ನೆಲೆ ರಹಿತ ಮಣಿಪುರ ಬುಡಕಟ್ಟು ಜನಾಂಗ
ಅಭಿಮತ
ಶಶಿಕುಮಾರ್‌ ಕೆ.
ಇತ್ತೀಚೆಗಷ್ಟೇ ಮಣಿಪುರ ಸರ್ಕಾರ ಮನೆ-ಮನೆ ಸರ್ವೆ ನಡೆಸಿ ಅಕ್ರಮ ಕುಕಿಚಿನ್ ಜನರನ್ನು ಗುರುತಿಸಿದ್ದು ಅವರನ್ನು ರಾಜ್ಯ ದಿಂದ ಹೊರಹಾಕಲು ಸಿದ್ಧತೆ ನಡೆಸುತ್ತಿತ್ತು. ಆದ್ದರಿಂದ ಈ ಅಕ್ರಮ ವಲಸಿಗರು ಸಹ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಮಣಿಪುರವನ್ನು ದಿಗ್ಬಂಧನೆ ಮಾಡಲು ಹೊರಟಿದ್ದಾರೆ.
ಮಣಿಪುರ ಒಮ್ಮೆಲೇ ಹೊತ್ತಿ ಉರಿದಿದೆ. ಎಂಟು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದ್ದು ರಾಜ್ಯದ ಹೆಚ್ಚಿನ ಜಿಲ್ಲೆ ಗಳಲ್ಲಿ ಕರ್ಫ್ಯೂ ವಿಧಿಸಬೇಕಾಗಿ ಬಂತು. ಪರಿಸ್ಥಿತಿಯನ್ನು ಸರಿದಾರಿಗೆ ತರಲು ಏಕಾಏಕಿ ಮಿಲಿಟರಿ ಪಡೆಯನ್ನು ವಿಮಾನ ಗಳ ಮೂಲಕ ಕರೆತರಬೇಕಾಯಿತು. ಇದರರ್ಥ ತುಂಬಾ ಅಪಾಯ ಕಾರಿ ತುರ್ತುಪರಿಸ್ಥಿತಿ ಅಲ್ಲಿ ಒದಗಿ ಬಂದಿದೆ.
ಕಂಡಲ್ಲಿ ಗುಂಡಿಕ್ಕುವ ಆದೇಶವೂ ಜಾರಿಯ್ತು. ಹಲವಾರು ವರ್ಷಗಳಿಂದ ಪ್ರಶಾಂತವಾಗಿದ್ದ ರಾಜ್ಯದಲ್ಲಿ ಅಶಾಂತಿ ತಾಂಡವ ವಾಡಲು ಹಲವಾರು ಕಾರಣಗಳಿವೆ. ಮಣಿಪುರ ರಾಜ್ಯವು ಒಟ್ಟು ೨೨,೦೦೦ ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ರಾಜ್ಯದ ಮಧ್ಯದಲ್ಲಿ ೨೦೦೦ ಚದರ ಕಿಲೋಮೀಟರ್ ಪ್ರಾಂತ್ಯವಿದ್ದು ಇದರಲ್ಲಿಯೇ ಮಣಿಪುರದ ಹಿಂದೂ ಜನಾಂಗವಾದ ಮೈತೇಯಿ ಜನಾಂಗವಿದೆ. ಇವರಲ್ಲಿ ಕೆಲವರು ವೈಷ್ಣವ ಪಂಥವನ್ನು ಅನುಸರಿಸಿದರೆ ಇನ್ನೂ ಕೆಲವರು ಸನಮಾಹಿ ಪಂಥವನ್ನು ಅನುಸರಿಸುತ್ತಾರೆ.
ಮಣಿಪುರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. ೮೦ ರಷ್ಟು ಇವರೇ ಇದ್ದಾರೆ. ಇವರೆಲ್ಲರೂ ಸಹ ೨೦೦೦ ಚದರ ಕಿಲೋಮೀಟರ್ ಭೂಭಾಗದಲ್ಲಿಯೇ ವಾಸಿಸುತ್ತಿದ್ದಾರೆ. ಉಳಿದ ೨೦ ಸಾವಿರ ಚದರ ಕಿಲೋ ಮೀಟರ್ ಭೂ ಪ್ರದೇಶದಲ್ಲಿ ೩೮ ವಿವಿಧ ಬುಡಕಟ್ಟಿನ ಜನರಿರುತ್ತಾರೆ. ಇದರಲ್ಲಿ ನಾಗಾ, ಕುಕಿಚಿನ್ ಹೀಗೆ ವಿವಿಧ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ಇವರೆಲ್ಲರೂ ಸಹ ಮಣಿಪುರದ ರಾಜ್ಯದ ಸುತ್ತಲೂ ವಾಸಿಸುತ್ತಿದ್ದಾರೆ. ಇವರಲ್ಲಿ ಶೇ. ೮೦ ರಷ್ಟು ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ವಾಗಿದ್ದಾರೆ.
ಈಗ ಮಣಿಪುರದ ಪ್ರಧಾನವಾದ ಸಮಸ್ಯೆ ಎಂದರೆ ಬುಡಕಟ್ಟು ಜನರು ವಾಸಿಸುವ ಶೇ. ೮೦ ರಷ್ಟು ಭೂಭಾಗದಲ್ಲಿ ಬುಡಕಟ್ಟೇ ತರ ಜನರು ಮನೆ ಕಟ್ಟಲು, ಭೂಮಿಯನ್ನು ಕೊಳ್ಳಲು ಅವಕಾಶವಿಲ್ಲ. ಅಂದರೆ ಅವರ ರಾಜ್ಯದಲ್ಲೇ ಬುಡಕಟ್ಟೇತರ ಜನರು ೨೦೦೦ ಚದರ ಕಿಲೋಮೀಟರ್ ಭೂ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದರೂ ಸಹ ರಾಜ್ಯದ ಬೇರೆ-ಬೇರೆ ಭಾಗಗಳಲ್ಲಿ ನೆಲೆಸಲು ಸಾಧ್ಯವಿಲ್ಲ. ಶೇ. ೮೦ ರಷ್ಟು ಭೂಭಾಗದಲ್ಲಿರುವ ಶೇ.೨೦ರಷ್ಟು ಜನರು ತಮ್ಮ ಪ್ರಾಂತ್ಯ ವಲ್ಲದೆ ಉಳಿದ ೨,೦೦೦ ಚದರ ಕಿಲೋಮೀಟರ್ ಭೂ ಭಾಗದಲ್ಲಿ ಎಲ್ಲಿ ಬೇಕಾದರೂ ಸಹ ಮನೆಗಳನ್ನು ನಿರ್ಮಿಸಿ ಕೊಳ್ಳಬಹುದು, ಭೂಮಿಯನ್ನು ಕೊಳ್ಳಬಹುದು. ಮಣಿಪುರದಲ್ಲಿ ಆತಂಕಕ್ಕೆ ಕಾರಣವಾಗುವ ವಿಚಾರ ಇದಾಗಿದೆ.
ಕೆಲವು ಗ್ರಾಮಗಳಲ್ಲಿ ಅವರು ದೊಡ್ಡ ಕಾಲೋನಿಗಳನ್ನೇ  ನಿರ್ಮಿಸಿ ಕೊಂಡಿದ್ದಾರೆ. ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಸ್ವಲ್ಪ ಭೂಮಿಯನ್ನು ಕೊಂಡುಕೊಂಡು ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಸುಮಾರು ನೂರಕ್ಕೂ ಹೆಚ್ಚು ಬುಡಕಟ್ಟು ಜನರನ್ನು ಕರೆತಂದು ಇಂಪಾಲ್ ನಗರದ ಮಧ್ಯೆಯೇ ಕಾಲೋನಿಯನ್ನು ನಿರ್ಮಿಸಿದ್ದಾರೆ. ಇದರಿಂದ ಮೈತೇಯಿ ಜನರ ಸಂಖ್ಯೆ ಹೆಚ್ಚು ಭೂಮಿ ಕಡಿಮೆ ಎಂಬಂತಾಗಿದೆ. ಬುಡಕಟ್ಟು ಜನರ ಪ್ರದೇಶಕ್ಕೆ ಅವರು ತೆರಳಲು ಸಾಧ್ಯವಿಲ್ಲ. ಇದರಿಂದ ಮಣಿಪುರಿಗಳು ಬಹಳ ಕಾಲದಿಂದ ನಮ್ಮನ್ನು ಸಹ ಬುಡಕಟ್ಟು ವರ್ಗಕ್ಕೆ ಸೇರಿಸಿ ಇದರಿಂದ ರಾಜ್ಯದ ಉಳಿದ ಭೂಭಾಗದಲ್ಲಿ ನಾವು ಮನೆಗ ಳನ್ನು ನಿರ್ಮಿಸಿಕೊಳ್ಳಲು, ಆಸ್ತಿಗಳನ್ನು ಕೊಳ್ಳಲು ಅವಕಾಶ ಸಿಗುತ್ತದೆ ಎಂದು ಬೇಡಿಕೆ ಇಡುತ್ತಿದ್ದಾರೆ.
೧೯೩೧ರವರೆಗೂ ಮಣಿಪುರದಲ್ಲಿ ವಾಸಿಸುವ ಜನರೆಲ್ಲರೂ ಬುಡಕಟ್ಟು ವರ್ಗದ ಪಟ್ಟಿಯಲ್ಲಿಯೇ ಇದ್ದರು. ೧೯೩೧ರಲ್ಲಿ ಬ್ರಿಟಿಷರು ಮೈತೇಯಿ ಜನಾಂಗವನ್ನು ಬುಡಕಟ್ಟು ಪಟ್ಟಿಯಿಂದ ಹೊರಗಿಟ್ಟರು. ಇತ್ತೀಚೆಗೆ ಮಣಿಪುರ ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಭಿ ಪ್ರಾಯವನ್ನು ಕೇಳಿತ್ತು. ಮಣಿಪುರ ಸರ್ಕಾರವು ಮೈತೇಯಿ ಜನಾಂಗಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಯೋಚನೆ ಇದೆ ಎಂದು ಹೇಳಿತ್ತು. ಇದರಿಂದ ಬುಡಕಟ್ಟು ಪ್ರದೇಶದಲ್ಲಿನ ಸಂಸ್ಥೆಗಳು, ವಿದ್ಯಾರ್ಥಿ ಸಂಸ್ಥೆಯಾದ ಆಲ್ ಮಣಿಪುರ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಪ್ರತಿಭಟನೆ ಆರಂಭಿಸಿತು.
ಇವರು ದೊಡ್ಡ ಮಟ್ಟದಲ್ಲಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಬುಡಕಟ್ಟು ಜನರ ಬಾಹುಳ್ಯವುಳ್ಳ ಚೂಡಚಾಂದ್ಪುರ ಜಿಲ್ಲೆಯಲ್ಲಿ ಒಂದು ಜಿಮ್ ಕೇಂದ್ರವನ್ನು ಉದ್ಘಾಟಿಸಲು ಮುಖ್ಯಮಂತ್ರಿ ಹೋಗಬೇಕಾಗಿತ್ತು. ಆದರೆ ಪ್ರತಿಭಟನಾಕಾರರು ಇಡೀ ಜಿಮ್ ಕೇಂದ್ರವನ್ನು ಅಗ್ನಿಯಲ್ಲಿ ಆಹುತಿ ಮಾಡಿದರು. ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳನ್ನು ಮೂರು ದೃಷ್ಟಿಕೋನ ಗಳಲ್ಲಿ ಕಾಣಬಹುದು. ಒಂದೆಡೆ ಕ್ರೈಸ್ತವ ಹಿಂದೂಗಳು, ಇನ್ನೊಂದೆಡೆ ಬುಡಕಟ್ಟೇತರರು, ಮತ್ತೊಂದೆಡೆ ಭೂಮಿಗೆ ಸಂಬಂಽಸಿದ ವಿವಾದ. ಈ ಹಿಂಸಾತ್ಮಕ ಪ್ರತಿಭಟನೆಗೆ ಮತ್ತೊಂದು ಕಾರಣವೂ ಸೇರ್ಪಡೆಯಾಗಿದೆ.
ಮಣಿಪುರದ ಗಡಿಯೂ ಮಯನ್ಮಾರ್‌ನೊಂದಿಗಿದೆ. ಮಯನ್ಮಾರ್ ನಲ್ಲಿನ ಕುಕಿಚಿನ್ ಬುಡಕಟ್ಟಿಗೆ ಸೇರಿದ ಜನರೇ ಮಣಿಪುರ ದಲ್ಲೂ ಇದ್ದಾರೆ. ಮಣಿಪುರದ ಕಾನ್ ಪಾಪ್ಪಿ, ಚೂಡಚಾಂದ್ಪುರ ಮುಂತಾದ ಜಿಲ್ಲೆಗಳಲ್ಲಿ ಕುಕಿಚಿನ್ ಬುಡಕಟ್ಟಿಗೆ ಸಂಬಂಧಿಸಿದ ಜನರಿದ್ದಾರೆ. ಇವರು ಮಯನ್ಮಾರ್‌ನಿಂದ ಮಣಿಪುರಕ್ಕೆ ಬಂದು ಅರಣ್ಯ ಪ್ರದೇಶಗಳಲ್ಲಿ ಗ್ರಾಮಗಳನ್ನು ನಿರ್ಮಿಸಿಕೊಂಡಿದ್ದಾರೆ.
ಈ ರೀತಿಯ ೩೮ ಹೊಸ ಗ್ರಾಮಗಳು ನಿರ್ಮಾಣವಾಗಿವೆ. ಮಣಿಪುರದ ಮೂಲ ನಿವಾಸಿಗಳಾದ ಕುಕಿಚಿನ್ ಬುಡಕಟ್ಟು ಜನರು ಸಹ ಇವರಿಗೆ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚಿಗಷ್ಟೇ ಮಣಿಪುರ ಸರ್ಕಾರ ಮನೆ-ಮನೆ ಸರ್ವೆ ನಡೆಸಿ ಅಕ್ರಮ ಕುಕಿಚಿನ್ ಜನರನ್ನು ಗುರುತಿಸಿದ್ದು ಅವರನ್ನು ರಾಜ್ಯದಿಂದ ಹೊರಹಾಕಲು ಸಿದ್ಧತೆ ನಡೆಸುತ್ತಿತ್ತು. ಆದ್ದರಿಂದ ಈ ಅಕ್ರಮ ವಲಸಿಗರು ಸಹ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಮಣಿಪುರವನ್ನು ದಿಗ್ಬಂಧನೆ ಮಾಡಲು ಹೊರಟಿದ್ದಾರೆ.
ಮಣಿಪುರಕ್ಕೆ ಬರುವ ಎಲ್ಲಾ ಮಾರ್ಗಗಳನ್ನು ದಿಗ್ಬಂಧನೆ ಮಾಡುವುದು ಸುಲಭ. ಏಕೆಂದರೆ ಈ ರಾಜ್ಯಕ್ಕೆ ಕೇವಲ ಎರಡೇ ಭೂ ಮಾರ್ಗಗಳಿವೆ. ಮೊದಲನೆಯದು ನಾಗಾಲ್ಯಾಂಡ್‌ನ ಕೊಹಿಮಾ, ಮಾಮೋ ಮೂಲಕ ಇದ್ದರೆ ಮತ್ತೊಂದು ಸಿಲ್ಚರ್‌ನಿಂದ ಹೋಗುವ ಮಾರ್ಗವಿದೆ. ಈ ಎರಡು ಮಾರ್ಗಗಳಲ್ಲಿ ಎಲ್ಲಾದರೂ ಸರಿ ಹೈವೇಯನ್ನು ಬಂದ್ ಮಾಡಿದರೆ ಮಣಿಪುರಕ್ಕೆ ಸರಕುಗಳ ಸಾಗಾಟ ಮತ್ತು ಜನರ ಓಡಾಟಕ್ಕೆ ಅವಕಾಶವಿರುವುದಿಲ್ಲ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಈ ಹಿಂದೆ ಮಣಿಪುರದಲ್ಲಿ ಪೆಟ್ರೋಲ್ ದರ ೨೦೦೦ರು, ಸಿಲೆಂಡರ್ ದರ ೩೦೦೦ ರುಗೆ ಏರಿಕೆಯಾದ ಇತಿಹಾಸವಿದೆ. ಇದರಿಂದ ಭಾರತೀಯ ಸೈನ್ಯ ಮಣಿಪುರಕ್ಕೆ ತತ್ ಕ್ಷಣವೇ ಧಾವಿಸಿದೆ.
ಮಣಿಪುರವು ಮೊದಲಿನಂತೆ ಪ್ರಶಾಂತವಾಗಿರಲು ಮಯನ್ಮಾರ್‌ನ ಕುಕಿಚಿನ್ ಬುಡಕಟ್ಟು ಜನರನ್ನು ಹೊರ ಕಳುಹಿಸಬೇಕಾದ ಅನಿವಾರ್ಯತೆ ಇದೆ. ಅರಣ್ಯ ಸಂರಕ್ಷಣಾ ಕಾಯ್ದೆ-೨೦೨೧ರ ರೂಲ್ ನಂಬರ್ ೭೬ರ ಪ್ರಕಾರ ಅರಣ್ಯವನ್ನು ಆಕ್ರಮಿಸು ವವರನ್ನು ಶಿಕ್ಷೆ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಈ ಕಾಯ್ದೆಯನ್ನೇ ಅಕ್ರಮ ವಲಸಿಗರು ಪ್ರಶ್ನಿಸುತ್ತಿದ್ದಾರೆ. ಇದರಿಂದ ಮಣಿಪುರದ ಮೂಲ ನಿವಾಸಿಗಳಿಗೆ ಭೂಮಿ ಇಲ್ಲದಂತಾಗಿದೆ. ಇದೆಲ್ಲವೂ ಸಹ ವಿವಾದಕ್ಕೆ ಕಾರಣವಾಗಿದೆ. ಇಷ್ಟು ದಿನಗಳ ಕಾಲ ಮಣಿಪುರ ಬುಡಕಟ್ಟು ಜನರು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಮೈತೇಯಿ ಜನರು ಈಗ ಅರಣ್ಯದ ಮಧ್ಯೆ ಇರುವ ಅಕ್ರಮ ವಲಸಿಗರ ಮೇಲೆ ದಾಳಿ ಮಾಡುತ್ತಿದ್ದಾರೆ.ಮಣಿಪುರದಲ್ಲಿ ಸುಮಾರು ತಿಂಗಳು ಅಥವಾ ಒಂದೂವರೆ ತಿಂಗಳಿನಿಂದ ಈ ಸಮಸ್ಯೆ ಉದ್ಭವಿಸಿದ್ದರೂ ಸಹ ರಾಜ್ಯ ಸರ್ಕಾರ ಇದನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಗುಪ್ತಚರ ಇಲಾಖೆ ಕೂಡ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವನ್ನು ಅಲರ್ಟ್ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಗುಪ್ತಚರ ಇಲಾಖೆಯ ಸಿಬ್ಬಂದಿ ಹೊರಗಿನಿಂದ ಬಂದವರಾಗಿದ್ದು ಇವರಿಗೆ ಸ್ಥಳೀಯ ಸಮಾಜ ಮತ್ತು ಸಂಸ್ಕೃತಿ ಅರ್ಥವಾಗುವುದಿಲ್ಲ. ಮತ್ತೊಂದು ಪ್ರಮಾದಕರ ವಿಚಾರವೆಂದರೆ ಮಣಿಪುರಕ್ಕೆ ಗವರ್ನರ್‌ ಗಳಾಗಿ ಬರುತ್ತಿರುವವರಿಗೆ ಮಣಿಪುರದ ಮೇಲೆ ಅವಗಾಹನೆ ಇಲ್ಲ.
ಆದ್ದರಿಂದ ಸಮಸ್ಯೆ ಇಷ್ಟು ದೊಡ್ಡದಾಗಿದೆ. ತಕ್ಷಣದ ಕ್ರಮವಾಗಿ ಮಣಿಪುರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಗವರ್ನರ್ ಬೇಕು. ಅದೇ ರೀತಿ ಅಲ್ಲಿನ ರಾಜ್ಯ ಸರ್ಕಾರವು ಎಲ್ಲಾ ಪಕ್ಷಗಳು ಮತ್ತು ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು. ಅಲ್ಲದೆ ಹಿಂಸೆಯಲ್ಲಿ ಪಾಲ್ಗೊಂಡವರು ಯಾರಾದರೂ ಸಹ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.