ಬೈದರೂ ಹೊಡೆದರೂ ನಮ್ಮ ಹೆತ್ತವಳು ಅವಳೇ ಅಲ್ಲವೇ..!
ಅಮ್ಮನ ಕಥೆ
ಪೂರ್ಣೇಸ್ ಎಸ್.
@.
ಅದು ಅವನಿನ್ನು ಒಂದನೇ ತರಗತಿ. ಊರಿನ ಗ್ರಾಮದೇವತೆಯ ಜಾತ್ರೆಯ ಪ್ರಾರಂಭದ ದಿನಗಳು ಕೂಡ ಆಗಿತ್ತು. ಜಾತ್ರೆಯ ಪೂಜೆಪುನಸ್ಕಾರಗಳಿಗೆ ಸಿದ್ಧತೆ ಅಜ್ಜ-ಅಜ್ಜಿ ಮಾಡಿಕೊಳ್ಳುತಿದ್ದರೆ,  ಇವನು ಯಾವ ಆಟ ಸಾಮಾನು ಕೇಳಲಿ ಅಂತ ಪೀಠಿಕೆಹಾಕಿಕೊಳ್ಳುತಿದ್ದ. ಈ ವರ್ಷ ದೊಡ್ಡ ಆಟಿಕೆಯೊಂದನ್ನೇ ತೆಗೆಸಿಕೊಳ್ಳಬೇಕೆಂದು ಪ್ರಶಾಂತ ಪಣ ತೊಟ್ಟಿದ್ದ.
ಜಾತ್ರೆಯ ದಿನ ದೇವರ ದರ್ಶನ ಮುಗಿಸಿ, ಊರಿನ ಜನರೆಲ್ಲ, ಮಾಡಿಕೊಂಡಿದ್ದ ರೊಪ್ಪದ ಕಡೆ ಹೊರಟರು. ಪ್ರಶಾಂತನ ಅಮ್ಮನಿಗೆ ಬಳೆಗಳೆಂದರೆ ಹುಚ್ಚು. ದಾರಿಯ ಬದಿಯಲ್ಲಿದ್ದ ಬಳೆಗಾರನಿಂದ ಬಣ್ಣದ ಬಳೆಗಳನ್ನು ತೊಡಿಸಿಕೊಂಡಳು. ಆ ಜನಜಂಗುಳಿಯ ನಡುವೆ ಕಾಣುತಿದ್ದ ಬಣ್ಣ ಬಣ್ಣದ ಆಟದ ಸಾಮಾನುಗಳು ಪ್ರಶಾಂತನ ಮನಸ್ಸೆಳೆಯುತ್ತಿದ್ದವು. ಅದನ್ನ ನೋಡಿ ಅಮ್ಮನ ಕಡೆ ಮುಖ ಮಾಡಿ ಕೇಳಿದ ಪ್ರಶಾಂತ. ಅವಳು ಅವನ ಅಪ್ಪನ ಕಡೆ ನೋಡಿದಳು.
ಪ್ರಶಾಂತನ ಅಪ್ಪ ಕೆಂಗಣ್ಣಿನಿಂದ ‘ಅದುನ್ ತಗಂಡ್ ಏನ್ ಮಾಡಿಯೋ? ಉಂಬಂಗಲ್ಲ ತಿಂಬಂಗಲ್ಲ’ ಅಂತೇಳಿ ಗದರಿದ. ಹೀಗೆ ಹೇಳಿದ್ದೇ ತಡ ಪ್ರಶಾಂತ ಅಳಲು ಶುರುಮಾಡಿದ. ಸುಮ್ಮನಿದ್ದರೆ ಹೇಳಿ ಕೊಡಿಸಲು ಒಪ್ಪಿದಳು. ಇವನಿಗೆ ಅಳು ನಿಂತಿದ್ದರೂ, ಕಣ್ಣುಜ್ಜಿ ಅಳುವ ನಾಟಕ ಮಾಡುತ್ತಿದ್ದ. ಅವನ ಅಪ್ಪ ಇದನ್ನೆ ನೋಡಿ, ‘ಈಟೀಟುಕೆಲ್ಲ ಅಳ್ತನೆ, ಅಳ್ಬುರುಕ’ ಎಂದು ಕಾಲೆಳೆಯಲಾರಂಭಿಸಿದ.
ಜಾತ್ರೆ ಪೂರ್ತಿ ಎಲ್ಲೂ ಪ್ರಶಾಂತನ ಕೈ ಬಿಡದ ಅವನ ಅಮ್ಮ ಆಟಿಕೆಯ ಅಂಗಡಿ ಮುಂದೆ ಅಂಗಡಿಯವನ ಜೊತೆ ಚೌಕಾಸಿ ಮಾಡಿ ಹಣವನ್ನು ಕೊಡುವ ಭರದಲ್ಲಿ ಅವನ ಕೈ ಬಿಟ್ಟಳು. ಇವನ ಕೈಯಲ್ಲಿ ಬೇರೆ ಆಟಿಕೆ ಇದ್ದುದರಿಂದ ಅಮ್ಮನ ಕೈ ಬಿಟ್ಟಿದ್ದು ಇವನ ಅರಿವಿಗೂ ಬರಲಿಲ್ಲ. ಎರಡು ನಿಮಿಷ ಕಳೆದ ನಂತರ ಕತ್ತೆತ್ತಿ ಕೈ ಹಿಡಿದುಕೋ ಅಂತ ಕೈ ಕೊಟ್ಟರೆ ಹಿಡಿದುಕೊಳ್ಳಲು ಯಾರೂ ಇಲ್ಲ. ಗಾಬರಿಯಿಂದ ನೋಡಿದ, ಸುತ್ತಲೂ ಜನರಿದ್ದಾರೆ ಆದರೆ ಯಾರೂ ಕೂಡ ತನ್ನವರಲ್ಲ. ಈಗ ಅವನು  ನಿಜವಾಗಿಯೂ ಜಾತ್ರೆಯಲ್ಲಿ ಕಳೆದು ಹೋಗಿದ್ದ!!
ಕಳೆದು ಹೋಗಿದ್ದ ಅಂತ ಗೊತ್ತಿದ್ದರೂ ಅವನಿಗೇಕೋ ಅಳು ಬರುತ್ತಿರಲಿಲ್ಲ. ಆದರೆ ಅವನಿಗೆ ಒಳಗೊಳಗೆ ದಿಗಿಲೊಂದು ಕಾಡಿತ್ತು. ಸ್ವಲ್ಪ ಹೊತ್ತಾದ ಬಳಿಕ ಕೊನೆಗೂ ಅಮ್ಮ ಪ್ರಶಾಂತನನ್ನ ಹುಡುಕಿದಳು. ಅಮ್ಮನನ್ನು ಕಂಡೊಡನೆ ಅವಳ ಬಳಿ ಓಡಿ ಹೋಗಿ ತಬ್ಬಿಕೊಂಡ. ಅವಳು ಅವನನ್ನು ನೋಡಿ ಇನ್ನೊಂದ ಸಲ ಹಿಡ್ಕೊಂಡಿದ್ ಕೈ ಬಿಡ್ತಿಯಾ!? ಹಾ!? ಅಂತ ಬೈದು ಹೊಡೆದುಇನ್ನೂ ಅಳುವಂತೆ ಮಾಡಿದಳು. ಹುಟ್ಟಿನಿಂದಲೂ ಹಳ್ಳಿಯಲ್ಲಿದ್ದ ಪ್ರಶಾಂತನ ಕುಟುಂಬ ಏನಾದರೂ ಹೊಸತನ್ನು ಕೊಂಡು ಕೊಳ್ಳುವುದಕ್ಕೆ, ಇಲ್ಲ ಆಸ್ಪತ್ರೆಗಳ ಭೇಟಿಗೆ ಮಾತ್ರವೇ ನಗರದ ಕಡೆ ನೋಡುತಿದ್ದರು.
ಆದರೆ ವರುಷಗಳು ಉರುಳಿದಂತೆ ಪ್ರಶಾಂತನ ಹೆಚ್ಚಿನ ಓದಿಗಾಗಿ ಇನವೊಬ್ಬನೇ ದೂರದ ರಾಜಧಾನಿ ನಗರಕ್ಕೆ ಬರಬೇಕಾಯಿತು. ಓದಿನ ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸವೂ ದೊರಕಿತು. ಒಳ್ಳೆ ಕೆಲಸ, ಸಾಕಾಗುವಷ್ಟು ಸಂಬಳ ಬರುತಿದ್ದರೂ ಮನಸ್ಸೆಸದಾ ಅವನ ಹಳ್ಳಿಯ ಕಡೆಗೇ ವಾಲುತಿತ್ತು. ಆ ನಗರದ ಜೀವನ ಕಲವೇ ದಿನಗಳಿಗೆ ಬೇಸತ್ತು ಹೋಗಿ, ಎಲ್ಲವನ್ನೂ ತೊರೆದು ಹಳ್ಳಿಗೆ ಮರಳಿಬಿಡೋಣ ಅಂತ ಅನಿಸಿದರೂ ಜವಾಬ್ದಾರಿಗಳ ನೆನಪಾಗಿ ಮತ್ತೆ ನಗರದ ಜೀವನಕ್ಕೆ ಶರಣಾಗುತಿದ್ದ. ಹಿಂದೊಬ್ಬ ತನ್ನ ಆಸೆಗಳನ್ನೆ ತ್ಯಜಿಸಿ ಬುದ್ಧನಾದನಂತೆ, ಇಂದೊಬ್ಬ ತನ್ನ ಆಸೆಗಳನ್ನೆ ತ್ಯಜಿಸಿ ಜವಾಬ್ದಾರಿಗಳಿಗೆ ಬದ್ಧನಾದನಂತೆ.
ಪ್ರತೀ ತಿಂಗಳು ಸಂಬಳವಾದ ಕೂಡಲೇ ಮನೆಯ ಕರ್ಚಿಗೆಂದು ಒಂದಿಷ್ಟು ನಿಗದಿತ ಹಣವನ್ನು ತಪ್ಪದೆ ಕಳಿಸುತಿದ್ದ. ಇದ್ದ ಸಾಲವೆಂಬ ಸಂಕಷ್ಟಗಳನ್ನ ತೀರಿಸಿ ಅಪ್ಪ ಅಮ್ಮನ ಭಾರ ಕೆಳಗಿಳಿಸಿದರೂ ಮನಸ್ಸಿನಲ್ಲಿ ಯಾವುದೋ ಒಂದು ಲೋಪ ಅವನಿಗೆ ಕಾಡುತ್ತಲೇ ಇರುತಿತ್ತು. ಅದು ಏನು ಅಂತ ಅವನಿಗೂ ಸಹ ತಿಳಿಯುತ್ತಿರಲಿಲ್ಲ. ರವಿ ಪ್ರಶಾಂತನ ರೂಮ್ ಮೇಟ. ಆತ ಒಂದು ಮಕ್ಕಳ ಪ್ಲೇ ಸ್ಕೂಲ್ ನಲ್ಲಿ ಕೆಲಸ ಮಾಡುತ್ತಾನೆ. ಪ್ರಶಾಂತನಿಗೆ ರವಿಯನ್ನು ಕಂಡರೆ ಒಂಥರಾ ಹೊಟ್ಟೆಕಿಚ್ಚು. ರವಿ ಮನಸ್ಸಿಗೆಬಂದಾಗೆಲ್ಲ ಅಮ್ಮನ ನೋಡಲು ಊರಿಗೆ ಹೋಗಿ ಬರುತ್ತಾನೆ, ಆದರೆ ಪ್ರಶಾಂತ ಊರಿಗೆ ಹೋಗಲು ರಜೆಗಾಗಿ ಕಾಯಬೇಕು. ಆಗ ತಾನೆ ಊರಿಂದ ಬಂದಿದ್ದ ರವಿಯನ್ನು ನೋಡಿ, ಏನ್ ರವಿ, ಹೇಗಿತ್ತು ಊರು? ಅಮ್ಮ ಚೆನ್ನಾಗಿದ್ದಾರಾ? ಅಂತ ಕೇಳಿದ ಪ್ರಶಾಂತ. ಅದಕೆ ರವಿ, ಹು ಬ್ರೊ! ಎಲ್ಲ ಆರಾಮ.
ನೀವು ಯಾವಾಗ ಹೋಗ್ತೀರ ಊರಿಗೆ ಅಮ್ಮನ ನೋಡೋಕೆ? ಅಂತ ಕೇಳ್ತಾನೆ. ಹಾ ಅದೆ ಸಧ್ಯಕ್ಕೆ ಚೂರು ಕೆಲಸಗಳಿವೆ, ಮುಂದಿನ ತಿಂಗಳು ರಜೆ ಕೇಳೀನಿ., ಹೋಗ್ತೀನಿ. ಈಗ ಫೋನಲ್ಲಿ ಅಮ್ಮನೊಟ್ಟಿಗೆ ಮಾತಾಡಿದೆ ಪ್ರಶಾಂತ ಉತ್ತರಿಸಿದ. ರವಿ, ಅಮ್ಮನನೋಡೋಕೆ ರಜ ಯಾಕೆ ಬ್ರೊ!? ನೋಡ್ಬೇಕು ಅಂತ ಮನಸಿಗೆ ಬಂದ್ರೆ ಹೋಗಿ ನೋಡ್ಕೊಂಡು ಬರ್ಬೇಕು ಅಷ್ಟೆ. ಕೆಲ್ಸ ಇರ್ತವೆ, ಹೋಗ್ತವೆ. ಈ ಕೆಲ್ಸ ಹೋದರೆ ಹೋದ್ರೆ ಇನ್ನೊಂದು ಕೆಲ್ಸ ಸಿಗುತ್ತೆ.. ಅಮ್ಮ ಹೋದ್ರೆ? ಹೀಗ್ ಹೇಳ್ದೆ ಅಂತ ಬೇಜಾರಾಗ್ಬೇಡಿ ಬ್ರೋ; ನಾನು ಈ ಪ್ಲೇ ಸ್ಕೂಲ್ ನಲ್ಲಿ ಕೆಲ್ಸ ಮಾಡ್ತಾ ಒಂದು ಅರ್ಥ ಆಗಿದ್ದು ಏನು ಅಂದ್ರೆ, ತಂದೆ ತಾಯಿ ಕೆಲಸದ ಭರಾಟೆಯಲ್ಲಿ ಬೆಳಿಗ್ಗೆನೇ ಮಕ್ಕಳನ್ನ ಪ್ಲೇಸ್ಕೂಲಿಗೆ ಬಿಟ್ಟು ಹೋಗ್ತಾರೆ.
ಅವು ಅಳ್ತಾ ಇರಲಿ, ಸಪ್ಪಗಿರಲಿ ಏನೂ ನೋಡಲ್ಲ. ಆ ಮಕ್ಕಳಿಗೆ ಬೇಕಾದ ಆಟಸಾಮಾನು, ತಿಂಡಿ ತಿನುಸು ಎಲ್ಲಾ ಕೊಟ್ಟು ಮಕ್ಕಳನ್ನ ಬಿಟ್ಟು ಹೋಗುತ್ತಾರೆ. ಆದರೆ ಈ ಮುಗ್ಧ ಮಕ್ಕಳಿಗೆ ಈ ಸಮಯದಲ್ಲಿ ಬೇಕಾಗಿರೋದು ತಂದೆ ತಾಯಿಯ ಪ್ರೀತಿಯೇ ಹೊರತು ಅವರು ಕೊಟ್ಟು ಹೋದ ತಿಂಡಿಗಳಲ್ಲ! ಹಾಗೆ ನೋಡಿದಾಗ ವಯಸ್ಸಾದ ಮೇಲೆ ಹೆತ್ತವರು ಮತ್ತೆ ಮಕ್ಕಳಾಗ್ತಾರೆ. ನಾವು ಕೆಲಸ ಅಂತ ಅವರಿಂದ ದೂರ ಇದ್ದು ನಾವು ಎಷ್ಟೆ ಹಣ ಕಳುಹಿಸಿದರೂ ಅವರಿಗೆ ಸಮಾಧಾನ ಆಗುವುದಿಲ್ಲ. ಅವರಿಗೀಗ ಬೇಕಾಗಿರೋದು ನಾವು ಮತ್ತು ನಮ್ಮ ಅಕ್ಕರೆ. ಹೋಗಿ ಬ್ರೋ, ಹೋಗಿ ಅಮ್ಮನ ನೋಡ್ಕೊಂಡು ಬನ್ನಿ, ಮಿಕ್ಕಿದ್ದು ಆಮೇಲೆ ಅಂತ ಹೇಳಿದ.
ರವಿ ಹೇಳಿದ್ದು ಕೇಳಿ ಪ್ರಶಾಂತನಿಗೆ ಕಾಡುತಿದ್ದ ಲೋಪ ಅಮ್ಮ ಅಂತ ಅರಿವಾಗಿ ತಕ್ಷಣವೇ ಅಮ್ಮನ ನೋಡಲು ಊರಿಗೆ ಹೊರಟ. ಕಾಕತಾಳೀ ಯವೆಂದರೆ ಊರಿನ ಜಾತ್ರೆ ಮರುದಿನವೇ ಆಗಿತ್ತು. ಇಪ್ಪತ್ತು ವರ್ಷಗಳ ನಂತರ ಮತ್ತೆ ಅದೇ ಜಾತ್ರೆಗೆ ಹೋದರು. ದೇವರ ದರ್ಶನ, ತೇರಿನ ಎಳೆಯುವಿಕೆ ಎಲ್ಲವೂ ಸುಸೂತ್ರವಾಗಿ ಆಯ್ತು. ಮಂಡಿ ಕಾಲಿನ ವರೆಗೆ ಬರುವಂತ ಕಾರನ್ನು ಕೊಡಿಸಿದ್ದ ಅಮ್ಮನಿಗೆ ಈಗ ಮಂಡಿ ನೋವಿರುವ ಕಾರಣಕ್ಕೆ ಒಂದು ನಿಜವಾದ ಕಾರನ್ನೇ ಕೊಂಡಿದ್ದ ಪ್ರಶಾಂತ. ಜಾತ್ರಾ ಕಾರ್ಯಗಳನ್ನೆ ಮುಗಿಸಿ ಮರಳಿ ಕಾರಿನ ಕಡೆ ವಾಪಾಸಾಗಬೇಕಾದರೆ, ಅವಳು ದಾರಿ ತಪ್ಪಿ ಹಿಂದೆಯೇ ಉಳಿದಳೋ ಅಥವಾ ಇವನು ಅವಳ ತಪ್ಪಿಮುಂದೆ ಬಂದೆನೋ ಗೊತ್ತಿಲ್ಲ. ಈಗ ಪ್ರಶಾಂತನ ಅಮ್ಮ ಅದೇ ಜಾತ್ರೆಯಲ್ಲಿ ಕಳೆದುಹೋಗಿದ್ದಳು.
ಅವಳಿಗೆ ಬಳೆಗಳ ಮೇಲಿನ ಮೋಹ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಹಾಗಾಗಿ ಅವಳು ಬಳೆಗಳನ್ನ ನೋಡುತ್ತಾ ಯಾವುದೋ ಅಂಗಡಿಯಲ್ಲಿ ಇವನನ್ನು ತಪ್ಪಿದ್ದಾಳೆ. ಆದರೆ ಈಗ ಅವಳ ಹತ್ತಿರ ಅವಳು ಕೇಳದೇ ಇದ್ದರು ಅವಳಿಗೊಂದು ಸ್ಮಾರ್ಟ್ ಫೋನೆಂಬ ಆಟಿಕೆ ಕೊಡಿಸಿದ್ದ ಪ್ರಶಾಂತ. ಮೊದಲು ಅವಳಿಗೆ ಕರೆ ಮಾಡಿದ, ಉತ್ತರಿಸಲಿಲ್ಲ. ಮತ್ತೊಮ್ಮೆ ಪ್ರಯತ್ನಿಸಿದ, ಪ್ರಯೋಜನ ಆಗಲಿಲ್ಲ. ಜಾತ್ರೆಯ ಸದ್ದು ಗದ್ದಲದಲ್ಲಿ ಫೋನಿನ ರಿಂಗ್ ಅವಳಿಗೆ ಕೇಳಿಸುತಿಲ್ಲ.
ಪ್ರಶಾಂತನೂ ಕೂಡ ತುಂಬಾ ಜೋಪಾನ, ಹೀಗೊಂದು ಸಂದರ್ಭ ಬರಬಹುದು ಎಂದು ಊಹಿಸಿ ಅವಳ ಫೋನಿನ ಲೊಕೇಷನ್ ಅನ್ನು ಯಾವಾಗಲು ಇವನ -ನಿನಲ್ಲಿ ಟ್ರಾಕ್ ಮಾಡುತಿದ್ದ. ಅದರ ಸಹಾಯದಿಂದ ಅವಳಿರುವಲ್ಲಿಗೆ ದೌಡಾಯಿಸಿದ ಪ್ರಶಾಂತ. ಅವಳು ಹೆದರಿದ್ದಳು, ಗಾಬರಿಯಾಗಿದ್ದಳು. ಇವನನ್ನು ಕಂಡೊಡನೆ ಓಡಿ ಬಂದು ಕೈಯನ್ನು ಹಿಡಿದಳು. ಪ್ರಶಾಂತ ಕೋಪಗೊಳ್ಳಲಿಲ್ಲ, ಬೈಯಲಿಲ್ಲ,. ಏನೂ ತೊಂದರೆಯಿಲ್ಲದ ಸಿಕ್ಕಳಲ್ಲ ಅಂತ ಸಮಾಧಾನ ಮಾಡಿಕೊಂಡ, ಖುಷಿ ಪಟ್ಟು ದೇವರಿಗೆ ಕೃತಜ್ಞತೆ ಹೇಳಿದ!