ಆ ಮಹಾದುರಂತ ದೇವೇಗೌಡರ ಹುಟ್ಟಿಗೆ ಮೂಲವಾಯಿತು
ತನ್ನಿಮಿತ್ತ
೧೯೨೮ ಆ ವರ್ಷ ಹರದನಹಳ್ಳಿಯ ರೈತ ದೊಡ್ಡೇಗೌಡರ ಬದುಕಿನಲ್ಲಿ ಮಹಾವಿಪ್ಲವ ಎದುರಾಗುತ್ತದೆ.
೧೯೧೮-೧೯ ರಲ್ಲಿ ನಾಡನ್ನು ಕಾಡಿದ ಸಾಂಕ್ರಾಮಿಕ ಜ್ವರ ಹತ್ತು ವರ್ಷದ ನಂತರ ದೊಡ್ಡೇ ಗೌಡರ ಮನೆಯನ್ನು ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸಿದ ಜ್ವರ ಅವರ ಪತ್ನಿ ಈರಮ್ಮ ಮತ್ತು ಮೂವರು ಗಂಡು ಮಕ್ಕಳನ್ನು ಸಾವಿನ ಮನೆಗೆ ಕರೆದೊಯ್ಯುತ್ತದೆ. ಹೀಗೆ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡ ದೊಡ್ಡೇಗೌಡರು ಕಂಗಾಲಾಗುತ್ತಾರೆ.
ಕಂಗಾಲಾಗಿ ಕುಳಿತ ಅವರ ಬದುಕು ಪುನಃ ಹಳಿಯ ಮೇಲೆ ಬರಬೇಕಲ್ಲ? ಹೀಗಾಗಿ ತಂದೆ ಅಪ್ಪೇ ಗೌಡರು ಮತ್ತು ಸೋದರ ಮಾವ ಪುಟ್ಟೇಗೌಡರು, ದೊಡ್ಡೇಗೌಡರನ್ನು ಮರು ಮದುವೆಗೆ ಒತ್ತಾಯಿಸುತ್ತಾರೆ. ಆದರೆ ಒಂದೇ ಏಟಿಗೆ ತಮ್ಮ ಸಂಸಾರ ಕಳೆದುಕೊಂಡ ದೊಡ್ಡೇಗೌಡರಿಗೆ ಮರು ಮದುವೆ ಎಂದರೆ ನಿರಾಸಕ್ತಿ. ಆದರೂ ಪುಟ್ಟೇಗೌಡರ ಸತತ ಒತ್ತಡ ಅವರು ಒಪ್ಪುವಂತೆ ಮಾಡುತ್ತದೆ. ಆಗ ಅವರು ಲಕ್ಷ್ಮೀದೇವಮ್ಮ ಅವರ ಕೈ ಹಿಡಿಯುತ್ತಾರೆ.
ಸಾವಿನ ನೆರಳನ್ನು ಕಂಡು ಹೆದರಿದ್ದ ದೊಡ್ಡೇಗೌಡರಿಗೆ ಮುಂದೆ ಈ ನೆರಳು ಸದಾ ಕಾಡುತ್ತದೆ. ಇಷ್ಟೆಲ್ಲದರ ಮಧ್ಯೆ ಈಶ್ವರ ದೇವಸ್ಥಾನಕ್ಕೆ ಸಲ್ಲಿಸುವ ಸೇವೆಯಿಂದ ಹಿಡಿದು ದೈವದ ಮೊರೆ ಹೋಗುವ ದಂಪತಿಗೆ ೧೯೩೩ ರ ಮೇ ೧೮ ರಂದು ಗಂಡು ಮಗು ಜನಿಸುತ್ತದೆ. ಈ ಮಗುವಿನ ಹೆಸರು ಎಚ್.ಡಿ. ದೇವೇಗೌಡ. ಒಂದು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸುವ ದೇವೇಗೌಡರು ಅಂಬೆಗಾಲಿಡುತ್ತಾ, ಎದ್ದು ಬಿದ್ದು ನಡೆಯುತ್ತಾ, ತಮ್ಮ ಹೆಜ್ಜೆಗಳನ್ನು ನೆಲಕ್ಕೆ ಬಲವಾಗಿ ಊರುತ್ತಾ ಬೆಳೆದು ನಿಲ್ಲುವ ಮತ್ತು ಶಾಸಕರಾಗಿ, ಪ್ರತಿಪಕ್ಷ ನಾಯಕರಾಗಿ, ಸಚಿವರಾಗಿ, ಮುಖ್ಯಮಂತ್ರಿ ಯಾಗಿ ಅಂತಿಮವಾಗಿ ದೇಶದ ಪ್ರಧಾನಮಂತ್ರಿ ಗದ್ದುಗೆಗೇರುವ ರೀತಿ ಇದೆಯಲ್ಲ? ಇದು ನಿಜಕ್ಕೂ ಅದ್ಭುತ ಮತ್ತು ಚರಿತ್ರಾರ್ಹ. ಇಂತಹ ದೇವೇಗೌಡರ ಬದುಕನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರು ಇಂಗ್ಲಿಷ್‌ನಲ್ಲಿ ‘ಫರೋಸ್ ಇನ್ ಎ ಫೀಲ್ಡ್’ ಎಂಬ ಅದ್ಭುತ ಪುಸ್ತಕ ಬರೆದಿದ್ದಾರೆ.
ಫರೋಸ್ ಇನ್ ಎ ಫೀಲ್ಡ್ ಎಂದರೆ ಹೊಲದಲ್ಲಿ ಕಾಣುವ ನೇಗಿಲ ಗೆರೆಗಳು ಎಂದರ್ಥ. ಈ ಪುಸ್ತಕ ಈಗ ಕನ್ನಡಕ್ಕೆ ತರ್ಜುಮೆ ಯಾಗಿದೆ. ರೋಜಿ ಡಿಸೋಜಾ ಅವರು ತರ್ಜುಮೆ ಮಾಡಿರುವ ರೀತಿ ಕೂಡ ಅನನ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕ ದೇವೇಗೌಡರಿಗೆ ನ್ಯಾಯ ಒದಗಿಸಿದೆ. ಯಾಕೆಂದರೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಅಪವಾದಗಳು ಸಹಜ. ಆದರೆ ಗೌಡರು ಬದುಕಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅಪವಾದಗಳನ್ನು ಹೊತ್ತಿದ್ದಾರೆ. ೧೯೯೬ರಲ್ಲಿ ಅವರು ಭಾರತದ ಪ್ರಧಾನಿಯಾದಾಗ ‘ಗೌಡರೇ ಪ್ರಧಾನಿಯಾದ ಮೇಲೆ ಈ ದೇಶದಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು’ ಎಂಬ ಕುಹಕ ದೇಶಾದ್ಯಂತ ಕೇಳಿ ಬಂತು. ಗೌಡರ ಬದುಕಿಗೆ ಅಪಾರ ಶ್ರಮ, ಜ್ಞಾನ, ಛಲ ಬಿಡದ ಹೋರಾಟದ ಕವಚವಿತ್ತು ಎಂಬುದನ್ನು ಗಮನಿಸಿದ್ದರೆಇಂತಹ ಮಾತುಗಳು ಕೇಳಿ ಬರುತ್ತಿರಲಿಲ್ಲ.
ಅಂದ ಹಾಗೆ ಹದಿನೇಳನೆ ವರ್ಷಕ್ಕೆ ಎಸ್‌ಎಸ್‌ಎಲ್‌ಸಿ ಮುಗಿಸಿದ ದೇವೇಗೌಡರ ವೃತ್ತಿ ಜೀವ ಆರಂಭವಾಗಿದ್ದು ಹೊಳೆ ನರಸೀಪುರದ ಜೋಡಿಗುಬ್ಬಿ ಗ್ರಾಮದ ಮಾಧ್ಯಮಿಕ ಶಾಲೆಯ ಶಿಕ್ಷಕರಾಗಿ. ಆದರೆ ನಾಲ್ಕೇ ತಿಂಗಳಲ್ಲಿ ಈ ವೃತ್ತಿ ಅವರಿಗೆ ಬೇಸರ ತಂದಿತ್ತು. ನಂತರ ಹಾಸನದ ಲಕ್ಷ್ಮಮ್ಮ ವೆಂಕಟಸ್ವಾಮಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ವ್ಯಾಸಂಗಕ್ಕೆ ಮುಂದಾದರು. ಅಲ್ಲಿನ ಘಟನೆ ಯೊಂ ದು ಅವರು ರಾಜಕೀಯ ಪ್ರವೇಶಕ್ಕೆ ಪ್ರೇರಣೆ ನೀಡಿತು.
ಅಲ್ಲಿ ನೀಲಕಂಠರಾವ್ ಎಂಬ ವಿದ್ಯಾರ್ಥಿ ಮುಖಂಡನೊಬ್ಬ ‘ನನ್ನ ವಿರುದ್ಧ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಮಗನಿಗೂ ದಮ್ಮಿಲ್ಲ’ ಎಂದು ಪೌರುಷ ತೋರುತ್ತ ಕುಳಿತಿದ್ದು. ಹಾಕಿ ಆಡಿ ಹಿಂದಿರುಗುತ್ತಿದ್ದ ಗೌಡರ ಕಿವಿಗೆ ಈ ಮಾತು ಬೀಳುತ್ತದೆ. ಕೋಪಗೊಂಡ ಗೌಡರು ತಮ್ಮ ಕೈಲಿದ್ದ ಹಾಕಿ ಸ್ಟಿಕ್ ಅನ್ನೇ ನೀಲಕಂಠರಾವ್ ಮೇಲೆ ಬೀಸುತ್ತಾರೆ. ಬ್ರಾಹ್ಮಣ-ಬ್ರಾಹ್ಮಣೇತರ ಗುಂಪಿನ ಪ್ರತಿಷ್ಠೆಯಾಗಿ ಮಾರ್ಪಟ್ಟ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೌಡರು ಸಕ್ರಿಯರಾಗಿ, ಚುನಾವಣೆಗೆ ನಿಂತು ಸಹಜವಾಗಿ ಅದ್ದೂರಿ ಗೆಲುವು ಸಾಧಿಸುತ್ತಾರೆ.
ಈ ಕಾಲಘಟ್ಟದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯಕ್ರಮಕ್ಕೆ ಅವರು ಆಹ್ವಾನಿಸುವ ಗಣ್ಯ ಅತಿಥಿಗಳ ಪೈಕಿ ಒಬ್ಬರು ಎ.ಜಿ. ರಾಮಚಂದ್ರ ರಾವ್. ಸಚಿವರೂ, ಹೊಳೆನರಸೀಪುರದ ಶಾಸಕರು ಆಗಿದ್ದರು. ಬ್ರಾಹ್ಮಣ ಸಮುದಾಯದ ರಾಮಚಂದ್ರರಾವ್ ಮುಂದೆ ಗೌಡರ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ವಹಿಸುವುದು ಅನನ್ಯವಾಗಿದೆ.
ಸರಿ, ಡಿಪ್ಲೊಮಾ ವ್ಯಾಸಂಗ ಮುಗಿಸಿದ ಗೌಡರು ಪಶ್ಚಿಮ ರೈಲ್ವೆಯಲ್ಲಿ ಉದ್ಯೋಗಕ್ಕೆ ಆಯ್ಕೆ ಆಗುತ್ತಾರೆ. ಆದರೆ ಕೆಲಸಕ್ಕೆಂದು ಮಗ ದೂರದ ಗುಜರಾತ್‌ಗೆ ಹೊರಟು ನಿಂತಾಗ ತಂದೆ ದೊಡ್ಡೇಗೌಡರು ವಿರೋಧಿಸುತ್ತಾರೆ. ಮಗ ಹೊರಟು ನಿಂತಾಗ ಮನೆಯ ಹೊಸ್ತಿಲಿಗೆ ಅಡ್ಡಲಾಗಿ ಮಲಗುವ ದೊಡ್ಡೇಗೌಡರು, ನನ್ನನ್ನು ದಾಟಿ ಕೊಂಡು ನೀನು ಕೆಲಸಕ್ಕೆ ಹೋಗು ಎನ್ನುತ್ತಾರೆ.ತಂದೆಯ ವಿರೋಧ ಅನಿವಾರ್ಯವಾಗಿ ಗುಜರಾತ್ ತಟ ತಲುಪದಂತೆ ಮಾಡುತ್ತದೆ.
ಕೊನೆಗೆ ಗೌಡರು ಸಿವಿಲ್ ಎಂಜಿನಿಯರ್ ಆಗಿ ಕೆಲಸ ಆರಂಭಿಸುತ್ತಾರೆ. ಗೌಡರ ಬದುಕಿನ ಅನಿರೀಕ್ಷಿತ ತಿರುವು ನೀಡುವ ಘಟನೆ ಗಳಿಗೆ ಮೂಲವಾಗುವುದು ೧೯೫೭ ರ ವಿಧಾನಸಭಾ ಚುನಾವಣೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಮಚಂದ್ರರಾಯರು ಸೋಲುತ್ತಾರೆ. ಗೆದ್ದವರು ಪ್ರಜಾಸೋಷ ಲಿಸ್ಟ್ ಪಾರ್ಟಿಯ ವೈ. ವೀರಪ್ಪ. ಅವರು ಕೆಲವೇಕಾಲದಲ್ಲಿ ಎ.ಜಿ. ರಾಮಚಂದ್ರರಾಯರ ಅನುಯಾಯಿಗಳ ವಿರುದ್ಧ ತಿರುಗಿ ಬೀಳುತ್ತಾರೆ. ಒಂದು ಅನಾಮಧೇಯ ಪತ್ರವನ್ನು ಮುಂದಿಟ್ಟುಕೊಂಡು ಸಿವಿಲ್ ಕಾಮಗಾರಿ ನಡೆಸುತ್ತಿದ್ದ ದೇವೇಗೌಡರನ್ನು ಆರೋಪದ ಕೂಪಕ್ಕೆ ಬೀಳಿಸಲು ಮುಂದಾಗುತ್ತಾರೆ. ಪ್ರಕರಣ ಭ್ರಷ್ಟಾಚಾರ ನಿಗ್ರಹ ದಳದ ತೆಕ್ಕೆಗೆ ಹೋಗುತ್ತದೆ.
ಹೀಗೆ ಕಷ್ಟಕ್ಕೆ ಸಿಲುಕಿದ್ದ ಗೌಡರ ಪರವಾಗಿ ನಿಂತವರು ವಿಧಾನಪರಿಷತ್ ಸದಸ್ಯ ಸೂರ್ಯನಾರಾಯಣ ಶೆಟ್ಟಿ. ನಿಜಲಿಂಗಪ್ಪ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಎಂ. ಚನ್ನಬಸಪ್ಪ ಬಳಿ ಕರೆದುಕೊಂಡು ಹೋಗುತ್ತಾರೆ. ಆದರೆ ಅವರ ಮಾತು ಕೇಳಿದ ಚನ್ನಬಸಪ್ಪನವರು ವ್ಯಂಗ್ಯವಾಗಿ ‘ನಿಜಲಿಂಗಪ್ಪ ಅವರ ಸರಕಾರದಲ್ಲಿ ಖಾದಿ ಹಾಕಿಕೊಂಡು ಬರುವವರೆಲ್ಲ ಸುಳ್ಳು ಬಿಲ್ ಕೊಡುವುದರಲ್ಲಿ ಸಮರ್ಥರು’ ಎನ್ನುತ್ತಾರೆ.
ಇದರಿಂದ ಕೋಪೋದ್ರಿಕ್ತ ಗೌಡರು, ‘ಒಂದು ವೇಳೆ ನಾನು ಖಾದಿ ಧರಿಸಿ ಬರುವ ಬದಲು ಕಾವಿ ಧರಿಸಿ ಬಂದಿದ್ದರೆ ಇನ್ನೂ ಹೆಚ್ಚು ಮರ್ಯಾದೆ ಕೊಡುತ್ತಿದ್ದಿರೇನೋ’ ಎನ್ನುತ್ತಾರೆ. ಆಗ ಮತ್ತಷ್ಟು ಕುಪಿತರಾಗುವ ಚನ್ನಬಸಪ್ಪ ಅಲ್ಲಿದ್ದ ಖುರ್ಚಿಯನ್ನು ಜೋರಾಗಿ ತಳ್ಳಿ, ನಿನ್ನ ಕತ್ತು ಹಿಡಿದು ಹೊರಗೆ ತಳ್ಳುತ್ತೇನೆ ನೋಡು ಎನ್ನುತ್ತಾರೆ.
ಆದರೆ ಬೆದರದ ಗೌಡರು, ನನ್ನ ಕತ್ತು ಹಿಡಿದು ತಳ್ಳಲು ಇದೇನು ನಿಮ್ಮ ಸ್ವಂತ ಮನೆಯಲ್ಲ. ಇದು ಜನರ ಮನೆ, ಚುನಾವಣೆ ಬರಲಿ, ಜನರೇ ನಿಮ್ಮನ್ನು ಓಡಿಸುತ್ತಾರೆ ಎಂದು ಹೇಳಿ ಹೊರನಡೆಯುತ್ತಾರೆ. ಮುಂದೆ ೧೯೬೦ ರಲ್ಲಿ ತಾಲ್ಲೂಕು ಬೋರ್ಡ್ ಸದಸ್ಯರಾಗುವ ಗೌಡರು ಹೊಳೆನರಸೀಪುರದಲ್ಲಿ ಬೆಳೆಯತೊಡಗುತ್ತಾರೆ. ೧೯೬೨ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಸಕ ರಾಮಚಂದ್ರ ರಾಯರು ವಯಸ್ಸಿನ ಕಾರಣದಿಂದ ಹಿಂದೇಟು ಹೊಡೆಯುತ್ತಾರೆ.
ಪರಿಣಾಮ ಅನಿವಾರ್ಯವಾಗಿ ಗೌಡರು ಕಣಕ್ಕಿಳಿಯಲು ನಿರ್ಧರಿಸಿ ಶಿಫಾರಸಾಗುತ್ತದೆ. ಆದರೆ ದಿಲ್ಲಿಗೆ ಹೋದ ದೇವೇಗೌಡರ ಹೆಸರು ಅಂತಿಮಪಟ್ಟಿಯಲ್ಲಿ ಇರುವುದಿಲ್ಲ. ಬದಲಿಗೆ ದೊಡ್ಡೇಗೌಡ (ದೇವೇಗೌಡರ ತಂದೆಯಲ್ಲ) ಎಂಬುವವರಿಗೆ ಕೊಡಲಾ ಗಿರುತ್ತದೆ. ಅಂದ ಹಾಗೆ ತಮಗೆ ಟಿಕೆಟ್ ತಪ್ಪಲು ನಿಜಲಿಂಗಪ್ಪನವರು ಕಾರಣ ಎಂಬುದು ದೇವೇಗೌಡರ ಅನುಮಾನ. ಯಾಕೆಂದರೆ ಅಷ್ಟೊತ್ತಿಗಾಗಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳು ಮೇಲೆದ್ದಿರುತ್ತವೆ. ಒಂದು ಗುಂಪಿಗೆ ನಿಜಲಿಂಗಪ್ಪ ನಾಯಕರು. ಮತ್ತೊಂದು ಗುಂಪಿಗೆ ಬಿ.ಡಿ. ಜತ್ತಿ ನಾಯಕರು. ಗೌಡರ ಗುರುಗಳಾದ ರಾಮಚಂದ್ರ ರಾಯರು, ಜತ್ತಿ ಕ್ಯಾಂಪಿನವರು.
ಪಕ್ಷೇತರರಾಗಿ ಸ್ಪರ್ಧಿಸಲು ಅವರು ನಿರ್ಧರಿಸಿದಾಗ ಅವರಿಗೆ ರಾಮಚಂದ್ರರಾಯರ ಆಶೀರ್ವಾದ ಸಿಗುತ್ತದೆ. ಅಂದ ಹಾಗೆ ರಾಮಚಂದ್ರರಾಯರು ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡಲಾರರು. ಆದರೆ ಪ್ರಚಾರ ಮಾಡದಿದ್ದರೂ ಅವರಿಗೆ ಶಿಷ್ಯ ದೇವೇಗೌಡರ ಬಗ್ಗೆ ಒಲವು. ಈ ಸಂದೇಶ ತಾಲೂಕಿಗೆ ರವಾನೆಯಾಗುತ್ತದೆ. ಸಹಜವಾಗಿ ಗೌಡರು ಹನ್ನೆರಡು ಸಾವಿರಕ್ಕಿಂತ ಅಧಿಕ ಮತ ಪಡೆದು ಗೆದ್ದು, ಎದುರಾಳಿ ಪ್ರಜಾಸೋಷಲಿಸ್ಟ್ ಪಾರ್ಟಿಯ ವೈ. ವೀರಪ್ಪನವರು ಆರು ಸಾವಿರ ಚಿಲ್ಲರೆ ಮತ ಪಡೆದು ಸೋಲು ಅನುಭವಿಸುತ್ತಾರೆ.
ಹೀಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸುವ ದೇವೇಗೌಡರು ಮುಂದೆ ೧೯೬೯ರ ಸುಮಾರಿಗೆ ನಿಜಲಿಂಗಪ್ಪ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಸೇರುತ್ತಾರೆ. ೧೯೭೨ರ ವಿಧಾನಸಭಾ ಚುನಾವಣೆಯಲ್ಲಿ ನಿಜಲಿಂಗಪ್ಪ ಶಿಷ್ಯರಾದ ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲರು ಸ್ಪರ್ಧಿಸದ ಪರಿಣಾಮ ದೇವರಾಜ ಅರಸರಂತಹ ಬಲಾಢ್ಯ ಮುಖ್ಯಮಂತ್ರಿಯ ಎದುರು ಪಕ್ಷದ ಶಾಸಕಾಂಗ ನಾಯಕರಾಗಿ ಕೂರುವ ಅವಕಾಶವನ್ನು ಗೌಡರು ಪಡೆಯುತ್ತಾರೆ.
ಮುಂದೆ ಸಂಸ್ಥಾ ಕಾಂಗ್ರೆಸ್ ಜನತಾ ಪಕ್ಷದ ರೂಪುಪಡೆದು, ೧೯೭೮ ರಲ್ಲಿ ದೇವೇಗೌಡರು ಅದರ ರಾಜ್ಯಾಧ್ಯಕ್ಷರಾದಾಗ ಇನ್ನೇನು ಗೌಡರು ಮುಖ್ಯಮಂತ್ರಿ ಹುದ್ದೆಗೇರುವ ಘಳಿಗೆ ಸನ್ನಿಹಿತವಾಯಿತು ಎಂಬ ಭಾವನೆ ವ್ಯಾಪಕವಾಗುತ್ತದೆ. ಆದರೆ ೧೯೭೮ರ ವಿಧಾನಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಪ್ರಭಾವಿಯಾಗಿದ್ದ ರಾಮಕೃಷ್ಣ ಹೆಗಡೆ ಕೈವಾಡದಿಂದ ಜನತಾಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವರ ಹೆಸರುಗಳು ಕಾಣೆಯಾಗುತ್ತವೆ. ಮುಂದೆ ಚುನಾವಣೆ ನಡೆದು ಫಲಿತಾಂಶ ಬಂದಾಗ ಅರಸರ ನೇತೃತ್ವದ ಕಾಂಗ್ರೆಸ್ ಗೆದ್ದು, ಜನತಾ ಪಕ್ಷ ಸೋಲು ಅನುಭವಿಸುತ್ತದೆ. ಈ ಬೆಳವಣಿಗೆ ದೇವೇಗೌಡರನ್ನು ಖಿನ್ನರಾಗಿಸುವುದಷ್ಟೇ ಅಲ್ಲ, ರಾಜಕಾರಣದ ಬಗ್ಗೆ ಆಸಕ್ತಿ ಕಳೆದುಕೊಂಡು ಊರಲ್ಲಿದ್ದ ಹೊಲಗದ್ದೆ ನೋಡಿಕೊಳ್ಳುವ ಮನಃಸ್ಥಿತಿಗೆ ತಳ್ಳುತ್ತದೆ.
ಹೆಗಡೆ ಸಿಎಂ ಆದ ಕತೆ:ಮುಂದೆ ೧೯೮೩ರ ವಿಧಾನಸಭಾ ಚುನಾವಣೆಯಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿ ಜನತಾ ಪಕ್ಷದ ನೇತೃತ್ವದಲ್ಲಿ ಕ್ರಾಂತಿರಂಗ ಮತ್ತಿತರ ಶಕ್ತಿಗಳ ಬೆಂಬಲದೊಂದಿಗೆ ಹೊಸ ಸಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾದಾಗ ಸಹಜವಾಗಿಯೇ ಗೌಡರು, ಎಸ್. ಆರ್. ಬೊಮ್ಮಾಯಿ ಹಾಗೂ ಕ್ರಾಂತಿ ರಂಗದ ನಾಯಕ ಎಸ್. ಬಂಗಾರಪ್ಪ ಮುಖ್ಯಮಂತ್ರಿ ರೇಸ್‌ನಲ್ಲಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಯಂಗ್ ಟರ್ಕ್ ಖ್ಯಾತಿಯ ಚಂದ್ರಶೇಖರ್ ಅವರು ದೇವೇಗೌಡರಿಗೆ ಒಂದು ನಿರ್ದೇಶನ ನೀಡಿ, ರಾಮಕೃಷ್ಣ ಹೆಗಡೆಗೆ ಮುಖ್ಯಮಂತ್ರಿ ಹುದ್ದೆ ದಕ್ಕಲುಕಾರಣರಾಗುತ್ತಾರೆ.
ಸಹಜವಾಗಿ ದೇವೇಗೌಡರಿಗೆ ನಿರಾಶೆಯಾದರೂ, ತಾವೇ ಮುಂದಾಗಿ ಹೆಗಡೆ ಮನೆಗೆ ಹೋಗಿ ಮುಖ್ಯಮಂತ್ರಿ ಹುದ್ದೆಯ ರೇಸಿಗೆ ಅಣಿಯಾಗಲು ಹೇಳುತ್ತಾರೆ. ಅಷ್ಟೇ ಅಲ್ಲ, ಮುಂದೆ ಮುಖ್ಯ ಮಂತ್ರಿಯಾಗುವ ಹೆಗಡೆ ಅವರಿಗೆ ಕ್ಷೇತ್ರ ಇಲ್ಲದೆ ಇರುವುದರಿಂದ ಪಿಜಿಆರ್ ಸಿಂಧಿಯಾ ಅವರ ಸಹಕಾರ ಪಡೆದು, ಕನಕಪುರ ಕ್ಷೇತ್ರದ ಉಪಚುನಾವಣೆ ಗೆಲ್ಲುವಂತೆಯೂ ಮಾಡುತ್ತಾರೆ.
೧೯೮೩ರಲ್ಲಿ ಹೆಗಡೆ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಸರಕಾರ ಅತ್ಯುತ್ತಮ ಹೆಸರು ಪಡೆಯುತ್ತದೆ. ೧೯೮೫ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಅದು ಮರು ಆಯ್ಕೆಯಾಗಿ ಅಧಿಕಾರ ಹಿಡಿದಿದ್ದಕ್ಕೆ ಅದಕ್ಕಿದ್ದ ಒಳ್ಳೆಯ ಹೆಸರೇ ಕಾರಣ. ಆದರೆ ಇಂತಹ ಸರಕಾರದಲ್ಲಿ ಒಡಕಿನ ಬೀಜಗಳು ಬೀಳುತ್ತವೆ. ಹೆಗಡೆ ಮತ್ತು ದೇವೇಗೌಡರ ನಡುವೆ ಅಪನಂಬಿಕೆ ಕೆಲಸಮಾಡುತ್ತ ತಾರಕಕ್ಕೇರುತ್ತದೆ. ಈ ಕಚ್ಚಾಟದಲ್ಲಿ ಗೌಡರೂ ನರಕ ಅನುಭವಿಸುತ್ತಾರೆ.
ಟೆಲಿಫೋನ್ ಕದ್ದಾಲಿಕೆಯ ಪ್ರಕರಣಕ್ಕೆ ಸಿಲುಕಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಹುದ್ದೆಯನ್ನೇ ಕಳೆದುಕೊಳ್ಳುತ್ತಾರೆ. ಪರಿಣಾಮ? ಹೆಗಡೆ ರಾಜೀನಾಮೆ ನಂತರ ಮುಖ್ಯಮಂತ್ರಿಯಾದ ಎಸ್.ಆರ್. ಬೊಮ್ಮಾಯಿ ಬಹುಕಾಲ ಗದ್ದುಗೆಯ ಮೇಲೆ ಉಳಿಯುವುದಿಲ್ಲ. ೧೯೮೯ರ ಚುನಾವಣೆಯಲ್ಲಿ ಗೌಡರು ಸೋಲುತ್ತಾರೆ. ಎರಡು ವರ್ಷ ಗೌಡರದು ಅಜ್ಞಾತ ವಾಸ. ಕುಟುಂಬದವರಿಂದಲೂ ದೂರವಾಗಿ ಬೆಂಗಳೂರಿನ ಲೋಯರ್ ಆರ್ಚರ್ಡ್ ಪ್ಯಾಲೇಸ್ ಬಳಿ ಸಣ್ಣ ಮನೆ ಮಾಡುವ ಗೌಡರು ಅಕ್ಷರಶಃ ಏಕಾಂಗಿ. ಆಗೊಂದು ದಿನ ಉದ್ಯಮಿಯೊಬ್ಬರು ಭೇಟಿಯಾಗುತ್ತಾರೆ.
ಅಧಿಕಾರದಲ್ಲಿದ್ದಾಗ ಗೌಡರು ಮಾಡಿದ ಒಂದು ಸಹಾಯ ನೆನಪಿಸಿಕೊಂಡ ಅವರು, ಗೌಡರು ಕಟ್ಟಿದ ಪಕ್ಷವನ್ನು ಪುನರುಜ್ಜೀವನ ಗೊಳಿಸಲು ತಿಂಗಳಿಗೆ ಇಂತಿಷ್ಟು ನೆರವು ನೀಡುವುದಾಗಿ ಹೇಳುತ್ತಾರೆ. ದೇವೇಗೌಡರು ಪುನಃ ಎದ್ದು ನಿಲ್ಲುತ್ತಾರೆ. ೧೯೯೧ರಲೋಕಸಭೆ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಪ್ರವೇಶಿಸುತ್ತಾರೆ. ಅಲ್ಲಿಂದ ಮುಂದಿನ ಆರು ವರ್ಷ ಗೌಡರ ಬದುಕಿನಲ್ಲಿ ಒಂದಕ್ಕಿಂತ ಒಂದು ವಿಸ್ಮಯಗಳು ನಡೆಯುತ್ತವೆ.
ಸಿಎಂ ಹಾಗೂ ಪಿಎಂ ಗದ್ದುಗೆ:ಈ ಮಧ್ಯೆ ಹೆಗಡೆ- ಗೌಡರನ್ನು ಜೀವರಾಜ್ ಆಳ್ವ, ಬಿ.ಎಲ್. ಶಂಕರ್ ಸೇರಿದಂತೆ ಹಲವರ ಪ್ರಯತ್ನಿಸಿ ಒಂದುಗೂಡಿಸುತ್ತಾರೆ. ಇದರ ಫಲವಾಗಿ ೧೯೯೪ರಲ್ಲಿ ಜನತಾದಳ ಪುನಃ ಅಧಿಕಾರಕ್ಕೆ ಬರುತ್ತದೆ. ಈ ಸಂದರ್ಭ ದಲ್ಲಿ ಸಹಜವಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೆ ಸಹಜ ಆಯ್ಕೆಯಾದರೂ ಹೆಗಡೆ ಹೊಸ ಆಟ ಹಾಕುತ್ತಾರೆ. ಶಾಸಕಾಂಗ ಪಕ್ಷದಲ್ಲಿ ಬಹುಮತ ಇರುವವರು ಮುಖ್ಯಮಂತ್ರಿಯಾಗಬೇಕು ಎಂಬುದು ಅವರ ವರಸೆ.
ಆದರೆ ಶಾಸಕಾಂಗ ಪಕ್ಷದಲ್ಲಿ ಹೆಚ್ಚಿನ ಶಾಸಕರು ಗೌಡರಿಗೆ ಬೆಂಬಲ ನೀಡುತ್ತಾರೆ. ಈ ಸಂದರ್ಭದಲ್ಲಿ ಭಾರೀ ಗದ್ದಲ ಶುರುವಾಗುವು ದರಿಂದ ದೇವೇಗೌಡರು ತರಾತುರಿಯಲ್ಲಿ ರಾಜಭವನಕ್ಕೆ ಹೋಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳಬೇಕಾಗುತ್ತದೆ. ಅರ್ಥಾತ್, ಜನತಾದಳ ಅಧಿಕಾರಕ್ಕೆ ಬಂದರೂ ಹೆಗಡೆ- ಗೌಡರ ನಡುವಣ ವೈಮನಸ್ಯ ಮುಂದುವರಿಯುತ್ತದೆ.
೧೯೯೬ ರಲ್ಲಿ ಲೋಕ ಸಭೆ ಚುನಾವಣೆಗಳು ನಡೆದಾಗ ಗೌಡರ ನೇತೃತ್ವದ ಜನತಾದಳ ಕರ್ನಾಟಕದಲ್ಲಿ ೧೬ ಸೀಟುಗಳನ್ನು ಗೆದ್ದುಕೊಂಡಿತ್ತು. ಜನತಾ ದಳ ರಾಷ್ಟ್ರಮಟ್ಟದಲ್ಲಿ ಯುನೈಟೆಡ್ ಫ್ರಂಟ್ ಭಾಗ. ಆ ಸಂದರ್ಭದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಲೋಕಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ರಾಷ್ಟ್ರಪತಿಗಳು ಅವರನ್ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕರೆಯುತ್ತಾರೆ.
ಆದರೆ ವಾಜಪೇಯಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ೧೩ದಿನಗಳ ಬಿಜೆಪಿ ಸರಕಾರ ಪತನವಾದ ನಂತರ ಯುನೈಟೆಡ್ ಪ್ರಂಟ್‌ಗೆ ಸರ್ಕಾರ ರಚಿಸುವ ಅವಕಾಶ ಲಭ್ಯವಾಗುತ್ತದೆ. ಹಾಗೆ ನೋಡಿದರೆ ಯುನೈಟೆಡ್ ಫ್ರಂಟ್‌ನನಾಯಕರಾಗಿ, ಪ್ರಧಾನಿಯ ಅವಕಾಶ ಹೋಗುವುದು ವಿ.ಪಿ. ಸಿಂಗ್‌ಗೆ. ಆಗಲೇ ಒಮ್ಮೆ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಅದಾಗಲೇ ಎರಡು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರಿಂದ ಪ್ರಧಾನಿ ಹುದ್ದೆ ಒಪ್ಪಿಕೊಳ್ಳುವುದಿಲ್ಲ. ಇದಾದ ನಂತರ ಅವಕಾಶ ಕಮ್ಯೂನಿಸ್ಟ್ ನಾಯಕ ಜ್ಯೋತಿ ಬಸು ಬಳಿ ಹೋಗುತ್ತದೆ.
ಆದರೆ ಬಸು ಪ್ರಧಾನಿಯಾಗಲು ಪಕ್ಷದ ಪಾಲಿಟ್ ಬ್ಯೂರೋ ಒಪ್ಪುವುದಿಲ್ಲ. ಆಗ ಸ್ವತಃ ಬಸು ಅವರೇ ಪ್ರಧಾನಿ ಹುದ್ದೆಯ ಹೊಣೆಗೆ ಸಿದ್ಧರಾಗಿ ಎಂದು ದೇವೇಗೌಡರಿಗೆ ಹೇಳುತ್ತಾರೆ. ಅಂತಿಮವಾಗಿ ಗೌಡರು ಪ್ರಧಾನಿಯಾಗಲು ಒಪ್ಪಬೇಕಾಗುತ್ತದೆ. ೧೯೯೬ ರ ಜೂನ್ ೧ ರಂದುದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದೇವೇಗೌಡರು ತಮ್ಮಪ್ರಾಮಾಣಿಕ ಆಡಳಿತದಿಂದ ದೇಶದ ಗಮನ ಸೆಳೆಯುತ್ತಾರೆ.
ಅಲ್ಪ ಕಾಲಅಽಕಾರದಲ್ಲಿದ್ದರೂ ಕಾಶ್ಮೀರ ಬಿಕ್ಕಟ್ಟನ್ನು ತಹಬಂದಿಗೆ ತರಲು ಯತ್ನಿಸುತ್ತಾರೆ. ಈಶಾನ್ಯ ರಾಜ್ಯಗಳ ಜನರಲ್ಲಿ ವಿಶ್ವಾಸ ಮೂಡಿ ಸುತ್ತಾರೆ. ಬಾಂಗ್ಲಾ ಜತೆಗಿದ್ದ ಬಿಕ್ಕಟ್ಟಿಗೆ ಪರಿಹಾರ ಹುಡುಕುತ್ತಾರೆ. ಇಷ್ಟೆಲ್ಲದರ ನಡುವೆಯೂ ಗೌಡರ ಸುತ್ತ ಅಪನಂಬಿಕೆಯ ಸುಳಿ ಸುತ್ತತೊಡಗುತ್ತದೆ. ಅಂತಿಮವಾಗಿ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ, ಗೌಡರ ಸರಕಾರಕ್ಕೆ ಕೊಟ್ಟ ಬೆಂಬಲವನ್ನು ಹಿಂಪಡೆಯುತ್ತಾರೆ.
ಹೀಗೆ ರಾಜಕೀಯ ಸುಳಿಯ ನಡುವೆ ದೇಶದ ಪ್ರಧಾನಮಂತ್ರಿ ಗದ್ದುಗೆಗೇರಿದ ಸಾಮಾನ್ಯ ರೈತನ ಮಗ ದೇವೇಗೌಡರು ಅಲ್ಲಿಂದ ಕೆಳಗಿಳಿಯುವಸನ್ನಿವೇಶ ಮನ ಕಲಕುತ್ತದೆ. ಹೀಗೆ ಹಳ್ಳಿಗಾಡಿನ ಸಾಮಾನ್ಯ ರೈತನ ಮಗ ದೇವೇಗೌಡರು ದೇಶದ ಅತ್ಯುನ್ನತ ಸ್ಥಾನಕ್ಕೇರುವ ಇತಿಹಾಸ ವನ್ನು ದಾಖಲಿಸಿದ ನಾಯಕ. ಇಂದು (ಮೇ ೧೮) ದೇವೇಗೌಡರ ಹುಟ್ಟು ಹಬ್ಬದ ದಿನ. ಈ ನೆಲದ ಅಪರೂಪದ ನಾಯಕರೊಬ್ಬರ ರಾಜಕೀಯ ಬದುಕಿನ ಮೆಲುಕಿಗೆ ಇದು ಕಾರಣವಾಯಿತು.