ಹಾರಾಟ ನಿಲ್ಲಿಸಿದ ದೇಶದ ಇನ್ನೊಂದು ಏರ್‌ಲೈನ್ಸ್
ವಿಶ್ಲೇಷಣೆ
ರಮಾನಂದ ಶರ್ಮಾ
ಏರ್ ಲೈನ್ಸ್ ಬಿಜಿನೆಸ್ ಒಂದು ಬಿಳಿ ಆನೆಯನ್ನು ಸಾಕಿದಂತೆ ಎನ್ನುವ ಆಭಿಪ್ರಾಯ ಉದ್ಯಮದಲ್ಲಿ ಇದೆ. ಇದು ಮಕ್ಕಳಾಟವಲ್ಲ ಎನ್ನುವುದು ಈ ಉದ್ಯಮದಲ್ಲಿ ಕೈಸುಟ್ಟುಕೊಂಡವರ ಅನುಭವ. ಏರ್ ಲೈನ್ಸನ್ನು ಹುಟ್ಟಿಹಾಕಿ ಅದನ್ನು ನಡೆಸುವುದು ಒಂದು ರೀತಿಯ ಪ್ರೆಸ್ಟೀಜ್ ಎಂದು ತಿಳಿದು ಹಲವರು ಕೈಹಾಕಿ ಕೈಕಚ್ಚಿಸಿಕೊಂಡಿದ್ದಾರೆ.ಕೈಯಲ್ಲಿ ಎಣಿಸುವಷ್ಟು ಉದ್ಯಮಿಗಳು ಮಾತ್ರ ಈ ಸಾಹಸದಲ್ಲಿ ಕಾಣುತ್ತಾರೆ.
ಖ್ಯಾತ ಬಾಂಬೇ ಡೈಯಿಂಗ್ ಮಿಲ್ಸನ್ ವಾಡಿಯಾ ಸ್ಥಾಪಿಸಿದ ಖಾಸಗಿ ಏರ್ ಲೈನ್ಸ್ ಕಂಪನಿ ‘ಗೋಫಸ್ಟ್ (ಗೋ ಏರ್)’ ತನ್ನ ವಿ ಮಾನಗಳ ಹಾರಾಟವನ್ನು ನಿಲ್ಲಿಸಿದೆ. ಸದ್ಯ ಮೇ ತಿಂಗಳ ೧೨ ರವರೆಗೆ ಹಾರಾಟವನ್ನು ಮತ್ತು ೧೫ ರವರೆಗೆ ಟಿಕೆಟ್ ಬುಕಿಂಗ್ ಅನ್ನು ಸ್ಥಗಿತ ಗೊಳಿಸಿದೆ ಎಂದು ಹೇಳಿದರೂ, ಅದು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ನಲ್ಲಿ ಸ್ವಯಂ ದಿವಾಳಿಗೆ ಕೋರಿದ್ದನ್ನು ನೋಡಿದರೆ, ಇದು ತನ್ನ ದಿನಗಳನ್ನು ಎಣಿಸುತ್ತಿದೆಯೇನೋ ಎನಿಸುತ್ತಿದೆ.
೨೦೦೫ ರಲ್ಲಿ ‘ಗೋ ಏರ್’ ಹೆಸರಿನಲ್ಲಿ ಆರಂಭವಾದ ಈ ಕಂಪನಿ ಇತ್ತೀಚೆಗೆ ತನ್ನ ಬ್ರ್ಯಾಂಡ್ ಹೆಸರನ್ನು ‘ಗೋ ಫಸ್ಟ್’ ಎಂದು ಬದಲಿಸಿತ್ತು. ಮಾಧ್ಯಮಗಳು ಈ ಕಂಪನಿಯನ್ನು ವೈಫಲ್ಯಗೊಂಡ ವಿಮಾನಯಾನ ಕಂಪನಿಗಳ ಪಟ್ಟಿಗೆ ಸೇರಿಸುತ್ತಿವೆ. ಈ ಕಂಪನಿಯು ಸುಮಾರು ೬೫೦೦ ಕೋಟಿ ಸಾಲವನ್ನು ಬ್ಯಾಂಕುಗಳಲ್ಲಿ ಬಾಕಿ ಇರಿಸಿಕೊಂಡಿದ್ದು, ಕಂಪನಿಯ ಸ್ವಯಂ ದಿವಾಳಿ ಪ್ರಸ್ತಾಪವನ್ನು ಬ್ಯಾಂಕುಗಳು ವಿರೋಧಿಸುತ್ತಿವೆಯಂತೆ. ಬ್ಯಾಂಕೇತರ ಸಾಲಗಳ ಬಗೆಗೆ ಇನ್ನೂ ಮಾಹಿತಿ ಬರಬೇಕಾಗಿದೆ. ಕೆಲವು ಬ್ಯಾಂಕುಗಳು ಈ ಸಾಲ ವನ್ನು  (ಪುನರಚನೆ) ಮಾಡುವ ಚಿಂತನೆಯಲ್ಲಿ ಇವೆಯಂತೆ. ಬ್ಯಾಂಕುಗಳು ಚೇತರಿಸಿಕೊಳ್ಳುತ್ತಿವೆ ಮತ್ತು ಬ್ಯಾಂಕು ಗಳಲ್ಲಿ ಅನುತ್ಪಾದಕ ಆಸ್ತಿಯ ಪ್ರಮಾಣ ೨೦೧೮ ರಲ್ಲಿ ೧೪% ಇದ್ದು, ೨೦೨೨ ಯಲ್ಲಿ ೫.೩೦% ಗೆ ಇಳಿದಿದೆ ಎಂದು ರಿಸರ್ವ್ ಬ್ಯಾಂಕ್, ಹಣಕಾಸು ಮಂತ್ರಾಲಯ ಮತ್ತು ಬ್ಯಾಂಕಗಳು ಬೀಗುವಾಗ, ವಿತ್ತ ಸಚಿವರು ಹೆಮ್ಮೆ ಯಿಂದ ಇದನ್ನು ಹೇಳುತ್ತಿರುವಾಗ ಇನ್ನೊಂದು ೬೫೦೦ ಕೋಟಿ ದಿನಬೆಳಗಾಗುವುದರೊಳಗೆ ಅನುತ್ಪಾದಕ ಆಸ್ತಿಯಾಗುತ್ತಿರುವುದು ಬ್ಯಾಂಕಿಂಗ್ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದೆ.
ಕಿಂಗ್ ಫಿಷರ್ ಏರ್ ಲೈನ್ಸ್ ಮತ್ತು ಜೆಟ್ ಏರ್ವೇಸ್‌ಗೆ ನೀಡಿದ ಸಾಲ ವಸೂಲಾಗದೇ ನ್ಯಾಯಾಲಯದಲ್ಲಿ ತಾರ್ಕಿಕ ಅಂತ್ಯಕ್ಕೆ ಕಾಯುತ್ತಿರುವಾಗ, ಗೋಫಸ್ಟ್ ಪತನಗೊಂಡು ಕಿಂಗ್ ಫಿಷರ್ ಮತ್ತು ಜೆಟ್ ಏರ್ ವೇಸ್ ಹಾದಿಯಲ್ಲಿ ಹೋಗುವ ಭಯ ಬ್ಯಾಂಕು ಗಳನ್ನು ಆವರಿಸಿದೆ. ಖಾಸಗಿ ಏರ್ ಲೈನ್ಸ್‌ಗಳಿಗೂ ಬ್ಯಾಂಕುಗಳಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇದ್ದು, ದೊಡ್ಡಬ್ಯುಸಿನೆಸ್ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲ ನೀಡುತ್ತಿದ್ದು ಸಂಕಷ್ಟದಲ್ಲಿ ಸಿಲುಕಿವೆ. ‘ಗೋಫಸ್ಟ್’ ಸಂಕಷ್ಟದ ಮುಂದಿನ ದಿನಗಳಲ್ಲಿ ಬ್ಯಾಂಕುಗಳು ಖಾಸಗಿ ಏರ್‌ಲೈನ್ ಗಳಿಗೆ ಸಾಲ ನೀಡಲು ಹಿಂಜರಿಯುವ ಸಾಧ್ಯತೆ ಕಾಣುತ್ತದೆ.
ಖಾಸಗಿ ಏರ್ ಲೈನ್ಸ್‌ಗಳ ಪತನ, ವಿಲೀನ, ಮಾರಾಟ ಮತ್ತು ಹಾರಾಟ ಸ್ಥಗಿತ ಈ ದೇಶದಲ್ಲಿ ಹೊಸ ಬೆಳವಣಿಗೆ ಏನಲ್ಲ. ಮನಮೋಹನ್ ಸಿಂಗ್-ನರಸಿಂಹರಾಯರ ಆರ್ಥಿಕ ಸುಧಾರಣೆ, ಜಾಗತೀಕರಣ ಮತ್ತು ಉದಾರೀಕರಣದ ಕೂಸಾದ ಖಾಸಗಿ ಏರ್ ಲೈನ್ಸ್‌ಗಳು ಆರಂಭ ದಿಂದಲೂ ಒಂದು ರೀತಿಯ ಹೊಯ್ದಾಟದಲ್ಲಿಯೇ ಇವೆ. ಉದಾರೀಕರಣದ ನಂತರ ತಮಿಳುನಾಡಿನಲ್ಲಿ ಟಿವಿವಾಹಿನಿಗಳು ಮತ್ತು ಕರ್ನಾಟಕದಲ್ಲಿ ದರ್ಶಿನಿ ಹೋಟೆಲ್ಲುಗಳು ತೆರೆದಂತೆ ದೇಶದಲ್ಲಿ ಖಾಸಗಿ ಏರ್ ಲೈನ್ಸ್ ಕಂಪನಿಗಳು ರೆಕ್ಕೆ ಬಿಚ್ಚಿದವು. ಆದರೆ, ಕೈಯಲ್ಲಿ ಎಣಿಸುವಷ್ಟು ಕಂಪನಿಗಳನ್ನು ಬಿಟ್ಟರೆ ಬಹುತೇಕ ಕಂಪನಿಗಳು ನೆಮ್ಮದಿಯ ಹಾರಾಟ ನಡೆಸುತ್ತಿಲ್ಲ ಎನ್ನುವುದು ಸತ್ಯ.
೧೯೯೧ರಿಂದ ಖಾಸಗಿ ಏರ್ ಲೈನ್ಸ್‌ಗಳ ಇತಿಹಾಸವನ್ನು ನೋಡಿದರೆ, ಸುಮಾರು ೨೭ ಏರ್ ಲೈನ್ಸ್‌ಗಳ ರೆಕ್ಕೆಗಳು ಮುದುಡಿದ್ದನ್ನು ನೋಡಬಹುದು. ಈಸ್ಟ್ ವೆಸ್ಟ್ ಏರ್ ಲೈನ್ಸ್, ಮೋದಿ ಲುಪ್ಟ್, ದಮಾನಿಯಾ, ಏರ್‌ಮಂತ್ರ (ರೆಲಿಗೆರೆ), ಕಾಳಿಂಗಾ ಏರ್ ಲೈನ್ಸ್, ಏರ್ ಓಡಿಶಾ, ಎನ್‌ಇಪಿಸಿ, ಸ್ಕೈ ಏರ್ ಲೈನ್ಸ್, ಲುಪ್ತಾನ್ಸ ಕಾರ್ಗೋ, ಇಂದುಸ್ ಏರ್ ವೇಸ್, ಜಾಗ್ಸನ್ ಏರ್ ವೇಸ್, ಎಂಡಿಎಲ್‌ಆರ್,ಅರ್ಯಾನ್ ಕಾರ್ಗೊ, ಕಿಂಗ್ ಫಿಷರ್ ಏರ್ ಲೈನ್ಸ್, ಡೆಕ್ಕನ್ ಕಾರ್ಗೊ, ಪ್ಯಾರಾ ಮೌಂಟ್ ಏರ್ ವೇಸ್, ಏರ್ ಏಷ್ಯಾಟಿಕ್, ಏರ್ ಪೆಗಾಸಸ್, ಏರ್ ಕಾರ್ನಿವಲ್, ಏರ್ ಕಾಸ್ಟಾ, ರೆಲಿಗೆರೆ ಏವಿಯೇಷನ್, ಕ್ಚಿಕ್ ಜೆಟ್ ಕಾರ್ಗೊ, ಜೆಟ್ ಏರ್ ವೇಸ್, ಜೆಟ್ ಲೈಟ್, ಜೂಮ್, ಡೆಕ್ಕನ್ ಚಾರ್ಟರ್ಡ್, ಸಹಾರಾ ಮುಂತಾದವುಗಳು ಮುಖ್ಯ.
ಇವುಗಳಲ್ಲಿ ಈಸ್ಟ್ ವೆಸ್ಟ್ ಏರ್ ಲೈನ್ಸ್, ಕಿಂಗ್ ಫಿಷರ್, ಜೆಟ್ ಏರ್ ವೇಸ್ ಮತ್ತು ಗೋ-ಸ್ಟ್ ದೈತ್ಯ ವಿಮಾನ ಯಾನ ಕಂಪನಿಗಳಾಗಿದ್ದು, ಇವುಗಳ ವೈಫಲ್ಯಗಳು ಏವಿಯೇಷನ್ ಸೆಕ್ಟರ್ ಅನ್ನು ನಡುಗಿಸಿದೆ ಮತ್ತು ಖಾಸಗಿ ಏರ್ ಲೈನ್ಸ್‌ಗಳ ಭವಿಷ್ಯದ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿವೆ. ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡ ಟಾಟಾ ಕಂಪನಿ ಕೈ ನೀಡಿರುವುದರಿಂದಈ ಪಟ್ಟಿಯನ್ನು ಸೇರಿಲ್ಲ. ಏರ್ ಲೈನ್ಸ್ ಬಿಜಿನೆಸ್ ಒಂದು ಬಿಳಿ ಆನೆಯನ್ನು ಸಾಕಿದಂತೆ ಎನ್ನುವ ಆಭಿಪ್ರಾಯ ಉದ್ಯಮದಲ್ಲಿ ಇದೆ.ಇದು ಮಕ್ಕಳಾಟವಲ್ಲ ಎನ್ನುವುದು ಈ ಉದ್ಯಮದಲ್ಲಿ ಕೈಸುಟ್ಟುಕೊಂಡವರ ಅನುಭವ. ಏರ್ ಲೈನ್ಸನ್ನು ಹುಟ್ಟಿಹಾಕಿ ಅದನ್ನು ನಡೆಸುವುದು ಒಂದು ರೀತಿಯ ಪ್ರೆಸ್ಟೀಜ್ ಎಂದು ತಿಳಿದು ಹಲವರು ಕೈಹಾಕಿ ಕೈಕಚ್ಚಿಸಿಕೊಂಡಿದ್ದಾರೆ.
ಕೈಯಲ್ಲಿ ಎಣಿಸುವಷ್ಟು ಉದ್ಯಮಿಗಳು ಮಾತ್ರ ಈ ಸಾಹಸದಲ್ಲಿ ಕಾಣುತ್ತಾರೆ. ಅಂಬಾನಿ ಮತ್ತು ಅದಾನಿಯಂಥ ಉದ್ಯಮಿಗಳು ಏರ್ ಪೋರ್ಟ್‌ಗಳನ್ನು, ವಿಮಾನಗಳನ್ನು ಗರಿಷ್ಠ ಬಳಸಿದರೂ, ಸ್ವಂತ ವಿಮಾನ ಹೊಂದಿದರೂ ಮತ್ತು ವಿಮಾನ ನಿಲ್ದಾಣವನ್ನ ನಿರ್ವಹಿಸಿದರೂ ಎಂದೂ ಏರ್ ಲೈನ್ಸ್ ಹೊಂದುವತ್ತ ಮನಸ್ಸು ಮಾಡಲಿಲ್ಲ. ಮನಸ್ಸು ಮಾಡಿದ್ದರೆ, ಜಗತ್ತಿನ ಅತಿ ದೊಡ್ಡ ಏರ್ ಲೈನ್ಸ್ ಕಂಪನಿಗಳನ್ನು ಹೊಂದುವ ಸಾಮರ್ಥ್ಯ ಮತ್ತು ಅದನ್ನು ನಡೆಸುವ ಚಾಕ್ಯತೆ ಅವರಲ್ಲಿತ್ತು. ಆದರೆ, ಈ ಉದ್ಯಮದ ಉದ್ದ, ಅಗಲ ಮತ್ತು ಅಳದ ಸಮೀಕರಣವನ್ನು ಚೆನ್ನಾಗಿ ತಿಳಿದ ಅವರು ಅದರಿಂದ ದೂರ ಉಳಿದರು.
ಟಾಟಾ ಈ ಮೊದಲೇ ಈ ಉದ್ಯಮದಲ್ಲಿ ಇದ್ದು, ಈ ಉದ್ಯಮದಲ್ಲಿ ಹಳೆ ಹುಲಿಯಾಗಿದ್ದು ತಮ್ಮ ಅಪಾರವಾದ ಅನುಭ ವವನ್ನು ತಮ್ಮ ಎರಡನೇ ಇನಿಂಗ್ ನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇವರ ಹಿಂದೆ ಆರ್ಥಿಕ ದೃಢತೆ ಮತ್ತು ಅನುಭವಿಗಳು ಇರುವುದು ಬೇರೆ ಮಾತು. ಏರ್ ಲೈನ್ಸ್ ಉದ್ಯಮದಲ್ಲಿ ಸಾವಿರಾರು ಕೋಟಿಯ ಹೂಡಿಕೆ ಆರಂಭದಲ್ಲಿಯೇ ಬೇಕಾಗುತ್ತದೆ. ಒಂದೆರಡು ವಿಮಾನ ಗಳಿಂದ ಉದ್ಯಮವನ್ನು ನಡೆಸಲು ಸಾಧ್ಯವಿಲ್ಲ. ವಿಮಾನಗಳನ್ನು ವಿದೇಶದಿಂದ ಖರೀದಿಸಬೇಕಾಗುತ್ತದೆ ಅಥವಾ ವಿದೇಶಗಳಿಂದ ಲೀಸ್ ಮೇಲೆ ಪಡೆಯಬೇಕಾಗುತ್ತದೆ. ವಿಮಾನಗಳನ್ನು ದೇಶೀಯವಾಗಿ ತಯಾರಿಸಲಾಗುವುದಿಲ್ಲ. ವಿಮಾನಗಳ ಯಂತ್ರ, ಬಿಡಿಭಾಗಗಳು ಮತ್ತು ಅವುಗಳ ಸರ್ವೀಸ್‌ಗೆ ಸಾವಿರಾರು ಕೋಟಿ ವ್ಯಯಿಸಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಮಾಡಿಕೊಂಡಿರುವ ಒಪ್ಪಂದದ ಉಲ್ಲಂಘನೆಯೇ ‘ಗೋಫಸ್ಟ್ ಏರ್ ಲೈನ್ಸ್’ನ ಇಂದಿನ ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತದೆ. ಒಂದು ಏರ್ ಲೈನ್ಸ್ ಹುಟ್ಟು ಹಾಕಬೇಕಾದರೆ ನೂರಾರು ಕ್ಲಿಯರೆನ್ಸ್ ಮತ್ತು ಅನುಮತಿಗಳನ್ನು ಪಡೆಯ ಬೇಕಾಗುತ್ತದೆ. ಇವುಗಳನ್ನು ಪಡೆಯುವ ಹೊತ್ತಿಗೆ ಏರ್ ಲೈನ್ಸ್ ಕಂಪನಿಯವರು ಅರ್ಧ ಸೋತು ಸುಣ್ಣವಾಗಿರುತ್ತಾರೆ. ಏರ್ ಲೈನ್ಸ್ ಸಂಸ್ಥೆಯಲ್ಲಿನ ಹೂಡಿಕೆಯಲ್ಲಿ ಪ್ರವರ್ತಕರ ಅಥವಾ ಮಾಲಿಕರ ಹೂಡಿಕೆ ಸಾಮಾನ್ಯವಾಗಿ ಕನಿಷ್ಠ ಇದ್ದು ಕಂಪನಿಗಳು ಬಹುತೇಕ ಬ್ಯಾಂಕ್ ಸಾಲದ ಆಧಾರದ ಮೇಲೆಯೇ ನಡೆಯುತ್ತವೆ. ಸಾಲ ಮರುಪಾವತಿ ಅಥವಾ ಸರ್ವೀಸಿಂಗ್ ಬಹುತುಟ್ಟಿ ಯಾಗಿರುತ್ತದೆ.
ಪ್ರತಿ ವಿಮಾನವೂ ತುಂಬಿ ಹಾರಾಡಿದರೆ ಅಥವಾ ಕನಿಷ್ಠ ೮೦-೯೦ % ಕೆಪಾಸಿಟಿ ತುಂಬಿದರೆ ೩-೪ ವರ್ಷಗಳಲ್ಲಿ ‘ಬ್ರೇಕ್ಇವನ್’ ಆಗಬಹುದು ಎನ್ನುವ ಅಂದಾಜು ಇದೆ. ವಿಮಾನಯಾನ ಉದ್ಯಮದಲ್ಲಿ ಇತ್ತೀಚೆಗೆ ಸ್ಪರ್ಧೆ ತೀವ್ರವಾಗಿದ್ದು ಏರ್ ಲೈನ್ಸ್ ಕಂಪನಿಗಳು-ಲ್ಕೆಪಾಸಿಟಿಗೆ ಹೆಣಗಾಡಬೇಕಾಗುತ್ತದೆಯಂತೆ. ವಿಮಾನ ಖರೀದಿ, ಬಿಡಿಭಾಗಗಳು ಮತ್ತು ಸರ್ವೀಸಿಂಗ್ ಹೊರತಾಗಿ ನಿರ್ವಹಣಾವೆಚ್ಚ ತಡೆಯಲಾರದಷ್ಟು ಇರುತ್ತದೆ. ಆಪರೇಟಿಂಗ್ ವೆಚ್ಚದಲ್ಲಿ ಸುಮಾರು ೪೦% ಇಂಧನಕ್ಕೆ ಹೋದರೆ, ಸಿಬ್ಬಂದಿ ವೆಚ್ಚ ೩೫% ಇರುತ್ತದೆಯಂತೆ.
ಈ ಶುಲ್ಕಗಳನ್ನು ಬಿಟ್ಟು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಶುಲ್ಕ, ಮಾರ್ಕೆಟಿಂಗ್ ಮತ್ತು ಪ್ರೊಮೋಷನ್, ತೆರಿಗೆ, ಟ್ರಾವೆಲ್ ಏಜೆಂಟರ ಕಮಿಷನ್- ಹೀಗೆ ಮುಟ್ಟಿದ್ದಕ್ಕೆ ಮೂವತ್ತು ಎನ್ನುವಂತೆ ಶುಲ್ಕಗಳು ಬೇರೆ. ವಿಮಾನಯಾನ ಉದ್ಯಮದಲ್ಲಿ ಪೈಲಟ್‌ಗಳ ಆರಂಭಿಕ ಸಂಬಳ ಮಾಸಿಕ ೧.೬೭ ಲಕ್ಷ ಎಂದು ಹೇಳಲಾಗುತ್ತಿದ್ದು, ವಾರ್ಷಿಕ ಸಂಬಳ ೪೩.೮೦ ಲಕ್ಷದವರೆಗೂ ಇದೆಯಂತೆ. ವಿಮಾನಯಾನ ಉದ್ಯಮದಲ್ಲಿ ಪೈಲಟ್‌ಗಳ ಸಂಬಳ ಮತ್ತು ಇಂಧನ ವೆಚ್ಚವೇ ಉಳಿದ ಎಲ್ಲಾ ವೆಚ್ಚಕ್ಕಿಂತ ಹೆಚ್ಚಾಗಿದ್ದು, ಆದಾಯದ ಬಹುಪಾಲನ್ನು ಕಬಳಿಸುತ್ತಿದೆಯಂತೆ. ಈ ಉದ್ಯಮದಲ್ಲಿ ಯಾವುದಾದರೂ ಕಾರಣಕ್ಕೆ ವಿಮಾನ ಸೇವೆ ರದ್ದಾದರೆ ಅಥವಾ ವಿಮಾನ ತುಂಬಿ ಹಾರಾಡದಿದ್ದರೆ ಕಂಪನಿಯು ನಷ್ಟ ಅನುಭವಿಸಬೇಕಾಗುತ್ತದೆ.
ಕೊರೋನಾ- ಕೋವಿಡ್ ಸಮಯದಲ್ಲಿ ಹಲವು ಏರ್ ಲೈನ್ಸ್‌ಗಳು ಇದನ್ನು ಅನುಭವಿಸಿದ್ದವು. ಆದರೆ, ಕೋವಿಡ್ ಈಗ ಇತಿಹಾಸಸೇರಿದ್ದು ‘ಗೋ ಫಸ್ಟ್ ಏರ್ ಲೈನ್ಸ್’ನ ಇಂದಿನ ಸಮಸ್ಯೆಯ ಹಿಂದಿನ ಕಾರಣ ಸ್ಪಷ್ಟವಾಗುತ್ತಿಲ್ಲ. ಕೆಲವು ವಿಶ್ಲೇಷಕರ ಪ್ರಕಾರ ದಿವಾಳಿ ಕಾನೂನಿನಡಿಯಲ್ಲಿ (ಐಬಿಸಿ) ಬ್ಯಾಂಕ ಸಾಲದ ಹೊರೆಯನ್ನು ಇಳಿಸಿಕೊಳ್ಳುವ ಇರಾದೆ ಇರಬಹುದು. ಸತ್ಯಾಸತ್ಯತೆ ತಿಳಿಯದು. ಈ ಕಾನೂನಡಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಈಡಾದ ಕೆಲವು ಉದ್ಯಮಗಳು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್‌ ನಲ್ಲಿ ಸಾಲ ಮರುಪಾವತಿಯಲ್ಲಿ ಗಮನಾರ್ಹ ವಿನಾಯಿತಿ ಪಡೆದ ಉದಾಹರಣೆಗಳನ್ನು ಅವರು ಎತ್ತಿ ತೋರಿಸುತ್ತಾರೆ.
ಬ್ಯಾಂಕುಗಳಿಂದ ಸ್ವಲ್ಪ ಹಣಕಾಸು ನೆರವು ದೊರಕಿದರೆ ‘ಗೋ ಫಸ್ಟ್’ ಪುನಾ ಎಂದಿನಂತೆ ಹಾರಬಹುದು ಎಂದು ಕಂಪನಿಯು ವಿಶ್ವಾಸ ವ್ಯಕ್ತ ಮಾಡುತ್ತಿದೆ. ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಪ್ರಕರಣವನ್ನು ವಿಚಾರಿಸಿದ್ದು ತೀರ್ಪನ್ನು ಕಾದಿರಿಸಿದೆ.ಮುಂದಿನ ಬೆಳವಣಿಗೆ ಈ ತೀರ್ಪನ್ನು ಅವಲಂಬಿಸಿದ್ದು ಕಾರ್ಪೊರೇಟ್ ವಲಯ, ಮುಖ್ಯವಾಗಿ ಏವಿಯೇಷನ್ ವಲಯ ಕುತೂಹಲದಿಂದ ನಿರೀಕ್ಷಿಸುತ್ತಿದೆ. ಗೋಫಸ್ಟ್ ತೀರ್ಪನ್ನು ಬೇಗ ನೀಡುವಂತೆ ಎನ್‌ಸಿಎಲ್‌ಟಿ ಯನ್ನು ಒತ್ತಾಯಿಸುತ್ತಿದೆಯಂತೆ. ಎನ್‌ಸಿಎಲ್‌ಟಿ ಯಲ್ಲಿ ಇದೊಂದು ಭಾರೀ ಮಹತ್ವದ ಪ್ರಕರಣವೆಂದು ಹೇಳಲಾಗುತ್ತಿದ್ದು     ಗೆಅಗ್ನಿ ಪರೀಕ್ಷೆ ಎನ್ನಲಾಗುತ್ತಿದೆ. ಅಂತೆಯೇ ಕಾನೂನೂ ವಲಯದಲ್ಲಿಯೂ ಕುತೂಹಲ ಮೂಡಿದೆ.