ಮೋದಿ ಗೆಲ್ಲಿಸುವ ಅತಿವಿಶ್ವಾಸವೇ ಬಿಜೆಪಿ ಸೋಲಿಗೆ ಕಾರಣ
ವಿಶ್ಲೇಷಣೆ
ಪ್ರೊ.ಆರ್‌.ಜಿ.ಹೆಗಡೆ
ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯ ಭಾರಿ ಸೋಲಿನ ಕಾರಣಗಳನ್ನು ಹುಡುಕಲು ಸೂಕ್ಷ್ಮ ದರ್ಶಕದ ಅಗತ್ಯವೇನೂ ಇಲ್ಲ. ಅವು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣುವಂತೆಯೇ ಇವೆ. ಅವುಗಳಲ್ಲಿ ಕೆಲವು ವರ್ಷಗಳಿಂದಲೂ ಗಾಳಿಯಲ್ಲಿ ಇದ್ದವು. ಆ ಕುರಿತುಸಾರ್ವಜನಿಕ ಚರ್ಚೆ ನಡೆದಿತ್ತು.
ಕಾರಣಗಳು ಸೇರಿಕೊಳ್ಳುತ್ತ, ಬಲಗೊಳ್ಳುತ್ತ ಹೋಗಿದ್ದವು ಕೂಡ. ಆದರೆ ಏನೇ ಆದರೂ, ಹೇಗೆ ಇದ್ದರೂ ಪ್ರಚಂಡ ರಾಷ್ಟ್ರೀಯ ಜನಪ್ರಿಯತೆಯ ಮೋದಿ ಗೆಲ್ಲಿಸಿಕೊಡುತ್ತಾರೆ ಎಂಬ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ವಿಷಯಗಳನ್ನು ಬಹುಶಃ ಗಮನಿಸಲೇ ಇಲ್ಲ ಅಥವಾ ಗಮನಿಸಿದರೂ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಿಲ್ಲ ಎಂದೇ ಹೇಳಬೇಕು. ಅತಿಯಾದ ಆತ್ಮವಿಶ್ವಾಸವೇ ಬಿಜೆಪಿ ಯನ್ನು ಸೋಲಿಸಿದ್ದು.
ಬಿಜೆಪಿಯ ಈ ಸೋಲಿನ ಬೀಜ ಹುಟ್ಟಿಕೊಂಡಿದ್ದು ೨೦೧೮ರ ‘ಆಪರೇಷನ್ ಕಮಲ’ ದಿಂದಾಗಿ. ಆ ಸಂದರ್ಭದಲ್ಲಿ ಆಪರೇಶನ್‌ ನಿಂದಾಗಿ ಕರ್ನಾಟಕದಲ್ಲಿ ಪಕ್ಷದ ಸರಕಾರ ಬಂತು ನಿಜ. ಆದರೆ ಘಟನೆ ಪಕ್ಷಕ್ಕೆ ಬಲವಾದ ಹೊಡೆತ ಕೊಟ್ಟುಬಿಟ್ಟಿತು ಎನ್ನುವುದೂ ಅಷ್ಟೇ ನಿಜ. ಎರಡು ರೀತಿ ಗಳಲ್ಲಿ. ಒಂದನೆಯದು, ಒಳಬಂದ ಹೊರಗಿನವರಿಂದಾಗಿ ಪಕ್ಷದ ಶುದ್ಧ, ಹೋಮೋ ಜೀನಿಯಸ್ ಸ್ವರೂಪ ದುರ್ಬಲವಾಗಿ ಹೋಯಿತು. ತತ್ವ, ಸಿದ್ಧಾಂತ, ಮೌಲ್ಯಕ್ಕೆ ಬದ್ಧವಾದ ಪಕ್ಷ ಎಂದು ಬಹಳ ವರ್ಷಗಳಿಂದ ಗಳಿಸಿಕೊಂಡು ಬಂದಿದ್ದ ವಿಶಿಷ್ಟ ಗುರುತಿನ ಮಾರ್ಕ್ ಈಗ ಮಸಕಾಗುತ್ತ ಹೋಯಿತು.
ಬೇರೆ ಪಕ್ಷಗಳ ಹಾಗೆಯೇ ಅದೂ ಕೂಡ ಅಧಿಕಾರಕ್ಕಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಪಕ್ಷ ಎನ್ನುವ ಇಂಪ್ರೆಶನ್ ಬಹುಶಃ ಜನರಲ್ಲಿ ಬಂದು ಹೋಯಿತು. ಗಮನಿಸಿ. ಈಗ ಒಳಬಂದವರಲ್ಲಿ ಕೆಲವರು ಬೇರೆ, ಬೇರೆ ಖಯಾಲಿ ಹೊಂದಿದವರು ಇದ್ದರು. ಭ್ರಷ್ಟಾಚಾರ, ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಮತ್ತು ಹೆಸರು ಕೆಡಿಸಿಕೊಂಡಿದ್ದವರು ಕೂಡ ಇದ್ದರು. ಬಂದವರ ‘ರಾಸಲೀಲೆ’ ಯಂತಹ ಪ್ರಕರಣಗಳು ಬಿಜೆಪಿಗೆ ಭಾರಿ ಇರುಸುಮುರುಸು ಉಂಟುಮಾಡಿದವು. ಅಂಥವರನ್ನು ಬರಮಾಡಿಕೊಂಡ ನಂತರ, ಸಹಜವಾಗಿ, ತನ್ನ ವಿಶೇಷತೆಯ ಕುರಿತು ಹೇಳಿಕೊಳ್ಳಲು ಬಿಜೆಪಿಗೆ ಬಹಳ ವಿಷಯ ಉಳಿಯಲೇ ಇಲ್ಲ.
ಸಮಸ್ಯೆಯೆಂದರೆ ಉಗುಳುವಂತಿಲ್ಲ. ಉಗುಳಿದರೆ ಅಧಿಕಾರ ಹೋಗುತ್ತದೆ. ನುಂಗಿದರೆ ಪಕ್ಷದ ಇಮೇಜ್‌ಗೆ ಹೊಡೆತ ಬೀಳುತ್ತದೆ. ಪಕ್ಷಆಗ ನುಂಗುವುದನ್ನೇ ಇಷ್ಟಪಟ್ಟುಬಿಟ್ಟಿತು ಅನಿಸುತ್ತದೆ. ಪಕ್ಷದೊಳಗೆ ಸೂಟ್ ಕೇಸ್ ಸಂಸ್ಕೃತಿ ಬೆಳೆಯುತ್ತಿದೆ ಎನ್ನುವ ಎಚ್ಚರಿಕೆ ಯ ಮಾತುಗಳು ಪಕ್ಷದ ಹಿರಿಯ ನಾಯಕರಿಂದಲೂ ಬಂದವು. ಆದರೆ ಇವೆಲ್ಲವನ್ನೂ ಮೇನೇಜ್ ಮಾಡಬಲ್ಲೆ ಎಂಬ ಅತಿ ಆತ್ಮವಿಶ್ವಾಸ ಹೊಂದಿಬಿಟ್ಟ ಪಕ್ಷ ಅಂತಹ ಮಾತುಗಳನ್ನು ಉಪೇಕ್ಷಿಸಿಬಿಟ್ಟಿತು. ಪಕ್ಷದ ಈಗಿನ ಸೋಲು ಆರಂಭವಾಗಿದ್ದು ಹೀಗೆ ಮತ್ತು ಇಲ್ಲಿಂದ.
ಸೋಲಿನ ಎರಡನೇ ಕಾರಣ ಲಿಂಗಾಯತ ಸಮುದಾಯವನ್ನು ತನ್ನೊಡನೆ ತೆಗೆದುಕೊಂಡು ಹೋಗಲು (ಅದು) ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲು ಪಕ್ಷಕ್ಕೆ ಸಾಧ್ಯವಾಗದೆ ಹೋಗಿದ್ದು. ಲಿಂಗಾಯತ ಸಮುದಾಯ ರಾಜ್ಯ ಬಿಜೆಪಿಯ ಬೆನ್ನೆಲಬು ಆಗಿತ್ತು ಮತ್ತು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರಲ್ಲಿ ಲಿಂಗಾಯತ ಮತಗಳ ದೊಡ್ಡ ಪಾತ್ರವಿತ್ತು ಎನ್ನುವುದು ಪ್ರಶ್ನಾತೀತ ವಿಷಯ. ಹಾಗಾಗಿ ಸಮುದಾಯ ಬಿಜೆಪಿಯಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ೨೦೧೮ರ ಸರಕಾರ ರಚನೆಯಾದ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಮತ್ತು ಸಮಾಜದ ಕಣ್ಮಣಿ ಯಡಿಯೂರಪ್ಪನವರ ನಡುವೆ ಸಂವಹನದ ಸಮಸ್ಯೆಬಂದಿದೆ ಎಂಬ ಗುಮಾನಿ ಹುಟ್ಟಿಸುವ ಸಂಕೇತಗಳು ಹೊರಬಂದವು.
ಉದಾಹರಣೆಗೆ, ಕಷ್ಟಪಟ್ಟು ಸರಕಾರ ರಚಿಸಿದ್ದ ಯಡಿಯೂರಪ್ಪ ಕ್ಯಾಬಿನೆಟ್ ರಚನೆ ಮಾಡಲು ಕೇಂದ್ರದ ಒಪ್ಪಿಗೆಗಾಗಿ ತಿಂಗಳುಗಟ್ಟಲೆ ಕಾಯಬೇಕಾಯಿತು. ಹಾಗೆಯೇ ರಾಜ್ಯದ ನೆರೆಹಾವಳಿ ಎದುರಿಸಲು, ಕರೋನಾ ಸಂಕಷ್ಟದಲ್ಲಿ ಕೂಡ ಯಡಿ ಯೂರಪ್ಪನವರಿಗೆ ಕೇಂದ್ರದಿಂದ ಸಾಕಷ್ಟು, ಸರಿಯಾದ ರೀತಿಯ ಬೆಂಬಲ ಸಿಗಲಿಲ್ಲ ಎಂಬ ಸಂಕೇತ ಬಂದವು. ಯಾರದೋ, ಯಾವುದೋ ಕಿತಾಪತಿಯಿಂದಾಗಿ ಹೈಕಮಾಂಡ್ ತಮ್ಮ ನಾಯಕ ಯಡಿಯೂರಪ್ಪನವರ ವರ್ಚಸ್ಸು ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂಬ ಭಾವನೆ ಲಿಂಗಾಯತ ಸಮುದಾಯಕ್ಕೆ ಬಂದು ಹೋಯಿತು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಸಂದರ್ಭ ದಲ್ಲಿಯಂತೂ ಯಡಿಯೂರಪ್ಪ ಹಾಕಿದ ಕಣ್ಣೀರು ಬಹಳಷ್ಟು ವಿಷಯಗಳನ್ನು ಬಹುಶಃ ಲಿಂಗಾಯತ ಸಮುದಾಯಕ್ಕೆ ನಕಾರಾತ್ಮವಾಗಿ ಹೇಳಿಬಿಟ್ಟಿತು. ಇನ್ನೊಂದು ವಿಷಯ.
ಮತ್ತೋರ್ವ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಿದ ಪಕ್ಷಕ್ಕೆ ಯಡಿಯೂರಪ್ಪನವರನ್ನೇ ಮುಂದುವರಿಸಿದರೆ ಏನು ಸಮಸ್ಯೆಯಿತ್ತು? ಎನ್ನುವ ಸಮುದಾಯದ ಪ್ರಶ್ನೆಗೆ ಸರಿಯಾದ ಉತ್ತರ ಹೈಕಮಾಂಡ್‌ನಿಂದ ಬರಲಿಲ್ಲ ಎಂದೇ ಹೇಳಬೇಕು. ಎಪ್ಪತ್ತೈದು ವರ್ಷ ಆಯಿತು ಎನ್ನುವ ಕಾರಣಕ್ಕಾಗಿಯೇ ಅವರನ್ನು ನಿವೃತ್ತಿಗೊಳಿಸಿದ್ದರೆ ಅವರನ್ನು ಚುನಾವಣಾ ಮಂಡಳಿಯ ಸದಸ್ಯರನ್ನಾಗಿಸಿದ್ದು ಏಕೆ? ಎನ್ನುವ ಪ್ರಶ್ನೆಯೂ ಬಂತು. ಬಿಜೆಪಿಯ ಕುರಿತಾಗಿ ಇದ್ದ ಅನುಮಾನ ಬಹುಶಃ ಕೋಪವಾಗಿ ಪರಿವರ್ತನೆಯಾಗಿದ್ದು ಇತ್ತೀಚೆಗೆ ಸೀಟ್ ಹಂಚಿಕೆಯ ಸಂದರ್ಭದಲ್ಲಿ. ದೆಹಲಿಯಲ್ಲಿ ನಡೆಯುತ್ತಿದ್ದ ಸೀಟ್ ಹಂಚಿಕೆಯ ಸಭೆಗಳಲ್ಲಿ ಭಾಗವಹಿಸದೆ ಯಡಿಯೂರಪ್ಪ ವಾಪಸು ಬಂದು ಬಿಟ್ಟಿದ್ದನ್ನು ಕರ್ನಾಟಕ ಗಮನಿಸಿದೆ.
ಹಾಗೆಯೇ ಮುಖ್ಯವಾಗಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಪಕ್ಷ ಟಿಕೆಟ್ ಏಕೆ ನೀಡಲಿಲ್ಲ ಎನ್ನುವ ಕುರಿತು ಒಪ್ಪಿಕೊಳ್ಳಬಹುದಾದ ವಿವರಣೆ ಕೂಡ ಲಿಂಗಾಯತ ಸಮುದಾಯಕ್ಕೆ ದೊರೆತಂತಿಲ್ಲ. ಶೆಟ್ಟರ್ ಸೋತರು ನಿಜ. ಆದರೂ ಕೂಡ ಅವರು ಮತ್ತು ಲಕ್ಷ್ಮಣ ಸವದಿ ಸೃಷ್ಟಿಸಿದ ಸೆಂಟಿಮೆಂಟ್ ಬೇರೆ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಾನಿ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ನೊಂದಂತಿರುವ ಸಮುದಾಯ ಚುನಾವಣೆಯಲ್ಲಿ ದೂರವಾಗಿ ಬಿಟ್ಟಿತು.
ಲಿಂಗಾಯತ ಸಮುದಾಯಕ್ಕೆ ಬಿಜೆಪಿ ನಾಯಕತ್ವ ತನ್ನನ್ನು ದೂರಿಡಲು ಪ್ರಯತ್ನಿಸುತ್ತಿದೆ ಎನ್ನುವ ಅನುಮಾನ ಬಂತು ನಿಜ. ಆದರೆ ವ್ಯಂಗ್ಯವೆಂದರೆ ರಾಜ್ಯದ ಉಳಿದ ಸಮುದಾಯಗಳು, ಮುಖ್ಯವಾಗಿ ಅಹಿಂದ ಶಕ್ತಿಗಳು ಬಿಜೆಪಿಯನ್ನು ಲಿಂಗಾಯತ ಪಕ್ಷ ಎಂದೇ ಭಾವಿಸಿ ತಾವು ದೂರವೇ ಉಳಿದುಬಿಟ್ಟವು. ಪಕ್ಷದ ಭಾರಿ ಸೋಲಿನ ಕಾರಣ ಇದು. ಮೂರನೇ ವಿಷಯ ಆಂಟಿ- ಇನ್‌ಕಂಬೆನ್ಸಿ. ಇಬಲವಾದ ಆಂಟಿ ಇನ್‌ಕಂಬೆನ್ಸಿ ಸೃಷ್ಟಿಸಿದ್ದು ಹೊರಗಿನಿಂದ ಬಂದು ಸರಕಾರದಲ್ಲಿ ಭಾಗವಹಿಸಿದವರಲ್ಲಿ ಹಲವರು. ಬಹುಶಃ ‘ನಲವತ್ತು ಪರ್ಸೆಂಟ್’ ಭ್ರಷ್ಟಾಚಾರದಲ್ಲಿ ಹೆಸರು ಬಂದವರ ಕುರಿತು ಬಿಜೆಪಿ ಗಟ್ಟಿಯಾದ ಕ್ರಮ ತೆಗೆದುಕೊಳ್ಳದಿರುವುದು ಆಂಟಿ-ಇನ್‌ಕಂಬೆನ್ಸಿ ಸೃಷ್ಟಿಸಿದೆ.
ಹಾಗೆಯೇ ಬಹುಶಃ ಹಲವು ಕಾಂಟ್ರಡಿಕ್ಷನ್‌ಗಳನ್ನು ಮೇನೇಜ್ ಮಾಡಬೇಕಾಗಿ ಬಂದ ಬೊಮ್ಮಾಯಿ ಸರಕಾರಕ್ಕೆ ಗಟ್ಟಿಯಾದ ಆಡಳಿತ ನೀಡಲು ಅಂತಹ ಸಮಯ ಸಿಗಲೇ ಇಲ್ಲ. ನಾಲ್ಕನೇ ವಿಷಯ. ಹಿಂದುತ್ವದ ವಿಷಯದಲ್ಲಿ ಬಿಜೆಪಿ ಕರ್ನಾಟಕದ ಮತ್ತು ದಕ್ಷಿಣ ಭಾರತದ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿಲ್ಲ ಎಂದೇ ಅನಿಸುತ್ತದೆ. ಉತ್ತರ ಮತ್ತು ದಕ್ಷಿಣದ ವಾಸ್ತವಗಳು ಬೇರೆಯೇ. ಹಿಂದೂ ಮುಸ್ಲಿಂ ಸಂಬಂಧದ ವಿಷಯದಲ್ಲಿ ಉತ್ತರ ಮತ್ತು ದಕ್ಷಿಣ ಭಾರತಗಳಿಗೆ ಬೇರೆ ಬೇರೆ ರೀತಿಯ ಮನಸ್ಥಿತಿಗಳಿವೆ ಎನ್ನುವುದನ್ನು ಪಕ್ಷ ಅರ್ಥ ಮಾಡಿಕೊಂಡಂತಿಲ್ಲ.
ದಕ್ಷಿಣಕ್ಕೆ ಉತ್ತರದಂತೆ ಮುಸ್ಲಿಂ ದಬ್ಬಾಳಿಕೆಯ ಅಥವಾ ಕ್ರೌರ್ಯದ ಬಲವಾದ, ದಟ್ಟವಾದ ನೆನಪುಗಳಿಲ್ಲ. ಹಾಗಾಗಿ ಸಾಧಾರಣಹಿಂದೂ ವ್ಯಕ್ತಿಗೆ ಇಲ್ಲಿ ಹಿಂದೂ ವರ್ಸಸ್ ಮುಸ್ಲಿಂ ಎನ್ನುವ ಶಾರ್ಪ್ ಆದ ವಿಭಜನೆಯ ಅವಶ್ಯಕತೆ ಕಂಡಿಯೇ ಇಲ್ಲ. ಹಾಗೆಯೇ ಆರ್ಥಿಕವಾಗಿ ಪ್ರಗತಿಪರ ರಾಜ್ಯವಾಗಿರುವ ರ್ನಾಟಕ ಹಿಂದುತ್ವ ಇತ್ಯಾದಿ ವಿಷಯಗಳ ಕುರಿತು ಅಷ್ಟೊಂದು ತಲೆಕೆಡಿಸಿ ಕೊಳ್ಳುವುದಿಲ್ಲ.
ಇಲ್ಲಿ ಮುಖ್ಯ ವಿಷಯ ಆರ್ಥಿಕ ಅಭಿವೃದ್ಧಿ. ಇನ್ನೊಂದು ವಿಷಯ. ಕರ್ನಾಟಕದಲ್ಲಿ ಪರಂಪ ರಾಗತವಾಗಿ ಅಂದರೆ ದೇವರಾಜಅರಸುರವರ ಕಾಲದಿಂದಲೂ ಅಲ್ಪ ಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ನಡುವೆ ಒಳ್ಳೆಯ ಸಂಬಂಧವಿದೆ.ಅಹಿಂದ ಇಲ್ಲಿ ಜಾಗ್ರತ ಶಕ್ತಿ. ದೇವರಾಜ ಅರಸು, ಬಂಗಾರಪ್ಪ, ಸಿದ್ದರಾಮಯ್ಯ ಎಲ್ಲರೂ ಬಲಪಡಿಸಿದ ಶಕ್ತಿ ಅದು.ಕುತೂಹಲದ ವಿಷಯವೆಂದರೆ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕಿಸುವ ಪ್ರಯತ್ನವನ್ನು ಕರ್ನಾಟಕದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳೂ ಅಷ್ಟೊಂದು ಲೈಕ್ ಮಾಡುವುದಿಲ್ಲ.
ಹಾಗಾಗಿ ಮುಸ್ಲಿಂ ರಿಸರ್ವೇಶನ್ ಹಿಂಪಡೆದ ವಿಷಯ ಇಲ್ಲಿಯ ಹಿಂದೂ ಸಮಾಜಕ್ಕೆ ದೊಡ್ಡ ಖುಷಿಯ ಸಂಗತಿಯಾಗುವುದಿಲ್ಲ. ಬಜರಂಗದಳವನ್ನು ಬ್ಯಾನ್ ಮಾಡುವ ಕಾಂಗ್ರೆಸ್ ಹೇಳಿಕೆಗೂ ಹಾಗಾಗಿಯೇ ಹಿಂದೂ ಸಮಾಜ ದೊಡ್ಡ ಪ್ರಮಾಣದಲ್ಲಿ ತಲೆಕೆಡಿಸಿಕೊಳ್ಳಲಿಲ್ಲ. ಗಮನಿಸಬೇಕು. ಹಿಂದು ಮುಸ್ಲಿಮ್ ಮತಗಳನ್ನು ವಿಭಜಿಸಲು ಬಿಜೆಪಿ ನಡೆಸಿದ ಪ್ರಯತ್ನ ಅಹಿಂದ ವರ್ಗದ ಕೆಂಗಣ್ಣಿಗೇ ಗುರಿಯಾಗಿ ಹೋಯಿತು. ಅಹಿಂದ ಬಿಜೆಪಿ ವಿರುದ್ಧ ತಿರುಗಿ ನಿಂತು ಬಿಟ್ಟಿತು.
ಮುಂದಿನ ಮಹತ್ವದ ಕಾರಣ ಬಲವಾದ ಪ್ರಾದೇಶಿಕ ಕಾಂಗ್ರೆಸ್ ನಾಯಕತ್ವ. ರಾಜ್ಯ ಬಿಜೆಪಿ ಹೊಂದಿರುವ ಏಕೈಕ ಮಾಸ್ ಲೀಡರ್ ಯಡಿಯೂರಪ್ಪ. ಆದರೆ ಯಾಕೋ ಅವರು ತಮ್ಮ ಪೂರ್ಣಶಕ್ತಿ ಬಳಸಿ ರಣರಂಗಕ್ಕಿಳಿಯಲಿಲ್ಲವೇ ಎನ್ನುವ ಪ್ರಶ್ನೆ ಇದೆ. ಬಸವರಾಜ ಬೊಮ್ಮಾಯಿ ಸರಳ, ಸಜ್ಜನ ವ್ಯಕ್ತಿ. ಆದರೆ ಕೇವಲ ಅವರ ವರ್ಚಸ್ಸು ಸಾಲಲಿಲ್ಲ. ತದ್ವಿರುದ್ಧವಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ ರಾಜ್ಯ ಕಂಡ ದೊಡ್ಡ ಮಾಸ್ ಲೀಡರ್. ದೇವರಾಜ ಅರಸು ಮಟ್ಟದ ನಾಯಕ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಹೆಚ್ಚು ಪ್ರಯತ್ನಿಸಿದಂತೆ ಅಹಿಂದ ಶಕ್ತಿಗಳು ಬಿಜೆಪಿಯಿಂದ ಹೆಚ್ಚು ಹೆಚ್ಚು ದೂರಾದವು. ಹಾಗೆಯೇ ದಲಿತ ನಾಯಕರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಗಟ್ಟಿಯಾದ ನಾಯಕರು.
ಡಿ.ಕೆ.ಶಿವಕುಮಾರ್ ಒಕ್ಕಲಿಗರ ಪ್ರಬಲ ನಾಯಕ. ಲಿಂಗಾಯತ ಸಮುದಾಯದ ಎಂಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ, ಜಗದೀಶ ಶೆಟ್ಟರ್, ಲಕ್ಷಣ ಸವದಿ ಹಿರಿಯ ನಾಯಕರು. ಬಲವಾದ ಪ್ರಾದೇಶಿಕ ನಾಯಕರುಗಳಿಗೆ ಪ್ರಾದೇಶಿಕ ಬೇಡಿಕೆಗಳುಸಂಕಟಗಳು ಗೊತ್ತಿವೆ. ಈ ನಾಯಕರ ವ್ಯಾಪಕ ಅನುಭವಗಳೇ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಗಳನ್ನು ಸೃಷ್ಟಿಸಿದ್ದು ಮತ್ತು ಅವುಗಳನ್ನು ಸಂವಹಿಸಿದ್ದು. ಇಂತಹ ನಾಯಕರಿಗೆ ಪೈಟ್ ನೀಡುವ ಹಿರಿಯ ನಾಯಕರ ಕೊರತೆಯನ್ನು ಬಿಜೆಪಿ ಅನುಭವಿಸಿತು ಎಂದೇ ಹೇಳಬೇಕು. ಮೋದಿಯವರ ಕುರಿತು ಕರ್ನಾಟಕಕ್ಕೆ ಅಪಾರ ಗೌರವವಿದೆ. ಆದರೆ ಈ ಚುನಾವಣೆಯ ವ್ಯಾಪ್ತಿ ಮತ್ತು ವಿಷಯಗಳೇ ಬೇರೆ. ಕರ್ನಾಟಕ ಮತದಾರ ಮತ ನೀಡಿದ್ದು ಕೇವಲ ಕರ್ನಾಟಕಕ್ಕೆ ಸಂಬಂಧಿಸಿ. ಬಿಜೆಪಿ ಸೋತಿರುವುದು ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ.
ಹಾಗೆಂದು ಒಂದು ಮಾತು ಹೇಳಬೇಕು. ಕರ್ನಾಟಕದಲ್ಲಿ ಬಿಜೆಪಿ ಯುಗ ಮುಗಿದೇ ಹೋಯಿತು ಎಂದೇನೂ ಅಲ್ಲ. ಪ್ರಧಾನಿ ಮೋದಿಯವರನ್ನು ಕರ್ನಾಟಕ ತಿರಸ್ಕರಿಸಿದೆ ಎಂದೂ ಅಲ್ಲ. ಪಕ್ಷ ಇದೆ. ಬಲವಾಗಿಯೇ ಇದೆ. ನ್ಯೂನತೆಗಳನ್ನು ಸರಿಪಡಿಸಿಕೊಂಡು ತನ್ನತನವನ್ನು ಇಟ್ಟಕೊಂಡೇ ಎದ್ದು ನಿಲ್ಲಬೇಕು, ಅಷ್ಟೇ.