ಇಂದಿನ ಪ್ರಜಾಕಾರಣದಲ್ಲಿ ರಾಜ-ರಾಣಿ !
ಅಭಿಮತ
ಡಾ.ಕೆ.ಎಸ್.ಪವಿತ್ರ
ರಾಜಕೀಯದಲ್ಲಿ ಮಹಿಳೆಯ ಮತ್ತೊಂದು ಮಹತ್ವದ ಪಾತ್ರ ಆಡಳಿತ ವ್ಯವಸ್ಥೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ, ರೂಪಿಸುವ, ಪ್ರಭಾವೀ ಮುಂದಾಳಾಗುವುದು. ರಾಜಕಾರಣ ಎನ್ನುವುದು ಕೌಶಲಯುಕ್ತವಾಗಿ ಪುರುಷ-ಮಹಿಳೆ ಯಾರೂ ನಿಭಾಯಿಸಬಹುದಾದ ಕಾರ್ಯ ಎನ್ನುವುದನ್ನು ನಿರೂಪಿಸುವುದು.
ವಿದೇಶಿ ಪ್ರವಾಸಿಯೊಬ್ಬ ಭಾರತಕ್ಕೆ ಬಂದಿದ್ದನಂತೆ. ಟ್ಯಾಕ್ಸಿಯಲ್ಲಿ ಪಯಣಿಸುವಾಗ ರಾಜಕಾರಣಿಯೊಬ್ಬನ ಕಾರು ಬಂತು. ತಕ್ಷಣ ವಾಹನ ಸಂಚಾರ ನಿಲ್ಲಿಸಿ ಪೋಲೀಸರು ಆ ಕಾರು ಹೋಗಲು ಬಿಟ್ಟರು. ವಿದೇಶಿ ಪ್ರವಾಸಿ ಕೇಳಿದ -‘ಯಾರು ಅವರು?’. ಚಾಲಕ ಉತ್ತರಿಸಿದ, ‘ಪ್ರಜಾ ಸೇವಕರು’. ಸ್ವಲ್ಪ ದೂರ ಹೋದ ಮೇಲೆ ಜನಸಂದಣಿಯಿರುವ ಚೌಕಕ್ಕೆ ಪಯಣಿಸಿದರಂತೆ. ಅಲ್ಲಿ ಜನಜಂಗುಳಿ ನೋಡಿ ಪ್ರವಾಸಿ ಕೇಳಿದ ‘ಇವರು ಯಾರು?’.
ಚಾಲಕ ಉತ್ತರಿಸಿದ – ‘ಇವರು ಪ್ರಜಾ ಪ್ರಭುಗಳು!’ ಚುನಾವಣೆಯ ಬಿಸಿ ಏರಿ ಇಳಿಯುವ ಕಾಲ ಸನ್ನಿಹಿತವಾಗಿದೆ. ಕೆಲ ಕಾಲವಾದರೂ ರಾಜ ಕಾರಣಿಗಳು ಪ್ರಜಾ ಸೇವಕರಾಗಿರಲೇಬೇಕಾದ ಅನಿವಾರ್ಯತೆ! ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಯನ್ನೇ ನೋಡಿದರೂ ಸರಿ, ಲಿಂಗ ತಾರತಮ್ಯ ಎದ್ದು ಕಾಣುತ್ತದೆ. ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಾರೆ ೩೬೩೨ ಅಭ್ಯರ್ಥಿಗಳಿಂದ ೫,೧೦೨ ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ೩೬೩೨ ಅಭ್ಯರ್ಥಿಗಳಲ್ಲಿ ಮಹಿಳೆಯರು ಎಷ್ಟಿರಬಹುದು? ಕೇವಲ ೩೦೪. ಅಂದರೆ ಪುರುಷ ಅಭ್ಯರ್ಥಿಗಳು ಶೇ.೯೧.೬೦ ರಷ್ಟಾದರೆ, ಮಹಿಳೆಯರ ಪಾಲು ಕೇವಲ ೮.೩೭%. ಇದು ‘ರಾಜ’ಕೀಯವೇ ಮುಂದುವರಿಯಬಹುದಾದ, ‘ರಾಣಿ’ ಸೇವಕಿಯಾಗಿಯೇ ಮುಂದುವರಿಯುವ ಪರಿಸ್ಥಿತಿಯನ್ನೇ ಸೂಚಿಸುತ್ತದೆ.
‘ಪ್ರಜಾ’ಕೀಯ ಎಂಬ ಪದವನ್ನೇ ಹುಟ್ಟು ಹಾಕದ ನಾವು, ಮಹಿಳೆಯರನ್ನು ಎರಡನೇ ದರ್ಜೆಯ ‘ಪ್ರಜೆ’ಯಾಗಿ ನೋಡುವ ಸಾಧ್ಯತೆಯೇ ಹೆಚ್ಚು. ಖಿ ಉಟobಚಿಟ ಉeಟಿಜeಡಿ gಚಿಠಿ ಟಿಜex – ಜಾಗತಿಕ ಲಿಂಗ ಅಂತರ ಸೂಚ್ಯಂಕ ಗಣನೆಗೆ ತೆಗೆದುಕೊಳ್ಳುವ ೪ ಮುಖ್ಯ ಅಂಶಗಳೆಂದರೆ ಆರ್ಥಿಕ ಅವಕಾಶಗಳು-ಭಾಗವಹಿಸುವಿಕೆ, ವಿದ್ಯಾಭ್ಯಾಸ, ಆರೋಗ್ಯ ಮತ್ತು ರಾಜಕೀಯ ಸಬಲೀಕರಣ. ಕೊನೆಯದಾದ ರಾಜಕೀಯ ಸಬಲೀಕರಣದಲ್ಲಿ ಭಾರತ ೪೮ನೇ ಸ್ಥಾನದಲ್ಲಿದೆ. ೫೦ ವರ್ಷಗಳಲ್ಲಿ ರಾಜಕೀಯ ಸಬಲೀಕರಣದಲ್ಲಿ ಭಾರತ ಮತ್ತಷ್ಟು ಕೆಳಗಿಳಿದಿದೆ!
ರಾಜಕೀಯದಲ್ಲಿ ಮಹಿಳೆಯ ಪಾತ್ರಕ್ಕೆ ಎರಡು ಮುಖ್ಯ ಆಯಾಮಗಳು. ಮೊದಲನೆಯದು ಮತದಾರಳಾಗಿ ಆಕೆ ಭಾಗವಹಿ ಸುವ ಅವಕಾಶ. ಇದು ಯಾರೂ ಸಂವಿಧಾನಾತ್ಮಕವಾಗಿ ಪ್ರಜೆಯಾಗಿ ಪಡೆಯುವ ಹಕ್ಕು ಎಂಬುದು ಈಗ ನಮಗನ್ನಿಸ ಬಹುದು. ಆದರೆ ಮತದಾನವೆಂಬ ಮೂಲ ಭೂತ ಹಕ್ಕೂ ಮಹಿಳೆಗೆ ಹಿಂದೆ ನಿರಾಕರಿಸಲ್ಪಟ್ಟಿತ್ತು ಎಂಬುದು ಐತಿಹಾಸಿಕ ಸತ್ಯ. ಸೂಕ್ಷ್ಮವಾಗಿ ಅವಲೋಕಿಸಿದರೆ ಮಹಿಳೆಗೆ ಮತದಾನದ ಹಕ್ಕಿಲ್ಲದ ಕಾರಣ ಆಕೆಗೆ ಇತರ ಸೌಲಭ್ಯಗಳೂ ಸಿಗುವುದೂ ಕಷ್ಟವೇ ಆಗಿತ್ತು.
ಮಹಿಳೆಯಿಂದ ಮತ ದೊರೆಯದು ಅಂದ ಮೇಲೆ ಆಕೆಗೆ ಯಾವ ಸೌಕರ್ಯವನ್ನು ನೀಡುವ ಗೋಜಿಗಾದರೂ ಏಕೆ ಹೋದಾರು? ಮಹಿಳೆಗೆ ಮತದಾನದ ಹಕ್ಕಿನ ನಿರಾಕರಣೆ ಒಂದರ್ಥದಲ್ಲಿ ಆಕೆಯ ಬದುಕಿನ ಗುಣಮಟ್ಟ, ಆಕೆಯ ಅಸ್ತಿತ್ವದ ಬಗೆಗಿನ ನಿರ್ಲಕ್ಷ್ಯವೂ ಆಗಿತ್ತು. ನಮ್ಮ ಭಾರತ ತನ್ನ ಸ್ವತಂತ್ರ ಸಂವಿಧಾನ ಜಾರಿಗೆ ಬಂದಂದಿನಿಂದಲೂ ಸಮಾನವಾಗಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದೆ. ಅಧ್ಯಯನವೊಂದು ೨೦೦೯ ರಲ್ಲಿ ಮಹಿಳೆಯರನ್ನು ಯಾರಿಗೆ ಮತ ಹಾಕುತ್ತೀರಿ ಎಂದಾಗ ‘ನಮ್ಮ ಕುಟುಂಬ ಯಾರಿಗೆ ಹೇಳುತ್ತದೆಯೋ ಅವರಿಗೆ’ ಅಂದರಂತೆ. ಅದೇ ೨೦೧೯ ರಲ್ಲಿ ಮುಕ್ಕಾಲು ಪಾಲು ಜನ ಮಹಿಳೆಯರು ತಾವು ಸ್ವತಂತ್ರವಾಗಿ ಯೋಚಿಸಿ ಮತ ಹಾಕುವುದಾಗಿ ಹೇಳಿದರಂತೆ.
ಇತ್ತೀಚೆಗೆ ರಾಜಕೀಯ ಮಾಹಿತಿ ಮೂಲಗಳ ಕುರಿತ ಪ್ರಶ್ನೆಗೆ ‘ಸುಧಾರಿತ ಸಂವಹನ ವ್ಯವಸ್ಥೆ, ಸಾಮಾಜಿಕ ಮಾಧ್ಯಮಗಳು, ಮೊಬೈಲ್, ಟಿ.ವಿ. ತಮಗೆ ಮಾಹಿತಿ ನೀಡುತ್ತವೆ’ ಎಂದು ಮಹಿಳೆಯಲ್ಲಿ ಉತ್ತರಿಸಿದ್ದಾರೆ. ಅಂದರೆ ಮಹಿಳೆ ಪತಿ, ಅಣ್ಣ, ತಮ್ಮ,ಅಪ್ಪಂದಿರನ್ನಷ್ಟೇ ಕೇಳುವ ಬದಲು, ತಾನೂ ಕಣ್ಣು ತೆರೆದು ಕಿವಿಗೊಟ್ಟು ನೋಡಿ-ಕೇಳಲಾರಂಭಿಸಿದ್ದಾಳೆ ಎನ್ನುವುದುಸುಸ್ಪಷ್ಟ. ‘ಮುಗ್ಧ ಮತದಾರರು’ ಎಂಬಲ್ಲಿಂದ ಮಹಿಳೆ ಯರು ‘ಬುದ್ಧಿವಂತ -ಚಾಣಾಕ್ಷ-ಚತುರ ಮತದಾರರು’ ಎಂಬ ಬಡ್ತಿ ಗಳಿಸಿದ್ದಾರೆ. ಹಾಗಾಗಿ ಇಂದು ಮಹಿಳಾ ಮತದಾರರನ್ನು ಕಡಿಮೆ ಅಂದಾಜು ಮಾಡಲಾಗದು.
ಪುರುಷರು ರಾಜಕೀಯವಾಗಿ ಜಾತಿ-ಧರ್ಮ- ರಾಷ್ಟ್ರೀಯತೆ-ಇವುಗಳ ಮೇಲೆ ಗಮನ ಕೇಂದ್ರೀಕರಿಸಿದರೆ, ಮಹಿಳೆಯರು ತಮ್ಮ ಜೀವನದ ಗುಣಮಟ್ಟದ ಮೇಲೆ ನೇರವಾಗಿ ಪ್ರಭಾವ ಬೀರುವ ಆರ್ಥಿಕತೆ -ಸುರಕ್ಷತೆ, ರಾಜಕಾರಣಿಯ ನೈತಿಕತೆ ಈ ಅಂಶಗಳ ಬಗೆಗೆ ಗಮನ ಹರಿಸುವ ಸಾಧ್ಯತೆ ಹೆಚ್ಚು. ಮತ ಹಾಕಿರೆಂದು ಕುಕ್ಕರ್ -ಸೀರೆಗಳನ್ನು ಹಂಚುವ ಬದಲು, ಶೌಚಾಲಯ, ಭಯವಿಲ್ಲದೆ ಓಡಾಡಬಹುದಾದ ವ್ಯವಸ್ಥೆಗಳನ್ನು ರೂಪಿಸುವುದನ್ನು ಮಹಿಳೆಯರು ನಿರೀಕ್ಷಿಸುತ್ತಾರೆ!
ರಾಜಕೀಯದಲ್ಲಿ ಮಹಿಳೆಯ ಮತ್ತೊಂದು ಮಹತ್ವದ ಪಾತ್ರ ಆಡಳಿತ ವ್ಯವಸ್ಥೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ, ರೂಪಿಸುವ, ಪ್ರಭಾವೀ ಮುಂದಾಳಾಗುವುದು. ರಾಜಕಾರಣ ಎನ್ನುವುದು ಕೌಶಲಯುಕ್ತವಾಗಿ ಪುರುಷ- ಮಹಿಳೆ ಯಾರೂ ನಿಭಾ ಯಿಸಬಹುದಾದ ಕಾರ್ಯ ಎನ್ನುವುದನ್ನು ನಿರೂಪಿಸುವುದು. ಚಿಕ್ಕ ಸಂಘಟನೆಗಳು-ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು, ಸಂಘ-ಸಂಸ್ಥೆಗಳು ಹೀಗೆ ಎಲ್ಲೆಡೆಯಲ್ಲೂ ಮಹಿಳೆಯರ ಭಾಗವಹಿಸುವಿಕೆಯ ಕೊರತೆ ಎದ್ದು ಕಾಣುತ್ತದೆ. ಏಕೆ ಹೀಗೆ? ‘ಒಂದೋ ಕುಟುಂಬ, ಇಲ್ಲವೇ ರಾಜಕೀಯ’ ಎಂಬುದು ಮಹಿಳೆಯರ ಮಾತು!
ಮಹಿಳಾ ಮೀಸಲಾತಿಯೆಂದರೂ, ಅದು ‘ಕೈಗೊಂಬೆಗಳ ಮೀಸಲಾತಿ’ಯೇ! ಪತ್ನಿಯ ಹಿಂದೆ ಪತಿಯಿದ್ದು ಅಥವಾ ಮೇಯರ್ ಸ್ಥಾನ ಮಹಿಳಾ ಮೀಸಲಾತಿಗಿದೆಯೆಂದು ಉಪಮೇಯರ್ ಪುರುಷ ‘ಅಯ್ಯೋ, ಪಾಪ ಅವರಿಗೇನು ಗೊತ್ತಾಗುತ್ತೆ?’ ಎಂದು ಆಡಳಿತ ನಡೆಸುವ ಪರಿಸ್ಥಿತಿ. ಪಕ್ಷಗಳ ಕಾರ್ಯಕರ್ತೆಯರಾಗಿ, ರಾಜಕೀಯದಲ್ಲಿ ಮುನ್ನಡಿಯಿರಿಸುವ ಆಸೆಯುಳ್ಳ ಮಹಿಳೆಯರಿಗೂ ಹಾದಿ ಸುಲಭವಲ್ಲ.
ಕ್ಷೇತ್ರಕಾರ್ಯ ಮಾಡುವಾಗ ಶೌಚಾಲಯಗಳ ಕೊರತೆ, ಕುಟುಂಬದ ಬಗೆಗಿನ ಚಿಂತೆ, ಮಾತು-ನೋಟಗಳಲ್ಲಿ ವ್ಯಂಗ್ಯ-ಕುಹಕಗಳು ಮಹಿಳೆಯರಿಗೆ ಮಾಮೂಲು. ಮಧ್ಯಮಗಳಲ್ಲಿಯೂ ಮಹಿಳೆಯರು ಮುನ್ನುಗ್ಗುವಾಗ ದ್ವಂದ್ವಾರ್ಥದ ಮಾತುಗಳು, ಅವರ ಕೌಶಲದ ಬದಲು ಅವರ ಉಡುಗೆ-ತೊಡುಗೆಯ ಕುರಿತು ಮಾತು ಸಾಮಾನ್ಯ. ಇದು ಬಹಳಷ್ಟು ಮಹಿಳೆಯರನ್ನು ಹಿಂದೆಳೆಯುತ್ತದೆ. ಹೀಗಿದ್ದೂ ಮಹಿಳೆಯರು ರಾಜಕೀಯದಲ್ಲಿ ಪಾಲ್ಗೊಳ್ಳಬೇಕಾದ್ದು ಬಹು ಮುಖ್ಯ.
ಏಕೆ? ಮಹಿಳೆಯರನ್ನು ಕುರಿತ, ಹಲವು ಪ್ರಮುಖ ನಿರ್ಧಾರಗಳು, ರಾಜಕೀಯದಲ್ಲಿ ಒಂದಿಷ್ಟು ಭಾವನಾತ್ಮಕತೆ, ಇಡೀ ಸಮಾಜಕ್ಕೆ ಉಪಯುಕ್ತ ಎನಿಸಬಲ್ಲವು. ಸ್ವತಃ ಮಹಿಳೆ ಗಟ್ಟಿಯಾಗಿ ನಿಂತು ವ್ಯಂಗ್ಯ- ಕುಹಕಗಳನ್ನು ಎದುರಿಸಿ, ತಳ್ಳಿ ಹಾಕುವುದನ್ನು ಕಲಿಯಬೇಕು. ಜವಾಬ್ದಾರಿ ಎಂದರೆ ಅಧಿಕಾರ, ‘ಒಳ್ಳೆಯದನ್ನು ಮಾಡುವ ಅವಕಾಶ’ ಎಂಬುದನ್ನು ಅರಿಯ ಬೇಕು. ಆಗ ಮಾತ್ರ ಹೆಚ್ಚು ಹೆಚ್ಚು ಮಹಿಳೆಯರು ಆಡಳಿತ ವ್ಯವಸ್ಥೆ ಪ್ರವೇಶಿಸಿಯಾರು.
ಮನೆ ಸ್ವಚ್ಛಗೊಳಿಸಿದಂತೆ ಆಡಳಿತ ವ್ಯವಸ್ಥೆಯನ್ನೂ ಸ್ವಚ್ಛಗೊಳಿಸಿಯಾರು! ಆಗ ನಿಜವಾದ ಪ್ರಜಾಕಾರಣ – ಪ್ರಜಾಪ್ರಭುತ್ವ ನಮ್ಮದಾದೀತು!