ಜನರ ನಂಬಿಕೆ ಉಳಿಸುವ ಸರಕಾರವಾಗಲಿ
ವಿಶ್ಲೇಷಣೆ
ಮಣಿಕಂಠ ಪ ಹಿರೇಮಠ
ಈ ಬಾರಿ ಅತಂತ್ರ ಎಂಬ ಆಲೋಚನೆಯಲ್ಲಿದ್ದ ರಾಜ್ಯದ ಜನತೆಗೆ ಸುಭದ್ರ ಸರ್ಕಾರ ಸಿಕ್ಕಂತಾಗಿದೆ. ಸಮ್ಮಿಶ್ರ ಸರ್ಕಾರದ ಚುಕ್ಕಾಣಿಹಿಡಿದರೆ ಮರ್ಜಿಯಲ್ಲಿಯೇ ಆಡಳಿತ ನಡೆಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ರಾಜ್ಯದ ಶ್ರೀಸಾಮಾನ್ಯ ಆಲೋಚಿಸಿ, ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡು ಮೂವತ್ನಾಲ್ಕು ವರ್ಷದ ನಂತರ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸಂಖ್ಯೆಯ ಗೆಲುವನ್ನು ನೀಡಿದ್ದಾನೆ.
ಆಡಳಿತಾರೂಢ ಬಿಜೆಪಿಯ ಬಲಿಷ್ಠ ವೋಟ್ ಬ್ಯಾಂಕ್ ಅಂದರೆ ಅದು ಲಿಂಗಾಯತ ಸಮುದಾಯ. ಆ ಸಮುದಾಯ ಪಕ್ಷದ ಮೇಲೆ ಮುನಿಸಿಕೊಂಡಿದ್ದು ಇಷ್ಟು ದೊಡ್ಡ ಸೋಲಿಗೆ ಪ್ರಮುಖ ಕಾರಣ. ೨೦೧೩ರ ವಿಧಾನಸಭೆ ಚುನಾವಣೆ ಹೊರತುಪಡಿಸಿ ಬಹುತೇಕ ಉಳಿದೆಲ್ಲ ಚುನಾವಣೆಯನ್ನು ಯಡಿಯೂರಪ್ಪನವರ ನೇತೃತ್ವದಲ್ಲಿಯೇ ಬಿಜೆಪಿ ಎದುರಿ ಸಿತ್ತು. ತಮ್ಮ ಸಮುದಾಯದ ನಾಯಕನ ಮುಂದಾಳತ್ವ ಇದೆ ಎಂಬ ಕಾರಣಕ್ಕಾಗಿ ಲಿಂಗಾ ಯತ ಸಮುದಾಯ ಬಿಜೆಪಿಯೊಂದಿಗೆ ಗುರುತಿಸಿಕೊಂಡಿತ್ತು. ತಮ್ಮ ಇಳಿ ವಯಸ್ಸಿ ನಲ್ಲಿಯೂ ಯುವಕರೆ ನಾಚುವಂತೆ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎಸ್. ಯಡಿಯೂರಪ್ಪ ನವರನ್ನು ಕೇವಲ ವಯಸ್ಸಿನ ಕಾರಣ ನೀಡಿ ಕೆಳಗಿಳಿಸಿದ್ದು ಸಮುದಾಯದ ಜನರ ಕಣ್ಣು ಕೆಂಪಾಗಿಸಿದ್ದು ಸುಳ್ಳಲ್ಲ.
ಅಂದು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ಹಾಕಿದ ಕಣ್ಣೀರಿನಲ್ಲಿ ತಡವಾದರೂ ಇಂದು ಬಿಜೆಪಿ ಕೊಚ್ಚಿಕೊಂಡು ಹೋಗಿದೆ. ಬಸವರಾಜ ಬೊಮ್ಮಾಯಿ ಉತ್ತಮ ರಾಜಕಾರಣಿಯಾದರೂ ಒಳ್ಳೆಯ ಆಡಳಿತಗಾರರಾಗಲು ಸಾಧ್ಯ ವಾಗಲಿಲ್ಲ. ಭ್ರಷ್ಟಾಚಾರದ ಆಪಾದನೆಗಳು ಬಂದಾಗಲೆಲ್ಲ ಅವುಗಳನ್ನು ನಿರ್ಲಕ್ಷ್ಯ ಮಾಡುತ್ತಾ ಬಂದರು. ಅನೇಕ ಹಿಂದು ಕಾರ್ಯಕರ್ತರ ಹತ್ಯೆ ಆದಾಗಲು ಕಠಿಣ ಕ್ರಮವನ್ನು ಕೇವಲ ಹೇಳಿಕೆಗಳಿಗೆ ಸೀಮಿತಗೊಳಿಸಿದರು.
ಹಿಜಾಬ್ ವಿವಾದದ ಸಮಯದಲ್ಲೂ ಯಾವುದೇ ಪೂರ್ಣ ಪ್ರಮಾಣದ ನಿರ್ಣಯಕ್ಕೆ ಬಂದು ಇತ್ಯರ್ಥ ಪಡಿಸಲಾಗದೆ ಮೃದು ಧೋರಣೆ ಅನುಸರಿಸಿದ್ದು ರಾಜ್ಯದ ಜನತೆಗೆ ಸಹಿಸಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಬಿಜೆಪಿಯ ಈ ಹಿನ್ನಡೆಗೆ ಮೀಸಲಾತಿಯಜೇನುಗೂಡು ಒಂದು ಕಾರಣ. ಪಂಚಮಸಾಲಿ ಸಮುದಾಯದ ೨ಎ. ಹಾಲುಮತ ಸಮುದಾಯ ಎಸ್‌ಟಿ ಸೇರ್ಪಡೆ. ದಲಿತ ಸಮುದಾಯದ ಒಳ ಮೀಸಲಾತಿ ಸಹಿತ ಅನೇಕ ಸಮುದಾಯಗಳ ಬೇಡಿಕೆ ಮುಖ್ಯಮಂತ್ರಿಗಳಿಗೆ ಬಿಸಿ ತುಪ್ಪವಾಗಿತ್ತು.
ನುಂಗುವಂತೆಯೂ ಇಲ್ಲ ಉಗುಳುವಂತೆಯೂ ಇಲ್ಲ. ಚುನಾವಣೆಗೆ ದಿನಗಣನೆ ಇರುವಾಗ ೨ಸಿ, ೨ಡಿ ಅಡಿಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಹಂಚಿಕೆ ಮಾಡಲಾಯಿತು. ದಲಿತ ಎಡಗೈ ವರ್ಗದ ಮೂರು ದಶಕಗಳ ಬೇಡಿಕೆ ಯಾಗಿದ್ದ ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿದರು. ಈ ನಿರ್ಧಾರದಿಂದ ಮತವನ್ನು ಕಳೆದುಕೊಳ್ಳುವಂತಾಗಿದೆ. ಮುಸ್ಲಿಂ ಸಮುದಾಯದ ಶೇ. ೪ ರಷ್ಟು ಮೀಸಲಾತಿಯನ್ನು ಹಿಂಪಡೆದಿದ್ದಕ್ಕಾಗಿ ಆ ಸಮುದಾಯ ಮುನಿಸಿಕೊಂಡರೆ, ಒಳ ಮೀಸಲಾತಿ ಯನ್ನು ನೀಡಿದಕ್ಕಾಗಿ ಭೋವಿ ಮತ್ತು ಬಂಜಾರ ಸಮುದಾಯಗಳು ಬಿಜೆಪಿಯಿಂದ ದೂರವಾಗಿವೆ.
ಬಿಜೆಪಿಯ ಕೇಂದ್ರ ನಾಯಕರು ತಿಂಗಳುಗಟ್ಟಲೆ ರಾಜ್ಯದಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸಿದರು. ಪ್ರಧಾನಿ ಮೋದಿ ರೋಡ್ ಶೋ, ಅಮಿತ್ ಸಂಘಟನಾತ್ಮಕ ಸಭೆ, ನಟ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆ ತಂದರು ಜನ ಇದಕ್ಕೆ ಸೊಪ್ಪು ಹಾಕಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಸ್ಥಿತಿ ನೋಡಿ ಖುಷಿ ಪಡಬೇಕೆಂದಿದ್ದ ಬಿಜೆಪಿ ಸ್ವತಃ ತಾನೇ ನಗೆಪಾಟಿಲಿಗೆ ಈಡಾಗಿದೆ. ಏನೋ ದೊಡ್ಡ ದಾಗಿ ಪ್ರಯೋಗ ಮಾಡಿ ಯಶಸ್ವಿಯಾಗುತ್ತೇವೆ ಎಂದು ಗುಜರಾತ್ ಮತ್ತು ಉತ್ತರ ಪ್ರದೇಶದ ಮಾದರಿಯನ್ನು ಇಲ್ಲಿ ನಡೆಸಿ ೭೫ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿತ್ತು. ಅದರಲ್ಲಿ ಗೆಲುವು ಸಾಧಿಸಿದ್ದು ೧೯ ಜನ ಮಾತ್ರ.
ಕೆಲ ಅಭ್ಯರ್ಥಿಗಳು ಯಾರು ಎಂಬುದು ಸ್ವತಃ ಪಕ್ಷದ ಕಾರ್ಯಕರ್ತರಿಗೆ ಪರಿಚಯ ಇಲ್ಲದಿರುವುದು ಹಾಸ್ಯಾಸ್ಪದ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಅನುಸರಿಸಿದ ಕ್ರಮಗಳು ಪ್ರಶಂಸಿಸಲು ಅರ್ಹವಾದಂತವು. ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಣಾಳಿಕೆಯಲ್ಲಿ ಜನರಿಗೆ ತಲುಪಬಹುದಾದಂತಹ ಉಚಿತ ಗ್ಯಾರಂಟಿ ಘೋಷಿಸಿದ್ದಷ್ಟೆ ಅಲ್ಲದೆ ಆ ಕಾರ್ಡ್‌ಗಳನ್ನು ರಾಜ್ಯದ ಪ್ರತಿ ಮನೆ-ಮನವನ್ನು ತಲುಪುವಂತೆ ಮಾಡಿದ್ದು ಸಣ್ಣ ವಿಷಯವಲ್ಲ. ಬೆಲೆ ಏರಿಕೆಯಿಂದ ತೀವ್ರ ಬಳಲಿದ್ದ ಬಡ ವರ್ಗಕ್ಕೆ ಬಿಪಿಎಲ್ ಕಾರ್ಡ್ ಪಲಾನುಭವಿಗಳಿಗೆ ಹತ್ತು ಕೆಜಿ ಅಕ್ಕಿ, ಪ್ರತಿ ಮನೆಗೆ ೨೦೦ ಯುನಿಟ್ ಉಚಿತ ವಿದ್ಯುತ್, ಮನೆಯ ಒಡತಿಗೆ ೨೦೦೦ರೂಪಾಯಿ ಸಿಗುತ್ತದೆ ಎಂಬುದನ್ನು ಮನದಟ್ಟು ಮಾಡುವಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ಹಿಂದೆ ಬೀಳಲಿಲ್ಲ.
ನಿರುದ್ಯೋಗ ಪದವಿ ಮುಗಿಸಿರುವ ಯುವಕರಿಗೆ ಯುವ ನಿಧಿ ಯೋಜನೆ ಅಡಿಯಲ್ಲಿ ಮೂರು ವರ್ಷದ ಮಟ್ಟಿಗೆ ಪ್ರತಿ ತಿಂಗಳು ೩೦೦೦, ಡಿಪ್ಲೋಮಾ ಮುಗಿಸಿರುವ ವಿದ್ಯಾರ್ಥಿಗಳಿಗೆ ೧೫೦೦ ರೂಪಾಯಿ ನೀಡುತ್ತೇವೆ ಎಂದ ಕಾರಣ ಯುವ ಸಮುದಾಯವು ಈ ಬಾರಿ ಕಾಂಗ್ರೆಸ್ ಕಡೆ ವಾಲಿದೆ. ದೇಶದಲ್ಲಿ ಐಸಿಯುನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಆಕ್ಸಿಜನ್ ನೀಡಬಹುದಾದ ರಾಜ್ಯವೆಂದರೆ ಅದು ಕರ್ನಾಟಕವೇ. ಸಣ್ಣ ಪುಟ್ಟ ನಾಲ್ಕು ರಾಜ್ಯದಲ್ಲಿ ಅಧಿಕಾರದಲ್ಲಿರುವುದಕ್ಕಿಂತ ಕರ್ನಾಟಕದಂತಹ ಒಂದು ರಾಜ್ಯದಲ್ಲಿ ಅಧಿಕಾರ ನಡೆಸುವುದು ಸೂಕ್ತ ಎಂಬ ನಿಟ್ಟಿನಲ್ಲಿ ತನ್ನೆಲ್ಲಾ ಶ್ರಮವನ್ನು ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಬಳಸಿದೆ ಅಂತ ಹೇಳ ಬಹುದು.
ಬಿಜೆಪಿ ಸರ್ಕಾರದ ವಿರುದ್ಧ ಸುಮಾರು ಒಂದುವರೆ ವರ್ಷದಿಂದಲೂ ಕಾಂಗ್ರೆಸ್ ಹೋರಾಡುತ್ತಲೇ ಬಂತು. ೪೦ % ಕಮಿಷನ್, ಕೋವಿಡ್ ಸಮಯದಲ್ಲಿನ ಹಗರಣ, ಪಿಎಸ್‌ಐ ಹಗರಣ ಸಹಿತ ಅನೇಕ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಹೋರಾಟವನ್ನು ಆಡಳಿತಾರೂಢ ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಜನ ಈ ಆರೋಪಗಳ ಬಗ್ಗೆ ಜನ ಗಮನ ಹರಿಸುವುದಿಲ್ಲ ಎಂದು ಉಡಾಫೆಯಲ್ಲಿ ಕಾಲ ಕಳೆದರು. ಆದರೆ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ.
ಬಿಜೆಪಿ ಸರ್ಕಾರ ತೆಗೆದುಕೊಂಡ ಒಳ ಮೀಸಲಾತಿ ನಿರ್ಣಯ ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ಲಾಭವನ್ನು ಕೊಟ್ಟಿದೆ ಅಂತಲೇ ಹೇಳಬಹುದು. ಮುಸ್ಲಿಂ ಸಮುದಾಯಕ್ಕೆ ಈ ಹಿಂದೆ ನೀಡಲಾಗಿದ್ದ ನಾಲ್ಕು ಪ್ರತಿಷತ ಮೀಸಲಾತಿಯನ್ನು ಹಿಂಪಡೆದು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ತಲಾ ಎರಡರಂತೆ ಹಂಚಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಒಂದು ವೇಳೆ ಅಽಕಾರಕ್ಕೆ ಬಂದರೆ ಆ ನಾಲ್ಕು ಪರ್ಸೆಂಟ್ ಮರಳಿ ನೀಡುತ್ತೇವೆ ಎಂಬ ಅಭಯ ನೀಡಿತ್ತು. ಹೀಗಾಗಿಯೇ ಎಸ್‌ಡಿಪಿಐ, ಎಐಎಂಐ ಮತ್ತು ಜೆಡಿಎಸ್ ಪಕ್ಷಕ್ಕೆ ಹೋಗ ಬೇಕಿದ್ದ ಶೇ. ೮೫ ರಷ್ಟು ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಬಿದ್ದಿವೆ.
ಜೆಡಿಎಸ್ ಪಕ್ಷಕ್ಕೆ ಈ ಚುನಾವಣೆ ದೊಡ್ಡ ಹೊಡೆತವನ್ನೇ ನೀಡಿದೆ. ಕಿಂಗ್ ಮೇಕರ್ ಆಗುತ್ತೇನೆ ಎಂಬ ಕನಸಿನಲ್ಲಿದ್ದ ದಳಪತಿಗಳು ಇಷ್ಟು ವರ್ಷದ ಚುನಾವಣಾ ರಾಜಕೀಯದಲ್ಲಿಯೇ ಅತ್ಯಂತ ಕೆಳಮಟ್ಟಕ್ಕೆ ತಲುಪಿದ್ದಾರೆ. ಅತ್ತ ಮತಗಳನ್ನು, ಇತ್ತ ಸೀಟ್‌ ಗಳನ್ನು ಕಳೆದುಕೊಂಡಿದೆ. ಮೈಸೂರು ಮತ್ತು ಕಲ್ಯಾಣ ಕರ್ನಾಟಕದ ಕೆಲವು ಕಡೆ ಸಂಘಟನೆ ಹೊಂದಿದ್ದ ಜೆಡಿಎಸ್ ಪಕ್ಷ ಈ ಬಾರಿ ಸಾಧ್ಯವಾದಷ್ಟು ಸ್ಥಾನಗಳನ್ನು ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ತಯಾರಿ ನಡೆಸಿತ್ತು. ಪಂಚರತ್ನ ಯಾತ್ರೆಯ ಮೂಲಕ ಕುಮಾರಸ್ವಾಮಿ ರಾಜ್ಯವೆಲ್ಲ ಸುತ್ತಿದ್ದರು.
ಸದ್ಯ ಜೆಡಿಎಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಅಸಾಧ್ಯವಾದ ಮಾತು. ಹೀಗಾಗಿ ಆ ಪಕ್ಷಕ್ಕೆ ಮತ ನೀಡುವು ದರಿಂದ ಅತಂತ್ರ ವಿಧಾನಸಭಾ ಚುನಾವಣೆಯ ಕಾರಣವಾಗಬೇಕಾಗುತ್ತದೆ. ಅಷ್ಟೆ ಅಲ್ಲದೆ, ಇನ್ನೊಬ್ಬ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷ ಅಧಿಕಾರ ಬಂದರೆ ಮುಖ್ಯಮಂತ್ರಿ ಆಗುವ ಸಾಧ್ಯತೆ ಇರುವುದರಿಂದ ಜೆಡಿಎಸ್‌ನ ಪ್ರತಿಷತ ಐದರಷ್ಟು ಮತಗಳು ಕಾಂಗ್ರೆಸ್ ಕಡೆ ವಾಲಿವೆ.
ಹಳೇ ಮೈಸೂರು ಭಾಗದಲ್ಲಿ ಸಂಘಟನೆ ವೃದ್ಧಿಸಿಕೊಳ್ಳಲು ಪ್ರಯತ್ನಪಡುತ್ತಿದ್ದ ಬಿಜೆಪಿ ಈ ಬಾರಿ ಕಡೆ ಹೆಚ್ಚಿನ ಗಮನ ನೀಡಿತ್ತು. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಚ್ಚೆಚ್ಚು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಮಂಡ್ಯ ಸಂಸದೆ ಸುಮಲತಾ ಸೇರಿದಂತೆ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೆಳೆದುಕೊಂಡಿತ್ತು. ಕಮಲ ಪಾಳಯ ಈ ಭಾಗದಲ್ಲಿ ಎಲ್ಲೆಲ್ಲಿ ಬಲಿಷ್ಠ ಅಭ್ಯರ್ಥಿಯನ್ನು ಹಾಕಿದೆಯೊ ಅಲ್ಲೆಲ್ಲ ಜೆಡಿಎಸ್ ಅಭ್ಯರ್ಥಿಗಳಿಗೆ ಪೆಟ್ಟು ಬಿದ್ದಿದೆ.
ಆದ್ದರಿಂದ ಈ ಎಲ್ಲ ಘಟನಾವಳಿಗಳನ್ನು ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ಗಮನದಲ್ಲಿ ಇಟ್ಟುಕೊಂಡು ನೂತನ ಮಂತ್ರಿಮಂಡಲ ರಚನೆ ಪ್ರಕ್ರಿಯೆಗಳನ್ನು ಮುಗಿಸಿ ಆಡಳಿತ ಯಂತ್ರಕ್ಕೆ ಚುರುಕು ನೀಡುವುದರೊಂದಿಗೆ ಜನರಿಗೆ ನೀಡಿರುವ ಆಶ್ವಾಸನೆಯನ್ನು ಈಡೇರಿಸುವಂತಾಗಲಿ. ಜನರ ನಂಬಿಕೆ ಉಳಿಸುವ ಸರಕಾರವಾಗಲಿ.