ದಿ ಕೇರಳ ಸ್ಟೋರಿ: ಮುಗ್ಧ ಹೆಣ್ಣುಮಕ್ಕಳ ಕರಾಳ ಕಥೆ !
ಅಭಿಮತ
ಮಾರುತೀಶ್ ಅಗ್ರಾರ
ಅದು ಆಗಸ್ಟ್ ೨೦೧೪. ಇರಾಕಿನ ಕುಗ್ರಾಮ ಕೋಚೋ ಎಂದಿನಂತೆ ಸಹಜತೆಯಿಂದಲೇ ಇತ್ತು. ಶಾಂತವಾಗಿದ್ದ ಕೋಚೋದಲ್ಲಿ ಮಕ್ಕಳು ಆಟ-ಪಾಠಗಳಲ್ಲಿ ತೊಡಗಿದ್ದರೆ, ಗಂಡಸರು-ಮಹಿಳೆಯರು ತಮ್ಮತಮ್ಮ ಕೆಲಸ-ಕಾರ್ಯಗಳಲ್ಲಿ ನಿರತರಾಗಿದ್ದರು.
ಇಂಥ ಸಮಯದಲ್ಲಿ ನೋಡನೋಡುತ್ತಿದ್ದಂತೆ ಭಯಭೀತಿಗೊಳಿಸುವಂತ ದೊಡ್ಡ ದೊಡ್ಡ ವಾಹನಗಳು ಆ ಹಳ್ಳಿಯನ್ನು ಸುತ್ತುವರಿದವು. ಕ್ಷಣಾರ್ಧದಲ್ಲಿ ಇಡೀ ಹಳ್ಳಿ ಯನ್ನು ಐಸಿಸ್ ಉಗ್ರರು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಬಿಟ್ಟಿದ್ದರು. ಕೋಚೋದ ಆ ಮುಗ್ಧ ಜನರು ಒಂದು ಕ್ಷಣ ಕಂಗಾಲಾದರು. ನಮ್ಮೂರಿನಲ್ಲಿ ಏನಾಗುತ್ತಿದೆ ಎಂದು ಆ ಮಂದಿ ಯೋಚಿಸುವಷ್ಟರಲ್ಲಿ ಐಸಿಸ್ ಉಗ್ರರ ಬಂದೂಕಿನ ಸದ್ದುಗಳು ಕಿವಿಗಪ್ಪಳಿಸಿದವು.
ಮಕ್ಕಳು, ಹೆಂಗಸರು, ವೃದ್ಧರಾದಿಯಾಗಿ ಎಲ್ಲರ ಮೇಲೂ ಗುಂಡಿನ ಮಳೆಗರೆದಿದ್ದರು ಐಸಿಸ್ ಉಗ್ರರು. ಅವರ ಅಟ್ಟಹಾಸಕ್ಕೆ ಇಡೀ ಕೋಚೋ ಗ್ರಾಮ ರಕ್ತದಲ್ಲಿ ಮುಳುಗಿತು. ನೂರಾರು ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಮಂದಿ ಗಾಯದಿಂದ ಬಿದ್ದು ಒದ್ದಾಡಿದರು. ಸಾಲದ್ದಕ್ಕೆ ಐಸಿಸ್‌ನ ಆ ರಾಕ್ಷಸರು ಹದಿಹರೆಯದ ಹೆಣ್ಣುಮಕ್ಕಳನ್ನು ಸೆರೆಹಿಡಿದು ಬಲವಂತವಾಗಿ ತಮ್ಮ ವಾಹನದೊಳಗೆ ತುಂಬಿಸಿಕೊಂಡು ಅಲ್ಲಿಂದ ಹೊರಟರು. ಪಾಪ ಆ ಹೆಣ್ಣು ಮಕ್ಕಳು ಉಗ್ರರ ಕಾಲಿಡಿದು ಬೇಡಿಕೊಂಡರು ಮಾನವೀ ಯತೆ ಇರದ ಐಸಿಸ್ ಬಂಡುಕೋರರು ತಮ್ಮ ಬೂಟುಗಾಲಿನಿಂದಲೇ ಅವರನ್ನು ಹೊದ್ದು ಗಾಡಿಯೊಳಗೆ ಎಳೆದೊಯ್ದಿದ್ದರು.
ವಿಧಿಯಿಲ್ಲದೆ ಸಾವಿರಾರು ಹೆಣ್ಣುಮಕ್ಕಳು ಉಗ್ರರ ವಶವಾದರು. ಅದರಲ್ಲಿ ೨೧ರ ಹರೆಯದ ಮುಗ್ಧ ಹೆಣ್ಣುಮಗಳು ನಾದಿಯಾ ಮುರಾದ್ ಕೂಡ ಒಬ್ಬಳು. ಭವಿಷ್ಯದಲ್ಲಿ ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡು ಬೆಳೆದಿದ್ದ ನಾದಿಯಾ ಮುರಾದ್ ಎಲ್ಲ ಹೆಣ್ಣುಮಕ್ಕಳಂತೆ ಆಕೆಗೂ ನೂರಾರು ಕನಸುಗಳಿದ್ದವು. ಶಿಕ್ಷಕಿಯಾಗಬೇಕು, ಬ್ಯೂಟಿ ಪಾರ್ಲರ್ ಇಡಬೇಕು, ಅಮ್ಮನನ್ನು ಚೆನ್ನಾಗಿನೋಡಿಕೊಳ್ಳಬೇಕು ಎಂದೆಲ್ಲಾ ಕನಸು ಕಂಡಿದ್ದಳು. ದುರಾದೃಷ್ಟವಶಾತ್ ಉಗ್ರರ ದಾಳಿಯಿಂದ ಆಕೆಯ ಕನಸುಗಳೆಲ್ಲವೂ ನುಚ್ಚು ನೂರಾಗಿದ್ದವು. ದುಃಖಕರ ಸಂಗತಿಯೆಂದರೆ ಅಂದು ನಾದಿಯಾ ಮುರಾದ್ ಉಗ್ರರ ವಶವಾದ ಮೇಲೆ ಅನುಭವಿಸಿದ ಯಾತನೆ, ಹಿಂಸೆ ಬೇರಾವ ಹೆಣ್ಣು ಮಕ್ಕಳಿಗೂ ಬರಬಾರದು.
ಕೋಚೋದಿಂದ ಹೆಣ್ಣು ಮಕ್ಕಳನ್ನು ಎಳೆದೊಯ್ದ ಉಗ್ರರು ಆ ಹೆಣ್ಣುಮಕ್ಕಳನ್ನು ಯಾವ ರೀತಿ ಬಳಸಿಕೊಂಡರು ಎನ್ನುವುದನ್ನು ಸ್ವತಃ ನಾದಿಯಾ ಮುರಾದ್ ಐಸಿಸ್ ಉಗ್ರರಿಂದ ತಪ್ಪಿಸಿಕೊಂಡು ಬಂದ ನಂತರ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಳು. ನಮ್ಮನ್ನೆಲ್ಲ ಬಂಧಿಸಿ ದೂರದ ಮೊಸುಲ್ ಗೆ ಹೊತ್ತೊಯ್ದು ಅಲ್ಲಿ ಮೂರು ದಿನ ಕೂಡಿಹಾಕಿದರು. ಅಲ್ಲಿದ್ದ ಗಂಡಸರು ನಮ್ಮ ಮೇಲೆ ಕ್ರೂರ ವ್ಯಾಘ್ರಗಳ ರೀತಿ ಎರಗಿದರು. ಕಾಮದಾಸೆ ತೀರಿಸಿಕೊಂಡರು.
ಜೊತೆಯಲ್ಲಿದ್ದ ಅನೇಕ ಸ್ನೇಹಿತೆಯರು ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಇನ್ನು ಕೆಲವರು ಭಯದಿಂದ ಚೀರಾಡುತ್ತಿದ್ದರು. ನನಗೆ ಅಸಹಾಯಕಳಂತೆ ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸಾಗಲಿಲ್ಲ. ಬದಲಾಗಿ ಅವರೇ ನನ್ನನ್ನುಕೊಲ್ಲಲಿ ಎಂದುಕೊಂಡು ಧೈರ್ಯ ತಾಳಿದೆ. ಆ ಸಮಯದಲ್ಲಿ ಒಬ್ಬ ಬಂದು ನನ್ನನ್ನು ಕರೆದುಕೊಂಡು ಹೋದ. ಆತನಿಗೆ ಆದಾಗಲೇ ಮದುವೆಯಾಗಿ ಹೆಂಡತಿ-ಮಕ್ಕಳು ಇದ್ದರು. ಈ ಸಮಯದಲ್ಲಿ ನನ್ನ ಮೇಲೆ ಒಬ್ಬೊಬ್ಬರಾಗಿ ಸಾಕಷ್ಟು ಉಗ್ರರು ಅತ್ಯಾಚಾರ ಎಸಗಿದರು!
ಒಂದು ಬಾರಿ ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದೆ. ಅದು ಸಾಧ್ಯವಾಗಲಿಲ್ಲ. ಇದಕ್ಕೆ ಶಿಕ್ಷೆಯೆಂಬಂತೆ ಆರು ಜನ ಒಟ್ಟಿಗೆ ಸೇರಿ ನನ್ನ ಮೇಲೆ ಅತ್ಯಾಚಾರ ಎಸಗಿದರು. ವಿರೋಧಿಸಲು ಮುಂದಾದೆ, ಹೊಡೆದರು. ಅವರ ಹೊಡೆತಕ್ಕೆ ಪ್ರಜ್ಞೆ ತಪ್ಪಿತು. ಅಲ್ಲಿಯವರೆಗೂ ನನ್ನ ಮೇಲೆ ನಿರಂತರ ಅತ್ಯಾಚಾರವಾಗಿತ್ತು! ಇಂಥ ಯಾತನೆಯನ್ನು ಸುಮಾರು ನೂರು ದಿನಗಳ ಕಾಲ ಅನುಭವಿಸಿದ್ದೇನೆ ಎಂದು ಅಂದು ನಾದಿಯಾ ಮುರಾದ್ ಹೇಳಿದ್ದನ್ನು ಕೇಳಿಸಿಕೊಂಡ ಅನೇಕರ ಕಣ್ಣುಗಳಲ್ಲಿ ತಮಗರಿ ವಿಲ್ಲದಂತೆ ಕಣ್ಣಾಲಿಗಳು ತುಂಬಿ ಬಂದಿದ್ದವು. ಉಗ್ರರು ತಮಗೆ ಬೇಡವಾದಾಗ ನನ್ನನ್ನು ಬೇರೆಯವರಿಗೆ ಮಾರಿದ್ದು ಇದೆ ಹಾಗೂ ನನ್ನ ದೇಹದ ಅಂಗಾಂಗಗಳನ್ನು ಸಿಗರೇಟಿನಿಂದ ಸುಟ್ಟಿದ್ದು ಇದೆ ಎಂದು ಹೇಳುವಾಗ ಆಕೆಯ ಮನಸ್ಸು ಎಷ್ಟು ನೊಂದಿರಬೇಡ.ಇಷ್ಟೇ ಅಲ್ಲ ಇದೇ ರೀತಿ ಉಗ್ರರ ಸೆರೆಯಲ್ಲಿದ್ದ ಹೆಣ್ಣು ಮಕ್ಕಳೇನಾದರೂ ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಅಂಥವರನ್ನು ಒಂದು ಕೋಣೆಯಲ್ಲಿ ಬಂಧಿಸಿ ಅಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ಬಂದು ಅವರ ಮೇಲೆ ದೌರ್ಜನ್ಯವೆಸಗಿ ಹೋಗುತ್ತಿದ್ದರು ಎಂಬುದನ್ನು ನಾದಿಯಾ ಮುರಾದ್ ತುಂಬಾ ದುಃಖಿತವಾಗಿ ಹೇಳಿದ್ದಳು.
ಐಸಿಸ್ ಉಗ್ರರ ಕ್ರೌರ್ಯಕ್ಕೆ ಅಕ್ಷರಶಃ ನಲುಗಿದ್ದ ನಾದಿಯಾ ಮುರಾದ್ ಅದ್ಹೇಗೋ ಆ ನರಕ ಪ್ರಪಂಚದಿಂದ ತಪ್ಪಿಸಿಕೊಂಡು ಬಂದು ಐಸಿಸ್ ಉಗ್ರರ ಕ್ರೂರ ಮುಖವಾಡವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಳು. ಉಗ್ರರ ಕಪಿಮುಷ್ಟಿಯಲ್ಲಿ ಸಿಕ್ಕಿ ನರಳಿದ ದಿನಗಳನ್ನು ಹಾಗೂ ಐಸಿಸ್ ಉಗ್ರರ ರಾಕ್ಷಸ ಮನಸ್ಥಿತಿಯನ್ನು ಜಗತ್ತಿನ ಜನರಿಗೆ ತಿಳಿಸುವ ಉದ್ದೇಶದಿಂದ ದಿ ಲಾಸ್ಟ್ ಗರ್ಲ್ ಎನ್ನುವ ಕೃತಿಯನ್ನು ಸಹ ರಚಿಸಿದಳು. ಜೊತೆಗೆ ಇಂಥದ್ದೊಂದು ದುರಂತ ಕಥೆಗೆ ಸಾಕ್ಷಿಯಾದ ಜಗತ್ತಿನ ಕೊನೆಯ ಹುಡುಗಿ ನಾನಾಗಿರಲಿ ಎಂದು ಭಾವುಕವಾಗಿ ಆಶಿಸಿದಳು.
ದುರ್ದೈವ ಮತಾಂಧರು ಬೀಸುತ್ತಿರುವ ಬಲೆಗೆ ಈಗಲೂ ಸಾವಿರ ಹಿಂದೂ, ಕ್ರಿಶ್ಚಿಯನ್ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಮುಗ್ಧ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಅದರಲ್ಲೂ ೨೦೧೬ರ ಆಸುಪಾಸಿನಲ್ಲಿ ಕೇರಳದಲ್ಲಿ ಸಾವಿರಾರು ಹೆಣ್ಣುಮಕ್ಕಳು ಲವ್ ಜಿಹಾದ್‌ನ ಬಲೆಗೆ ಬಿದ್ದು ತಮ್ಮ ಬದುಕನ್ನು ನರಕ ಮಾಡಿಕೊಂಡವರ ಸಂಖ್ಯೆ ದೊಡ್ಡದಿದೆ. ಅವರೆಲ್ಲರೂ ನಾದಿಯಾ ಮುರಾದ್ ಐಸಿಸ್ ಮತಾಂಧರಿಂದ ಅನುಭವಿಸಿದ ನೋವನ್ನೇ ಅನುಭವಿಸಿದವರಾಗಿದ್ದಾರೆ. ಈಗ ಇಂತಹುದೇ ಸತ್ಯ ಕಥೆಯಾಧಾರಿತ ದಿ ಕೇರಳ ಸ್ಟೋರಿ ಎನ್ನುವ ಚಿತ್ರ ಬಿಡುಗಡೆಯಾಗಿ ಈ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ.
ಅನೇಕರು ಚಿತ್ರದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಮೊಸರಲ್ಲು ಕಲ್ಲು ಹುಡುಕುವ ಹಾಗೆ ಈ ಸಿನಿಮಾ ಸಮಾಜದಲ್ಲಿನ ಒಂದು ಧರ್ಮವನ್ನು ಗುರಿಯಾಗಿಸಿ ಅವಮಾನಿಸಲಾಗಿದೆ. ಆದ್ದರಿಂದ ಈ ಸಿನಿಮಾ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಎಡೆಮಾಡಿ ಕೊಡುವ ಸಂಭವವಿರುವುದರಿಂದ ದಿ ಕೇರಳ ಸ್ಟೋರಿ ಸಿನಿಮಾದ ಪ್ರದರ್ಶನಗಳನ್ನು ರದ್ದುಗೊಳಿಸಬೇಕು ಎಂದು ಪುಂಗುತ್ತಿದ್ದಾರೆ.
ಆದರೆ ಚಿತ್ರದ ವಿರುದ್ಧ ಅಪಸ್ವರ ವ್ಯಕ್ತಪಡಿಸುತ್ತಿರುವ ಈ ಎಡಬಿಡಂಗಿಗಳಿಗೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮುಗ್ಧ ಹೆಣ್ಣುಮಕ್ಕಳ ಜೀವನವನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಹೇಗೆಲ್ಲಾ ನರಕವಾಗಿಸುತ್ತಿದ್ದಾರೆ ಎನ್ನುವ ಸಾವಿರಾರು ಪ್ರಕರಣಗಳು ಕೇರಳ ಪೊಲೀಸ್ ಠಾಣೆಗಳಲ್ಲಿಯೇ ವರದಿಯಾಗಿವೆ ಎನ್ನುವ ಅಂಶವನ್ನು ಮರೆತಿದ್ದಾರೆ. ಕೇರಳದ ನಿಮಿಷ ಎಂಬ ಹಿಂದೂ ಯುವತಿ ಹಾಗೂ ಇನ್ನಿತರ ಮುಗ್ಧ ಹೆಣ್ಣುಮಕ್ಕಳು ಮತೀಯ ಯುವಕರ ಜಾಲಕ್ಕೆ ಬಿದ್ದು ಹೇಗೆಲ್ಲಾ ಹಿಂಸೆ ಅನುಭವಿಸಿದ್ದಾರೆ ಎಂಬುದನ್ನು ಕೇರಳದಲ್ಲಿನ ಲವ್ ಜಿಹಾದ್ ಪ್ರಕರಣಗಳು ಈಗಾಗಲೇ ಸಮಾಜಕ್ಕೆ ತಿಳಿಸಿಕೊಟ್ಟಿವೆ. ಅಂಥದ್ದೊಂದು ಪ್ರಕರಣದ ನೈಜ ಘಟನೆಯನ್ನಿಟ್ಟುಕೊಂಡು ಹೆಣೆದಿರುವ ಕಥೆಯೇ ದಿ ಕೇರಳ ಸ್ಟೋರಿ.
ಇಸ್ಲಾಮಿಕ್ ಮೂಲಭೂತವಾದಿಗಳು ತಮ್ಮ ಯುವಕರ ಮೂಲಕ ಯಾವ ರೀತಿ ಹೆಣ್ಣುಮಕ್ಕಳ ಬ್ರೈನ್ ವಾಶ್ ಮಾಡಿ ತಮ್ಮ ಕೆಲಸ-ಕಾರ್ಯಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ ಹಾಗೂ ಅಂಥವರ ಸಹವಾಸಕ್ಕೆ ಸಿಕ್ಕ ಮುಗ್ಧ ಹೆಣ್ಣುಮಕ್ಕಳು ನಂತರ ಅವರಿಂದ ಯಾವ ರೀತಿ ಚಿತ್ರಹಿಂಸೆ ಅನುಭವಿಸುತ್ತಾರೆ ಎನ್ನುವುದನ್ನು ನಿರ್ದೇಶಕ ಸಂದಿಪ್ತೋ ಸೇನ್ ತುಂಬಾ ಹಸಿ ಹಸಿಯಾಗಿ ಚಿತ್ರದಲ್ಲಿತೋರಿಸಿದ್ದಾರೆ.
ಪ್ರೀತಿಸಿದ ಹುಡುಗನೇ ತನ್ನ ಹುಡುಗಿಯನ್ನು ನೀನು ಇಲ್ಲಿ ಸಬಾಯಾಳಾಗಿ (ಲೈಂಗಿಕ ಗುಲಾಮಗಿರಿಗೆ) ಬಂದಿದ್ದೀಯಾ ಎಂದು ಹೇಳಿದಾಗ ಆಕೆಯ ಮನಸ್ಸು ಅದ್ಯಾವ ರೀತಿ ಒದ್ದಾಡಿರಬೇಡ? ಆ ಸಮಯದಲ್ಲಿ ಆಕೆ ಅದೆಷ್ಟು ಸಂಕಟ ಪಟ್ಟಿರಬಹುದು ಊಹಿಸಿ! ತಾನು ಪ್ರೀತಿಸಿ ಮದುವೆಯಾದ ಹುಡುಗಿಯನ್ನು ಬೇರೊಬ್ಬರ ಮಂಚಕ್ಕೆ ಮಲಗಲು ಆತನೇ ಕಳುಹಿಸುತ್ತಾನೆ ಎಂದರೆ ಆತ ಮನುಷ್ಯನೇ? ಇದೆಲ್ಲವೂ ವಂಚನೆಯಿಂದ ಐಸಿಸ್ ಉಗ್ರರ ಪಾಲಾಗಿರುವ ಹೆಣ್ಣುಮಕ್ಕಳು ಅನುಭವಿಸುತ್ತಿರುವ ನಿತ್ಯದ ಯಾತನೆ.
ಮತಾಂಧ ಮೂಲಭೂತವಾದಿಗಳು ನಡೆಸುತ್ತಿರುವ ಇಂಥ ವಿದ್ರೋಹದ ಘಟನೆಗಳನ್ನು ಚಿತ್ರದಲ್ಲಿ ತೋರಿ ಸಮಾಜವನ್ನು ಎಚ್ಚರಿಸುವ ಸಂದಿಪ್ತೋ ಸೇನ್ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಇಂಥ ದುರ್ಘಟನೆಗಳನ್ನು ಚಿತ್ರ ವಿರೋಧಿಸುತ್ತಿರುವವರು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ ಎನ್ನುವುದಾದರೆ ಅವರೆಂಥ ಅಯೋಗ್ಯ ರಿರಬೇಕು? ಐಸಿಸ್ ನಂತಹ ಮತಾಂಧ ಮೂಲಭೂತವಾದಿ ಉಗ್ರರು ಇಡೀ ಜಗತ್ತನ್ನು ದಾರ್-ಉಲ್-ಇಸ್ಲಾಂ ಮಾಡುವ ಅಜೆಂಡಾವನ್ನು ರೂಪಿಸಿ ಅದಕ್ಕಾಗಿ ತಮ್ಮ ಸಮುದಾಯದ ಯುವ ಕರ ತಲೆಗೆ ಧರ್ಮದ ನಶೆಯನ್ನು ತುಂಬಿ ಆ ಮೂಲಕಇಸ್ಲಾಮೇತರ ಹೆಣ್ಣುಮಕ್ಕಳನ್ನು ಇಸ್ಲಾಂಗೆ ಮತಾಂತರಿಸುವುದಕ್ಕಾಗಿ ಪ್ರೀತಿ-ಪ್ರೇಮದ ನಾಟಕವಾಡಿ ಹೇಗೆಲ್ಲಾ ಯಾಮಾರಿಸು ತ್ತಿದ್ದಾರೆ ಎನ್ನುವುದನ್ನು ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಅದನ್ನು ನೋಡಿದಾಗ ನಮ್ಮ ಕಣ್ಣುಗಳು ಒದ್ದೆಯಾಗದೆ ಇರದು.
ಕೇರಳದಲ್ಲಿ ಲವ್ ಜಿಹಾದ್‌ಗೆ ಬಲಿಯಾಗಿ ಅದೆಷ್ಟೋ ಹೆಣ್ಣುಮಕ್ಕಳು ಜೀವತೆತ್ತಿದ್ದಾರೆ. ಅಂದಹಾಗೆ ಲವ್ ಜಿಹಾದ್ ಎಂದರೆ ಮುಸ್ಲಿಂ ಪುರುಷನು ಕೇವಲ ಮತೀಯ ಕಾರಣಕ್ಕಾಗಿ ಮುಸ್ಲಿಮೇತರ ಯುವತಿಯರನ್ನು ಪ್ರೀತಿಸುವುದೇ ಲವ್ ಜಿಹಾದ್‌ನ ಅಜೆಂಡಾ. ಹಾಗಾಗಿ ಲವ್ ಜಿಹಾದ್ ಎಂದರೆ ಧರ್ಮಕ್ಕಾಗಿ ನಡೆಯುವ ಪ್ರೀತಿಯ ನಾಟಕವೇ ಹೊರತು ನಿಜವಾದ ಪ್ರೇಮವಲ್ಲ. ಹಾಗಾಗಿ ಇದರಿಂದ ಅದೆಷ್ಟೋ ಮುಸ್ಲಿಂಯೇತರ ಹೆಣ್ಣುಮಕ್ಕಳ ಬದುಕು ಮೂರಾಬಟ್ಟೆಯಾಗಿದೆ. ಮೂಲಭೂತವಾದಿ ಇಸ್ಲಾಂ ನಾಯಕರುಗಳು ತಮ್ಮ ಧರ್ಮದ ಯುವಕರ ತಲೆಗೆ ಧರ್ಮದ ಅಜೆಂಡಾ ತುಂಬಿ, ತಮಗಿಷ್ಟ ಬಂದ ಕೆಲಸ-ಕಾರ್ಯಗಳಿಗೆ ಅಂಥ ಯುವಕರನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಕದಡುತ್ತಿರುವುದು ಈಗಾಗಲೇ ಬಹಿರಂಗಗೊಂಡಿದೆ.
ಇಸ್ಲಾಮಿನ ಮೂಲಭೂತವಾದಿಗಳು ತುಂಬಿದ ಧರ್ಮದ ನಶೆ ಮುಸ್ಲಿಂ ಯುವಕರ ತಲೆ ಹೊಕ್ಕಿ ಲವ್ ಜಿಹಾದ್ ಎಂಬ ಹೆಸರಿನಲ್ಲಿ ಅದು ಸಮಾಜದಲ್ಲಿ ಅಶಾಂತಿ ಹಾಗೂ ಕೋಮು ಸಂಘರ್ಷ ಸೃಷ್ಟಿಗೆ ಕಾರಣವಾದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಆಗೆಲ್ಲ ಮೌನವಾಗಿದ್ದ ಪ್ರಗತಿಪರರು, ಸೋಕಾಲ್ಡ್ ನಾಯಕರು, ಕಮ್ಯುನಿಸ್ಟರು ಈಗ ಚಿತ್ರದ ವಿರುದ್ಧ ಸಮರಕ್ಕೆ ನಿಂತಿರುವುದು ದೌರ್ಭಾಗ್ಯವೇ ಸರಿ.