ರಾಜ್ಯದ ಒಕ್ಕಲಿಗರ ಕೋಟೆ ಗೆಲ್ಲುವ ಕುಮಾರ ಯಾರು ?
ವಿಶ್ಲೇಷಣೆ
ಮಣಿಕಂಠ ತ್ರಿಶಂಕರ್‌
ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಸ್ಥಾನ ಹಾಗೂ ದೇಶದ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಲು, ಎಚ್‌ಡಿಕೆಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಲು ಪ್ರಮುಖ ಕಾರಣ ಪ್ರಬಲ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗ ಸಮುದಾಯ ಅವರನ್ನು ನಾಯಕರೆಂದು ಒಪ್ಪಿಕೊಂಡಿರುವುದೇ ಆಗಿದೆ.
ಯಾರೇ ಹತ್ತಿರ ಬಂದರೂ, ತಬ್ಬಿ ಮುದ್ದಾಡಿದರೂ, ಅಭಿಮಾನದಿಂದ ಎಳೆದಾಡಿದರೂ ವಿನಯದಿಂದಲೇ ಸ್ವೀಕರಿಸುವ, ಬ್ರದರ್ ಹೇಳಣ್ಣ, ಹೇಳು ತಾಯಿ ಎಂದು ಎಲ್ಲರೊಳಗೂ ಒಂದಾಗುವ ನಾಯಕ ಒಂದು ಕಡೆ. ಮತ್ತೊಂದೆಡೆ ಕೆಕ್ಕರಿಸಿ ನೋಡುವ,ಕಾರ್ಯ ಕರ್ತರು, ಆತ್ಮೀಯರೆಂಬ ಭೇದ-ಭಾವವೂ ಇಲ್ಲದೇ ಯಾರೊಂದಿಗೂ ಬೆರೆಯದ, ಯಾರೊಳಗೂ ಒಂದಾಗದ, ಸಂಘರ್ಷದ ನಾಯಕ ಮತ್ತೊಂದೆಡೆ. ಇಬ್ಬರದ್ದು ಒಂದೇ ಗುರಿ. ಪಕ್ಷ ಮಾತ್ರ ಬೇರೆ-ಬೇರೆ. ಸಮುದಾಯವು ಒಂದೇ. ರಾಜಕಾರಣದ ಅಖಾಡವೂ ಒಂದೇ. ಆದರೆ ಆಲೋಚನೆಗಳು, ಚಿಂತನೆಗಳು, ಹಿನ್ನೆಲೆ ಮಾತ್ರ ವಿಭಿನ್ನ.
ಇಂತಿಪ್ಪ ಇಬ್ಬರು ನಾಯಕರು ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು-ಪ್ರತಿಪಟ್ಟುಗಳನ್ನು ಪ್ರಯೋಗಿಸುತ್ತಿದ್ದಾರೆ. ಬಯಸಿದ್ದನ್ನು ಪಡೆದೇ ತೀರಬೇಕೆಂಬ ಹಠಕ್ಕೂ ಬಿದ್ದಿದ್ದಾರೆ. ಬಯಸಿದ ಗದ್ದುಗೆಯನ್ನು ಪಡೆಯಲೋಸುಗ ರಾಜ್ಯದ ಮೂಲೆ-ಮೂಲೆಗೂ ಯಾತ್ರೆ ನಡೆಸುತ್ತಿದ್ದಾರೆ. ಹಗಲು-ರಾತ್ರಿಯೆನ್ನದೆ ತಂತ್ರ- ಕುತಂತ್ರಗಳ ಬಲೆ ಹೆಣೆಯುತ್ತಿದ್ದಾರೆ. ಆದರೆ ಬಯಸಿದ ಗದ್ದುಗೆ ಮಾತ್ರ ಇಬ್ಬರಿಗೂ ಕಬ್ಬಿಣದ ಕಡಲೆಯೇ.
ಇಬ್ಬರಲ್ಲಿ ಈಗಾಗಲೇ ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಎಚ್‌ಡಿಕೆಗೆ ಗದ್ದುಗೆ ಸುಲಭ ವಾಗಿಯಲ್ಲದಿದ್ದರೂ ಆಕಸ್ಮಿಕವಾಗಿಯೋ, ಅದೃಷ್ಟದಾಟದಲ್ಲಿಯೋ ದಕ್ಕಿ ಬಿಡಬಹುದು. ಆದರೆ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಸುಲಭದ ಮಾತಲ್ಲ. ಕಾರಣ ಡಿಕೆಶಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿ ಬೇಕಾಗಿರುವ ನಾಯಕನೇ ಹೊರತು ಎಲ್ಲರೊಳ ಗೊಂದಾಗುವ, ಎಲ್ಲರಿಗೂ ಬೇಕಾಗುವ, ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ನಾಯಕನಲ್ಲ ಎಂಬುದೇ ಅದಕ್ಕೆಕಾರಣ.
ಹೌದು, ೨೦೨೩ರ ವಿಧಾನಸಭಾ ಚುನಾವಣಾ ರಣಕಣ ರಂಗೇರುತ್ತಿದೆ. ಪಕ್ಷದಿಂದ ಪಕ್ಷಕ್ಕೆ ಪಕ್ಷಾಂತರ ಮಾಡುವವರಿಂದ ಹಿಡಿದು, ರಾಜ್ಯ ಮಟ್ಟದಲ್ಲಿ ಹಾಗೂ ಪ್ರತಿಯೊಂದು ಸ್ಥಳೀಯ ಕ್ಷೇತ್ರಗಳ ಮಟ್ಟದಲ್ಲೂ ಸಣ್ಣ-ಸಣ್ಣ ಜಾತಿಗಳು-ಧರ್ಮಗಳ ಮತದಾರರಸಂಕಲನ-ವ್ಯವಕಲನದ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದೆ. ೨೦೦೮ರ ರಾಜ್ಯ ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ರಾಜಕಾರಣದೊಳಗೆ ಸಂಪೂರ್ಣವಾಗಿ ತನ್ನ ಕಬಂಧಬಾಹುವನ್ನು ಚಾಚಿ ಇಡೀ ರಾಜ್ಯ ರಾಜಕಾರಣವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡ ಜಾತಿ ರಾಜಕಾರಣ ಇಂದು ಬೆಳೆದು ಹೆಮ್ಮರವಾಗಿದೆ. ಆ ಕಾರಣಕ್ಕಾಗಿಯೇ ನೆಲ-ಜಲ-ಭಾಷೆ ಆಧಾರಿತಹೋರಾಟದ ರಾಜಕಾರಣ ತೆರೆಮರೆಗೆ ಸರಿದು ಇತರೆಲ್ಲಾ ವಿಚಾರಗಳಿಗಿಂತ ಜಾತಿ ಲೆಕ್ಕಾಚಾರವಷ್ಟೇ ಕರ್ನಾಟಕ ರಾಜಕಾರಣದ ಹಾವು-ಏಣಿಯಾಟದಲ್ಲಿ ಪ್ರಮುಖ ವಿಷಯವಾಗಿ ಮಾರ್ಪಡಾಗಿದೆ.
ಇಲ್ಲಿ ಯಾರಿಗೂ ಯಾವ ತತ್ವ-ಸಿದ್ಧಾಂತಗಳ ಅರಿವು ಇಲ್ಲ. ಕರ್ನಾಟಕ ರಾಜ್ಯದಲ್ಲೀಗ ರಾಜಕಾರಣ ಮಾಡುವ, ಅಧಿಕಾರಗಿಟ್ಟಿಸಿಕೊಳ್ಳುವ ಸುಲಭ ಮಾರ್ಗಗಳು ನಮ್ಮ ನೆಲದ ರಾಜಕಾರಣಿಗಳಿಗೆ ಸಿದ್ಧಿಸಿಬಿಟ್ಟಿವೆ. ಅವುಗಳಲ್ಲಿ ಪ್ರಮುಖವಾದವು ಎರಡೇ ಎರಡು. ಅವೇ ಜಾತಿ ಅಸ್ಮಿತೆ, ಕುರುಡು ಕಾಂಚಾಣ. ದುಡ್ಡು, ಜಾತಿ ಬಲಗಳಲ್ಲಿ ಯಾವುದಾದರೂ ಒಂದಿದ್ದರು ಸಾಕು ಎನ್ನುವಂತಹ ಈ ಕಾಲಘಟ್ಟದಲ್ಲಿ ಎರಡರ ಬೆಂಬಲವೂ ಸಿಕ್ಕಿಬಿಟ್ಟರೆ ಮುಗಿದೇ ಹೋಯಿತು.
ರಾಜಕಾರಣಕ್ಕೆ ಕಾಲಿಟ್ಟು ಬೇಕಾದ ಪದವಿಗಳನ್ನೆಲ್ಲಾ ಗಿಟ್ಟಿಸಿಕೊಳ್ಳಬಹುದು. ಯಾರಿಗೂ ಒಳ್ಳೆಯ ಹಿನ್ನೆ ಲೆಯೋ,  ಸತ್ಚಾರಿತ್ರ್ಯ ತರೆಂಬ ಹಣೆಪಟ್ಟಿಯೋ. ನೆಲ-ಜಲ-ಭಾಷೆಗಾಗಿ ಹೋರಾಡುವ ಹೋರಾಟಗಾರರೆಂಬ ಯಾವ ಹಿನ್ನೆಲೆಯು ಬೇಕಿಲ್ಲ. ಆ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜಕಾರಣ ಪಡಸಾಲೆಯಲ್ಲಿ ಕಲ್ಲು ಮಣ್ಣು, ಅದಿರು, ಮರಳು ಮಾಫಿಯ ದಂಧೆಕೋರರು, ನಕಲಿ ರಸಗೊಬ್ಬರ ಮಾರಾಟಗಾರರು, ಬೆಟ್ಟಿಂಗ್, ಇಸ್ಪೀಟು, ಜೂಜು, ಅಡ್ಡೆ ನಡೆಸುವವರು, ಕೋಟಿ-ಕೋಟಿ ಭ್ರ ಷ್ಟಾಚಾರದ ಆರೋಪ ಹೊತ್ತ ಲೂಟಿಕೋರ, ಸಮಾಜಘಾತುಕ ಶಕ್ತಿಗಳೇ ಸದ್ದು ಮಾಡುತ್ತಿದ್ದಾರೆ.
ಹೀಗೆ ರಾಜಕಾರಣ ಶುರು ಮಾಡಲು ಏನಿಲ್ಲದಿದ್ದರೂ ಹಣವೊಂದಿದ್ದರೆ ಸಾಕು ಎಂಬಂಥ ಪರಿಸ್ಥಿತಿಯ ನಡುವೆ, ಮತ್ತೊಂದೆಡೆಜಾತಿ ಬೆಂಬಲ, ಜಾತಿ ಅಸ್ಮಿತೆಯ ಬಲ ಮಂತ್ರಿ ಪದವಿ, ಮುಖ್ಯಮಂತ್ರಿ ಗಾದಿ ಕರುಣಿಸುವ ಕಾಮಧೇನು ಆಗಿಬಿಟ್ಟಿದೆ. ಅತ್ತ ಯಡಿಯೂರಪ್ಪ, ವಿಜಯೇಂದ್ರ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಸೇರಿದಂತೆ ಪ್ರತಿಯೊಬ್ಬರು ಮುಖ್ಯಮಂತ್ರಿ ಗದ್ದುಗೆಗೆ ಟವೆಲ್ ಹಾಕುತ್ತಿರುವುದು ತಮಗಿರುವ ಜಾತಿ ಮತದಾರರ ಬಲ ನೆಚ್ಚಿಕೊಂಡೆ. ಮತದಾರರು ಅಷ್ಟೇ ತಂತಮ್ಮ ಜಾತಿ ನಾಯಕರ ಹಿನ್ನೆಲೆ ಎಷ್ಟೇ ಕೆಟ್ಟದಿದ್ದರೂ ನಮ್ಮವನೆಂಬ ಕಾರಣಕ್ಕಾಗಿ ಬೆನ್ನಿಗೆ ನಿಲ್ಲುವ ಪರಿಪಾಠದಿಂದಾಗಿ ಇಂದಿನ ರಾಜಕಾರಣಿಗಳು ಅಧಿಕಾರ ಪಡೆಯಲು ಜಾತಿ ಅಸ್ಮಿತೆ ಕೆಣಕಿದರೆ ಸಾಕು ಸುಲಭದಲ್ಲಿ ಅಧಿಕಾರ, ಪದವಿಗಳೆಲ್ಲ ದಕ್ಕಿಯೇ ತೀರುತ್ತವೆ.
ಜಾತಿ ಅಸ್ಮಿತೆಯ ಸುಲಭ ಮಾರ್ಗದ ಮೂಲಕ ಅಧಿಕಾರ ಪಡೆಯಬಹುದೆಂಬ ಕಾರಣದಿಂದಾಗಿ ರಾಜ್ಯದ ಬಹುತೇಕ ಜನಪ್ರತಿನಿಽಗಳು ಏಕಜಾತಿ ನಾಯಕರಾಗಿ ಬಿಟ್ಟಿದ್ದಾರೆ. ತಮ್ಮ ಸಮುದಾಯದ ಮತದಾರರ ಬೆಂಬಲ ತಮಗಿದೆ ಎಂಬ ಏಕೈಕ ಕಾರಣದಿಂದ ಜಾತಿ ಬಲದ ಮೇಲೆ ಅಧಿಕಾರ ಪಡೆದೇ ತೀರಬೇಕೆಂಬ ನಾಯಕರ ಜಿದ್ದಾ-ಜಿದ್ದಿ ಇದೀಗ ಅತಿರೇಕಕ್ಕೇರಿದೆ. ಇಂತಹದ್ದೇ ಅತಿರೇಕದ ಅಸ್ಮಿತೆ ಹೋರಾಟ ಇತರೆಲ್ಲ ನಾಯಕರಲ್ಲಿ ತುಸು ಸಮುದಾಯಕ್ಕಿಂತ ಒಕ್ಕಲಿಗ ಸಮುದಾಯಜೋರಾಗಿಯೇ ಕಿಚ್ಚು ಹೊತ್ತಿಸಿದೆ.
ಕುರುಬ ಸಮುದಾಯ, ಲಿಂಗಾಯತ ಸಮುದಾಯದ ಮತದಾರರು ಸಿದ್ದರಾಮಯ್ಯ, ಯಡಿಯೂರಪ್ಪರನ್ನು ಪ್ರಶ್ನಾತೀತನಾಯಕರಾಗಿ ಸ್ವೀಕಾರ ಮಾಡಿದ್ದಾರೆ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಸ್ಥಾನ ಹಾಗೂ ದೇಶದ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಲು, ಎಚ್‌ಡಿಕೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಲು ಪ್ರಮುಖ ಕಾರಣ ಪ್ರಬಲ ಸಮುದಾಯಗಳಲ್ಲಿಒಂದಾದ ಒಕ್ಕಲಿಗ ಸಮುದಾಯ ಅವರನ್ನು ನಾಯಕರೆಂದು ಒಪ್ಪಿಕೊಂಡಿರುವುದೇ ಆಗಿದೆ. ಕಾಲಚಕ್ರದಲ್ಲಿ ಎಷ್ಟೆಲ್ಲಾ ಕುತಂತ್ರದ ಬಲೆ ಹೆಣೆದು, ಬೇರೆ ಬೇರೆ ಪ್ರಬಲ ಸಮುದಾಯಗಳನ್ನು ಈ ಇಬ್ಬರು ನಾಯಕರ ವಿರುದ್ಧ ಎತ್ತಿಕಟ್ಟಿ ಅಧಿಕಾರ ಸ್ಥಾನದಿಂದ ಪಲ್ಲಟಗೊಳಿಸಿದರೂ ಕೂಡ ಒಕ್ಕಲಿಗ ಸಮುದಾಯದ ಬಹುತೇಕ ಮಂದಿ ಗೌಡರ ಕುಟುಂಬಸ್ಥರನ್ನು ತಮ್ಮ ಪ್ರಶ್ನಾತೀತ ನಾಯಕರೆಂದು ಒಪ್ಪಿಕೊಳ್ಳುತ್ತಾರೆಯೇ ವಿನಃ ಇತರರನ್ನಲ್ಲ.
ಡಿಕೆ ಶಿವಕುಮಾರ್ ಈ ಬಾರಿ ಹಿಂದೆಂದಿಗಿಂತಲೂ ಪ್ರಬಲವಾಗಿ ಸಮುದಾಯದ ಬೆಂಬಲ ಗಿಟ್ಟಿಸಲು ಹೆಣಗಾಡುತ್ತಿದ್ದಾರೆ. ನೂರಾರು ಕೋಟಿ ಆಸ್ತಿ ಸಂಪಾದನೆ ಮಾಡಿರುವ, ಸಾವಿರಾರು ಕೋಟಿ ರಾಜ್ಯದ ಸಂಪತ್ತು ಲೂಟಿಯ ಆರೋಪಗಳನ್ನು ಎದುರಿಸುತ್ತಿರುವ ಡಿಕೆಶಿಗೆ ಮುಖ್ಯಮಂತ್ರಿ ಗದ್ದುಗೆ ಮೇಲೆ ಬಹಳಷ್ಟು ಒಲವಿದೆ. ಪದವಿ ಗಿಟ್ಟಿಸೇ ತೀರಬೇಕೆಂಬ ಛಲದ ಹೋರಾಟದಲ್ಲಿ ಡಿಕೆ ಶಿವಕುಮಾರರದ್ದು ದೈತ್ಯ ಹೋರಾಟವೆಂದರೆ ತಪ್ಪಲ್ಲ. ಅದು ಸಾಧ್ಯವಾಗಬೇಕಾದರೆ ಒಕ್ಕಲಿಗ ಸಮುದಾಯದ ಮತದಾರರೇ ಹೆಚ್ಚಿರುವ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ದಕ್ಕಿಸಿಕೊಳ್ಳಬೇಕು. ಆಗ ಮಾತ್ರ ಡಿಕೆಶಿ ಮುಖ್ಯಮಂತ್ರಿ ಗದ್ದುಗೆ ಮೇಲೆ ಹಕ್ಕೊತ್ತಾಯ ಮಂಡಿಸಲು ಬಲ.
ಇಲ್ಲದಿದ್ದರೆ ಸಿದ್ದು  ಬಲದ ಮುಂದೆ ಮಂಡಿಯೂರ ಬೇಕಾಗುತ್ತದೆ. ಜನನಾಯಕನಾಗಬೇಕಾದರೆ ಜನಸಾಮಾನ್ಯರಿಗೆ ಇವನಮ್ಮವನೆನಿಸ ಬೇಕು. ನಾಯಕನಾದವನು ಜನರನ್ನು ಹೇಗೆ ಪ್ರೀತಿಸುತ್ತಾನೋ ಜನ ಕೂಡ ನಾಯಕನನ್ನು ಪ್ರೀತಿಸಲು ಶುರು ಮಾಡುತ್ತಾರೆ. ವಿರೋದಿಗಳು ಎಷ್ಟೇ ಟೀಕಿಸಿದರೂ ಹೃದಯದಾಳದಲ್ಲಿ ಮಂದಿರ ಕಟ್ಟಿ ಪೂಜಿಸತೊಡಗುತ್ತಾರೆ. ಡಿಕೆ ಶಿವಕುಮಾರ್ ವಿರುದ್ಧ ಅದೆಷ್ಟೇ ಆರೋಪ, ಅಪವಾದಗಳಿದ್ದರೂ ಒಕ್ಕಲಿಗ ಸಮುದಾಯ ಗೌಡರ ಕುಟುಂ ಬಸ್ಥರ ನಂತರದನಾಯಕನ ಸ್ಥಾನವನ್ನು ತಕ್ಕಮಟ್ಟಿಗೆ ಡಿಕೆಶಿಗೂ ನೀಡಿದೆ.
ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಗುಣವಿರುವ ನಾಯಕರನ್ನೇ ರಾಜಕೀಯ ಪಡಸಾಲೆಯಿಂದ ದೂರ ತಳ್ಳಿರುವ ಉದಾಹರಣೆ ಇರುವಾಗ ಡಿಕೆ ಶಿವಕುಮಾರ್ ರನ್ನು ಜನ ತಿರಸ್ಕರಿಸಿದರೆ ಅತಿಶಯೋಕ್ತಿಯಲ್ಲ. ಮೊದಲು ಮತದಾರರ ಮನಸ್ಸು ಗೆಲ್ಲಬೇಕು. ನಂತರವಷ್ಟೇ ಕೋಟೆ ಗೆಲ್ಲುವ, ಕೋಟೆಗೆ ಅಧಿಪತಿಯಾಗುವ ಕನಸು ನನಸಾಗುವುದು. ಇಲ್ಲವಾದರೆ ಕೋಟೆ ಗೆದ್ದು ಒಡೆಯನಸ್ಥಾನವನ್ನು ಬೇರೊಬ್ಬರಿಗೊಪ್ಪಿಸಿ ಮೂಲೆಯಲ್ಲಿ ನಿಲ್ಲಬೇಕಾಗುತ್ತದೆ.