ಮಮತೆಯ ಕಡಲ ಬಣ್ಣನೆಗೆ ಪದಗಳೇ ಸಿಗುತ್ತಿಲ್ಲ
ಮಾತೆ ಮಡಿಲು
ಜಯಶ್ರೀ ಕಾಲ್ಕುಂದ್ರಿ
ಜಗತ್ತಿನಲ್ಲಿ ಅತ್ಯದ್ಭುತ ರುಚಿಯೆಂದರೆ ಅಮ್ಮನು ತಯಾರಿಸುವ ಅಡುಗೆ. ಆಕೆ ಪ್ರೀತಿಯಿಂದ ನಾಯಿ, ಬೆಕ್ಕು, ಚಂದಮಾಮನನ್ನು ತೋರಿಸುತ್ತಾ, ಕಥೆಗಳನ್ನು ಹೇಳುತ್ತಾ ಉಣಬಡಿಸುವ ಕೈ ತುತ್ತಿನ ಎದುರು, ಸೇಲ್ಸ್‌ಮನ್ ಮನೆ ಬಾಗಿಲಿಗೆ ಹೊತ್ತು ತರುವ ಪಿಜ್ಜಾ, ಬರ್ಗರ್‌ಗಳು ಸಾಟಿಯೇ?
ಅಮ್ಮನೆಂದರೆ ಸಾಕು, ಭಾವದ ಒರತೆ. ಕಣ್ಣುಗಳಿಗೆ ನುಗ್ಗಿ ಬರುತ್ತದೆ. ಅನುಭವಕ್ಕೆ ಗೋಚರಿಸುವ ಪ್ರತ್ಯಕ್ಷ ದೇವತೆಯೇ ತಾಯಿ. ಮಗುವಿಗೆ ತನ್ನ ರಕ್ತ-ಮಾಂಸ ಸರ್ವಸ್ವವನ್ನೂ ಧಾರೆಯೆರೆದು ಸಾಕಿ ಸಲುಹುವ ಮಹಾನ್ ದೇವತೆಯ ಒಂದೇ ಆಸೆ ಮತ್ತು ಗುರಿ ಯೆಂದರೆ ಎಲ್ಲೇ ಇರಲಿ, ಹೇಗೆ ಇರಲಿ, ತನ್ನ ಕುಡಿ ಸಶಕ್ತವಾಗಲಿ, ಐಶ್ವರ್ಯವಂತನಾಗಲಿ, ವಿದ್ಯಾವಂತನಾಗಲಿ, ಬುದ್ಧಿವಂತನಾಗಲಿ ಎಂದು.
ಆತನ ಬದುಕಿನುದ್ದಕ್ಕೂ ಕಷ್ಟಗಳು ಸುಳಿಯದಿರಲಿ, ಎಂದು ಭಗವಂತನಲ್ಲಿ ಪ್ರಾರ್ಥಿಸು ತ್ತಾಳೆ. ಜನಸಿದ ದಿನದಿಂದ ಆಕೆ ಜೀವಿತವಾಗಿರುವವರೆಗೂ ಮಗುವಿನ ಪಾಲಿಗೆ ಅವಳೇ ಮಾರ್ಗದರ್ಶಿ, ವೇದಾಂತಿ, ಗುರು ಮತ್ತು ಸಂರಕ್ಷಕಿಯಾಗಿರುತ್ತಾಳೆ. ಗರ್ಭದಲ್ಲಿ ಭ್ರೂಣವೊಂದು ಶೈಶವ, ಬಾಲ್ಯ, ಯೌವನ, ವಾರ್ಧಕ್ಯವೆಂಬ ನಾಲ್ಕು ಹಂತವನ್ನು ದಾಟಿ ಬೆಳೆದರೂ ತಾಯಿಯ ಮಮತೆಯೆಂಬ ಸಾಗರದಲ್ಲಿ ಯಾವ ವ್ಯತ್ಯಾಸವೂ ಕಾಣಿಸದು. ಆದಿ ಶಂಕರಾಚಾರ್ಯರು ತಮ್ಮ ಮಾತೆಯ ಕೊನೆಯ ದಿನಗಳಲ್ಲಿ ದುಃಖಿಸುತ್ತಾ ಈ ರೀತಿ ಸ್ತುತಿಸಿದರಂತೆ.
ನಾನು ಜನಿಸುವ ಸಮಯದಲ್ಲಿ, ಅಯ್ಯಾ, ಶಿವನೇ, ಕೃಷ್ಣನೇ, ಗೋವಿಂದನೇ ಎಂದು ದೇವರನ್ನು ಸ್ಮರಿಸುತ್ತಾ ನನಗೆ ಜನ್ಮ ನೀಡಿದೆ. ಶರೀರ ಒಣಗಿ, ಹೊಲಸು, ತ್ಯಾಜ್ಯಗಳಿಂದ ನಿನ್ನುದರ ಮಲಿನವಾದರೂ, ಒಂದು ಸಂವತ್ಸರದಷ್ಟು ಸಮಯ ನನಗಾಗಿ ಆ ನೋವನ್ನು ಸಹಿಸಿದ ನಿನ್ನ ಋಣ ನಾನು ತೀರಿಸಬಲ್ಲೆನೇ? ಹೌದು. ಆದಿಶಂಕರರ ನುಡಿಗಳಂತೆ, ಮಾತೆಯ ಋಣ ತೀರಿಸಲಾಗದು.
೨೭೦ದಿನಗಳು ತನ್ನ ಉದರದಲ್ಲಿ, ಮಗುವಿಗೆ ಮೂರು ವರ್ಷಗಳಾಗುವವರೆಗೆ ಕಂಕುಳಲ್ಲಿ, ಜೀವಿತವಾಗಿರುವವರೆಗೂ ಮಕ್ಕಳನ್ನು ಹೃದಯದಲ್ಲಿ ಬೈತಿರಿಸಿಕೊಂಡು ಕಾಪಾಡುವ, ಆಶೀರ್ವದಿಸುವ ಮಾತೆಗೆ ಮಾತೆಯೇ ಸಾಟಿ. ಮಗುವಿನ ತೊದಲು ನುಡಿಗಳು ಆಕೆಗೆ ಭಾವಗೀತೆಯಾಗುತ್ತದೆ. ಮಕ್ಕಳ ಯಶಸ್ಸು ಆಕೆಗೆ ಹಬ್ಬದ ಸಂಭ್ರಮವಾಗುತ್ತದೆ. ಅವರಿಗೆ ಉದ್ಯೋಗ ದೊರೆತಾಗ ಆಕೆಯ ಮಮತೆಯ ಮುಕುಟಕ್ಕೆ ಹೆಮ್ಮೆಯ ಗರಿ ಮೂಡಿಬಿಡುತ್ತದೆ.
ಅವರ ನೋವು-ದುಗುಡ-ದುಮ್ಮಾನ -ಚಿಂತನೆಗಳನ್ನು ತನ್ನದಾಗಿಸಿಕೊಂಡು ಪರಿಹರಿಸಲು ಭಗವಂತನಲ್ಲಿ ಪ್ರಾರ್ಥಿಸುವ ನಿಸ್ವಾರ್ಥ ಜೀವಿಯವಳು. ಜಗತ್ತಿನಲ್ಲಿ ಅತ್ಯದ್ಭುತ ರುಚಿಯೆಂದರೆ ಅಮ್ಮನು ತಯಾರಿಸುವ ಅಡುಗೆ. ಆಕೆ ಪ್ರೀತಿಯಿಂದ ನಾಯಿ, ಬೆಕ್ಕು, ಚಂದಮಾಮನನ್ನು ತೋರಿಸುತ್ತಾ, ಕಥೆಗಳನ್ನು ಹೇಳುತ್ತಾ ಉಣಬಡಿಸುವ ಕೈ ತುತ್ತಿನ ಎದುರು, ಸೇಲ್ಸ್‌ಮನ್ ಮನೆಬಾಗಿಲಿಗೆ ಹೊತ್ತು ತರುವ ಪಿಜ್ಜಾ, ಬರ್ಗರ್‌ಗಳು ಸಾಟಿಯೇ? ಮೊಸರನ್ನವನ್ನೇ ಹದವಾಗಿ ಕಲಸಿ, ಪಲ್ಯ, ಸಾಂಬಾರು, ಗೊಜ್ಜುಗಳ ಮೇಲೋಗರದೊಂದಿಗೆ, ಇನ್ನೊಂದೇ ತುತ್ತು ಎಂದು ಹೇಳುತ್ತಲೇ ಹತ್ತಾರು ತುತ್ತುಗಳನ್ನು ಬಡಿಸುವ ಅಮ್ಮನ ನೆನಪಾದಾಗಲೆಲ್ಲಾಬಾಲ್ಯ ಮರಳಿ ಬರಬಾರದೇ ಎನಿಸಿಬಿಡುತ್ತದೆ.
ಮಧ್ಯ ಪ್ರದೇಶದ ಸಿಂಧಿ ಜಿಲ್ಲೆಯ ರಾಜ್ಯದ ಆದಿವಾಸಿ ಮಹಿಳೆಯೊಬ್ಬಳು ಚಿರತೆಯ ವಿರುದ್ಧ ಕಾದಾಟ ಮಾಡಿ, ಚಿರತೆಯದವಡೆಯಿಂದ ತನ್ನ ಆರು ವರ್ಷದ ಮಗನನ್ನು ಕಾಪಾಡಿರುವುದಾಗಿ ವಾಹಿನಿಗಳಲ್ಲಿ ಬಿತ್ತರವಾಗಿದೆ. ತಾಯಿಯ ಒಲವಿನ ಸ್ಪರ್ಶ, ತಾಯಿ ಕಲಿಸಿದ ಮಾತು, ತಾಯಿಯ ಜೊತೆ ಇರಿಸಿದ ಹೆಜ್ಜೆ, ಮತ್ತು ತಾಯಿಯ ಪ್ರೀತಿಗೆ ಬೆಲೆ ಕಟ್ಟಲಾದೀತೇ? ಇನ್ನೊಂದು ಕಥೆಯ ಪ್ರಕಾರ, ಕೂಲಿ ಮಾಡುವ ತಾಯಿಯೊಬ್ಬಳು, ಮಗನ ಮದುವೆಗೆಂದು ತಾಯಿ ಕೂಡಿಸಿಟ್ಟ ಹಣ, ಪಾತ್ರೆ, ಬಂಗಾರದ ಬಳೆ,ನತ್ತುಗಳನ್ನು ಕದ್ದೊಯ್ದ ಮಗ ವೇಶ್ಯೆಯೊಬ್ಬಳಿಗೆ ನೀಡಿದನಂತೆ. ಇಷ್ಟಾದರೂ ತೃಪ್ತಿಯಾಗದ ಆ ವೇಶ್ಯೆ, ನಿನ್ನ ತಾಯಿಯ ಹೃದಯವನ್ನೇ ತೆಗೆದುಕೊಂಡು ಬಾ, ಎನ್ನುತ್ತಾ ಆತನನ್ನು ಮನೆಗೆ ಕಳುಹಿಸಿದಳು.
ಆಕೆಯ ಮಾತಿಗೆ ಸಮ್ಮತಿಸಿದ ಮಗ ಮನೆಯಲ್ಲಿ ನಿದ್ರಿಸಿದ್ದ ತಾಯಿಯ ಹೃದಯವನ್ನು ಕತ್ತರಿಸಿ, ಬೊಗಸೆಯಲ್ಲಿರಿಸಿಕೊಂಡುವೇಶ್ಯೆಯ ಮನೆಗೆ ಓಡಿದ. ತಟ್ಟನೆ ಆತನ ಬೊಗಸೆಯಲ್ಲಿದ್ದ ಮಾತೃ ಹೃದಯ ಅನುನಯದಿಂದ ‘ಮಗೂ ಕತ್ತಲೆಯಲ್ಲಿ ಎಡವಿ ಬಿದ್ದರೆ ಕೈ ಕಾಲುಗಳಿಗೆ ಪೆಟ್ಟಾಗುತ್ತದೆ. ನಿಧಾನವಾಗಿ ಹೋಗು’ ಎಂದಿತು. ಮಗನ ಕಣ್ಣಂಚಿನಲ್ಲಿ ನೀರಿತ್ತು. ಆದರೆ ಸಮಯ ಮೀರಿತ್ತು.
ತನ್ನ ಮಕ್ಕಳ ತಪ್ಪುಗಳನ್ನು ಕ್ಷಮಿಸುವ ಮಾತೆ, ಧರಿತ್ರಿಮಾತೆಯಲ್ಲವೇ? ತಾಯಿಯ ಋಣ ತೀರಿಸಲಾಗದು ಎಂಬ ಮಾತು ರಾಜಾ ತೋಡರಮಲ್ಲನಿಗೆ ಪಥ್ಯವಾಗಲಿಲ್ಲ. ತಾಯಿಗೆ ಸಿರಿಸಂಪತ್ತುಗಳನ್ನು ನೀಡಿ, ಋಣಮುಕ್ತನಾಗಲಿಚ್ಛಿಸಿದ. ಅದಕ್ಕುತ್ತರವಾಗಿ ತಾಯಿ, ಮಗೂ, ನನಗೆ ಧನ ಕನಕಗಳೇನೂ ಬೇಡ. ಒಂದು ರಾತ್ರಿ ನೀನು ನನ್ನ ಶಯನ ಕಕ್ಷೆಯಲ್ಲಿ ಮಲಗಿದರೆ ಸಾಕೆಂದಳು. ರಾಜಾ ತೋಡರಮಲ್ಲ ಸಂತಸದಿಂದಲೇ ಒಪ್ಪಿಗೆ ನೀಡಿದ. ರಾಜನಿಗೆ ಇನ್ನೇನು ನಿದ್ದೆ ಆವರಿಸಿತೆನ್ನುವ ಸಮಯದಲ್ಲಿ ತಾಯಿ ಆತನನ್ನು ಎಬ್ಬಿಸಿ, ‘ಮಗೂ ತುಂಬಾ ಬಾಯಾರಿಕೆಯಾಗಿದೆ. ಸ್ವಲ್ಪ ನೀರು ಕೊಡುತ್ತೀಯಾ?’ ಎಂದು ಕೇಳಿದಳು.
ನಿರ್ವಾಹವಿಲ್ಲದೆ, ರಾಜಾ ತೋಡರಮಲ್ಲ ಎದ್ದು ನೀರು ತುಂಬಿದ ಗಿಂಡಿಯನ್ನು ತಾಯಿಯ ಕೈಗಳಲ್ಲಿರಿಸಿದ. ಇದೇ ರೀತಿ ಮೂರು ಬಾರಿ, ಪ್ರತಿ ಹತ್ತು ಹದಿನೈದು ನಿಮಿಷಗಳಿಗೊಮ್ಮೆ ತಾಯಿ ಆತನನ್ನು ಎಬ್ಬಿಸಿ ನೀರು ಕೇಳುವುದು, ರಾಜ ಎದ್ದು ನೀರು ಕೊಡುವುದು ನಡೆಯಿತು. ನಾಲ್ಕನೆಯ ಬಾರಿ, ರಾಜನ ತಾಯಿ ಎರಡು ಮೂರು ಗುಟುಕು ನೀರು ಕುಡಿದು, ಮಿಕ್ಕ ನೀರನ್ನು ಆತನ ಹಾಸಿಗೆಯ ಮೇಲೆ ಚೆಲ್ಲಿದಳು. ರಾಜನಿಗೆ ಪಿತ್ತ ನೆತ್ತಿಗೇರಿತು.
‘ಅಮ್ಮಾ ನಿನಗೇನು ತಲೆ ಕೆಟ್ಟಿದೆಯೇ? ರಾತ್ರಿಯಿಡೀ ಬಾಯಾರಿಕೆ ಎನ್ನುತ್ತಾ ನೀರು ಕೇಳುವುದೇ ನಿನ್ನ ಕೆಲಸವೇ? ನನ್ನ ಹಾಸಿಗೆ ಒದ್ದೆಯಾಗಿದೆ. ನಾನು ಮಲಗಿಕೊಳ್ಳುವುದಾದರೂ ಹೇಗೆ? ನಿನ್ನ ಋಣ ತೀರಿಸುವ ನೆವದಲ್ಲಿ ನನಗೆ ಹುಚ್ಚು ಹಿಡಿಸುತ್ತೀ’ ಎಂದು ಕೂಗಾಡಿದ. ತಾಯಿ ನಗುತ್ತಾ ಉತ್ತರಿಸಿದಳು, ‘ಮಗೂ, ಒಂದು ರಾತ್ರಿಗೆ ನಿನಗೆ ಬೇಸರವಾಯಿತೆ? ಇಂತಹ ನೂರಾರು ರಾತ್ರಿಗಳ ಋಣ ತೀರಿಸುವ ಭಾರ ನಿನ್ನ ಮೇಲಿದೆ.
ಹಗಲು ರಾತ್ರಿಗಳೆನ್ನದೇ ನನ್ನ ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದೆ. ಬೆಳಗ್ಗೆಯಿಂದ ರಾತ್ರಿವರೆಗೆ ದುಡಿದು ಆಯಾಸದಿಂದ, ನಾನು ವಾಸನೆ ಸಹಿಸಿಕೊಂಡು, ಅದರಲ್ಲಿಯೇ ಮಲಗುತ್ತಿದ್ದೆ. ಒದ್ದೆಯಾದ ಹಾಸಿಗೆ ಮತ್ತು ವಾಸನೆ ನಿನಗೆ ತಗುಲಬಾರದೆಂದು, ನನ್ನ ಎದೆಯ ಮೇಲೆ ನಿನ್ನನ್ನು ಮಲಗಿಸಿಕೊಂಡು, ತಟ್ಟಿ ಮಲಗಿಸುತ್ತಿದ್ದೆ. ನಿನಗೆ ಜ್ವರ ಬಂದಾಗ, ರಾತ್ರಿಯಿಡೀ ಹೆಗಲ ಮೇಲೆಮಲಗಿಸಿಕೊಂಡು, ತಟ್ಟುತ್ತಾ ಮನೆಯಲ್ಲಿ ನಡೆದಾಡುತ್ತಿದ್ದೆ. ಲಾಲಿ ಹಾಡಿ ನಿನ್ನನ್ನು ಮಲಗಿಸುತ್ತಿದ್ದೆ. ಬಾಯಿಗೆ ಹಾಕಿದ ಅನ್ನವನ್ನು ನನ್ನ ಮೇಲೆ ಉಗಿದಾಗ, ಸೀರೆಯಿಡೀ ಮಲಿನವಾದರೂ ಬೇಸರ ಪಡುತ್ತಿರಲಿಲ್ಲ.
ಏಕೆಂದರೆ, ಮಗುವಿನ ಲಾಲನೆ ಪಾಲನೆಯ ಸಂತಸದಲ್ಲಿ ನನ್ನನ್ನೇ ನಾನು ಮರೆಯುತ್ತಿದ್ದೆ. ಈ ದಿನ ನೀರಿನಿಂದ ನಿನ್ನ ಹಾಸಿಗೆ ಮಾತ್ರ ಒದ್ದೆಯಾಗಿದೆ. ಮಕ್ಕಳು ಸುರಿಸುವ ಪ್ರಶ್ನೆಗಳ ಸುರಿಮಳೆಗೆ, ಬೇಸರವಿಲ್ಲದೆ ಸಮಾಧಾನದಿಂದ ಉತ್ತರಿಸುವ ತಾಳ್ಮೆ,ಮಾತೆಗಿದೆ. ಕಂದನಿಗಾಗಿ ಮಮತೆಯ ಮಹಾಪೂರವನ್ನೇ ಹರಿಸುವ ತಾಯಿಯ ಸಹನೆ, ತಾಳ್ಮೆ ಮತ್ತು ಪ್ರೇಮಗಳ ಅಗಾಧತೆ ಯನ್ನು ಅರಿತುಕೊಂಡು ಆಕೆಯನ್ನು ಆದರಿಸಿದರೆ ಸಾಕು, ತಾಯಿ ತೃಪ್ತಳಾಗುತ್ತಾಳೆ. ನೀನು ಮಾತ್ರವಲ್ಲ, ಜಗತ್ತಿನಲ್ಲಿರುವ ಯಾವ ಮನುಜನೂ ತಾಯಿಯ ಋಣವನ್ನು ತೀರಿಸಲಾರ’- ಮಾತೆಯ ನುಡಿಗಳನ್ನು ಕೇಳಿ ತೋಡರಮಲ್ಲ, ತಲೆದೂಗಿದ.
ಗಿಡವೊಂದು ಆರೋಗ್ಯವಾಗಿ ಬೆಳೆದು ಹೂ, ಹಣ್ಣು ನೀಡಬೇಕಾದರೆ, ಅದಕ್ಕೆ ತಾಯಿ ಬೇರು ಆರೋಗ್ಯವಾಗಿರಲೇಬೇಕು. ಕುಟುಂಬದಲ್ಲಿ ಸುಸಂಸ್ಕೃತಿ ನೆಲೆಸಬೇಕಾದರೆ ಅಮ್ಮ ನೆಮ್ಮದಿಯಿಂದಿರಬೇಕು. ತಾಯಿಯ ಬಳಿಯಲ್ಲಿದ್ದರೂ ಸರಿ, ದೂರ ವಾಗಿದ್ದರೂ ಸರಿ, ಆಕೆಯನ್ನು ನಿರ್ಲಕ್ಷಿಸುವುದು ಬೇಡ. ತಾಯಿಯ ಬಗ್ಗೆ ಹೃದಯ ಮಿಡಿಯುತ್ತಿರಲಿ. ಅಮ್ಮನಿಗೆ ಅಕ್ಕರೆಯಿಂದ ಆರೈಕೆ ಮಾಡುವುದೇ ನಾವು ತಾಯಿಗೆ ಸಲ್ಲಿಸುವ ದೊಡ್ಡ ಸೇವೆ. ಜೀವನದ ಪ್ರತಿ ಕ್ಷಣವೂ ಆ ಮಮತಾ ಮಾತೆಯ ಸೇವೆ, ಸ್ಮರಣೆ ಇದ್ದಾಗಲೇ ಜೀವನ ಸಾರ್ಥಕ. ಮಾರುಕಟ್ಟೆಗೆ ಹೊರಟಿದ್ದ ಮಗ, ಅಮ್ಮನಲ್ಲಿ ‘ನಿನಗೆ ಏನಾದರೂ ತರುವುದಿದೆಯೇ? ಒಂದು ಕಾಗದದಲ್ಲಿ, ಪಟ್ಟಿ ಮಾಡಿಕೊಡು’ ಎಂದ.
ಅಮ್ಮ ಪಟ್ಟಿಯಲ್ಲಿ ವಿವರಗಳನ್ನು ಬರೆದು ಮಗನಿಗೆ ಕೊಟ್ಟಳು. ಮಗ, ಮಾರುಕಟ್ಟೆಯಲ್ಲಿ ತನಗೆ ಬೇಕಾದ ಸಾಮಗ್ರಿಗಳನ್ನುಖರೀದಿಸಿದ ನಂತರ, ಅಮ್ಮ ಕೊಟ್ಟ ಪಟ್ಟಿ ತೆಗೆದ. ಪಟ್ಟಿಯಲ್ಲಿ ಅಮ್ಮ ಈ ರೀತಿ ಬರೆದಿದ್ದಳು. ‘ಮಾರುಕಟ್ಟೆಯಲ್ಲಿ ನಿನ್ನ ಬಿಡುವಿನ ಕೆಲ ಕ್ಷಣಗಳು ಸಿಗುವಂತಿದ್ದರೆ ಕೊಂಡುಕೊಂಡು ಬಾ. ನನ್ನ ಜೀವನದ ಸಂಜೆ ಕಾಲವಿದು. ಮುಪ್ಪು ಆವರಿಸಿದೆ. ನಿನ್ನ ಮನೆಯಲ್ಲಿನಾನಿರುವವರೆಗೆ, ನನ್ನ ಬಳಿಯಲ್ಲಿ ಕುಳಿತು ನನ್ನೊಡನೆ ನೀನು ಕಳೆದ ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಲು ನಿನಗೆ ಸಾಧ್ಯವಾದರೆ ನನ್ನ ಏಕಾಂಗಿತನದ ಕೊರಗು ದೂರವಾಗುತ್ತದೆ.
ಮುಂದಿನ ವರ್ಷದವರೆಗೆ ನಾನಿರುತ್ತೇನೋ ಇಲ್ಲವೋ ತಿಳಿಯದು, ಇದು ನನ್ನ ಕೊನೆಯ ಕೋರಿಕೆ.’ ಹೌದು ಅಮ್ಮ ನಮ್ಮಿಂದ ಏನೂ ಬೇಡುವುದಿಲ್ಲ. ಅಮ್ಮನ ಮನಸ್ಸಿನ ಚಿಂತನೆ, ಯೋಚನೆ, ಭಾವನೆಗಳನ್ನು ಹಂಚಿಕೊಂಡರೆ ಸಾಕು, ಆಕೆಯ ಮೊಗದಲ್ಲಿ ನಗುವರಳಿ ಬಿಡುತ್ತದೆ. ಆಧುನಿಕ ಉಪಕರಣಗಳ ಮಧ್ಯೆ ಒಂಟಿಯಾಗಿ ನಲುಗುತ್ತಿರುವ ಮಾತೆಯ ಬಿಕ್ಕು-ಸಿಕ್ಕುಗಳನ್ನು ಕೇಳಿಸಿಕೊಳ್ಳಲು ಮಕ್ಕಳಿಗೆ, ಸಮಯದ ಅಭಾವವೆಂಬ ನೆಪ ಸಲ್ಲ. ಕೆಹತೆ ಹೈ ತೆರೀ ಶಾನ್ ಮೆ ಜೊ, ಕೊಯಿ ಊಂಚೆ ಬೋಲ್ ನಹೀ, ಭಗವಾನ್ ಕೆ ಪಾಸ್ ಭಿ ಮಾತಾ, ತೆರೆ ಪ್ಯಾರ ಕಾ ಮೋಲ್ ನಹೀ. ಹೌದು ಮಾತೆಯ ಮಮತೆ ಯನ್ನು ಕುರಿತು ಬರೆಯಲು ಶಬ್ದಗಳ ಭಂಡಾರ ಸಾಲದು.
ಕರುಣೆ, ಸಹನೆ, ಮಮತೆಯ ಪ್ರತಿರೂಪವಾದ ಅಮ್ಮ ಮಕ್ಕಳೆಡೆಗೆ ತೋರುವ ಪ್ರೀತಿಯ ಆಳವನ್ನು ಭಗವಂತನಿಂದಲೂ ಅಳೆಯಲಾಗದು