ರಾಜಕಾರಣಿಗಳ ಆದಾಯ ಪ್ರಶ್ನಾತೀತವೇ ?
ಅಭಿಪ್ರಾಯ
ಮೋಹನದಾಸ ಕಿಣಿ
ನಮ್ಮ ದೇಶದಲ್ಲಿ ಕೃಷಿಯಿಂದ ಬಂದಂತಹ ಆದಾಯವನ್ನು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ನಿಯಮ ಮಾಡಲಾಗಿದ್ದರೂ ಹೆಚ್ಚಿನ ರಾಜಕಾರಣಿಗಳು ತೋರಿಸುವ ಆದಾಯದ ಮೂಲ ಕೃಷಿ ಎಂದೇ.
ಸರ್ಕಾರಿ ಉದ್ಯೋಗಿ ಕೆಲಸಕ್ಕೆ ಸೇರುವಾಗ ತನ್ನ ಆಸ್ತಿ, ಅಂದರೆ ಭೂಮಿ, ಮನೆ, ಚಿನ್ನ, ನಗದು, ಬ್ಯಾಂಕ್ ಅಥವಾ ಇನ್ಯಾವುದೋ ಸಂಸ್ಥೆಗಳಲ್ಲಿ ಇಟ್ಟಿರುವ ಠೇವಣಿ ಇತ್ಯಾದಿಗಳ ಸಂಪೂರ್ಣ ವಿವರಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸಬೇಕು. ಇದರಲ್ಲಿ ಉದ್ಯೋಗಿಯ ಪತಿ, ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಇರುವ ಆಸ್ತಿಯೂ ಸೇರಿದಂತೆ ಸಾಲಗಳ ವಿವರವೂ ಸೇರಬೇಕು. ಆ ನಂತರ ಪ್ರತೀ ವರ್ಷ ಮಾರ್ಚ್ ಅಂತ್ಯಕ್ಕೆ ಅನ್ವಯಿ ಸುವಂತೆ ಮೇಲಿನ ಎಲ್ಲಾ ವಿವರಗಳನ್ನು ಸಲ್ಲಿಸಬೇಕು.
ಹಾಗೆ ಸಲ್ಲಿಸುವಾಗ ಹಿಂದೆ ಸಲ್ಲಿಸಿದ್ದ ವಿವರಗಳು ಮತ್ತು ಈಗ ಸಲ್ಲಿಸುತ್ತಿರುವ ವಿವರಗ ಳನ್ನು ಹೋಲಿಸಿ, ವ್ಯತ್ಯಾಸವೆಷ್ಟು, ವ್ಯತ್ಯಾಸ ಹೇಗೆ ಬಂತು, ಸ್ಥಿರ ಮತ್ತು ಚರ ಆಸ್ತಿ, ವಾಹನ ಇತ್ಯಾದಿಗಳನ್ನು ಯಾವ ಸಂಪನ್ಮೂಲ ಬಳಸಿಕೊಳ್ಳಲಾಗಿದೆ, ಅಂದರೆ ಸಾಲ, ಪಿತ್ರಾರ್ಜಿತ ಆಸ್ತಿಯೇ ಹೀಗೆ ಎಲ್ಲಾ ಮಾಹಿತಿಗಳನ್ನು ವಿವರವಾಗಿ ನಮೂದಿಸಿ ಸಲ್ಲಿಸಬೇಕು.
ಹಾಗೆ ನಿಗದಿತ ಅವಧಿಯಲ್ಲಿ ಸಲ್ಲಿಸದಿದ್ದರೆ ವೇತನ ಬಡ್ತಿ, ಸೇವಾ ಭಡ್ತಿ ಸೇರಿದಂತೆ ಸೌಲಭ್ಯ ಗಳನ್ನು ತಡೆಹಿಡಿಯಲಾಗುತ್ತದೆ. ನಂತರವೂ ಸಲ್ಲಿಸದಿದ್ದರೆ ಶಿಸ್ತು ಕ್ರಮವನ್ನು ಕೈಗೊಂಡು ಶಿಕ್ಷೆ ನೀಡುವ ಅವಕಾಶವೂ ಇದೆ. ಇದಿಷ್ಟು ಸರ್ಕಾರಿ ನೌಕರರಿಗೆ ಸಂಬಂಧಿಸಿದ ವಿವರಗಳು. ಇನ್ನು ರಾಜಕಾರಣಿಗಳ ವಿಷಯಕ್ಕೆ ಬರುವುದಾದರೆ, ಪ್ರತಿಯೊಂದು ಚುನಾವಣೆಯಲ್ಲೂ ಸ್ಪರ್ಧಿಸುವ ಅಭ್ಯರ್ಥಿಗಳು ಕುಟುಂಬ ಸದಸ್ಯರ ಹೆಸರಿನಲ್ಲಿ ಇರುವುದೂ ಸೇರಿದಂತೆ ಎಲ್ಲಾ ವಿಧದ ಆದಾಯ ಮತ್ತು ಋಣ ಅಂದರೆ ಸಾಲ ಇತ್ಯಾದಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಚುನಾವಣೆ ಮುಗಿದು ಆಯ್ಕೆಯಾದರೆ ಲೋಕಾಯುಕ್ತಕ್ಕೆ ಸಲ್ಲಿಸಬೇಕು, ಹಾಗೂ ಪ್ರತೀವರ್ಷ ಮಾರ್ಚ್ ಅಂತ್ಯಕ್ಕೆ ಅನ್ವಯಿಸುವಂತೆ ಏಪ್ರಿಲ್ ತಿಂಗಳಲ್ಲಿ ಲೋಕಾ ಯುಕ್ತಕ್ಕೆ ಸಲ್ಲಿಸಬೇಕು. ಇದು ಚಾಲ್ತಿಯಲ್ಲಿರುವ ನಿಯಮ.
ಆದರೆ ವಾಸ್ತವದಲ್ಲಿ ಆಗುತ್ತಿರುವುದೇನು? ಚುನಾವಣೆ ಯಲ್ಲಿ ಸ್ಪರ್ಧೆ ಮಾಡುವಾಗ ವಿವರಗಳನ್ನು ಸಲ್ಲಿಸಬೇಕಾಗಿರುವುದೇನೋ ನಿಜ. ಆದರೆ ಅದರಲ್ಲಿ ಯಾವುದಾದರೂ ಪ್ರಮುಖವಾದ ಮಾಹಿತಿಯನ್ನು ನಮೂದಿಸದಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡುವ, ಹೊರತಾಗಿ ಅನ್ಯ ತುರ್ತು ಕ್ರಮಗಳೇನೂ ಇಲ್ಲ. ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣ ಇಂತಹದೊಂದು ಲೋಪವನ್ನು ಮಾಡಿದ್ದಾರೆ ಎಂಬ ಆರೋಪದಡಿ ದಾವೆ ದಾಖಲಾಗಿದೆ.
ಇನ್ನೇನು ಮುಂದಿನ ಲೋಕಸಭಾ ಚುನಾವಣೆಗೆ ಒಂದು ವರ್ಷವಷ್ಟೇ ಬಾಕಿ. ಆದರೆ ದಾವೆಯಿನ್ನೂ ಕೋರ್ಟಿನಲ್ಲಿದೆ. ಸದಸ್ಯತ್ವದ ಅವಽ ಮುಗಿದ ಬಳಿಕ ತೀರ್ಪು ಬಂದರೆ ಏನುಉಪಯೋಗ? ಪ್ರತೀ ವರ್ಷ ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿರುವುದೇನೋ ಸರಿ. ಆದರೆ ಸರ್ಕಾರಿ ನೌಕರರು ಸಲ್ಲಿಸುವ ನಮೂನೆಗೂ ಜನಪ್ರತಿನಿಧಿಗಳು ಸಲ್ಲಿಸುವ ನಮೂನೆಗೂ ಮುಖ್ಯವಾದ ವ್ಯತ್ಯಾಸ ವೊಂದಿದೆ.
ಅದೇ- ಹಳೆಯ ಮತ್ತು ಈಗಿನ ವರದಿಯಲ್ಲಿ ಕಾಣಿಸಿದ ಆದಾಯ, ಮತ್ತು ಆಸ್ತಿ ವಿವರಗಳ ವ್ಯತ್ಯಾಸ ಹೇಗೆ? ಆದಾಯ ಮೂಲ ವೇನೆಂದು ಉದ್ಯೋಗಿಗಳು ತೋರಿಸಬೇಕು, ಆದರೆ ಜನಪ್ರತಿನಿಧಿಗಳು ತೋರಿಸುವ ಅಗತ್ಯವಿಲ್ಲ. ಇತ್ತೀಚಿಗೆ ೭೧ ಸಂಸದರ ಸಂಪತ್ತು ೨೮೬ ಪಟ್ಟು ಹೆಚ್ಚಳವಾಗಿದೆಯೆಂದು ವರದಿಯಾಗಿತ್ತು. ಒಂದೆರಡಲ್ಲ, ೨೮೬ ಪಟ್ಟು. ವ್ಯತ್ಯಾಸ ೧೦% ಮೀರಿದರೆ ಅಂತಹ ಆದಾಯದ ಮೂಲವೇನೆಂದು ವಿವರಣೆ ಕೊಡಲು ಸಂಬಂಧಿಸಿದವರಿಗೆ ನೋಟೀಸ್ ನೀಡುವ ನಿಯಮವಿದೆ.
ನೋಟೀಸ್‌ಗೆ ವಿವರಣೆ ನೀಡಲು ಹತ್ತು ದಿನಗಳ ಅವಕಾಶ ಮಾತ್ರ ಇದೆ. ಹಾಗೆ ಎಷ್ಟು ಜನರಿಗೆ ನೋಟೀಸ್ ನೀಡಲಾಗಿದೆ? ಎಷ್ಟು ಜನ ಸಮರ್ಪಕ ಉತ್ತರ ನೀಡಿದ್ದಾರೆ? ನೀಡದಿದ್ದರೆ ಮುಂದಿನ ಕ್ರಮವೇನು? ಇದೆಲ್ಲವೂ ಬಹುಶಃ ಯಕ್ಷ ಪ್ರಶ್ನೆಯಾಗಿಯೇ ಉಳಿದಿರಬೇಕು. ಅದಕ್ಕಿಂತಲೂ ಪ್ರತಿ ವರ್ಷ ವಿವರಗಳನ್ನೇ ಸಲ್ಲಿಸದಿರುವವರ ಹೆಸರುಗಳನ್ನು ಲೋಕಾಯುಕ್ತ ಕಚೇರಿಯಿಂದ ಪ್ರಕಟಿಸಲಾಗುತ್ತದೆ. ಆದರೆ ಆತ ರೀತಿ ಪ್ರಕಟಿಸದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರ ಮಾತ್ರ ನಿಗೂಢ.
ಅಂತಹವರ ವಿರುದ್ಧ ಕ್ರಮವೇನಾದರೂ ತೆಗೆದುಕೊಂಡರೆ, ಅದು ಯಾವುದೇ ಪಕ್ಷದವರೇ ಆಗಿರಲಿ, ತಕ್ಷಣ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ, ಮಾತ್ರವಲ್ಲ ಪ್ರತಿಭಟನೆ, ದೊಂಬಿ, ಸಾರ್ವಜನಿಕ ಕಟ್ಟಡ, ವಾಹನಗಳಿಗೆ ಬೆಂಕಿ ಇನ್ನೂ ಏನೇನೋ ಮಾಡು ತ್ತಾರೆ. ಮಾತ್ರವಲ್ಲದೆ, ದೋಷಾರೋಪಣಾ ಪಟ್ಟಿಯನ್ನು ತಯಾರಿಸುವುದರಲ್ಲಿ ಇರಬಹುದಾದ ದೋಷವೋ, ಸರ್ಕಾರದ ವತಿಯಿಂದ ಮಂಡಿಸುವ ವಾದಗಳಲ್ಲಿ ಇರಬಹುದಾದ ದುರ್ಬಲತೆಯೋ, ಹೆಚ್ಚಿನ ಪ್ರಕರಣಗಳಲ್ಲಿ ನ್ಯಾಯಾಧೀಶರೂ ಜಾಮೀನು ಮಂಜೂರು ಮಾಡುವಲ್ಲಿ ತ್ವರಿತವಾಗಿ ನಿರ್ಧಾರ ಕೈಗೊಳ್ಳುತ್ತಾರೆ.
ಹಾಗಾ ದರೆ ರಾಜಕಾರಣಿಗಳ ಆದಾಯವೇನಿದ್ದರೂ ಪ್ರಶ್ನಾತೀತವೇ? ಇನ್ನೂ ತಮಾಷೆಯ ವಿಷಯವೆಂದರೆ, ನಮ್ಮ ದೇಶದಲ್ಲಿಕೃಷಿಯಿಂದ ಬಂದಂತಹ ಆದಾಯವನ್ನು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ನಿಯಮ ಮಾಡಲಾಗಿದ್ದರೂ ಹೆಚ್ಚಿನ ರಾಜಕಾರಣಿಗಳು ತೋರಿಸುವ ಆದಾಯದ ಮೂಲ ಕೃಷಿ ಎಂದೇ. ಒಂದೆಡೆ ಸತತವಾಗಿ ಬೆಳೆ ನಾಶ, ಪ್ರಾಕೃತಿಕ ವಿಕೋಪ, ಸಮರ್ಪಕ ಬೆಲೆ ಸಿಗದಿರುವುದೇ ಮುಂತಾದ ಕಾರಣಕ್ಕೆ ರೈತಾಪಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಭ್ರಷ್ಟಾಚಾರದಿಂದ ಗಳಿಸಿದ ಆದಾಯವನ್ನು ಮುಚ್ಚಿಡಲು ಅದೇ ಕೃಷಿಕರೆಂಬ ಕುರಿಯ ಚರ್ಮಹೊತ್ತಂತಹ ರಾಜಕಾರಣಿಗಳೆಂಬ ತೋಳಗಳು ಆರಾಮವಾಗಿದ್ದು ಆನಂದಿಸುತ್ತಾರೆ.
ಹೀಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸದೆ, ತ್ವರಿತವಾಗಿ ಶಿಕ್ಷೆ ನೀಡುವಿಕೆಯಲ್ಲಿರುವ ವಿಳಂಬ ನೀತಿಯೇ  ಅನುಸರಿಸುವುದರಿಂದ ರಾಜಕಾರಣಿಗಳು ಯಾವುದೇ ಅಳುಕಿಲ್ಲದೆ ತಪ್ಪೆಸಗಲು ದಾರಿ ಮಾಡಿಕೊಡುತ್ತದೆ. ಇದಕ್ಕೆಲ್ಲಾ ಪರಿಹಾರ ಸಿಗುವುದಾದರೂ ಯಾವಾಗ? ಇದರಿಂದ ಜನಸಾಮಾನ್ಯರು ಮತ್ತು ಸರ್ಕಾರಿ ನೌಕರರ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನು ತಪ್ಪಿಸುವುದು ಎಂದು? ಈ ಬಗ್ಗೆ ಗಂಭೀರ ಕಾನೂನು ಜಾರಿಯಾಗುವ ಅಗತ್ಯವಿದೆ.
ಏಕೆಂದರೆ ಸರ್ಕಾರಿ ನೌಕರರಿಗೆ ಈ ರೀತಿ ನಿಯಮಗಳನ್ನು ಜಾರಿ ಮಾಡಿದ್ದು, ತಪ್ಪಿದಲ್ಲಿ ಶಿಕ್ಷೆ ವಿಧಿಸುವ ಕ್ರಮವೂ ಇದೆ. ಆದರೆ ರಾಜಕಾರಣಿಗಳು ಮಾತ್ರ ರಾಜಾರೋಷವಾಗಿ ತಮಗೆ ಬೇಕಿದ್ದೆಲ್ಲ ಸಂಪಾದನೆ ಮಾಡಿಕೊಂಡು ಆದಾಯದ ರಹಸ್ಯ ಮುಚ್ಚಿಡು ವುದು ಎಷ್ಟು ಸರಿ. ನಿಜವಾಗಿಯೂ ಜನಸಾಮಾನ್ಯರು ಮತ್ತು ಸರ್ಕಾರಿ ನೌಕರರೇ ತೆರಿಗೆಗಳನ್ನು ಸರಿಯಾದ ಸಮಯಕ್ಕೆ ಕಟ್ಟುತ್ತಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಆದಾಯವೂ ಹೆಚ್ಚುತ್ತಿದೆ. ಆದರೆ ಅದೇ ರಾಜಕಾರಣಿಗಳು, ಶ್ರೀಮಂತರು ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇದಕ್ಕೆ ಯಾವುದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಲ್ಲಿ ಕಾನೂನು ಕೂಡ ವಿಫಲವಾಗಿದೆ. ಇನ್ನಾದರೂ ರಾಜಕಾರಣಿಗಳ ಮತ್ತು ಶ್ರೀಮಂತರ ಆದಾಯದ ಸಮೀಕ್ಷೆ ನಡೆದು ಅದಕ್ಕೆ ತಕ್ಕಂತೆ ಕ್ರಮ ಜರುಗಿಸುವಂತೆ ಆಗಲಿ ಎಂದು ಆಶಿಸೋಣ.