ಕುಟುಂಬ ಮಾನವ ಬದುಕಿನ ಸಂತೋಷದ ಆಗರ
ಪರಿವಾರ
ಬಸವರಾಜ ಎಂ. ಯರಗುಪ್ಪಿ
ಕುಟುಂಬವು ಮಾನವ ಸಮಾಜದ ಮೊದಲ ಅಗತ್ಯ ಕೋಶವಾಗಿದೆ. ಹೀಗೆ ಪೋಪ್ ಜಾನ್ ೨೩ ಅವರ ನುಡಿಯಂತೆ ದೇವರುಕೊಟ್ಟಿರುವ ಅತ್ಯಮೂಲ್ಯ ಮತ್ತು ಉತ್ಕೃಷ್ಟವಾದ ಉಡುಗೊರೆಗಳಲ್ಲಿ ನಮ್ಮ ಕುಟುಂಬ ಒಂದು. ಕುಟುಂಬದ ಸದಸ್ಯರನ್ನು ಪ್ರೀತಿಸಿ ಮತ್ತು ಗೌರವಿಸಿ. ಏಕೆಂದರೆ ಅವರು ನಮ್ಮ ಸಮಾಜದ ರಚನಾತ್ಮಕ ಮತ್ತು ಕಾರ್ಯಾತ್ಮಕ ಕೋಶಗಳು.
ಹಾಗಾಗಿ ಅವರು ನಮ್ಮ ನಗು ಮತ್ತು ಸಂತೋಷಕ್ಕೆ ಕಾರಣವಾಗಿರುವುದರಿಂದ ಅವರನ್ನು ಗೌರವಿಸಿದಾಗ ಮಾತ್ರ ಈ ದಿನಕ್ಕೆ ಒಂದು ಮೆರಗು ಸಿಗುತ್ತದೆ. ಆದ್ದರಿಂದ ಇಂದಿನ ವಿಭಕ್ತ ಕುಟುಂಬಕ್ಕೆ ಕುಟುಂಬದ ಮಹತ್ವವನ್ನು ತಿಳಿಸುವ ಸಲುವಾಗಿ ಮೇ ೧೫ ರಂದು ಅಂತಾ ರಾಷ್ಟ್ರೀಯ ಕುಟುಂಬಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ೧೯೯೩ ಸಭೆಯ ನಿರ್ಣಯದೊಂದಿಗೆ ಈ ದಿನವನ್ನು ಘೋಷಿಸಿತು. ಅಂತಾ ರಾಷ್ಟ್ರೀಯ ಸಮುದಾಯವು ಕುಟುಂಬಗಳಿಗೆ ಲಗತ್ತಿಸುವ ಪ್ರಾಮುಖ್ಯತೆಯನ್ನು ಪ್ರತಿ ಬಿಂಬಿಸುತ್ತದೆ.
ಅಂತಾರಾಷ್ಟ್ರೀಯ ದಿನವು ಕುಟುಂಬಗಳಿಗೆ ಸಂಬಂಧಿಸಿದ ಸಮಸ್ಯೆಗಳ ಅರಿವನ್ನು ಉತ್ತೇಜಿಸಲು ಮತ್ತು ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಾಮಾಜಿಕ, ಆರ್ಥಿಕ ಮತ್ತು ಜನಸಂಖ್ಯಾ ಪ್ರಕ್ರಿಯೆಗಳ ಜ್ಞಾನವನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತದೆ. ಕುಟುಂಬವು ಸಮಾಜದ ಬಹುಮುಖ್ಯ ಅಂಗವಾಗಿದೆ. ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ‘ವಸುಧೈವ ಕುಟುಂಬಕಂ’ ಎಂಬುದೊಂದು ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬ ವೊಂದರ ಮಹತ್ವವನ್ನು ಸಾರುತ್ತದೆ. ಈ ಕುಟುಂಬ ಎಂಬ ಪರಿಕಲ್ಪನೆಯು ತುಂಬಾ ಪವಿತ್ರ ಮತ್ತು ಮಹತ್ವವಾದದ್ದು.
ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗತೊಡಗಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳಿಗೆ ಕುಟುಂಬದ ಮಹತ್ವವನ್ನು ತಿಳಿಸಿಕೊಡುವ ಕಾರ್ಯವಾಗಬೇಕು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರೀಕರಿಸುವ ಈವ್ಯವಸ್ಥೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಬಹುಶಃ ಕುಟುಂಬವೆಂಬ ಪರಿಕಲ್ಪನೆ ಇಲ್ಲದಿದ್ದರೆ ಇಡೀ ಜಗತ್ತನ್ನು ಊಹಿಸಲೇ ಸಾಧ್ಯವಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಕುಟುಂಬದ ಅಗತ್ಯ ನಮ್ಮ ವಿಶ್ವಕ್ಕೆ ಇದೆ. ಮುಂದೆ ಕೂಡ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಬೇಕಿದ್ದರೆ ಅದಕ್ಕೆ ಕುಟುಂಬದ ತಳಪಾಯ ಅತಿ ಅಗತ್ಯ. ಅದು ನಮ್ಮ ದೇಶವಾಗಿರಲಿ ಅಥವಾ ವಿದೇಶವಾಗಿರಲಿ ಎಲ್ಲಾ ಕಡೆಯೂ ಕುಟುಂಬವೆಂಬ ಭದ್ರ ಬುನಾದಿ ಇದ್ದೆಯಿದೆ. ಆದ್ದರಿಂದಲೇ ನಮ್ಮ ವಿಶ್ವ ಉಳಿದುಕೊಂಡು ಮುಂದಕ್ಕೆ ಬೆಳೆಯುತ್ತಿದೆ.
ಅವಿಭಕ್ತ ಕುಟುಂಬ ಭಾರತದ ಅಸ್ಮಿತೆ:ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ ಇದ್ದಾಗ ಮಾತ್ರ ಸಮಾಜದ ನಿರ್ಮಾಣಕ್ಕೆ ನಾಂದಿ ಎನ್ನುವ ಮಾತಿದೆ. ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ ಅದುವೇ ಅವಿಭಕ್ತ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ.
ಕುಟುಂಬದ ಪ್ರಾಮುಖ್ಯತೆ:ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬ ಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ, ಒಗ್ಗಟ್ಟುಗಳೇ ಮೂಲಮಂತ್ರ. ಒಂದು ಮಗು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಅದರಲ್ಲಿ ಆ ಮಗುವಿನ ಶಕ್ತಿಗಿಂತ ಆತನನ್ನು ಆ ರೀತಿ ರೂಪಿಸಿದ ಕುಟುಂಬದ ಸಂಸ್ಕೃತಿಯನ್ನು ಹೊಗಳುವ ಒಂದು ಕಾಲಘಟ್ಟವಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜೊತೆಗೆಜಗತ್ತಿನಾದ್ಯಂತ ಕುಟುಂಬ ರೂಪೀಕರಣದ ಪದ್ಧತಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿವೆ. ಇದು ವಿಪರ್ಯಾಸ ಸಂಗತಿ ಎಂದರೆ ತಪ್ಪಾಗಲಾರದು.
ಕುಟುಂಬದಲ್ಲಿನ ಬಾಂಧವ್ಯ:ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅಳಿಯ, ಮಾವ, ಅತ್ತೆ, ಸೊಸೆ, ಅಪ್ಪ, ಅಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತುಂಬಿ ತುಳುಕುತ್ತಿದ್ದ ಮನೆಗಳಲ್ಲಿ ಅಮ್ಮನ ಕೈ ತುತ್ತು, ಅಪ್ಪನ ಕಿವಿ ಮಾತು, ಅಜ್ಜಿಯ ಕಾಗೆ ಗುಬ್ಬಕ್ಕನ ಕತೆ, ಅಜ್ಜನ ಮನೆಯ ಜವಾಬ್ದಾರಿ. ಒಬ್ಬರಿಗೆ ಕಷ್ಟ ಬಂದರೆ ಸಾಕು ತಮಗೇ ಬಂದಿದ್ದೇನೋ ಎಂಬಂತೆ ಸಹಾಯಕ್ಕೆ ಬರುವ ಮನಸ್ಸುಗಳು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದು. ಅಲ್ಲಿ ಹಿರಿಯರ ಮಾತೇ ಅಂತಿಮನಿರ್ಣಯ. ಅವರ ಮಾತನ್ನು ಉಲ್ಲಂಘಿಸುವವರಿಲ್ಲ. ಅಲ್ಲಿ ಕೀಳರಿಮೆಯಿಲ್ಲ ಎಲ್ಲರೂ ಒಂದೇ ಎನ್ನುವ ಭಾವನೆ ಅವಿಭಕ್ತ ಕುಟುಂಬದಲ್ಲಿ ಇರುತ್ತದೆ.
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ :ಈಗ ಕೇವಲ ಗಂಡ, ಹೆಂಡತಿ, ಮಕ್ಕಳು ಮಾತ್ರ ಕಾಣಸಿಗುತ್ತಾರೆ. ಕುಟುಂಬದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಅಲ್ಲಿ ಭಾವನೆಗಳೂ ಬೆಲೆ ಕಳೆದು ಕೊಳ್ಳಲಾರಂಭಿಸುತ್ತವೆ. ಹೆತ್ತವರ, ಮಕ್ಕಳ ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವಷ್ಟು ಸಮಯವಿಲ್ಲದೆ ಕೇವಲ ಯಂತ್ರಗಳಂತೆ ಬದುಕಬಹುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕುಟುಂಬದ ಮಾದರಿಯು ತುಂಬಾ ಬದಲಾಗಿದೆ. ಹಿಂದೆ ತುಂಬಾ ಜನರಿಂದ ಕೂಡಿದ ಅವಿಭಕ್ತ ಕುಟುಂಬವಿತ್ತು. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಾಗಿ ವಿಭಕ್ತ ಕುಟುಂಬಗಳಿವೆ. ಅವಿಭಕ್ತ ಕುಟುಂಬಗಳು ಇಂದು ದೊಡ್ಡ ಹೊರೆ ಮತ್ತು ಹಲವರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣವೋ ಅಥವಾ ಸಂಸ್ಕಾರದ ಕೊರತೆಯೋ ಅಥವಾ ಸ್ವಾರ್ಥವೋ? ಏನೆಂದು ಗೊತ್ತಾಗುತ್ತಿಲ್ಲ, ನೀವು ಊಹಿಸಬಹುದು.
ವಸುಧೈವ ಕುಟುಂಬಕಂ ಭಾರತದ ಅಸ್ಮಿತೆ:ಇದು ಮಹಾ ಉಪನಿಷತ್ತಿನಂತಹ ಹಿಂದೂ ಗ್ರಂಥಗಳಲ್ಲಿ ಕಂಡುಬರುವ ಸಂಸ್ಕೃತದ ನುಡಿಗಟ್ಟು. ಜಗತ್ತು ಒಂದು ಕುಟುಂಬ ಎಂದರ್ಥ. ವೈದಿಕ ಸಂಪ್ರದಾಯದಂತೆ ವಸುಧೈವ ಕುಟುಂಬಕಂ ಎಂದರೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳು ಒಂದೇ ಒಂದು ಕುಟುಂಬದಂತೆ ಎಂದು ಹೇಳುತ್ತದೆ.
ಒಂದು ಕುಟುಂಬದಲ್ಲಿ ಒಬ್ಬರಿಗೊಬ್ಬರು ನೋವು ನಲಿವನ್ನು ಹಂಚಿ ಬಾಳ್ವೆ ನಡೆಸುವುದೇ ಇದರ ತಾತ್ಪರ್ಯ. ಕಳೆದೆರಡು ವರ್ಷ ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಪ್ಯೂಗೆ ಕರೆ ನೀಡಿದಾಗ ಕೊರೊನಾ ವಾರಿಯರ್ಸ್‌ಗಳಿಗೆ ದೀಪ ಬೆಳಗುವ ಮೂಲಕ ಗೌರವಿಸಿ, ದೇಶದ ಜನರೆಲ್ಲಾ ಅಭೂತಪೂರ್ವವಾಗಿ ಸ್ಪಂದಿಸಿದ್ದರು. ಈಗಲೂ ಸಹ ಹೊಸ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ. ಆದಾಗ್ಯೂ ನಮ್ಮ ಕುಟುಂಬದ ಸದಸ್ಯರ ನಡುವಿನ ಹೊಂದಾಣಿಕೆಯಸಂಬಂಧವನ್ನು ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯ ಸಂಕೇತವನ್ನು ತಿಳಿಸುತ್ತದೆ. ಕೊರೊನಾ ಸಮಯದಲ್ಲಿ ವಿದೇಶಗಳಲ್ಲಿ ಏನೇ ಕಳವಳವಾದರೂ, ಭಾರತದಲ್ಲಿ ಸಶಕ್ತ ವಾಗಿ ಎದುರಿಸಿದೆವು.
ಇದಕ್ಕೆ ಕೌಟುಂಬಿಕ ವ್ಯವಸ್ಥೆಯೇ ಕಾರಣ ಎಂದು ಹೇಳಲಾಗುತ್ತದೆ. ಕೌಟುಂಬಿಕ ವ್ಯವಸ್ಥೆಯನ್ನು ಬಲಗೊಳಿಸಲು ನಾವು ಮುಂದಾಗಬೇಕಿದೆ. ವಾರಕ್ಕೆ ಒಂದು ಬಾರಿಯಾದರೂ ಜೊತೆಗೆ ಕುಳಿತು ಭಜನೆ ಹಾಗೂ ಭೋಜನಗಳಲ್ಲಿ ತೊಡಗುವುದು, ಹಬ್ಬ ಆಚರಣೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಕುಟುಂಬದ ಸದಸ್ಯರ ಒಡನಾಟ ಹೆಚ್ಚಾಗಿ ಕುಟುಂಬವ್ಯವಸ್ಥೆ ಇನ್ನೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯ ಹಾಗೂ ಹಬ್ಬ ಹರಿದಿನಗಳು ಬಂದರೆ ಸಾಕು ಮನೆಯಲ್ಲಾ ಸಂಪೂರ್ಣ ಅಲಂಕಾರ, ಬಗೆ ಬಗೆಯ ತಿಂಡಿ ತಿನಿಸುಗಳು, ಅಜ್ಜಿಯ ಚಕ್ಕುಲಿ, ನಿಪ್ಪಟ್ಟು ವಾಹ್!
ಎಲ್ಲರೂ ಸಮಯಕ್ಕೆ ಸರಿಯಾಗಿ ಕೂತು ಒಟ್ಟಿಗೆ ಹರಟುತ್ತಾ, ಹಂಚಿ ಊಟ ಮಾಡುವುದರಲ್ಲಿ ಇರುವ ಸಂತೋಷವೇ ಬೇರೆ.ಆದ್ದರಿಂದ ಮಳೆಯಿಲ್ಲದೆ ಕೃಷಿಯಿಲ್ಲ; ಕೃಷಿಯಿಲ್ಲದೆ ಬೆಳೆಯಿಲ್ಲ; ಬೆಳೆಯಿಲ್ಲದೆ ಆಹಾರವಿಲ್ಲ; ಆಹಾರವಿಲ್ಲದೆ ಜೀವವಿಲ್ಲ; ಜೀವವಿಲ್ಲದೆ ಮನುಷ್ಯನಿಲ್ಲ! ಮನುಷ್ಯ ಆದಷ್ಟು ಬೇಗನೇ ಎಚ್ಚೆತ್ತು ಈ ಲೋಕವೆಂಬ ಕುಟುಂಬದೆಡೆಗೆ ತನ್ನ ಬಾಧ್ಯತೆಗಳೇನು? ಎಂದು ತಿಳಿದುಕೊಂಡು ಅವುಗಳನ್ನು ಪಾಲಿಸುವ ಅಗತ್ಯವಾದ ಸಂದರ್ಭ ಒದಗಿ ಬಂದಿದೆ.
ಸುಖಿ ಕುಟುಂಬದ ಸೂತ್ರ:ಯಾರಿಗೇ ಏನೇ ಸಮಸ್ಯೆಯಾದರೂ, ತಕ್ಷಣವೇ ಸೇರಿ ಚರ್ಚಿಸಬೇಕು. ಅವಿಭಕ್ತ ಕುಟುಂಬವಾಗಿರಲಿ ಅಥವಾ ವಿಭಕ್ತ ಕುಟುಂಬವಾಗಿರಲಿ ಬಹಳಷ್ಟು ಅಥವಾ ಕಡಿಮೆ ಜನರಿರುವುದರಿಂದ ಇಲ್ಲಿಯೇ ಚರ್ಚೆ ಮಾಡಿದಾಗ ಪರಿಹಾರವೂ ಸಿಗುತ್ತದೆ. ಯಾವುದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದರೂ ಅದನ್ನು ತಕ್ಷಣ ಬಗೆಹರಿಸಬೇಕು.ಯಾವುದೇ ತೊಂದರೆ ಬಂದಾಗ, ನಿಮ್ಮ ಕುಟುಂಬವು ನಿಮ್ಮನ್ನು ಬೆಂಬಲಿಸುವಂತಿರಬೇಕು. ಇದೇ ನಮ್ಮ ಕೂಡು ಅಥವಾ ವಿಭಕ್ತ ಕುಟುಂಬದ ಯಶಸ್ಸಿನ ಗುಟ್ಟು ಹಾಗೂ ಸೂತ್ರ ಎನ್ನಬಹುದು.
ಒಟ್ಟಾರೆಯಾಗಿ ಕುಟುಂಬದಲ್ಲಿನ ಮಕ್ಕಳ ಏಳಿಗೆಗಾಗಿ ಎಲ್ಲವನ್ನೂ ಸಹಿಸಿಕೊಂಡು ಸಂಸಾರ ತೂಗಿಸಿಕೊಂಡು ಹೋಗುವ ನಾರಿ ಯನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ. ವಿದೇಶಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ವಿಚ್ಛೇದನಗಳಿಂದಾಗಿ ತಂದೆ-ತಾಯಿ ಯ ಆರೈಕೆಯಿಲ್ಲದೆ ಬೀದಿಗೆ ಬೀಳುವ ಮಕ್ಕಳು ಸಮಾಜ ಕಂಟಕರಾಗುತ್ತಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಮಹಿಳೆಯ ರಿಗೆ ಸಿಕ್ಕಿರುವ ಮೀಸಲಾತಿ ಅವಕಾಶ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದಾಗ ಮಾತ್ರ ನಮ್ಮ ಕುಟುಂಬದಲ್ಲಿನ ನೋವು ನಲಿವುಗಳೆರಡನ್ನೂ ಹಂಚಿಕೊಂಡು, ಸೋಲು ಗೆಲುವುಗಳಿಗೆ ಜತೆಯಾಗುವಂತಹಕುಟುಂಬ ಇದ್ದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗುತ್ತಾನೆ.
ಇದ್ದ ಕುಟುಂಬವನ್ನು ದೂರ ಮಾಡಿಕೊಳ್ಳದೆ ದೂರ ಇರುವ ಕುಟುಂಬದ ಸದಸ್ಯರನ್ನು ಮತ್ತೆ ಜೋಡಿಸಿಕೊಂಡು, ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವುದು ನಮ್ಮ ಹಿರಿಯರ ಆಶಯವಾಗಿದೆ. ಕೂಡಿ ಬಾಳುವುದರಲ್ಲಿರುವ ಪ್ರೀತಿ, ಪ್ರೇಮ, ಭದ್ರತೆ, ಕೊಡುಕೊಳ್ಳುವಿಕೆಯಿಂದ ಈ ವರ್ಷದ ಈ ದಿನವನ್ನು ಸಂಭ್ರಮ ಸಡಗರದಲ್ಲಿ ಆಚರಿಸಬೇಕೆಂಬುವುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕಾಗಿದೆ.
ಕೊನೆಯ ಮಾತು: ಕುಟುಂಬ ಮತ್ತು ಸ್ನೇಹವು ಸಂತೋಷದ ಎರಡು ಅತ್ಯುತ್ತಮ ಸಹಾಯಕರು-ಜಾನ್ ಸಿ ಮ್ಯಾಕ್ಸ್ವೆಲ್ ಅವರು ಕುಟುಂಬದ ಬಗ್ಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.