬಿಡುತ್ತಾರೆ. ತಾನು ಹೇಳುವ ಸತ್ಯವನ್ನು ಅದಕ್ಕೆ ಪೂರಕವಾಗಿ ನಿಲ್ಲುವ ಆಧಾರಗಳನ್ನು ಅಲ್ಲಲ್ಲಿಯೇ ನೀಡುತ್ತಾ ಸಾಗುತ್ತಾರೆ. ಆಧ್ಯಾತ್ಮ, ದೇವರು, ಮತ, ರಿಲಿಜನ್, ಧರ್ಮ, ದೇವರು, ಗಾಡ್, ಅಲ್ಲಾಹು,ಏಸು, ಸನಾತನ ಧರ್ಮ, ಕ್ರೈಸ್ತ, ಇಸ್ಲಾಂ, ಜೈನ, ಬೌದ್ಧ, ಹಿಂದು, ಹಿಂದೂ, ಹಿಂದುತ್ತ್ವ, ಸೆಕ್ಯುಲರಿಸಂ- ಈ ಪದಗಳ ಬಳಕೆಯು ಹೇಗೆ ಆಗುತ್ತಿವೆ. ಹೇಗೆ ಆಗಬೇಕು, ಅವುಗಳ ಪರಿಕಲ್ಪನೆಗಳ ಬಗ್ಗೆ ತುಸು ಆಳವಾಗಿಯೇ ಚಿಂತನೆ ಮಾಡುತ್ತಾರೆ.
ಸಂಸ್ಕೃತಿಯ ನಿರ್ವಚನದಲ್ಲಿ ಉನ್ನತ ಮಟ್ಟದಲ್ಲಿ ಅಧ್ಯಯನ ನಡೆದಿವೆ, ನಡೆಯುತ್ತಿವೆ ಕೂಡ ಎಂಬುವಲ್ಲಿಯೂ ಸಾರ್ವಜನಿಕರ ವಲಯದಲ್ಲಿ ಒಂದು ಸ್ಪಷ್ಟತೆ ಇದ್ದಂತಿಲ್ಲ. ತರ್ಕಗಳು ಸತ್ಯವನ್ನು ಹೇಳುವುದಿಲ್ಲ. ಈ ಹಿನ್ನೆಲೆಯಲ್ಲಿ ತರ್ಕಸರಣಿಯನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸತತವಾಗಿ ನಡೆದಿದೆ. ಭಾಶಾಂತರ ಪದಗಳು ಮತ್ತು ಪರಿಕಲ್ಪನೆಗಳು ಎಂಬ ಅಧ್ಯಾಯದಲ್ಲಿ ಪದಗಳ ಭಾಶಾಂತರ ಮತ್ತು ಪರಿಕಲ್ಪನೆಗಳಿಂದ ಆಗುವ ಸಮಸ್ಯೆಗಳ ಬಗ್ಗೆ ಈ ಹೊತ್ತಿಗೆ ಈ ಹೊತ್ತಗೆಯಲ್ಲಿ ಚಿಂತನೆ ನಡೆಸಿದ್ದಾರೆ. ಈ ಚಿಂತನೆಗಳು ವರ್ತಮಾನಕ್ಕೆ ಮಾರ್ಮಿಕವಾಗಿ ಪರಿಣಮಿಸುತ್ತದೆ.
ಯಾಕೆಂದರೆ, ಜನಸಾಮಾನ್ಯರು ಧರ್ಮ, ಮತ ಮತ್ತು ರಿಲಿಜನ್‌ಗಳ ಬಳಕೆಯನ್ನು ಸರಿಯಾದ ನೆಲೆಯಲ್ಲಿ ಪ್ರಯೋಗಿಸದೆ ಇರುವುದರಿಂದ ಆಗುವ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆಯಾದ್ದರಿಂದ! ಇಲ್ಲಿಯೇ ಒಂದು ಮಾತನ್ನು ಸೇರಿಸಿ ಹೇಳಿಬಿಡಬೇಕು: ಮತ ಮತ್ತು ಧರ್ಮ ಎಂಬ ಶಬ್ದಗಳನ್ನು ನಾವು ಹೆಚ್ಚಾಗಿ ತಪ್ಪಾಗಿ ಪ್ರಯೋಗಿಸುತ್ತಿದ್ದೇವೆ. ಲೋಕದೃಷ್ಟಿಯಲ್ಲಿ ಸಹಜವಾಗಿ ಸೆಕ್ಯುಲರ್ ಆಗಿರುವ ಸಾಮಾನ್ಯ ಜನರಾದ ಹಿಂದೂಗಳು ಬಳಸುವ ಭಾಷೆಗಳಲ್ಲಿ ವಿಪರ್ಯಾಸವೆಂದರೆ, ಅವರ ಈಸಹಜ ಸ್ಥಿತಿಯನ್ನೇ ಹೇಳುವ ಸೆಕ್ಯುಲರ್ ಎಂಬ ಶಬ್ದವೇ ಇಲ್ಲ.
ಆದ್ದರಿಂದ ಧರ್ಮನಿರಪೇಕ್ಷತೆ ಎಂದು ಬಿಡುತ್ತೇವೆ. ಧರ್ಮ ಎಂಬುದು ಬಹು ವಿಚಿತ್ರವಾದ- ನಮ್ಮದು ಮಾತ್ರವಾದ ಶಬ್ದ. ಇರುವ ಸತ್ಯಗಳನ್ನು ಕಾಣಿಸುವ ಶಬ್ದವದು. ಇಂಗ್ಲಿಷಿನ ರಿಲಿಜನ್ ಎಂಬ ಶಬ್ದಕ್ಕೆ ಮತ ಎಂಬ ಶಬ್ದವನ್ನು ಬಳಸಬಹುದಾದರೆ ಮತ ನಿರಪೇಕ್ಷತೆ ಎನ್ನಬಹುದು. ಸೆಕ್ಯುಲರ್ ಎಂದರೆ ಮತ ನಿರಪೇಕ್ಷತೆಯೇ ವಿನಾ ಧರ್ಮನಿರಪೇಕ್ಷತೆಯಲ್ಲ. ಯಾಕೆಂದರೆ, ಧರ್ಮ ಅಪೇಕ್ಷೆಗೆ ಅತೀತವಾದದ್ದು. ನಮ್ಮ ನಾಗರಿಕತೆಯ ಏಕತೆಗೆ ಬಹುತ್ವವು ಎಂದೂ ಶತ್ರುವಾಗಿ ಪರಿಣಮಿಸಿಲ್ಲ. ನಾವು ಯಾವತ್ತಿಗೂ ಭಾಷೆಗಳ ಒಂದು ವಿಶಾಲ ವಾತಾವರಣದ ನಡುವೆಯೇ ಬದುಕುತ್ತಿದ್ದೇವೆ. ಬಹುಭಾಷೆಗಳಿಂದಾಗಿ ನಮ್ಮ ನಾಗರಿಕತೆಗೆ ಒಂದು ನಿಶ್ಚಿತ ಸ್ವರೂಪ ಸಿದ್ಧಿಸಿದೆ ಮತ್ತು ಏಕತ್ರ ಸಂಘಟಿಸಿದೆ.
ಅಂದರೆ, ಅರ್ಥ ಬೇರೆಯದೇ ಆದ ಸ್ವರೂಪವನ್ನು ಕೊಟ್ಟು ಒರಿಜಿನಲ್ ಪರಿಕಲ್ಪನೆಯನ್ನು ಹೇಗೆ ಪಲ್ಲಟಿಸುತ್ತದೆ ಎಂಬುದನ್ನು ಭಟ್ಟರು ಗಾಡ್/ಅಲ್ಲಾಹು ಮತ್ತು ದೇವರು ಎಂಬೀ ಶಬ್ದಗಳ ಮೂಲಕ ವಿಶ್ಲೇಷಿಸಿದ್ದಾರೆ. ಮುಖ್ಯವಾಗಿ ಇಸ್ಲಾಂ ಮತ್ತು ಕ್ರೈಸ್ತರ ಒಬ್ಬನೇ ದೇವರು, ಒಂದೇ ಧರ್ಮಗ್ರಂಥಗಳ ಬಗ್ಗೆ ಹೇಳುತ್ತಾ, ಹಿಂದೂ ದೇವರುಗಳ ಪರಿಕಲ್ಪನೆಗಳ ಅಸ್ಮಿತೆಯನ್ನು ವಿವೇಚಿಸುತ್ತಾರೆ.
ಹೇಗೆ ವಿಭಿನ್ನ ಮತ್ತು ವಿಶಿಷ್ಟ ಎಂಬುದನ್ನೂಹೇಳುತ್ತಾರೆ. ಹಿಂದುತ್ವದ ಅಧ್ಯಾಯದಲ್ಲಿ ಹಿಂದುಗಳ ಸಾಮಾನ್ಯ  ಗುಣಲಕ್ಷಣ ಗಳನ್ನು ಹೇಳುವಾಗ ಹತ್ತೊಂಬತ್ತು ಸಾಮಾನ್ಯ ಗುಣಗಳನ್ನು ಪಟ್ಟಿ ಮಾಡಿದ ಭಟ್ಟರು ಹಿಂದುಗಳ ನಂಬಿಕೆ ಮತ್ತು ಆಚರಣೆಗಳ ಸಾರಲಕ್ಷಣ ವನ್ನು ಕೇವಲ ವೇದ, ಭಗವದ್ಗೀತೆಗಳಲ್ಲಿ ಹುಡುಕುವುದಲ್ಲ; ಅವುಗಳಿಂದಾಚೆಗೆ ಬೇರೆ ಅನೇಕ ನೆಲೆಗಳಲ್ಲಿ ನಾವು ಕಂಡುಕೊಳ್ಳಬಹುದು ಅಥವಾ ಕಂಡುಕೊಳ್ಳಬೇಕು ಎನ್ನುತ್ತಾರೆ. ಹಾಗಂತ ಆ ಲಕ್ಷಣಗಳು ಗ್ರಂಥಗಳಲ್ಲಿ ಇರಬೇಕಾಗಿಲ್ಲ. ಮತ್ತದರ ವಿರುದ್ಧವೂ ಇರಬಹುದು ಎನ್ನುತ್ತಾರೆ. ಮತ್ತು ಹಿಂದೂ ಎಂಬ ಶಬ್ದದ ಅಸ್ತಿತ್ವ, ಬಳಕೆಯ ಮೂಲವನ್ನು ವಿವಿಧ ಆಕರಗಳಿಂದ ಉಲ್ಲೇಖಿಸುತ್ತಾರೆ.
ಈ ಪದವನ್ನು ಹಿಡಿದುಕೊಂಡು ವಾಚಾಮಗೋಚರ ಎಂಬಂತೆ ಮಾತಾಡಿದವರ, ಬರೆದವರನ್ನು ಉಲ್ಲೇಖಿಸುತ್ತ ಅವರ ವಾದವೆಲ್ಲ ಸರಿಯಲ್ಲ, ಹಿಂದು ಎಂಬುದು ಇಸಂ ಅಲ್ಲ, ಅದೊಂದು ಜೀವನ ವಿಧಾನ, ಅದು ಸಂಸ್ಕೃತಿಯನ್ನು ಸಂಕೇತಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದನ್ನು ಸ್ಮರಿಸುತ್ತಾರೆ. ಹೀಗೆ ಹಿಂದುತ್ವ ಬಗ್ಗೆ ಸೂಕ್ಷ್ಮವಾಗಿ ಹೇಳುವಾಗೆಲ್ಲ ಭಟ್ಟರುಸ್ಥಾಪಿತ ಆಕೃತಿಗಳನ್ನು ನಿರೂಪಿಸುತ್ತಲೇ ಅದಲ್ಲ, ಸರಿಯಾದುದು ಹೀಗಿದೆ ಎಂದು ವಾಸ್ತವದ ಸ್ಪಷ್ಟತೆಯನ್ನು ಪೂರಕವಾಗಿಒದಗಿಸುತ್ತಾರೆ.
ರಿಲಿಜನ್, ಹಿಂದೂ ಸಂಪ್ರದಾಯಗಳು ಮತ್ತು ಸೆಕ್ಯುಲರಿಸಂ ಅಧ್ಯಾಯದಲ್ಲಿ ಭಾಶಾಂತರದಿಂದ ಅದರಲ್ಲೂ ಮುಖ್ಯವಾಗಿ ಕೆಲವು ಮತ ಧರ್ಮಗಳ ನಂಬಿಕೆ, ಉಪಾಸನೆಗೆ ಸಂಬಂಧಿಸಿದ ನಿರ್ದಿಷ್ಟ ಸಾಲುಗಳನ್ನು ಅಥವಾ ಘೋಷವಾಕ್ಯಗಳನ್ನು ಭಾಶಾಂತರ ಮಾಡಿದುದರ ಪ್ರಭಾವ ಸಮಾಜದ ಮೇಲಾಗುತ್ತದೆ. ಉದಾ: ಅಲ್ಲಾಹು ಎನ್ನುವುದನ್ನು ಇಂಗ್ಲಿಷಿನಲ್ಲಿ ದಿ ಗಾಡ್, ವನ್ ಗಾಡ್, ಆಜಾನ್‌ನಲ್ಲಿ ಬರುವ ಸಾಲುಗಳಿಗೆ ದೇರ್ ಇಸ್ ನೋ ಗಾಡ್ ಎಕ್ಸೆಪ್ಟ್ ದಿ ವನ್ ಗಾಡ್ ಎನ್ನುವ ಭಾಶಾಂತರದೊಳಗಿನ ವೈರುದ್ಧ್ಯ!
(ಮುಂದುವರಿಯುವುದು)