ದೇಶದ ಬುಲೆಟ್ ಟ್ರೈನ್ ಕನಸು ನನಸಾಗುತ್ತಿದೆ
ವಿಶ್ಲೇಷಣೆ
ಪ್ರಕಾಶ್ ಶೇಷರಾಘವಾಚಾರ್‌
ಬದಲಾಗುತ್ತಿರುವ ಭಾರತದ ಚಿತ್ರಣಕ್ಕೆ ಮೆರಗು ಕೊಡುವ ಆಧುನಿಕ ಭಾರತದ ಚಿಹ್ನೆಯಾಗುವ ಬುಲೆಟ್ ಟ್ರೈನ್ ಮುಂದುವರಿದ ದೇಶದ ಪ್ರಗತಿಯನ್ನು ಬಿಂಬಿಸುತ್ತದೆ. ಭಾರತದಲ್ಲಿ ಕೈಗೊಳ್ಳುತ್ತಿರುವ ಹಲವಾರು ಮೂಲಭೂತಸೌಕರ್ಯ ಯೋಜನೆಗಳು ದೇಶದ ಚಿತ್ರಣವನ್ನು ಬದಲಾಯಿಸುತ್ತಿದೆ.
ಭಾರತದ ಅಭಿವೃದ್ಧಿಯ ವೇಗವು ಸೆಮಿ ಹೈಸ್ಪೀಡ್ ರೈಲಿನಿಂದ ಹೈಸ್ಪೀಡ್ ರೈಲಿನತನಕ ತಲುಪಿದೆ. ಅರವತ್ತೈದು ವರ್ಷಗಳ ಕಾಲ ಪ್ಯಾಸೆಂಜರ್ ರೈಲಿನ ವೇಗದಲ್ಲಿ ಸಾಗುತ್ತಿದ್ದ ಪ್ರಗತಿಯು ೨೦೧೪ರ ನಂತರ ಹೈಸ್ಪೀಡ್ ವೇಗವನ್ನು ಪಡೆದುಕೊಂಡು ಮೋದಿ ವಿರೋಧಿ ಗಳ ಮನಸ್ಸು ಮತ್ತು ಬುದ್ಧಿ ಎರಡನ್ನು ವಿಚಲಿತಗೊಳಿಸಿದೆ.
೨೦೧೧ ರಲ್ಲಿ ಭಾರತೀಯ ರೈಲ್ವೆ ಸುಧಾರಣೆಯ ಕುರಿತು ವರದಿ ನೀಡಲು ನೇಮಿಸಿದ್ದ ಸ್ಯಾಮ್ ಪಿಟ್ರೋಡಾ ಸಮಿತಿಯು ತನ್ನ ವರದಿಯಲ್ಲಿ ಭಾರತೀಯ ರೈಲ್ವೆಯಲ್ಲಿ ಸುಧಾರಣೆ ತರಲು ಹಲವಾರು ಅಂಶಗಳನ್ನು ಶಿಫಾರಸು ಮಾಡಿತ್ತು. ಅದರಲ್ಲಿ ಪ್ರಮುಖ ವಾಗಿ ಮುಂಬಯಿ ಮತ್ತು ಅಹಮದಾಬಾದ್ ನಡುವೆ ೩೫೦ ಕಿಮೀ ವೇಗದಲ್ಲಿ ಸಂಚರಿಸುವ ಹೈಸ್ಪೀಡ್ ರೈಲು ಆರಂಭಿಸಲೂ ಶಿಫಾರಸು ಸೇರಿತ್ತು.
ಯುಪಿಎ ಸರ್ಕಾರದಲ್ಲಿ ಸ್ಯಾಮ್ ಪಿಟ್ರೋಡಾ ಮಾಡಿದ ಯಾವುದೇ ಸಲಹೆಗಳನ್ನು ಅನುಷ್ಠಾನ ಮಾಡಲು ಸಂಪನ್ಮೂಲ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಾಧ್ಯವಾಗಲಿಲ್ಲ. ೨೦೧೪ ರಲ್ಲಿ ಮೋದಿ ಸರ್ಕಾರವು ಅಧಿಕಾರ ವಹಿಸಿಕೊಂಡ ತರುವಾಯ ಧೂಳು ತಿನ್ನುತ್ತಿದ್ದ ವರದಿಯನ್ನು ಹೊರ ತೆಗೆದು ಅದರಲ್ಲಿನ ಅನೇಕ ಉಪಯುಕ್ತ ಸಲಹೆಗಳಿಗೆ ಜೀವ ನೀಡಿತು. ಕಳೆದ ಒಂಬತ್ತು ವರ್ಷದಲ್ಲಿ ಭಾರತೀಯ ರೈಲ್ವೆಯ ಚಹರೆ ಮತ್ತು ವರ್ಚಸ್ಸು ಬದಲಾಗಿರುವುದನ್ನು ಬಿಜೆಪಿ ವಿರೋಧಿಗಳು ಕೂಡ ಒಪ್ಪುತ್ತಾರೆ.
ಭಾರತೀಯ ರೈಲುಗಳು ಅಂತಿಮವಾಗಿ ತನ್ನ ಏಕತಾನತೆಯನ್ನು ತೊರೆದು ಬದಲಾವಣೆಗೆ ಮೈಯೊಡ್ಡಿದೆ. ೧೯೯೦ರಲ್ಲಿ ಚೀನಾ ರೈಲ್ವೆ ಪ್ರಗತಿಯಲ್ಲಿ ನಮಗಿಂತ ಹತ್ತಾರು ವರ್ಷಗಳು ಹಿಂದೆ ಇತ್ತು. ಆದರೆ ಅತಿ ವೇಗದಲ್ಲಿ ನಮ್ಮನ್ನು ಹಿಂದಕ್ಕೆ ತಳ್ಳಿ ಅವರು ಮುಂದೆ ಹೋದರು. ೨೦೦೪ ರಲ್ಲಿ ಚೀನಾ ಬುಲೆಟ್ ಟ್ರೈನ್ ಯುಗಕ್ಕೆ ತಲುಪಿತ್ತು. ಆಗ ನಾವು ಇನ್ನೂ ಉಗಿ ಬಂಡಿಯು ಗದಲ್ಲಿದ್ದವು. ಇಂದು ಚೀನಾದಲ್ಲಿ ೪೨,೦೦೦ ಕಿಮೀ ಉದ್ದದ ಹೈಸ್ಪೀಡ್ ರೈಲಿನ ಜಾಲವು ನಿರ್ಮಾಣವಾಗಿದೆ. ರೈಲಿನ ವೇಗವು ೨೦೦ ಕಿಮೀ ನಿಂದ ಮೂನ್ನೂರು ಕಿಮೀ ವೇಗ ತಲುಪಿದೆ. ಮತ್ತು ೪೩೦ ಕಿಮೀ ವೇಗದಲ್ಲಿ ಸಂಚರಿಸುವ ವಿಶ್ವದ ಅತಿವೇಗದ ರೈಲುಚೀನಾದಲ್ಲಿದೆ.
ಇದೀಗ ಅವರ ಗುರಿಯು ೨೦೩೫ರೊಳಗೆ ೭೦,೦೦೦ ಕಿಮೀ ಹೈಸ್ಪೀಡ್ ರೈಲಿನ ನಿರ್ಮಾಣ ಮಾಡುವುದಾಗಿದೆ. ಸದ್ಯ, ಮ್ಯಾಗ್ಲಿವ್ ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಗಂಟೆಗೆ ೬೦೦ ಕಿಮೀ ವೇಗದ ರೈಲಿನ ಪ್ರಯೋಗಾತ್ಮಕ ಸಂಚಾರ ನಡೆಸುತ್ತಿದೆ.ಅಯಸ್ಕಾಂತೀಯ ತೇಲುವಿಕೆಯನ್ನು (ಮ್ಯಾಗ್ನಟಿಕ್ ಲಿವಿಟೇಶನ್) ಬಳಸಿಕೊಂಡು ಸಂಚರಿಸುವ ರೈಲಿಗೆ ಮ್ಯಾಗ್ಲಿವ್ ರೈಲು ಎಂದು ಕರೆಯುತ್ತಾರೆ. ೧೦ ಸೆಮೀ ರೈಲು ಹಳಿಗಳ ಮೇಲೆದ್ದು ಸಾಗುವ ಈ ರೈಲು ಅತ್ಯಂತ ವೇಗದಿಂದ ಸಂಚರಿಸುತ್ತದೆ. ಚೀನಾಅಧ್ಯಕ್ಷರಾಗಿದ್ದ ಡೆಂಗ್ ಕ್ಸಿಯಾಪಿಂಗ್ ಅವರು ಜಪಾನ್ ಹೈಸ್ಪೀಡ್ ರೈಲು ಕಂಡ ನಂತರ ಅದನ್ನು ಚೀನಾದಲ್ಲಿ ತರಲು ಯ ಶಸ್ವಿಯಾದರು.
೯೦ರ ದಶಕದಲ್ಲಿ ಆರಂಭವಾದ ಹೈಸ್ಪೀಡ್ ಯೋಜನೆಯ ಕನಸು ೨೦೦೪ರಿಂದ ಜಾರಿಗೆ ಬರಲು ಆರಂಭವಾಗಿ ಇಂದು ವಿಶ್ವದಲ್ಲೆ ಅತಿ ಉದ್ದದ ಜಾಲ ಹೊಂದಿದೆ. ಭಾರತಕ್ಕೆ ಹೈಸ್ಪೀಡ್ ರೈಲು ಯೋಜನೆಯನ್ನು ಜಾರಿಗೆ ತರಲು ೨೦೧೩ರಿಂದಲೇ ಪ್ರಯತ್ನಆರಂಭವಾಯಿತು. ಭಾರತ ಮತ್ತು ಜಪಾನ್ ನಡುವೆ ಯೋಜನೆಯ ಕಾರ್ಯ ಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ಒಪ್ಪಂದವಾಗುತ್ತದೆ. ೨೦೧೪ ರಲ್ಲಿ ಮೋದಿಯವರು ಪ್ರಧಾನಿಯಾದ ತರುವಾಯ ಹೈಸ್ಪೀಡ್ ಯೋಜನೆಯ ಜಾರಿಗೆ ಜಪಾನ್ ಸರ್ಕಾರದ ಜೊತೆ ಒಪ್ಪಂದಕ್ಕೆ ಅಂಕಿತ ಹಾಕುತ್ತಾರೆ.
ಇದರನ್ವಯ ಸ್ವಾತಂತ್ರದ ೭೫ನೇ ವರ್ಷವಾದ ೨೦೨೨ಕ್ಕೆ ಮೊದಲ ಸಂಚಾರದ ಗುರಿಯನ್ನು ಹೊಂದಿತ್ತು. ಮುಂಬಯಿ ಮತ್ತುಅಹಮದಾಬಾದ್ ನಡುವೆ ೫೦೮ ಕಿಮೀ ದೂರದ ದೇಶದ ಮೊದಲ ಹೈಸ್ಪೀಡ್ ರೈಲು ಸಂಚರಿಸುವ ಯೋಜನೆ ಸಿದ್ಧವಾಗುತ್ತದೆ. ಇದರ ಒಟ್ಟು ಅಂದಾಜು ವೆಚ್ಚವು ೧.೧ಲಕ್ಷ ಕೋಟಿ. ಈ ಪೈಕಿ ೨೪ ಜೋಡಿ ರೈಲುಗಳನ್ನು ಸರಬರಾಜು ಮಾಡಲು ಜಪಾನ್ ಸರ್ಕಾರವು ಶೇ. ೮೧ರಷ್ಟು ವೆಚ್ಚವನ್ನು, ೫೦ ವರ್ಷಗಳ ಅವಧಿಗೆ ಶೇ. ೦.೧ ಬಡ್ಡಿಯಲ್ಲಿ ಸಾಲವನ್ನು ನೀಡಲು ಒಪ್ಪುತ್ತದೆ.
ಹೈಸ್ಪೀಡ್ ರೈಲು ಗುಜರಾತಿನಲ್ಲಿ ೩೪೮ ಮಹಾರಾಷ್ಟ್ರದಲ್ಲಿ ೧೫೫ ಕಿಮೀ ಮತ್ತು ದಾದ್ರ ಮತ್ತು ನಗರ್ ಹವೇಲಿಯಲ್ಲಿ ೪.೩ ಕಿಮೀ ಸಂಚರಿಸಲಿದೆ. ಇಡಿ ಯೋಜನೆಯು ಎತ್ತರಿಸಿದ ಕಾರಿಡಾರ್ ಮೇಲೆ ಸಂಚರಿಸುವಂತೆ ರೂಪಿಸಲಾಗಿದೆ ಹಾಗೂ ಮುಂಬಯಿಯಲ್ಲಿ ೨೧ ಕಿಮೀ ಸುರಂಗ ಮಾರ್ಗ ದಲ್ಲಿ ಮತ್ತು ಅದರಲ್ಲಿ ೩ ಕಿಮೀ ಸಮುದ್ರದೊಳಗೆ ಸಂಚರಿಸುವುದು. ಬುಲೆಟ್ ಟ್ರೈನ್ ಯೋಜನೆ ಯನ್ನು ಜಪಾನ್‌ನ ಇ-೫ ಶಿಂಕನ್‌ಸೆನ್ ತಂತ್ರಜ್ಞಾನವನ್ನು ಆಧರಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರೈಲು ಸ್ಟಾಂಡರ್ಡ್ ಗೇಜ್‌ನಲ್ಲಿ ಓಡುವುದು.
ಒಟ್ಟು ಹನ್ನೆರೆಡು ನಿಲ್ದಾಣದಲ್ಲಿ ನಾಲ್ಕು ಮಹಾರಾಷ್ಟ್ರ ಎಂಟು ಗುಜರಾತಿನಲ್ಲಿ ಇರುವುದು. ೭೩೧ ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿರುವ ಬುಲೆಟ್ ಟ್ರೈನ್ ಗರಿಷ್ಠ ವೇಗವು ೩೫೦ ಕಿಮೀ. ಆದರೆ ಸಂಚರಿಸುವ ವೇಗ ಮಾತ್ರ ೩೨೦ ಕಿಮೀ. ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೇ ೨೦೧೭ ರಲ್ಲಿ ಯೋಜನೆಯ ಆರಂಭಕ್ಕೆ ಶಿಲಾನ್ಯಾಸ ಮಾಡುತ್ತಾರೆ. ೨೦೧೯ರಲ್ಲಿ ಮಹಾರಾಷ್ಟ್ರ ದಲ್ಲಿ ಸರ್ಕಾರ ಬದಲಾಗಿ ಶಿವಸೇನೆಯು ಕಾಂಗ್ರೆಸ್ ಮತ್ತು ಎನ್ ಸಿಪಿಯೊಂದಿಗೆ ಸೇರಿ ಸರ್ಕಾರವನ್ನುರಚನೆ ಮಾಡುತ್ತದೆ.
ಯೋಜನೆಯ ಲಾಭವು ಅಹಮದಾಬಾದ್‌ಗೆ ಹೆಚ್ಚಾಗುವುದು ಮತ್ತು ಹಲವಾರು ಕಂಪನಿಗಳು ಮುಂಬಯಿ ತೊರೆದು ಅಹಮದಾ ಬಾದ್‌ಗೆ ಸ್ಥಳಾಂತರವಾಗುವುದೆಂಬ ಅನುಮಾನದಿಂದ ಬುಲೆಟ್ ಟ್ರೈನ್ ಯೋಜನೆಗೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸಹಕಾರ ನೀಡುವುದಿಲ್ಲ. ಇದರಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಹಿನ್ನಡೆಯಾಗುವುದು. ಗುಜರಾತಿನಲ್ಲಿ ಶೇ. ೮೫ ರಷ್ಟು ಭೂ ಸ್ವಾಧೀನವಾ ದರೂ ಮಹಾರಾಷ್ಟ್ರದಲ್ಲಿ ಶೇ. ೨೦ ರಷ್ಟು ಕೂಡ ಆಗಿರುವುದಿಲ್ಲ. ೨೦೨೦ ರಲ್ಲಿ ೪೩೨ ಹೆಕ್ಟೇರ್ ಭೂ ಸ್ವಾಧೀನ ಮಾಡಬೇಕಾಗಿತ್ತು. ಆದರೆ ಕೇವಲ ೧೦೧ ಹೆಕ್ಟೇರ್ ಭೂಸ್ವಾಧೀನವಾಗಿರುತ್ತದೆ.
ಗುಜರಾತಿನಲ್ಲಿ ಶೇ. ೯೪ರಷ್ಟು ಮತ್ತು ದಾದ್ರ ಮತ್ತು ನಗರ ಹವೇಲಿಯಲ್ಲಿ ನೂರರಷ್ಟು ಭೂಸ್ವಾಧೀನವಾಗಿರುತ್ತದೆ. ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮವು ಮಹಾರಾಷ್ಟ್ರದಲ್ಲಿ ಸಂಪೂರ್ಣ ಭೂಸ್ವಾಧೀನಕ್ಕೆ ಕಾಯದೆ ಗುಜರಾತಿನ ಭಾಗದಲ್ಲಿ ಕಾಮಗಾರಿನಿರ್ಮಾಣ ಮಾಡಲು ತೀರ್ಮಾನಿಸಿ ಕೆಲಸ ಪ್ರಾರಂಭಿಸುತ್ತದೆ. ಇದರ ಪರಿಣಾಮವಾಗಿ ಗುಜರಾತಿನ ಶೇ. ೧೦೦ ರಷ್ಟು ಕಾಮಗಾರಿಗೆಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಭೂಸ್ವಾಧೀನದಲ್ಲಿ ವಿಳಂಬ ಮತ್ತು ಕೋವಿಡ್ ಸಂಕಟದಿಂದ ೨೦೨೨ ರಲ್ಲಿ ಬುಲೆಟ್ ಟ್ರೈನ್ ಸಂಚಾರ ಆರಂಭಿಸಲು ಸಾಧ್ಯವಾಗದ ಕಾರಣ ಇದರ ಗಡವು ೨೦೨೬ಕ್ಕೆ ಮುಂದೂಡಲಾಗುವುದು.
೨೦೨೨ ಜೂನ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಸರ್ಕಾರ ಬದಲಾಗಿ ಬಿಜೆಪಿ ಅಧಿಕಾರಕ್ಕೆ ಬಂದ ತರುವಾಯ ಬುಲೆಟ್ ವೇಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದು ಮಹಾರಾಷ್ಟ್ರದ ಭಾಗದಲ್ಲಿಯೂ ಕಾಮಗಾರಿಗೆ ಚಾಲನೆ ದೊರೆಯುತ್ತದೆ. ಬಾಂದ್ರ-ಕುರ್ಲಾ ಮತ್ತು ಶಿಲ್ಪತಾ ಕಲ್ಯಾಣ ಸಮೀಪ ನಡುವೆ ೨೧ ಕಿಮೀ ಸುರಂಗ ಮಾರ್ಗದಲ್ಲಿ ಬುಲೆಟ್ ರೈಲು ಕಾಮಗಾರಿಯು ಅತಿಮುಖ್ಯವಾದ್ದು. ದೇಶದಲ್ಲೆ ಮೊದಲ ಬಾರಿಗೆ ಮೂರು ಕಿಮೀ ಉದ್ದ ಸಮುದ್ರದಡಿಯಲ್ಲಿ ರೈಲ್ವೆ ಟ್ರಾಕ್ ನಿರ್ಮಾಣವಾಗಲಿದೆ.
ಆ-ಕಾನ್ಸ್ ಇನ್ ಸ್ಟ್ರಕ್ಚರ್ ಸಂಸ್ಥೆಯು ಭೂಮಿ ಮಟ್ಟದಿಂದ ೨೫ ರಿಂದ ೬೫ ಮೀಟರ್ ಕೆಳಗೆ ಸುರಂಗ ಕೊರೆಯುವ ಕೆಲಸಕ್ಕೆ ಚಾಲನೆ ನೀಡಿದೆ. ಬುಲೆಟ್ ಟ್ರೈನ್ ಟ್ರಾಕ್ ಅಳವಡಿಸುವ ಮುನ್ನ ಭಾರತದ ಒಂದು ಸಾವಿರ ಇಂಜಿನಿಯರ್‌ಗಳಿಗೆ ಜಪಾನ್ ತರಬೇತಿ ನೀಡಲಿದೆ. ಜಪಾನಿನ ಟ್ರ್ಯಾಕ್ ವ್ಯವಸ್ಥೆಯು ವಿಶ್ವದಲ್ಲೇ ವಿಶಿಷ್ಟವಾಗಿದೆ ಮತ್ತು ತಂತ್ರಜ್ಞರಿಗೆ ಅದನ್ನು ಹಾಕಲುಹೆಚ್ಚಿನ ಮಟ್ಟದ ಕೌಶಲ್ಯದ ಅಗತ್ಯವಿರುತ್ತದೆ. ಹೆಚ್ಚಿನ ಮಟ್ಟದ ನಿಖರತೆಯಿಂದ ಅಳವಡಿಸಬೇಕಾಗಿರುವುದರಿಂದ ಜಪಾನಿನ ಇಪ್ಪತ್ತು ನುರಿತ ತಜ್ಞರು ಭಾರತೀಯ ಇಂಜಿನಿಯರ್‌ಗಳಿಗೆ ತೀವ್ರವಾದ ತರಬೇತಿಯನ್ನು ನೀಡಲಿದ್ದಾರೆ.
ಕಾಮಗಾರಿಗೆ ವೇಗ ನೀಡಲು ೯೭೫ ಟನ್ ತೂಕದ ಪ್ರೀಕ್ಯಾಸ್ಟಡ್ ಕ್ರಾಂಕ್ರೀಟ್ ಬ್ಲಾಕ್‌ಗಳನ್ನು ತಯಾರಿಸಿ ಅವುಗಳನ್ನು ಪಿಲ್ಲರ್‌ಗಳ ಮೇಲೆ ಅಳವಡಿಸುವ ದೇಶೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಮೊದಲೇ ಸಿದ್ಧಪಡಿಸಿದ ಪ್ರೀಕ್ಯಾಸ್ಟಡ್ ಸ್ಲಾಬ್ ಅಳವಡಿಕೆಯ ತಂತ್ರಜ್ಞಾ ನವನ್ನು ಭಾರತದಲ್ಲಿಯೇ ಆವಿಷ್ಕರಿಸಲಾಗಿದೆ.
ವಿಶೇಷವೆಂದರೆ ಈ ತಂತ್ರಜ್ಞಾನದ ಬಗ್ಗೆ ವಿದೇಶಿ ಕಂಪನಿಗಳು ಇದೀಗ ಆಸಕ್ತಿ ತೋರಿವೆ ಎಂಬುದು ಹೆಮ್ಮೆಯ ಸಂಗತಿ. ಬುಲೆಟ್ ಟ್ರೈನ್ ಯೋಜನೆಯ ಕಾಮಗಾರಿಯಲ್ಲಿ ಶೇ.೨೬.೩ ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಗುಜರಾತಿನಲ್ಲಿ ಶೇ. ೩೨.೯೩ ಹಾಗೂ ಮಹಾರಾಷ್ಟ್ರದಲ್ಲಿ ಶೇ.೧೩.೭೨ ಕಾಮಗಾರಿಯು ಮುಗಿದಿದೆ. ಸದ್ಯದ ಪ್ರಗತಿಯನ್ನು ಗಮನಿಸಿದರೆ ಬುಲೆಟ್ ಟ್ರೈನ್ ಸಂಚಾರವು ೨೦೨೮ಕ್ಕೆ ಸಾಧ್ಯವಾಗುವ ನಿರೀಕ್ಷೆ ಇರುವುದು.
ಭಾರತದಲ್ಲಿ ಬುಲೆಟ್ ಟ್ರೈನ್ ಯೋಜನೆಯ ಬಗ್ಗೆ ಕುಹಕವಾಡುವವರಿಗೇನು ಕಡಿಮೆ ಇಲ್ಲ. ಮೋದಿಯವರು ಯಾವುದೇ ಯೋಜನೆಯನ್ನು ಕೈಗೊಂಡರು ಅದರ ಬಗ್ಗೆ ಕೊಂಕು ಅಥವಾ ಅಪಪ್ರಚಾರ ಮಾಡುವ ಕಾಯಕವನ್ನು ಒಂದು ವರ್ಗದ ಜನರು ಸದಾ ಕೈಗೊಳ್ಳುವುದು ಸಾಮಾನ್ಯವಾಗಿದೆ. ರಾಹುಲ್ ಗಾಂಧಿಯವರು ಬುಲೆಟ್ ಟ್ರೈನ್ ಮುಂದೆ ಹೋಗುತ್ತಿಲ್ಲ, ಕೇವಲ ಅದರಅಂದದ ಪೋಸ್ಟರ್ ನೋಡಬಹುದು ಎಂದು ವ್ಯಂಗ್ಯವಾಡಿದರೆ, ಲೋಕಸಭೆಯಲ್ಲಿ ಖರ್ಗೆಯವರು ‘ಬುಲೆಟ್ ಟ್ರೈನ್ ದುಬಾರಿಯಾದ ಯೋಜನೆ’ ಎಂದು ಜರಿಯುತ್ತಾರೆ.
೨೦೧೩ರಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಜಪಾನ್ ಪ್ರಧಾನಿ ಶಿಂಜೊ ಅಬೆಯೊಂದಿಗೆ ಬುಲೆಟ್ ಟ್ರೈನ್ ಭಾರತಕ್ಕೆ ತರಲು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದಾಗ ಕಾಂಗ್ರೆಸ್ ನಾಯಕರು ಬಾಯಿಗೆ ಹೊಲಿಗೆ ಹಾಕಿಕೊಂಡಿರುತ್ತಾರೆ. ಬುಲೆಟ್ ಟ್ರೈನ್ ವಿರೋಧಿಸುವ ಮನಸ್ಥಿತಿಯು ಕೇವಲ ಅಸೂಯಾಪರತೆಯಿಂದಲೇ ಹೊರತು ಮತ್ತಾವ ಸೂಕ್ತ ಕಾರಣ ಅದಕ್ಕಿಲ್ಲ.
ಬದಲಾಗುತ್ತಿರುವ ಭಾರತದ ಚಿತ್ರಣಕ್ಕೆ ಮೆರಗು ಕೊಡುವ ಆಧುನಿಕ ಭಾರತದ ಚಿಹ್ನೆಯಾಗುವ ಬುಲೆಟ್ ಟ್ರೈನ್ ಮುಂದುವರಿದ ದೇಶದ ಪ್ರಗತಿಯನ್ನು ಬಿಂಬಿಸುತ್ತದೆ. ಭಾರತದಲ್ಲಿ ಕೈಗೊಳ್ಳುತ್ತಿರುವ ಹಲವಾರು ಮೂಲಭೂತ ಸೌಕರ್ಯ ಯೋಜನೆಗಳು ದೇಶದ ಚಿತ್ರಣವನ್ನು ಬದಲಾಯಿಸುತ್ತಿದೆ. ಅತ್ಯುತ್ತಮ ಎಕ್ಸ್‌ಪ್ರೆಸ್ ಹೈವೇಗಳು, ಹೊಸ ವಿಮಾನ ನಿಲ್ದಾಣಗಳು, ವಿಮಾನ ನಿಲ್ದಾಣದೊಂದಿಗೆ ಪೈಪೋಟಿ ಮಾಡುವ ನವೀಕೃತ ರೈಲ್ವೆ ನಿಲ್ದಾಣಗಳು, ಇಂಧನ ಉಳಿಸುವ ಎಲೆಕ್ಟ್ರಿಕ್ ಬಸ್‌ಗಳ ಸೇವೆ -ಹೀಗೆ ಹತ್ತಾರು ವಿನೂತನ ಪರಿಕಲ್ಪನೆಗಳಿಂದ ಭಾರತ ಬದಲಾಗುತ್ತಿದೆ. ಇದೀಗ ಬುಲೆಟ್ ಟ್ರೈನ್ ಯೋಜನೆಯು ಆ ಎಲ್ಲ ಬದಲಾವಣೆ ಗಳಿಗೆ ಕಳಶಪ್ರಾಯವಾಗಿದೆ ಎಂಬುದನ್ನು ಯಾರೂ ಅಲ್ಲಗೆಳೆಯಲಾಗದು.